ಕಣ್ಣುಗಳು ದೇಹದ ಅತ್ಯಂತ ಸೂಕ್ಷ್ಮ ಅಂಗಗಳಾಗಿವೆ. ಅವುಗಳ ಆರೋಗ್ಯ ನಮ್ಮ ಜೀವನಶೈಲಿಯಿಂದ ಪ್ರಭಾವಿತಗೊಳ್ಳುತ್ತವೆ. ಬಹಳಷ್ಟು ರೋಗಗಳು ಅಂದರೆ ಕ್ರಾನಿಕಲ್ ಕಿಡ್ನಿ ಡಿಸೀಸ್, ಹೈಪರ್ ಟೆನ್ಶನ್, ಮಧುಮೇಹದ ಪ್ರಭಾವ ನಮ್ಮ ಕಣ್ಣುಗಳ ಮೇಲೆ ಆಗಿಯೇ ಆಗುತ್ತದೆ.
ಕಿಡ್ನಿ ರೋಗಗಳು ಮತ್ತು ಕಣ್ಣು
ಕಿಡ್ನಿ ವೈಫಲ್ಯದಿಂದಾಗಿ ಕಣ್ಣಿನ ದೃಷ್ಟಿ ಮಂದವಾಗುತ್ತದೆ. ಇಂತಹ ಸ್ಥಿತಿಯಲ್ಲಿ ನೇತ್ರತಜ್ಞರ ಬಳಿ ಚಿಕಿತ್ಸೆ ಪಡೆದು ಅಗತ್ಯವಿದ್ದರೆ ಕನ್ನಡಕ ಧರಿಸುವ ಬಗ್ಗೆ ಕೇಳಿ ತಿಳಿದುಕೊಳ್ಳಬೇಕು.
ನೀವು ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯದೇ ಹೋದರೆ ಅದರ ದುಷ್ಪರಿಣಾಮ ಕಣ್ಣಿನ ದೃಷ್ಟಿಯ ಮೇಲೆ ಆಗಬಹುದು. ಕಿಡ್ನಿ ಸಮಸ್ಯೆ ಕೊನೆಯ ಹಂತದಲ್ಲಿದ್ದಾಗ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೊರಟು ಹೋಗಬಹುದು. ಇಂತಹ ಸ್ಥಿತಿ ಬರದಂತೆ ನೋಡಿಕೊಳ್ಳಿ.
ಕಿಡ್ನಿ ರೋಗದ ಲಕ್ಷಣಗಳು
ಕಿಡ್ನಿ ಸಮಸ್ಯೆ ಏಕಾಏಕಿ ಶುರುವಾಗುವುದಿಲ್ಲ. ಇದು ದೀರ್ಘಕಾಲದ ತನಕ ತಪ್ಪು ಜೀವನಶೈಲಿಯ ಪರಿಣಾಮವಾಗಿರುತ್ತದೆ. ಕಿಡ್ನಿ ಸಮಸ್ಯೆಯಿಂದ ರಕ್ಷಣೆ ಮಾಡಿಕೊಳ್ಳುವ ಅತ್ಯುತ್ತಮ ವಿಧಾನವೆಂದರೆ, ಅದರ ಲಕ್ಷಣಗಳ ಮೇಲೆ ದೃಷ್ಟಿ ಇರಿಸಿ, ಅದಕ್ಕೆ ಚಿಕಿತ್ಸೆ ಪಡೆಯುವುದಾಗಿದೆ. ಕಿಡ್ನಿ ರೋಗದ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿವೆ :
ದಣಿವು : ನಿಮಗೆ ಮೇಲಿಂದ ಮೇಲೆ ದಣಿವು ಅನಿಸುತ್ತಿದ್ದರೆ, ಒಳ್ಳೆಯ ಆಹಾರ ಸೇವನೆಯ ಬಳಿಕವೂ ಈ ಸಮಸ್ಯೆ ಮುಂದುವರಿದಿದ್ದರೆ, ನಿಮಗೆ ಕಿಡ್ನಿ ಸಮಸ್ಯೆಯ ಅಪಾಯ ಇರಬಹುದಾಗಿದೆ. ಒಂದುವೇಳೆ ಕಿಡ್ನಿಗಳು ಸರಿಯಾಗಿ ಕೆಲಸ ಮಾಡದೇ ಇದ್ದರೆ ರಕ್ತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಟಾಕ್ಸಿನ್ ಸೇರಿಕೊಳ್ಳುತ್ತದೆ. ಹೀಗಾಗಿ ನಿಮಗೆ ಆಗಾಗ ದಣಿವಿನ ಅನುಭೂತಿ ಉಂಟಾಗುತ್ತದೆ.
ನಿದ್ರೆಯಲ್ಲಿ ಅಡಚಣೆ : ದೇಹದಲ್ಲಿ ಟಾಕ್ಸಿನ್ಸ್ ಇದ್ದರೆ ಕಿಡ್ನಿಯ ಫಿಲ್ಟರ್ ಮಾಡುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ. ಇದೇ ಕಾರಣದಿಂದ ಮೂತ್ರದ ಮುಖಾಂತರ ಹೊರಹೋಗಬೇಕಿದ್ದ ಟಾಕ್ಸಿನ್ಸ್ ದೇಹದಲ್ಲಿಯೇ ಉಳಿದು ನಿದ್ರೆಗೆ ಸಂಬಂಧಪಟ್ಟ ಸಮಸ್ಯೆಯನ್ನು ಹುಟ್ಟು ಹಾಕುತ್ತವೆ.
ಮೂತ್ರದಲ್ಲಿ ಸಮಸ್ಯೆ : ಕಿಡ್ನಿ ಸಮಸ್ಯೆಯ ಸಾಮಾನ್ಯ ಲಕ್ಷಣವೆಂದರೆ, ಸ್ವಲ್ಪ ಸ್ವಲ್ಪ ಹೊತ್ತಿಗೆ ಮೂತ್ರ ಆಗುವುದು. ದಿನಕ್ಕೆ ನೀವು ಹಲವು ಬಾರಿ ಮೂತ್ರ ಮಾಡಲು ಹೋಗಬೇಕೆನ್ನಿಸಿದರೆ ಅದು ನಿಮಗೆ ವೈದ್ಯರ ಬಳಿ ಹೋಗಲು ಸೂಕ್ತ ಸಮಯವಾಗಿರುತ್ತದೆ. ಕಿಡ್ನಿಗಳು ಮನುಷ್ಯನ ದೇಹದ ಮೂತ್ರ ಪ್ರಕ್ರಿಯೆಯನ್ನು ನಿಯಂತ್ರಿಸುತ್ತೇವೆ. ಅದರಲ್ಲಿ ಏನಾದರೂ ಸಮಸ್ಯೆ ಉಂಟಾದರೆ, ಮೂತ್ರದ ಅಭ್ಯಾಸದಲ್ಲೂ ಬದಲಾವಣೆ ಉಂಟಾಗುತ್ತದೆ.
ಮೂತ್ರದ ಟೆಕ್ಸ್ ಚರ್, ಬಣ್ಣ, ವಾಸನೆ ಮುಂತಾದವುಗಳಲ್ಲಿ ಬದಲಾವಣೆ ನಿಶ್ಚಿತವಾಗಿಯೂ ಅದು ಕಿಡ್ನಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗೆ ಸಂಬಂಧಪಟ್ಟಿರಬಹುದು. ನೀವು ಮೂತ್ರ ಮಾಡುವ ಸಮಯದಲ್ಲಿ ಅದರಲ್ಲಿ ನೊರೆ ನೊರೆ ಕಂಡುಬಂದರೆ ವೈದ್ಯರ ಬಳಿ ಹೋಗಿ.
ಕಾಲುಗಳಲ್ಲಿ ಊತ : ಯಾವುದಾದರೂ ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಇದ್ದರೆ, ದೇಹದಲ್ಲಿ ಸೋಡಿಯಂ ಜಮೆಗೊಳ್ಳುತ್ತದೆ. ಅಂತಹ ಸ್ಥಿತಿಯಲ್ಲಿ ಕಾಲುಗಳು ಹಾಗೂ ಹಿಮ್ಮಡಿಯಲ್ಲಿ ಊತ ಕಾಣಿಸಬಹುದು. ನಿಮಗೆ ಶೂ, ಚಪ್ಪಲಿ ಬಿಗಿ ಅನ್ನಿಸಿದರೆ ಅದು ಕಿಡ್ನಿಗೆ ಸಂಬಂಧಪಟ್ಟ ಯಾವುದಾದರೂ ಸಮಸ್ಯೆ ಆಗಿರಬಹುದು.
ಕಣ್ಣು ಮತ್ತು ಚರ್ಮದಲ್ಲಿ ತುರಿಕೆ : ದೇಹದಲ್ಲಿ ಖನಿಜಾಂಶಗಳನ್ನು ಸಮಪ್ರಮಾಣದಲ್ಲಿ ಇಡುವ ಕೆಲಸವನ್ನು ಕಿಡ್ನಿಗಳು ಮಾಡುತ್ತವೆ. ಕಿಡ್ನಿಯಲ್ಲಿ ಯಾವುದಾದರೂ ಸಮಸ್ಯೆ ಉಂಟಾದರೆ ಈ ಪ್ರಕ್ರಿಯೆಯ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಆ ಕಾರಣದಿಂದ ಕಣ್ಣುಗಳು ಸೇರಿದಂತೆ ಇಡೀ ದೇಹದಲ್ಲಿ ತುರಿಕೆ ಉಂಟಾಗಬಹುದು.
ಕಣ್ಣುಗಳು ಕೆಂಪಗಾಗುವುದು : ಕಣ್ಣುಗಳು ಕೆಂಪಗಾಗುವ ಸಾಮಾನ್ಯ ಕಾರಣವೆಂದರೆ ಅಲರ್ಜಿ ಮತ್ತು ಸೋಂಕು. ಆದರೆ ಕಿಡ್ನಿಯಲ್ಲಿ ಯಾವುದೇ ಸಮಸ್ಯೆ ಉಂಟಾದಾಗ ಕೂಡ ಕಣ್ಣುಗಳು ಕೆಂಪಗಾಗಬಹುದು ಹಾಗೂ ಸಾಧಾರಣ ಉರಿಯ ಅನುಭವ ಆಗಬಹುದು.
ಕಣ್ಣುಗಳ ಶುಷ್ಕತನ : ಇದು ಒಂದು ಕ್ರಾನಿಕಲ್ ಸಿಂಡ್ರೋಮ್ ಆಗಿದ್ದು, ಅದು ಕಾಲಕ್ರಮೇಣ ಹೆಚ್ಚುತ್ತಲೇ ಹೋಗುತ್ತದೆ. ನೀವು ಕಣ್ಣನ್ನು ಎಷ್ಟು ಹೆಚ್ಚು ಉಜ್ಜುತ್ತೀರೋ, ಅದು ಅಷ್ಟೇ ಹೆಚ್ಚು ಶುಷ್ಕಗೊಳ್ಳುತ್ತದೆ. ಶುಷ್ಕ ಕಣ್ಣು ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದಿಲ್ಲ ಹಾಗೂ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಕಿಡ್ನಿ ಸಮಸ್ಯೆ ಇದ್ದರೆ ಆ ಕಾರಣದಿಂದ ಕಣ್ಣುಗಳಲ್ಲಿ ಹೆಚ್ಚು ಕ್ಯಾಲ್ಶಿಯಂ ಮತ್ತು ಫಾಸ್ಛೇಟ್ ಜಮೆಗೊಳ್ಳುತ್ತದೆ. ಇದು ಕಣ್ಣಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತದೆ.
ಕಣ್ಣಿನಲ್ಲಿ ಗಾಯ : ಕಣ್ಣಿನಲ್ಲಿ ಗಾಯ ನೋವಿನಿಂದ ಕೂಡಿದ ಒಂದು ಸಿಂಡ್ರೋಮ್ ಆಗಿದೆ. ಅದಕ್ಕೆ ಹಲವು ಕಾರಣಗಳಿರಬಹುದು. ಅದರಲ್ಲಿ ಒಂದು, ಕಿಡ್ನಿಯ ರೋಗ ಕೂಡ ಆಗಿದೆ. ನಿಮಗೆ ಮೇಲಿಂದ ಮೇಲೆ ಕಣ್ಣುಗಳಲ್ಲಿ ಗಾಯ ಉಂಟಾಗುತ್ತಿದ್ದರೆ, ವೈದ್ಯರನ್ನು ಭೇಟಿಯಾಗಿ. ಗಾಯದ ಕಾರಣದಿಂದ ಕಣ್ಣುಗಳು ಕೆಂಪಗಾಗುತ್ತಿರಬಹುದು. ಅದರಲ್ಲಿ ತುರಿಕೆ ಕೂಡ ಆಗುತ್ತಿರಬಹುದು. ಅದರಿಂದಾಗಿ ಕಾರ್ನಿಯಾ, ಕಂಜಕ್ಟಿವ್ ಹಾಗೂ ಸ್ಲೇಯರ್ ಅಂದರೆ ಕಣ್ಣಿನ ಬಿಳಿಭಾಗದ ಮೇಲೆ ಹಾನಿ ಆಗಬಹುದು.
ರೆಟಿನೋಪಥಿ : ಇದು ಕೂಡ ಕಣ್ಣಿನ ಒಂದು ರೋಗವಾಗಿದ್ದು, ಅದು ಕೂಡ ಕಿಡ್ನಿ ಸಮಸ್ಯೆ ಇದ್ದರೆ ಬರಬಹುದಾದ ಒಂದು ಸಮಸ್ಯೆ. ಈ ರೋಗದ ಮೊದಲ ಲಕ್ಷಣವೆಂದರೆ ಕಣ್ಣಿನ ದೃಷ್ಟಿ ಮಂದವಾಗಬಹುದಾಗಿದೆ.
ಈ ಎಲ್ಲ ಲಕ್ಷಣಗಳ ಬಗ್ಗೆ ಗಮನ ಇರಲಿ. ಏಕೆಂದರೆ ಕಿಡ್ನಿ ಮತ್ತು ಕಣ್ಣಿನ ಯಾವುದೇ ಸಮಸ್ಯೆಯನ್ನು ಸಕಾಲಕ್ಕೆ ಗುರುತಿಸಿ ಅದಕ್ಕೆ ಚಿಕಿತ್ಸೆ ಕೊಡಿಸಬೇಕು.
ಒಂದು ಸಂಗತಿ ನೆನಪಿನಲ್ಲಿಡಿ, `ಹೆಲ್ದಿ ಲೈಫ್ ಈಸ್ ಹ್ಯಾಪಿ ಲೈಫ್.’
– ಡಾ. ಪವಿತ್ರಾ