ಆ ದಿನ ಸೋಮಶೇಖರ್ ನಿಧಾನವಾಗಿ ಸ್ನೇಹಾ ರಾವ್ ಹಿಂದೆ ಬಂದು ಪಿಸುಗುಟ್ಟಿದ, “ಇಂದು ಲಂಚ್‌ಗೆ ನನ್ನ ಕ್ಯಾಬಿನ್‌ಗೇ ಬಂದುಬಿಡು.”
ಸ್ನೇಹಾ ಒಮ್ಮೆ ಅವನನ್ನೇ ದುರುಗುಟ್ಟಿ ನೋಡಿದಳು. ಮತ್ತೊಂದು ಕ್ಷಣದಲ್ಲಿ ಇಡೀ ಸ್ಟಾಫ್ ಮುಂದೆ ಹೀನಾಮಾನವಾಗಿ ಕೂಗಾಡಿದಳು, “ನಿನಗೆಷ್ಟು ಧೈರ್ಯ….. ನೀನು ನನ್ನನ್ನು ಏನೆಂದು ತಿಳಿದಿರುವೆ…. ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೊಂಡಿದ್ದೀಯಾ? ನಾನು ಈ ಆಫೀಸಿಗೆ ಸೇರಿದಾಗಿನಿಂದ ಸದಾ ನನ್ನನ್ನೇ ಗೂಬೆ ತರಹ ನೋಡ್ತಾ ಇರ್ತೀಯಲ್ಲ…… ಹಿಂದೆಂದೂ ಹುಡುಗಿಯನ್ನು ನೋಡಿದ್ದೇ ಇಲ್ಲವೇ? ಲೈಂಗಿಕ ಕಿರುಕುಳದ ಕೇಸ್ ಬುಕ್ ಮಾಡಿ ನಿನ್ನ ಒಳಗಡೆ ಹಾಕಿಸಿಬಿಡ್ತೀನಿ….. ಏನಂದುಕೊಂಡಿದ್ದೀಯಾ ನನ್ನನ್ನು?”
ಆ ದಿನ ಎಲ್ಲರ ಮುಂದಾದ ಅವಮಾನದಿಂದ ಸೋಮಶೇಖರ್ ಆಫೀಸಿಗೆ 4 ದಿನ ರಜಾ ಹಾಕಿ ಯಾರಿಗೂ ಮುಖ ತೋರಿಸದೆ ಉಳಿದುಬಿಟ್ಟ. ಅಂತೂ ಬಂದ ಮೇಲೆ ಸದಾ ತನ್ನ ಕ್ಯಾಬಿನ್‌ನಲ್ಲೇ ಇರುತ್ತಿದ್ದ. ಅವಮಾನ, ತಿರಸ್ಕಾರ, ನಾಚಿಕೆ, ಸಂಕೋಚದ ಕಾರಣ ಅವನ ಮನದಲ್ಲಿ ಮೂಡಿದ್ದ ಪ್ರೇಮದ ಬಳ್ಳಿ ಅಲ್ಲಿಯೇ ಒಣಗಿಹೋಯಿತು.
ತಾನು ಮಾಡಿದ್ದರಲ್ಲಿ ಏನು ತಪ್ಪಾಯಿತು? ಬಹುಶಃ ಅವಸರಪಟ್ಟು ಹಾಗೆ ಹೇಳಬಾರದಿತ್ತೇನೋ…? ಹೀಗೆ ಅನೇಕ ಪ್ರಶ್ನೆಗಳು ಅವನ ತಲೆ ತಿನ್ನುತ್ತಿದ್ದ. ಕೆಲಸದಲ್ಲಿ ಹಿಂದಿನ ಶ್ರದ್ಧೆ, ತಲ್ಲೀನತೆ ಇಲ್ಲದೆ ಹೋಯಿತು. ಅತ್ತ ಬಾಸ್‌ಗೂ ವಿಷಯ ಗೊತ್ತಾದ ಮೇಲೆ ಕೆಲಸಕ್ಕೆ ಕುತ್ತು ಬರುವುದೊಂದೇ ಬಾಕಿ ಆಗಿತ್ತು.
ಹಿಂದೆಲ್ಲ 3-4 ಗೆಳೆಯರು ಅವನ ಕ್ಯಾಬಿನ್‌ಗೆ ಬಂದು ಒಟ್ಟಿಗೆ ಊಟ ಮಾಡುತ್ತಿದ್ದರು ಈಗ ಯಾರೂ ಬರುತ್ತಿಲ್ಲ. ಅವರಿಗೆ ಇವನು ಸಮಜಾಯಿಷಿ ನೀಡಲು ಪ್ರಯತ್ನಿಸಿದರೂ ಯಾರೂ ಕಿವಿಗೆ ಹಾಕಿಕೊಳ್ಳಲು ಸಿದ್ಧರಿಲ್ಲ. ಹಿಂದೆಲ್ಲ ಅವನು ಆಗಾಗ ಕದ್ದುಮುಚ್ಚಿ ಸ್ನೇಹಾಳನ್ನು ನೋಡುತ್ತಿದ್ದ, ಈಗ ಇಡೀ ಆಫೀಸ್ ಅವನತ್ತ ಕೆಕ್ಕರಿಸಿಕೊಂಡು ನೋಡುತ್ತದೆ.
ಅಸಲಿನ ಸಂಗತಿ ಎಂದರೆ ಸ್ನೇಹಾ ಆ ಆಫೀಸಿಗೆ ಬಂದ ಮೊದಲ ದಿನದಿಂದಲೇ ಸೋಮಶೇಖರ್ ಅವಳ ಪ್ರೇಮದ ಬಲೆಯಲ್ಲಿ ಬಿದ್ದು, ಸದಾ ಅವಳನ್ನು ಆರಾಧನಾ ಭಾವದಿಂದ ಕದ್ದುಮುಚ್ಚಿ ದಿಟ್ಟಿಸುತ್ತಿದ್ದ. ಸ್ನೇಹಾ ಆ ಆಫೀಸ್ ಸೇರಿ ಆಗಷ್ಟೇ ತಿಂಗಳಾಗಿತ್ತು. ಅವಳು ನೋಡಲು ಬಹಳ ಸುಂದರವಾಗಿದ್ದಳು. ಕೆಲಸದಲ್ಲೂ ಬಲು ಚೂಟಿ. ಸೋಮುವಿಗೆ ಅವಳನ್ನು ದಿನಾ ನೋಡಿ ನೋಡಿ ಮನಸ್ಸು ಸೋತಿತ್ತು. ತಾನು ಮದುವೆ ಅಂತ ಆದರೆ ಅದು ಸ್ನೇಹಾಳನ್ನು ಮಾತ್ರ ಎಂದು ಮನದಲ್ಲೇ ನಿರ್ಧರಿಸಿದ. ಹಗಲೂ ರಾತ್ರಿ ಅವಳನ್ನೇ ನೆನೆಯುತ್ತಾ ಹಪಹಪಿಸುತ್ತಿದ್ದ. ಆದರೆ ಅವಳೂ ಸಹ ತನ್ನನ್ನು ಇಷ್ಟಪಡುತ್ತಾಳೋ ಇಲ್ಲವೋ ಎಂದು ತಿಳಿಯಲು ಯತ್ನಿಸಲೇ ಇಲ್ಲ.
ಸ್ನೇಹಾ ಯಾರೊಂದಿಗೂ ಹೆಚ್ಚು ಮಾತನಾಡದ ಮಿತಭಾಷಿ. ಯಾವಾಗಲೂ ತನ್ನ ಕೆಲಸದಲ್ಲೇ ಬಿಝಿ ಇರುತ್ತಿದ್ದಳು. ಆದರೆ ಸೋಮು ತನ್ನನ್ನೇ ಕದ್ದುಮುಚ್ಚಿ ನೋಡುತ್ತಿರುತ್ತಾನೆ ಎಂಬುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಅಕಸ್ಮಾತ್ ಅವನು ಎದುರಿಗೆ ಸಿಕ್ಕಾಗ ದೃಷ್ಟಿ ತಪ್ಪಿಸುತ್ತಿದ್ದಳು. ಇದನ್ನು ಸೋಮು ಅವಳ ನಾಚಿಕೆಯ ಗುಣ ಎಂದು ತಿಳಿಯುತ್ತಿದ್ದ. ಎಷ್ಟೋ ಸಲ ಅವನು ಕಾರಣ ಇರಲಿ ಬಿಡಲಿ, ತನ್ನ ಕ್ಯಾಬಿನ್‌ನಿಂದ ಹೊರಬಂದು ಕೆಲಸ ಇರಲಿ ಬಿಡಲಿ, ಅವಳ ಟೇಬಲ್‌ವರೆಗೂ ಬಂದು ಫೈಲ್ ಹಿಡಿದುಕೊಂಡು ಹೋಗಿ ಅಡ್ಡಾಡುತ್ತಿದ್ದ. ಆ ದಿನ ಅವಕಾಶ ಸಿಕ್ಕಿದ ತಕ್ಷಣ ಲಂಚ್‌ಗೆ ಆಫರ್ ಮಾಡಿದ. ಆಗಲೇ ಅವನಿಗೆ ಸ್ನೇಹಾಳ ಅಸಲಿ ರೂಪ ಗೊತ್ತಾಗಿದ್ದು. ತನ್ನ ಬಗ್ಗೆ ಅವಳು ಎಷ್ಟು ಕೋಪಗೊಂಡಿದ್ದಾಳೆ ಎಂದು ತಿಳಿಯಿತು.
ಸೋಮುವಿನದು ಒನ್ ವೇ ಲವ್ ಆಗಿತ್ತು. ಅವನು ಸ್ನೇಹಾಳ ಸ್ನೇಹ ಕೂಡ ಸರಿಯಾಗಿ ಪಡೆದಿರಲಿಲ್ಲ ಅಥವಾ ಅವಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಪ್ರಯತ್ನ ಸಹ ಪಟ್ಟಿರಲಿಲ್ಲ. ಸ್ನೇಹಾ ತನ್ನ ಬಗ್ಗೆ ಎಂಥ ಭಾವನೆ ಹೊಂದಿರಬಹುದು ಎಂದು ಐಡಿಯಾ ಕೂಡ ಅವನಿಗೆ ಇರಲಿಲ್ಲ.
ಆದರೆ ಸ್ನೇಹಾಳ ಒಳಮನಸ್ಸು ಅವಳಿಗೆ ಸೋಮು ಬಗ್ಗೆ ಮೊದಲೇ ಎಚ್ಚರಿಸಿತ್ತು. ಆ ವ್ಯಕ್ತಿ ಸದಾ ಸರ್ವದಾ ತನ್ನನ್ನು ಕದ್ದುಮುಚ್ಚಿ ನೋಡುತ್ತಿರುತ್ತಾನೆ ಎಂಬ ವಿಷಯ ಅವಳಿಗೆ ಗೊತ್ತಿತ್ತು. ಹೀಗಾಗಿ ಇದೇ ವಿಷಯವಾಗಿ ಅವಳಿಗೆ ಸೋಮು ಎಂದರೆ ಕೋಪ ಕೆರಳಿಸುತ್ತಿತ್ತು. ಬೇಕೆಂದೇ ಅವನು ಎದುರಿಗೆ ಕಂಡಾಗೆಲ್ಲ ಅವಳು ಅವನನ್ನು ಇಗ್ನೋರ್ ಮಾಡುತ್ತಾ ದೃಷ್ಟಿ ಬದಲಾಯಿಸುವಳು. ಆದರೆ ಪಾಪ, ಸೋಮು ಅದನ್ನು ತಿಳಿದದ್ದೇ ಬೇರೆ ರೀತಿಯಲ್ಲಿ. ತನ್ನ ಏಕಮುಖ ಪ್ರೇಮದಿಂದಾಗಿ ಸೋಮುವಿಗೆ ದೊಡ್ಡ ಶಿಕ್ಷೆಯೇ ಆಗಿತ್ತು.
ಈ ರೀತಿ ಆಫೀಸ್‌ನಲ್ಲಿ ಕದ್ದು ಮುಚ್ಚಿ ನಡೆಯುವ ಪ್ರೇಮ ಪ್ರಕರಣಗಳಿಗೇನೂ ಕಡಿಮೆ ಇಲ್ಲ. ಒಂದು ಸಮೀಕ್ಷೆಯಿಂದಲೂ ಈ ವಿಷಯ ದೃಢಪಟ್ಟಿದೆ. ಸುಮಾರು ಶೇ.85 ಮಂದಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ರೊಮಾನ್ಸ್ ನಡೆಸುವಲ್ಲಿ ಆಕ್ಷೇಪಣೆ ಇಲ್ಲ, ಡಿಮ್ಯಾಂಡ್ ಎಂದರೆ ತಾವಿಬ್ಬರೂ ಒಂದು ಕಾಮನ್ ಕೆಲಸಕ್ಕೆ ಅಂಟಿದವರಾಗಿ ಇರಬೇಕೆಂಬುದು. ಬಲವಂತವಾಗಿ ಯಾರ ಕೈಲೂ ಪ್ರೀತಿ ಮಾಡಿಸಲು ಸಾಧ್ಯವಿಲ್ಲ ಎಂಬುದಂತೂ ನಿಜ.
ಪ್ರೀತಿ ಪ್ರೇಮ ಎಂಬುದು ಯಾರೊಂದಿಗಾದರೂ ಯಾವಾಗ ಬೇಕಾದರೂ ನಡೆಯಬಹುದು. ಅದೂ ಆಫೀಸ್‌ನ ಸಹೋದ್ಯೋಗಿ ಯಾಕಾಗಬಾರದು? ಆದರೆ ಆಗ ಇಬ್ಬರೂ ಆಫೀಸ್‌ನಲ್ಲಿ ಹೇಗೆ ವರ್ತಿಸುವುದು ಎನ್ನುವುದು ತುಸು ಕಷ್ಟವಾಗುತ್ತದೆ, ಆಗ ಎಚ್ಚರಿಕೆ ವಹಿಸಬೇಕು.
ರೊಮಾನ್ಸ್ ನಡೆಸುವುದು ತಪ್ಪೇನಲ್ಲ, ಆದರೆ ಆಫೀಸ್‌ನಲ್ಲಿ ರೊಮಾನ್ಸ್ ನಡೆಸುವುದು ಎಂದಾದರೆ ಆಗ ಹೆಚ್ಚಿನ ಎಚ್ಚರಿಕೆ ಅತ್ಯಗತ್ಯ. ಸಾಮಾನ್ಯವಾಗಿ ಆಫೀಸಿನ ರೊಮಾನ್ಸ್ ನಲ್ಲಿ ತಲ್ಲೀನರಾಗುವ ಜನ, ತಾವು ಯಾವುದನ್ನು ಮಾಡಬೇಕು ಮಾಡಬಾರದು ಎಂಬುದನ್ನು ಮರೆತು ಅನೇಕ ಎಡವಟ್ಟುಗಳನ್ನು ತಂದುಕೊಳ್ಳುತ್ತಾರೆ. ನೀವು ಈ ಸಂಬಂಧದ ಕುರಿತಾಗಿ ಸೀರಿಯಸ್ ಆಗಿದ್ದರೆ, ನೀವು ಮತ್ತು ನಿಮ್ಮ ಸಂಗಾತಿ ಮದುವೆ ಬಗ್ಗೆ ಗಂಭೀರ ನಿರ್ಧಾರ ತಳೆಯುವವರೆಗೂ, ಈ ವಿಷಯದ ಕುರಿತಾಗಿ ಯಾರಿಗೂ ಏನೂ ಹೇಳಬೇಡಿ. ನೀವು ಯೌವನದಲ್ಲಿದ್ದು, ಮದುವೆಗೆ ಹುಡುಕುತ್ತಾ, ನಿಮ್ಮ ಆಫೀಸಿನಲ್ಲಿಯೇ ಯಾರನ್ನಾದರೂ ಮೆಚ್ಚಿಕೊಂಡಿದ್ದರೆ, ರೊಮಾನ್ಸ್ ನಡೆಸುವುದು ಸರಿ, ಆದರೆ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ :
21 ಅಗತ್ಯ ಸಲಹೆಗಳು
ಆಫೀಸ್‌ನಲ್ಲಿ ನೀವು ನಡೆಸುವ ರೊಮಾನ್ಸ್ ಯಾರಿಗೂ ಸುಳಿವು ಸಿಗದ ಹಾಗಿರಬೇಕು.
ಯಾರನ್ನು ಮೆಚ್ಚಿದ್ದೀರೋ, ಪದೇ ಪದೇ ಅವರ ಟೇಬಲ್ ಬಳಿ ಹೋಗಲು ಅವಕಾಶ ಹುಡುಕಬೇಡಿ. ಆಗ ನೀವು ಇತರರ ಬಳಿ ಸಿಕ್ಕಿಬೀಳುತ್ತೀರಿ.
ಎಲ್ಲಕ್ಕೂ ಮುಖ್ಯ ವಿಷಯವೆಂದರೆ, ನೀವು ಯಾರನ್ನು ಮೆಚ್ಚಿದ್ದೀರೋ ಅವರು ನಿಮ್ಮನ್ನು ಮೆಚ್ಚಿಕೊಂಡಿದ್ದಾರೆ ತಾನೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಆಫೀಸಿನ ನಿಮ್ಮ ಸಂಗಾತಿಗೆ ರೊಮ್ಯಾಂಟಿಕ್ ಸಂಭಾಷಣೆ ನಡೆಸಲು ಎಂದೂ ನಿಮ್ಮ ಅಫಿಶಿಯಲ್ ಇಮೇಲ್ ಐಡಿ ಬಳಸಬೇಡಿ. ಆಗ ಕಂಪನಿಗೆ ನಿಮ್ಮ ಮೇಲೆ ಯಾವಾಗ ಬೇಕಾದರೂ ಸಂದೇಹ ಬರಬಹುದು. ಆಗ ಎಲ್ಲರೆದುರು ನಿಮ್ಮ ಅಕೌಂಟ್ ಓಪನ್ ಮಾಡಿಸಿ ಏನು ಬೇಕಾದರೂ ಚೆಕ್ ಮಾಡಬಹುದು.
ಸಣ್ಣ ಆಫೀಸ್‌ಗಳಲ್ಲಿ ರೊಮಾನ್ಸ್ ನಡೆಸುವುದು ಬಲು ರಿಸ್ಕಿ ಎನಿಸುತ್ತದೆ. ಇಲ್ಲಿ ವಿಷಯ ಕಾಳ್ಗಿಚ್ಚಿನಂತೆ ಬೇಗ ಹರಡುತ್ತದೆ. ಹೀಗಾಗಿ ನಿಮ್ಮ ಪ್ರೇಮ ಪುರಾಣ ಇನ್ನೊಬ್ಬರ ಚರ್ಚೆಯ ನಗೆಪಾಟಲಾಗದಂತೆ ಎಚ್ಚರವಹಿಸಿ.
ನೀವು ಆಫೀಸ್‌ಗೆ ಹೊಸದಾಗಿ ಸೇರಿದ್ದೀರಿ ಎಂದರೆ, ಹೇಗಾದರೂ ಮಾಡಿ ಕೆಲವು ತಿಂಗಳು ನಿಮ್ಮ ಬೆಸ್ಟ್ ಬಿಹೇವಿಯವರನ್ನಷ್ಟೇ ತೋರ್ಪಡಿಸಿ. ಇದೇ ತರಹ ಆಫೀಸಿನಲ್ಲಿ ನೀವು ಯಾವುದೇ ಸಂಗಾತಿ ಹುಡುಕಿಕೊಂಡಿದ್ದರೆ, ಮೊದಲು ಕೆಲವು ತಿಂಗಳು ಅವರ ಬಿಹೇವಿಯರ್, ಹಾವಭಾವ, ಇಷ್ಟಾನಿಷ್ಟಗಳ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿ. ಆ ವ್ಯಕ್ತಿ ನಿಮ್ಮಲ್ಲಿ ಅದೇ ಆಸಕ್ತಿ ತೋರಿಸಿದರೆ ಮಾತ್ರ ಮುಂದುವರಿಯಿರಿ, ಇದು ಅವರ ಸಂಕೇತಗಳಿಂದ ತಿಳಿಯುತ್ತದೆ. ಅಷ್ಟಲ್ಲದೆ ಅವಸರದಲ್ಲಿ ಪ್ರೇಮಾಭಿವ್ಯಕ್ತಿಗೆ ಮುಂದಾಗಬೇಡಿ.
ಆಫೀಸ್‌ನಲ್ಲಿ ಪರಸ್ಪರ ಅಫಿಶಿಯಲ್ ಆಗಿ ಮಾತ್ರ ಮಾತನಾಡಿ, ನಿಮ್ಮ ಏಕಾಂತದ ಸಂಭಾಷಣೆಗೆ ಬೇರೆಯೇ ಜಾಗ ನಿಗದಿಪಡಿಸಿಕೊಳ್ಳಿ. ಆಫೀಸಿನಲ್ಲಿ ಎಂದೂ ಪ್ರೇಮಾಲಾಪನೆಗೆ ತೊಡಗದಿರಿ.
ಆಫೀಸಿನಲ್ಲಿ ಸದಾ ಸಂಗಾತಿಯ ಜಪ ಬೇಡ. ಅಲ್ಲಿ ನಿಮ್ಮ ಇತರ ಸ್ನೇಹಿತರೂ ಇರುತ್ತಾರೆ. ಹೀಗಾಗಿ ಎಂದಿನಂತೆ ಅವರಿಗೂ ನಿಮ್ಮ ಸಮಯ ಕೊಡಿ, ಎಂದಿನಂತೆ ಎಲ್ಲರೊಂದಿಗೆ ಹಾರ್ದಿಕವಾಗಿ ಬೆರೆತುಕೊಳ್ಳಿ. ನಿಮ್ಮ ಕೆಲಸದ ಕಡೆಗೂ ಅಷ್ಟೇ ಶ್ರದ್ಧಾ ನಿಷ್ಠೆಗಳಿರಲಿ.
ನೀವು ನಿಮ್ಮ ಪ್ರೇಮಿಗಿಂತ ಸೀನಿಯರ್ ಆಗಿದ್ದರೆ, ಸಂಗಾತಿ ಜೊತೆ ಎಲ್ಲರೆದುರು ಒಬ್ಬ ಸೀನಿಯರ್ ತರಹವೇ ನಡೆದುಕೊಳ್ಳಿ. ಎಲ್ಲದಕ್ಕೂ ಮಾಫಿ ಕೊಡುವುದು, ಬೇಕುಬೇಕಾದ ಅವಕಾಶ ಕಲ್ಪಿಸಿಕೊಡುವುದು, ಅಫಿಶಿಯಲ್ ಅನುಕೂಲಗಳನ್ನು ಅವರಿಗೆ ಮಾತ್ರ ಕೊಡುವುದು…. ಹೀಗೆಲ್ಲ ಮಾಡಬೇಡಿ. ಇತರರಿಗೆ ತಿಳಿಯುವಂತೆ ಗುಸುಗುಸು ಪಿಸಪಿಸ ಮಾತನಾಡಿ ಅವರೆಲ್ಲರ ಕೋಪಕ್ಕೆ ಗುರಿಯಾಗದಿರಿ.
ನಿಮ್ಮ ಪ್ರೇಮ ಸಂಭಾಷಣೆಗಳಿಗೆ ಎಂದೂ ಮೂರನೆಯವರನ್ನು ಮಧ್ಯವರ್ತಿ ಆಗಿಸಿಕೊಳ್ಳಬೇಡಿ. 3ನೇ ವ್ಯಕ್ತಿಯ ನೆರವಿನಿಂದ ಇಂಥ ಪ್ರೇಮಾರಾಧನೆ ಎಂದೂ ಸಲ್ಲದು.
ನಿಮ್ಮ ಪ್ರೇಮ ಪುರಾಣ ಎಂದೂ ಬಾಸ್ ಕಿವಿ ತುಲುಪದಂತೆ ಎಚ್ಚರವಹಿಸಿ. ಇದರಿಂದ ನೀವಿಬ್ಬರೂ ಆಫೀಸ್ ಕೆಲಸದಲ್ಲಿ ಸೀರಿಯಸ್ ಆಗಿಲ್ಲ ಎಂದೆನಿಸಬಾರದು.
ಆಫೀಸ್‌ನಲ್ಲಿ ಸಂಗಾತಿ ಜೊತೆ ಸದಾ ಹರಟೆ ಹೊಡೆಯುತ್ತಿರಬೇಡಿ. ಬ್ರೇಕ್‌ಫಾಸ್ಟ್, ಲಂಚ್, ಟೀ ಬ್ರೇಕ್‌ಗಳಲ್ಲಿ ಕೇವಲ ಅವರೊಬ್ಬರೊಂದಿಗೆ ಮಾತ್ರ ಹೋಗುತ್ತಿರಬೇಡಿ.
ಆಫೀಸಿನಲ್ಲಿ ಪ್ರತಿ ಸಲ ಸಂಗಾತಿ ಮಾಡಿದ್ದೇ ಸರಿ ಎಂಬಂತೆ ವರ್ತಿಸಬೇಡಿ. ನೀವು ಮತ್ತೆ ಮತ್ತೆ ಹೀಗೆ ಮಾಡುತ್ತಿದ್ದರೆ, ಬೇರೆ ಸಹೋದ್ಯೋಗಿಗಳು ಕ್ರಮೇಣ ನಿಮ್ಮ ಶತ್ರುಗಳಾಗುತ್ತಾರೆ. ನಿಮ್ಮಿಬ್ಬರ ಬಗ್ಗೆ ಅನಗತ್ಯ ಗಾಳಿ ಮಾತು ಕೇಳಿಬರುತ್ತದೆ.
ನೀವಿಬ್ಬರೂ ಎಂಥ ಗಾಢ ಪ್ರೇಮಿಗಳೇ ಆಗಿರಲಿ, ಆಫೀಸ್ ವಾತಾವರಣದ ಶಿಸ್ತುಬದ್ಧತೆ ಕಾಯ್ದುಕೊಳ್ಳಿ.
ಆಫೀಸ್ ವೇಳೆಯಲ್ಲಿ ಕೇವಲ ಆಫೀಸ್ ಕೆಲಸದತ್ತ ಮಾತ್ರ ನಿಮ್ಮ ಗಮನವಿರಲಿ.
ಆಫೀಸ್ ಕ್ಯಾಂಟೀನ್‌ಗೆ ನೀವಿಬ್ಬರೇ ಹೋಗುವ ಬದಲು, ಎಲ್ಲರೊಂದಿಗೆ ಕೂಡಿ ಹೊರಡಿ. ಇದರಿಂದ ಎಲ್ಲರ ದೃಷ್ಟಿಯಲ್ಲಿ ಸದಾ ಸಭ್ಯರಾಗಿ ಉಳಿಯುವಿರಿ.
ಕೆಲವರಂತೂ ಫ್ಲರ್ಟಿಂಗ್ ನೆಪದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಹೇಳುತ್ತಿರುತ್ತಾರೆ. ಹೀಗಾಗಿ ನೀವು ಯಾರೊಂದಿಗೂ ಅಪ್ಪಿತಪ್ಪಿಯೂ ಇಂಥ ಮಾತುಗಳನ್ನಾಡುವ ತಪ್ಪು ಮಾಡಬೇಡಿ. ಬೇರೆ ಯಾರಾದರೂ ಬಾಯ್ಸ್ ಜೋಕ್ ಎಂದು ಹಾಗೆ ಹೇಳಿದರೂ ನೀವೆಂದೂ ಉತ್ತರಿಸುವ ಗೊಡವೆಗೆ ಹೋಗಬೇಡಿ.
ನಿಮ್ಮ ಪ್ರೇಮ ಪ್ರಸಂಗ ಕೊನೆಗೊಮ್ಮೆ ಆಫೀಸ್ ಸಿಬ್ಬಂದಿಗೆ ತಿಳಿಯಿತು ಅಂದ್ರೆ, ಅವರುಗಳು ಅನಗತ್ಯ ಗಾಸಿಪ್ ಮಾಡುವುದಂತೂ ತಪ್ಪುದಿಲ್ಲ. ಇದರ ನಕಾರಾತ್ಮಕ ಪ್ರಭಾವ ನಿಮ್ಮ ಸಂಬಂಧ, ವ್ಯವಹಾರ, ಕೆಲಸದ ಮೇಲೆ ಖಂಡಿತಾ ಆಗುತ್ತದೆ.
ಆದ್ದರಿಂದ ಆಫೀಸಿನಲ್ಲಿ ಅಗತ್ಯ ರೊಮಾನ್ಸ್ ನಡೆಸಿ, ಆದರೆ ಕದ್ದುಮುಚ್ಚಿ!
ಪ್ರೇಮ ತಾರಕಕ್ಕೆ ಏರಿದ ಮೇಲೆ ಜಾತಿ, ಧರ್ಮದ ಹೆಸರಿನಲ್ಲಿ ಅದನ್ನು ತುಂಡರಿಸಬೇಡಿ. ಸಹೋದ್ಯೋಗಿಗಳ ಎದುರು ಮಾನ ಹೋಗುತ್ತದೆ.
ನಿಮ್ಮ ಪ್ರೇಮ ಪರಿಪಕ್ವಗೊಂಡು ಮದುವೆಯ ಹಂತ ತಲುಪಿದ್ದೀರಿ ಎನಿಸಿದಾಗ, ನೀವಾಗಿ ಮನೆಯಲ್ಲಿ ಈ ವಿಷಯ ತಿಳಿಸಿ, ಹಿರಿಯರ ಅನುಮತಿ ಪಡೆಯಿರಿ. ಮೂರನೇಯವರಿಂದ ಅವರಿಗೆ ವಿಷಯ ತಿಳಿದರೆ ರಾದ್ಧಾಂತ ಆಗುತ್ತದೆ.
ಹೀಗೆ ಆಫೀಸಿನಲ್ಲಿ ಪ್ರೇಮಿಸಿ ಮದುವೆಯಾದ ಮೇಲೆ, ಜೀವನ ಪರ್ಯಂತ ಅದನ್ನು ನಿಭಾಯಿಸಬೇಕು. ಆಫೀಸ್‌ನಲ್ಲೂ, ಮನೆಯಲ್ಲೂ ಅದೇ ಮುಖ ಎಂದು ಬೇಗ ನೀರಸತೆ ಬಂದೀತು, ಎಚ್ಚರ!
– ಪ್ರಮೀಳಾ