ಸ್ನೇಹಾ ಬಲು ಅಂದದ ಹುಡುಗಿ. ಅವಳು ಸದಾ ಯೂನಿಕ್‌ ಸ್ಟೈಲ್‌ನ್ನು ತನ್ನೊಂದಿಗೆ ಕ್ಯಾರಿ ಮಾಡುತ್ತಿದ್ದಳು. ಆದರೂ ಅವಳ ಫ್ರೆಂಡ್ಸ್ ಬಹಳ ಹೊತ್ತು ಅವಳ ಪಕ್ಕ ಕೂರಲು ಹಿಂಜರಿಯುತ್ತಿದ್ದರು. ನಾನಂತೂ ಎಲ್ಲರನ್ನೂ ಆಕರ್ಷಿಸಲೆಂದೇ ದಿನೇದಿನೇ ಹೊಸ ಸ್ಟೈಲ್ ಅನುಸರಿಸುತ್ತೇನೆ, ಆದರೂ ಈ ಫ್ರೆಂಡ್ಸ್ ಸದಾ ನನ್ನಿಂದ ದೂರ ಓಡುತ್ತಾರಲ್ಲ, ಎಂದು ಯೋಚಿಸುವಳು. ಇದರಿಂದ ಬೇಸತ್ತ ಸ್ನೇಹಾ ಒಂದು ದಿನ ಕೋಪಗೊಂಡು ಗೆಳತಿಯರನ್ನು ಯಾಕೆ ಹೀಗೆ ಮಾಡುತ್ತೀರಿ ಎಂದು ಸಿಡುಕಿದಳು. ಅದಕ್ಕೆ ಅವರು ನಿನ್ನ ದೇಹದಿಂದ ಬರುವ ಬೆವರಿನ ದುರ್ವಾಸನೆ ಸಹಿಸಲು ಆಗುವುದಿಲ್ಲ, ಅದಕ್ಕೆ ನಾವು ಯಾರೂ ಜಾಸ್ತಿ ಹೊತ್ತು ನಿನ್ನ ಜೊತೆ ಮಾತುಕಥೆಗೆ ಕೂರುವುದಿಲ್ಲ, ಎಂದರು. ಆಗ ಅವಳಿಗೆ ನಿಜವಾದ ಕಾರಣ ಗೊತ್ತಾಯಿತು. ಆಗ ಅವಳು ತನ್ನ ಮನೆ ವೈದ್ಯರನ್ನು ಸಂಪರ್ಕಿಸಿ, ಈ ರೀತಿ ತನ್ನ ಸಮಸ್ಯೆ ಇದೆ ಎಂದು ಹೇಳಿ ಪರಿಹಾರ ಪಡೆದಳು.

ದೇಹದಿಂದ ದುರ್ಗಂಧವೇಕೆ?

ದೇಹದ ತಾಪಮಾನದಲ್ಲಿ ಸಮತೋಲನ ಕಾಯ್ದುಕೊಳ್ಳಲು, ನಮ್ಮ ದೇಹದಿಂದ ಬೆವರು ಹೊರ ಹೋಗುತ್ತದೆ. ಇದೊಂದೇ ಅಲ್ಲದೆ, ಬೆವರಿಗೆ ಇನ್ನೂ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯ ಬ್ಯಾಕ್ಟೀರಿಯಾ. ಇದರ ದೆಸೆಯಿಂದಲೇ ನಮ್ಮ ದೇಹದ ಬೆವರು ದುರ್ನಾತ ಬೀರುತ್ತದೆ. ಬ್ಯಾಕ್ಟೀರಿಯಾ ಎಪ್ರೊಕ್ರೈನ್‌ ಗ್ರಂಥಿಯ ಉತ್ಸವರ್ಜನೆಯಿಂದ ಹೆಚ್ಚುತ್ತದೆ. ಇದು ಅಮೈನೋ ಆ್ಯಸಿಡ್ ಹೆಚ್ಚಿಸಿ, ಬೆವರಿನ ನೀರಲ್ಲಿ ದುರ್ಗಂಧ ತುಂಬಿಕೊಳ್ಳುವಂತೆ ಮಾಡುತ್ತದೆ.

ಬೆವರಿನ ನಿವಾರಣೆಗೆ ಮನೆಮದ್ದು

ಬೇಕಿಂಗ್ಸೋಡ : ಇದು ಚರ್ಮದಲ್ಲಿ ಮಾಯಿಶ್ಚರ್‌ನ್ನು ಹೀರಿಕೊಳ್ಳುವ ಜೊತೆಗೆ ದುರ್ಗಂಧ ದೂರ ಮಾಡುತ್ತದೆ. ಹಾಗೆಯೇ ಇದು ಬ್ಯಾಕ್ಟೀರಿಯಾವನ್ನು ನಷ್ಟಗೊಳಿಸಿ ನ್ಯಾಚುರಲ್ ಪರ್ಫ್ಯೂಮ್ ತರಹ ಕೆಲಸ ಮಾಡುತ್ತದೆ.

ಹೀಗೆ ಬಳಸಿರಿ : 1 ಚಮಚ ಬೇಕಿಂಗ್‌ ಸೋಡಾಗೆ 1 ಚಮಚ ನಿಂಬೆರಸ ಬೆರೆಸಿ ಅದನ್ನು ಕಂಕುಳ ಹಾಗೂ ಹೆಚ್ಚು ಬೆವರು ದೇಹದ ಇತರ ಭಾಗಕ್ಕೆ ಹಚ್ಚಿಕೊಳ್ಳಿ. ನಂತರ ತಣ್ಣೀರಲ್ಲಿ ಸ್ನಾನ ಮಾಡಿ. ಹೀಗೆ ಪ್ರತಿದಿನ ಇದನ್ನು 4-5 ವಾರ ಮಾಡಬೇಕು.

ಆ್ಯಪಲ್ ಸಿಡರ್ವಿನೆಗರ್‌ : ಬ್ಯಾಕ್ಟೀರಿಯಾ ವಿರುದ್ಧ ಹೋರಾಡಲು ಇದು ಅತಿ ಸಮರ್ಥವಾದುದು. ಜೊತೆಗೆ ಇದು ಚರ್ಮದ ಪಿಂ ಬ್ಯಾಲೆನ್ಸ್ ನ್ನು ಸಮತೋಲನಗೊಳಿಸುತ್ತದೆ. ಹೀಗಾಗಿ ದೇಹದ ದುರ್ಗಂಧ ತಡೆಯುವಲ್ಲಿ ಸಶಕ್ತವಾಗಿದೆ.

ಹೀಗೆ ಬಳಸಿರಿ : ಮಾರ್ಕೆಟ್‌ನಲ್ಲಿ ರೆಡಿಮೇಡ್‌ ಸಿಗುವ ಆ್ಯಪ್‌ ಸಿಡರ್‌ ವಿನೆಗರ್‌ನ್ನು ತಂದು ಅದರಲ್ಲಿ ಹತ್ತಿ ಅದ್ದಿ, ಕಂಕುಳ ಹಾಗೂ ಇತರ ಬೆವರು ಭಾಗಕ್ಕೆ ಹಚ್ಚಿಕೊಳ್ಳಿ. 5 ನಿಮಿಷ ಬಿಟ್ಟು ತಣ್ಣೀರಿನಿಂದ ಆ ಭಾಗ ತೊಳೆಯಿರಿ. ಹೀಗೆ ದಿನಕ್ಕೆ 2-3 ಸಲ ಮಾಡಿದರೆ, ಬೆವರಿನ ದುರ್ಗಂಧ ದೂರವಾಗುತ್ತದೆ.

ನಿಂಬೆ ರಸ : ಇದರ ಆಮ್ಲೀಯ ಗುಣ ಚರ್ಮದ ಪಿಂ ಬ್ಯಾಲೆನ್ಸ್ ನ್ನು ಕಡಿಮೆ ಮಾಡಬಲ್ಲದು. ಹಾಗಾಗಿ ದುರ್ಗಂಧ ಬೀರುವ ಬ್ಯಾಕ್ಟೀರಿಯಾ ಹೆಚ್ಚಾಗುವುದಿಲ್ಲ.

ಹೀಗೆ ಬಳಸಿರಿ : ರಸಭರಿತ ನಿಂಬೆಹಣ್ಣನ್ನು 2 ಭಾಗ ಮಾಡಿ, ದೇಹದ ಬೆವರು ಕಡೆಯೆಲ್ಲ ಚೆನ್ನಾಗಿ ತಿಕ್ಕಿರಿ. ನಂತರ 10 ನಿಮಿಷ ಬಿಟ್ಟು ತಣ್ಣೀರಲ್ಲಿ ತೊಳೆಯಿರಿ. ನಿಮ್ಮ ದೇಹ ದುರ್ಗಂಧ ಬೀರುತ್ತಿಲ್ಲ ಎಂದು ಖಾತ್ರಿಯಾಗುವವರೆಗೆ ಪ್ರತಿದಿನ ಇದನ್ನು 3-4 ಸಲ ರಿಪೀಟ್‌ ಮಾಡಿ.

ರೋಸ್ಮೆರಿ : ಇದರಲ್ಲಿ ಸುಗಂಧದ ನೈಸರ್ಗಿಕ ಗುಣ ಅಡಗಿರುವುದರಿಂದ, ದುರ್ಗಂಧ ಬೀರುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಕೆಲಸ ಮಾಡಬಲ್ಲದು.

ಹೀಗೆ ಬಳಸಿರಿ : 4 ಕಪ್‌ ಬಿಸಿ ನೀರಿಗೆ ಅರ್ಧ ಕಪ್‌ ಒಣ ರೋಸ್‌ಮೆರಿ ಎಲೆ ಹಾಕಿಡಿ. 10-15 ನಿಮಿಷ ಹಾಗೇ ಬಿಡಿ. ನಂತರ ಸ್ನಾನದ ಬಕೆಟ್‌ಗೆ ಇದನ್ನು ಬೆರೆಸಿ ಸ್ನಾನ ಮಾಡಿ. ಈ ಪ್ರಕ್ರಿಯೆಯನ್ನು ದಿನೇ ದಿನೇ ಪುನರಾವರ್ತಿಸಿ, ದುರ್ಗಂಧದಿಂದ ಮುಕ್ತಿ ಸಿಗುತ್ತದೆ.

ಟೀ ಟ್ರೀ ಆಯಿಲ್ : ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಹೇರಳವಾಗಿರುವುದರಿಂದ, ಇದು ಚರ್ಮದಲ್ಲಿನ ಬ್ಯಾಕ್ಟೀರಿಯಾ ನಷ್ಟಗೊಳಿಸುವ ಕೆಲಸ ಮಾಡುತ್ತದೆ.

ಹೀಗೆ ಬಳಸಿ : 2 ಚಮಚ ತಣ್ಣೀರಿಗೆ 2-3 ಹನಿ ಟೀ ಟ್ರೀ ಆಯಿಲ್ ಬೆರೆಸಿಕೊಂಡು, ಆ ಮಿಶ್ರಣವನ್ನು ಬೇಕಾದ ಕಡೆ ನೀಟಾಗಿ ಹಚ್ಚಿರಿ. ಈ ಮಿಶ್ರಣವನ್ನು ಸ್ಪ್ರೇ ಬಾಟಲ್‌ನಲ್ಲಿ ತುಂಬಿಸಿಕೊಂಡು ಬೇಕಾದಂತೆ ಸ್ಪ್ರೇ ಸಹ ಮಾಡಿಕೊಳ್ಳಬಹುದು. ಇದರಿಂದ ದೇಹದ ದುರ್ಗಂಧ ದೂರವಾಗುತ್ತದೆ.

ನೆನಪಿಡತಕ್ಕ ಸಲಹೆಗಳು

ನೀವು ಶವರ್‌ನಲ್ಲಿ ಸ್ನಾನ ಮಾಡುತ್ತೀರಾದರೆ, ಒಮ್ಮೊಮ್ಮೆ ತುಸು ಬೆಚ್ಚಗಿನ ನೀರಲ್ಲಿ ಮಾಡಿ. ಅದು ಚರ್ಮದಲ್ಲಿ ಅಡಗಿದ ಬ್ಯಾಕ್ಟೀರಿಯಾಗಳನ್ನು ಸುಲಭವಾಗಿ ನಷ್ಟಗೊಳಿಸಬಲ್ಲದು.

ಬೇಸಿಗೆಯಲ್ಲಿ ಸದಾ ನ್ಯಾಚುರಲ್ ಫೈಬರ್‌ನ ಬಟ್ಟೆ ಧರಿಸಿರಿ, ಇದರಲ್ಲಿ ಗಾಳಿಯ ಸಂಚಾರ ಸುಗಮವಾಗಿರುತ್ತದೆ.

ಒಂದು ಸಂಶೋಧನೆ ಪ್ರಕಾರ, ಈರುಳ್ಳಿ ಬೆಳ್ಳುಳ್ಳಿ ಬೆರೆತ ಮಸಾಲೆ ಸಾಮಗ್ರಿಯ ಗ್ರೇವಿ ನಿಮಗೆ ಬೆವರಲ್ಲಿ ದುರ್ಗಂಧ ಹೆಚ್ಚಿಸುತ್ತದೆ.

ನಿಮ್ಮ ಕಂಕುಳದ ಕೂದಲನ್ನು ಆಗಾಗ ಶುಚಿಗೊಳಿಸುತ್ತಿರಿ, ಕೂದಲು ಹೆಚ್ಚಿದ್ದಷ್ಟೂ ಬೆವರನ್ನು ಹೀರಿಕೊಳ್ಳುವ ಪ್ರಕ್ರಿಯೆ ತಡವಾಗಿ ದೇಹ ದುರ್ನಾತ ಬೀರುವುದು.

ಪ್ರತಿದಿನ ನಿಮ್ಮ ಕಂಕುಳನ್ನು ಆ್ಯಂಟಿ ಬ್ಯಾಕ್ಟೀರಿಯಲ್ ಸೋಪಿನಿಂದ ವಾಶ್‌ ಮಾಡಿ. ಇದರಿಂದ ಆ ಭಾಗದ ಬ್ಯಾಕ್ಟೀರಿಯಾ ಕಡಿಮೆ ಆಗುವುದರಿಂದ ದೇಹದ ದುರ್ಗಂಧ ಕಡಿಮೆ ಆಗುತ್ತದೆ.

ನೀವು ಸ್ನಾನ ಮಾಡಿದ ನಂತರ, ದೇಹದ ಯಾವ ಭಾಗದಿಂದ ಹೆಚ್ಚು ಬೆವರು ಬರುತ್ತದೋ, ಆ ಭಾಗವನ್ನು ಚೆನ್ನಾಗಿ ಒರೆಸಿಕೊಳ್ಳಿ.

ಬೇಸಿಗೆಯಲ್ಲಿ ನಾವು ಹೆಚ್ಚು ಬೆವರುವುದರಿಂದ, ನಮ್ಮ ಡ್ರೆಸ್‌ ಬೇಗ ಒದ್ದೆ ಆಗುತ್ತದೆ. ಅದನ್ನೇ ಬಹಳ ಹೊತ್ತು ಧರಿಸುವುದರಿಂದ ದುರ್ಗಂಧ ಹೆಚ್ಚಾಗುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ 2-3 ಸಲ ಸ್ನಾನ ಮಾಡಿ, ಡ್ರೆಸ್‌ ಬದಲಿಸಿ.

ಸ್ನಾನಕ್ಕೆ ಮುಂಚೆ ಬಕೆಟ್‌ ನೀರಿಗೆ ಹಲವು ಹನಿ ಯೂಡಿಕೋಲೋನ್‌ ಬೆರೆಸಲು ಮರೆಯದಿರಿ.

ಹೆಚ್ಚು ಬೆವರುವ ಭಾಗಕ್ಕೆ ಆ್ಯಂಟಿ ಪರ್ಸ್‌ಪಿರಿಂಟ್‌, ಡಿಯೋಡರೆಂಟ್‌ ಬಳಸಲು ಮರೆಯದಿರಿ.

ಡ್ರೆಸ್‌ ಮಾಡಿದ ನಂತರ ನಿಮ್ಮ ಮೆಚ್ಚಿನ ಪರ್ಫ್ಯೂಮ್ ಹಚ್ಚಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ದುರ್ಗಂಧ ದೂರವಾಗಿ ನೀವು ಫ್ರೆಶ್‌ ಆಗಿ ಕಾಣಿಸುವಿರಿ.

ಪಾರ್ವತಿ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ