ನೀವು ನಿಮ್ಮ ಸಂಗಾತಿಗೆ ಮೋಸ ಮಾಡಿರುವಿರಿ. ಅದಕ್ಕೆ ಕಾರಣ ಒನ್‌ ನೈಟ್‌ ಸ್ಟ್ಯಾಂಡ್‌ ಆಗಬಹುದು ಅಥವಾ ಹೆಚ್ಚು ಡ್ರಿಂಕ್ಸ್ ಮಾಡಿದ ಬಳಿಕ ತೆಗೆದುಕೊಂಡ ನಿರ್ಧಾರ ಆಗಿರಬಹುದು ಅಥವಾ ಯಾರಾದರೂ ಸಹೋದ್ಯೋಗಿ ಜೊತೆ ಅಫೇರ್‌ನ ಸುಳಿಗೆ ಸಿಲುಕಿ ಸಂಗಾತಿಗೆ ಮೋಸ ಮಾಡಿರಬಹುದು, ಮೋಸವನ್ನೇನೊ ಮಾಡಿಬಿಟ್ಟಿರಿ. ಈಗ ಏಳುವ ಪ್ರಶ್ನೆಯೆಂದರೆ, ನಿಮಗೆ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳುವ ಆಸಕ್ತಿ ಇದೆಯಾ? ಆಸಕ್ತಿ ಇದೆ ಎಂದಾದಲ್ಲಿ ಏನು ಮಾಡಬೇಕು?

ಸತ್ಯದ ಮುಖಾಮುಖಿ

ಹೆಚ್ಚಿನ ಜನ ನೀಡುವ ಸಲಹೆ ಏನೆಂದರೆ, ನೀವು ನಿಮ್ಮ ತಪ್ಪಿನ ಬಗ್ಗೆ ಸಂಗಾತಿಗೆ ಸತ್ಯ ಹೇಳುವುದರ ಮೂಲಕ ಮನವರಿಕೆ ಮಾಡಿಕೊಡಿ ಎನ್ನುವುದಾಗಿರುತ್ತದೆ. ಆದರೆ ಕೆಲವು ಮ್ಯಾರೇಜ್‌ ಕೌನ್ಸೆಲರ್‌ಗಳು ಹಾಗೂ ಸೆಕ್ಸ್ ಥೆರಪಿಸ್ಟ್ ಗಳು ಹೇಳುವುದೇ ಬೇರೆ. `ಆನೆಸ್ಟಿ ಈಸ್‌ ದಿ ಬೆಸ್ಟ್ ಪಾಲಿಸಿ’ಯ ನೀತಿ ರಿಲೇಶನ್‌ಶಿಪ್‌ ಬಾಬತ್ತಿನಲ್ಲಿ ಹೆಚ್ಚು ಪರಿಣಾಮಕಾರಿ ಎನಿಸುವುದಿಲ್ಲ.

ನ್ಯೂಯಾರ್ಕ್‌ನ ಸೆಕ್ಸ್ ಥೆರಪಿಸ್ಟ್ ಅಂಡ್‌ ಮ್ಯಾರೇಜ್‌ ಕೌನ್ಸೆಲರ್‌ ಮೆಗನ್‌ ಫ್ಲೆಮಿರ್‌ ಪ್ರಕಾರ, “ನನ್ನ ಸಲಹೆ ನಿಮಗೆ ವಿವಾದಾತ್ಮಕ ಎನಿಸಬಹುದು. ಆದರೆ ನನ್ನ ಪ್ರಾಮಾಣಿಕ ಸಲಹೆ ಏನೆಂದರೆ, ನೀವು ನಿಮ್ಮ ಮೋಸದ ಬಗ್ಗೆ ಸಂಗಾತಿಯ ಮುಂದೆ ಹೇಳದೇ ಇರುವುದೇ ಒಳ್ಳೆಯದು.”

ದುಬಾರಿಯಾಗುವ ಕನ್ಛೆಶನ್

ಮೆಗನ್‌ ಹೇಳುತ್ತಾರೆ, “ನೀವು ಪ್ರಾಮಾಣಿಕತೆಯಿಂದ ಸತ್ಯವನ್ನೇ ಹೇಳಿ ಅಪರಾಧ ಪ್ರಜ್ಞೆಯಿಂದ ಪಾರಾಗಬಹುದು. ಸತ್ಯ ಹೇಳುವುದರಿಂದ ಸಂಗಾತಿ ನಿಮ್ಮನ್ನು ಕ್ಷಮಿಸಿ ಬಿಡುತ್ತಾಳೆ/ನೆ ಎಂದು ಭಾವಿಸಬಹುದು. ಆದರೆ ನಿಮ್ಮ ಈ ಸತ್ಯ ನುಡಿಗಳು ಆಕೆಯ/ಆತನ ಮುಂದೆ ನಕಾರಾತ್ಮಕ ಭಾವನೆಗಳ ಬೆಟ್ಟವನ್ನು ಮುಂದೆ ತಂದು ನಿಲ್ಲಿಸಬಹುದು. “ಸಿಡಿಮಿಡಿತನ, ಸಂದೇಹ, ಕ್ರೋಧ, ತಿರಸ್ಕಾರದಂತಹ ಭಾವನೆ ಅವರನ್ನು ಸುತ್ತುವರಿಯುತ್ತದೆ. ಇವೆಲ್ಲ ಸೇರಿ ನಿಮ್ಮಿಬ್ಬರ ನಡುವಿನ ಸಂಬಂಧದ ಅಡಿಪಾಯವನ್ನೇ ಅಲ್ಲಾಡಿಸಿಬಿಡುತ್ತದೆ. ಕನ್ಛೆಶನ್‌ ಬಳಿಕ ನಿಮ್ಮ ಸಂಗಾತಿ ನಿಮ್ಮ ಮೇಲೆ ನಂಬಿಕೆ ಇಡುವುದಿಲ್ಲ ಎನ್ನುವುದು ನಿಜ.”

ರಿಲೇಶನ್ಶಿಪ್ಕ್ರೈಸಿಸ್

ನೀವು ನಿಜವಾಗಿಯೂ ಸಂಬಂಧವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಇಚ್ಛಿಸುತ್ತಿದ್ದಲ್ಲಿ, ಎಲ್ಲಕ್ಕೂ ಮುಂಚೆ ನೀವು ಅವರಿಗೆ ಏಕೆ ಮೋಸ ಮಾಡಿದಿರಿ ಎನ್ನುವುದನ್ನು ಯೋಚಿಸಿ. ಅಂದರೆ ಅಂತಹ ಸ್ಥಿತಿ ಏಕೆ ಬಂತು? ಈ ಪ್ರಶ್ನೆಗೆ ಉತ್ತರ ಹುಡುಕಲು ನಿಮ್ಮ ಸಂಬಂಧದ ಹಲವು ಕ್ಲಿಷ್ಟಕರ ಘಟ್ಟಗಳನ್ನು ತಡಕಾಡಬೇಕಾಗುತ್ತದೆ. ಆದರೆ ಸಮಸ್ಯೆಯ ಮೂಲ ತಲುಪಲು ಇದು ಅತ್ಯವಶ್ಯ. ಈ ಕುರಿತಂತೆ ಡಾ. ಫ್ಲೆಮಿಂಗೊ ತಮ್ಮ ವಿಚಾರ ತಿಳಿಸುತ್ತಾರೆ. ಈ ತೆರನಾದ ಪ್ರಶ್ನೆ ಹೊತ್ತು ಅವರ ಬಳಿ ಅನೇಕರು ಬರುತ್ತಾರೆ. ಅವರ ಮೋಸದ ಹಿಂದೆ ಸಾಮಾನ್ಯವಾಗಿ ಸಂಗಾತಿಯಿಂದ ತಮ್ಮ ಅವಶ್ಯಕತೆ ಈಡೇರುತ್ತಿರುವುದಿಲ್ಲ ಎಂಬುದೇ ಆಗಿರುತ್ತದೆ. ಅದು ಲೈಂಗಿಕ ಅವಶ್ಯಕತೆ ಅಥವಾ ಭಾವನಾತ್ಮಕ ಆಗಿರಬಹುದು. ಅವರು ತಮ್ಮ ಆಪ್ತರಿಂದ ನಿಕಟವರ್ತಿ ಸ್ನೇಹಿತರಿಂದ ಸಲಹೆ ಪಡೆದು ಅದನ್ನು ಬಗೆಹರಿಸಿಕೊಳ್ಳಬಹುದು. ಅದರ ಬದಲು ಅವರು ಮೋಸದ ಆಪ್ಶನ್‌ಆಯ್ಕೆ ಮಾಡಿಕೊಂಡರು.

ಅಂದಹಾಗೆ ಇದು ರಿಲೇಶನ್‌ಶಿಪ್‌ ಕ್ರೈಸಿಸ್‌ನ ಸ್ಥಿತಿ. ಇಲ್ಲಿ ದಂಪತಿಗಳ ದಾಂಪತ್ಯ ಸಂಕಷ್ಟಕ್ಕೆ ಸಿಲುಕಿರುತ್ತದೆ. ಅವರು ಈ ಸಂಕಷ್ಟವನ್ನು ಬಗೆಹರಿಸಿಕೊಳ್ಳುವ ಬದಲು ಇನ್ನೊಬ್ಬ ಸಂಗಾತಿಯ ಬಾಹುಗಳಲ್ಲಿ ಸೇರಿಕೊಳ್ಳಲು ಇಷ್ಟಪಡುತ್ತಾರೆ. ಇದರಿಂದಾಗಿ ಅವರು ತಮ್ಮ ಸಂಬಂಧದ ಅಡಿಪಾಯ ಗಟ್ಟಿಗೊಳಿಸುವ ಅವಕಾಶವನ್ನು ಕಳೆದುಕೊಂಡುಬಿಡುತ್ತಾರೆ.

ಈಗ ಏನು ಮಾಡುವುದು?

ಒಂದುವೇಳೆ ನಿಮ್ಮ ಒನ್‌ ನೈಟ್‌ ಸ್ಟ್ಯಾಂಡ್‌ ಓವರ್‌ ಆಗಿದ್ದರೆ ಮತ್ತು ಆಫೀಸ್‌ ಸಹೋದ್ಯೋಗಿ ಜೊತೆಗಿನ ಒಡನಾಟ ಸಾಕು ಎನಿಸಿದ್ದರೆ, ನಿಮ್ಮ ಸಂಗಾತಿಯ ಜೊತೆಗೆ ವಾಪಸ್‌ ಹೋಗಲು ಇಷ್ಟಪಡುವಿರಿ. ಇಂತಹ ಸ್ಥಿತಿಯಲ್ಲಿ ನೀವು ಮೊದಲು ಸತ್ಯವನ್ನು ಹತ್ತಿಕ್ಕಿ ಒಂದು ಸಂಕಲ್ಪ ಕೈಗೊಳ್ಳಬೇಕು. ಇಂತಹ ಪರಿಸ್ಥಿತಿ ಮತ್ತೆಂದೂ ಉದ್ಭವಿಸಬಾರದು ಎಂಬಂತಹ ನಿರ್ಧಾರಕ್ಕೆ ಬರಬೇಕು. ಆ ಬಳಿಕ ಯಾವುದಾದರೂ ರಿಲೇಶನ್‌ಶಿಪ್‌ ಕೌನ್ಸೆಲರ್‌ ಬಳಿ ಹೋಗಿ ನಿಮ್ಮ ಅವಶ್ಯಕತೆ ಮತ್ತು ದೌರ್ಬಲ್ಯಗಳನ್ನು ಹೇಳಿಕೊಳ್ಳಿ. ಅಗತ್ಯಬಿದ್ದರೆ ಸಂಗಾತಿಯನ್ನು ಸೆಕ್ಸ್ ಥೆರಪಿಸ್ಟ್ ಅಥವಾ ಮ್ಯಾರೇಜ್‌ ಕೌನ್ಸೆಲರ್‌ ಬಳಿ ಕರೆದುಕೊಂಡು ಹೋಗಿ.

ಹೇಳಬೇಕೋ ಬೇಡವೋ?

ಕೆಲವರು ಸಂಗಾತಿಗೆ ಮಾಡಿದ ಮೋಸವನ್ನು ಬಚ್ಚಿಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಒಂದು ಸಲ ಮೋಸ ಮಾಡಿದ ವ್ಯಕ್ತಿ ಮೇಲಿಂದ ಮೇಲೆ ಅದನ್ನು ಪುನರಾವರ್ತಿಸುತ್ತಾನೆ. ಹೀಗಾಗಿ ಆ ವ್ಯಕ್ತಿಯ ಕನ್ಛೆಶನ್‌ನಿಂದ ಸಂಗಾತಿ ಅಲರ್ಟ್‌ ಆಗಿರಬಹುದು. ಮತ್ತೆ ಕೆಲವರು ಮೋಸದ ಈ ವಿಚಾರ ಸಂಗಾತಿಗೆ ಎಂದಾದರೂ ಒಮ್ಮೆ ತಿಳಿದೇ ತಿಳಿಯುತ್ತದೆ. ಹಾಗಾಗಿ ಸತ್ಯ ಸಂಗತಿಯನ್ನು ನೀವೇ ಹೇಳಿಬಿಡಬೇಕು ಎನ್ನುತ್ತಾರೆ. ಅದರಿಂದ ಸಂಗಾತಿ ಡಿಪ್ರೆಶನ್‌ಗೆ ಹೋದರೂ ಹೋಗಬಹುದು. ಇಲ್ಲವೇ ಸಂಬಂಧವನ್ನೇ ಕಡಿದುಹಾಕಬಹುದು.

ದಾಂಪತ್ಯ ಸಂಬಂಧದಲ್ಲಿ ಸೂಕ್ಷ್ಮ ವಿಷಯಗಳಲ್ಲಿ ಪ್ರತಿಯೊಂದು ಸತ್ಯ ಸಂಗತಿ ಒಮ್ಮೊಮ್ಮೆ ಎಂತಹ ಬಿರುಕನ್ನುಂಟು ಮಾಡಿಬಿಡಬಹುದೆಂದರೆ, ಸಂಗಾತಿ ಅದರಿಂದ ತತ್ತರಿಸಿ ಹೋಗಬಹುದು. ಹೀಗಾಗಿ ಸತ್ಯವನ್ನು ನಿಮ್ಮಲ್ಲಿಯೇ ಅದುಮಿಟ್ಟುಕೊಳ್ಳಬೇಕೆಂದರೆ, ಆ ತಪ್ಪನ್ನು ಮತ್ತೆಂದೂ ಮಾಡುವುದಿಲ್ಲವೆಂದು ನಿಮಗೆ ನೀವೇ ಪ್ರಮಾಣ ಮಾಡಿಕೊಳ್ಳಬೇಕು.      ಕೆ. ಕಲ್ಪನಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ