ಸುಂದರ ಪತ್ನಿ ಮತ್ತು ಮುದ್ದಾದ ಮಗಳಿದ್ದರೂ ಆನಂದನಿಗೆ ಎದುರು ಮನೆಯ ಶಾಲಿನಿಯೊಂದಿಗೆ ಯಾವಾಗ ಮತ್ತು ಹೇಗೆ ಸಂಬಂಧ ಬೆಳೆಯಿತೆಂದು ತಿಳಿಯಲೇ ಇಲ್ಲ. ಒಂದೂವರೆ ವರ್ಷದಿಂದ ನಡೆಯುತ್ತಿರುವ ಈ ಸಂಬಂಧದ ಬಗ್ಗೆ ಎರಡೂ ಮನೆಯವರಿಗೆ ಅರಿವಿಲ್ಲ. ಎರಡು ಮಕ್ಕಳ ತಾಯಿಯಾದ ಶಾಲಿನಿ ಈಗ ಗರ್ಭಿಣಿಯಾಗಿದ್ದಾಳೆ. ಹುಟ್ಟಲಿರುವ ಮಗು ಅವಳ ಪತಿಯದಲ್ಲ, ಆನಂದನದು. ಆನಂದನಿಗೆ ಈ ವಿಷಯ ತಿಳಿದಾಗಿನಿಂದ ಶಾಲಿನಿಯ ಮೇಲಿನ ಅವನ ಮೋಹ ಮತ್ತೂ ಹೆಚ್ಚಾಗಿದೆ. ಈಗಂತೂ ಅವನು ಶಾಲಿನಿಗಾಗಿ ಬೆಲೆಬಾಳುವ ಉಡುಗೊರೆಗಳು, ಬರಲಿರುವ ಮಗುವಿಗಾಗಿ ಬಟ್ಟೆ ಮತ್ತು ಆಟಿಕೆಗಳನ್ನೂ ಕೊಂಡು ತರತೊಡಗಿದ್ದಾನೆ.
ನಳಿನಾಳಿಗೆ ತನ್ನ ಪತಿ ಆನಂದನ ಈ ವಿವಾಹೇತರ ಸಂಬಂಧದ ಬಗ್ಗೆ ತಿಳಿದಿಲ್ಲದಿದ್ದರೂ, ಅವನ ವ್ಯವಹಾರದಲ್ಲಿನ ಬದಲಾವಣೆಯನ್ನು ಗಮನಿಸಿದ್ದಳು. ಆ ಬಗ್ಗೆ ಕೇಳಿದಾಗ ಅವನು ನಕ್ಕು ಮಾತು ಮರೆಸುತ್ತಿದ್ದ. ಅಕೌಂಟ್‌ನಿಂದ ತೆಗೆಯಲ್ಪಡುತ್ತಿದ್ದ ಹಣದ ಬಗ್ಗೆ ವಿಚಾರಿಸಿದರೆ ಇತರೆ ಖರ್ಚಿನ ಲೆಕ್ಕ ಹೇಳುತ್ತಿದ್ದ.
ನಳಿನಾ ಡಾಕ್ಟರ್. ಹಗಲಿನಲ್ಲಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸಾಯಂಕಾಲ ಒಂದು ನರ್ಸಿಂಗ್ ಹೋಮ್ ನಲ್ಲಿ ರೋಗಿಗಳಿಗೆ ಸಂದರ್ಶನ ನೀಡುತ್ತಿದ್ದಳು. ಬೆಳಗ್ಗೆ 7 ಗಂಟೆಗೆ ಮನೆ ಬಿಟ್ಟರೆ ರಾತ್ರಿ 7-8 ಗಂಟೆಗೆ ಮನೆ ಸೇರಲು ಸಾಧ್ಯವಾಗುತ್ತಿತ್ತು. ಹೀಗಾಗಿ ಮನೆಯಲ್ಲಿ ಹೆಚ್ಚು ಸಮಯ ಕಳೆಯಲಾಗುತ್ತಿರಲಿಲ್ಲ. ಪತಿಯ ನಡವಳಿಕೆಯ ಬದಲಾವಣೆಯನ್ನು ಗಮನಿಸಿದರೂ ಅದನ್ನು ಪರೀಕ್ಷಿಸಿಲು ಅವಳಿಗೆ ಸಮಯವಿರಲಿಲ್ಲ. ಅವಳಿಗೆ ಒಳ್ಳೆಯ ಉದ್ಯೋಗವಿದ್ದು, ಅವಳ ಸಂಪಾದನೆಯಿಂದಲೇ ಮನೆ ನಡೆಯುತ್ತಿತ್ತೆಂದು ಹೇಳಬಹುದು. ಆದರೆ ಪತಿ ಮತ್ತು ಮಗಳಿಗೆ ಹೆಚ್ಚು ಸಮಯ ನೀಡಲು ಅವಳಿಂದಾಗುತ್ತಿರಲಿಲ್ಲ.
ಆನಂದ್ ಶೇರ್ ಮಾರ್ಕೆಟ್‌ಗೆ ಏಜೆಂಟ್ ಕೆಲಸ ಮಾಡುತ್ತಿದ್ದ. ಅವನು ಮನೆಯಲ್ಲಿಯೇ ಕುಳಿತು ಮೊಬೈಲ್ ಫೋನ್ ಮೂಲಕ ಈ ಕೆಲಸ ನಿರ್ವಹಿಸುತ್ತಿದ್ದ. ಹೀಗಾಗಿ ಅವನ ಹೆಚ್ಚು ಸಮಯವೆಲ್ಲ ಮನೆಯಲ್ಲಿಯೇ ಕಳೆಯುತ್ತಿತ್ತು. ಮನೆ ಮತ್ತು ಮಗಳ ಜವಾಬ್ದಾರಿಯೆಲ್ಲ ಅವನ ಮೇಲೇ ಇತ್ತು. ಮಗಳು ಶಾಲೆಗೆ ಹೋದ ನಂತರ ಅವನು ಮನೆಯಲ್ಲಿ ಒಬ್ಬನೇ ಇರುತ್ತಿದ್ದ. ಇಂತಹ ಒಂಟಿತನದ ಸಮಯವೇ ಅವನಿಗೆ ಶಾಲಿನಿಯ ಪರಿಚಯ ಮಾಡಿಸಿತು. ಪರಿಚಯ ಸ್ನೇಹಕ್ಕೆ ತಿರುಗಿ ಕಡೆಗೆ ದೈಹಿಕ ಸಂಬಂಧದವರೆಗೂ ತಲುಪಿತು.
ಅತ್ತ ಶಾಲಿನಿಯ ಪತಿ ಉದ್ಯೋಗ ನಿಮಿತ್ತ ಹೆಚ್ಚು ಟೂರ್ ಮಾಡುತ್ತಿದ್ದುದರಿಂದ ಅವಳೂ ಮನೆಯಲ್ಲಿ ಒಬ್ಬಳೇ ಆಗುತ್ತಿದ್ದಳು. ಅವಳ 8 ಮತ್ತು 6 ವರ್ಷದ ಮಕ್ಕಳಿಬ್ಬರೂ ಶಾಲೆಗೆ ಹೋಗಿ ನಂತರ ಟ್ಯೂಶನ್ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು.
ಶಾಲಿನಿ ಮತ್ತು ಆನಂದ್ ಮಧ್ಯಾಹ್ನದ ಹೊತ್ತಿನಲ್ಲಿ ಆಗಾಗ ಸೇರುತ್ತಿದ್ದರು. ಒಮ್ಮೊಮ್ಮೆ ಆನಂದನ ಮನೆಯಲ್ಲಿ, ಕೆಲವೊಮ್ಮೆ ಶಾಲಿನಿಯ ಮನೆಯಲ್ಲಿ. ಶಾಲಿನಿ ರೂಪವತಿ, ಮೃದುಭಾಷಿ;. ಜೊತೆಗೆ ರುಚಿಕರವಾಗಿ ಅಡುಗೆ ಮಾಡುತ್ತಿದ್ದಳು. ಈ ಎಲ್ಲ ಗುಣಗಳೂ ಆನಂದನನ್ನು ಅವಳೆಡೆಗೆ ಆಕರ್ಷಿಸಿದವು. ಕಳೆದ ಒಂದೆರಡು ವರ್ಷಗಳಿಂದ ಶಾಲಿನಿ ಆನಂದರ ಸಂಬಂಧ ನಡೆಯುತ್ತಿದ್ದರೂ, ಯಾರಿಗೂ ಅದರ ಸುಳಿವಾಗಲಿಲ್ಲ. ಈಗ ಅವಳು ಆನಂದನ ಮಗುವಿಗೆ ತಾಯಿಯಾಗಲಿರುವುದು ಅವನನ್ನು ಮತ್ತಷ್ಟು ಹತ್ತಿರಕ್ಕೆ ಸೆಳೆಯುವಂತಾಯಿತು. ಮುಂದೆ ಸಂಬಂಧ ಹೀಗೇ ಮುಚ್ಚುಮರೆಯಲ್ಲಿ ಮುಂದುವರಿಯುವುದೋ ಅಥವಾ ಎರಡು ಸಂಸಾರಗಳು ಛಿದ್ರವಾಗುವವೋ ಎಂಬುದನ್ನು ಕಾಲವೇ ನಿರ್ಣಯಿಸಬಲ್ಲದು.
ನಿರ್ಲಕ್ಷ್ಯತನದ ಫಲಿತಾಂಶ
ವಿವಾಹೇತರ ಸಂಬಂಧದ ಚಟುವಟಿಕೆಗಳು ಪುರಾಣಕಾಲದಿಂದಲೂ ನಡೆದುಬಂದಿವೆ. ಕೆಲವು ಸಂಬಂಧಗಳು ಮರೆಯಲ್ಲಿ ನಡೆದಿದ್ದರೆ ಮತ್ತೆ ಕೆಲವು ಬಹಿರಂಗವಾಗಿ ನಡೆಯುತ್ತವೆ.
‘ನಿನ್ನ ಸಂಸಾರ ಒಡೆಯುತ್ತಿದೆ, ನಿನ್ನ ಮಾನ ಮರ್ಯಾದೆ ಹಾಳಾಗುತ್ತಿದೆ. ನಿನ್ನ ಪತ್ನಿಯಲ್ಲಿ ಇಲ್ಲದಿರುವುದೇನನ್ನು ಅವಳಲ್ಲಿ ಕಂಡೆ? ಎಂದು ಕೇಳಿದರೆ, `ನನಗೆ ಅವಳು ಇಷ್ಟವಾದಳು ಅಷ್ಟೇ,’ ಎನ್ನುವ ಉತ್ತರ ದೊರೆಯುತ್ತದೆ. ಆದರೆ ಇದು ಇಷ್ಟದ ಪ್ರಶ್ನೆ ಮಾತ್ರವೇ ಅಲ್ಲ. ಅದಕ್ಕಿಂತ ಆಳವಾದ ಅಂಶವೊಂದಿರುತ್ತದೆ. ಪತ್ನಿಯ ಕಡೆಯಿಂದ ದೊರೆಯುವ ನಿರ್ಲಕ್ಷ್ಯ, ಅವ್ಯಸ್ಥೆಗಳು ಪುರುಷನನ್ನು ಬೇರೊಂದು ಹೆಣ್ಣಿನತ್ತ ಸೆಳೆಯುವಂತೆ ಮಾಡುತ್ತದೆ.
ಇದೇ ಮಾತು ಸ್ತ್ರೀಯರಿಗೂ ಅನ್ವಯಿಸುತ್ತದೆ. ಪತಿಯ ನಿರ್ಲಕ್ಷ, ಸಮಯಾಭಾವ, ಹಣದ ತೊಂದರೆ, ಜಗಳ, ಹೊಡೆತ, ಇಂತಹ ಅಂಶಗಳು ಪತ್ನಿಯನ್ನು ಪರಪುರುಷನೆಡೆಗೆ ಆಕರ್ಷಣೆಗೊಳ್ಳುವಂತೆ ಮಾಡುತ್ತದೆ.
ವಿವಾಹೇತರ ಸಂಬಂಧದ ಬೆಳವಣಿಗೆಯ ಹಿಂದೆ ಏನೋ ಒಂದು ಕಾರಣವಿದ್ದೇ ಇರುತ್ತದೆ. ಅದು ಬೇಸರ, ಅಸಂತೋಷ ಅಥವಾ ಅತೃಪ್ತ ಬಯಕೆ ಇದ್ದಿರಬಹುದು. ಮನದ ಒಂದು ಮೂಲೆ ಖಾಲಿಯಾಗಿದ್ದು, ಶೂನ್ಯ ಭಾವನೆ ಆವರಿಸಿದ್ದರೆ, ಅದು ಎಲ್ಲಿ ಸಂತೃಪ್ತಗೊಳ್ಳುವುದೋ ಆ ಕಡೆಗೆ ವ್ಯಕ್ತಿಯು ಬಾಗುವುದು ಸ್ವಾಭಾವಿಕ. ಪತಿ ಪತ್ನಿಯರ ನಡುವೆ ಸಮಯ ಅಥವಾ ಸಂವೇದನೆಯ ಕೊರತೆಯಿಂದಾಗಿ ಮನಸ್ಸನ್ನು ಬೇಸರ ಮುಸುಕಿದಾಗ ಬೇರೊಂದು ವ್ಯಕ್ತಿಯತ್ತ ಸೆಳೆತ ಹುಟ್ಟುವುದು ಸಹಜವೇ ಆಗಿರುತ್ತದೆ. ಸಮಾಜದಲ್ಲಿ ಪುರುಷರಿಗೆ ಈ ಅವಕಾಶ ಹೆಚ್ಚಾಗಿ ದೊರೆಯುತ್ತದೆ. ಏಕೆಂದರೆ ಅವರು ಹೆಚ್ಚಾಗಿ ಮನೆಯಿಂದ ಹೊರಗೇ ಇರುವುದರಿಂದ ಅವರಿಗೆ ಹೊರಗಿನ ಸಂಪರ್ಕ ಹೆಚ್ಚಾಗಿರುತ್ತದೆ. ಜೊತೆಗೆ ಅವರು ಸ್ವತಂತ್ರ ಮತ್ತು ಉನ್ಮುಕ್ತ ಸ್ವಭಾವದವರಾಗಿರುತ್ತಾರೆ. ಮಹಿಳೆಯರು ಸಾಧಾರಣವಾಗಿ ಮನೆಯೊಳಗೇ ಇದ್ದು ಮರ್ಯಾದೆ ಮತ್ತು ನೈತಿಕತೆಗೆ ಬದ್ಧರಾಗಿರುತ್ತಾರೆ. ಅವರಿಗೆ ಮನೆ, ಮಕ್ಕಳು ಮತ್ತು ಸಂಸಾರದ ಕುರಿತಾದ ಜವಾಬ್ದಾರಿ ಹೆಚ್ಚಾಗಿರುತ್ತದೆ.
ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು ವಿವಾಹೇತರ ಸಂಬಂಧಗಳಲ್ಲಿ ತೊಡಗಿರುವುದು ಹೆಚ್ಚಾಗಿ ಕಂಡುಬರುತ್ತಿದೆ. `ಸಮಾಜ ಏನನ್ನುವುದೋ?’ ಎಂಬ ಭಯ ಈಗೀಗ ಕಡಿಮೆಯಾಗುತ್ತಿದೆ. ಮಹಿಳೆಯರು ಈಗ ಪ್ರೀತಿ, ಗೌರವ, ಲೈಂಗಿಕ ಸಂತೃಪ್ತಿಗಳಿಗೆ ಹೆಚ್ಚು ಬೆಲೆ ಕೊಡತೊಡಗಿದ್ದಾರೆ. ಅವರೀಗ ಪುರುಷರನ್ನೇ ಅವಲಂಬಿಸಿಕೊಂಡು ಜೀವನವಿಡೀ ಕೊರಗುವ, ಕೀಳು ಭಾವನೆಯಿಂದ ಕೂಡಿ ಜೀವನ ಕಳೆಯಲು ಬಯಸುವುದಿಲ್ಲ.
ಈಗ ಸಮಾಜ ಇಂತಹ ಸಂಬಂಧಗಳನ್ನು ಒಪ್ಪಿಕೊಳ್ಳತೊಡಗಿದೆ. ಈ ಕಾರಣದಿಂದ ಮಹಾನಗರಗಳಲ್ಲಿ ಅಲ್ಲದೆ, ಚಿಕ್ಕ ಪಟ್ಟಣಗಳಲ್ಲಿಯೂ ವಿವಾಹೇತರ ಸಂಬಂಧಗಳ ಬಗ್ಗೆ ಹೆಚ್ಚಿನ ಗಲಭೆ ಉಂಟಾಗುವುದಿಲ್ಲ.
ಬಾಲಿವುಡ್ ಫಿಲಂ ಇಂಡಸ್ಟ್ರಿಯು ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಅರ್ಬಾಜ್ ಖಾನ್‌ನ ಪತ್ನಿಯಿಂದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್‌ರ ಸಂಬಂಧದ ಬಗ್ಗೆ ಮಾತು ಕೇಳಿ ಬರುತ್ತಿದೆ. ಹಾಗೆಯೇ ಅರ್ಜುನ್ ರಾಮ್ ಪಾಲ್ ಮತ್ತು ಮೆಹರ್, ಹೃತಿಕ್ ರೋಶನ್ ಮತ್ತು ಸುಜೈನ್‌ರ ನಡುವಿನ ವಿಚ್ಛೇದನದ ಪ್ರಸಂಗಗಳೆಲ್ಲ ಇಂತಹ ವಿಷಯದ ಮೇಲೆ ಆಧಾರಿತಾಗಿವೆ. ಬೋನಿ ಕಪೂರ್ ಮತ್ತು ಧರ್ಮೇಂದ್ರ ಮುಂತಾದ ಇಂಡಸ್ಟ್ರಿಯ ದೊಡ್ಡ ಸ್ಟಾರ್‌ಗಳ ವಿವಾಹೇತರ ಸಂಬಂಧಗಳು ಸ್ವೀಕೃತವಾಗಿವೆ.
ವಿವಾಹಬಾಹಿರ ಸಂಬಂಧ ಅಪರಾಧವಲ್ಲ
ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಐಪಿಸಿ 497ರ ತೀರ್ಪು ಬಹಳ ಪ್ರಾಮುಖ್ಯತೆ ಹೊಂದಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾರ ಅಧ್ಯಕ್ಷತೆಯಲ್ಲಿನ 5 ಸದಸ್ಯರ ಸಂವಿಧಾನ ಪೀಠ ವ್ಯಭಿಚಾರಕ್ಕಾಗಿ ದಂಡ ವಿಧಿಸುವ ಧಾರೆಯನ್ನು ಅಸಂವಿಧಾನಕವೆಂದು ಸರ್ವ ಸಮ್ಮತಿಯಿಂದ ಘೋಷಿಸುತ್ತಾ, ವಿವಾಹಬಾಹಿರ ಸಂಬಂಧ ಅಪರಾಧವಲ್ಲ ಎಂದು ಜಾಹೀರುಪಡಿಸಿದೆ.
ಇದರ ಅರ್ಥವೆಂದರೆ ಯಾವುದೇ ವ್ಯಕ್ತಿಯು ಪರಸ್ತ್ರೀ ಅಥವಾ ಪರಪುರುಷನೊಂದಿಗೆ ಸಂಬಂಧ ಬೆಳೆಸುವುದು ಅಪರಾಧವಲ್ಲ. ಮಹಿಳೆಯು ಸಮಾಜದ ಇಚ್ಛೆಗೆ ತಕ್ಕಂತೆ ಯೋಚಿಸಬೇಕಾಗಿಲ್ಲ. ಎಂತಹುದೇ ಪರಿಸ್ಥಿತಿಯಲ್ಲಿಯೂ ಪತಿಯು ತನ್ನ ಪತ್ನಿಯ ಮಾಲೀಕನಾಗಲು ಸಾಧ್ಯವಿಲ್ಲ. ಮಹಿಳೆಯು ಪರಪುರುಷನೊಂದಿಗೆ ಸಂಬಂಧವಿರಿಸಿಕೊಂಡರೆ ಅದು ಅಪರಾಧದ ಪಟ್ಟಿಗೆ ಸೇರುವುದಿಲ್ಲ. ಅವಳಿಗೆ ತನಗೆ ಬೇಕಾದ ಪುರುಷನನ್ನು ಸಹವಾಸಕ್ಕಾಗಿ ಆರಿಸಿಕೊಳ್ಳುವ ಅಧಿಕಾರವಿರುತ್ತದೆ. ಇದಕ್ಕಾಗಿ ಅವಳನ್ನು ಹಿಂಸಿಸಲು ಅಥವಾ ದಂಡ ವಿಧಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಮಹಿಳೆಯರ ಕೌಟುಂಬಿಕ ಹಿಂಸೆಯ ಬಗ್ಗೆಯೂ ಸಂಸತ್ತಿನಲ್ಲಿ ಕಾನೂನು ಮಾಡಲಾಗಿದೆ.
ಪ್ರಾಚೀನ ಭಾರತದ ಇತಿಹಾಸದಲ್ಲಿಯೂ ವಿವಾಹೇತರ ಸಂಬಂಧಗಳ ಉದಾಹರಣೆಗಳಿವೆ. ಹಿಂದೆ ಹೆಚ್ಚು ಗಂಡಸರಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರು ಇದ್ದರೆಂದು ಉಲ್ಲೇಖವಾಗಿದೆ. ಮಹಾಭಾರತದ ಕಥೆಯಲ್ಲಿ ರಾಜ ಪಾಂಡುವಿಗೆ ಕುಂತಿ, ಮಾದ್ರಿ ಎಂಬ ಇಬ್ಬರು ಪತ್ನಿಯರಿದ್ದರು. ಪಾಂಡುವಿನ ಸೊಸೆ ದ್ರೌಪದಿ ಐವರು ಪಾಂಡು ಪುತ್ರರಾದ ಧರ್ಮರಾಯ, ಭೀಮ, ಅರ್ಜುನ, ನಕುಲ ಮತ್ತು ಸಹದೇವರ ಸಹಧರ್ಮಿಣಿಯಾಗಿದ್ದಳು. ಆ ಕಾಲದಲ್ಲಿ ಪುತ್ರಹೀನ ಮಹಿಳೆಯು ಸಂತಾನೋತ್ಪತ್ತಿಗಾಗಿ ಪತಿಯ ಅನುಮತಿಯೊಂದಿಗೆ ಅನ್ಯ ಪುರುಷನೊಂದಿಗೆ ಸಮಾಗಮ ಮಾಡಬಹುದಿತ್ತು. ಇದನ್ನು ವ್ಯಭಿಚಾರವೆಂದು ತಿಳಿಯಲ್ಪಡುತ್ತಿರಲಿಲ್ಲ.
ಮುಂದೆ ಶ್ವೇತಕೇತು ಮುನಿಯು ಈ ಪದ್ಧತಿಯನ್ನು ವಿರೋಧಿಸಿ ವಿವಾಹಿತ ಮಹಿಳೆಯು ಸನ್ನಡತೆಯುಳ್ಳವಳಾಗಿ ಪತಿಗೆ ನಿಷ್ಠಾವಂತಳಾಗಿ ಇರಬೇಕೆಂಬ ನಿಯಮ ಮಾಡಿದನು. ವಿವಾಹಬಾಹಿರ ಸಂಬಂಧವನ್ನು ವ್ಯಭಿಚಾರವೆಂದು ಘೋಷಿಸಿ ಶ್ವೇತಕೇತು ಅದಕ್ಕೆ ತಡೆಹಿಡಿದನು. ಆದರೂ ಸಹ ನಮ್ಮ ದೇಶದಲ್ಲಿ ಕೆಲವು ಪಂಗಡಗಳು ಈ ನಿಯಮವನ್ನು ತಳ್ಳಿಹಾಕಿ ಇಂದೂ ಸಹ ಪ್ರಾಚೀನ ಪದ್ಧತಿಯನ್ನು ಜಾರಿಯಲ್ಲಿರಿಸಿಕೊಂಡಿವೆ. ಆಧುನಿಕತೆ ಮತ್ತು ಸಭ್ಯತೆಯ ವಿಕಾಸದೊಂದಿಗೆ ಸೆಕ್ಸ್ ಗೆ ಸಂಬಂಧಿಸಿದಂತೆ ಸಾಮಾಜಿಕ ರೀತಿ ನೀತಿಗಳು ವಿಕಸಿತಗೊಂಡಿವೆ. ಅದಕ್ಕೆ ತಕ್ಕಂತೆ ನೈತಿಕತೆಯ ಮಾನದಂಡವನ್ನು ರೂಪಿಸಲಾಗಿದೆ.
ಮಕ್ಕಳ ಮೇಲೆ ಪರಿಣಾಮ
ವಿವಾಹ ಪೂರ್ವ ದೈಹಿಕ ಸಂಬಂಧ ಅಥವಾ ನಂತರದ ವಿವಾಹಬಾಹಿರ ಸಂಬಂಧದ ಬಗ್ಗೆ ಈಗ ಹೆಚ್ಚು ಗಲಭೆ ಕಂಡುಬರುವುದಿಲ್ಲ. ಆದರೆ ಇಂತಹ ಸಂಬಂಧಗಳಿಗೆ ಸಮಾಜದಲ್ಲಿ ಪೂರ್ಣವಾಗಿ ಸ್ವೀಕೃತಿ ದೊರಕುವುದಿಲ್ಲವಾದ್ದರಿಂದ ಅವು ವಿಪರೀತ ಪರಿಣಾಮ ಬೀರುತ್ತವೆ. ಇಂತಹ ಸಂಬಂಧಗಳ ಪ್ರಭಾವ ಮುಖ್ಯವಾಗಿ ಮಕ್ಕಳ ಮೇಲೆ ಉಂಟಾಗುತ್ತದೆ ಮತ್ತು ಅವರ ಜೀವನ ಅಲ್ಲೋಲ ಕಲ್ಲೋಲವಾಗುತ್ತದೆ. ತಂದೆ ತಾಯಿಯರ ನಡುವೆ ಮೂರನೆಯ ವ್ಯಕ್ತಿಯೊಬ್ಬರು ಇಣುಕಿದಾಗ ಮನೆಯ ವಾತಾವರಣ ಬಿಗುವಾಗುತ್ತದೆ. ಅದು ಮನೆಯಲ್ಲಿ ಬೆಳೆಯುವ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಂತಹ ಸಂಬಂಧ ವಿವಾಹ ವಿಚ್ಛೇದನಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿಯೇ ಈ ಆಧುನಿಕ ಸಮಾಜದಲ್ಲಿ ವಿವಾಹ ವಿಚ್ಛೇದನಕ್ಕಾಗಿ ನ್ಯಾಯ್ಯಾಲಯದ ಮೆಟ್ಟಿಲೇರುತ್ತಿರುವ ಪತಿಪತ್ನಿಯರ ಸಂಖ್ಯೆ ಏರುತ್ತಿದೆ.
ಪತಿಯು ಪರಸ್ತ್ರೀಯೊಂದಿಗೆ ಸಂಬಂಧವಿರಿಸಿಕೊಂಡಿರುವ ಸಂದರ್ಭಗಳಲ್ಲಿ ಅದರ ಅರಿವಿದ್ದರೂ ಪತ್ನಿಯು ಕೆಲವೊಮ್ಮೆ ವಿಧಿಯಿಲ್ಲದೆ ಸಹಿಸಿಕೊಂಡಿರಬೇಕಾಗುತ್ತದೆ. ಆದರೆ ಪತ್ನಿಯು ಅಂತಹ ಸಂಬಂಧ ಬೆಳೆಸಿದರೆ ಪತಿಯು ಅದನ್ನು ಸುತರಾಂ ಒಪ್ಪುವುದಿಲ್ಲ. ಆಗ ಪತಿ ಆಕೆಗೆ ವಿಚ್ಛೇದನ ನೀಡಿದಾಗ, ಆ ಪರಪುರುಷನೂ ಈ ಮಹಿಳೆಯನ್ನು ಸ್ವೀಕರಿಸದಿದ್ದರೆ ಅವಳ ಉದರ ಪೋಷಣೆಯ ಸಮಸ್ಯೆ ಎದುರಾಗುತ್ತದೆ.
ಎಚ್ಚರಿಕೆ ಅಗತ್ಯ
ಕೆಲವೊಮ್ಮೆ ವಿವಾಹಬಾಹಿರ ಸಂಬಂಧ ಬೆಳೆಸಿದ ಮಹಿಳೆಯು ಮೋಸಕ್ಕೆ ಬಲಿಯಾಗುವುದೂ ಉಂಟು. ಅವಳ ಪಾರ್ಟ್‌ನರ್‌ಆಗಿದ್ದನು ತನ್ನ ಆಸೆ ತೀರಿಸಿಕೊಂಡು ನಂತರ ಅವಳಿಗೆ ಕೈ ಕೊಟ್ಟರೆ ಅವಳು ಅಸಹಾಯಕ ಸ್ಥಿತಿ ತಲುಪುತ್ತಾಳೆ, ಕೋಪದಿಂದ ಕುದಿಯುತ್ತಾಳೆ, ಪಶ್ಚಾತ್ತಾಪದಿಂದ ನಲುಗುತ್ತಾಳೆ, ಇಂತಹ ಪರಿಸ್ಥಿತಿ ಪುರುಷನಿಗೂ ಬರಬಹುದು. ಆಗ ಅವನು ಕೋಪದಿಂದ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾನೆ. ಇಂತಹ ಸಂದರ್ಭಗಳಲ್ಲಿ ಕೊಲೆ, ಆ್ಯಸಿಡ್ ಅಟ್ಯಾಕ್‌ನಂತಹ ದುಷ್ಕೃತ್ಯಗಳು ನಡೆಯುವುದನ್ನು ನೋಡಿದ್ದೇವೆ.
ಆದ್ದರಿಂದ ಎಚ್ಚರಿಕೆಯಿಂದ ಇರುವುದು ಅಗತ್ಯ. ನೀವು ಇಂತಹ ಸಂಬಂಧದಲ್ಲಿ ತೊಡಗುವ ಸಂದರ್ಭದಲ್ಲಿ, ನಿಮ್ಮದೆಲ್ಲವನ್ನೂ ಅರ್ಪಿಸುವ ಮೊದಲು ಆ ವ್ಯಕ್ತಿ ಈ ಸಂಬಂಧದ ಬಗ್ಗೆ ಎಷ್ಟು ಗಂಭೀರನಾಗಿದ್ದಾನೆ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಜೊತೆಗೆ ಈ ಸಂಬಂಧ ನಿಮ್ಮ ಪತಿ, ಮಕ್ಕಳು ಮತ್ತು ಸಂಸಾರದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಯೋಚಿಸಿ. ಅರದನ್ನು ಸಹಜವಾಗಿ ಸ್ವೀಕರಿಸುವರೋ ಅಥವಾ ನೀವು ಅವರ ತಿರಸ್ಕಾರಕ್ಕೆ ಗುರಿಯಾಗುವಿರೋ ಎಂಬುದರ ಬಗ್ಗೆ ಚಿಂತಿಸುವುದು ಅತ್ಯಗತ್ಯ.
– ರೇಖಾ ರಾವ್