ಇಡೀ ವಿಶ್ವದ ತುಂಬಾ ಕೊರೋನಾದೇ ಕಾರುಬಾರು. ಯಾವ ಚಾನೆಲ್ ಹಾಕಿದರೂ, ವಾಟ್ಸ್ ಆ್ಯಪ್ ಮೆಸೇಜ್‌ಗಳಲ್ಲೂ, ಯಾರನ್ನಾದರೂ ಮಾತನಾಡಿಸಿದರೂ ಸರಿ….. ಎಲ್ಲರದೂ ಒಂದೇ ಮಾತು. ಇದೇನಿದು ಪ್ರಪಂಚದ ಮೂಲೆ ಮೂಲೆಯಲ್ಲೂ ತನ್ನ ಕರಾಮತ್ತನ್ನು ತೋರಿಸಿದೆ. ಎಂತೆಂತಹ ಬಲಿಷ್ಠ ರಾಷ್ಟ್ರಗಳೂ ಸಹ ನಡುಗುವಂತೆ ಮಾಡಿದೆ. ಇದರಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕೆನ್ನುವುದೇ ಒಂದು ಯಕ್ಷ ಪ್ರಶ್ನೆಯಾಗಿದೆ.
ಇದರಿಂದ ದೂರವಿರಲು ಅಥವಾ ತಪ್ಪಿಸಿಕೊಳ್ಳಲು ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಳ್ಳಿ ಎಂದು ಪ್ರಧಾನ ಮಂತ್ರಿಯಿಂದ ಹಿಡಿದು ಮುಖ್ಯಮಂತ್ರಿಗಳವರೆಗೂ ಎಲ್ಲರೂ ಸಾರಿ ಸಾರಿ ಜನತೆಯನ್ನು ವಿನಂತಿಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ವೈದ್ಯರು ಹೇಳುವುದು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದು. ಇದು ಬರಿಯ ಕೊರೋನಾ ವ್ಯಾಧಿಗೆ ಮಾತ್ರವಲ್ಲ, ಯಾವುದೇ ಅನಾರೋಗ್ಯವಾದರೂ ಸರಿ ರೋಗ ನಿರೋಧಕ ಶಕ್ತಿ ಇದ್ದಾಗ ಇದು ನಿಮ್ಮನ್ನು ಹೆಚ್ಚು ಕಾಡುವುದಿಲ್ಲ. ಒಂದು ರೀತಿ ಫ್ಲೈಯಿಂಗ್ ವಿಸಿಟ್ ನೀಡಿ ಹೊರಟುಹೋಗಿ ಬಿಡುತ್ತದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು. ಹಾಗಾದರೆ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುದು ಹೇಗೆ…..?
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಬಗೆ ಸ್ಟ್ರೆಸ್ (ಮಾನಸಿಕ ಒತ್ತಡ) ಖಂಡಿತ ಇದು ಒಳ್ಳೆಯದಲ್ಲ. ಇದು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಮಾನಸಿಕ ಒತ್ತಡದಿಂದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಹಾರ್ಮೋನುಗಳ ಲೆವೆಲ್ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಏರುಪೇರಾದಾಗ ನೆಗಡಿ, ಕೆಮ್ಮು, ಕೊರೋನಾ ವೈರಸ್ ಸಹ ನಿಮ್ಮನ್ನು ಆರಿಸಲು ಸುಲಭವಾಗುತ್ತದೆ. ಆದ್ದರಿಂದ ಎದೆಗುಂದದಿರಿ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಪಾಸಿಟಿವ್ ಆಗಿ ಯೋಚಿಸಿ. ಯೋಗ ಮತ್ತು ಧ್ಯಾನವನ್ನು ರೂಢಿಸಿಕೊಂಡಾಗ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಲೈಂಗಿಕ ಚಟುವಟಿಕೆ
ಲೈಂಗಿಕ ಚಟುವಟಿಕೆಯ ಬಗ್ಗೆ ಆತಂಕ ಬೇಡ. ಯೋಚಿಸುವ ಅಗತ್ಯವಿಲ್ಲ. ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ಸಾಕು ಪ್ರಾಣಿಗಳು (ಪೆಟ್‌ಗಳು) ಅನೇಕ ಅಧ್ಯಯನಗಳ ಪ್ರಕಾರ ಸಾಕುಪ್ರಾಣಿಗಳಿಂದ ರಕ್ತದ ಒತ್ತಡ ಮತ್ತು ಕೊಲೆಸ್ಟ್ರಾಲ್ ಲೆವೆಲ್ ಸಹ ಕಡಿಮೆಯಾಗುತ್ತದೆ.
ಒಳ್ಳೆಯದನ್ನು ಯೋಚಿಸಿ, ನಿರೀಕ್ಷಿಸಿ
ನಾವು ಆಶಾವಾದಿಗಳಾಗಿದ್ದಾಗ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಅಧ್ಯಯನವೊಂದು ಹೇಳುತ್ತದೆ. ಅರ್ಧ ತುಂಬಿದ ಹಾಲಿನ ಲೋಟವನ್ನು ಕಂಡಾಗ ಅದು ಅರ್ಧ ತುಂಬಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಅರ್ಧ ಖಾಲಿ ಇದೆಯೆಂದು ಅಂದುಕೊಳ್ಳಲೇಬೇಡಿ.
ಪ್ರತಿದಿನ ನಮಗೆ ಆಗಿರುವ ಒಳ್ಳೆಯ ವಿಷಯಗಳನ್ನು ನೆನಪಿಸಿಕೊಳ್ಳಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲದೆ ಇರಬಹುದು. ಆದರೆ ಅದರಿಂದ ಎಷ್ಟರ ಮಟ್ಟಿಗೆ ಒಳ್ಳೆಯದನ್ನು ನಿರೀಕ್ಷಿಸಬಹುದು ಎನ್ನುವುದನ್ನು ಯೋಚಿಸಿ. ಇದರಿಂದ ಖಂಡಿತ ಇಮ್ಯೂನಿಟಿ ಹೆಚ್ಚಾಗುವುದರಲ್ಲಿ ಎರಡು ಮಾತಿಲ್ಲ. ಒಳ್ಳೆಯದನ್ನು ನಿರೀಕ್ಷಿಸಿ. ಆಗ ಒಳ್ಳೆಯದೇ ಆಗುತ್ತದೆ. ಕೆಲವು ಕಾನೂನು ವಿದ್ಯಾರ್ಥಿಗಳ ಅಧ್ಯಯನದ ಪ್ರಕಾರ ಜೀವನದಲ್ಲಿ ಆಶಾವಾದಿಗಳಾಗಿದ್ದಾಗ ಅರ್ಥಾತ್ ಆಪ್ಟಿಮಿಸ್ಟಿಕ್ ಆಗಿದ್ದಾಗ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ನಗು ನಗುತಿರಿ
ನಗು ಸಹ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಖಂಡಿತ ಇದು ನಿಜ. ಒಂದು ಅಧ್ಯಯನದ ಪ್ರಕಾರ ಭಾವನಾತ್ಮಕ ಚಲನಚಿತ್ರಗಳನ್ನು ನೋಡುವವರಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಸದಾ ಹಾಸ್ಯಭರಿತ ಚಲನಚಿತ್ರಗಳನ್ನು ನೋಡುವವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ನಗೆ ಕೂಟಗಳು (ಲಾಫ್ಟರ್ ಕ್ಲಬ್) ಸಹ ಈ ವಿಷಯದಲ್ಲಿ ಬಹಳ ಸಹಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಉದ್ಯಾನವನಗಳಲ್ಲಿ ಪ್ರತಿದಿನ ಬೆಳಗ್ಗೆ ನಡೆಯುವ ನಗೆ ಕೂಟಗಳು ಖಂಡಿತ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಸಾಮಾಜಿಕ ನಂಟು
ಸಮಾಜಮುಖಿಯಾಗಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಲ್ಲಿ ನಿಮ್ಮ ಮನ ಉಲ್ಲಾಸವಾಗಿರುತ್ತದೆ. ಗೆಳೆಯ ಗೆಳತಿಯರ ಬಳಗವನ್ನು ಹೆಚ್ಚಿಸಿಕೊಳ್ಳಿ. ನಿಮ್ಮ ಚಟುವಟಿಕೆಗಳನ್ನು ಅವರೊಂದಿಗೆ ಕ್ರಿಯಾತ್ಮಕವಾಗಿ ರೂಪಿಸಿಕೊಳ್ಳಿ. ಯಾವುದಾದರೂ ತರಗತಿಗಳಿಗೆ ಸೇರಿಕೊಳ್ಳಿ ಅಥವಾ ನಿಮಗೆ ಗೊತ್ತಿರುವುದನ್ನು ತಿಳಿಸಿ. ನಿಮ್ಮನ್ನು ನೀವು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ನಿಮ್ಮ ಮನ ಉಲ್ಲಾಸದಾಯಕ ಆಗಿರುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈಗ ಕೊರೋನಾ ವೈರಸ್‌ನದೇ ಕಾರುಬಾರಾಗಿರುವಾಗ ಮೊಬೈಲ್ ಬಳಸಿ ಸ್ನೇಹಿತರ ಬಳಗಕ್ಕೆ ಫೋನ್ ಮಾಡಿ. ಕೊರೋನಾ ಹೋಗುವ ತನಕ ಸಾಮಾಜಿಕ ಅಂತರವನ್ನು ಕಾಯ್ದಿರಿಸಿಕೊಳ್ಳಿ.
ಚೆನ್ನಾಗಿ ನಿದ್ರಿಸಿ
ನಾವು ದಿನವೆಲ್ಲ ಎಷ್ಟೇ ಶ್ರಮದಾಯಕ ಕೆಲಸ ಮಾಡಿದರೂ ರಾತ್ರಿ ಚೆನ್ನಾಗಿ ನಿದ್ರೆ ಮಾಡಿದಾಗ ಮಾತ್ರ ಮಾರನೆಯ ದಿನ ಉಲ್ಲಾಸದಾಯಕ ಆಗಿರುತ್ತದೆ. ನಾವು ಹಿಂದಿನ ದಿನ ಅಷ್ಟು ಕೆಲಸ ಮಾಡಿದ್ದೆವೆ ಎನಿಸುವಷ್ಟು ಮೈ ಹಗುರವಾಗಿರುತ್ತದೆ. ನಿದ್ರೆಗೆ ಅಷ್ಟೊಂದು ಶಕ್ತಿಯಿರುತ್ತದೆ. ಅನೇಕ ಅಧ್ಯಯನಗಳು ಒಳ್ಳೆಯ ನಿದ್ದೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ರೂಪಿಸಿದೆ. ಒಬ್ಬ ಮನುಷ್ಯ ಸರಾಸರಿ 7-9 ಗಂಟೆಗಳಷ್ಟು ನಿದ್ರೆ ಮಾಡುವುದು ಉತ್ತಮ.
ಸರಿಯಾದ ವಿಶ್ರಾಂತಿಯಿಂದ ಬಿಳಿಯ ರಕ್ತ ಕಣಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಅಲ್ಲದೆ ಉಸಿರಾಟದ ಸಮಸ್ಯೆ, ಶೀತ, ಫ್ಲೂ ಮುಂತಾದವು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಆರೋಗ್ಯಕರ ಮತ್ತು ಸಮಯಕ್ಕೆ ಸರಿಯಾಗಿ ನಿದ್ರಿಸಿ. ಪ್ರತಿದಿನ ಸರಿಯಾದ ಸಮಯಕ್ಕೆ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ರಾತ್ರಿ ಹೊತ್ತು ಕೆಫಿನ್ ಇರುವ ಪಾನೀಯ ಅಂದರೆ ಕಾಫಿ ಮತ್ತು ಆಲ್ಕೋಹಾಲ್ ಕುಡಿಯಬೇಡಿ. ನಿಮ್ಮ ಮಲಗುವ ಕೋಣೆಯನ್ನು ತಂಪಾಗಿರಿಸಿಕೊಳ್ಳಿ. ನಿದ್ರೆ ಬಾರದಿದ್ದರೆ ಮಲಗುವ ಮುನ್ನ ಸ್ನಾನ ಮಾಡಿ, ಮೆಲುವಾದ ಸಂಗೀತ ಕೇಳುತ್ತಿದ್ದರೆ ಒಳ್ಳೆಯ ನಿದ್ರೆ ಖಂಡಿತಾ ನಿಮ್ಮದಾಗುತ್ತದೆ.
ವ್ಯಾಯಾಮದಿಂದ ಆರೋಗ್ಯ
ವ್ಯಾಯಾಮದಿಂದ ಅಸಂಖ್ಯಾತ ಲಾಭಗಳಿವೆ. ವ್ಯಾಯಾಮ ನಿಮ್ಮ ಹೃದಯವನ್ನು ರಕ್ಷಿಸುತ್ತದೆ. ಜೊತೆಗೆ ನಿಮ್ಮ ಎಲುಬುಗಳನ್ನು ಗಟ್ಟಿ ಮಾಡುವುದಲ್ಲದೆ, ಕ್ಯಾನ್ಸರ್‌ನಿಂದಲೂ ನಿಮ್ಮನ್ನು ರಕ್ಷಿಸುತ್ತದೆ. ದಿನದಲ್ಲಿ ಕನಿಷ್ಠ 30 ನಿಮಿಷಗಳಾದರೂ ವ್ಯಾಯಾಮ ಮಾಡಬೇಕು. ಬಹಳ ಸರಳವಾದ ವ್ಯಾಯಾಮವೆಂದರೆ ನಡಿಗೆ (ವಾಕಿಂಗ್). ನಿಮಗೆ ವಾಕಿಂಗ್ ಸಮಾಧಾನವಿಲ್ಲದಿದ್ದರೆ ಯೋಗ, ಸ್ವಿಮಿಂಗ್ ಅಥವಾ ಮತ್ಯಾವುದಾದರೂ ನಿಮಗಿಷ್ಟವಾದುದನ್ನು ಮಾಡಬಹುದು. ಮನೆಯ ಮುಂದೆ ಗಾರ್ಡ್‌ನಿಂಗ್ ಸಹ ಒಳ್ಳೆಯದು. ವ್ಯಾಯಾಮ ಆಯಿತು ಮನೆಗೆ ಒಳ್ಳೆಯ ಹೂ, ತರಕಾರಿಯೂ ದೊರಕಿದಂತಾಗುತ್ತದೆ.
ಚೆನ್ನಾಗಿ ಕೈಗಳನ್ನು ತೊಳೆದುಕೊಳ್ಳಿ
ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದರಿಂದ ಉಸಿರಾಟದ ತೊಂದರೆ, ಶೀತ, ಫ್ಲೂ ಮತ್ತು ಕೊರೋನಾದಿಂದ ದೂರವಿರಬಹುದು. ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳಿಗೆ ಬಹಳ ಬೇಗ ಸೋಂಕು ಹರಡುತ್ತದೆ. ನಮ್ಮ ಕೈಗಳನ್ನು ಚೆನ್ನಾಗಿ ಬೆರಳುಗಳ ಮಧ್ಯೆ ಕನಿಷ್ಠ ಇಪ್ಪತ್ತು ಸೆಕೆಂಡುಗಳಷ್ಟು ಹೊತ್ತಾದರೂ ತೊಳೆದುಕೊಳ್ಳಬೇಕು ಅಥವಾ ಸ್ಯಾನಿಟೈಸರ್‌ನ್ನು ಬಳಸಬಹುದು. ಒಟ್ಟಾರೆ ಸದ್ಯಕ್ಕೆ ಎಲ್ಲರ ಮನೆ ಮಾತಾಗಿರುವ, ಯಾವಾಗ, ಯಾರನ್ನು ಆರಿಸಿಕೊಳ್ಳುತ್ತದೋ ಎನ್ನುವ ಭಯವನ್ನು ಎಲ್ಲರಲ್ಲಿ ಸೃಷ್ಟಿಸಿರುವ ಕೊರೋನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಕೈ ತೊಳೆದುಕೊಂಡು ಮನೆಯಲ್ಲೇ ಇರುವುದು ಎಲ್ಲರಿಗೂ ಕ್ಷೇಮ.
– ಮಂಜುಳಾ ರಾಜ್