ಟಿ.ವಿ ಕಲಾವಿದೆ ಡಾಲಿ ಸೋಹಿ ಸಿಂಗಲ್ ಮದರ್. ಕಳೆದ 7 ವರ್ಷಗಳಿಂದ ಅವರು ಗಂಡನಿಂದ ಪ್ರತ್ಯೇಕಗೊಂಡು ತಂದೆತಾಯಿಯ ಜೊತೆ ವಾಸಿಸುತ್ತಿದ್ದಾರೆ. ಆರಂಭದಲ್ಲಿ ಅವರಿಗೆ ತಾನು ನೈಟ್ ಶಿಫ್ಟ್ ನಲ್ಲಿ ಹೇಗೆ ಕೆಲಸ ಮಾಡಬೇಕೆಂದು ಆತಂಕವಾಗುತ್ತಿತ್ತು. ಆದರೆ ಕುಟುಂಬದವರ ಸಹಕಾರದಿಂದ ಅವರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದು ಕಷ್ಟಕರ ಎನಿಸಲಿಲ್ಲ. ಅವರ ಮಗಳು ಆಮಿಲಿಯಾಗೆ ಈಗ 9 ವರ್ಷ. ಆಕೆ ಚಿಕ್ಕವಳಿದ್ದಾಗ ಡಾಲಿಯವರಿಗೆ ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುವುದು ಕಷ್ಟಕರ ಎನಿಸುತ್ತಿತ್ತು. ಅದಕ್ಕಾಗಿ ಡಾಲಿಗೆ ಬಹಳಷ್ಟು ಪೂರ್ವ ಸಿದ್ಧತೆ ಮಾಡಬೇಕಾಗುತ್ತಿತ್ತು. ಏಕೆಂದರೆ ಬೆಳಗ್ಗೆ ಶಾಲೆಗೆ ಹೋಗುವಾಗ ಮಗಳಿಗೆ ಯಾವುದೇ ತೊಂದರೆ ಆಗದಿರಲಿ ಎನ್ನುವುದು ಅವರ ಆಲೋಚನೆಯಾಗಿರುತ್ತಿತ್ತು.
“ಮಗಳು ಶಾಲೆಗೆ ಹೋಗುವ ಮುನ್ನ ನೈಟ್ ಶಿಫ್ಟ್ ಗೆ ಹೋಗಬೇಡ ಎಂದು ಹೇಳುತ್ತಿದ್ದಳು. ಅವಳಿಗೆ ಮಾತು ಕೊಟ್ಟೂ ಕೂಡ ನಾನು ನೈಟ್ ಶಿಫ್ಟ್ ಗೆ ಹೋಗಲೇಬೇಕಾಗುತ್ತಿತ್ತು. ಕ್ರಮೇಣ ನಾನು ಅವಳಿಗೆ ನನ್ನ ಕೆಲಸವೇ ಅಂಥದು ಎಂದು ತಿಳಿವಳಿಕೆ ಹೇಳಿದಾಗ, ಅವಳು ಅರ್ಥ ಮಾಡಿಕೊಂಡಳು. ಯಾವುದೇ ಮಹಿಳೆ ತನ್ನ ತಾಯ್ತನದ ಪಾಲನೆಯನ್ನು ಧೈರ್ಯದಿಂದ ಮಾಡಬೇಕು. ತುಂಬಾ ಒಳ್ಳೆಯ ಪ್ಲಾನಿಂಗ್ ಮಾಡಿಕೊಳ್ಳಬೇಕು.”
ಡಾಲಿ ಒಬ್ಬರೇ ಅಲ್ಲ, ಅಂತಹ ಹಲವು ತಾಯಂದಿರಿದ್ದಾರೆ. ಅವರು ವಿಚ್ಛೇದಿತರಾಗಿ ಇರಬಹುದು ಅಥವಾ ಪ್ರತ್ಯೇಕವಾಗಿ ವಾಸಿಸುತ್ತಿರಬಹುದು. ಅವರೆಲ್ಲರಿಗೆ ನೈಟ್ ಶಿಫ್ಟ್ ಗೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಇಂತಹದರಲ್ಲಿ ಮಗುವನ್ನು ಏಕಾಂಗಿಯಾಗಿ ಮನೆಯಲ್ಲಿ ಬಿಟ್ಟುಹೋಗುವ ಕಷ್ಟ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡುತ್ತದೆ. ಇಂತಹ ಸ್ಥಿತಿಯಲ್ಲಿ ಯಾರದ್ದಾದರೂ ಬೆಂಬಲ ದೊರಕಿದರೆ ನೈಟ್ ಶಿಫ್ಟ್ ಕಷ್ಟ ಆಗುವುದಿಲ್ಲ. ಹಾಗೊಂದು ವೇಳೆ ಹೀಗಾಗದಿದ್ದರೆ ತಾಯಂದಿರೇ ಒಳ್ಳೆಯ ಪ್ಲಾನಿಂಗ್ ಮಾಡಬೇಕಾಗುತ್ತದೆ.
ನೈಟ್ ಶಿಫ್ಟ್ ಕೆಲಸ ಮಾಡುವ ಬಹಳಷ್ಟು ತಾಯಂದಿರ ಮಕ್ಕಳು ಬೇಕಾಬಿಟ್ಟಿ ವರ್ತಿಸುತ್ತವೆ. ಏಕೆಂದರೆ ತಾಯಂದಿರು ಮಕ್ಕಳಿಗೆ ಗುಣಮಟ್ಟದ ಸಮಯ ಕೊಡಲು ಆಗುವುದಿಲ್ಲ. ಇಂತಹದರಲ್ಲಿ ಸರಿಯಾದ ಪ್ಲಾನಿಂಗ್ ಮಕ್ಕಳ ಪೋಷಣೆಗೆ ಅತ್ಯವಶ್ಯ.ಈ ಕುರಿತಂತೆ ಕೌನ್ಸಿಲರ್ ರಶ್ಮಿ ಹೀಗೆ ಹೇಳುತ್ತಾರೆ, “ಸಿಂಗಲ್ ಮದರ್‌ಗೆ ನೈಟ್ ಶಿಫ್ಟ್ ಮಾಡುವುದು ಕಷ್ಟಕರ ಅಲ್ಲ. ಮಗು ಚಿಕ್ಕದಾಗಿದ್ದರೆ ಅದಕ್ಕಾಗಿಯೇ ಪ್ರತ್ಯೇಕ ಪ್ಲಾನಿಂಗ್ ಮಾಡ ಬೇಕಾಗುತ್ತದೆ. ಮಗು ದೊಡ್ಡದಿದ್ದರೆ ಅದನ್ನು ಬೇರೆ ರೀತಿಯಲ್ಲಿ ನಿರ್ವಹಿಸಬೇಕಾಗುತ್ತದೆ.”
4 ವರ್ಷ ಆದ ಬಳಿಕ ತಾಯಿ ಆ ಮಗುವಿಗೆ ತಾನೇಕೆ ನೈಟ್ ಶಿಫ್ಟ್ ಮಾಡಬೇಕಾಗಿದೆ? ಮಗುವಿನ ಹೊಣೆಗಾರಿಕೆ ಏನು ಎಂಬುದರ ಬಗ್ಗೆ ಅರ್ಥವಾಗುವ ಹಾಗೆ ಹೇಳಬಹುದು.
ಆ ಕುರಿತಂತೆ ಇಲ್ಲಿ ಕೆಲವು ಟಿಪ್ಸ್ ಕೊಡಲಾಗಿದ್ದು, ಅವನ್ನು ಅನುಸರಿಸಿ, ನೀವು ಮಗುವಿನ ಕುರಿತಂತೆ ನಿಶ್ಚಿಂತರಾಗಿರಬಹುದು :
ಮಗು ಚಿಕ್ಕದಾಗಿದ್ದರೆ ತಾಯಿ ತನ್ನ ಮೊಬೈಲ್‌ನ್ನು ಸದಾ ಫುಲ್ ಚಾರ್ಜ್‌ನಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ ಅಗತ್ಯವಿದ್ದಾಗ ಫೋನ್ ಮಾಡಿ ಮಾಹಿತಿ ಪಡೆಯಬಹುದು.
ನೀವು ಆಫೀಸ್ ಮುಟ್ಟುತ್ತಿದ್ದಂತೆಯೇ ಆ ಬಗ್ಗೆ ಸಂದೇಶವನ್ನು ಮಗುವನ್ನು ಸಂಭಾಳಿಸುವವರಿಗೆ ಕೊಡಿ. ಏಕೆಂದರೆ ಅಗತ್ಯಬಿದ್ದರೆ ಅವರು ಫೋನ್ ಮಾಡಲು ಸಾಧ್ಯವಾಗುತ್ತದೆ.
ಮಗು ಚಿಕ್ಕದಾಗಿದ್ದರೆ ಅದರ ಆಹಾರದ ಬಗ್ಗೆ ನೀವು ಮೊದಲೇ ವ್ಯವಸ್ಥೆ ಮಾಡಬೇಕು ಹಾಗೂ ಅದನ್ನು ನೋಡಿಕೊಳ್ಳುವವರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕು.
ನಿಮ್ಮ ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಕುಟುಂಬದ ಯಾರೊಬ್ಬರೂ ಇಲ್ಲದೇ ಇದ್ದಾಗ, ಯಾರಾದರೂ ಕೆಲಸದವರನ್ನು ನೇಮಿಸಿಕೊಳ್ಳುವಾಗ ಅವರ ಬಗ್ಗೆ ಪೊಲೀಸ್ ಪರಿಶೀಲನೆ ನಡೆಸಿಯೇ ನೇಮಿಸಿಕೊಳ್ಳಿ. ಅಪರಿಚಿತರನ್ನು ನೇಮಿಸಿ ಕೊಂಡಾಗ ಅವರು ಕಳ್ಳತನ, ಅಪರಹರಣದಂತಹ ಕೃತ್ಯ ಎಸಗುವ ಅಪಾಯವಿರುತ್ತದೆ.
ಅಪಾಯಕಾರಿ ಜ್ವಲನಶೀಲ ವಸ್ತುಗಳಿಂದ ಮಗುವನ್ನು ದೂರವಿಡಿ.
ಮನೆಯಲ್ಲಿ ಯಾವುದೇ ಬೆಲೆ ಬಾಳುವ ವಸ್ತು ಇಡಬೇಡಿ.
ಯಾವಾಗ, ಎಲ್ಲಿಗೆ ಹೋಗುವಿರಿ. ಎಷ್ಟು ಗಂಟೆಗೆ ಮನೆಗೆ ಬರುತ್ತಿರುವಿರಿ ಎಂಬಂತಹ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ. ಅಂತಹ ಮಾಹಿತಿಯಿಂದ ಕೆಲವರು ಕಳ್ಳತನಕ್ಕೆ ಹೊಂಚುಹಾಕಬಹುದು.
ಮಗುವಿನ ಫೋಟೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಾಕಬೇಡಿ.
ಒಂದು ವೇಳೆ ಮಗು ದೊಡ್ದದಿದ್ದರೆ ಅದಕ್ಕೆ ನೈಟ್ ಶಿಫ್ಟ್ ಏಕೆ ಮಾಡಬೇಕು ಎಂಬುದರ ಬಗ್ಗೆ ತಿಳಿಹೇಳಬಹುದು.
ಅಪರಿಚಿತರಿಗೆ ಬಾಗಿಲು ತೆರೆಯದಂತೆ ಮಗುವಿಗೆ ಸೂಚನೆ ಕೊಡಿ.
ಮಗು ಶಾಲೆಗೆ ಹೋಗುತ್ತಿದ್ದರೆ, ಅದರ ಸಿದ್ಧತೆಗಳನ್ನು ಮೊದಲೇ ಮಾಡಿ ಇಡಿ.
ಯಾವುದು ಅಪಾಯಕಾರಿ ಎನ್ನುವುದರ ಬಗ್ಗೆ ಮಗುವಿಗೆ ತಿಳಿಸಿಡಿ.
ಮೊಬೈಲ್‌ನಲ್ಲಿ ಆಟೋ ಡೈವ್ ಸೆಟ್ಟಿಂಗ್ ಮಾಡಿಸಿಡಿ. ಸಂದರ್ಭ ಬಂದಾಗ ಮಗು ಅಥವಾ ಮಗುವನ್ನು ನೋಡಿಕೊಳ್ಳುವವರು ಅದನ್ನು ತಾಯಿಯ ಗಮನಕ್ಕೆ ತರಲು ಸಾಧ್ಯವಾಗುತ್ತದೆ.
ಫಸ್ಟ್ ಏಡ್ ಬಾಕ್ಸ್ ಬಗ್ಗೆ ಸೂಕ್ತ ಮಾಹಿತಿ ಕೊಡಿ. ಸಂದರ್ಭ ಬಂದಾಗ ಔಷಧಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.
ಕೆಲಸದ ಸಮಯದಲ್ಲಿ ಅವಕಾಶ ಸಿಕ್ಕಾಗ ತಾಯಿ ಮಗುವಿನ ಬಗ್ಗೆ ವಿಚಾರಿಸುತ್ತಿರಬೇಕು.
ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಬಗೆಗೂ ಗಮನ ಕೊಡಿ. ಅವಕಾಶ ಸಿಕ್ಕಾಗೆಲ್ಲ ಅದರ ಜೊತೆ ಸಮಯ ಕಳೆಯಲು ಪ್ರಯತ್ನಿಸಿ. ಏಕೆಂದರೆ ಅದರ ಜಿಜ್ಞಾಸೆಗಳಿಗೆಲ್ಲ ನಿಮ್ಮಿಂದ ಸಕಾಲಕ್ಕೆ ಉತ್ತರ ಸಿಗುತ್ತಿರಬೇಕು.
– ಸೀಮಾ