ನಿತ್ಯಾ ತನ್ನ ತವರಿಗೆ ಹೋದ ನಂತರ ಶೈಲಜಾ ಬೇಸರ ಪಟ್ಟುಕೊಂಡಳು. ಆದರೆ……“ಇಷ್ಟು ದಿನ ನಾನು, ನಿತ್ಯಾ ನಿಮ್ಮ ಮಗಳು ಅಂತಲೇ ತಿಳಿದಿದ್ದೆ. ಸೊಸೆ ಅಂತ ಗೊತ್ತೇ ಇರಲಿಲ್ಲ,” ಎದುರು ಮನೆಯ ಮೈಥಿಲಿಯ ಮಾತು ಕೇಳಿ ಶೈಲಜಾ ನಸುನಕ್ಕಳು.

“ಯಾಕೆ ಮಗಳಿಗೂ ಸೊಸೆಗೂ ಏನು ವ್ಯತ್ಯಾಸ? ಇಬ್ಬರೂ ಹುಡುಗಿಯರು, ಮಾಡರ್ನ್‌ ಡ್ರೆಸೆಸ್‌ ಧರಿಸುತ್ತಾರೆ, ಹೊರಗೆ ಕೆಲಸ ಮಾಡುತ್ತಾರೆ. ಹಿಂದಿನ ಹಾಗೆ ಈಗ ಸೊಸೆ ಮೈ ತುಂಬಾ ಸೆರಗು ಹೊದ್ದು ಮುಂಬಾಗಿಲು ತೊಳೆದು ರಂಗೋಲಿ ಇಡಬೇಕಿಲ್ಲವಲ್ಲ…..”

“ಹಾಗಲ್ಲ….” ಮೈಥಿಲಿ ಮಧ್ಯೆ ಮಾತನಾಡಿದಳು, “ಮಗಳು ಮಗಳೇ, ಸೊಸೆ ಸೊಸೆಯೇ…. ಅವರ ನಡವಳಿಕೆಯಲ್ಲಿಯೇ ಗೊತ್ತಾಗಿಬಿಡುತ್ತದೆ. ಆದರೆ ನಿತ್ಯಾ ನಿಮ್ಮ ಜೊತೆ ಎಷ್ಟು ಪ್ರೀತಿಯಿಂದ ನಡೆದುಕೊಳ್ಳುತ್ತಾಳೆ, ನಿಮ್ಮ ಬಗ್ಗೆ ಕಾಳಜಿ ಇದೆ, ಎಲ್ಲ ವಿಷಯಗಳನ್ನೂ ಶೇರ್‌ ಮಾಡುತ್ತಾಳೆ. ಈ ರೀತಿ ಮಗಳು ಮಾತ್ರ ಮಾಡಲು ಸಾಧ್ಯ.

“ನಿಮ್ಮಿಬ್ಬರ ಸ್ಟ್ರಾಂಗ್‌ ಬಾಂಡಿಂಗ್‌ ನೋಡಿದರೆ ನೀವಿಬ್ಬರೂ ಅತ್ತೆ ಸೊಸೆ ಅಂತ ಊಹಿಸುವುದಕ್ಕೂ ಸಾಧ್ಯವಿಲ್ಲ. ನೀವಿಬ್ಬರೂ ನಗುನಗುತ್ತಾ ಜೊತೆಯಲ್ಲೇ ಓಡಾಡುವುದನ್ನು ನೋಡಿ ನಮ್ಮ ಬೀದಿಯವರು ಯಾರೂ ನಿಮ್ಮ ಸಂಬಂಧದ ಬಗ್ಗೆ ಕೇಳುವುದಕ್ಕೇ ಹೋಗಲಿಲ್ಲ. ನಿಮ್ಮ ಮಗಳು ಅಂತಲೇ ಎಲ್ಲರೂ ಭಾವಿಸಿದೆ.”

“ಹಾಗಲ್ಲ ಮೈಥಿಲಿ, ಇದು ಯೋಚಿಸಬೇಕಾದ ವಿಷಯ. ಸಾಧಾರಣವಾಗಿ ಹುಡುಗಿಯರು ಒಳ್ಳೆಯವರೇ. ಹುಡುಗಿ ಸೊಸೆಯಾಗಿ ಮನೆಗೆ ಕಾಲಿಟ್ಟ ದಿನದಿಂದಲೇ ಸಂಬಂಧ ಚೆನ್ನಾಗಿರುವಂತೆ ಮಾಡುವ ಪ್ರಯತ್ನ ಪ್ರಾರಂಭಿಸಬೇಕು. ನಾವು ಹಿರಿಯರಾದ್ದರಿಂದ ಅದರ ಪ್ರಾರಂಭ ನಮ್ಮಿಂದಲೇ ಆಗಬೇಕು. ಈ ಪ್ರಯತ್ನವನ್ನು ನಿಮ್ಮ ದೌರ್ಬಲ್ಯ ಅಂತ ಭಾವಿಸಿದ ಪಕ್ಷದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ,” ಶೈಲಜಾ ತನ್ನ ಅಭಿಪ್ರಾಯ ಹೇಳಿದಳು.

“ನೀವು ಹೇಳುವುದೇನೋ ಸರಿ….. ಆದರೆ ನೀವಿಬ್ಬರೂ ಅಂತಹ ಬಾಂಡಿಂಗ್‌ ಹೇಗೆ ಹೊಂದಿದ್ದೀರಿ? ನನಗೂ ನನ್ನ ಸೊಸೆಯ ಮೇಲೆ ಪ್ರೀತಿ ಇದೆ. ಆದರೆ ಸಂಬಂಧ ಮಾತ್ರ ಕತ್ತಿಯ ಅಲುಗಿನ ಹಾಗೆ ಭಾಸವಾಗುತ್ತದೆ. ಆದರೆ ನಿಮ್ಮಿಬ್ಬರ ಸಂಬಂಧ ಅದೆಷ್ಟು ಸಹಜವಾಗಿ, ಸ್ನೇಹಮಯವಾಗಿ ಇದೆ!”

“ನಿಮ್ಮ ಸೊಸೆ ಸಹ ಬಹಳ ಒಳ್ಳೆಯವಳೇ ಮೈಥಿಲಿ.”

“ಹೌದು,” ಮೈಥಿಲಿ ಒಂದು ದೀರ್ಘ ಉಸಿರೆಳೆದುಕೊಂಡು ಮಾತು ಮುಂದುವರಿಸಿದಳು, “ಆದರೆ ಅತ್ತೆ ಸೊಸೆಯರ ಸಂಬಂಧದ ತಂತು ಅದೆಷ್ಟು ಸೂಕ್ಷ್ಮವಾಗಿರುತ್ತದೆಂದರೆ, ಕೊಂಚ ಎಳೆದರೆ ಕಿತ್ತುಹೋಗುವ ಭಯ, ಸಡಿಲ ಬಿಟ್ಟರೆ ಗಂಟಾಗುವ ಭಯ. ಈ ಸಂಬಂಧದಲ್ಲಿ ನಿಶ್ಚಿಂತೆಯಿಂದ ಇರಲಾಗುವುದಿಲ್ಲ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ.”

“ಇರಬಹುದು. ಎಲ್ಲರ ಅನುಭವ ಬೇರೆ ಬೇರೆಯಾಗಿರುತ್ತದೆ. ನನಗೆ ನಿತ್ಯಾಳ ಜೊತೆ ಹೀಗೆ ಅನ್ನಿಸುವುದಿಲ್ಲ,” ಶೈಲಜಾ ಮಾತು ಮುಗಿಸುತ್ತಾ ಹೇಳಿದಳು.

“ಸರಿ ಶೈಲಜಾ, ನಾನು ಹೊರಡುತ್ತೇನೆ. ನಿತ್ಯಾ ಆಫೀಸಿನಿಂದ ಬರುವ ಸಮಯವಾಯಿತು. ಏನಾದರೂ ಅಗತ್ಯವಿದ್ದರೆ ಹೇಳಿ,” ಎಂದು ಹೇಳಿ ಮೈಥಿಲಿ ಹೊರಟುಹೋದಳು. ಬಹಳ ಹೊತ್ತಿನಿಂದ ಕುಳಿತೇ ಇದ್ದ ಶೈಲಜಾ ಸುಸ್ತಿನಿಂದ ಹಾಸಿಗೆಗೆ ಒರಗಿದಳು.

ಶೈಲಜಾಳಿಗೆ 15 ದಿನಗಳ ಹಿಂದೆ ಬಂದಿದ್ದ ತೀವ್ರ ಜ್ವರ ಅವಳನ್ನು ತೀವ್ರವಾಗಿ ನಿತ್ರಾಣಗೊಳಿಸಿತ್ತು. ಅತಿಯಾದ ಜ್ವರ, ಮೈ ಕೈ ನೋವು, ವಾಂತಿ ಇವೆಲ್ಲದ್ದರಿಂದ ಅವಳು ಕಂಗಾಲಾಗಿದ್ದಳು. ನಿತ್ಯಾ ಆಫೀಸಿಗೆ ರಜೆ ಹಾಕಿ ಹಗಲು ರಾತ್ರಿ ಎನ್ನದೆ ಬಹಳ ಮುತುವರ್ಜಿಯಿಂದ ನೋಡಿಕೊಂಡಿದ್ದಳು.

ಅತ್ತೆ ಹಾಸಿಗೆ ಹಿಡಿದುದರಿಂದ ನಿತ್ಯಾಳಿಗೆ ಒಂಟಿತನ ಮತ್ತು ಅಸಹಾಯಕತೆಯ ಅನುಭವವಾಗತೊಡಗಿತು. ಅವಳ ಪತಿ ಸುಮಂತ್‌ ಮರ್ಚೆಂಟ್‌ ನೇವಿಯಲ್ಲಿ ಇದ್ದುದರಿಂದ ತಿಂಗಳುಗಟ್ಟಲೆ ಸಮುದ್ರಯಾನದಲ್ಲಿ ಇರುತ್ತಿದ್ದ. ಹೀಗಾಗಿ ಅವಳೇ ವೈದ್ಯರ ಮತ್ತು ಔಷಧದ ವ್ಯವಸ್ಥೆಯನ್ನೆಲ್ಲ ನಿಭಾಯಿಸಿದಳು.

ನಿತ್ಯಾಳಿಗೆ ಈಗ 30 ವರ್ಷ ವಯಸ್ಸು ಮತ್ತು ಶೈಲಜಾಳಿಗೆ 52 ವರ್ಷಗಳು. ಸದಾ ಶಾಂತ ಮತ್ತು ಪ್ರಸನ್ನತಾ ಭಾವದಿಂದ ಕೂಡಿದ್ದು ಹಸನ್ಮುಖಿಯಾಗಿರುತ್ತಿದ್ದ ಶೈಲಜಾ, ತನ್ನ ಪ್ರಸ್ತುತ ವಯಸ್ಸಿನಿಂದ 7 ವರ್ಷ ಕಿರಿಯವಳಂತೆ ತೋರುತ್ತಿದ್ದಳು. ಅವಳು ಚೂಡಿದಾರ್‌ ತೊಟ್ಟು, ಪೋನಿ ಟೇಲ್ ‌ಕಟ್ಟಿ ನಿತ್ಯಾಳೊಂದಿಗೆ ವಾಕಿಂಗ್‌ ಅಥವಾ ಶಾಪಿಂಗ್‌ಗೆ ಹೋದಳೆಂದರೆ ನೋಡಿದವರಾರೂ ಇವರನ್ನು ಅತ್ತೆಸೊಸೆ ಎಂದು ಭಾವಿಸಲು ಸಾಧ್ಯವೇ ಇಲ್ಲ. ಅವರ ನಡುವಿನ ಸಾಮರಸ್ಯದಿಂದ ಸುತ್ತಮುತ್ತಲಿನ ಮನೆಯವರೆಲ್ಲ ಅವರನ್ನು ತಾಯಿಮಗಳು ಎಂದು ತಿಳಿದದ್ದು ಆಶ್ಚರ್ಯವೇನಲ್ಲ. ಪರಿಚಯವಿಲ್ಲದವರಂತೂ ಅಕ್ಕತಂಗಿ ಇರಬಹುದು ಅಂದುಕೊಂಡಿದ್ದೂ ಉಂಟು.

ಹಾಸಿಗೆಯಲ್ಲಿ ಒರಗಿದ್ದ ಶೈಲಜಾ ಯೋಚಿಸುತ್ತಿದ್ದಳು. ಅನೇಕ ಮಹಿಳೆಯರು ಸೊಸೆ ತಮ್ಮನ್ನು ಅರ್ಥ ಮಾಡಿಕೊಂಡಿಲ್ಲ ಎಂದು ದೂರುತ್ತಾರೆ. ಆದರೆ ಎಲ್ಲ ಸೊಸೆಯರೂ ಕೆಟ್ಟವರಲ್ಲ, ಹಾಗೆಯೇ ಎಲ್ಲ ಅತ್ತೆಯರೂ ಕೆಟ್ಟವರಲ್ಲ. ಆದರೂ ಈ ಸಂಬಂಧದ ತಾಳ ಮೇಳ ಏಕೆ ತಪ್ಪುತ್ತದೆ? ಇವರಿಬ್ಬರ ಗಮನ ಮತ್ತು ಪ್ರೀತಿಯೆಲ್ಲ ಒಬ್ಬನೇ ವ್ಯಕ್ತಿಯ ಕಡೆಗೆ ಹರಿಯುತ್ತಿರುತ್ತದೆ. ಅವನೇ ಒಬ್ಬಳ ಪತಿ ಮತ್ತು ಒಬ್ಬಳ ಮಗ. ಅವನಿಗೆ ಇವರಿಬ್ಬರೂ ಪ್ರೀತಿಪಾತ್ರರು. ಈ ಸಂಬಂಧದ ಬಿರುಕು ಅವನ ಜೀವನವನ್ನು ಡೋಲಾಯಮಾನವಾಗಿಸುತ್ತದೆ. ಅವನು ಪತ್ನಿಯನ್ನು ಬಿಡಲಾರ, ತಾಯಿಯನ್ನೂ ದೂರ ಮಾಡಲಾರದ ಸ್ಥಿತಿಯಲ್ಲಿ ನಲುಗುತ್ತಾನೆ.

ಸೊಸೆ ಮೊದಲ ಬಾರಿ ಮನೆಗೆ ಕಾಲಿಟ್ಟಾಗ, ಅವಳು ಸದಾಕಾಲ ಇಲ್ಲಿಯೇ ಇರುವವಳು ಎಂಬ ಮಾತನ್ನು ಅತ್ತೆ ಮರೆತುಬಿಡುತ್ತಾಳೆ. ಬೇರೆ ಮನೆಯಿಂದ, ಬೇರೆ ರೀತಿಯ ಆಚಾರ ವಿಚಾರಗಳಿಂದ ಕೂಡಿದ ಕುಟುಂಬದಲ್ಲಿ ಬೆಳೆದು ಬಂದ ಹುಡುಗಿಗೆ ಅತ್ತೆ ಒಂದೇ ಸಲಕ್ಕೆ ತಮ್ಮ ಮನೆಯ ಪದ್ಧತಿ, ಸಂಪ್ರದಾಯಗಳನ್ನು ಹೇರಿದರೆ ಏನಾದೀತು? ಮುಂದೆ, ವರ್ಷಗಳು ಕಳೆದ ನಂತರ, ಅವಳು ತನಗೆ ಸೂಕ್ತವಾದ ನವೀನ ರೀತಿ ನೀತಿಗಳನ್ನು ಅತ್ತೆಗೇ ಹೇಳಿಕೊಡಲು ಪ್ರಾರಂಭಿಸಬಹುದಲ್ಲವೇ…..?

ತಾಯಿ ಹೇಳಿದ ಮಾತನ್ನು ಮಗಳು ಪಾಲಿಸದಿದ್ದರೆ ಅಥವಾ ವಿರೋಧಿಸಿದರೆ ಸುಮ್ಮನಿರಬೇಕಾಗುತ್ತದೆ. ಆದರೆ ಸೊಸೆ ಹಾಗೆ ಮಾಡಿದಾಗ….? ಅನೇಕ ಸೊಸೆಯಂದಿರು ಪ್ರಾರಂಭದಲ್ಲಿ ತಮಗಿಷ್ಟವಾಗದ ಮಾತನ್ನೂ ಪಾಲಿಸುತ್ತಾರೆ. ಆದರೆ ದಿನಕಳೆದಂತೆ ಮಗನ ಜೀವನದಲ್ಲಿ ಒಂದಾಗಿ ಹೋಗುತ್ತಿರುವ ಹುಡುಗಿಯಿಂದ ತಾವು ಸೋಲನ್ನು ಎದುರಿಸುತ್ತಿರುವಂತೆ ಅತ್ತೆಗೆ ಅನುಭವವಾಗುತ್ತದೆ. ಇದೇಕೆ ಹೀಗೆ….?

ಹುಡುಗಿ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೇ ಅವಳನ್ನು ಬೇರೆಯವಳೆಂದು ಭಾವಿಸದೆ ಮಗಳಂತೆ ಕಂಡಿದ್ದರೆ, ಅವಳ ಸುಖ ಸಂತೋಷದಲ್ಲಿ ಮನೆಯವರೆಲ್ಲರಿಗೂ ಪಾಲು ದೊರೆಯುತ್ತಿತ್ತು. ಆದರೆ ಸೊಸೆಯ ಸಂಗಕ್ಕಿಂತ ಇತರರ ಒಡನಾಟದಲ್ಲಿಯೇ ಹೆಚ್ಚು ಸಂತೋಷ ಕಂಡರೆ ಸಂಬಂಧದಲ್ಲಿ ಬಿಗುವು ಮತ್ತು ಬಿರುಕು ಹುಟ್ಟುವುದು ಸಹಜವೇ.

ಮಗಳು ಉದ್ಯೋಗ ಮಾಡುತ್ತಿದ್ದರೆ, ಅದು ಬಿಡುವಿಲ್ಲದ ಕೆಲಸ. ಸೊಸೆ ಮಾಡಿದರೆ ಅದು ಟೈಮ್ ಪಾಸ್‌ ಮತ್ತು ಮಜಕ್ಕಾಗಿ. ರಜೆಯ ದಿಸ ಮಗಳು ತಡವಾಗಿ ಎದ್ದರೆ ಪಾಪ, ಮಲಗಲಿ ಬಿಡು ಎಂಬ ಮಾತು. ಸೊಸೆ ತಡವಾಗಿ ಎದ್ದರೆ ನೋಡಿದವರು ಏನೆನ್ನುತ್ತಾರೆ ಎಂಬ ಕುಟುಕು. ಮಗಳಿಗೆ ನೃತ್ಯದಲ್ಲಿ ಆಸಕ್ತಿ ಇದ್ದು, ಅವಳು ಮನೆಯಲ್ಲಿ ಗೆಜ್ಜೆ ಕಟ್ಟಿ ಕುಣಿದರೆ ಅವಳು ಕಲಾಪ್ರೇಮಿ, ಸೊಸೆ ಹಾಗೆ ಮಾಡಿದರೆ ಇದೇನು ಸಂಸ್ಕಾರಸ್ಥರ ಮನೆಯೋ ಅಥವಾ…… ಎಂಬ ಚುಚ್ಚು ಮಾತು. ಸೊಸೆಯೂ ಮಗಳಂತೆಯೇ ಅಲ್ಲವೇ…? ಬೇರೊಂದು ಮನೆಯಲ್ಲಿ ಬೆಳೆದ ಕೋಮಲವಾದ ಹೂವು ಮೊಗ್ಗು ಅದು. ನಿಮ್ಮ ಮನೆಯಂಗಳದಲ್ಲಿ ಅರಳಿ ಪರಿಮಳ ಸೂಸಲು ಬಂದಿದೆ.

ವಿದ್ಯಾವಂತೆಯರಾದ ಹೆಣ್ಣುಮಕ್ಕಳು ಇಂದು ಟೈಮ್ ಪಾಸ್‌ಗಾಗಿ ಉದ್ಯೋಗ ಮಾಡುತ್ತಿಲ್ಲ. ಅವರು ಕಂಡಿರುವ ಕನಸನ್ನು ಸಾಕಾರ ಮಾಡಿಕೊಳ್ಳುವುದೇ ಅವರ ಜೀವನದ ಉದ್ದೇಶವಾಗಿದೆ. ಅದು ಒಂದು ಹಾಬಿ ಆಗಿರಬಹುದು ಅಥವಾ ಕೆರಿಯರ್‌ಇರಬಹುದು. ಅದಕ್ಕೆ ಅವಳ ಪತಿ ಮತ್ತು ಮನೆಯವರು ಬೆಂಬಲ ನೀಡಿದರೆ, ಆಕಾಶದಲ್ಲಿ ಹಾರಲು ನೆರವಾದರೆ, ಅವಳು ತನ್ನ ಕಾರ್ಯವನ್ನು ಸಾಧಿಸಿಯೇ ತೀರುವಳು.

ಈ ರೀತಿ ಇದ್ದಾಗ ಸಂಬಂಧಕ್ಕೆ ಸ್ಟ್ರಾಂಗ್‌ ಬಾಂಡಿಂಗ್‌ ಇದ್ದೇ ಇರುತ್ತದೆ. ಅತ್ತೆ ಸೊಸೆಯರಿಬ್ಬರೂ ಮನುಷ್ಯರೇ. ಎಲ್ಲರಂತೆ ವೈಶಿಷ್ಟ್ಯ ಮತ್ತು ದೌರ್ಬಲ್ಯಗಳಿಂದ ಕೂಡಿರುವವರು. ಇದನ್ನರಿತು ನಡೆದಾಗ ಯಾವ ಗೊಂದಲ, ಭಿನ್ನಾಭಿಪ್ರಾಯಗಳಿಗೂ ಅವಕಾಶವಿರುವುದಿಲ್ಲ.

ಶೈಲಜಾ ಹೀಗೆ ತನ್ನದೇ ಆದ ಯೋಚನಾಲೋಕದಲ್ಲಿ ಮುಳುಗಿದ್ದಾಗ, ಹೊರಗೆ ಬಾಗಿಲು ಸದ್ದಾಯಿತು. ನಿತ್ಯಾ ಬಂದಳೆಂದು ಅವಳಿಗೆ ಗೊತ್ತಾಯಿತು. ಇವಳು ಮನೆಯೊಳಗೆ ಕಾಲಿಡುವಾಗಲೇ ಸಂತೋಷದ ವಾತಾವರಣ ಹಬ್ಬಿಸುತ್ತಾಳೆ ಎಂದುಕೊಂಡಳು ಶೈಲಜಾ.

ನಿತ್ಯಾ ಒಳಗೆ ಬಂದು ತನ್ನ ಲ್ಯಾಪ್‌ಟಾಪ್‌ ಬ್ಯಾಗ್‌ನ್ನು ಕುರ್ಚಿಯ ಮೇಲಿಟ್ಟು ಅತ್ತೆಯ ಬಳಿಗೆ ಬಂದಳು, “ಹಾಯ್‌ ಅಮ್ಮಾ, ಹೌ ಆರ್‌ ಯೂ,” ಎನ್ನುತ್ತಾ ಅವರ ಪಕ್ಕದಲ್ಲಿ ಕುಳಿತಳು.

“ಫೈನ್‌, ಹೌ ವಾಸ್‌ ಯುವರ್‌ ಡೇ?” ಎನ್ನುತ್ತಾ ಶೈಲಜಾ ಎದ್ದು ಕುಳಿತಳು.

“ವೆರಿ ನೈಸ್‌. ನಾನು ನಿಮಗೆ ಫೋನ್‌ ಮಾಡಿದೆ. ನೀವು ರಿಸೀವ್ ‌ಮಾಡಲೇ ಇಲ್ಲ. ಆಮೇಲೆ ಕಮಲಮ್ಮನಿಗೆ ಫೋನ್‌ ಮಾಡಿ ವಿಚಾರಿಸಿದೆ.”

“ಓ ಫೋನ್‌….. ಚಾರ್ಜ್‌ ಇಲ್ಲ ಅಂತ ಕಾಣಿಸುತ್ತೆ. ಹ್ಞಾಂ…. ಕಮಲಮ್ಮ ನನಗೆ ಊಟ ಕೊಟ್ಟು ಮನೆಗೆ ಹೋದಳು. ಆಮೇಲೆ ನಾನು ಸ್ವಲ್ಪ ಹೊತ್ತು ರೆಸ್ಟ್ ಮಾಡಿದೆ. ಸರಿ, ನೀನು ಕೈಕಾಲು ತೊಳೆದು ಬಾ. ನಾನು ಕಾಫಿ ಮಾಡುತ್ತೇನೆ,” ಶೈಲಜಾ ಮೇಲೇಳಲು ಹೋದಳು.

“ನಾನು ಕಾಫಿ ಮಾಡುತ್ತೇನೆ. ನೀವು ಬಹಳ ದುರ್ಬಲರಾಗಿದ್ದೀರಿ. ನಿಮಗೆ ಇನ್ನೂ ರೆಸ್ಟ್ ಬೇಕು,” ಎಂದು ಹೇಳಿ ನಿತ್ಯಾ 2 ಕಪ್ ಕಾಫಿ ಮಾಡಿ ತಂದಳು. ಕಾಫಿ ಕುಡಿಯುತ್ತಾ ಆಫೀಸ್‌ನಲ್ಲಿ ನಡೆದ ಸಂಗತಿಗಳನ್ನೆಲ್ಲ ಅತ್ತೆಗೆ ವಿಸ್ತಾರವಾಗಿ ಹೇಳತೊಡಗಿದಳು.

“ಸರಿ, ನೀನೀಗ ಫ್ರೆಶ್‌ ಆಗಿ ಬಾ. ಕಮಲಮ್ಮ ಬಂದಿದ್ದಾಳೆ. ರಾತ್ರಿಗೆ ನಿನಗೇನು ಬೇಕೋ ಅದನ್ನು ಮಾಡಿಸಿಕೊ.”

“ಅಮ್ಮಾ, ಕಮಲಮ್ಮ ಮಾಡಿದ ಅಡುಗೆ ತಿಂದು ಬೇಸರವಾಗಿಬಿಟ್ಟಿದೆ. ನೀವು ಬೇಗ ಆರೋಗ್ಯ ಸುಧಾರಿಸಿಕೊಳ್ಳಿ. ರುಚಿ ರುಚಿಯಾದ ಊಟ ಸಿಗುತ್ತದೆ,” ನಿತ್ಯಾ ಬಾಗಿ ಶೈಲಜಾಳ ಭುಜ ಬಳಸಿ ಕಿವಿಯ ಬಳಿ ಉಸುರಿದಳು. ಶೈಲಜಾ ಪ್ರೀತಿಯಿಂದ ಅವಳ ಕೆನ್ನೆ ಸವರಿದಳು.

ಸುಮಂತ್‌ ಶಿಪ್‌ ಮೇಲೆ ಹೋಗಿದ್ದರಿಂದ ನಿತ್ಯಾ ಅತ್ತೆಯ ಕೋಣೆಯಲ್ಲಿಯೇ ಮಲಗುತ್ತಿದ್ದಳು. ಆಯಾಸಗೊಂಡು ಮನೆಗೆ ಬಂದಿದ್ದ ಅವಳು, ಊಟ ಮಾಡಿ ದಿಂಬಿನ ಮೇಲೆ ತಲೆಯಿಟ್ಟ ಕೂಡಲೇ ಗಾಢ ನಿದ್ರೆಗೆ ಜಾರಿದಳು. ಅವಳ ಮುಖವನ್ನು ಮಮತೆಯಿಂದ ದಿಟ್ಟಿಸುತ್ತಾ ಶೈಲಜಾ, `ಈ ಸಂಬಂಧದಲ್ಲಿ ಪ್ರೀತಿ ಇರುವುದಿಲ್ಲ ಎಂದೇಕೆ ಹೇಳುತ್ತಾರೆ….. ಈ ಜೋಡಿಯೂ ಪ್ರೀತಿಯಲ್ಲಿ ತಾಯಿ ಮಗಳಂತೆ, ಒಡನಾಟದಲ್ಲಿ ಗೆಳತಿಯರಂತೆ ಮತ್ತು ಆದರ ಗೌರವದಲ್ಲಿ ಅತ್ತೆಸೊಸೆಯಂತೆ ಇರುತ್ತದೆ,’ ಎಂದು ಯೋಚಿಸಿದಳು.

ತಿರುಗುತ್ತಿದ್ದ ಫ್ಯಾನನ್ನು ನೋಡುತ್ತಾ ಮಲಗಿದ್ದ ಶೈಲಜಾಳ ಮನಸ್ಸು ಗತಕಾಲಕ್ಕೆ ಜಾರಿತು. ಪತಿ ಅಪಘಾತದಲ್ಲಿ ತೀರಿಕೊಂಡಾಗ ಶೈಲಜಾಳಿಗೆ ದಿಕ್ಕು ತೋಚದಂತಾಯಿತು. ಅವಳು ಮಾಡುತ್ತಿದ್ದ ಪ್ರೈವೇಟ್‌ ಕಂಪನಿಯಲ್ಲಿನ ಉದ್ಯೋಗ ಈಗ ಬದುಕಿಗೆ ಊರುಗೋಲಾಯಿತು. ಪುಟ್ಟ ಸುಮಂತ್‌ನ ಶಾಲೆಯ ಫೀಸ್‌ ತುಂಬಿಸಲು ಸಹಾಯಕವಾಯಿತು. ಸುಮಂತ್‌ ದೊಡ್ಡವನಾಗಿ ವಿದ್ಯಾಭ್ಯಾಸ ಮುಗಿಸಿದ ನಂತರ ಮರ್ಚೆಂಟ್‌ ನೇವಿಯ ಉದ್ಯೋಗ ಅವನನ್ನು ಆಕರ್ಷಿಸಿತು. ಶೈಲಜಾಳಿಗೆ ಅದು ಇಷ್ಟವಿರಲಿಲ್ಲ. ಆದರೆ ಅದರ ರೋಮಾಂಚಕತೆಗಾಗಿ ಅಲ್ಲಿಗೇ ಅವನು ಸೇರಿದ. ಅವನು ದೀರ್ಘಕಾಲ ಶಿಪ್‌ ಮೇಲೆ ಹೋದಾಗ ಶೈಲಜಾ ಒಂಟಿಯಾಗಿ ದಿನ ಕಳೆಯಬೇಕಾಯಿತು.

ಇದಕ್ಕಾಗಿ ಅವಳು ಮಗನನ್ನು ಮದುವೆಯಾಗಲು ಒತ್ತಾಯಿಸತೊಡಗಿದಳು. ಆಗ ಸುಮಂತ್‌ ತಾನು ನಿತ್ಯಾಳನ್ನು ಇಷ್ಟಪಟ್ಟಿರುವುದಾಗಿ ತಿಳಿಸಿದ. ಸುಮಂತ್‌ನ ಗೆಳೆಯನ ತಂಗಿ ನಿತ್ಯಾ. ಅವಳು ಮರಾಠಿ ಕುಟುಂಬಕ್ಕೆ ಸೇರಿದವಳು. ಇದನ್ನು ಕೇಳಿ ಶೈಲಜಾ ತಳಮಳಿಸಿದಳು. ಹುಡುಗಿ ಎಂಥವಳೋ ಏನೋ…. ಆದರೆ ಅಡ್ಡಿ ಮಾಡಿದರೆ ವೈಮನಸ್ಯಕ್ಕೆ ಬೀಜ ಬಿತ್ತಿದಂತಾಗುತ್ತದೆ.

ಶೈಲಜಾ ಏನೊಂದೂ ಮಾತನಾಡದೆ ಮೊದಲು ಹುಡುಗಿಯನ್ನು ನೋಡಲು ತೀರ್ಮಾನಿಸಿದಳು. ನಿತ್ಯಾಳನ್ನು ಭೇಟಿ ಮಾಡಿದೊಡನೆ ಮನಸ್ಸಿನ ತಳಮಳವೆಲ್ಲ ಮಾಯವಾಯಿತು. ಸುಂದರ, ಸೌಮ್ಯ ಸ್ವಭಾವದ, ಮಂದಹಾಸದಿಂದ ಕೂಡಿದ ನಿತ್ಯಾಳನ್ನು ಬೇಗನೆ ಮನೆ ತುಂಬಿಸಿಕೊಡುವಂತೆ ಕೇಳಿದಳು.

ನಿತ್ಯಾ ತಂದೆ ತಾಯಿಯರ ಒಬ್ಬಳೇ ಮಗಳು. ಮಗಳನ್ನು ಪ್ರೀತಿಯಿಂದ ಒಳ್ಳೆಯ ಸಂಸ್ಕಾರದೊಡನೆ ಬೆಳೆಸಿದ್ದರು. ಅವಳಿಗೆ ಎಲ್ಲರೊಡನೆ ನಗುನಗುತ್ತಾ ಮಾತನಾಡಲು ಬರುತ್ತಿತ್ತೇ ಹೊರತು, ಮನೆಯ ಜವಾಬ್ದಾರಿಯ ಬಗ್ಗೆ ಏನೂ ತಿಳಿದಿರಲಿಲ್ಲ. ಈಗಿನ ಕಾಲದ ಹೆಣ್ಣುಮಕ್ಕಳಂತೆ ಹೊರಗೆ ಉದ್ಯೋಗ ಮಾಡುತ್ತಾ, ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಾ ಹಾಯಾಗಿದ್ದಳು.

ತನಗೆ ಹೆಣ್ಣು ಮಕ್ಕಳಿಲ್ಲದಿದ್ದರೂ ಶೈಲಜಾ ಇಂದಿನ ಹೆಣ್ಣುಮಕ್ಕಳ ರೀತಿನೀತಿಯನ್ನು ಅರ್ಥ ಮಾಡಿಕೊಂಡಿದ್ದಳು. ನಿತ್ಯಾ ವಿವಾಹವಾಗಿ ಮನೆಗೆ ಬಂದಾಗ ಶೈಲಜಾ ಅವಳನ್ನು ತುಂಬು ಹೃದಯದಿಂದ ಸ್ವಾಗತಿಸಿದಳು. ಮಗಳಂತೆ ಮಮತೆ ತೋರಿದಳು. ಅವಳಿಗೆ ನಿತ್ಯಾಳ ಮೈನಸ್‌ ಪಾಯಿಂಟ್‌ ಒಂದೂ ಕಣ್ಣಿಗೆ ಚುಚ್ಚಲಿಲ್ಲ. ಬದಲಾಗಿ ಪ್ಲಸ್‌ ಪಾಯಿಂಟ್‌ಗಳು ಎದ್ದು ತೋರಿದವು. ನಿತ್ಯಾ ಬೆಳಗ್ಗೆ ತಡವಾಗಿ ಏಳುವುದನ್ನು ಕಂಡು ಕೆಲಸದವಳು ಮೂಗು ಮುರಿಯುತ್ತಿದ್ದಳು. ಆದರೆ ಶೈಲಜಾ ಮಾತ್ರ ಪ್ರಸನ್ನ ಚಿತ್ತಳಾಗಿರುತ್ತಿದ್ದಳು.

ನಿತ್ಯಾಳ ಡ್ರೆಸ್‌ಗಳು ಶೈಲಜಾಳಿಗೆ ಇಷ್ಟವಾಗುತ್ತಿರಲಿಲ್ಲ. ಆ ಬಗ್ಗೆ ಅಕ್ಕಪಕ್ಕದವರು ಏನೆನ್ನುವರೋ ಎಂಬುದಕ್ಕಿಂತ ಮಗ ಸೊಸೆಯ ಸಂತೋಷಕ್ಕೆ ಹೆಚ್ಚು ಬೆಲೆ ಕೊಟ್ಟಳು.

ಕೆಲ ತಿಂಗಳ ನಂತರ ಸುಮಂತ್‌ ಶಿಪ್‌ ಮೇಲೆ ಹೋಗಬೇಕಾಯಿತು. ಮಗ ಮನೆಯಲ್ಲಿ ಇಲ್ಲದಿದ್ದರೂ ಸೊಸೆ ಜೊತೆಗಿರುತ್ತಾಳಲ್ಲ ಎಂದು ಶೈಲಜಾ ಸಮಾಧಾನಪಟ್ಟುಕೊಂಡರೆ, ನಿತ್ಯಾ ತವರಿಗೆ ಹೋಗಲು ಚಡಪಡಿಸಿದಳು. ಸುಮಂತ್‌ ಕೆಲಸಕ್ಕೆ ಸೇರಿದ ನಂತರ ಶೈಲಜಾ ರಿಟೈರ್‌ಮೆಂಟ್‌ ತೆಗೆದುಕೊಂಡಿದ್ದಳು. ವರ್ಷ ವರ್ಷಗಳಿಂದ ದುಡಿದದ್ದು ಸಾಕು. ಇನ್ನು ಕೊಂಚ ಆರಾಮಾಗಿರೋಣ ಎಂಬ ಭಾವನೆ. ಪುಟ್ಟ ಹೂಗಿಡವೊಂದು ಮನೆಯ ಅಂಗಳಕ್ಕೆ ಬಂದಿದೆ. ಅದನ್ನು ಪೋಷಿಸಿ ಬೆಳೆಸಿ ಅದರಲ್ಲಿ ಪುಷ್ಪ ಒಂದು ಅರಳಿ ಬರುವುದನ್ನು ಮನಸಾರೆ ಆನಂದಿಸುವ ಕನಸು ಕಾಣುತ್ತಿದ್ದಳು.

ಆದರೆ ನಿತ್ಯಾ, “ಅಮ್ಮಾ, ನಾನು ಬೆಳಗಾವಿಗೆ ಹೋಗಿಬರಲೇ? ಸುಮಂತ್‌ ಬರುವ ಮೊದಲೇ ಬಂದುಬಿಡುತ್ತೇನೆ,” ಎಂದಳು.

ಶೈಲಜಾ ತನಗೆ ಮನಸ್ಸಿಲ್ಲದಿದ್ದರೂ ನಿತ್ಯಾಳನ್ನು ನಗುಮೊಗದಿಂದಲೇ ಕಳಿಸಿಕೊಟ್ಟಳು. `ಪತಿ ಇಲ್ಲದೆ ಅಷ್ಟೊಂದು ದಿನಗಳು ಅವಳು ಹೇಗೆ ತಾನೇ ಇರುತ್ತಾಳೆ. ಹೊಸ ಸಂಬಂಧ, ಹೊಸ ಮನೆ, ಇದನ್ನು ತನ್ನದು ಎಂದು ಭಾವಿಸಲು ಸಮಯ ಬೇಕು,’ ಎಂದು ಶೈಲಜಾ ಭಾವಿಸಿದಳು. ನಿತ್ಯಾ ಬೆಳಗಾವಿಯಿಂದ ಫೋನ್‌ ಮಾಡುತ್ತಾ , ಅತ್ತೆಯನ್ನು ಬಹು ಚೆನ್ನಾಗಿ ವಿಚಾರಿಸಿಕೊಳ್ಳುತ್ತಿದ್ದಳು. ಅವಳ ಫೋನ್‌ ಕಾಲ್ ‌ಬಂದರೆ ಶೈಲಜಾ ಖುಷಿಪಡುತ್ತಿದ್ದಳು. ಅವಳೊಡನೆ ನಗುನಗುತ್ತಾ ಮಾತನಾಡುತ್ತಿದ್ದಳು. ಅವಳಿಲ್ಲದೆ ಮನೆ ಖಾಲಿಯಾಗಿರುವುದೆಂದು ಹೇಳುತ್ತಿದ್ದಳು. ಆದರೆ ಹಿಂದಿರುಗಿ ಬರಲು ತಾನಾಗಿ ಹೇಳುತ್ತಿರಲಿಲ್ಲ.

ಸುಮಂತ್‌ ಹಿಂದಿರುಗುವ ಮೊದಲೇ ನಿತ್ಯಾ ಮನೆಗೆ ಬಂದಳು. ದೂರ ಹೋಗಿದ್ದ ಮಗಳನ್ನು ಕಂಡಂತೆ ಶೈಲಜಾ ಅವಳನ್ನು ಆಲಂಗಿಸಿಕೊಂಡಳು. ಸುಮಂತ್‌ 3 ತಿಂಗಳ ರಜೆಯ ಮೇಲೆ ಮನೆಗೆ ಬಂದ. ಮೌನವಾಗಿದ್ದ ಮನಿಯಲ್ಲೀಗ ಮಾತು ಮತ್ತು ನಗುವಿನ ಅಲೆ ಹರಿದಾಡಿತು. ದಿನಗಳು ಹೇಗೆ ಕಳೆದವೆಂದು ಶೈಲಜಾಳಿಗೆ ತಿಳಿಯಲಿಲ್ಲ.

ರಜೆ ಮುಗಿಸಿ ಸುಮಂತ್‌ ತನ್ನ ಡ್ಯೂಟಿಗೆ ಹೊರಟುಹೋದ. ಮಗ ಹೋದ ಮೇಲೆ ಸೊಸೆ ತನ್ನ ತವರಿಗೆ ಹೋಗುವಳೇನೋ ಎಂದು ಶೈಲಜಾ ಮನದಲ್ಲೇ ಮಿಡುಕಿದಳು. ಆದರೆ ಈ ಬಾರಿ ನಿತ್ಯಾಳ ನಡವಳಿಕೆಯಲ್ಲಿ ಬಹಳಷ್ಟು ಬದಲಾವಣೆ ಬಂದಿತ್ತು. ಮೊದಲಿನಿಂದಲೂ ಅವಳು ಸ್ನೇಹಪರ ಮತ್ತು ಮೃದು ಸ್ವಭಾವದವಳಾದರೂ ಅವಳಲ್ಲಿ ಹುಡುಗಾಟಿಕೆ ಇತ್ತು. ಆದರೀಗ ಅವಳಿಗೆ ಮನೆ ಮತ್ತು ಅತ್ತೆಯ ಬಗ್ಗೆ ಜವಾಬ್ದಾರಿತನ ಹುಟ್ಟಿತ್ತು. ಅವಳು ತರಿಗೆ ಹೋಗುವ ಮಾತು ಆಡಲೇ ಇಲ್ಲ, ಬದಲಾಗಿ ಇಲ್ಲೇ ಕೆಲಸಕ್ಕೆ ಅರ್ಜಿ ಹಾಕತೊಡಗಿದಳು.

ದಿನ ಕಳೆದಂತೆ ಅತ್ತೆ ಸೊಸೆಯರ ನಡುವಿನ ಸಂಬಂಧ ಬಲಗೊಳ್ಳತೊಡಗಿತು. ನಿಜ, ಸಂಬಂಧ ಚೆನ್ನಾಗಿರಬೇಕೆಂದರೆ ಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿರಬೇಕಾಗುತ್ತದೆ. ಕಡೆಗೊಂದು ದಿನ ಆ ಪ್ರಯತ್ನಕ್ಕೆ ಫಲ ದೊರೆಯುತ್ತದೆ.

ನಿತ್ಯಾ ಸೊಸೆಯಾಗಿ ಬಂದಾಗ ಶೈಲಜಾ ಅವಳಿಗೆ ಅದೆಷ್ಟು ಪ್ರೀತಿ, ವಿಶ್ವಾಸಗಳನ್ನು ತೋರಿದ್ದಳು. ಅವಳ ನಡೆನುಡಿ, ಒಡವೆ ವಸ್ತ್ರಗಳ ಬಗ್ಗೆ ಯಾವುದೇ ಟೀಕೆ ಮಾಡದೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಳು. ಈಗ ನಿತ್ಯಾ ಅದೇ ಪ್ರೀತಿ, ವಿಶ್ವಾಸ, ಕಾಳಜಿಗಳನ್ನು ಅತ್ತೆಯ ಕಡೆ ಹರಿಸಿದಳು. ಮಗಳ ಹಾಗೆ ಅವರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿದಳು. ಹೊರಗೆ ಹೊರಡುವಾಗ ಅವರಿಗೆ ಶಾಲು ಕೊಡುತ್ತಾ, “ಅಮ್ಮಾ, ಚಳಿ ಇದೆ,” ಎನ್ನುವಳು. ಯಾವುದಾದರೂ ಸಮಾರಂಭಕ್ಕೆ ಸಿದ್ಧವಾಗುವಾಗ, “ಅಮ್ಮಾ, ಈ ಸೀರೆ ಉಟ್ಟುಕೊಳ್ಳಿ. ಇದು ನಿಮಗೆ ಬಹಳ ಚೆನ್ನಾಗಿ ಕಾಣುತ್ತದೆ,” ಎಂದು ಅವರು ಆರಿಸಿಟ್ಟಿದ್ದ ಸೀರೆಗೆ ಬದಲು ಬೇರೊಂದನ್ನು ಕೊಡುವಳು.

ಒಮ್ಮೆ ಶಾಪಿಂಗ್‌ಗೆ ಹೋದಾಗ, “ಅಮ್ಮಾ, ಈ ಸಲ್ವಾರ್‌ ಸೂಟ್‌ ನಿಮಗೆ ಚೆನ್ನಾಗಿ ಒಪ್ಪುತ್ತದೆ. ಕೊಳ್ಳೋಣ,” ನಿತ್ಯಾ ಉತ್ಸಾಹದಿಂದ ಹೇಳಿದಳು. ಸೀರೆಯನ್ನಷ್ಟೇ ಉಡುವ ಶೈಲಜಾ ನಕಾರ ಸೂಚಿಸಿದಾಗ, “ ಈ ಡ್ರೆಸ್‌ನಲ್ಲಿ ನೀವು ಬಹಳ ಸುಂದರವಾಗಿ ಕಾಣುವಿರಿ. ನಿನ್ನ ಅತ್ತೆ ಸ್ಮಾರ್ಟ್‌ ಅಂಡ್‌ ಬ್ಯೂಟಿಫುಲ್ ಎಂದು ನನ್ನ ಫ್ರೆಂಡ್ಸ್ ಹೇಳುತ್ತಾರೆ,” ಎಂದಳು. ನಿತ್ಯಾಳ ಒತ್ತಾಯಕ್ಕೆ ಶೈಲಜಾ ಮಣಿಯಲೇಬೇಕಾಯಿತು, ಮಗಳಾಗಿದ್ದರೆ ಹೀಗೇ ಮಾಡುತ್ತಿದ್ದಳಲ್ಲವೇ ಎಂದುಕೊಂಡಳು.

ನಿತ್ಯಾ ಅವಳಿಗೆ ಡ್ರೈವಿಂಗ್‌ನ್ನೂ ಕಲಿಸಿದಳು. ಪ್ರತಿಯೊಂದು ಹೊಸ ವಿಷಯವನ್ನು ಕಲಿಯುವ ಉತ್ಸಾಹ ಮೂಡುವಂತೆ ಮಾಡಿದಳು. ಇಬ್ಬರೂ ಅಕ್ಕತಂಗಿಯರಂತೆ ಗೆಳತಿಯರಂತೆ ಒಂದಾದರು. ಒಬ್ಬರನ್ನೊಬ್ಬರು ಕೇಳದೆ ಏನನ್ನೂ ಮಾಡುತ್ತಿರಲಿಲ್ಲ. ಪ್ರತಿಯೊಂದು ವಿಷಯವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಇವರ ಸಂಬಂಧ ತಾಯಿ ಮಗಳ ಸಂಬಂಧಕ್ಕಿಂತ ಬಲವಾಗಿ, ಆತ್ಮೀಯವಾಗಿ ಇದ್ದಿತು.

ನಿತ್ಯಾ ಒಂದೆರಡು ಇಂಟರ್‌ವ್ಯೂಗಳಿಗೆ ಹೋಗಿ ಬಂದ ನಂತರ ಅವಳಿಗೆ ಇಷ್ಟವಾಗುವ ಉದ್ಯೋಗ ದೊರೆಯಿತು. ಒಂದೇ ತೊಂದರೆಯೆಂದರೆ ಅವಳು ಹೋಗಬೇಕಾದ ಆಫೀಸ್‌ ನಗರದ ಇನ್ನೊಂದು ಕೊನೆಯಲ್ಲಿತ್ತು. ಅದಕ್ಕಾಗಿ ಇಬ್ಬರೂ ಕೂಡಿ. ಮನೆ ಬದಲಾಯಿಸಲು ತೀರ್ಮಾನಿಸಿ, ಆಫೀಸಿಗೆ ಕೊಂಚ ಹತ್ತಿರವಿರುವ ಏರಿಯಾದಲ್ಲಿ ಮನೆಯನ್ನೂ ಬಾಡಿಗೆಗೆ ಪಡೆದರು.

ಹೊಸದಾಗಿ ಮನೆ ಮಾಡಿಕೊಂಡು ಬಂದ ಈ ಜೋಡಿಯನ್ನು ಕಂಡು ನೆರೆಹೊರೆಯವರು ಅವರನ್ನು ತಾಯಿ ಮಗಳೆಂದು ಭಾವಿಸಿದರು. ಹೀಗಲ್ಲದೆ ಬೇರೇನೂ ಯೋಚಿಸಲು ಸಾಧ್ಯವಿಲ್ಲದ ಗಾಢ ಸಂಬಂಧ ಅವರದು.

ಹಿಂದಿನ ಘಟನೆಗಳನ್ನೆಲ್ಲ ಜ್ಞಾಪಿಸಿಕೊಂಡ ಶೈಲಜಾಳಿಗೆ ಮೈಥಿಲಿಯ ಮಾತು ನಗೆ ತಂದಿತು. ಗಾಢ ನಿದ್ರೆಯಲ್ಲಿದ್ದ ನಿತ್ಯಾಳ ಹೊದಿಕೆಯನ್ನು ಸರಿಪಡಿಸಿ ಅವಳೂ ನಿದ್ರಿಸಲು ಸಿದ್ಧಳಾದಳು.

ಆ ದಿನ ಭಾನುವಾರವಾದ್ದರಿಂದ ಶೈಲಜಾ ಮತ್ತು ನಿತ್ಯಾ ತಡವಾಗಿ ಎದ್ದರು. ಇಬ್ಬರೂ ಲಿವಿಂಗ್‌ ರೂಮ್ ನಲ್ಲಿ ಆರಾಮವಾಗಿ ಕುಳಿತು ತಿಂಡಿ ತಿನ್ನುತ್ತಿರುವಾಗ ಅವರ ನೆರೆಯವರಾದ ಮೈಥಿಲಿ, ಮಧು, ವೈಶಾಲಿ ಮತ್ತು ಸುಮಿತ್ರಾ ಬಂದರು. ನಿತ್ಯಾ ಬಾಗಿಲು ತೆರೆದು ಎಲ್ಲರನ್ನೂ ನಗುಮೊಗದಿಂದ ಸ್ವಾಗತಿಸಿ ಒಳಗೆ ಹೋದಳು.

“ಓಹೋ…. ಬನ್ನಿ ಬನ್ನಿ, ನೀವೂ ತಿಂಡಿ ತಿನ್ನಿ. ಏನು, ನಾಲ್ಕು ಜನರೂ ಬೆಳಗ್ಗೆಯೇ ಎಲ್ಲಿಯೋ ಹೊರಟಿರುವಿರಲ್ಲ….?” ಶೈಲಜಾ ತಮ್ಮ ತಿಂಡಿ ಮುಗಿಸಿ ಬಂದವರನ್ನು ಉಪಚರಿಸಲು ಮೇಲೆದ್ದರು.

“ಶೈಲಜಾ, ನೀವು ಕುಳಿತುಕೊಳ್ಳಿ. ನಾವೆಲ್ಲ ತಿಂಡಿ ಮುಗಿಸಿಯೇ ಬಂದಿದ್ದೇವೆ,” ಮೈಥಿಲಿ ಹೇಳಿದಳು.

“ನಮ್ಮ ಏರಿಯಾದವರೆಲ್ಲ ಸೇರಿ, ಒಂದು ಗ್ರೂಪ್‌ ಮಾಡಿಕೊಳ್ಳೋಣ ಎಂದು ಯೋಚಿಸಿದ್ದೇವೆ. ಎಲ್ಲರೂ ಸೇರಿ ಮುಖ್ಯವಾದ ಹಬ್ಬಗಳನ್ನು ಒಟ್ಟಿಗೆ ಆಚರಿಸಿದರೆ ಒಬ್ಬರಿಗೊಬ್ಬರ ಪರಿಚಯ ಆಗಿ ಆತ್ಮೀಯತೆ ಬೆಳೆಯುತ್ತದೆ. ನಿಮ್ಮ ಬೇಸರ ಕಳೆಯುತ್ತದೆ,” ವೈಶಾಲಿ ತಾವು ಬಂದ ಉದ್ದೇಶವನ್ನು ಹೊರಹಾಕಿದಳು.

jawab-blackmail-ka-story2

“ಹೌದು…… ಮಗ ಸೊಸೆಯರು ನಮ್ಮ ಜೊತೆಯಲ್ಲಿದ್ದರೂ ಒಂದೇ, ದೂರದಲ್ಲಿದ್ದರೂ ಒಂದೇ. ಅವರ ಪಾಡಿಗೆ ಅವರು ಮಜವಾಗಿರುತ್ತಾರೆ. ನಾವು ಅವರನ್ನು ಲೆಕ್ಕಕ್ಕೇ ಇಟ್ಟಿಲ್ಲ. ಸೊಸೆಯರಂತೂ ಯಾವಾಗ ಅತ್ತೆ ಮಾವನ ಕಥೆ ಕಳೆಯುತ್ತದೊ ಅಂತ ಕಾಯುತ್ತಿರುತ್ತಾರೆ,” ಮಧು ತನ್ನ ಮನಸ್ಸಿನ ಕಹಿಯನ್ನು ಹೊರಗೆಡವಿದಳು.

“ಹಾಗೆ ಹೇಳಬೇಡಿ ಮಧು,” ಅವಳ ಮಾತನ್ನು ತಳ್ಳಿಹಾಕುತ್ತಾ ಶೈಲಜಾ ಹೇಳಿದಳು, “ಸೊಸೆಯರು ಸಹ ಹೆಣ್ಣುಮಕ್ಕಳೇ ಅಲ್ಲವೇ? ಹೆಣ್ಣು ಮಗಳು ಒಳ್ಳೆಯವಳು ಅಂತ ತಿಳಿಯುತ್ತೇವೆ. ಹಾಗಿರುವಾಗ ಅವಳು ಸೊಸೆಯಾದ ಕೂಡಲೇ ಹೇಗೆ ಕೆಟ್ಟವಳಾಗುತ್ತಾಳೆ? ತಾಯಿ ಒಳ್ಳೆಯವಳಾಗಿರುತ್ತಾಳೆ, ಅತ್ತೆಯಾದ ಮೇಲೆ ಅವಳೇಕೆ ಕೆಟ್ಟವಳೆನಿಸಿಕೊಳ್ಳುತ್ತಾಳೆ? ವಾಸ್ತವವಾಗಿ ಈ ಸಂಬಂಧ ಕೆಡುವುದು ದೋಷಾರೋಪಣೆಯಿಂದ ಪರಸ್ಪರರ ದೌರ್ಬಲ್ಯ, ತಪ್ಪುಗಳನ್ನು ಎತ್ತಿ ಆಡುವುದರಿಂದ ಅದು ಪ್ರಾರಂಭವಾಗುತ್ತದೆ.

“ತಾಯಿ ಮಗಳಿಗೆ ಪರಸ್ಪರರ ಗುಣಾವಗುಣಗಳ ಪರಿಚಯವಿರುತ್ತದೆ. ಅವರಿಗೆ ಅವು ಅಭ್ಯಾಸವಾಗಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಆದರೆ ಅತ್ತೆ ಸೊಸೆಯರ ವಿಷಯ ಹಾಗಲ್ಲ. ಅವರು ಪರಸ್ಪರ ಅರಿತುಕೊಳ್ಳಲು ಸಮಯ ಹಿಡಿಯುತ್ತದೆ. ಮಗಳನ್ನು ಹುಟ್ಟಿದಾಗಿನಿಂದ 25 ವರ್ಷಗಳ ಕಾಲ ನೋಡಿರುತ್ತೀರಿ. ಆದರೆ 25 ವರ್ಷದ ಹುಡುಗಿ ಸೊಸೆಯಾಗಿ ಬಂದಾಗ ಎರಡೇ ದಿನಗಳಲ್ಲಿ ಅಂತಹ ಸಂಬಂಧ ರೂಪುಗೊಳ್ಳಲು ಸಾಧ್ಯವೇ? ಅದಕ್ಕೆ ಸಮಯ ಹಿಡಿಯುತ್ತದೆ. ಇಬ್ಬರೂ ಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿರಬೇಕು. ಸಹನೆ, ಪ್ರೀತಿಯಿಂದ ಸಂಬಂಧ ಸುಧಾರಿಸುವುದು ಖಂಡಿತ.”

“ನಿಮಗೆ ಒಳ್ಳೆಯ ಸೊಸೆ ಸಿಕ್ಕಿದ್ದಾಳೆ, ಅದಕ್ಕೇ ಹೀಗೆ ಹೇಳುತ್ತೀರಿ. ನಮ್ಮ ಸೊಸೆಯಂಥವಳು ಸಿಕ್ಕಿದ್ದರೆ ಗೊತ್ತಾಗುತ್ತಿತ್ತು,” ಸುಮಿತ್ರಾ ಹೇಳಿದಳು.

“ಮನೆಗೆ ಬಂದ ಹುಡುಗಿಯನ್ನು  ಸೊಸೆಯಾಗಿ ನೋಡುವ ಮೊದಲು ಅವಳ ಸ್ವತಂತ್ರ ವ್ಯಕ್ತಿತ್ವದೊಂದಿಗೆ ಏಕೆ ಸ್ವೀಕರಿಸಬಾರದು? ನಮ್ಮ ಅಭಿಪ್ರಾಯಗಳನ್ನು ಅವಳ ಮೇಲೆ ಹೇರುವ ಬದಲು ಅವಳ ಆದ್ಯತೆ ಏನು ಎಂದು ತಿಳಿಯುವುದು ಒಳ್ಳೆಯದಲ್ಲವೇ? ಅವಳಿಗೊಂದು ಲಕ್ಷ್ಮಣರೇಖೆ ಹಾಕಿ. ಅವಳ ಕನಸುಗಳನ್ನು ಚಿವುಟುವ ಬದಲು, ನಿಮ್ಮ ಮಗಳಿಗೆ ಅವಕಾಶ ನೀಡುವಂತೆ ಅವಳ ಜೀವನವನ್ನು ಅವಳೇ ರೂಪಿಸಿಕೊಳ್ಳಲು ಸ್ವಾತಂತ್ರ್ಯ ನೀಡಿ. ಆಗ ಅವಳಿಗೆ ನಿಮ್ಮ ಮೇಲೆ ಹೇಗೆ ಪ್ರೀತಿ, ಅಭಿಮಾನ ಹುಟ್ಟುವುದೆಂಬುದನ್ನು ನೀವೇ ನೋಡಿ.

“ಎಲ್ಲರಿಗೂ ಅವರ ಇಚ್ಛೆಯಂತೆ ಬಾಳುವ ಹಕ್ಕು ಇರುತ್ತದೆ. ಹಾಗಿರುವಾಗ ಸೊಸೆ ಏಕೆ ಅದರಿಂದ ವಂಚಿತಳಾಗಬೇಕು? ಅವಳಿಂದ ಕೆಲವು ತಪ್ಪುಗಳಾಗಬಹುದು. ಮಗಳ ತಪ್ಪನ್ನು ಸಹಿಸುವಂತೆ ಆ ಬಗ್ಗೆಯೂ ಸಹನೆ ತೋರಿದರೆ, ಮುಂದೆ ಈ ಸಂಬಂಧದಿಂದ ಸಂತೋಷ ಸಿಗುತ್ತದೆ. ಪ್ರಯತ್ನ ಮಾಡಿ ನೋಡಿ. ಈಗಾಗಲೇ ತಡವಾಗಿದೆ. ಆದರೆ ಪ್ರಯತ್ನ ಸತತವಾಗಿದ್ದರೆ ಸಂಬಂಧ ಸುಧಾರಿಸಲು ಸಾಧ್ಯ.

“ಈ ಪ್ರಯತ್ನದಿಂದ ಅತ್ತೆ ಸೊಸೆಯರ ಸಂಬಂಧ ಚೆನ್ನಾಗಿಬಿಡುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಸಂಬಂಧ ಹಾಳಾಗುವುದಿಲ್ಲ ಎಂಬುದು ಖಂಡಿತ,” ಶೈಲಜಾ ನಗುತ್ತಾ ಹೇಳಿದಳು. ನಾಲ್ವರು ಗೆಳತಿಯರೂ ಶೈಲಜಾಳತ್ತ ನೋಡುತ್ತಾ ಅವಳು ಹೇಳಿದ ವಿಷಯದ ಬಗ್ಗೆ ಯೋಚಿಸುತ್ತಿದ್ದರು. ಹೊರಗೆ ಅವರಾಡುತ್ತಿದ್ದ ಮಾತುಗಳನ್ನು ಕೇಳಿಸಿಕೊಂಡ ನಿತ್ಯಾ ತನ್ನತ್ತೆಯ ವಿಶಾಲ ಮನೋಭಾವ ಮೆಚ್ಚಿ ನಸುನುಗುತ್ತಾ ಅಡುಗೆ ಮನೆಯತ್ತ ನಡೆದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ