ಗಂಡ ಗುಂಡನ ಮೇಲೆ ಗುಂಡಿಗೆ ಬಹಳ ದಿನಗಳಿಂದ ಒಂದು ಗುಮಾನಿ ಇತ್ತು. ಅವನು ಹೊರಗೆ ಏನೋ ಆಟ ಆಡುತ್ತಿದ್ದಾನೆ ಅಂತ ಡೌಟು. ಈ ಸಲ ಮಳೆ ಶುರುವಾದಾಗಿನಿಂದ, ಅವನು ತಪ್ಪದೆ ಛತ್ರಿ ತೆಗೆದುಕೊಂಡು ಹೋಗುತ್ತಿದ್ದರೂ, ಅವನ ಬಲ ಭುಜ ಮಾತ್ರ ನೆಂದಿರುತ್ತಿತ್ತು. ತಲೆ ನೆನೆಯದ ಕಾರಣ ಶೀತ, ನೆಗಡಿ ಆಗಿರಲಿಲ್ಲ.

ಹೀಗೆ ಒಮ್ಮೆ ಗುಂಡ ಕೈಯಲ್ಲಿ ಒದ್ದೆ ಛತ್ರಿ ಹಿಡಿದುಕೊಂಡು ಸಂಜೆ ತಡವಾಗಿ ಮನೆ ಪ್ರವೇಶಿಸಿದಾಗ, ಗುಂಡಿ ಬಲು ಕಾಳಜಿಯಿಂದ ಕೇಳಿದಳು, “ಬಹಳ ದಿನಗಳಿಂದ ನೋಡ್ತಿದ್ದೀನಿ, ಮಳೆ ಬಂದಾಗೆಲ್ಲ ನೀವು ಬಹಳ ಕಷ್ಟಪಡ್ತಿದ್ದೀರಿ. ಛತ್ರಿ ಇದ್ದೂ ಸಹ ಸದಾ ನಿಮ್ಮ ಬಲ ಭುಜ ನೆಂದು ಹೋಗಿರುತ್ತೆ, ದೊಡ್ಡ ಗಾತ್ರದ ಛತ್ರಿ ತೆಗೆದುಕೊಳ್ಳಿ, ಜೊತೆಗೆ ಯಾರಿಂದ ನಿಮ್ಮ ಬಲ ಭುಜ ನೆನೆಯುತ್ತಿದೆಯೋ ಅವಳನ್ನೂ ಒಮ್ಮೆ ಮನೆಗೆ ಕರೆದು ತನ್ನಿ….. ಒಟ್ಟಿಗೆ ಟೀ ಕುಡಿಯೋಣ!” ಇದನ್ನು ಕೇಳಿಸಿಕೊಂಡ ಗುಂಡ ಫುಲ್ ಕಕ್ಕಾಬಿಕ್ಕಿ!

ಹೀಗೆ ಒಮ್ಮೆ ಗುಂಡ ಗುಂಡಿ ಶಾಪಿಂಗ್‌ ಮಾಡಲೆಂದು ಮಾಲ್‌ಗೆ ಹೊರಟರು. ಮೆನ್ಸ್ ಡ್ರೆಸ್‌ ಕೌಂಟರ್‌ನಲ್ಲಿ ಗುಂಡನನ್ನು ಕೂರಿಸಿ, ತಾನು ಈಗಲೇ ಸೀರೆ ಕೌಂಟರ್‌ಗೆ ಹೋಗಿ ಬರುತ್ತೇನೆಂದು ಹೋದ ಗುಂಡಿ 2 ಗಂಟೆ ಕಾಲ ಕಳೆದರೂ ವಾಪಸ್ಸು ಬರುವುದು ಬೇಡವೇ? ಅವಳಿಗಾಗಿ ಕಾದೂ ಕಾದೂ ರೋಸಿ ಹೋದ ಗುಂಡ, ಹತ್ತಿರದಲ್ಲಿದ್ದ ಬ್ಯೂಟಿಫುಲ್ ಸೇಲ್ಸ್ ಗರ್ಲ್ಸ್ ನ್ನು ಸಮೀಪಿಸಿ ಕೇಳಿದ, “2 ನಿಮಿಷ ಫ್ರೀ ಮಾಡಿಕೊಂಡು ನನ್ನ ಜೊತೆ ಏನಾದರೂ ಮಾತಾಡ್ತೀರಾ……?”

ಸೇಲ್ಸ್ ಗರ್ಲ್ : ಇದ್ಯಾಕ್ರಿ…. ಹೀಗೆ ಕೇಳ್ತಿದ್ದೀರಿ?

ಗುಂಡ : ಅಸಲಿಗೆ ನನ್ನ ಹೆಂಡತಿ ನನ್ನನ್ನು ಇಲ್ಲಿ ಬಿಟ್ಟು 2 ಗಂಟೆಗಳಿಗೂ ಹೆಚ್ಚಾಗಿ ಇದೇ ಮಾಲ್‌ನಲ್ಲಿ ಫ್ಲೋರ್‌ ಫ್ಲೋ0ರಾಗಿ ಸುತ್ತಾಡುತ್ತಾ ಶಾಪಿಂಗ್‌ ಮಾಡುತ್ತಿದ್ದಾಳೆ. ನನಗಂತೂ ಅವಳನ್ನು ಹುಡುಕಲು ಆಗುವುದಿಲ್ಲ. ನೀವು ನನ್ನ ಜೊತೆ ನಗುನಗುತ್ತಾ 2 ನಿಮಿಷ ಮಾತನಾಡುತ್ತಾ ನಿಂತರೆ, ಎಲ್ಲೇ ಇದ್ದರೂ ಅವಳು ಕ್ಷಣಾರ್ಧದಲ್ಲಿ ಇದನ್ನು ಗ್ರಹಿಸಿ, ನನ್ನ ಬಳಿ ಬಂದೇ ಬರುತ್ತಾಳೆ. ನನ್ನ ಹೆಂಡತಿಯನ್ನು ಹುಡುಕಲು ಸಹಾಯ ಮಾಡಿ, ಪ್ಲೀಸ್‌……!

ಗಿರೀಶ್‌ : ನಮ್ಮವರ ಆಂಗ್ಲ ವ್ಯಾಮೋಹ ಹೇಳತೀರದು. ಕನ್ನಡದ ಎಲ್ಲಾ ಪದಗಳನ್ನೂ ಕಂಗ್ಲೀಷ್‌ ಮಾಡಿರಿಸಿದ್ದಾರೆ ನೋಡು.

ಸತೀಶ್‌ : ನೀನು ಯಾವುದರ ಕುರಿತಾಗಿ ಹೀಗೆ ಹೇಳುತ್ತಿದ್ದೀಯಾ?

ಗಿರೀಶ್‌ : ನಾನು ಹೇಳೋದು ಅಂದ್ರೆ…. ಅಮ್ಮ ಮಾಮ್ ಆದಳು, ಅಪ್ಪ ಡ್ಯಾಡ್‌ ಆದ, ಚಿಕ್ಕಪ್ಪ ಚಿಕ್ಕಪ್ಸ್ ಆದರೆ, ಹಸ್ಬೆಂಡ್‌ ಹಬಿ ಆದ. ಹೀಗೆ ಎಲ್ಲದಕ್ಕೂ ಸರಿ ಆದರೆ ಒಂದು ಮಾತ್ರ ಹಾಗೇ ಉಳಿದುಕೊಂಡಿತು ನೋಡು.

ಸತೀಶ್‌ : ಅದ್ಯಾವುದು?

ಗಿರೀಶ್‌ : ಹೆಂಡತಿ!

ರಂಗಿ : ನೀವು ನನ್ನನ್ನು ನೋಡಲು ಬಂದಾಗ, ನಾನು ತಲೆ ಎತ್ತಿ ಸಹ ನಿಮ್ಮನ್ನು ನೋಡಲಿಲ್ಲ…. ಮದುವೆಗೆ ಹಾಗೇ ಒಪ್ಪಿದ್ದೆ ಗೊತ್ತಾ?

ರಂಗ : ನಾನೆಂಥ ಬೆಪ್ಪುತಕ್ಕಡಿ ನೋಡು…. ನಿನ್ನನ್ನು ಸರಿಯಾಗಿ ನೋಡಿದ ಮೇಲೂ ಮದುವೆಗೆ ಒಪ್ಪಿದೆ ಅಂದ್ರೆ….. ಸಂದೇಹ ಪಡಲಿಕ್ಕೂ ಒಂದ ಲಿಮಿಟ್‌ ಇರಬೇಕೆಂತೆ. ರಂಗ ಆಗ ತಾನೇ ಆಫೀಸಿನಿಂದ ಮನೆಗೆ ಮರಳಿದ್ದ. ಎದುರು ಫ್ಲಾಟಿನ ರೋಜಾ ಸಹ ಸೂಟ್‌ಕೇಸ್‌ ಹಿಡಿದು ತವರಿನಿಂದ ಮನೆಗೆ ಬರುತ್ತಿದ್ದಳು. ಇಬ್ಬರೂ ಹಾಯಾಗಿ ನಗುನಗುತ್ತಾ ಮಾತನಾಡಿಕೊಳ್ಳುತ್ತಾ ಮೆಟ್ಟಿಲೇರಿ 4ನೇ ಮಹಡಿಗೆ ಬರುತ್ತಿದ್ದರು.

ರಂಗಿ ಫ್ಲಾಟ್‌ ಮುಂದೆ ದುರದುರ ನೋಡುತ್ತಾ, ರಂಗನಿಗಾಗಿ ಕಾಯುತ್ತಿದ್ದಳು. ಇಡೀ ಬೀದಿಯಲ್ಲಿ ಕರೆಂಟ್‌ ಇಲ್ಲ ಎಂದು ಅವಳಿಗೂ ಗೊತ್ತಿತ್ತು. “ಇದೇನು….. ಅವಳನ್ನು ಕರೆತರಲು ರೈಲ್ವೆ ಸ್ಟೇಷನ್ನಿಗೆ ಹೋಗಿದ್ರಾ?” ಎಂದು ರಂಗನನ್ನು ಒಳಗೆ ಬರ ಮಾಡಿಕೊಳ್ಳುವುದೇ?

ರತ್ನಮ್ಮ 40+ ನಂತರ ದುಬಾರಿ ಫೀಸ್‌ ಕೊಟ್ಟು ಇಂಗ್ಲಿಷ್‌ ಸ್ಪೀಕಿಂಗ್‌ ಕೋರ್ಸ್‌ ಸೇರಿದ್ದರು. ಹೇಗಾದರೂ ಅದರ ಲಾಭವನ್ನು 4 ಜನರೆದುರು ತೋರಿಸಿಕೊಳ್ಳಬೇಕೆಂಬ ಹಂಬಲ. ಅಪಾರ್ಟ್‌ಮೆಂಟ್‌ನವರೆಲ್ಲ ಸೇರಿ ಕಿಟಿ ಪಾರ್ಟಿ ಏರ್ಪಡಿಸಿದಾಗ ಇವರಿಗೆ ತಡೆಯಲಾದೀತೇ? ಮೇಲಿನ ಮಹಡಿಯ ಮಾಧವಿಗೆ ಹೇಳಿಯೇಬಿಟ್ಟರು.

ರತ್ನಮ್ಮ : ನೋಡ್ರಿ ಮಾಧವಿ….. ಇವತ್ತು ಯಾಕೋ ನನಗೆ  ಹೆವಿತನ ಅನ್ನಿಸ್ತಿದೆ ಕಣ್ರಿ…..

ಮಾಧವಿ : ಹೆವಿತನ…. ಅದೆಂಥದು ನೀವು ಹೇಳ್ತಿರೋದು?

ರತ್ನಮ್ಮ : ಅಯ್ಯೋ…. ಅಷ್ಟೂ ನಿಮಗೆ ಇಂಗ್ಲಿಷ್‌ ಬರಲ್ವೇನ್ರಿ…. ಹೆವಿತನ ಅಂದ್ರೆ ಭಾರಿ ನೆಸ್‌!

ಕಿಟ್ಟಿ : ಇನ್ನೆಂದೂ ಬರಲಾರೆ ನಾ ನಿನ್ನ ಮನೆ ದಾರಿಗೆ…

ನಾಣಿ : ಇದ್ಯಾಕೋ ಬೆಳಗ್ಗೆ ಎದ್ದು ಶೋಕಗೀತೆ ಹಾಡ್ತಿದ್ದೀಯಾ? ಗರ್ಲ್ ಫ್ರೆಂಡ್‌ ಜೊತೆ ಬ್ರೇಕ್‌ ಅಪ್‌ ಆಗಿ ಹೋಯ್ತಾ…?

ಕಿಟ್ಟಿ : ಹಾಗಲ್ಲ ಕಣೋ…. ಹಾಳಾದ್ದು ಅವರ ಮನೆ ಬೀದೀಲಿ 4 ಕೇಸ್‌ ಕೊರೋನಾ ಪಾಸಿಟಿವ್ ಅಂತೆ….!

ಟೀಚರ್‌ : ಯಾಕೋ ಗುಂಡ ಪರೀಕ್ಷೆಗೆ ಸರಿಯಾಗಿ ತಯಾರಿ ಮಾಡಿಕೊಂಡಿರಲಿಲ್ಲ? ಸ್ವಲ್ಪ ಓದಿರಲಿಲ್ಲವೇ?

ಗುಂಡ : ಕಳೆದ 2 ವಾರದಿಂದ ಓದುವ ಆಸೆಯಿಂದಲೇ ಬೆಳಗ್ಗೆ ಬೇಗ ಏಳ್ತಿದ್ದೆ, ಆದರೆ….

ಟೀಚರ್‌ : ಆದರೆ… ಇನ್ನೇನೋ ಕೇಡು ನಿಂಗೆ? ಓದಕ್ಕೇನು ಧಾಡಿ?

ಗುಂಡ : ಪ್ರತಿ ಸಲ ಓದಲು ಆಸೆಯಿಂದ ಎದ್ದಾಗಲೂ ನೀವು ಹೇಳುತ್ತಿದ್ದ ಮಾತು…. `ಆಸೆಯೇ ದುಃಖಕ್ಕೆ ಮೂಲ’ ಅಂತ…. ನೆನಪಾಗಿ ಪುನಃ ಮಲಗಿಬಿಡುತ್ತಿದ್ದೆ ಟೀಚರ್‌. ಇದರಲ್ಲಿ ನನ್ನ ತಪ್ಪೇನು?

ಭಿಕ್ಷುಕ : ಅಮ್ಮಾ…. ತಾಯಿ… ಬಿಸಿ ಬಿಸಿಯಾಗಿ 1-2 ರೊಟ್ಟಿ ಕೊಡಿ ತಾಯಿ…..

ತಾಯಿ : ಇನ್ನೂ ರೊಟ್ಟಿ ಆಗಿಲ್ಲ ಆಮೇಲೆ ಬಾರಯ್ಯ!

ಭಿಕ್ಷುಕ : ದಯವಿಟ್ಟು ನನ್ನ ಮೊಬೈಲ್ ನಂಬರ್‌ ತಗೊಂಡು ಸೇವ್ ‌ಮಾಡಿಕೊಳ್ಳಿ ತಾಯಿ…. ರೆಡಿ ಆದ ತಕ್ಷಣ ಮಿಸ್‌ ಕಾಲ್ ಕೊಡಿ.

ತಾಯಿ : ಮಿಸ್‌ ಕಾಲ್ ‌ಯಾಕೆ? ಫೋಟೋ ತೆಗೆದು ವಾಟ್ಸ್ ಆ್ಯಪ್‌ನಲ್ಲಿ ಮೆಸೇಜ್‌ ಕಳಿಸ್ತೀನಿ, ಡೌನ್‌ ಲೋಡ್‌ ಮಾಡಿಕೊಂಡು ತಿನ್ನು!

ಟೀಚರ್‌ : ನಾಣಿ….. ಬೀರಬಲ್ ಯಾರ ಸಭೆಯಲ್ಲಿ ಮಂತ್ರಿ ಆಗಿದ್ದ?

ನಾಣಿ : ಗೊತ್ತಿಲ್ಲ ಟೀಚರ್‌….

ಟೀಚರ್‌ : ಕತ್ತೇನ್‌ ತಂದು… ಒಂದಿಷ್ಟು ಇತಿಹಾಸದ ಪಠ್ಯಪುಸ್ತಕ ತಿರುವಿ ಹಾಕು.

ನಾಣಿ : ರವಿ ಪ್ರಸಾದ್‌ ಯಾರು ಗೊತ್ತಾ ಟೀಚರ್‌ ನಿಮಗೆ?

ಟೀಚರ್‌: ಯಾರೋ ಅದು…. ?

ನಾಣಿ : ಹೈಸ್ಕೂಲಿಗೆ ಬಂದಿರೋ ನಿಮ್ಮ ಮಗಳ ಕಡೇನೂ ಆಗಾಗ ಗಮನ ಕೊಡಿ…. ನೀವು ಆನ್‌ ಲೈನ್‌ ಕ್ಲಾಸ್‌ತೆಗೆದುಕೊಳ್ಳುವಾಗ, ಅವಳ ಮೊಬೈಲ್‌ಗೆ ಆ ಹೆಸರಿನಲ್ಲಿ ಸೇವ್ ‌ಆಗಿರುವ ಅವಳ ಬಾಯ್‌ ಫ್ರೆಂಡ್‌ನಿಂದ ಆಗಾಗ ಮಸೇಜ್‌ಬರ್ತಾನೇ ಇರುತ್ತೆ!

ಬಾಲ್ಕನಿಯಲ್ಲಿ ಕುಳಿತು ಪತಿಪತ್ನಿ ಓದುತ್ತಿದ್ದರು.

ಪತ್ನಿ : ಇಲ್ಲಿ ನೋಡ್ರಿ ಎಂಥ ಸುದ್ದಿ!

ಪತಿ : ಏನದು ಅಂತ ರೋಚಕವಾದುದು?

ಪತ್ನಿ : ಇಂಗ್ಲೆಂಡ್‌ನಲ್ಲಿ 82 ವರ್ಷದ ಒಬ್ಬ ಅಜ್ಜಿ ಮೊದಲ ಸಲ ಮದುವೆ ಆಗುತ್ತಿದ್ದು, ಅದನ್ನು ಬಲು ಗ್ರಾಂಡಾಗಿ, ಊರಿಗೆಲ್ಲ ಔತಣ ನೀಡಿ ಮಾಡಿಕೊಂಡರಂತೆ!

ಪತಿ : ಅಯ್ಯೋ ಪಾಪ, ಆಯುಸ್ಸು ಪೂರ್ತಿ ಹಾಯಾಗಿ ಕಳೆದ ಮುದುಕನಿಗೆ ಕೊನೆ ಘಳಿಗೆಯಲ್ಲಿ ಮತಿಭ್ರಮಣೆ ಆಗಬೇಕೇ? 80 ಆದಮೇಲೆ ಅರಳು ಮರುಳು ಆಗಿರಬೇಕು…..!

ಅಂದು ರಂಗಿ ಬಹಳ ಖುಷಿಯಿಂದಿದ್ದಳು. ಮನೆಗೆಲಸ ಮಾಡುತ್ತಾ ಹಾಡು ಗುನುಗುತ್ತಿದ್ದಳು. ಕೊನೆಗೆ ತಡೆಯಲಾರದೆ….

ರಂಗಿ : ಏನೂಂದ್ರೆ…. ಪ್ರತಿ ಜನುಮದಲ್ಲೂ ನೀವೇ ನನ್ನ ಪತಿ ಆಗಿ ಬರಬೇಕು. ಪ್ರತಿ ಜನುಮದಲ್ಲೂ ಹೀಗೆ ನೀವು ನನ್ನನ್ನು ಅತಿ ಪ್ರೀತಿಯಿಂದ ನೋಡಿಕೊಳ್ಳಬೇಕು……

ರಂಗ : ಅದೇನೋ ಸರಿ, ಈ ಜನ್ಮದಲ್ಲಿ  ನೀನು ನನ್ನನ್ನು ಸ್ವಲ್ಪ ನೆಮ್ಮದಿಯಾಗಿ ಇರಲು ಬಿಟ್ಟರೆ ತಾನೇ ಮುಂದಿನ ಜನ್ಮದಲ್ಲಿ ನಾನು ನಿನ್ನನ್ನು ಭೇಟಿ ಆಗಲು ಸಾಧ್ಯ…..?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ