ಹಬ್ಬದ ಸೀಸನ್ ಶುರುವಾಗುತ್ತಿದ್ದಂತೆ, ಮಾರುಕಟ್ಟೆ ಆಕರ್ಷಕ ಆಫರ್‌ಗಳಿಂದ ತುಂಬಿ ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ಡಿಸ್ಕೌಂಟ್‌ಗಳು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಆದರೆ ಹೆಚ್ಚು ಉಳಿತಾಯ ಮಾಡುವ ಮೋಹ ನಿಮ್ಮ ಪರ್ಸ್‌ನ್ನು ಖಾಲಿ ಮಾಡಿಬಿಡಬಹುದು. ಏಕೆಂದರೆ ಬಂಪರ್ ಫೆಸ್ಟಿವ್ ಆಫರ್ಸ್‌ನ ಸುಳಿಗೆ ಸಿಲುಕಿ, ನಮಗೆ ಉಪಯುಕ್ತವಾಗದ ವಸ್ತುಗಳನ್ನು ಕೂಡ ಖರೀದಿಸಿ ಬಿಡುತ್ತೇವೆ. ಅದು ನಿಮಗೆ ಲಾಭದ ವಹಿವಾಟು ಎನಿಸದೆ ಹಾನಿಯ ವ್ಯವಹಾರ ಎನಿಸುತ್ತೆ. ಹೀಗಾಗಿ ಈ ದೀಪಾವಳಿ ಹಬ್ಬದಲ್ಲಿ ತಿಳಿವಳಿಕೆಯಿಂದ ಖರೀದಿ ಮಾಡಿ.ದೊಡ್ಡ ಡಿಸ್ಕೌಂಟ್‌ನಿಂದ ದೂರವಿರಿ.
ನೀವು ಸೇಲ್ ಸೀಸನ್‌ನಲ್ಲಿ ಏನನ್ನಾದರೂ ಖರೀದಿಸಲು ಹೊರಟರೆ, ನಿಮಗೆ ಕೊಡುವ ಸಲಹೆ ಏನೆಂದರೆ ಮೊದಲು ನೋಡಿ, ಯೋಚಿಸಿ ಬಳಿಕವೇ ಖರೀದಿಸಿ. ದೊಡ್ಡ ಡಿಸ್ಕೌಂಟ್‌ಗಳ ಆಫರ್‌ಗಳಿಗೆ ಮರುಳಾಗಿ ಮೋಸ ಹೋಗಬೇಡಿ. ಉದಾಹರಣೆಗಾಗಿ, ನೀವು ಒಂದು ನಾನ್‌ಸ್ಟಿಕ್ ಪ್ಯಾನ್ ಖರೀದಿಸಲೆಂದು ಮಾರುಕಟ್ಟೆಗೆ ಹೋಗುತ್ತೀರಿ.
ಆಗ ಅಂಗಡಿಯನು ಪ್ಯಾನ್ ಸೆಟ್ ಖರೀದಿಯ ಮೇಲೆ ಶೇ.30ರಷ್ಟು ರಿಯಾಯ್ತಿ ಕೊಡುವುದಾಗಿ ಹೇಳುತ್ತಾನೆ. ನೀವು ಉಳಿತಾಯಕ್ಕೆ ಮರುಳಾಗಿ ಸಿಂಗಲ್ ನಾನ್‌ಸ್ಟಿಕ್ ಪ್ಯಾನ್ ಖರೀದಿಸುವುದರ ಬದಲು ಪೂರ್ತಿ ನಾನ್‌ಸ್ಟಿಕ್ ಕುಕಿಂಗ್ ರೇಂಜ್ ತೆಗೆದುಕೊಂಡು ಬರುತ್ತೀರಿ. ಆ ಮೂಲಕ ನಿಮ್ಮನ್ನು ನೀವು ಸ್ಮಾರ್ಟ್ ಖರೀದಿದಾರ ಎಂದುಕೊಳ್ಳುತ್ತೀರಿ.
ಅಂಗಡಿಯವನು ಇಂತಹ ದೊಡ್ಡ ಡಿಸ್ಕೌಂಟ್ ಜಾಲ ಹೆಣೆದು, ಒಂದು ಪ್ಯಾನ್ ಬದಲಿಗೆ ಪೂರ್ತಿ ನಾನ್‌ಸ್ಟಿಕ್ ಕುಕ್ಕಿಂಗ್ ರೇಂಜ್ ನೀವು ಖರೀದಿಸುವಂತೆ ಮಾಡುತ್ತಾನೆ. ಹೀಗಾಗಿ ನೀವು ಹೆಚ್ಚು ಹಣ ತೆತ್ತು ಬರುತ್ತೀರಿ.
ಉಚಿತ ಉಡುಗೊರೆಯ ಮೋಹ
ಒಂದು ಖರೀದಿಸಿದಾಗ ಮತ್ತೊಂದು ಉಚಿತವಾಗಿ ದೊರೆಯುವುದು ಬಹಳಷ್ಟು ಜನರಿಗೆ ಇಷ್ಟವಾಗುತ್ತದೆ. ಆದರೆ ಸೇಲ್‌ನಲ್ಲಿ ಯಾವುದೇ ಒಂದು ವಸ್ತುವಿನ ಜೊತೆಗೆ ದೊರೆಯುವ ಮತ್ತೊಂದು ಉಚಿತ ಉಡುಗೊರೆ ಖರೀದಿ ಮಾಡುವ ವ್ಯಕ್ತಿಯನ್ನು ಆಕರ್ಷಿಸುವ ತಂತ್ರವಾಗಿರುತ್ತದೆ. ಒಂದು ಮೈಕ್ರೋವೇವ್ ಜೊತೆಗೆ ಒಂದು ಉಚಿತ ಕ್ಯಾಸರೋಲ್ ಪಡೆಯಿರಿ ಅಥವಾ ರೈಸ್ ಕುಕ್ಕರ್ ಜೊತೆಗೆ ಲಂಚ್ ಬಾಕ್ಸ್ ನ ಆಫರ್ ಗಮನಿಸಿ ಬಹಳಷ್ಟು ಜನರು ಈ ರೀತಿಯ ಉಚಿತ ಉಡುಗೊರೆಯ ದುರಾಸೆಗೆ ಬಲಿಯಾಗುತ್ತಾರೆ. ಗ್ರಾಹಕನಿಗೆ ಮಾರಾಟಗಾರನ ತಂತ್ರ ಗೊತ್ತಾಗುವುದಿಲ್ಲ. ಯಾವುದೇ ಮಾರಾಟಗಾರ ಉಚಿತವಾಗಿ ಏನನ್ನೂ ಕೊಡಲು ಸಾಧ್ಯವಿಲ್ಲ ಎಂಬುದು ಅವರ ಅರಿವಿಗೆ ಬರುವುದೇ ಇಲ್ಲ. ಕ್ಯಾಸರೋಲ್‌ನ ಮೊತ್ತವನ್ನು ಆತ ಮೈಕ್ರೋವೇವ್‌ನಲ್ಲಿ ಸೇರಿಸಿಕೊಂಡಿರುತ್ತಾನೆ. ಹೀಗಾಗಿ ದೀಪಾವಳಿಯ ಸಂದರ್ಭದಲ್ಲಿ ಈ ತೆರನಾದ ಆಫರ್‌ಗಳ ಬಗ್ಗೆ ಅವಶ್ಯವಾಗಿ ಗಮನಹರಿಸಿ. ಏನೇ ಖರೀದಿಸಿ, ಜಾಣತನದಿಂದ ಖರೀದಿಸಿ.
ಶಾಪಿಂಗ್ ಯೋಜನೆ ರೂಪಿಸಿ
ಸೇಲ್ ಅಂದರೆ ಲಾಭದ ವ್ಯವಹಾರ. ಆ ಲಾಭದ ವ್ಯವಹಾರ ಯಾವಾಗ ಲಾಭಕರ ಅನಿಸುತ್ತೆ ಅಂದರೆ ಅದನ್ನು ನೀವು ಅವಧಿಗೆ ಮುನ್ನವೇ ಮುಗಿಸಿರಬೇಕು. ಕೆಲವು ಮಹಿಳೆಯರು ಹೇಗೆ ಯೋಚಿಸುತ್ತಾರೆಂದರೆ, ದೀಪಾವಳಿಯ ಎರಡು ಮೂರು ದಿನ ಮುಂಚೆ ಬೆಲೆ ಕಡಿಮೆ ಆಗಿರುತ್ತದೆಂದು. ಆದರೆ ಆಗುವುದು ಅದರ ತದ್ವಿರುದ್ಧ. ಕೊನೆಯ ಘಳಿಗೆಯಲ್ಲಿ ಮಾರಾಟಗಾರ ಬೆಲೆ ಕಡಿಮೆ ಮಾಡದೆ ಹೆಚ್ಚಿಸುತ್ತಾನೆ. ಏಕೆಂದರೆ ಆ ವ್ಯಕ್ತಿಗೆ ಚೆನ್ನಾಗಿ ಗೊತ್ತಿರುತ್ತದೆ, ಕೊನೆ ಘಳಿಗೆಯಲ್ಲಿ ಗ್ರಾಹಕರು ಬಂದೇ ಬರುತ್ತಾರೆ, ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿಯೇ ತೀರುತ್ತಾರೆ ಎಂದು. ಹೀಗಾಗಿ ಸ್ಮಾರ್ಟ್ ಆಗಿ ಮತ್ತು ಮುಂಚಿತವಾಗಿ ಖರೀದಿಸಿ.