ದಕ್ಷಿಣದ ಚಿತ್ರಗಳಲ್ಲಿ ತನ್ನದೇ ಛಾಪು ಮೂಡಿಸಿರುವ ಈ ನಟಿ ಶಾನ್ವಿ ಶ್ರೀವಾಸ್ತವ್, ಮೂಲತಃ ಉ. ಭಾರತದ ವಾರಾಣಸಿಯಲ್ಲಿ ಹುಟ್ಟಿ ಬೆಳೆದವಳು. ಮುಂಬೈನಲ್ಲಿ ಪದವೀಧರೆಯಾದ ಈಕೆ ಆಕಸ್ಮಿಕವಾಗಿ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ ಆಮದು ನಟಿ. ಕಾಲೇಜಿನ ದಿನಗಳಲ್ಲೇ ಈಕೆ 2012ರಲ್ಲಿ ತೆಲುಗಿನ `ಲವ್ಲಿ’ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿದಳು.
ನಂತರ `ಅಡ್ಡಾ’ ಚಿತ್ರದಲ್ಲಿ ಫ್ಯಾಷನ್ ಡಿಸೈನರ್ ಸ್ಮೂಡೆಂಟ್ ಆಗಿ ತೆಲುಗರ ಅಚ್ಚುಮೆಚ್ಚಿನ ಆಧುನಿಕ ಗ್ಲಾಮರಸ್ ನಟಿ ಎನಿಸಿದಳು. ಮುಂದಿನ ಚಿತ್ರದಲ್ಲಿ ವಿಷ್ಣು ಮಂಚುವಿಗೆ ರೊಮ್ಯಾಂಟಿಕ್ ನಾಯಕಿಯಾಗಿ `ರೌಡಿ’ ಪೊಲಿಟಿಕ್ ಡ್ರಾಮಾ ಚಿತ್ರದಲ್ಲಿ ಮಿಂಚಿದಳು. ಮುಂದೆ ಈಕೆ ಎಲ್ಲೂ ಹಿಂದಿರುಗಿ ನೋಡಬೇಕಾದ ಅಗತ್ಯವೇ ಬರಲಿಲ್ಲ.
ಅಲ್ಲಿಂದ ಈ ಕನ್ನಡ ಸ್ಯಾಂಡಲ್ ವುಡ್‌ಗೆ `ಚಂದ್ರಲೇಖಾ’ ಹಾರರ್ ಚಿತ್ರದ ಮೂಲಕ ಎಂಟ್ರಿ ಪಡೆದವಳು. ದೆವ್ವ ಹಿಡಿದ ಕನ್ಯಾಮಣಿಯಾಗಿ ಈಕೆ ಇಲ್ಲಿ ಭಾರಿ ಆಕರ್ಷಣೆಗೆ ಗುರಿಯಾದಳು. ಈ ಚಿತ್ರಕ್ಕೆ ಉತ್ತಮ ವಿಮರ್ಶೆಯೂ ಮೂಡಿಬಂತು, ಗಲ್ಲಾ ಪೆಟ್ಟಿಗೆಯಲ್ಲೂ ಯಶಸ್ವಿ ಎನಿಸಿತು. ಹೀಗಾಗಿ ಮುಂದೆ ಸಲೀಸಾಗಿ `ಮಾಸ್ಟರ್ ಪೀಸ್’ ಚಿತ್ರಕ್ಕೆ ಆಯ್ಕೆಯಾದಳು. ಈ ಚಿತ್ರಕ್ಕಾಗಿ ಇವಳಿಗೆ ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಮೂವಿ ಅವಾರ್ಡ್ ಸಿಕ್ಕಿತು. ಇದು ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದರೂ ಅದೂ ಫಲಿಸಲಿಲ್ಲ.
ಅದಾಗಿ ಮುಂದೆ ದರ್ಶನ್ ಜೊತೆ `ತಾರಕ್’ನಲ್ಲಿ ಮಿಂಚಿದಾಗ, ಕಮರ್ಷಿಯಲ್ ಯಶಸ್ವಿ ನಟಿ ಎನಿಸಿದಳು. ಈ ಚಿತ್ರಕ್ಕಾಗಿ ಅವಾರ್ಡ್ ಗಿಟ್ಟಿಸಿದ ಶಾನ್ವಿ, ಕನ್ನಡದಲ್ಲಿ ಭದ್ರವಾಗಿ ಬೇರೂರಿದಳು. ಈ ನೆಪವಾಗಿ ಮುಂದೆ `ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಗೆ ಎದುರಾಗಿ, ಅಪಾರ ಯಶಸ್ವಿ ಗಳಿಸಿದಳು.
ಅಲ್ಲಿಂದ ಮುಂದೆ `ಗೀತಾ’ (ಬಿಡುಗಡೆಯಾಗದ) ಚಿತ್ರದಲ್ಲಿ ಮೊದಲ ಬಾರಿಗೆ ತಾನೇ ತನ್ನ ಪಾತ್ರಕ್ಕೆ ಕಸ್ತೂರಿ ಕನ್ನಡದಲ್ಲಿ ಕಂಠದಾನ ಮಾಡಿಕೊಂಡಿದ್ದಾಳೆ! ಎಷ್ಟೋ ಕನ್ನಡತಿಯರು ತಮ್ಮದೇ ಚಿತ್ರದ ತಮ್ಮ ಪಾತ್ರಕ್ಕೆ ಕಂಠದಾನ ನೀಡಲು ಜಂಭಪಡುತ್ತಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ನಮ್ಮವರಿಗಿಂತ ಪರರಿಗೇ ಕನ್ನಡದ ಬಗ್ಗೆ ಅಭಿಮಾನ ಹೆಚ್ಚು ಎನ್ನುವುದು ಇದಕ್ಕೇ ಏನೋ……?
ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲರಂತೆ ಬಲವಂತದ ಬಿಡುವಿನಲ್ಲಿದ್ದ ಶಾನ್ವಿ, ಎಂದಿನ ಸಾಮನ್ಯ ಜನಸೇವೆ ಜೊತೆಗೆ ಕನ್ನಡ ಉಚ್ಚಾರಣೆ ಬಗ್ಗೆ ಎಷ್ಟೋ ಸುಧಾರಣೆ ಮಾಡಿಕೊಂಡು, ಹಳೆಯ ಕನ್ನಡ ಚಿತ್ರಗಳನ್ನು ಹೆಚ್ಚಾಗಿ ನೋಡಿದವಳಂತೆ. ಈ ಮಧ್ಯೆ ಇವಳಿಗೆ ಅದೃಷ್ಟ ದೇವತೆ ಒಲಿದು ತಾನಾಗಿ `ಕಸ್ತೂರಿ ಮಹಲ್’ ಚಿತ್ರದ ಆಫರ್ ಬರಬೇಕೇ?
ನಡೆದಿದ್ದು ಹೀಗೆ :`ಕಸ್ತೂರಿ ನಿವಾಸ’ ಶೀರ್ಷಿಕೆಯೊಂದಿಗೆ ಆರಂಭವಾದ ಈ ಚಿತ್ರ ಡಾ. ರಾಜ್ ಕುಟುಂಬ ಹಾಗೂ ಅಭಿಮಾನಿಗಳ ಮೇಲಿರುವ ಗೌರವದಿಂದ `ಕಸ್ತೂರಿ ಮಹಲ್’ ಎಂದು ಹೆಸರು ಬದಲಿಸಿದ್ದು ಎಲ್ಲರಿಗೂ ತಿಳಿದ ವಿಷಯ.
ಈ ಚಿತ್ರದ ನಾಯಕಿಯಾಗಿ ಮೊದಲು ರಚಿತಾ ರಾಮ್ ಆಯ್ಕೆಯಾಗಿದ್ದಳು. ಕಾರಣಾಂತರಗಳಿಂದ ರಚಿತಾ ರಾಮ್ ಈ ಚಿತ್ರದಿಂದ ಹೊರ ನಡೆದಿದ್ದು, ಇದೀಗ `ಕಸ್ತೂರಿ ಮಹಲ್’ ಚಿತ್ರದ ನಾಯಕಿಯ ಪಟ್ಟ ಶಾನ್ವಿಗೆ ಸಿಕ್ಕಿದೆ!
ಹಾರರ್ ಥ್ರಿಲ್ಲರ್ (ಭೂತ ಪ್ರೇತಗಳ) ಕಥಾಹಂದರ ಹೊಂದಿರುವ ಈ ಚಿತ್ರವನ್ನು `ಸುಪ್ರಭಾತ’ ಖ್ಯಾತಿಯ ದಿಗ್ದರ್ಶಕ ದಿನೇಶ್‌ಬಾಬು ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಅವರದೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ಅವರ ನಿರ್ದೇಶನದ 50ನೇ ಚಿತ್ರ ಎಂಬುದು ಮತ್ತೊಂದು + ಪಾಯಿಂಟ್.
ಕಳೆದ ತಿಂಗಳ 5ನೇ ತಾರೀಕಿನಿಂದ `ಕಸ್ತೂರಿ ಮಹಲ್’ ಚಿತ್ರದ ಚಿತ್ರೀಕರಣ ಕೊಟ್ಟಿಗೆ ಹಾರದಲ್ಲಿ ಒಂದೇ ಹಂತದಲ್ಲಿ ನಡೆಯಿತು. ಶ್ರೀ ಭವಾನಿ ಆರ್ಟ್ಸ್ ಹಾಗೂ ರುಬಿನ್ ರಾಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ, ರವೀಶ್ ಆರ್.ಸಿ. ಹಾಗೂ ರುಬಿನ್ ರಾಜ್ ಒಟ್ಟಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣ ಹಾಗೂ ಸೌಂದರ್ಯರಾಜ್‌ರ ಸಂಕಲನವಿದೆ. ಶಾನ್ವಿ ಶ್ರೀವಾಸ್ತವ್, ಸ್ಕಂಧ ಅಶೋಕ್, ರಂಗಾಯಣ ರಘು, ನಾರಾಯಣ ಸ್ವಾಮಿ, ಶೃತಿ ಪ್ರಕಾಶ್, ಕಾಶಿಮಾ ಮುಂತಾದವರು ಈ ಚಿತ್ರದ ತಾರಾ ಬಳಗದಲ್ಲಿದ್ದಾರೆ.
`ಸತ್ಯ ಜ್ಯೋತಿ’ ಚಿತ್ರದಿಂದ ಕನ್ನಡದಲ್ಲಿ ಚಿತ್ರಗಳನ್ನು ನಿರ್ದೇಶಿಸಲು ಆರಂಭಿಸಿದ ದಿನೇಶ್ ಬಾಬು ಸುಪ್ರಭಾತ, ಅಮೃತರ್ಷಿಣಿ, ಹೆಂಡ್ತಿಗ್ಹೇಳ್ಬೇಡಿ, ನಿಶ್ಶಬ್ದ, ಆಕಾಶಗಂಗೆ, ಎರಡನೇ ಮದುವೆ, ಪ್ರಿಯಾಂಕಾದಂಥ ಯಶಸ್ವೀ ಚಿತ್ರಗಳಿತ್ತರು. ಹೀಗಾಗಿ ಎಲ್ಲರ ಕುತೂಹಲ ಇದೀಗ ಈ ಚಿತ್ರದ ಮೇಲಿದೆ.
– ಸರಸ್ವತಿ