`ಬಾಝಿಗರ್' ಚಿತ್ರದ `ಪಡಾ ಹೋ ಎ ಚೆಹರಾ.... ಕ್ಯಾ ಕ್ಯಾ ಲಿಖಾ ಹೈ.....' ಸೂಪರ್ ಡೂಪರ್ ಹಿಟ್ ಹಾಡಿನಿಂದ ಪಡ್ಡೆಗಳ ಕನಸಿಗೆ ಕಿಚ್ಚು ಹತ್ತಿಸಿದ್ದ ಶಿಲ್ಪಾ ಶೆಟ್ಟಿಯನ್ನು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ.
ಈ ನಟಿಯ ಹಿಟ್ ಚಿತ್ರಗಳು 1993ರ ಈ ಚಿತ್ರದಿಂದ ಬಾಲಿವುಡ್‌ಗೆ ಎಂಟ್ರಿ ಪಡೆದ ಇವಳು, ಫಿಲ್ಮ್ ಫೇರ್ ಅವಾರ್ಡ್ ನಾಮಿನೇಶನ್‌ಗೆ ನೋಂದಾಯಿತಳಾದುದು ಆಶ್ಚರ್ಯವೇನಲ್ಲ. 1994ರಲ್ಲಿ `ಮೈ ಖಿಲಾಡಿ ತೂ ಅನಾಡಿ' ಚಿತ್ರದಲ್ಲಿ ಬಹು ಬೇಗ ದ್ವಿಪಾತ್ರದಲ್ಲಿ ಕಾಣಿಸಿಕೊಂಡಳು. ಬಾಲಿವುಡ್‌ನ ಹಲವು ಏರಿಳಿತಗಳ ಚಿತ್ರಗಳ ನಡುವೆ 1999ರ `ಜಾಗ್ವರ್' ಮತ್ತೆ ಹಿಟ್ ಎನಿಸಿತು.
ಅದಾದ ಮೇಲೆ `ಶೂಲ್' ಚಿತ್ರದ ಇವಳ ಐಟಂ ಸಾಂಗ್ `ಯುಪಿ ಬಿಹಾರ್ ಲೇಲೋ......' ಮಹಾ ಕಾಂಟ್ರೋರ್ಷಿಯಲ್ ಎನಿಸಿ ಸಿಕ್ಕಾಪಟ್ಟೆ ಹಿಟ್ ಆಯ್ತು. ಈ ಹಾಡಿನ ದ್ವಂದ್ವಾರ್ಥದಿಂದಾಗಿ ನಾಯಕ ಗೋವಿಂದ ಸಮೇತ, ರಚನೆಕಾರ, ನಿರ್ದೇಶಕರನ್ನೂ ಸೇರಿಸಿ ಕೋರ್ಟ್‌ನಿಂದ ಸಮನ್ಸ್ ಬಂದಿದ್ದು ಬೇರೆ ವಿಷಯ. ಇದರಿಂದ ಇವಳ ಪಾಪ್ಯುಲಾರಿಟಿ ಎಲ್ಲೆಲ್ಲೂ ಕಾಳ್ಗಿಚ್ಚಿನಂತೆ ಹರಡಿತು.
ಶಿಲ್ಪಾಳ ತವರು
ಅಂದಹಾಗೆ ಶಿಲ್ಪಾ ಶೆಟ್ಟಿ ಮೂಲತಃ ಮಂಗಳೂರಿನ ಬಂಟರ ಹುಡುಗಿ. ಇವಳ ತಂಗಿ ಶಮಿತಾ ಶೆಟ್ಟಿ ಸಹ ಬಾಲಿವುಡ್‌ನಲ್ಲಿ ಕಾಣಿಸಿಕೊಂಡಳು, ಮುಂದೆ `ಬಿಗ್‌ಬಾಸ್'ಗೆ ಎಂಟ್ರಿ ನೀಡಿ, ಅಕ್ಕನ ಮದುವೆ ಫಿಕ್ಸ್ ಆದಾಗ ತಾನೇ ಅಲ್ಲಿಂದ ಹೊರಬಿದ್ದಳು.
ಮುಂದೆ 2000ದಲ್ಲಿ ಶಿಲ್ಪಾಳ `ಧಡ್ಕನ್' ಇವಳ ಕೆರಿಯರ್‌ಗೆ ಟರ್ನಿಂಗ್ ಪಾಯಿಂಟ್ ನೀಡಿದರೆ, ಮುಂದೆ ಒಂದಾದ ಮೇಲೊಂದರಂತೆ ಬಾಕ್ಸ್ ಆಫೀಸ್ ಹಿಟ್ಸ್ ಗಳಾದ `ಇಂಡಿಯನ್' (2001), `ರಿಶ್ತೆ' (2002), `ದಸ್' (2005), `ಲೈಫ್ ಇನ್ ಎ ಮೆಟ್ರೋ, ಅಪ್ನೆ' (2007), `ದೋಸ್ತಾನಾ' (2008) ಮುಂತಾದವು ಸೂಪರ್ ಡೂಪರ್ ಹಿಟ್ ಚಿತ್ರಗಳು. ಇವಳನ್ನು ಎವರ್ ಗ್ರೀನ್ ಹೀರೋಯಿನ್ ಆಗಿಸಿದ.
ಶಿಲ್ಫಾಳ ಮಾಡೆಲಿಂಗ್
ಸುನಂದಾ ಸುರೇಂದ್ರರ ಮಗಳಾದ ತುಳು ಮಾತೃ ಭಾಷೆಯ ಈ ಬಂಟರ ಹುಡುಗಿ ಮುಂಬೈನಲ್ಲಿ ಓದಿದ್ದೇ ಹೆಚ್ಚು. ಮೂಲತಃ ಭರತನಾಟ್ಯಂ ನೃತ್ಯಗಾರ್ತಿಯಾಗಿದ್ದರೂ ಮಾಡೆಲ್, ಬಾಲಿವುಡ್ ನಟಿಯಾಗಿ ಮಿಂಚಿದ್ದೇ ಹೆಚ್ಚು. ಲಿಮ್ಕಾ ಟಿವಿ ಜಾಹೀರಾತಿನ ಮಾಡೆಲ್ ಆಗಿ ಕೆರಿಯರ್ ಆರಂಭಿಸಿದ ಈಕೆ, ಹಲವು ಜಾಹೀರಾತುಗಳಲ್ಲಿ ಮಿಂಚಿ, ಬಾಲಿವುಡ್ ನಟನೆಗೆ ಅಂಟಿಕೊಂಡಳು.
ಪ್ರಭುದೇವ್ ಜೊತೆ ಡ್ಯಾನ್ಸ್ ಪ್ರಧಾನವಾದ `ಮಿಸ್ಟರ್ ರೋಮಿಯೊ' ಇವಳು ಬಲವಾಗಿ ಹಿಂದಿ ಚಿತ್ರರಂಗದಲ್ಲಿ ನೆಲೆಯೂರಲು ಕಾರಣವಾಯ್ತು.
`ಫಿರ್ ಮಿಲೇಂಗೆ' ಚಿತ್ರದಲ್ಲಿ ಏಡ್ಸ್ ರೋಗಿ ಪಾಸಿಟಿವ್ ಹುಡುಗಿಯಾಗಿ ಇವಳ ನಟನೆ ಗಮನಾರ್ಹವೆನಿಸಿತು.
ದಕ್ಷಿಣದ ಚಿತ್ರಗಳು
ಮುಂದೆ ದಕ್ಷಿಣಕ್ಕೆ ದಾಂಗುಡಿಯಿಟ್ಟ ಈ ಬೆಡಗಿ ತಮಿಳಿನಲ್ಲಿ ಮಿಸ್ಟರ್ ರೋಮಿಯೊ, ತೆಲುಗಿನ `ಸಾಹಸ ವೀರುಡು ಸಾಗರ ಕನ್ಯಾ' ವೀಡೆವಡಂಡಿ ಬಾಬು ನಂತರ ಕನ್ನಡದಲ್ಲಿ ಉಪೇಂದ್ರ ಜೊತೆ `ಆಟೋ ಶಂಕರ್'ನಲ್ಲಿ ಲೇಡಿ ಗಬ್ಬರ್ ಸಿಂಗ್ ಆಗಿ ಅಬ್ಬರಿಸಿದರೆ, ರವಿಚಂದ್ರನ್ ಜೊತೆ `ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ.....' ಚಿತ್ರದಲ್ಲಿ `ರಾಜಾ ರಾಜಾ.... ನನ್ನ ರಾಜ' ಹಾಡಿನಿಂದ ಕನ್ನಡಿಗರ ಮನಗೆದ್ದಳು.