ನನ್ನ ಬದುಕಿನ ಅದ್ಭುತ ಕಥೆ ಕಳೆದ ವರ್ಷ ನಡೆದ ಘಟನೆ. ನನ್ನ ಮದುವೆಗಾಗಿ ಒಂದು ಮ್ಯಾರೇಜ್ ಬ್ಯೂರೋನಲ್ಲಿ ನನ್ನ ಫೋಟೋ ಮತ್ತು ಕೆಲವು ವಿವರಗಳನ್ನು ಕೊಟ್ಟಿದ್ದೆ. ಮುಂದೆ ನಾನು ಅವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಳ್ಳಲಿಲ್ಲ. ಆದರೆ 1 ವರ್ಷದ ನಂತರ ಒಂದು ದಿನ ಇದ್ದಕ್ಕಿದ್ದಂತೆ ಒಬ್ಬ ಹುಡುಗನ ಇಮೇಲ್ ಬಂತು. ನಾನು ನಿಮ್ಮನ್ನು ಇಷ್ಟಪಡುತ್ತೇನೆ. ಪ್ಲೀಸ್ ನನ್ನ ಜೊತೆ ಮಾತಾಡಿ ಎಂದು ಬರೆದಿದ್ದ. ಆಗ ನಾನು ಏನೂ ಉತ್ತರ ಕೊಡಲಿಲ್ಲ. ಆದರೆ ಮುಂದೆ ಫೇಸ್‌ಬುಕ್‌ನಲ್ಲಿ ನಮ್ಮಿಬ್ಬರ ಮಾತುಕಥೆ ನಡೆದಿತ್ತು. ಅವನು ನನ್ನೊಂದಿಗೆ ಮದುವೆಯ ಪ್ರಸ್ತಾಪ ಮಾಡಿದ್ದ. ಮೊದಲು ನಾನು ನಮ್ಮ ಮನೆಯವರೊಂದಿಗೆ ಮಾತಾಡುತ್ತೇನೆ. ಅವರು ಒಪ್ಪಿದರೆ ನಾವು ಮುಂದುವರಿಯೋಣ ಎಂದು ಹೇಳಿದೆ.
ನಾನು ಅಮ್ಮನಿಗೆ ಹುಡುಗ ಬಹಳ ಒಳ್ಳೆಯನು. ಒಳ್ಳೆಯ ಕೆಲಸದಲ್ಲಿದ್ದಾನೆ. ಮೊದಲು ನೀವಿಬ್ಬರೂ ನೋಡಿ. ನಿಮಗೆ ಸರಿ ಅನ್ನಿಸಿದರೆ ಆಯ್ತು. ಇಲ್ಲದಿದ್ದರೆ ನೀವು ಯಾರನ್ನು ಮದುವೆ ಆಗು ಅಂದ್ರೆ ಅವರನ್ನೇ ಆಗ್ತೀನಿ ಎಂದೆಲ್ಲಾ ಹೇಳಿದೆ. ಅಮ್ಮ ಈ ವಿಷಯನ್ನು ಅಪ್ಪನಿಗೆ ಹೇಳಿದಾಗ ಅವರು ಒಪ್ಪಲಿಲ್ಲ. 10 ದಿನಗಳ ನಂತರ ನಮ್ಮ ಸಂಬಂಧಿಕರಲ್ಲಿ ಒಬ್ಬ ಹುಡುಗನೊಂದಿಗೆ ನನ್ನ ಮದುವೆಯ ಬಗ್ಗೆ ಮಾತುಕಥೆ ಶುರು ಮಾಡಿದರು. ನಾನು ಮನೆಯವರಿಗೆ ಮತ್ತೊಮ್ಮೆ ವಿವರಿಸಿ ಹೇಳಲು ಪ್ರಯತ್ನಿಸಿದೆ. ಆದರೆ ಅವರು ಒಪ್ಪಲಿಲ್ಲ. ನಂತರ ನಾನು ಎಲ್ಲ ವಿಷಯವನ್ನೂ ಆ ಹುಡುಗನಿಗೆ ತಿಳಿಸಿದೆ. ಈ ಹುಡುಗ ನನಗೆ ಸರಿಯಿದ್ದಾನೆ ಎಂದು ನನಗೆ ಅನ್ನಿಸಿತ್ತು. ನಿನಗೆ ನನ್ನನ್ನು ಮದುವೆಯಾಗೋಕೆ ಇಷ್ಟವಿದೆಯೇ ಎಂದು ಅವನು ನನ್ನನ್ನು ಕೇಳಿದ. ನಾನು ಹ್ಞೂಂ ಎಂದೆ. ಆಗ ಅವನು ಬೇಗನೇ ನಿನ್ನನ್ನು ಕರೆದುಕೊಂಡು ಹೋಗೋಕೆ ನಾನು ಬರ್ತೀನಿ ಎಂದ.
ಇತ್ತ ನನ್ನ ಮನೆಯವರು ನನಗೆ ಹೇಳದೆ ಕೇಳದೆ ನನ್ನ ನಿಶ್ಚಿತಾರ್ಥದ ದಿನಾಂಕ ನಿಶ್ಚಯಿಸಿದರು. ಅವನು ನಿಶ್ಚಿತಾರ್ಥದ 2 ದಿನ ಮುಂಚೆ ನನ್ನನ್ನು ಕರೆದುಕೊಂಡುಹೋಗಲು ಬಂದ. ಆಗ ನಾನು ಮನೆಯಿಂದ ಹೊರಡುವುದು ಕಷ್ಟವಾಗಿತ್ತು. ನಾನು ಒಬ್ಬ ಗೆಳತಿಯನ್ನು ಕರೆಸಿಕೊಂಡೆ. ಅವಳು ಬಂದು ನನ್ನನ್ನು ಹೊರಗೆ ಕಳಿಸಲು ಅಪ್ಪನನ್ನು ಇನ್ನಿಲ್ಲದೆ ಕೇಳಿಕೊಂಡಳು. ಅಪ್ಪ 2 ಗಂಟೆ ಕಾಲ ಹೊರಗೆ ಹೋಗಲು ನನಗೆ ಒಪ್ಪಿಗೆ ನೀಡಿದರು. ಅಂದು ನಾನು ಮೊದಲ ಬಾರಿ ಆ ಹುಡುಗನನ್ನು ಭೇಟಿಯಾದೆ. ಆ ಹುಡುಗ ಎಂಥವನೋ ಏನೋ, ನಿನಗೇನಾದರೂ ಹೆಚ್ಚು ಕಡಿಮೆ ಆದರೆ ಎಂದೆಲ್ಲಾ ನನ್ನ ಗೆಳತಿ ಹೇಳಿದಳು. ಆದರೆ ನನ್ನ ಮನಸ್ಸಿಗೆ ಅವನೊಂದಿಗೆ ಹೋಗುವುದು ಸರಿ ಅನ್ನಿಸಿ ನಾನು ಅವನೊಂದಿಗೆ ಹೊರಟುಬಿಟ್ಟೆ.
ಮರುದಿನ ಅವನೊಂದಿಗೆ ಅವನ ಚಿಕ್ಕಮ್ಮನ ಮನೆಗೆ ಹೋದೆ. ಅಲ್ಲಿ ನಮ್ಮ ಮದುವೆಗೆ ನಡೆಯುತ್ತಿದ್ದ ಸಿದ್ಧತೆಗಳನ್ನು ನೋಡಿ ಆಶ್ಚರ್ಯವಾಯಿತು. ನಾನು ಅವನನ್ನು ಕೇಳಿದಾಗ ನಿನಗೆ ಸರ್‌ಪ್ರೈಸ್ ಕೊಡಲು ಹೀಗೆ ಮಾಡಿದೆ ಎಂದ. ನಾನು ಚಿಕ್ಕಮ್ಮನ ಕಾಲಿಗೆ ನಮಿಸಿದಾಗ ಅವರು ನನ್ನನ್ನು ಅಪ್ಪಿಕೊಂಡರು. ಆಗ ನನಗೆ ನನ್ನ ನಿರ್ಧಾರ ಶೇ.100ರಷ್ಟು ಸರಿಯೆನಿಸಿತು. ನನ್ನ ಅಪ್ಪ ಅಮ್ಮ ಕೂಡ ಒಮ್ಮೆ ನನ್ನನ್ನು ಹೀಗೆ ನೋಡಿದ್ದರೆ ಬಹಳ ಸಂತೋಷಪಡುತ್ತಿದ್ದರು ಅನ್ನಿಸಿತು. ಮದುವೆಯ ನಂತರ ನನಗೆ ನನ್ನ ಗಂಡನ ಮೇವೆ ಹೆಮ್ಮೆ ಇದೆ. ಅವರು ನನ್ನನ್ನು ನನ್ನ ಮನೆಯವರಿಗಿಂತ ಹೆಚ್ಚು ಪ್ರೀತಿಸುತ್ತಾರೆ.
– ವನಿತಾ