ಶಾಲಾ-ಕಾಲೇಜುಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರಿ ಕಾರ್ಯಕ್ರಮಗಳು, ರಾಷ್ಟ್ರೀಯ ಹಬ್ಬಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ವೇಳೆ ಮಕ್ಕಳ ರಕ್ಷಣೆಗಾಗಿ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ಒಳಗೊಂಡ ಸುತ್ತೋಲೆಯನ್ನು ಹೊರಡಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಶಾಲಾ ಆವರಣಗಳಲ್ಲಿ ಸಂಭವಿಸುತ್ತಿರುವ ಅವಘಡಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ಎಲ್ಲಾ ಶಾಲಾ-ಕಾಲೇಜುಗಳು ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದೆ.
ಪ್ರಮುಖ ಅಂಶಗಳು
ಧ್ವಜಾರೋಹಣದ ವೇಳೆ ಎಚ್ಚರಿಕೆ: ಧ್ವಜಾರೋಹಣ ಮಾಡುವ ಕಂಬದ ಹತ್ತಿರ ಯಾವುದೇ ವಿದ್ಯುತ್ ತಂತಿಗಳು ಹಾದುಹೋಗದಂತೆ ನೋಡಿಕೊಳ್ಳಬೇಕು. ಧ್ವಜವನ್ನು ಏರಿಸಲು ಅಥವಾ ಇಳಿಸಲು ಮಕ್ಕಳನ್ನು ಬಳಸಿಕೊಳ್ಳಬಾರದು. ಒಂದು ವೇಳೆ ಧ್ವಜವು ಕಂಬದಲ್ಲಿ ಸಿಕ್ಕಿಹಾಕಿಕೊಂಡರೆ, ಅದನ್ನು ಸರಿಪಡಿಸಲು ಮಕ್ಕಳನ್ನು ಕಂಬ ಹತ್ತಿಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಬೆಂಕಿ ಅವಘಡ ತಡೆ: ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ವಿದ್ಯುತ್ ಸೋರಿಕೆಯಾಗದಂತೆ ತಂತ್ರಜ್ಞರ ಮೂಲಕ ತಪಾಸಣೆ ನಡೆಸಬೇಕು. ವಿದ್ಯುತ್ ತಂತಿಗಳಿರುವಲ್ಲಿ ಮಳೆ ನೀರು ಸೋರದಂತೆ ಜಾಗ್ರತೆ ವಹಿಸಬೇಕು. ಗ್ಯಾಸ್ ಹಾಗೂ ಒಲೆಗಳು ಸುಸ್ಥಿತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅಡುಗೆ ತಯಾರಿಸುವ ಸ್ಥಳಕ್ಕೆ ಮಕ್ಕಳ ಪ್ರವೇಶ ನಿರ್ಬಂಧಿಸಬೇಕು.
ಪ್ರಯಾಣದ ಸುರಕ್ಷತೆ: ಮಕ್ಕಳನ್ನು ಕಾರ್ಯಕ್ರಮಗಳಿಗೆ ಕರೆದೊಯ್ಯುವ ವಾಹನಗಳ ಚಾಲಕರು ಮದ್ಯಪಾನ ಮಾಡಿರದಂತೆ ಗಮನಹರಿಸಬೇಕು. ವಾಹನ ಚಾಲಕರು ನಿಗದಿತ ವೇಗಮಿತಿಯಲ್ಲೇ ಚಲಿಸಬೇಕು ಮತ್ತು ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಹತ್ತಿಸಿಕೊಳ್ಳಬಾರದು. ಕಾರ್ಯಕ್ರಮ ನಡೆಯುವ ಸ್ಥಳದಿಂದ ಕನಿಷ್ಠ 100 ಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ (ಪಾರ್ಕಿಂಗ್) ವ್ಯವಸ್ಥೆ ಮಾಡಬೇಕು.
ಆಹಾರ ಮತ್ತು ಶುಚಿತ್ವ: ಮಕ್ಕಳಿಗೆ ನೀಡುವ ನೀರು, ಪಾನೀಯ ಮತ್ತು ಆಹಾರವು ಅತ್ಯಂತ ಶುಚಿಯಾಗಿರುವಂತೆ ನೋಡಿಕೊಳ್ಳುವುದು ಕಡ್ಡಾಯ.
ಅರಿವು ಮೂಡಿಸುವುದು: ಅನಿರೀಕ್ಷಿತ ಅವಘಡಗಳನ್ನು ಎದುರಿಸುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಹಿರಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತುರ್ತು ಪರಿಸ್ಥಿತಿ ನಿಭಾಯಿಸುವ ಕುರಿತು ತರಬೇತಿ ನೀಡಬೇಕು. ಯಾವುದೇ ಕಾರ್ಯಕ್ರಮ ಆಯೋಜಿಸುವ ಮುನ್ನ ಸ್ಥಳೀಯ ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡಕ್ಕೆ ಕಡ್ಡಾಯವಾಗಿ ಮಾಹಿತಿ ನೀಡಬೇಕು.
ಸ್ಥಳ ಪರಿಶೀಲನೆ: ಕವಾಯತು, ಪಥಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ವೇದಿಕೆ ಹಾಗೂ ಮಕ್ಕಳು ಕುಳಿತುಕೊಳ್ಳುವ ಸ್ಥಳಗಳು ಸುರಕ್ಷಿತವಾಗಿರುವ ಬಗ್ಗೆ ಆಗಿಂದಾಗ್ಗೆ ಪರಿಶೀಲನೆ ನಡೆಸಬೇಕು.
ಸ್ಥಳೀಯ ಆಡಳಿತಗಳು ಮತ್ತು ಶಾಲಾ ಮಂಡಳಿಗಳು ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.





