ಕಲಿಕೆ ಎಂಬುದನ್ನು ಒಂದು ತಪಸ್ಸಿನಂತೆ ಸಾಧಿಸಿ, ಸತತ ಪ್ರತಿ ಪರೀಕ್ಷೆಯಲ್ಲೂ ಅದ್ಭುತ ರಾಂಕ್ ಗಳಿಸಿರುವ ರಮ್ಯಶ್ರೀ ಪಾದೇಬೆಟ್ಟು ಇಂದಿನ ಯುವ ವಿದ್ಯಾರ್ಥಿಗಳಿಗೆ ಆದರ್ಶ ದಾರಿದೀಪ.....!
ಉಡುಪಿ ತಾಲ್ಲೂಕು ಪಡುಬಿದ್ರೆ ಸಮೀಪ ಪಾದೇಬೆಟ್ಟು ಎಂಬ ಪುಟ್ಟ ಗ್ರಾಮದಲ್ಲಿ ರಮೇಶ್ ರಾವ್ ಹಾಗೂ ಮೀರಾ ದಂಪತಿಯರ ಸುಪುತ್ರಿಯಾಗಿ ಜನಿಸಿದ ಕು. ರಮ್ಯಶ್ರೀ ತದನಂತರ ಸೂರತ್ಕಲ್ ಸಮೀಪ ಹೊಸಬೆಟ್ಟು ಗ್ರಾಮಕ್ಕೆ ಬಂದು ಮನೆ ಹತ್ತಿರವೇ ಇರುವ ಸೂರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು.
ಪ್ರಾಥಮಿಕ ವಿದ್ಯಾಭ್ಯಾಸ
ತನ್ನ ಪ್ರೌಡ ಶಾಲಾ ವಿದ್ಯಾಭ್ಯಾಸವನ್ನು ಅದೇ ಶಾಲೆಯಲ್ಲಿ ಮುಗಿಸಿದರು. ಸುವರ್ಣ ಮಹೋತ್ಸವ ಆಚರಿಸುವ ವಿದ್ಯಾದಾಯಿನಿ ಸಂಘಕ್ಕೆ (2015-26 ವಿದ್ಯಾದಾಯಿನಿ ಸಂಘದ ಸುವರ್ಣ ಮಹೋತ್ಸವ ವರ್ಷ) ತನ್ನ ಕೊಡುಗೆ ನೀಡಬೇಕೆಂಬ ಛಲದೊಂದಿಗೆ ಹತ್ತನೇ ತರಗತಿಯ ಪರೀಕ್ಷೆ ಬರೆದ ಈ ಬಾಲಕಿ ರಾಜ್ಯದಲ್ಲಿ ತೃತೀಯ ರಾಂಕ್ ಹೋಲ್ಡರ್ ಆಗಿ ಹೊರಹೊಮ್ಮಿದರು. ಹತ್ತನೇ ತರಗತಿಯಲ್ಲಿ 625 ಅಂಕಗಳಲ್ಲಿ 623 ಅಂಕ ಗಳಿಸಿದರು. ಮಂಗಳೂರು ತಾಲ್ಲೂಕಿಗೆ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಹಾಗೂ ಕರ್ನಾಟಕ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿ, ತಾನು ಕಲಿತ ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದರು.
ಯಾವುದೇ ಒಂದು ಟ್ಯೂಷನ್ ಸಂಸ್ಥೆಗೆ ಹೋಗದೆ ಇಷ್ಟು ಅಂಕ ಗಳಿಸಿದ್ದು ಪವಾಡವೇ ಸರಿ. ರಾಂಕ್ ಬರಲು ಮಂಗಳೂರು ಉಡುಪಿಯಂತಹ ದೊಡ್ಡ ನಗರಗಳ ಶಾಲೆಗೇ ಹೋಗಬೇಕು, ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಟ್ಯೂಷನ್ ಪಡೆದರೆ ಮಾತ್ರ ರಾಂಕ್ ಸಾಧ್ಯ ಎಂಬ ಮಾತು ಸುಳ್ಳು ಎನ್ನುವುದನ್ನು ಸಾಬೀತು ಪಡಿಸಿದರು. ಅವರ ಈ ಸಾಧನೆಗೆ ನಗರದ ಹಾಗೂ ಸುತ್ತಮುತ್ತಲಿನ ಹಲವಾರು ಸಂಘ ಸಂಸ್ಥೆಗಳು, ರೋಟರಿ, ಲಯನ್ಸ್ ನಂತಹ ಮಹಾನ್ ಸಂಸ್ಥೆಗಳು ತಮ್ಮಲ್ಲಿಗೆ ಕರೆಸಿ ಸನ್ಮಾನಿಸಿದರು. ಆಕಾಶವಾಣಿ ಮಂಗಳೂರು, ಟಿವಿ ಖಾಸಗಿ ಚಾನೆಲ್ ನವರು ಇವರನ್ನು ಸಂದರ್ಶಿಸಿದ್ದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ.
ಕಾಲೇಜಿನ ಸೋಪಾನ ಏರಿದಾಗ.....
ಎಸ್.ಎಸ್.ಎಲ್.ಸಿ. ನಂತರ ಮುಂದೇನು ಎನ್ನುವ ಪ್ರಶ್ನೆಗೆ ತಾನೇ ಉತ್ತರ ಹುಡುಕಿ ತನ್ನ ಇಚ್ಛೆಯಂತೆ ವಾಣಿಜ್ಯ ವಿಭಾಗವನ್ನು ಆರಿಸಿ ಮನೆ ಹತ್ತಿರವೇ ಇದ್ದ ಗೋವಿಂದದಾಸ ಪಿ.ಯು. ಕಾಲೇಜಿಗೆ ಸೇರಿದರು. ಅಲ್ಲಿಯೂ ಹಲವಾರು ಕಾಲೇಜು ಹಾಗೂ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದರು. ಅವರ ಹಲವಾರು ಲೇಖನಗಳು ಕಾಲೇಜಿನ ವಾರ್ಷಿಕ `ನವ್ಯ ದಿಗಂತ' ಪುಸ್ತಕದಲ್ಲಿ ಪ್ರಕಟಗೊಂಡಿದೆ. ನಾಡಿನ ಹೆಸರಾಂತ ಕೆಲವು ವಾರಪತ್ರಿಕೆಗಳಲ್ಲೂ ಇವರ ಬರಹಗಳು ಪ್ರಕಟಗೊಂಡಿವೆ.
2017-18ರ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರಾಂಕ್ ಗಳಿಸಿ ಮತ್ತೊಮ್ಮೆ ತನ್ನ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದರು. ಪಿಯುಸಿ ಪರೀಕ್ಷೆಯ ಆರು ವಿಷಯಗಳಲ್ಲಿ ಇವರು ಐದರಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ಇಂಗ್ಲಿಷ್ ನಲ್ಲಿ 91 ಅಂಕ ಗಳಿಸಿ ಮತ್ತೊಮ್ಮೆ ಇವರು ಎಲ್ಲರ ಪ್ರಶಂಸೆಗೆ ಪಾತ್ರರಾದರು.





