ರಾಧಾ : ಏನ್ರಿ…. ನಾಳೆ ನೆಂಟರು ಬರ್ತಿದ್ದಾರೆ, ಆದರೆ ಮನೆಯಲ್ಲಿ ಬೇಳೆ ಬಿಟ್ಟರೆ ಏನೂ ಇಲ್ಲ.
ಮೋಹನ್ : ಅಷ್ಟೇ ತಾನೇ? ಅತಿಥಿಗಳು ಬಂದು ಅರ್ಧ ಗಂಟೆ ಆಗುವಷ್ಟರಲ್ಲಿ ನೀನು ಅಡುಗೆಮನೆಯಲ್ಲಿ 1 ಪಾತ್ರೆ ಬೀಳಿಸಿ `ಅಯ್ಯೋ!’ ಅನ್ನು. ಏನಾಯ್ತು ಅಂತ ನಾನು ಕೇಳಿದಾಗ, `ಛೇ….ವೆಜಿಟೆಬಲ್ ಕುರ್ಮ ಪೂರ್ತಿ ಚೆಲ್ಲಿ ಹೋಯ್ತು,’ ಅನ್ನು. ಆಮೇಲೆ ಸ್ವಲ್ಪ ಹೊತ್ತಿಗೆ ಇನ್ನೊಂದು ಪಾತ್ರೆ ಬೀಳಿಸು. ಏನಾಯ್ತು ಅಂತ ಕೇಳಿದಾಗ, `ಘೀ ರೈಸ್ ಬಿದ್ದು ಚೆಲ್ಲಿಹೋಯ್ತು,’ ಅನ್ನು. ಆಗ ನಾನು `ಸರಿ, ಅನ್ನ ಬೇಳೆ ಸಾರು ತಗೊಂಬಾ,’ ಅಂತೀನಿ. ಆಯ್ತಾ? ಹೇಗೋ ಮ್ಯಾನೇಜ್ ಮಾಡೋಣ.
ಮರೆಗುಳಿ ಸ್ವಭಾವದ ರಾಧಾ ಏನು ಮಾಡಿಬಿಡ್ತಾಳೋ ಎಂದು ಮೋಹನನಿಗೆ ಅಂಜಿಕೆ ಇತ್ತು. ಅತಿಥಿಗಳು ಬಂದ ನಂತರ 2 ಸಲ ಪಾತ್ರೆ ಬಿದ್ದು, ಮೋಹನ್ ಪ್ರಶ್ನೆ ಕೇಳಿದ್ದಾಯ್ತು. ಸ್ವಲ್ಪ ಹೊತ್ತಿನ ನಂತರ 3ನೇ ಪಾತ್ರೆಯೂ ಬೀಳಬೇಕೇ!
ಮೋಹನ್ : ಈಗೇನೇ ಆಯ್ತು?
ರಾಧಾ : ಈಗ ನಿಜವಾಗ್ಲೂ ಸಾರಿನ ಪಾತ್ರೆ ಬಿದ್ದುಹೊಯ್ತು!
ಸೆಕೆಂಡ್ ಶಿಫ್ಟ್ ಕೆಲಸ ಮುಗಿಸಿಕೊಂಡು ಪ್ರಸನ್ನ ಸೈಕಲ್ ಮೇಲೆ ಮನೆಗೆ ಹೋಗುತ್ತಿದ್ದ. ಆ ದಿನ ಸಂಬಳ ಬಂದಿತ್ತು. ಖುಷಿಯಲ್ಲಿ ಹಾಡುತ್ತಾ ಹೊರಟವನನ್ನು ರಾತ್ರಿ 11 ಗಂಟೆಯಲ್ಲಿ ಕಳ್ಳನೊಬ್ಬ ಅಡ್ಡಗಟ್ಟಿದ. ಇವನಿಗೆ ಭಾರಿ ಚೂರಿ ತೋರಿಸುತ್ತಾ ಕಳ್ಳ ಹೇಳಿದ, “ಮರ್ಯಾದೆಯಾಗಿ ನಿನ್ನ ಜೇಬಿನಲ್ಲಿರುವ ಹಣ ಕೊಡು…. ಇಲ್ಲದಿದ್ದರೆ….”
“ಅಯ್ಯೋ ಹಾಗೆ ಮಾಡಬೇಡಪ್ಪ…. ಹಣ ಇಲ್ಲದೆ ಮನೆಗೆ ಹೋದರೆ ನನ್ನ ಹೆಂಡತಿ ನನ್ನನ್ನು ಅಡ್ಡಡ್ಡ ನುಂಗಿಬಿಡ್ತಾಳೆ….” ಎಂದ ಪ್ರಸನ್ನ.
“ಈಗ ಏನೂ ಸಂಪಾದಿಸದೆ ನಿನ್ನ ಹಾಗೆ ಬಿಟ್ಟರೆ, ನನ್ನ ಹೆಂಡತಿ ಮಾತ್ರ ನನ್ನನ್ನು ಸುಮ್ಮನೆ ಬಿಟ್ಟುಬಿಡ್ತಾಳಾ?” ಎಂದ ಆ ಅಸಹಾಯಕ ಕಳ್ಳ.
ವರುಣ್ : ನಾನು ಯಾವ ಕೆಲಸ ಮಾಡಲು ಹೋದರೂ ನನ್ನ ಹೆಂಡತಿ ಮಧ್ಯದಲ್ಲಿ ಅಡ್ಡ ಬರ್ತಾಳೆ.
ಕಿರಣ್ : ಯಾವುದಕ್ಕೂ ಒಂದು ಸಲ ಬುಲ್ಡೋಝರ್ ಓಡಿಸಿ ನೋಡು, ಆಗ ಈ ದುರಭ್ಯಾಸ ಬಿಡಬಹುದು.
ಪತ್ನಿ : ಕಳೆದ ವರ್ಷ ನನ್ನ ಹುಟ್ಟಿದ ಹಬ್ಬಕ್ಕೆ ಕಬ್ಬಿಣದ ಮಂಚವನ್ನು ಉಡುಗೊರೆಯಾಗಿ ಕೊಟ್ಟಿದ್ದಿರಿ, ಈ ಸಲ ಏನು ಕೊಡ್ತೀರಿ?
ಪತಿ : ಈ ಸಲ ಅದಕ್ಕೆ ಕರೆಂಟ್ ಕೊಟ್ಟುಬಿಡೀ ಅಂತ ನೋಡ್ತಿದ್ದೀನಿ.
ಸುರೇಶ್ : ಯಾರಿಗಾದರೂ ಕೆಟ್ಟ ಕಾಲ ಬಂದಾಗ, ಅವರ ಮನೆಯವರೆಲ್ಲ ಖಂಡಿತಾ ಅವರ ಹಿಂದೆ ನಿಲ್ಲುತ್ತಾರೆ.
ಸತೀಶ್ : ಯಾವುದನ್ನು ಆಧರಿಸಿ ಹೀಗೆ ಹೇಳುತ್ತಿದ್ದೀಯಾ?
ಸುರೇಶ್ : ನಂಬಿಕೆ ಇಲ್ಲ ಅಂದ್ರೆ ಯಾರದಾದ್ರೂ ಮದುವೆ ಫೋಟೋಗಳನ್ನು ನೋಡು.
ಒಮ್ಮೆ ಶ್ರೀಮಂತೆ ಅರವಿಂದಮ್ಮ ತಮ್ಮ ಮೂವರು ಅಳಿಯಂದಿರಲ್ಲಿ ಯಾರು ತಮ್ಮನ್ನು ಹೆಚ್ಚು ಆದರಿಸಿ, ಗೌರವಿಸುತ್ತಾರೆ ಎಂದು ತಿಳಿಯಲು ಬಯಸಿದರು. ಇದಕ್ಕಾಗಿ ಆಕೆ ಹಿರಿಯ ಅಳಿಯ ರಾಜೇಶನ ಎದುರು ಬೇಕುಬೇಕೆಂದೇ ಕಾಲು ಜಾರಿ ನದಿಗೆ ಬಿದ್ದುಬಿಟ್ಟರು. ಇದನ್ನು ನೋಡಿ ರಾಜೇಶ್ ಹಿಂದುಮುಂದು ಯೋಚಿಸದೆ ಕೂಡಲೇ ತಾನೂ ನದಿಗೆ ಬಿದ್ದು ಅತ್ತೆಮ್ಮನನ್ನು ಕಾಪಾಡಿದ. ಮಾರನೇ ದಿನ ರಾಜೇಶ್ ಮನೆ ಮುಂದೆ ಒಂದು ಹೊಸ ಹೋಂಡಾಸಿಟಿ ಕಾರು ನಿಂತಿತ್ತು. ಅದರ ಕನ್ನಡಿಯಲ್ಲಿ ಹೀಗೊಂದು ಸ್ಟಿಕರ್ ಸಿಗಿಸಲಾಗಿತ್ತು. `ಥ್ಯಾಂಕ್ಸ್, ಇದು ನಿನ್ನ ಅತ್ತೆಯ ಜೀವ ಉಳಿಸಿದ್ದಕ್ಕೆ ಪ್ರೀತಿಯ ಉಡುಗೊರೆ.’
ಅರವಿಂದಮ್ಮ ಈ ಬಾರಿ ತಮ್ಮ ಎರಡನೇ ಅಳಿಯ ಸುರೇಶನೆದುರೂ ಸಹ ಇದೇ ಡ್ರಾಮಾ ಆಡಿದರು. ಸುರೇಶನೂ ಅತ್ತೆಮ್ಮನನ್ನು ಬದುಕಿಸಿಕೊಂಡ. ಮಾರನೇ ದಿನ ಅವನ ಮನೆಯ ಮುಂದೆ ಹೊಸ ಟೊಯೋಟಾ ಕಾರು ನಿಂತಿತ್ತು. ಅದರ ಕನ್ನಡಿಗೆ ಸಿಗಿಸಿದ ಸ್ಟಿಕರ್‌ನಲ್ಲಿ, `ಥ್ಯಾಂಕ್ಸ್, ನಿನ್ನ ಅತ್ತೆಯಿಂದ ಪ್ರೀತಿಯ ಆಶೀರ್ವಾದಗಳೊಂದಿಗೆ,’ ಎಂದಿತ್ತು.
ಈಗ ಮೂರನೇ ಅಳಿಯ ಮಹೇಶನನ್ನೂ ಪರೀಕ್ಷಿಸಿಯೇ ಬಿಡೋಣ ಎಂದು ಆಕೆ ನಿರ್ಧರಿಸಿದರು. ಆದರೆ ನದಿಗೆ ಬಿದ್ದ ಅತ್ತೆ ಮುಳುಗುತ್ತಿದ್ದಾರೆ ಎಂದು ಅರಿವಾದರೂ ಮಹೇಶ ಆಕೆಯನ್ನು ರಕ್ಷಿಸುವ ಯಾವ ಪ್ರಯತ್ನವನ್ನೂ ಮಾಡಲೇ ಇಲ್ಲ. `ಆಹಾ, ಈ ದಿನಕ್ಕಾಗಿ ಎಷ್ಟು ಕಾದಿದ್ದೆ…. ಅಂತೂ ನನ್ನ ಆಸೆ ಈಡೇರಿತು,’ ಎಂದು ಕೈ ಕೊಡವುತ್ತಾ ಅವನು ಮನೆಗೆ ಹೋಗಿ ಸೇರಿದ. ಪಾಪ, ಅರವಿಂದಮ್ಮ ಅಂತಿಮಯಾತ್ರೆಗೆ ಹೊರಟೇಬಿಟ್ಟರು.
ಮಾರನೇ ದಿನ ಮಹೇಶ ಜಾಗಿಂಗ್‌ಗೆಂದು ಮನೆಯ ಬಾಗಿಲು ತೆರೆದು ನೋಡುತ್ತಾನೆ, ಅದ್ಭುತವಾದ ಹೊಸ ಮರ್ಸಿಡಿಸ್ ಕಾರೊಂದು ಲಕಲಕ ಹೊಳೆಯುತ್ತಾ ನಿಂತಿತ್ತು. ಅದರ ಕನ್ನಡಿಯಲ್ಲಿ ಸಿಗಿಸಿದ್ದ ಸ್ಟಿಕರ್‌ನಲ್ಲಿ, `ಥ್ಯಾಂಕ್ಸ್, ನಿನ್ನ ಮಾವನ ಪ್ರೀತಿ ಪೂರ್ವಕ ಆಶೀರ್ವಾದಗಳೊಂದಿಗೆ,’ ಎಂದು ಬರೆದಿರುವುದೇ?
ಪತಿ : ಡಿಯರ್, ಇವತ್ತು ಎಂಥ ಟೀ ಮಾಡಿಕೊಡು ಅಂದ್ರೆ, ಅದನ್ನು ಕುಡಿದು ತನುಮನ ಉಲ್ಲಾಸಗೊಳ್ಳಬೇಕು, ದೇಹ ಬಳ್ಳಿಯಂತೆ ಬಳುಕುತ್ತಿರಬೇಕು, ಒಟ್ಟಾರೆ….
ಪತ್ನಿ : ಸಾಕು ಸಾಕು…. ನೀವು ತಂದಿರೋ ಈ ನೀರು ಹಾಲಿಗೆ ಅದು ಬೇರೆ ಕೇಡು, ಇದು ಹಸುವಿನ ಹಾವೇ ಹೊರತು ಹಾವಿನ ಹಾಲಲ್ಲ!
ಪ್ರಿಯಾ ಹೊಸದಾಗಿ ಪರ್ಸನಲ್ ಸೆಕ್ರೆಟರಿ ಕೆಲಸಕ್ಕೆ ಸೇರಿದ್ದಳು. ಹೇಗಾದರೂ ಬಾಸ್‌ನ ಕೃಪಾಕಟಾಕ್ಷ ಗಿಟ್ಟಿಸಿ, ಸಂಬಳ ಹೆಚ್ಚಿಸಿಕೊಳ್ಳಲು ಬಯಸಿದ್ದಳು.
ಒಮ್ಮೆ ಆಕೆ ಯಾವುದೋ ಕಾರಣಕ್ಕೆ ಬಾಸ್ ಚೇಂಬರ್‌ನಿಂದ ದುಮುಗುಡುತ್ತಾ ಹೊರಗೆ ಬಂದಳು. ಅದನ್ನು ಗಮನಿಸಿದ ಸಹೋದ್ಯೋಗಿ ಆಶಾ ವಿಚಾರಿಸಿದಳು.
ಆಶಾ : ಏನಾಯ್ತು? ಯಾಕೆ ಹಾಗೆ ಸಿಡುಕುತ್ತಿದ್ದಿ?
ಪ್ರಿಯಾ : ನಾನು ಬಾಸ್ ಚೇಬರ್ ಒಳಗೆ ಹೋದಾಗ ಅವರು ಪ್ರೀತಿಯಿಂದ ನನ್ನನ್ನು ಎದುರಿನ ಕುರ್ಚಿಯಲ್ಲಿ ಕೂರಲು ಹೇಳಿದರು.
ಆಶಾ : ಹ್ಞೂಂ…. ಆಮೇಲೆ…..
ಪ್ರಿಯಾ : ನೀನು ಇವತ್ತು ಸಂಜೆ ಫ್ರೀ ಆಗಿದ್ದೀಯಾ? ಎಂದು ಪ್ರೀತಿಯಿಂದ ವಿಚಾರಿಸಿದರು.
ಆಶಾ : ಹ್ಞೂಂ…..ಆಮೇಲೆ…..
ಪ್ರಿಯಾ : ನಾನಂತೂ ಹೋಳಿಗೆ ಜಾರಿ ತುಪ್ಪಕ್ಕೆ ಬಿತ್ತು ಅಂತ ಖುಷಿಯಾಗಿ ಹೌದೆಂದು ತಲೆ ಆಡಿಸಿದೆ…..
ಆಶಾ : ಹ್ಞೂಂ….. ಆಮೇಲೆ….
ಪ್ರಿಯಾ : ಆಮೇಲೇನು ಬಂತು ನನ್ನ ಕರ್ಮ…. ಹಾಗಿದ್ದರೆ ಇದನ್ನೆಲ್ಲ ನೀಟಾಗಿ ಟೈಪ್ ಮಾಡಿ ಸಂಜೆ ಏಳರೊಳಗೆ ನನಗೆ ಇಮೇಲ್ ಮಾಡಿಬಿಡು ಅಂತ 25 ಪತ್ರ ಕೊಟ್ಟಿದ್ದಾರೆ……
ಮರಣ ಶಯ್ಯೆಯಲ್ಲಿದ್ದ ತನ್ನ ಹೆಂಡತಿಯನ್ನು ಪತಿರಾಯ ಕೇಳಿದ, “ನಿನ್ನ ಕೊನೆಯ ಆಸೆ ಏನಾದರೂ ಇದೆಯೇ? ನೆರವೇರಿಸಲು ಪ್ರಯತ್ನಿಸುವೆ.”
ಅದಕ್ಕೆ ಆಕೆ ದೃಢವಾಗಿ, “ನಾನು ತೀರಿಕೊಂಡ ನಂತರ ನನ್ನ ಒಂದು ಬ್ಯೂಟಿಫುಲ್ ಫೋಟೋವನ್ನು ಪೇಪರ್‌ನಲ್ಲಿ ಹಾಕಿಸಿ, ಅಪ್ಪಿತಪ್ಪಿಯೂ ಅದರ ಕೆಳಗೆ ಜನನ ಮರಣದ ದಿನಾಂಕ ಮಾತ್ರ ನಮೂದಿಸಬೇಡಿ!”
ಅಮಿತ್ : ನಿನ್ನ ಹೆಂಡತಿ ನಿನ್ನನ್ನು ಬಿಟ್ಟು ಏಕೆ ಓಡಿಹೋದಳು?
ಅರುಣ್ : ಏನೋಪ್ಪ ಗೊತ್ತಿಲ್ಲ….. ನಾನು ಬಾತ್ ರೂಮಿನಲ್ಲಿ ಸ್ನಾನಕ್ಕೆ ಹೋಗಿದ್ದೆ, ಬಂದು ನೋಡ್ತೀನಿ….. ಓಡಿಹೋಗಿಬಿಟ್ಟಿದ್ದಾಳೆ!
ಅಮಿತ್ : ಛೇ….ಛೇ! ಬಹಳ ದಿನಗಳಿಂದ ನೀನು ಸ್ನಾನಕ್ಕೆ ಹೋಗಲಿ ಅಂತ ಕಾಯ್ತಿದ್ದಳೋ ಏನೋ……
ಅರುಣ್: ಅದಕ್ಕೆ ಮತ್ತೆ….. ಯಾರು ಎಷ್ಟೇ ಬೈದರೂ ನಾನು ಇಷ್ಟು ದಿನ ಸ್ನಾನಕ್ಕೇ ಹೋಗುತ್ತಿರಲಿಲ್ಲ.