ಫಿಟ್ನೆಸ್‌ಗಾಗಿ ನಾನು ಡ್ಯಾನ್ಸ್ ಗೆ ಆದ್ಯತೆ ಕೊಡುತ್ತೇನೆ ಮತ್ತು ವ್ಯಾಯಾಮ ಕೂಡ ಮಾಡುತ್ತೇನೆ. ದೀರ್ಘಕಾಲದವರೆಗೆ ಹಿಂದಿ ಚಿತ್ರಗಳಲ್ಲಿ ತಮ್ಮದೇ ಆದ ಪಡಿಯಚ್ಚು ಮೂಡಿಸಿದ ಮಾಧುರಿ ದೀಕ್ಷಿತ್‌ ತಮ್ಮ ಅದ್ಭುತ ನಗು ಹಾಗೂ ವಿಶಿಷ್ಟ ಅಭಿನಯದಿಂದ ಮನೆ ಮಾತಾಗಿದ್ದಾರೆ. ಮಾಧುರಿ ಕೇವಲ ಅಭಿನಯದಲ್ಲಷ್ಟೇ ಅಲ್ಲ, ಶಾಸ್ತ್ರೀಯ ನೃತ್ಯದಲ್ಲೂ ನೈಪುಣ್ಯತೆ ಹೊಂದಿದ್ದಾರೆ. 80 ಹಾಗೂ 90ರ ದಶಕದಲ್ಲಿ ಹಲವು ಹಿಟ್‌ ಚಿತ್ರಗಳನ್ನು ಕೊಟ್ಟಿರುವ ಅವರಿಗೆ 2008ರಲ್ಲಿ ಪದ್ಮಶ್ರೀ ಪುರಸ್ಕಾರ ಕೂಡ ಬಂದಿದೆ.

ಮುಂಬೈನ ಮರಾಠಿ ಕುಟುಂಬದಲ್ಲಿ ಜನಿಸಿದ ಮಾಧುರಿ, ತಮ್ಮ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡದ್ದು ವೃತ್ತಿಯಲ್ಲಿ ವೈದ್ಯರಾದ ಶ್ರೀರಾಮ್ ನೆನೆ ಅವರನ್ನು. ಮದುವೆಯ ಬಳಿಕ ಅವರು ಚಿತ್ರರಂಗದಿಂದ ದೂರ ಉಳಿದರು. ಅರಿನ್‌ ಹಾಗೂ ಕಿಯಾನ್‌ ಅವರ ಮಕ್ಕಳು.

2011ರಲ್ಲಿ ಮುಂಬೈಗೆ ವಾಪಸ್ಸಾದ ಅವರು ಎರಡನೇ ಇನ್ನಿಂಗ್ಸ್ ನ್ನು ಮೊದಲಿನ ರೀತಿಯಲ್ಲಿಯೇ ಆರಂಭಿಸಿದರು. ಟಿ.ವಿ. ಚಾನೆಲ್ ಒಂದರ ರಿಯಾಲಿಟಿ ಶೋಗಾಗಿ ತೀರ್ಪುಗಾರ್ತಿಯಾಗಿದ್ದರಲ್ಲದೆ, ಕೆಲವು ಜಾಹೀರಾತುಗಳಿಗಾಗಿಯೂ ನಟಿಸಿ ತಮ್ಮ ಹೊಸ ಗುರುತು ಎದ್ದುಕಾಣುವಂತೆ ಮಾಡಿದರು.

ಸದ್ಯ `ಡೇಲ್ ‌ಇಷ್ಕಿಯಾ’ ಎಂಬ ಚಲನಚಿತ್ರ ಬಿಡುಗಡೆ ಕಾಣಬೇಕಿದೆ. ಅದರಲ್ಲಿ ಅವರನ್ನು ಹೊಸ ರೂಪದಲ್ಲಿ ಕಾಣಬಹುದಾಗಿದೆ. ಚಿತ್ರದ ಪ್ರಮೋಶನ್‌ಗಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಕಪ್ಪು ಬಣ್ಣದ ವೆಸ್ಟರ್ನ್‌ ಔಟ್‌ಫಿಟ್‌ ಧರಿಸಿದ್ದರು. ಆ ಸಮಯದಲ್ಲಿ ಅವರೊಂದಿಗೆ ನಡೆದ ಸಂದರ್ಶನದ ಕೆಲವು ವಿಶೇಷ ಸಂಗತಿಗಳು ಇಲ್ಲಿವೆ :

ಎರಡನೇ ಇನ್ನಿಂಗ್ಸ್ ನಲ್ಲಿ ನಟಿಸುವ ಅನುಭವ ಹೇಗಿತ್ತು? ಹೊಸ ಪೀಳಿಗೆಯವರೊಂದಿಗೆ ನಟಿಸಲು ಸ್ಪರ್ಧೆ ಎನಿಸುತ್ತದೆಯೇ?

ಹಾಗೇನೂ ಇಲ್ಲ. ಪ್ರತಿಯೊಬ್ಬ ಕಲಾವಿದರೂ ತಮ್ಮ ತಮ್ಮ ಪಾತ್ರ ನಿಭಾಯಿಸುತ್ತಾರೆ ಹಾಗೂ ಅದನ್ನು ಒಳ್ಳೆಯ ರೀತಿಯಲ್ಲಿ ಮಾಡಲು ಯೋಚಿಸುತ್ತಾರೆ. ನನ್ನ ಯೋಚನೆಯೂ ಇದೇ ಆಗಿದೆ. ಹೊಸ ಪೀಳಿಗೆಯವರು ಆತ್ಮವಿಶ್ವಾಸದಿಂದ ನಟಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನಾನು ಅವರನ್ನು ಪ್ರಶಂಸೆ ಮಾಡುತ್ತೇನೆ.

ನಿಮ್ಮ ಪರ್ಸನಲ್ ಹಾಗೂ ಪ್ರೊಫೆಶನಲ್ ಲೈಫ್‌ನಲ್ಲಿ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತೀರಿ?

ಇದಕ್ಕಾಗಿ ಟೈಮ್ ಮ್ಯಾನೇಜ್‌ಮೆಂಟ್‌ ಅತ್ಯವಶ್ಯಕ. ನನ್ನ ಕುಟುಂಬಕ್ಕೆ ನನ್ನ ಪ್ರಥಮ ಆದ್ಯತೆ. ಮಕ್ಕಳಿಗೆ ಯಾವಾಗ ಓದಿಸಬೇಕು, ಎಲ್ಲಿಗೆ ಕರೆದುಕೊಂಡು ಹೋಗಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತಿರುತ್ತದೆ. ಅದಕ್ಕನುಗುಣವಾಗಿಯೇ ನಾನು ನನ್ನ ಚಟುವಟಿಕೆಗಳನ್ನು ನಿರ್ಧರಿಸುತ್ತೇನೆ.

ತಾಯಿಯಾದ ಬಳಿಕ ನಿಮಗೆ ಗಂಡ, ತಾಯಿ ಹಾಗೂ ಅತ್ತೆ ಇವರಲ್ಲಿ ಯಾರ ಸಹಕಾರ ಹೆಚ್ಚಿಗೆ ದೊರೆಯಿತು?

ನನಗೆ ಎಲ್ಲರ ಸಹಕಾರ ದೊರೆಯಿತು. ಗಂಡ, ತಾಯಿ ಹಾಗೂ ಅತ್ತೆ ಇವರ ಸಹಕಾರ ಇಲ್ಲದೆ ಕೆಲಸ ಮಾಡುವುದು ಅಸಾಧ್ಯ. ಎಷ್ಟೋ ಸಲ ಅತ್ತೆಯೇ ನಮ್ಮ ಮಕ್ಕಳನ್ನು ಸಂಭಾಳಿಸಿದ್ದಾರೆ. `ನೀನು ಚಿಂತೆ ಮಾಡಬೇಡ, ನಾನು ಇವರನ್ನು ನೋಡಿಕೊಳ್ಳುತ್ತೇನೆ,’ ಎಂದು ನನಗೆ ಅತ್ತೆ ಆಗಾಗ ಹೇಳುತ್ತಿದ್ದರು. ಎಲ್ಲ ಉದ್ಯೋಗಸ್ಥ ಮಹಿಳೆಯರ ಅತ್ತೆಯರು ಹೀಗೆಯೇ ಇರಬೇಕು ಎಂದು ನಾನು ಬಯಸುತ್ತೇನೆ.

ಮುಂಬೈಗೆ ವಾಪಸ್ಸಾದ ಬಳಿಕ ಮಕ್ಕಳಿಗೆ ಇಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟವಾಯಿತಾ?

ಮೊದಮೊದಲು ಸ್ವಲ್ಪ ಕಷ್ಟವಾಯ್ತು. ನಾವೆಲ್ಲಾ ಸೆಟಲ್ ಆದ ಬಳಿಕ ಅವರಿಗೆ ಮುಂಬೈ ಹಿಡಿಸಿತು. ಈಗಂತೂ ಅವರು ಖುಷಿಯಾಗಿದ್ದಾರೆ.

ಬಾಲಿವುಡ್‌ನಲ್ಲಿ ಈಗ ಏನಾದರೂ ಬದಲಾವಣೆಯಾಗಿದೆಯೆಂದು ನಿಮಗೆ ಅನಿಸುತ್ತಾ?

ಸಾಕಷ್ಟು ಬದಲಾವಣೆಯಾಗಿದೆ. ಮೊದಲು ಕೆಲಸ ಮಾಡುವ ವಿಧಾನ ಸಾಕಷ್ಟು ವಿಭಿನ್ನವಾಗಿತ್ತು. ಈಗ ಎಲ್ಲ ರೆಡಿಮೇಡ್‌ದೊರೆಯುತ್ತೆ. ಹೀಗಾಗಿ ಅಭಿನಯಿಸಲು ಯಾವುದೇ ಕಷ್ಟವಾಗುವುದಿಲ್ಲ.

`ಡೇಲ್ ‌ಇಷ್ಕಿಯಾ’ ಚಲನಚಿತ್ರದ `ಡೇಲ್‌’ನ ಅರ್ಥ ಏನು? ಈ ಚಿತ್ರವನ್ನು ನೀವು ಹೇಗೆ ಆಯ್ಕೆ ಮಾಡಿಕೊಂಡಿರಿ?

ಇದರಲ್ಲಿ `ಡೇಲ್’ ಎಂದರೆ ಒಂದೂವರೆ ಪಟ್ಟು ಎಂದರ್ಥ. ಇದರಲ್ಲಿ ಪ್ರೀತಿ, ರೊಮ್ಯಾನ್ಸ್, ನಗು, ಆ್ಯಕ್ಷನ್‌ ಇವೆಲ್ಲ ನಿಮಗೆ ಒಂದೂವರೆ ಪಟ್ಟು ದೊರೆಯುತ್ತವೆ. ನಾನು `ಇಷ್ಕಿಯಾ’ ಚಿತ್ರ ನೋಡಿದ್ದೆ. ಅದು ನನಗೆ ಬಹಳ ಇಷ್ಟವಾಗಿತ್ತು. ಇದು ಕೂಡ ಅದೇ ರೀತಿ ಇದೆ. ಹೀಗಾಗಿ ಈ ಚಿತ್ರವನ್ನು ಒಪ್ಪಿಕೊಂಡೆ.

ನಸೀರುದ್ದೀನ್‌ ಶಾ ಜೊತೆಗೆ ಅಭಿನಯಿಸುವ ಅನುಭವ ಹೇಗಿತ್ತು?

ಅಷ್ಟೊಂದು ದೊಡ್ಡ ಕಲಾವಿದರೊಂದಿಗೆ ಅಭಿನಯಿಸಲು ಖಂಡಿತ ಇಷ್ಟವಾಗುತ್ತೆ. ಲೇಖಕರು ಬರೆದಿರುವ ಈ ಚಿತ್ರದ ಸಂಭಾಷಣೆಗಳು, ದೃಶ್ಯ ಸಂಯೋಜನೆ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ.

– ಪಿ. ವಂದನಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ