ಫಿಲ್ಮಿ ಸಂಗಾತಿ ಬೇಡ `ಮರ್ಡರ್' ಖ್ಯಾತಿಯ ಮಲ್ಲಿಕಾ ಶೆರಾವತ್
ತನ್ನ ಕೂರಲುಗಿನ ಮಾತುಗಳಿಂದ ಸದಾ ಚರ್ಚೆಯಲ್ಲಿರುತ್ತಾಳೆ. ಯಾವಾಗಮ್ಮ ನಿನ್ನ ಮದುವೆ, ಯಾರ ಜೊತೆ..... ಎಂದು ಯಾರೋ ಕೇಳಿದರಂತೆ. `ನಾನು ಮದುವೆ ಅಂತ ಮಾಡಿಕೊಂಡರೆ ಖಂಡಿತಾ ಅದು ಸಿನಿಮಾ ಮಂದಿಯನ್ನಲ್ಲ,' ಎನ್ನುತ್ತಾಳೆ.
ಬಹುಶಃ ಮಾಧುರಿ ದೀಕ್ಷಿತ್ ಹಾಗೂ ಶಿಲ್ಪಾ ಶೆಟ್ಟಿಯವರನ್ನು ನೋಡಿ ಮಲ್ಲಿಕಾಳಿಗೂ ಈ ಐಡಿಯಾ ಹೊಳೆದಿರಬಹುದೇ?
ಕಿರು ಪರದೆಯಲ್ಲಿ ಲವ್ವೋ ಲವ್ವು!
ಇತ್ತೀಚಿನ ಯಾವ ಟಿ.ವಿ. ಧಾರಾವಾಹಿ ನೋಡಿ, ಅಲ್ಲಿ ಪ್ರೀತಿ ಪ್ರೇಮಗಳ ಸುರಿಮಳೆಯೇ ಇರುತ್ತದೆ. ಟಿ.ವಿ. ಕಪಲ್ಸ್ ಪರಸ್ಪರ ನಿಕಟವರ್ತಿಗಳಾಗಲು ಎಲ್ಲಾ ಪ್ರಯತ್ನ ಮಾಡುತ್ತಿರುತ್ತಾರೆ. `ಬಡೇ ಅಚೆ ಲಗ್ತೆ ಹೈ' ಧಾರಾವಾಹಿಯಲ್ಲಿ ಸಿಡಿಮಿಗುಟ್ಟುತ್ತಲೇ ಮದುವೆಯಾದ ಪ್ರಿಯಾ ರಾಮ್ ಕಪೂರ್ ನಂತರ ಆದರ್ಶ ದಂಪತಿಗಳೆನಿಸಿದ್ದಾರೆ. 7 ಸುದೀರ್ಘ ವರ್ಷಗಳ ಕೋಮಾದ ನಂತರ ಎದ್ದ ಪ್ರಿಯಾಳಲ್ಲಿ ರಾಮ್ ಅದೇ ಹಿಂದಿನ ಪ್ರೀತಿ ಉಳಿಸಿಕೊಂಡಿದ್ದರೆ, `ಖೇಲ್ತಿ ಹೈ ಝಿಂದಗಿ ಆಂಖ್ ಮಿಚೋಲಿ'ಯಲ್ಲಿ ವಿಧವೆ ಶೃತಿಯನ್ನು ಪ್ರೇಮಿಸುವ ಸಂಜಯ್, ಅದನ್ನು ವ್ಯಕ್ತಪಡಿಸಲಾಗದೆ ಬೇರೆಲ್ಲ ವಿಧದಲ್ಲೂ ನೆರವಾಗುತ್ತಾ ಪ್ರೇಮಭಿಕ್ಷೆಗಾಗಿ ಕಾಯುತ್ತಾನೆ.
`ಸರಸ್ವತಿ ಚಂದ್ರ' ಧಾರಾವಾಹಿಯ ಸರಸ್ ಕುಮುದಾಳನ್ನು ಅವಳ ದುಷ್ಟ ಪತಿಯಿಂದ ಬಿಡಿಸಿಕೊಂಡು ಬಂದು ಕಾಪಾಡಿದ್ದರೂ, ತನ್ನ ಪ್ರಣಯ ನಿವೇದನೆ ಮಾಡಿಕೊಳ್ಳಲಾಗದೆ ತುಡಿಯುತ್ತಾನೆ. `ಜೋಧಾ ಅಕ್ಬರ್' ಧಾರಾವಾಹಿಯಲ್ಲಂತೂ ಜೋಧಾಳನ್ನು ತನ್ನ ಕೋಣೆಯಲ್ಲೇ ಉಳಿಸಿಕೊಳ್ಳಲು ಯತ್ನಿಸಿದರೂ, ಜೋಧಾ ಅಂತರ ಕಾಪಾಡಿಕೊಂಡು ತನ್ನ ಪ್ರೀತಿ ಹಂಚುತ್ತಾಳೆ. ಒಟ್ಟಾರೆ ಪ್ರೇಕ್ಷಕರಿಗೆ ಉತ್ತಮ ಲವ್ ಟ್ರೈನಿಂಗ್ ಲಭಿಸುತ್ತಿದೆ.
ಸ್ಥೂಲತೆಯಿಂದ ತಪ್ಪುತ್ತಿದ್ದ ಅವಕಾಶಗಳು
`ಉತರನ್' ಧಾರಾವಾಹಿಯಿಂದ ಎಲ್ಲರ ಮನೆಮಾತಾಗಿರುವ ತಪಸ್ಯಾ ಅಥವಾ ದಿವ್ಯಾ ದೇಸಾಯಿ ಒಂದು ಕಾಲದಲ್ಲಿ ಮಹಾ ಡುಮ್ಮಿ ಆಗಿದ್ದಳಂತೆ. ನಾನು ಜನಪ್ರಿಯತೆಯ ಈ ತುದಿಗೇರುತ್ತೇನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎನ್ನುವ ದಿವ್ಯಾ, ತನ್ನ ಕೆರಿಯರ್‌ನಲ್ಲಿ ಹಲವಾರು ಏರಿಳಿತಗಳನ್ನು ಕಂಡಳು. `ಜನ ನನ್ನ ಆ್ಯಕ್ಟಿಂಗ್ ಹಾಗೂ ಅಂದ ಕಂಡು ಹೊಗಳುತ್ತಿದ್ದರು ನಿಜ, ಆದರೆ ಟಿ.ವಿ.ಗೆ ಬಂದ ಹೊಸದರಲ್ಲಿ ನಾನು ಬಹಳ ಸ್ಥೂಲಳಾಗಿದ್ದೆ. ಈ ಕಾರಣದಿಂದ ನಾನು ಹಲವಾರು ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದೆ. ಅನೇಕ ಸಲ ಮುಖದ ಮೇಲೆ ಹೊಡೆದಂತೆ ರಿಜೆಕ್ಟ್ ಮಾಡಿಬಿಡುತ್ತಿದ್ದರು. ನನ್ನ ದೃಢ ಸಂಕಲ್ಪದಿಂದ ನಾನು ಪ್ರಯತ್ನಪಟ್ಟು ತೆಳುಕಾಯ ಹೊಂದಿದೆ, ಸ್ವಪ್ರತಿಭೆಯಿಂದ ಹೊಸ ಹೊಸ ಅವಕಾಶ ಪಡೆಯುತ್ತಿದ್ದೇನೆ,' ಎನ್ನುತ್ತಾಳೆ ದಿವ್ಯಾ.
ಡ್ಯಾನ್ಸ್ ಪೈಪೋಟಿಯ ನಚ್ ಬಲಿಯೇ
ಸಬ್ ಟಿ.ವಿ.ಯ `ಎಫ್.ಐ.ಆರ್' ಧಾರಾವಾಹಿಯಲ್ಲಿ ಸದಾ ನಕ್ಕು ನಲಿಸುವ ಕೀಕು ಪಾತ್ರಧಾರಿಯನ್ನು ಯಾರೂ ಮರೆಯಲಾರರು. ಇದೀಗ ಕೀಕು ತನ್ನ ಪತ್ನಿ ಪ್ರಿಯಾಂಕಾ ಜೊತೆ `ನಚ್ ಬಲಿಯೇ ಸೀಸನ್-6' ನಲ್ಲಿ ಕುಣಿದು ಕುಪ್ಪಳಿಸಲಿದ್ದಾನೆ. ಇವನ ಜೊತೆ ರಾಮಾಯಣದ ಸೀತಾರಾಮ ಪಾತ್ರಧಾರಿಗಳಾದ ದಿಬೀನಾ ಬ್ಯಾನರ್ಜಿ ಗುರುಮೀತ್ ಚೌಧರಿ ಹಾಗೂ ಕನ್ನಿಕಾ ಮಹೇಶ್ವರಿ ಅಂಕುರ್ ಘೈ ದಂಪತಿಗಳೂ ಸಹ ಭಾಗವಹಿಸುತ್ತಿದ್ದಾರೆ.
ಅಮೃತಾಳ ಸಿನಿ ಸಮಾಜ ಸೇವೆ
2002ರಲ್ಲಿ `ಅಬ್ ಕೆ ಬರಸ್' ಚಿತ್ರದಿಂದ ಬಾಲಿವುಡ್‌ಗೆ ಕಾಲಿರಿಸಿದ ಅಮೃತಾರಾವ್, ತನ್ನ ಮುಂದಿನ `ಸಿಂಗಲ್ ಸಾಬ್ ದಿ ಗ್ರೇಟ್' ಚಿತ್ರದಲ್ಲಿ ಪತ್ರಕರ್ತೆಯಾಗಿ ಮಿಂಚುತ್ತಿದ್ದಾಳೆ. `ಸತ್ಯಾಗ್ರಹ್' ತರಹವೇ ಈ ಚಿತ್ರ ಸಿಸ್ಟಮ್ ಬದಲಾಯಿಸುವ ಕಥಾಹಂದರ ಹೊಂದಿದೆ. ತನ್ನ ಪಾತ್ರದ ಕುರಿತು ಹೇಳುತ್ತಾ ಅಮೃತಾ, `ಇದರಲ್ಲಿ ನನ್ನದು ಬಲು ಶಾರ್ಪ್ ಆದ ರಿಪೋರ್ಟರ್ ಪಾತ್ರ. ಭ್ರಷ್ಟಾಚಾರದ ನಿರ್ಮೂಲನೆಗೆ ಹೋರಾಡುವುದಕ್ಕಾಗಿ ಅಂಥ ದುಷ್ಟ ರಾಜಕಾರಣಿಗಳ ಬಣ್ಣ ಬಯಲು ಮಾಡುತ್ತೇನೆ. ಕರ್ನಾಟಕ ನನ್ನ ತವರೂರು. ಹಿಂದಿ, ಕೊಂಕಣಿ ಬರುತ್ತದೆ. ಆದರೂ ಸದ್ಯಕ್ಕೆ ಹಿಂದಿಯಲ್ಲಿ ಬೇರೆ ಕಲಾವಿದರು ನನಗಾಗಿ ಡಬ್ಬಿಂಗ್ ಮಾಡುತ್ತಾರೆ. ಮಹೇಶ್ ಬಾಬು ಜೊತೆ ತೆಲುಗಿನ `ವಕ್ಕಡೆ' ಚಿತ್ರದಲ್ಲಿ ನಟಿಸಿದ್ದೆ. ಭಾಷಾ ಸಮಸ್ಯೆ ಕಾರಣ ತೆಲುಗು, ತಮಿಳಿನ ಆಫರ್ಸ್ ಹೆಚ್ಚು ಒಪ್ಪುತ್ತಿಲ್ಲ,' ಎನ್ನುತ್ತಾಳೆ.