ಕೂಚ್ಚುಪುಡಿ ನೃತ್ಯ ಪ್ರಕಾರ ಆಂಧ್ರ ಪ್ರದೇಶದಲ್ಲಿ ಬಹಳ ಪ್ರಸಿದ್ಧ. ಕರ್ನಾಟಕದವರೊಬ್ಬರು ಈ ಕಲೆಯಲ್ಲಿ ಅಗಾಧ ಸಾಧನೆ ಮಾಡಿ ಅನೇಕ ಪ್ರಶಸ್ತಿಗಳಿಗೆ ಭಾಜನರಾದರೆಂದರೆ ವೈಜಯಂತಿ ಕಾಶಿ. ಆ ನೃತ್ಯ ಪ್ರಕಾರದ ಬಗ್ಗೆ ಸಂಶೋಧನೆ ಕೈಗೊಂಡು ಕೇಂದ್ರ ಸರ್ಕಾರದಿಂದ ಫೆಲೋಶಿಪ್‌ ಪಡೆದ ಕರ್ನಾಟಕದ ಪ್ರಥಮ ಮಹಿಳಾ ಕಲಾವಿದೆ ಎಂಬ ಖ್ಯಾತಿಯೂ ಇವರಿಗೆ ಸಲ್ಲುತ್ತದೆ.

ನೃತ್ಯಕ್ಕೆ ಪಾದಾರ್ಪಣೆ

ವೈಜಯಂತಿ ಅವರು `ಕರ್ನಾಟಕ ರತ್ನ’ ಗುಬ್ಬಿ ವೀರಣ್ಣ ಅವರ ಮೊಮ್ಮಗಳು. ಇನ್ನೊಂದೆಡೆ ಕರ್ನಾಟಕದ ಮೊದಲ ಐಎಎಸ್ ಅಧಿಕಾರಿಯಾಗಿದ್ದ ಜೆ.ಬಿ. ಮಲ್ಲಾರಾಧ್ಯ ಅವರಿಗೂ ಮೊಮ್ಮಗಳು. ಒಂದೆಡೆ ಕಲೆ, ಇನ್ನೊಂದೆಡೆ ಶಿಸ್ತು ಅವರಿಗೆ ಹುಟ್ಟಿನಿಂದಲೇ ಬಂದಿತ್ತೆನ್ನಬಹುದು. ವೈಜಯಂತಿಯವರ ತಂದೆ  ಜೆ.ಎಂ. ವಿಶ್ವನಾಥ್‌, ತಾಯಿ ಜಿ.ವಿ. ಗಿರಿಜಮ್ಮ. ತಂದೆ ದಕ್ಷಿಣದ ಖ್ಯಾತ ತಾರೆ ವೈಜಯಂತಿ ಮಾಲಾ ಅವರ ಅಪ್ಪಟ ಅಭಿಮಾನಿ. ತಮ್ಮ ಮಗಳು ಕೂಡ ವೈಜಯಂತಿ ಮಾಲಾರ ಹಾಗೆ ದೊಡ್ಡ ನೃತ್ಯ ಕಲಾವಿದೆ ಆಗಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ತಾಯಿ ಗಿರಿಜಮ್ಮ ಗುಬ್ಬಿ ವೀರಣ್ಣನವರ ಮಗಳಾದರೂ ಯಾವುದೇ ನಾಟಕದಲ್ಲಿ ಅಭಿನಯಿಸಿರಲಿಲ್ಲ. ಆದರೆ ಅವರಿಗೆ ಅಭಿನಯದ ಬಗ್ಗೆ ತುಂಬಾ ಆಸಕ್ತಿ ಇತ್ತು. ಇಂತಹ ಕಲಾಪೋಷಕರ ಕುಟುಂಬದಲ್ಲಿ ಬೆಳೆದ ವೈಜಯಂತಿಯವರಿಗೆ ಆರನೇ ವರ್ಷದಲ್ಲಿ ತುಮಕೂರಿನ ಕೆ.ಎ. ರಾಮಣ್ಣ ಅವರು ಭರತನಾಟ್ಯದ ಶಿಕ್ಷಣ ನೀಡಲು ಇವರ ಮನೆಗೆ ಬರುತ್ತಿದ್ದರು. ಆದರೆ ತುಂಟ ವೈಜಯಂತಿಗೆ ಆಗ ನೃತ್ಯದ ಬಗ್ಗೆ ಎಳ್ಳಷ್ಟೂ ಆಸಕ್ತಿಯೇ ಇರಲಿಲ್ಲ. ಆಕೆ ಗುರುಗಳು ಬರುತ್ತಿದ್ದಾರೆಂದು ಗೊತ್ತಾದ ತಕ್ಷಣ ಅಲ್ಲಿ ಇಲ್ಲಿ ಅಡಗಿ ಕೂತುಕೊಳ್ಳುತ್ತಿದ್ದಳು. ಮರ ಕೂಡ ಹತ್ತಿ ಕೂತಿರುತ್ತಿದ್ದಳು. ಆದರೆ ಗುರುಗಳು ಮಾತ್ರ ಆಕೆಗೆ ತಾಳ್ಮೆಯಿಂದಲೇ ಭರತನಾಟ್ಯದ ಶಿಕ್ಷಣ ನೀಡುತ್ತಿದ್ದರು. ಹೀಗೆ ಕ್ರಮೇಣ ಅವರಲ್ಲಿ ಅದರ ಬಗ್ಗೆ ಆಸಕ್ತಿ ಮೊಳೆಯಿತು.

ರಂಗಪ್ರವೇಶ

ಕೆಲವು ವರ್ಷ ಭರತನಾಟ್ಯ ಕಲಿತು ಅವರು ಅದನ್ನು ಬಿಟ್ಟುಬಿಟ್ಟು ಕಾಲೇಜು ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆ ದಿನಗಳಲ್ಲಿ ನಾಗಾಭರಣ ಅವರು ವೈವಿಧ್ಯಮಯ ನಾಟಕಗಳನ್ನು ರಂಗಕ್ಕೆ ತಂದು ಹೊಸ ಅಲೆ ಎಬ್ಬಿಸಿದ್ದರು. ಡಾ. ಚಂದ್ರಶೇಖರ ಕಂಬಾರರ `ಸಂಗ್ಯಾ ಬಾಳ್ಯಾ’ ನಾಟಕದಲ್ಲಿ `ನೃತ್ಯ ಹಿನ್ನೆಲೆ ಇರುವ ಹುಡುಗಿ ಬೇಕಾಗಿದ್ದಾಳೆ’ ಎಂಬ ವಿಷಯ ವೈಜಯಂತಿಯ ತಂದೆತಾಯಿಯ ಕಿವಿಗೆ ಬಿದ್ದಿತು. ಅವರು ಮಗಳಿಗೆ `ನೀನು ಭರತನಾಟ್ಯವನ್ನಂತೂ ಬಿಟ್ಟಿರುವೆ. ಈಗ ನಾಟಕದಲ್ಲಾದರೂ ಅಭಿನಯಿಸು,’ ಎಂದು ಆಗ್ರಹಿಸಿದ ಬಳಿಕವೇ  ವೈಜಯಂತಿ `ಸಂಗ್ಯಾ ಬಾಳ್ಯಾ’ ನಾಟಕದಲ್ಲಿ ಅಭಿನಯಿಸಲು ಒಪ್ಪಿಗೆ ನೀಡಿದರು. ಆ ನಾಟಕದ ಮುಖ್ಯ ಪಾತ್ರಧಾರಿ ವಿಜಯ್‌ ಕಾಶಿ. ಈ ನಾಟಕ ತುಂಬಾ ಪ್ರಸಿದ್ಧಿ ಪಡೆಯಿತು. ದೂರದ ಅಹಮದಾಬಾದ್‌ನಲ್ಲೂ ಪ್ರದರ್ಶನ ಕಂಡದ್ದು ಇದರ ಹೆಚ್ಚುಗಾರಿಕೆ ಎನ್ನಬಹುದು. ಈ ನಾಟಕದಿಂದ ವಿಜಯ್‌ ಕಾಶಿ ಮತ್ತು ವೈಜಯಂತಿ ಜೋಡಿ ಬಹಳ ಪ್ರಸಿದ್ಧಿ ಪಡೆಯಿತು. ಬಳಿಕ ಇದೇ ಜೋಡಿ `ಸನ್ನಿವೇಶ, ಯಯಾತಿ, ಗೂಡು’ ಹೀಗೆ ಅನೇಕ ನಾಟಕಗಳಲ್ಲಿ ಅಭಿನಯಿಸಿತು.

ಕೂಚ್ಚುಪುಡಿಗೆ ತಿರುಗಿದ ಆಸಕ್ತಿ

VKashi4

ಭರತನಾಟ್ಯದಿಂದ ವಿಮುಖರಾದ ವೈಜಯಂತಿ ರಂಗಪ್ರವೇಶ ಮಾಡಿದ್ದರು. ಆ ದಿನಗಳಲ್ಲಿಯೇ ಅವರ ತಂದೆಯ ಸ್ನೇಹಿತರೊಬ್ಬರು ಅಹಮದಾಬಾದ್‌ನ ಹಿರಿಯ ನಾಟ್ಯಾಚಾರ್ಯ ಸಿ.ಆರ್‌. ಆಚಾರ್ಯಲು ಬೆಂಗಳೂರಿಗೆ ಬರುತ್ತಿರುವ ಬಗ್ಗೆ ತಿಳಿಸಿದ್ದರು. ಬೇರೆಯವರು ಮಾಡಿದ್ದನ್ನೇ ನಾನೇಕೆ ಮಾಡಬೇಕು ಎಂಬ ಛಲ ಹೊಂದಿದ್ದ ವೈಜಯಂತಿಯವರು ಕೂಚ್ಚುಪುಡಿ ಕಲಿಯಲು ಮನಸಾರೆ ಒಪ್ಪಿದರು. ಆಚಾರ್ಯಲು ಅವರು ಒಂದೂವರೆ ತಿಂಗಳ ಕಾಲ ಇವರ ಮನೆಯಲ್ಲಿಯೇ ಉಳಿದು ಕೂಚ್ಚುಪುಡಿ ಕಲಿಸಿ ರಂಗಪ್ರವೇಶ ಕೂಡ ಮಾಡಿಸಿದರು.

ಬಳಿಕ ಆಂಧ್ರ ಪ್ರದೇಶಕ್ಕೂ ತೆರಳಿ ಕೂಚ್ಚುಪುಡಿಯ ಬಗೆಗೆ ಅಧ್ಯಯನ ಮಾಡಿ ಅದರಲ್ಲಿ ಹೆಚ್ಚಿನ ನೈಪುಣ್ಯತೆ ಸಾಧಿಸಿದರು.

ಸಿನಿಮಾ ಪ್ರವೇಶ

ಕೂಚ್ಚುಪುಡಿಯಿಂದ ಸಾಕಷ್ಟು ಅಭಿನಯದ ಸಾಧ್ಯತೆಗಳನ್ನು ಮೈಗೂಡಿಸಿಕೊಂಡಿದ್ದ ವೈಜಯಂತಿಯವರಿಗೆ ಆರಂಭದಲ್ಲಿ ಕಲಾತ್ಮಕ ಚಿತ್ರವೊಂದರಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.

ಆದರೆ ಸಿನಿಮಾರಂಗ ಅವರಿಗೇಕೊ ಹಿಡಿಸಲಿಲ್ಲ. ಹೀಗಾಗಿ ಮುಂದೆ ಯಾವುದೇ ಚಿತ್ರದಲ್ಲಿ ಅಭಿನಯಿಸಲಿಲ್ಲ.

ವಿಜಯ್‌ ವೈಜಯಂತಿ ವಿವಾಹ

`ಸಂಗ್ಯಾ ಬಾಳ್ಯಾ’ ಹಾಗೂ ಇತರೆ ನಾಟಕಗಳಲ್ಲಿನ ಅಭಿನಯ ಇಬ್ಬರಲ್ಲೂ ಪ್ರೀತಿ ಹುಟ್ಟುಹಾಕಿತು. ಕ್ರಮೇಣ ಮದುವೆಯಲ್ಲಿ ಕೊನೆಗೊಂಡಿತು.

ಮದುವೆಯ ಬಳಿಕ ವಿಜಯ್‌ ಕಾಶಿಯವರಿಗೆ ಸಿನಿಮಾಗಳಲ್ಲಿ ಹೆಚ್ಚೆಚ್ಚು ಅವಕಾಶಗಳು ದೊರೆಯಲಾರಂಭಿಸಿದ. ವೈಜಯಂತಿ ಮಾತ್ರ ಆ ಅವಧಿಯಲ್ಲಿ ಏಕಾಂಗಿಯಾದರು. `ನೀನು ಮನೆಯಲ್ಲಿ ಏಕಾಂಗಿಯಾಗಿರುವ ಬದಲು ನಿನಗಿಷ್ಟವಾದುದನ್ನು ಏನಾದರೂ ಮಾಡು,’ ಎಂದು ಹೇಳಿದರು.

“ಆಗ ನಾನು ಕುಟುಂಬಕ್ಕೆ ಒಂದು ಆಧಾರ ಇರಲಿ ಎಂದು ಕಾರ್ಪೊರೇಷನ್‌ ಬ್ಯಾಂಕಿನಲ್ಲಿ ಉದ್ಯೋಗಿಯಾದೆ. ಕೂಚ್ಚುಪುಡಿಯಲ್ಲಿ ಸಾಕಷ್ಟು ಅಧ್ಯಯನ ಕೂಡ ಮಾಡಿದೆ. ಈ ಕೆಲಸದಲ್ಲಿ ನನಗೆ ಕೇಂದ್ರ ಸರ್ಕಾರದಿಂದ ಫೆಲೋಶಿಪ್‌ ಕೂಡ ದೊರೆಯಿತು,” ಎಂದು ತಮ್ಮ ವಿವಾಹದ ನಂತರದ ದಿನಗಳ ಬಗ್ಗೆ ಸ್ಮರಿಸಿಕೊಂಡರು.

ಶಾಂಭವಿ ನೃತ್ಯಶಾಲೆ

VKashi3

ಕೂಚ್ಚುಪುಡಿ ನೃತ್ಯದಲ್ಲಿನ ಅವರ ಸಾಧನೆಯನ್ನು ಗಮನಿಸಿ ಗುರು ಸಿ.ಆರ್‌. ಆಚಾರ್ಯಲು, “ಯುವ ಪ್ರತಿಭೆಗಳನ್ನು ಹೊರತರಲು ನಿಮ್ಮದೇ ಆದ ಶಾಲೆಯೊಂದನ್ನು ಆರಂಭಿಸಿ,” ಎಂದು ವೈಜಯಂತಿಯವರಿಗೆ ಸೂಚನೆ ಕೊಟ್ಟರು.

ಗುರುಗಳ ಆಜ್ಞೆಯನ್ನು ಶಿರಸಾಹಿಸಿ ಪಾಲಿಸಿದ ವೈಜಯಂತಿ ಕಾಶಿಯರು 1993ರಲ್ಲಿ ವಿಜಯನಗರದಲ್ಲಿ `ಶಾಂಭವಿ ನೃತ್ಯ ಶಾಲೆ’ ಆರಂಭಿಸಿದರು. ಶಾಂಭವಿ ಕೂಚ್ಚುಪುಡಿ ನೃತ್ಯ ಶಾಲೆಯ ಕೀರ್ತಿ ಕ್ರಮೇಣ ಬೆಂಗಳೂರಿನ ಇತರೆ ಬಡಾವಣೆಗಳಿಗೂ ಹರಡಿ ಸಂಜಯನಗರ, ಕೋರಮಂಗಲದಲ್ಲೂ ಅದರ ಶಾಖೆಗಳನ್ನು ತೆರೆಯುವಂತೆ ಆಯಿತು. ಶಾಂಭವಿ ನೃತ್ಯ ಶಾಲೆಗಾಗಿ 4-5 ಬಾರಿ ಮನೆಗಳನ್ನು ಬದಲಿಸಬೇಕಾಯಿತು.

“ಜನರಿಗೆ ನೃತ್ಯದ ಬಗ್ಗೆ ಆಸಕ್ತಿ ಇದೆ, ಪ್ರೀತಿ ಇದೆ. ಆದರೆ ತಮ್ಮ ಮನೆಯಲ್ಲಿಯೇ ಅದರ ಕ್ಲಾಸು ನಡೆಯುತ್ತಿದ್ದರೆ ಅದರ ಸದ್ದು ಮಾತ್ರ ಅವರಿಗೆ ಅಸಹನೀಯ ಎನಿಸುತ್ತದೆ. ಹೀಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕ್ಲಾಸುಗಳನ್ನು ಬದಲಿಸಬೇಕಾಗಿ ಬಂತು.

“ಈ ಕಾರಣದಿಂದ ನಾನು ಅನೇಕ ವಿದ್ಯಾರ್ಥಿಗಳನ್ನು ಕಳೆದುಕೊಳ್ಳಬೇಕಾಯಿತು. ಕೊನೆಗೊಮ್ಮೆ ಇದೇ ನನಗೆ ಡ್ಯಾನ್ಸ್ ಥಿಯೇಟರ್‌ ಆರಂಭಿಸಲು ಅನಿವಾರ್ಯ ಪರಿಸ್ಥಿತಿ ಸೃಷ್ಟಿಸಿತು,” ಎಂದು ತಮ್ಮ ಶಾಲೆ ಆರಂಭವಾದ ನಂತರದ ದಿನಗಳ ಬಗ್ಗೆ ವಿವರಿಸಿದರು.

ಡ್ಯಾನ್ಸ್ ಥಿಯೇಟರ್

YJK-gal1-copy

ಒಂದು ಕಡೆಯಿಂದ ಇನ್ನೊಂದು ಕಡೆಗೆ ನೃತ್ಯ ಶಾಲೆ ಬದಲಾಯಿಸಿ ಬದಲಾಯಿಸಿ ವೈಜಯಂತಿಯವರು ಸುಸ್ತಾಗಿ ಹೋಗಿದ್ದರು. ಒಂದು ಸಲ ತಮ್ಮ ವಿದ್ಯಾರ್ಥಿಯೊಬ್ಬರ ಮುಂದೆ `ಈ ನೃತ್ಯ ಶಾಲೆಯೂ ಸಾಕು, ತರಬೇತಿಯೂ ಸಾಕು’ ಎಂದು ತಮ್ಮ ನೋವನ್ನು ಬಹಿರಂಗಪಡಿಸಿದ್ದರು. ಆ ವಿದ್ಯಾರ್ಥಿಯಿಂದ ಈ ವಿಷಯ ಪೋಷಕರ ಕಿವಿಗೂ ಬಿದ್ದಿತ್ತು. ಅವರು ವೈಜಯಂತಿಯವರ ಹತ್ತಿರ ಬಂದು, `ನೀವು ಆಲದ ಮರ ಥರ. ನೀವೇ ಕಲಿಸುವುದು ಬೇಡ ಎಂದರೆ ಹೇಗೆ? ನೀವು ಯಾವುದೇ ಕಾರಣಕ್ಕೂ ಕಲಿಸುವುದನ್ನು ನಿಲ್ಲಿಸಬಾರದು. ನಿಮ್ಮದೇ ಆದ ಸ್ವಂತ ಜಾಗದಲ್ಲಿ ನೃತ್ಯ ಶಾಲೆ ಆರಂಭಿಸಿ. ಎಷ್ಟು ಜನರಿಗೆ ಆಸಕ್ತಿ ಇರುತ್ತೋ ಅವರು ಬರುತ್ತಾರೆ,” ಎಂದು ಹೇಳಿದರು.

“ವಿದ್ಯಾರ್ಥಿಯೊಬ್ಬರ ಪೋಷಕರ ಮಾತು ನನ್ನಲ್ಲಿ ವಿನೂತನ ವ್ಯವಸ್ಥೆ ಇರುವ ನೃತ್ಯ ಶಾಲೆಯೊಂದನ್ನು ತೆರೆಯಲು ಪ್ರೇರಣೆ ನೀಡಿತು,” ಎಂದು ಕೆಂಗೇರಿ ಉಪನಗರದ ತಮ್ಮ ಮನೆ ಆವರಣದಲ್ಲಿರುವ ಡ್ಯಾನ್ಸ್ ಸ್ಟುಡಿಯೋವನ್ನು ತೋರಿಸುತ್ತಾ ಹೇಳಿದರು.

ಡ್ಯಾನ್ಸ್ ಸ್ಟುಡಿಯೋ ನಿರ್ಮಾಣದ ಹೊತ್ತಿಗೆ ವೈಜಯಂತಿಯವರ ಕೂಚ್ಚುಪುಡಿಯಲ್ಲಿನ ಸಾಧನೆ ವಿದೇಶಕ್ಕೂ ತಲುಪಿತ್ತು. ಕಾರ್ಯಕ್ರಮ ನೀಡಲು, ವಿಚಾರ ಸಂಕಿರಣಗಳಲ್ಲಿ ಉಪನ್ಯಾಸ ನೀಡಲು ವಿದೇಶಗಳಿಂದ ಕರೆ ಬರುತ್ತಲಿದ್ದ. 18 ದೇಶಗಳಿಗೆ ಭೇಟಿ ನೀಡಿದ್ದರಿಂದಾಗಿ ಅವರ ಆರ್ಥಿಕ ಪರಿಸ್ಥಿತಿಯೂ ಸಾಕಷ್ಟು ಸುಧಾರಿಸಿತು. ಇದೇ ಅವರಿಗೆ ಡ್ಯಾನ್ಸ್ ಸ್ಟುಡಿಯೋ ಪಕ್ಕದಲ್ಲಿಯೇ ಮಲೆನಾಡಿನ ಅನುಭವ ನೀಡುವ ಸುಂದರ ಮನೆಯೊಂದನ್ನು ನಿರ್ಮಿಸಲು ಪ್ರೇರಣೆ ನೀಡಿತು. ಬ್ಯಾಂಕ್‌ ಕೆಲಸ ಬಿಟ್ಟ ನಂತರ ಬಂದ ಹಣ ಹಾಗೂ ವಿದೇಶ ಪ್ರವಾಸದಿಂದ ಬಂದ ಪೂರ್ತಿ ಹಣವನ್ನು ಮನೆ ನಿರ್ಮಿಸಲು ವಿನಿಯೋಗಿಸಿದರು.

ಅವರ ಮನೆಯಲ್ಲಿ ಗ್ರಾಮೀಣ ಸೊಗಡು ಎದ್ದು ಕಾಣುತ್ತದೆ. ಹಳ್ಳಿಮನೆಯಲ್ಲಿದ್ದ ದೀಪಾಲೆ ಕಂಬಗಳು, ದನಗಳು ಗಂಜಿ ಕುಡಿಯುವ ಬಾನಿ ಮತ್ತಿತರ ವಸ್ತುಗಳು ಅವರ ತೋಟದ ಮೆರುಗನ್ನು ಹೆಚ್ಚಿಸಿವೆ.

ಕಲಾವಿದರ ಕುಟುಂಬ

vk&pk

ವೈಜಯಂತಿ ವಿಜಯ್‌ ಕಾಶಿ ಅವರದು ಪುಟ್ಟ ಕುಟುಂಬ. ಅವರ ಏಕೈಕ ಪುತ್ರಿ ಪ್ರತೀಕ್ಷಾ ಕೂಡ ಉದಯೋನ್ಮುಖ ಕೂಚ್ಚುಪುಡಿ ನೃತ್ಯಗಾರ್ತಿ. ಬಿ.ಎಂ.ಎಸ್‌ ಎಂಜಿನಿಯರಿಂಗ್‌ನ ಕಾಲೇಜಿನ ರಾಂಕ್‌ ವಿಜೇತ ವಿದ್ಯಾರ್ಥಿನಿ. ಈಗಾಗಲೇ ಒಂದು ಆರ್ಟ್‌ ಫಿಲ್ಮ್‌ನಲ್ಲಿ ನಟಿಸಿರುವ ಅವರು `ಅಕ್ಕಮಹಾದೇವಿ’ ಧಾರಾವಾಹಿಯ ಬಳಿಕ ಇದೀಗ `ಕಾದಂಬರಿ ಕಣಜ’ ಎಂಬ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪತಿ ವಿಜಯ್‌ ಕಾಶಿ ಸಿನಿಮಾ ಜೊತೆ ಜೊತೆಗೆ ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದಾರೆ. ಪತಿ ಪತ್ನಿ ಮತ್ತು ಮಗಳು ಮೂರು ನೃತ್ಯ ಮತ್ತು ಅಭಿನಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಚಟುವಟಿಕೆಯಿಂದಿರುತ್ತಾರೆ.

“ಕಲಾವಿದರ ಬದುಕು ಏರಿಳಿತದಿಂದ ಕೂಡಿರುತ್ತದೆ. ಹೀಗಾಗಿ ಕಲಾವಿದರು ಸ್ವಲ್ಪ ಬುದ್ಧಿವಂತಿಕೆ ಉಪಯೋಗಿಸಬೇಕು. ಸತತ ಪ್ರಯತ್ನ ಮಾಡ್ತಾನೇ ಇರಬೇಕು. ಪ್ರಶಸ್ತಿ ಬಂತು ಅಂತ ನಿರಾಳವಾಗಿ ಕುಳಿತುಕೊಳ್ಳಬಾರದು. ನೃತ್ಯ ಮತ್ತು ಅಭಿನಯ ಇವು ನಮ್ಮ ಸಾಮರ್ಥ್ಯ ಇರುವವರೆಗೆ ಮಾತ್ರ ಸಾಧ್ಯವಾಗುವಂತಹ. ಹಾಗಾಗಿ ನಮ್ಮ ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು.

“ನಾವು ಅವರಿವರ ಬಳಿ ಕೈ ಚಾಚುವಂತಹ ಸ್ಥಿತಿ ಉದ್ಭವಿಸಬಾರದು. ಸರ್ಕಾರ ಕೊಡು ಮಾಸಾಶನ ಯಾವುದಕ್ಕೂ ಸಾಲದು. ಕಲೆಯನ್ನು ಯಾರು ಪ್ರೀತಿಸುತ್ತಾರೋ, ಕಲೆ ಅವರನ್ನು ಖಂಡಿತವಾಗಿಯೂ ಕಾಪಾಡುತ್ತದೆ,” ಎಂದು ಕಲೆಯ ಬಗೆಗಿನ ತಮ್ಮ ತುಡಿತವನ್ನು ಸ್ಪಷ್ಟಪಡಿಸಿದರು.

ಅಕಾಡೆಮಿಯ ಜವಾಬ್ದಾರಿ

ಒಂದು ಸಲ ವೈಜಯಂತಿಯವರು ವಿದೇಶಕ್ಕೆ ಹೋಗಿದ್ದಾಗ ಸಂಗೀತ ಮತ್ತು ನೃತ್ಯ ಅಕಾಡೆಮಿಯ ನಿರ್ದೇಶಕ ಮನು ಬಳಿಗಾರ್‌ಅವರಿಂದ ದೂರಾವಣಿ ಕರೆ, “ಮೇಡಂ, ನಿಮ್ಮನ್ನು ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ!” ಅವರಿಗೆ ಈ ವಿಷಯ ಕೇಳಿ ನಂಬಲು ಆಗಲೇ ಇಲ್ಲ. ಏಕೆಂದರೆ ಅಧ್ಯಕ್ಷರಾಗಬೇಕೆಂದು ಅವರು ಯಾರಿಗೂ ದುಂಬಾಲು ಬಿದ್ದವರಲ್ಲ, ಅರ್ಜಿ ಹಾಕಿದವರಲ್ಲ. ಅದು ತಾನಾಗಿಯೇ ಒಲಿದು ಬಂದ ಹುದ್ದೆಯಾಗಿತ್ತು.

ಇವರ ತಾತ ಗುಬ್ಬಿ ವೀರಣ್ಣ ಅಕಾಡೆಮಿಗೆ ಸದಸ್ಯರಾಗಿದ್ದರೆ ಹೊರತು ಅಧ್ಯಕ್ಷರಾಗಿರಲಿಲ್ಲ. ಅಧ್ಯಕ್ಷ ಹುದ್ದೆ ಬಂದ ಬಳಿಕ ಎಲ್ಲಿ ತಮ್ಮ ಡ್ಯಾನ್ಸ್ ಕೆರಿಯರ್‌ಗೆ ಧಕ್ಕೆ ಉಂಟಾಗುತ್ತೋ ಎಂಬ ಅಳುಕು ಅವರಲ್ಲಿತ್ತು. ಆದರೆ ಅವರ ಹಿತೈಷಿಗಳು, “ನಿಮಗೆ ಇದು ಕಲೆಯ ಸೇವೆ ಮಾಡುವ ಅದ್ಭುತ ಅವಕಾಶ ನೀಡಿದೆ. ದಯವಿಟ್ಟು ಒಪ್ಪಿಕೊಳ್ಳಿ,” ಎಂದು ಹೇಳಿದಾಗಲೇ ಇವರು ಆ ಹುದ್ದೆಯನ್ನು ಒಪ್ಪಿಕೊಂಡಿದ್ದು.

ಅಕಾಡೆಮಿಗೆ ಬಂದ ಬಳಿಕ ಅವರು ಸಾಕಷ್ಟು ಕೆಲಸ ಮಾಡಿದರು. ಅಕಾಡೆಮಿ ಆಗಾಗ ಹೊರತರುತ್ತಿದ್ದ ಆಮಂತ್ರಣ ಪತ್ರಿಕೆಗಳಿಗೆ ಕಲಾತ್ಮಕ ಸ್ಪರ್ಶ ಕೊಟ್ಟರು. ಮೊದಲು ಅಕಾಡೆಮಿ ಕಛೇರಿಗೆ ಬಂದಾಗ ಅಲ್ಲಿನ ದೃಶ್ಯ ಅಷ್ಟೊಂದು ಆಕರ್ಷಕವಾಗಿರಲಿಲ್ಲ. ಅವರು ಆ ಅಕಾಡೆಮಿಗೆ ಸೂಕ್ತ ಎನಿಸುವಂತಹ ವಾತಾವರಣವನ್ನು ಸೃಷ್ಟಿ ಮಾಡಿದರು. ಅಕಾಡೆಮಿಯ ವೆಬ್‌ಸೈಟ್‌ನ್ನು ಕೂಡ ಹೊಸ ರೀತಿಯಲ್ಲಿ ಮಾಡಿಸಿದರು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೇವಲ ಒಂದೂವರೆ ವರ್ಷದಲ್ಲಿಯೇ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಾಗ ತಮ್ಮ ಅನೇಕ ಕನಸುಗಳು ನನಸಾಗದೇ ಇರುವ ಬೇಸರ ಅವರಿಗಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಬಗ್ಗೆ ನಾಲ್ಕು ಸಿ.ಡಿ.ಗಳಿಗಾಗಿ ರೆಕಾರ್ಡಿಂಗ್‌ ಕೆಲಸ ಮುಗಿಸಿದ್ದರು. ಅವು ಬಿಡುಗಡೆಯಾಗುವ ಮುಂಚೆಯೇ ಇವರನ್ನೇ ಅಕಾಡೆಮಿಯಿಂದ ಬಿಡುಗಡೆಗೊಳಿಸಿದ್ದು ಮಾತ್ರ ಖೇದದ ಸಂಗತಿ. ಕಂಚಿನ ಕಂಠದ ಬಾಳಪ್ಪ ಹುಕ್ಕೇರಿಯರ ಜನ್ಮ ಶತಮಾನೋತ್ಸವ ಆಚರಿಸುವುದು ಇವರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಅದು ಕೈಗೂಡದೇ ಇರುವುದು ಕೂಡ ಬೇಸರ ತರಿಸಿತು.

ಅಕಾಡೆಮಿಯಿಂದ ಮುಕ್ತರಾದ ಬಳಿಕ ಪುನಃ ತಮ್ಮ ಡ್ಯಾನ್ಸ್ ಥಿಯೇಟರ್‌ನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಇವರಿಂದ ಕೂಚ್ಚುಪುಡಿಯ ನೃತ್ಯ ಕಲಿಯಲು ವಿದೇಶಗಳಿಂದಲೂ ವಿದ್ಯಾರ್ಥಿನಿಯರು ಬರುತ್ತಿರುವುದು ಇವರ ಕಲೆಯ ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ. ನೃತ್ಯದ ಜೊತೆ ಜೊತೆಗೆ ಅವರು ಟಿ.ವಿ. ಧಾರಾವಾಹಿಗಳಲ್ಲೂ ಕೂಡ ತಮ್ಮ ಅಭಿನಯ ಚಾತುರ್ಯ ತೋರಿಸುತ್ತಿದ್ದಾರೆ.

ಮನ್ವಂತರ, ಮಳೆ ಬಿಲ್ಲು, ಮಿಂಚು, ಮುಕ್ತ ಮುಕ್ತ, ಚರಣದಾಸಿ ಅವರ ಅಭಿನಯದ ಧಾರಾವಾಹಿಗಳು.

“ನಾನು ನೃತ್ಯದ ಜೊತೆಗೆ ನಾಟಕಗಳಲ್ಲೂ ಅಭಿನಯಿಸಿದ್ದರಿಂದ ನನಗೆ ಧಾರಾವಾಹಿಗಳಲ್ಲಿ ನಟಿಸುವುದು ಅಷ್ಟೇನೂ ಕಷ್ಟವೆನಿಸಲಿಲ್ಲ. ಧಾರಾವಾಹಿಗಳಲ್ಲಿ ಅಭಿನಯಿಸುವಾಗ ನೃತ್ಯದ ಅಂಶ ಸ್ವಲ್ಪ ಇಣುಕದಂತೆ ನಾವು ತುಂಬ ಎಚ್ಚರ ವಹಿಸಬೇಕು,” ಎಂದು ಧಾರಾವಾಹಿ ಹಾಗೂ ನೃತ್ಯದ ಬಗೆಗಿನ ತಮ್ಮದೇ ಆದ ಪರಿಕಲ್ಪನೆಯನ್ನು ವಿವರಿಸುತ್ತಾರೆ. ನೃತ್ಯ, ನಟನೆಯ ಆಸಕ್ತಿಯ ಜೊತೆಗೆ ಪರಿಸರ ಕಾಳಜಿಯನ್ನು ಇವರು ತಮ್ಮ `ಮಹಾನಿಧಿ’ ಮನೆಯ ಆಸುಪಾಸಿನಲ್ಲಿ ವಿಶಿಷ್ಟವಾಗಿ ಬಿಂಬಿಸಿದ್ದಾರೆ.

– ಅಶೋಕ್‌ ಚಿಕ್ಕಪರಪ್ಪಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ