ಪ್ರೇಮಿಗಳು ತಮ್ಮ ಭವಿಷ್ಯದ ಚಿಂತೆ ಮಾಡುತ್ತಾ, ಮದುವೆಯ ಕುರಿತಾಗಿ ಮಾತನಾಡುತ್ತಿದ್ದರು.
ಪ್ರೇಯಸಿ : ನಾನು ಈಗಲೇ ಹೇಳಿಬಿಡ್ತೀನಿ, ನನಗಂತೂ ಅಡುಗೆ ಮಾಡೋಕ್ಕೆ ಬರೋಲ್ಲ ನೀವೇ ಮಾಡಬೇಕು.
ಪ್ರೇಮಿ : ನಾನೂ ಹೇಳಿಬಿಡ್ತೀನಿ, ನಾನೊಬ್ಬ ಹೊಸ ಕವಿ. ನನ್ನ ಕವಿತೆಗಳನ್ನು ನಾನೇ ಜೋರಾಗಿ ಹಾಡಿಕೊಂಡರೆ ಮಾತ್ರ ನನಗೆ ಅಡುಗೆ ಮಾಡಲು ಮೂಡ್ ಬರುತ್ತೆ.
ಪ್ರೇಯಸಿ : ಯಾಕೋ ನಾನೇ ಅಡುಗೆ ಕಲಿಯೋದು ವಾಸಿ ಅನ್ಸುತ್ತೆ….
ಒಬ್ಬ ಮಹಿಳೆ ಭಾರಿ ಲಗೇಜ್‌ನೊಂದಿಗೆ ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಕುಳಿತು ಯಾರಿಗೋ ಕಾಯುತ್ತಿದ್ದಳು.
ಆಕೆಯನ್ನು ಗಮನಿಸಿದ ಒಬ್ಬ ಕೂಲಿ ಕೇಳಿದ, `ಮೇಡಂ, ಲಗೇಜ್ ಜಾಸ್ತಿ ಇದೆ. ಕೂಲಿ ಬೇಕಿತ್ತೆ?’`ಅದೆಲ್ಲ ಏನೂ ಬೇಡಪ್ಪ, ಇದನ್ನು ಹೊರೋದಿಕ್ಕೆ ನಮ್ಮೆಜಮಾನ್ರು ಇದ್ದಾರೆ. ನೀರಿನ ಬಾಟಲಿ ತರಲು ಹೋಗಿದ್ದಾರಷ್ಟೆ…..’ ಎಂದು ಆಕೆ ಸಾವಧಾನವಾಗಿ ಹೇಳುವುದೆ?
ಮಗರಾಯ ಹೈಸ್ಕೂಲ್ ಟೆಸ್ಟ್ ನಲ್ಲಿ ಫೇಲಾಗಿ ಬಂದದ್ದು ತಂದೆಗೆ ಕೆಂಡಾಮಂಡಲ ಸಿಟ್ಟು ತರಿಸಿತ್ತು.
ತಂದೆ : ಮುಠ್ಠಾಳ…. ನಿನ್ನ ಮುಖ ತೋರಿಸಬೇಡ….. ಇನ್ನು ಮೇಲೆ ನನ್ನ ಅಪ್ಪ ಅಂತ ಕರೆಯಲೇಬೇಡ!
ಮಗ : ಹೋಗಲಿ ಬಿಡಪ್ಪ, ಇದಕ್ಕೆ ಯಾಕೆ ಇಷ್ಟು ಕೋಪ? ಇದು ಸಾಧಾರಣ ಕ್ಲಾಸ್ ಟೆಸ್ಟ್ ತಾನೇ? ಡಿ.ಎನ್.ಎ. ಟೆಸ್ಟ್ ಏನೂ ಅಲ್ಲವಲ್ಲ?
ಒಂದು ರಾಜಕೀಯ ಪಕ್ಷ ಚುನಾವಣೆಯ ಟಿಕೆಟ್ ನೀಡುವ ಮೊದಲು ಅಭ್ಯರ್ಥಿಗಳ ಸಂದರ್ಶನ ನಡೆಸಿತು.
ಪಕ್ಷದ ಹಿರಿಯ ಮುಖಂಡ : ಯಾರಾದರೂ ಬಾಯಾರಿಕೆಯಿಂದ ಸಾಯುವಂತಾಗಿದ್ದರೆ ನೀವು ಏನು ಮಾಡುತ್ತೀರಿ?
ಅಭ್ಯರ್ಥಿ : ಅವರಿಗೆ ತಕ್ಷಣ ನೀರು ಕುಡಿಸುವ ವ್ಯವಸ್ಥೆ ಮಾಡುತ್ತೇನೆ.
ಮುಖಂಡ : ನಿಮ್ಮ ಸುತ್ತಮುತ್ತಲೂ ಒಂದು ಹನಿ ನೀರೂ ಸಿಗುತ್ತಿಲ್ಲ. ಆಗೇನು ಮಾಡುತ್ತೀರಿ?
ಅಭ್ಯರ್ಥಿ : ಏನೂ ಚಿಂತೆ ಇಲ್ಲ. ಆದಷ್ಟು ಬೇಗ ಬಾವಿ ತೋಡಿಸಿ ನೀರು ತರಿಸುತ್ತೇನೆ ಎಂದು ಅವನಿಗೆ ಆಶ್ವಾಸನೆ ತುಂಬುತ್ತೇನೆ.
ಮುಖಂಡ : ಶಭಾಷ್! ನಿಮ್ಮಂಥವರೇ ನಮಗೆ ಬೇಕು.
ಒಂದು ಮನೆಯ ಕಾಲಿಂಗ್ ಬೆಲ್ ಕೆಳಗೆ ಹೀಗೆ ಬರೆಯಲಾಗಿತ್ತು, `ದಯವಿಟ್ಟು ಬೆಲ್‌ಮಾಡಿದ ನಂತರ ಕಾಯುವ ತಾಳ್ಮೆ ಇರಲಿ. ಸತತ ಬೆಲ್ ಒತ್ತುತ್ತಲೇ ಇರಬೇಡಿ. ಒಳಗಿರುವವರು ನಡೆದುಕೊಂಡು ಬರಬೇಕೇ ಹೊರತು ಹಾರಿಕೊಂಡು ಬರಲಾಗದು.’
ಒಂದೇ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಏಳು ಮಂದಿ ಮಹಿಳೆಯರ ನಡುವೆ ಯಾವ ಯಾವುದೋ ಕಾರಣಕ್ಕೆ ಜಗಳವಾಯಿತು. ಅದು ವಿಪರೀತಕ್ಕೆ ಹೋಗಲು ಎಲ್ಲರೂ ಕೋರ್ಟ್ ಬಾಗಿಲನ್ನು ತಟ್ಟಿದರು. ನ್ಯಾಯಾಧೀಶರು ಆಣತಿ ನೀಡಿದ ನಂತರ ಅವರ ಮುಂದೆ ಹಾಜರಾದ ಈ ಮಹಿಳೆಯರು ನಾ ಮುಂದು ತಾ ಮುಂದು ಎಂದು ಪರಸ್ಪರರ ಮೇಲೆ ಆರೋಪ ಹೊರಿಸತೊಡಗಿದರು. ಇದರಿಂದ ನ್ಯಾಯಾಧೀಶರೇ ಕಕ್ಕಾಬಿಕ್ಕಿಯಾದರು. ಮಹಿಳೆಯರ ಆರೋಪ ಪ್ರತ್ಯಾರೋಪ ಮುಗಿಲು ಮುಟ್ಟಿದಾಗ, ಇವರು ಮೇಜು ಮುರಿಯುವಂತೆ ಸುತ್ತಿಗೆಯಿಂದ ಬಡಿದು, “ಆರ್ಡರ್! ಆರ್ಡರ್!” ಎಂದು ಗುಡುಗುತ್ತಾ ಹೇಳಿದರು, “ಈಗ ಒಬ್ಬೊಬ್ಬರಾಗಿ ನಿಮ್ಮ ಅಹವಾಲನ್ನು ಹೇಳಿಕೊಳ್ಳಬೇಕು. ಎಲ್ಲಕ್ಕೂ ಮೊದಲು ನಿಮ್ಮಲ್ಲಿ ಯಾರಿಗೆ ಅತ್ಯಧಿಕ ವಯಸ್ಸಾಗಿದೆಯೋ ಅವರಿಂದ ಅರೋಹಣ ಕ್ರಮದಲ್ಲಿ ಮುಂದುವರಿಸಿ….” ಎಂದಾಗ ತಂತಮ್ಮಲ್ಲೇ ಮಾತನಾಡಿಕೊಂಡು ಶಾಂತರಾದ ಮಹಿಳೆಯರು, ದೂರನ್ನು ಹಿಂಪಡೆದು ಹೊರಟೇಬಿಡವುದೇ?
ಒಂದು ಸಲ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ನಿಂತು ಜೋರಾಗಿ ಕೂಗಾಡುತ್ತಿದ್ದ, “ನಮ್ಮ ರಾಜಕೀಯ ಮುಖಂಡರು ನಾಲಾಯಕ್! ಅವರು ಯಾವುದಕ್ಕೂ ಪ್ರಯೋಜನವಿಲ್ಲ…..” ಇದನ್ನು ಕೇಳಿಸಿಕೊಂಡ ಒಬ್ಬ ಪೊಲೀಸ್ ಪೇದೆ ಅವನ ಕತ್ತಿನ ಪಟ್ಟಿ ಹಿಡಿದು ನಾಲ್ಕು ಬಾರಿಸುತ್ತಾ ಹೇಳಿದ, “ನಡಿ ಸ್ಟೇಷನ್‌ಗೆ… ನೀನು ನಮ್ಮ ರಾಜಕೀಯ ಮುಖಂಡರನ್ನು ಅಪಮಾನಿಸುತ್ತಿದ್ದೀಯ!”
ಆಗ ಆ ವ್ಯಕ್ತಿ ಕೈ ಜೋಡಿಸುತ್ತಾ ವಿನಮ್ರವಾಗಿ ಬೇಡಿಕೊಂಡ, “ಸ್ವಾಮಿ ಅದು ಹಾಗಲ್ಲ, ನಾನು ಹೇಳುತ್ತಿದ್ದುದು ಪಾಕಿಸ್ತಾನದ ಮುಖಂಡರು ಪ್ರಯೋಜನವಿಲ್ಲ ಅಂತ……”
ಇದನ್ನು ಕೇಳಿಸಿಕೊಂಡ ಪೊಲೀಸ್ ಮತ್ತೆ ಅವನಿಗೆ 4 ಬಾರಿಸುತ್ತಾ, “ನಮ್ಮನ್ನೇನು ಹುಚ್ಚರು ಅಂದುಕೊಂಡೆಯಾ? ಯಾವ ದೇಶದ ಮುಖಂಡರು ಅಪ್ರಯೋಜಕರು ಅಂತ ನಮ್ಮ ಡಿಪಾರ್ಟ್‌ಮೆಂಟಿಗೆ ಗೊತ್ತಿಲ್ವಾ? ನಡಿ…. ನಡಿ….!” ಎನ್ನುವುದೇ?
ಗುಂಡ ಹೊಸದಾಗಿ ಮದುವೆಯಾಗಿದ್ದ. ಏನೇನೂ ರುಚಿ ಇಲ್ಲದ, ಬಾಯಲ್ಲಿಡಲಾಗದಂಥ ವ್ಯಂಜನವನ್ನು ಅವನಿಗೆ ಬಡಿಸಿದ ಹೆಂಡತಿ, “ಬೇಗ ಬೇಗ ಊಟ ಮಾಡಿ!” ಎಂದು ಆರ್ಡರ್ ಮಾಡಿದಳು.
ಹೊಸ ಹೆಂಡತಿಯ ಮೇಲೆ ಮುನಿಸಿಕೊಳ್ಳಲಾಗದ ಗುಂಡ, ಅಸಹಾಯಕನಾಗಿ ಊಟ ಆರಂಭಿಸಿದ. ಅಷ್ಟರಲ್ಲಿ ಎಲ್ಲಿಂದೋ ಬಂದ ಒಂದು ಇಲಿ ಪುಸಕ್ಕನೇ ಅವನ ತಟ್ಟೆಯಲ್ಲಿ ಹಾದು ಹೋಯಿತು. ಅದರ ದಯೆಯಿಂದ ಈ ಊಟ ತಪ್ಪಿಸಿಕೊಳ್ಳಬಹುದು, ತಾನು ಬಚಾವಾದೆ ಎಂದು ಭಾವಿಸಿದ ಗುಂಡ, ಅತಿ ವಿನಮ್ರನಾಗಿ, “ಛೇ…ಛೇ! ಇಲಿ ಹಾದು ಹೋಯಿತು. ನಾನು ಈ ಊಟ ಮಾಡಲಾರೆ. ಇದನ್ನು ಚೆಲ್ಲಿ ಬರುತ್ತೇನೆ….” ಎಂದು ಮೆಲ್ಲನೆ ಹೇಳಿದ.
“ರೀ… ಸುಮ್ನೆ ಕೂತ್ಕೊಂಡು ಊಟ ಮಾಡ್ರಿ! ಅದೇನು ಚಪ್ಪಲಿ ಹಾಕಿಕೊಂಡು ಬಂದಿತ್ತಾ?” ಎಂದು ಜಬರಿಸಿದಾಗ ಗುಂಡ ಸುಸ್ತೋ ಸುಸ್ತು!
ರಾಮಣ್ಣ ಮುಂಜಾನೆ 4 ಗಂಟೆಗೆ ಪಾರ್ಕಿನಲ್ಲಿ ವೇಗವಾಗಿ ಬ್ರಿಸ್ಕ್ ವಾಕಿಂಗ್‌ನಲ್ಲಿ ತೊಡಗಿರುವುದನ್ನು ಕಂಡು ಸೋಮಣ್ಣ ಆಶ್ಚರ್ಯದಿಂದ ಅವರನ್ನು ತಡೆದು ಕೇಳಿದರು, “ಇದೇನು ಗಡಗಡ ನಡುಗುವ ಚಳಿಯಲ್ಲಿ ಇಲ್ಲಿದ್ದೀರಿ? ಆರೋಗ್ಯದ ಬಗ್ಗೆ ಇದ್ದಕ್ಕಿದ್ದಂತೆ ಇಷ್ಟೊಂದು ಕಾಳಜಿಯೇ?”
“ಅರೆ…. ವಿಷಯ ಅದೇನಲ್ಲ. ರಾತ್ರಿ ಫ್ರೆಂಡ್ಸ್ ಜೊತೆ ಪಾರ್ಟಿ ಮುಗಿಸಿಕೊಂಡು ಮನೆಗೆ ಬರುವಷ್ಟರಲ್ಲಿ ನಡುರಾತ್ರಿ ಮೀರಿತ್ತು. ಹೆಂಡತಿ ಮನೆಯೊಳಗೆ ಸೇರಿಸದೆ ಅಲ್ಲೇ ಇರಿ ಎಂದುಬಿಟ್ಟಳು. ರಾತ್ರಿ ಪೂರ್ತಿ ವಾಕ್ ಮಾಡುತ್ತಲೇ ಇದ್ದೀನಿ, ಹೀಗಾಗಿಯೇ ವಾಕಿಂಗ್ ಸುಲಭ ಎನಿಸಿದೆ.”