“ನನ್ನ ತಂದೆ ರಾಜಕೀಯದಲ್ಲಿದ್ದಾರೆ. ನನ್ನನ್ನು ರಾಜಕೀಯಕ್ಕೆ ತರಬೇಕೆನ್ನುವುದು ಅವರ ಬಹುದಿನದ ಕನಸು. ಧಾರಾವಾಹಿಯ ರಾಜಕಾರಣಕ್ಕೂ ವಾಸ್ತ ರಾಜಕಾರಣಕ್ಕೂ ತುಂಬಾ ವ್ಯತ್ಯಾಸವಿದೆ. ನನ್ನ ರಾಜಕೀಯ ಪ್ರವೇಶ ಯಾವಾಗ, ಏನು ಅಂತಾ ಇನ್ನೂ ಯೋಚನೆ ಮಾಡಿಲ್ಲ.”

`ಮಹಾಪರ್ವ’ದ ಮಹಿಳಾ ಮುಖ್ಯಮಂತ್ರಿ `ಮಾಧವಿ ಪ್ರಿಯದರ್ಶಿನಿ’ಯ ಪಾತ್ರಧಾರಿ ಅಶ್ವಿನಿಯವರ ಸಂದರ್ಶನ ಮಾಡಲೆಂದು ಅವರ ಮನೆಗೆ ಹೋದಾಗ ಅವರ ವಾಸ್ತವ ರೂಪ, ನೈಜ ವಯಸ್ಸು ಕಂಡು ಅಚ್ಚರಿಯಾಯಿತು. ಏಕೆಂದರೆ `ಮಹಾಪರ್ವ’ದ ಮಾಧವಿ 40-45ರ ಮಧ್ಯವಯಸ್ಸಿನ ಗಂಭೀರ ವ್ಯಕ್ತಿತ್ವದ ಮಹಿಳೆ. ವಾಸ್ತವ ಲೋಕದ ಅಶ್ವಿನಿ 30ರ ಆಸುಪಾಸಿನ ಚೈತನ್ಯದ ಚಿಲುಮೆ.

ತಮ್ಮ ವಯಸ್ಸಿಗೂ ಮೀರಿದ ಪಾತ್ರ ಒಪ್ಪಿಕೊಂಡ ಅಶ್ವಿನಿಯವರ ದಿಟ್ಟತನ ನಿಜಕ್ಕೂ ಪ್ರಶಂಸನೀಯ. ಕಿರುತೆರೆಗೆ ಬರುವ ಮುಂಚೆ ಅವರು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿಯೂ ನಟಿಸಿದ್ದರು. ಆದರೆ ಅವ್ಯಾವು ಇವರಿಗೆ ಪ್ರಸಿದ್ಧಿ ತಂದುಕೊಡಲಿಲ್ಲ, ಹೆಸರು ತಂದುಕೊಟ್ಟಿದ್ದು ಕಿರುತೆರೆಯೇ! ತಮ್ಮ ಸಿನಿಮಾ ಜೀವನ, ಕಿರುತೆರೆಯ ನಟನಾ ಬದುಕಿನ ಕುರಿತಂತೆ ಅವರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ….

ಕಿರುತೆರೆಗೆ ಬರುವ ಮುಂಚೆ ನೀವು ಸಿನಿಮಾಗಳಲ್ಲಿ ನಟಿಸುತ್ತಿದ್ದಿರಿ ಅಲ್ವೆ?

ನಮ್ಮದೇ ಆದ ಸಿನಿಮಾಕ್ಕೆ ನಿರ್ದೇಶನ ಮಾಡಬೇಕೆಂದು ನಾನು ನಿರ್ದೇಶನದ ಕೋರ್ಸ್‌ ಮಾಡಿದೆ. ಕೋರ್ಸ್‌ ಮುಗಿಸಿ ಫೋಟೊ ಶೂಟ್‌ ಮಾಡಲೆಂದು ಗುರು ದೇಶಪಾಂಡೆಯವರ ಸಂಸ್ಥೆಗೆ ಹೋಗಿದ್ದೆ. ನನ್ನ ಫೋಟೋಗಳನ್ನು ನೋಡಿ ಅವರು `ನೀವು ತುಂಬಾ ಫೋಟೊಜೆನಿಕ್‌ ಆಗಿದ್ದೀರಿ. ನಮ್ಮ ಸಿನಿಮಾದ ನಾಯಕಿ ಏಕಾಗಬಾರದು ಎಂದು ಕೇಳಿದರು. ಅವರ `ವಾರಸುದಾರ’ ಚಿತ್ರದ ಮೂಲಕ ನನ್ನ ಸಿನಿಮಾ ಜೀವನ ಆರಂಭವಾಯಿತು. `ಮೂರನೇ ಕ್ಲಾಸ್‌ ಮಂಜ ಬಿ.ಕಾಂ. ಭಾಗ್ಯ,’ `ಹೇ ಸರಸೂ,’ `ಚಿಕ್ಕಪೇಟೆ ಸಾಚಾಗಳು,’ `ಭ್ರಮರ,’ `ಸೆಲ್ಯೂಟ್‌,’ `ಬಣ್ಣ,’ `ಯಾರದು?’ ಹೀಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ.

ಕಿರುತೆರೆಗೆ ಪ್ರವೇಶ ಹೇಗಾಯ್ತು?

ಸಿನಿಮಾಗಳಲ್ಲಿ ನನ್ನನ್ನು ಗುರುತಿಸಿಕೊಳ್ಳುವ ಅವಕಾಶ ಸಿಗಲೇ ಇಲ್ಲ. ನನ್ನನ್ನು ನಾನು ಅವಲೋಕನ ಮಾಡಿಕೊಳ್ಳುವ ಹಂತದಲ್ಲಿಯೇ ವಿನು ಬಳಂಜ ಅವರ `ನಿನ್ನೊಲುಮೆಯಿಂದ’ ಧಾರಾವಾಹಿ ನನ್ನನ್ನು ಹುಡುಕಿಕೊಂಡು ಬಂದಿತು. ಅದು ನನ್ನ ವಯಸ್ಸಿಗೂ ಮೀರಿದ ಚಾಲೆಂಜಿಂಗ್‌ ಪಾತ್ರ. 20-25ರ ವಯಸ್ಸಿನ ಇಬ್ಬರು ಮಕ್ಕಳನ್ನು ಹೊಂದಿದ ತಾಯಿಯ ಪಾತ್ರ. ನನ್ನ ಅಭಿನಯವನ್ನು ಹೆಜ್ಜೆಹೆಜ್ಜೆಗೂ ಒರೆಗೆ ಹಚ್ಚುವ ಅವಕಾಶ ಇದ್ದುದರಿಂದ ನಾನು ಬಳಂಜ ಅವರ ಆಹ್ವಾನವನ್ನು ಮನಃಪೂರ್ವಕವಾಗಿ ಒಪ್ಪಿಕೊಂಡೆ. ಆ ಧಾರಾವಾಹಿ ಸಾಕಷ್ಟು ಜನಪ್ರಿಯವಾಗಿ ಜನ ನನ್ನನ್ನು ಗುರುತಿಸುವಂತೆ ಮಾಡಿತು.

ಟಿ.ಎನ್‌. ಸೀತಾರಾಂ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಹೇಗೆ ಲಭಿಸಿತು?

`ನಿನ್ನೊಲುಮೆಯಿಂದ’ ಧಾರಾವಾಹಿ ಮುಗಿದು ಮುಂದೇನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ನನಗೆ ಸೀತಾರಾಂ ಸರ್‌ರಿಂದ ಕರೆ ಬಂತು. ಅವರು ಅಲ್ಲಿಯವರೆಗೆ `ನಿನ್ನೊಲುಮೆಯಿಂದ’ ಧಾರಾವಾಹಿಯ ಸ್ಟಿಲ್ಸ್ ಅಷ್ಟೇ ನೋಡಿದ್ರು. ಅವರು ನನ್ನನ್ನು ನೋಡಿ, “ಏನಮ್ಮ, ನೀನು ಇಷ್ಟು ಚಿಕ್ಕ ವಯಸ್ಸಿನವಳು. ದೊಡ್ಡ ಹೆಂಗಸಿನ ಪಾತ್ರ ಮಾಡ್ತಿಯಾ? ಮುಂದೆ ನಿನಗೆ ಇಂಥದೇ ಪಾತ್ರಗಳು ಹುಡುಕಿಕೊಂಡು ಬರುತ್ತವೆ. ಏನು ಮಾಡುತ್ತಿಯಾ ಯೋಚನೆ ಮಾಡು,’ ಎಂದರು. ‘ನಾನು, ಖಂಡಿತ ಮಾಡ್ತೀನಿ ಸರ್‌. ನಿಮ್ಮ ಧಾರಾವಾಹಿಯಲ್ಲಿ ನಟಿಸೋದು ನನ್ನ ಬಹುದಿನದ ಕನಸಾಗಿತ್ತು,’ ಎಂದು ಹೇಳಿದೆ. ಅಲ್ಲಿಂದಾಚೆಗೆ ನನ್ನ ಪಾತ್ರ ಅದೆಷ್ಟು ಶಕ್ತಿಶಾಲಿ ಎಂಬುದನ್ನು ನೀವೇ ಕಂಡಿದ್ದೀರಿ.

ನಿಮ್ಮ ಭಾಷಾ ಸ್ಪಷ್ಟತೆ, ಸಂಭಾಷಣೆ ಒಪ್ಪಿಸುವ ರೀತಿ ಭಿನ್ನವಾಗಿದೆ. ಇದಕ್ಕೆ ನಿಮಗೆ ಯಾರು ಪ್ರೇರಣೆ ನೀಡಿದರು?

ನಾನು ಆಂಗ್ಲ ಮಾಧ್ಯಮದಲ್ಲಿ ಪಿಯುಸಿವರೆಗೆ ಮಾತ್ರ ಓದಿದವಳು. ಸಿನಿಮಾ ಧಾರಾವಾಹಿಗಳ ಹೊರತಾಗಿ ನಾನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮಹಿಳಾ ಕಾರ್ಯದರ್ಶಿಯಾಗಿದ್ದೇನೆ. ರಾಜ್ಯದ ವಿವಿಧೆಡೆ ಆಗಾಗ ಸಂಚರಿಸಿ ಭಾಷಣ ಮಾಡಬೇಕಾಗುತ್ತದೆ. ಹೀಗಾಗಿ ಕನ್ನಡದ ಬಗೆಗಿನ ಕಳಕಳಿ ನನ್ನನ್ನು ಶುದ್ಧವಾಗಿ, ಸ್ಪಷ್ಟವಾಗಿ ಕನ್ನಡ ಮಾತನಾಡಲು ಪ್ರೇರೇಪಿಸುತ್ತದೆ.

ನಿಮ್ಮ ನಟನೆಯ ವೃತ್ತಿಗೆ ಪತಿ, ಮಕ್ಕಳು ಹೇಗೆ ಸಹಕರಿಸುತ್ತಾರೆ?

ಒಳ್ಳೆಯ ಪಾತ್ರಗಳನ್ನೇ ಮಾಡು ಎಂದು ಪತಿ ಗಿರೀಶ್‌ ಕೀರ್ತಿ ಹಾಗೂ ಅಪ್ಪ ಅಮ್ಮ ನನಗೆ ಹೇಳುತ್ತಾರೆ. ನನ್ನ ಮಗ ಪವನ್‌ ಕೀರ್ತಿ ನನ್ನ ನಿಜವಾದ ವಿಮರ್ಶಕ. ಖಳನಾಯಕಿಯಂತಹ ಪಾತ್ರಗಳನ್ನು ಮಾಡಲೇಬಾರದು ಎಂದು ನನಗೆ ಎಚ್ಚರಿಕೆ ಕೊಡುತ್ತಿರುತ್ತಾನೆ.

ಬಿಡುವಿನ ಹವ್ಯಾಸಗಳೇನು?

ಶೂಟಿಂಗ್‌ನಿಂದ ಬಿಡುವು ದೊರೆತಾಗೆಲ್ಲ ಕುಟುಂಬದವರ ಜೊತೆ ಕಾಲ ಕಳೆಯಲು ಇಷ್ಟಪಡುತ್ತೇನೆ. ಮಗನ ಭವಿಷ್ಯದ ಬಗ್ಗೆ ನನಗೆ ಅಪಾರ ಕಾಳಜಿಯಿದೆ. `ಮಾಧವಿ ಪ್ರಿಯದರ್ಶಿನಿ’ಯ ಪಾತ್ರಕ್ಕೆ ಒಪ್ಪುವಂತಹ ಪೋಷಾಕುಗಳನ್ನು ನಾನೇ ಸ್ವತಃ ಆಯ್ಕೆ ಮಾಡುತ್ತೇನೆ. ಟೂ ವೀಲರ್‌ನಲ್ಲಿ ಚಿಕ್ಕಪೇಟೆಯ ಗಲ್ಲಿ ಗಲ್ಲಿಗಳಿಗೆ ನುಗ್ಗಿ ಇಷ್ಟವಾದ ಪೋಷಾಕು ಖರೀದಿಸಿಟ್ಟುಕೊಳ್ಳುವೆ.

ಮುಂದಿನ ಯೋಚನೆ ಯೋಜನೆಗಳೇನು?

ನನ್ನ ತಂದೆ ಮುನಿಬಚ್ಚಪ್ಪ ರಾಜಕೀಯದಲ್ಲಿದ್ದಾರೆ.  ನನ್ನನ್ನೂ ರಾಜಕೀಯಕ್ಕೆ ತರಬೇಕೆನ್ನುವುದು ಅವರ ಕನಸು. `ಮಹಾಪರ್ವ’ದಲ್ಲಿ ನಾನು ಮುಖ್ಯಮಂತ್ರಿಯಂತೂ ಆದೆ. ವಾಸ್ತವ ರಾಜಕೀಯದಲ್ಲಿ ಹೇಗೊ ಏನೊ? ನನ್ನ ರಾಜಕೀಯ ಪ್ರವೇಶ ಯಾವಾಗ, ಏನು ಅಂತಾ ಯೋಚನೆ ಮಾಡಿಲ್ಲ. ಸಿನಿಮಾಗಳಲ್ಲೂ ಅಭಿನಯಿಸುತ್ತಿರುವೆ. ಪಾತ್ರ ದೊಡ್ಡದಿರಲಿ, ಚಿಕ್ಕದಿರಲಿ ಅದು ಗುಣಮಟ್ಟದ್ದಾಗಿರಬೇಕು.

ಅಶೋಕ ಚಿಕ್ಕಪರಪ್ಪಾ 

ಈವರೆಗಿನ ಎರಡು ಧಾರಾವಾಹಿಗಳಲ್ಲಿ ನೀವು ಪಾರಂಪರಿಕ ಉಡುಗೆಯಲ್ಲಿಯೇ ಕಾಣಿಸಿಕೊಂಡಿದ್ದೀರಿ. ನಿಜ ಜೀವನದ ಅಶ್ವಿನಿ ಹೇಗಿರ್ತಾರೆ?

ನಿಜ ಜೀವನದ ಅಶ್ವಿನಿ ತುಂಬಾ ಫ್ಯಾಷನೆಬಲ್. ಆಕೆಗೆ ಎಲ್ಲ ಬಗೆಯ ಆಧುನಿಕ ಪೋಷಾಕುಗಳು ಇಷ್ಟ. ಆಕೆ ಯಾರಿಗೂ ಹೆದರದವಳು. ತನ್ನದೇ ಆದ ಛಾಪನ್ನು ಮೂಡಿಸುವಳು. ಅವಳು ಹಿರಿಯರು ಹೇಳುವುದನ್ನು ಚಾಚೂ ತಪ್ಪದೇ ಕೇಳಿಸಿಕೊಳ್ಳುತ್ತಾಳೆ. ಸಂಸ್ಕೃತಿ ಸಂಸ್ಕಾರ ಕೂಡ ಮಹತ್ವದ್ದು ಎಂಬುದನ್ನು ಗಮನಿಸುತ್ತಾಳೆ. ಹಬ್ಬ ಉತ್ಸವಗಳಲ್ಲಿ ತನ್ನನ್ನು ಮನಃಪೂರ್ವಕವಾಗಿ ತೊಡಗಿಸಿಕೊಳ್ಳುತ್ತಾಳೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ