ದೂರದಿಂದಲೇ ಎಲ್ಲರನ್ನು ಪುಳಕಗೊಳಿಸುವ ಈ ದ್ವೀಪದ ಸನಿಹಕೆ ಬಂದರೆ ತನು ಅರಳದೆ ಇರದು. ಒಂದೆಡೆ ಇದು ಪ್ರೇಮಿಗಳಿಗೆ ಪ್ರೇಮಲೋಕವಾಗಿ ಕಂಡು ಬಂದರೆ ಮತ್ತೊಂದೆಡೆ ಪ್ರಕೃತಿ ಪ್ರೇಮಿಗಳ ಸ್ವರ್ಗ ಹೌದು.
ಸೇಂಟ್ ಮೇರಿಸ್ ಐಲ್ಯಾಂಡ್
ಉಡುಪಿಯ ಮಲ್ಪೆ ಸಮುದ್ರ ಕಿನಾರೆಯಿಂದ 30-40 ನಿಮಿಷಗಳ ಪ್ರಯಾಣದ ನಂತರ ಸಿಗುವ ಸುಂದರ ದ್ವೀಪವಾಗಿದೆ. ಈ ಪುಟ್ಟ ದ್ವೀಪದ ಸುತ್ತಲೂ ತೆಂಗು ಹಾಗೂ ಗೇರುಹಣ್ಣಿನ ಮರಗಳು ಆರಿಸಿಕೊಂಡಿದ್ದು ದ್ವೀಪದ ಒಂದು ಭಾಗದಲ್ಲಿ ಎತ್ತರದ ಕಲ್ಲುಗಳಿಂದ ಪ್ರಕೃತಿಯೇ ಕೆತ್ತಿದ ಸುಂದರ ಶಿಲಾಕಲೆಯು ಆಕರ್ಷಕವಾಗಿ ಕಂಗೊಳಿಸುತ್ತದೆ.
ಕಣ್ಣು ಹಾಯಿಸಿದಷ್ಟೂ ದೂರ ಸ್ವಚ್ಛಂದ ನೀಲಿ ಬಣ್ಣದ ನೀರು, ಅಲ್ಲಲ್ಲಿ ಹಾಲ್ನೊರೆಯಂತೆ ನಾಟ್ಯವಾಡುತ್ತಾ ತೇಲಿ ಬರುವ ಅಲೆಗಳು, ಬಿಸಿಲ ಧಗೆಯ ನಡುವೆಯೂ ಒಮ್ಮೊಮ್ಮೆ ತಂಪಾಗಿ ಬೀಸುವ ತಂಗಾಳಿ ಹಾಯ್ ಎನಿಸುತ್ತದೆ. ನೀರಿನಲ್ಲಿ ಆಡಲು ಬಯಸುವ ಎಲ್ಲಾ ವರ್ಗದವರಿಗೂ ಇದು ಇಷ್ಟವಾಗುವ ದ್ವೀಪವಾಗಿದೆ. ಈ ದ್ವೀಪದ ಸುತ್ತಲೂ ಅಲ್ಲಲ್ಲಿ ಕಾಣಸಿಗುವ ಸಣ್ಣಪುಟ್ಟ ಐಲ್ಯಾಂಡ್‌ಗಳು ಅದೇನೋ ಕುತೂಹಲ ಮೂಡಿಸಿ ಮನಸ್ಸಿನ ಏಕಾಗ್ರತೆಯನ್ನು ಕಲಕಿಯೇಬಿಡುತ್ತವೆ.
ದ್ವೀಪದ ಭಾಗೋಳಿಕ ಹಿನ್ನೆಲೆ
1960ರ ಸುಮಾರಿನಲ್ಲಿ ಪ್ರೊ. ಸಿ. ನಾಗಣ್ಣ ಹಾಗೂ ಅವರ ತಂಡದವರು ಈ ದ್ವೀಪಕ್ಕೆ ಮೊದಲು ಭೇಟಿ ನೀಡಿ ಅದರ ಭೂವೈಜ್ಞಾನಿಕ ಮಹತ್ವದ ಕುರಿತು ಅಧ್ಯಯನ ನಡೆಸಿದ್ದರು. ಜ್ವಾಲಾಮುಖಿಯ ಸ್ಛೋಟದಿಂದಾಗಿ ಸ್ತಂಭಾಕಾರದಂತೆ ರಚಿಸಲ್ಪಟ್ಟಿರುನ ಶಿಲೆಗಳು ಇಲ್ಲಿವೆ. ಸೇಂಟ್ ಮೇರಿಸ್‌ನ ಪ್ರಮುಖ ದ್ವೀಪ ಸುಮಾರು 27 ಎಕರೆ ಪ್ರದೇಶವನ್ನು ಹೊಂದಿದ್ದು, ಇದರ ಸುತ್ತಲೂ ಅನೇಕ ಸಣ್ಣಪುಟ್ಟ ದ್ವೀಪಗಳನ್ನು ಕಾಣಬಹುದು.
ಇಲ್ಲಿ ಶಿಲಾಸ್ತಂಭಗಳು ಜ್ವಾಲಾಮುಖಿಯಿಂದ ಹೊರಹೊಮ್ಮಿದ ಲಾವಾರಸ ತಂಪುಗೊಂಡು ನಿರ್ಮಾಣವಾದದ್ದು ಎಂದು ವೈಜ್ಞಾನಿಕ ವಿವರಗಳಿಂದ ತಿಳಿದು ಬಂದಿದೆ. ಈ ನೈಸರ್ಗಿಕ ಶಿಲಾಸ್ಥಾಯಿಗಳಲ್ಲಿ ಡೇ ನೈಟ್, ಗ್ರ್ಯಾನೋಫೈರ್ ಮತ್ತು ರೈಯೋಲೇಟ್‌ಕಂಡುಬರುತ್ತವೆ.
ಇಲ್ಲಿನ ಎತ್ತರದ ಕಪ್ಪು ಕಲ್ಲುಗಳು ಅತ್ಯಂತ ವಿಶೇಷವಾದ ಆಕಾರಗಳನ್ನು ಹೊಂದಿದ್ದು ನೋಡುಗರಲ್ಲಿ ಆಶ್ಚರ್ಯವನ್ನುಂಟು ಮಾಡುತ್ತವೆ. ಇಂಥ ಸುಂದರ ಪ್ರಕೃತಿ ಸೌಂದರ್ಯ ಸವಿಯಲು ಹೊರಟರೆ ಸಾಕು, ನಿಸರ್ಗ ತಾನಾಗೇ ನಮಗೆ ಪ್ರಕೃತಿ ಪ್ರೇಮದ ಪಾಠ ಕಲಿಸುವುದು ಮಾತ್ರವಲ್ಲ ನಾವು ಅದರ ಮೇಲಿನ ವ್ಯಾಮೋಹದ ಬಿಗವು ಸಿಕ್ಕಿಬೀಳುವುದು ಖಂಡಿತ. ಮಂಗಳೂರಿನಿಂದ ಕಾರವಾರದವರೆಗೆ ಸುಮಾರು 320 ಕಿ.ಮೀ. ಉದ್ದಕ್ಕೂ ಹರಡಿಕೊಂಡಿರುವ ಕಡಲ ಕಿನಾರೆಯಲ್ಲಿ ಅನೇಕ ದ್ವೀಪಗಳಿದ್ದು ಅವುಗಳಲ್ಲಿ ಕೆಲವನ್ನು ಮಾತ್ರ ಪ್ರವಾಸಿ ತಾಣವಾಗಿ ಮಾರ್ಪಡಿಸಲಾಗಿದೆ.
ಪಾರಂಪರಿಕ ತಾಣವಾಗಲಿ
ಪಶ್ಚಿಮ ಕರಾವಳಿಯ ಎಲ್ಲಾ ದ್ವೀಪಗಳು ಪರಿಸರದ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದುಕೊಂಡಿದ್ದು ಅನೇಕ ವರ್ಷಗಳಿಂದ ಈ ಪ್ರದೇಶವನ್ನು ಪರಿಸರ ತಾಣವನ್ನಾಗಿ ಮಾಡಿ ಎಂಬ ಕೂಗು ಪರಿಸರ ಪ್ರೇಮಿಗಳಿಂದ ಕೇಳಿಬರುತ್ತಿದೆ.
ಕಾರಣ ಈ ಭಾಗದಲ್ಲಿ ಅಕ್ವೇರಿಯಂಗಳಲ್ಲಿ ಇಡಬಹುದಾದ 40ಕ್ಕೂ ಹೆಚ್ಚು ವಿಧದ ವರ್ಣಮಯ ಮೀನುಗಳಿವೆ. ಶಾರ್ಕ್, ತಿಮಿಂಗಿಲ, ಅನೇಕ ವಿಧವಾದ ಹಾವು ಮೀನುಗಳು, ಚೇಳುಗಳು ಹಾಗೂ ವಿವಿಧ ಜಲಚರಗಳು, ಆಕ್ಟೋಪಸ್‌ಗಳು ಇಲ್ಲಿನ ಸುತ್ತಲಿನ ದ್ವೀಪಗಳನ್ನೆಲ್ಲಾ ಕಂಡುಬರುತ್ತವೆ. ಅಲ್ಲದೆ ಪೆಡಿನಾ, ಅಲ್ವಾ, ಸರಗಾಸಂ, ಕಿರೆಪಾದಂಥ ಸಮುದ್ರ ಪಾಚಿಗಳು ದ್ವೀಪಗಳ ಅಂಚಿನಲ್ಲಿರುವ ಬಂಡೆಗಳ ಮೇಲೆ ಬೆಳೆದಿರುವುದರಿಂದ ಈ ದ್ವೀಪಗಳನ್ನು ಪಾರಂಪರಿಕ ದ್ವೀಪಗಳೆಂದು ಘೋಷಿಸಿ ಅಲ್ಲಿ ಮಾನವರು ಹೋಗದಂತೆ ಕಾನೂನಾತ್ಮಕ ತಡೆ ಒಡ್ಡಬೇಕೆಂದು ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ.