``ನನ್ನ ತಂದೆ ರಾಜಕೀಯದಲ್ಲಿದ್ದಾರೆ. ನನ್ನನ್ನು ರಾಜಕೀಯಕ್ಕೆ ತರಬೇಕೆನ್ನುವುದು ಅವರ ಬಹುದಿನದ ಕನಸು. ಧಾರಾವಾಹಿಯ ರಾಜಕಾರಣಕ್ಕೂ ವಾಸ್ತ ರಾಜಕಾರಣಕ್ಕೂ ತುಂಬಾ ವ್ಯತ್ಯಾಸವಿದೆ. ನನ್ನ ರಾಜಕೀಯ ಪ್ರವೇಶ ಯಾವಾಗ, ಏನು ಅಂತಾ ಇನ್ನೂ ಯೋಚನೆ ಮಾಡಿಲ್ಲ.''
`ಮಹಾಪರ್ವ'ದ ಮಹಿಳಾ ಮುಖ್ಯಮಂತ್ರಿ `ಮಾಧವಿ ಪ್ರಿಯದರ್ಶಿನಿ'ಯ ಪಾತ್ರಧಾರಿ ಅಶ್ವಿನಿಯವರ ಸಂದರ್ಶನ ಮಾಡಲೆಂದು ಅವರ ಮನೆಗೆ ಹೋದಾಗ ಅವರ ವಾಸ್ತವ ರೂಪ, ನೈಜ ವಯಸ್ಸು ಕಂಡು ಅಚ್ಚರಿಯಾಯಿತು. ಏಕೆಂದರೆ `ಮಹಾಪರ್ವ'ದ ಮಾಧವಿ 40-45ರ ಮಧ್ಯವಯಸ್ಸಿನ ಗಂಭೀರ ವ್ಯಕ್ತಿತ್ವದ ಮಹಿಳೆ. ವಾಸ್ತವ ಲೋಕದ ಅಶ್ವಿನಿ 30ರ ಆಸುಪಾಸಿನ ಚೈತನ್ಯದ ಚಿಲುಮೆ.
ತಮ್ಮ ವಯಸ್ಸಿಗೂ ಮೀರಿದ ಪಾತ್ರ ಒಪ್ಪಿಕೊಂಡ ಅಶ್ವಿನಿಯವರ ದಿಟ್ಟತನ ನಿಜಕ್ಕೂ ಪ್ರಶಂಸನೀಯ. ಕಿರುತೆರೆಗೆ ಬರುವ ಮುಂಚೆ ಅವರು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿಯೂ ನಟಿಸಿದ್ದರು. ಆದರೆ ಅವ್ಯಾವು ಇವರಿಗೆ ಪ್ರಸಿದ್ಧಿ ತಂದುಕೊಡಲಿಲ್ಲ, ಹೆಸರು ತಂದುಕೊಟ್ಟಿದ್ದು ಕಿರುತೆರೆಯೇ! ತಮ್ಮ ಸಿನಿಮಾ ಜೀವನ, ಕಿರುತೆರೆಯ ನಟನಾ ಬದುಕಿನ ಕುರಿತಂತೆ ಅವರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ....
ಕಿರುತೆರೆಗೆ ಬರುವ ಮುಂಚೆ ನೀವು ಸಿನಿಮಾಗಳಲ್ಲಿ ನಟಿಸುತ್ತಿದ್ದಿರಿ ಅಲ್ವೆ?
ನಮ್ಮದೇ ಆದ ಸಿನಿಮಾಕ್ಕೆ ನಿರ್ದೇಶನ ಮಾಡಬೇಕೆಂದು ನಾನು ನಿರ್ದೇಶನದ ಕೋರ್ಸ್ ಮಾಡಿದೆ. ಕೋರ್ಸ್ ಮುಗಿಸಿ ಫೋಟೊ ಶೂಟ್ ಮಾಡಲೆಂದು ಗುರು ದೇಶಪಾಂಡೆಯವರ ಸಂಸ್ಥೆಗೆ ಹೋಗಿದ್ದೆ. ನನ್ನ ಫೋಟೋಗಳನ್ನು ನೋಡಿ ಅವರು `ನೀವು ತುಂಬಾ ಫೋಟೊಜೆನಿಕ್ ಆಗಿದ್ದೀರಿ. ನಮ್ಮ ಸಿನಿಮಾದ ನಾಯಕಿ ಏಕಾಗಬಾರದು ಎಂದು ಕೇಳಿದರು. ಅವರ `ವಾರಸುದಾರ' ಚಿತ್ರದ ಮೂಲಕ ನನ್ನ ಸಿನಿಮಾ ಜೀವನ ಆರಂಭವಾಯಿತು. `ಮೂರನೇ ಕ್ಲಾಸ್ ಮಂಜ ಬಿ.ಕಾಂ. ಭಾಗ್ಯ,' `ಹೇ ಸರಸೂ,' `ಚಿಕ್ಕಪೇಟೆ ಸಾಚಾಗಳು,' `ಭ್ರಮರ,' `ಸೆಲ್ಯೂಟ್,' `ಬಣ್ಣ,' `ಯಾರದು?' ಹೀಗೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದೆ.
ಕಿರುತೆರೆಗೆ ಪ್ರವೇಶ ಹೇಗಾಯ್ತು?
ಸಿನಿಮಾಗಳಲ್ಲಿ ನನ್ನನ್ನು ಗುರುತಿಸಿಕೊಳ್ಳುವ ಅವಕಾಶ ಸಿಗಲೇ ಇಲ್ಲ. ನನ್ನನ್ನು ನಾನು ಅವಲೋಕನ ಮಾಡಿಕೊಳ್ಳುವ ಹಂತದಲ್ಲಿಯೇ ವಿನು ಬಳಂಜ ಅವರ `ನಿನ್ನೊಲುಮೆಯಿಂದ' ಧಾರಾವಾಹಿ ನನ್ನನ್ನು ಹುಡುಕಿಕೊಂಡು ಬಂದಿತು. ಅದು ನನ್ನ ವಯಸ್ಸಿಗೂ ಮೀರಿದ ಚಾಲೆಂಜಿಂಗ್ ಪಾತ್ರ. 20-25ರ ವಯಸ್ಸಿನ ಇಬ್ಬರು ಮಕ್ಕಳನ್ನು ಹೊಂದಿದ ತಾಯಿಯ ಪಾತ್ರ. ನನ್ನ ಅಭಿನಯವನ್ನು ಹೆಜ್ಜೆಹೆಜ್ಜೆಗೂ ಒರೆಗೆ ಹಚ್ಚುವ ಅವಕಾಶ ಇದ್ದುದರಿಂದ ನಾನು ಬಳಂಜ ಅವರ ಆಹ್ವಾನವನ್ನು ಮನಃಪೂರ್ವಕವಾಗಿ ಒಪ್ಪಿಕೊಂಡೆ. ಆ ಧಾರಾವಾಹಿ ಸಾಕಷ್ಟು ಜನಪ್ರಿಯವಾಗಿ ಜನ ನನ್ನನ್ನು ಗುರುತಿಸುವಂತೆ ಮಾಡಿತು.
ಟಿ.ಎನ್. ಸೀತಾರಾಂ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಹೇಗೆ ಲಭಿಸಿತು?
`ನಿನ್ನೊಲುಮೆಯಿಂದ' ಧಾರಾವಾಹಿ ಮುಗಿದು ಮುಂದೇನು ಮಾಡುವುದು ಎಂದು ಯೋಚಿಸುತ್ತಿರುವಾಗಲೇ ನನಗೆ ಸೀತಾರಾಂ ಸರ್‌ರಿಂದ ಕರೆ ಬಂತು. ಅವರು ಅಲ್ಲಿಯವರೆಗೆ `ನಿನ್ನೊಲುಮೆಯಿಂದ' ಧಾರಾವಾಹಿಯ ಸ್ಟಿಲ್ಸ್ ಅಷ್ಟೇ ನೋಡಿದ್ರು. ಅವರು ನನ್ನನ್ನು ನೋಡಿ, ``ಏನಮ್ಮ, ನೀನು ಇಷ್ಟು ಚಿಕ್ಕ ವಯಸ್ಸಿನವಳು. ದೊಡ್ಡ ಹೆಂಗಸಿನ ಪಾತ್ರ ಮಾಡ್ತಿಯಾ? ಮುಂದೆ ನಿನಗೆ ಇಂಥದೇ ಪಾತ್ರಗಳು ಹುಡುಕಿಕೊಂಡು ಬರುತ್ತವೆ. ಏನು ಮಾಡುತ್ತಿಯಾ ಯೋಚನೆ ಮಾಡು,' ಎಂದರು. 'ನಾನು, ಖಂಡಿತ ಮಾಡ್ತೀನಿ ಸರ್. ನಿಮ್ಮ ಧಾರಾವಾಹಿಯಲ್ಲಿ ನಟಿಸೋದು ನನ್ನ ಬಹುದಿನದ ಕನಸಾಗಿತ್ತು,' ಎಂದು ಹೇಳಿದೆ. ಅಲ್ಲಿಂದಾಚೆಗೆ ನನ್ನ ಪಾತ್ರ ಅದೆಷ್ಟು ಶಕ್ತಿಶಾಲಿ ಎಂಬುದನ್ನು ನೀವೇ ಕಂಡಿದ್ದೀರಿ.