“ಅಶ್ವಿನಿ ನಕ್ಷತ್ರದಲ್ಲಿ ಸ್ವಾಭಿಮಾನಕ್ಕೊಂದು ಹೆಸರೇ ಅಶ್ವಿನಿ ಎಂದು ಉಲ್ಲೇಖಿಸುತ್ತಾರೆ. ವಾಸ್ತವ ಜೀವನದ ಮಯೂರಿ ಕೂಡ ಅಷ್ಟೇ ಸ್ವಾಭಿಮಾನಿ. ಯಾವ ಅತಿರೇಕವನ್ನೂ ಅವಳು ಸಹಿಸಿಕೊಳ್ಳಳು.”

`ಅಶ್ವಿನಿ ನಕ್ಷತ್ರ’ದ ಸೂಪರ್‌ ಸ್ಟಾರ್‌ ಜೆ.ಕೆ. ಮಹಾ ದುರಹಂಕಾರಿ. ಸದಾ ಸಿಡುಕು ಮುಖದವನಾಗಿದ್ದ. ಅವನ ಮುಖದಲ್ಲಿ ನಗು ಅರಳಿಸಿದ ಅಶ್ವಿನಿ ಮಹಾ ದಿಟ್ಟ ಹುಡುಗಿ. ಆ ಸ್ವಾಭಿಮಾನಿ ಹುಡುಗಿಯಾಗಿ ನಟಿಸುತ್ತಿರುವುದು ಹುಬ್ಬಳ್ಳಿಯ ಮಯೂರಿ ಕ್ಯಾತಾರಿ.

ಹುಬ್ಬಳ್ಳಿ ಹಾಗೂ ಇತರೆ ನಗರಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆಯುತ್ತಿದ್ದ ಮಯೂರಿ ಕಿರುತೆರೆ ಅಥವಾ ಸಿನಿಮಾ ಲೋಕಕ್ಕೆ ಬರಬೇಕೆಂದು ಕಲ್ಪನೆ ಕೂಡ ಮಾಡಿರಲಿಲ್ಲ. ಆದರೆ ಅವರ ಪರಿಶ್ರಮ ಅವರನ್ನು ಟಿ.ವಿ. ಧಾರಾವಾಹಿ ಅಷ್ಟೇ ಅಲ್ಲ, ಸಿನಿಮಾ ಲೋಕಕ್ಕೂ ಕಾಲಿಡುವಂತೆ ಮಾಡಿತು.

`ಅಶ್ವಿನಿ ನಕ್ಷತ್ರ’ದ ಜನಪ್ರಿಯತೆ ಅವರಿಗೆ `ಕೃಷ್ಣ ಲೀಲಾ’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ತಂದುಕೊಟ್ಟಿದೆ. ತಮ್ಮ ಧಾರಾವಾಹಿ ಹಾಗೂ ಸಿನಿಮಾಗಳೆರಡರ ಅಭಿನಯ ಕುರಿತಂತೆ ಮಯೂರಿ `ಗೃಹಶೋಭಾ’ಳಿಗೆ ಹೀಗೆ ಉತ್ತರಿಸಿದ್ದಾರೆ?:

`ಅಶ್ವಿನಿ ನಕ್ಷತ್ರಕ್ಕೆ ಬರುವ ಮುನ್ನ ನೀವು ನಿರೂಪಣೆಯಲ್ಲಿಯೇ ತೊಡಗಿಕೊಂಡಿದ್ರಿ ಅಲ್ವೇ?

ಕಾಲೇಜಿನಲ್ಲಿರುವಾಗಲೇ ನಾನು ನಿರೂಪಣೆ ಆರಂಭಿಸಿದ್ದೆ. `ಕಲಿಕೆಯ ಜೊತೆಗೆ ಗಳಿಕೆ’ ಎಂಬುದು ಆಗಿನ ನನ್ನ ಧ್ಯೇಯವಾಗಿತ್ತು. ಕನ್ನಡ, ಇಂಗ್ಲಿಷ್‌ ಜೊತೆಗೆ ಹಿಂದಿ, ಮರಾಠಿ, ಮಾರ್ವಾಡಿ ಭಾಷೆಗಳು ನನಗೆ ಬರುತ್ತವೆ. ಹುಬ್ಬಳ್ಳಿ, ಬೆಂಗಳೂರು, ಹೊಸಪೇಟೆ ಹೀಗೆ ಕರ್ನಾಟಕದಲ್ಲಷ್ಟೇ ಅಲ್ಲ, ಪಕ್ಕದ ಮಹಾರಾಷ್ಟ್ರದಲ್ಲೂ ನಾನು ನಿರೂಪಣೆ ಮಾಡಿದ್ದೆ. ಸ್ಯಾಮ್ಸಂಗ್‌ನಂತಹ ದೊಡ್ಡ ಕಾರ್ಪೊರೇಟ್‌ ಕಂಪನಿಗೂ ನಾನು ಆ್ಯಂಕರಿಂಗ್‌ ಮಾಡ್ತಿದ್ದೆ. ನಿರೂಪಣೆಯಲ್ಲಿಯೇ ಭವಿಷ್ಯ ಕಂಡುಕೊಳ್ಳಬೇಕೆಂದು ನಾನು ನಿರ್ಧರಿಸಿದ್ದೆ.

`ಸೈಎಂಬ ರಿಯಾಲಿಟಿ ಶೋನಲ್ಲಿ ನೀವು ಆಯ್ಕೆಯಾಗಿದ್ದಿರಂತೆ?

ನಾನು ಹುಬ್ಬಳ್ಳಿಯ ಸುನಿಲ್ ಆಚಾರ್ಯ ಅವರ ಬಳಿ ಫ್ರೀ ಸ್ಟೈಲ್ ‌ಹಾಗೂ ಸೆಮಿ ಕ್ಲಾಸಿಕ್‌ ಡ್ಯಾನ್ಸ್ ಕಲಿತಿದ್ದೆ. ಪಿಯುಸಿಯಲ್ಲಿ ಓದುತ್ತಿರುವಾಗ `ಸುವರ್ಣ’ ಚಾನೆಲ್‌ನಲ್ಲಿ `ಸೈ’ ಎಂಬ ಡ್ಯಾನ್ಸ್ ರಿಯಾಲಿಟಿ ಶೋ ಬರುತ್ತಿತ್ತು. `ನೀನೂ ಅದರಲ್ಲಿ ಪ್ರಯತ್ನ ಮಾಡು’ ಎಂದು ಗೆಳತಿಯರು ನನಗೆ ದುಂಬಾಲು ಬಿದ್ದರು. ನಾನು ಆಡಿಷನ್‌ಗೆ ಹೋದೆ, ಆಯ್ಕೆಯೂ ಆದೆ. ಹೀಗೆ ಟಿ.ವಿ.ಯಲ್ಲಿ ಮೊದಲ ಬಾರಿ ಕಾಣಿಸಿಕೊಂಡೆ.

`ಸೈನಲ್ಲಿ ಸೈ ಎನ್ನಿಸಿಕೊಂಡ ನೀವು `ಅಶ್ವಿನಿ ನಕ್ಷತ್ರದಲ್ಲಿ ಆಯ್ಕೆಯಾದದ್ದು ಹೇಗೆ?

ಬಿ.ಕಾಂ. ಮುಗಿಸಿ ನಾನು ಪತ್ರಿಕೋದ್ಯಮದ ಕೋರ್ಸ್‌ ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದೆ. ಫಾರ್ಮ್ ತುಂಬಿ ಇನ್ನೇನು ಕಾಲೇಜಿಗೆ ಕೊಟ್ಟು ಬರಬೇಕೆಂದು ಅಂದುಕೊಂಡಿರುವಾಗಲೇ `ಸೈ’ ರಿಯಾಲಿಟಿ ಶೋದ ನಿರ್ದೇಶಕ ಸಂಜೀವ್ ‌ಅವರು ನನಗೆ ಫೋನ್‌ ಮಾಡಿ ಧಾರಾವಾಹಿಯಲ್ಲಿ ಅಭಿನಯಿಸುವ ಬಗ್ಗೆ ಕೇಳಿದರು. ಆವರೆಗೆ ಅಭಿನಯ ಏನೆಂದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದದ್ದು ಕೇವಲ ನಿರೂಪಣೆ ಮಾತ್ರ. ಹೀಗಾಗಿ ನಾನು ಅವರಿಗೆ “ಸರ್‌, ನನಗೆ ಟಿ.ವಿ.ಯಲ್ಲಿ ಯಾವುದಾದರೂ ನಿರೂಪಣೆ ಇದ್ರೆ ಹೇಳಿ, ಬರ್ತೀನಿ,” ಎಂದು ಅಸ್ಪಷ್ಟ ಉತ್ತರ ಕೊಟ್ಟಿದ್ದೆ. ರಾತ್ರಿ ಅಮ್ಮನ ಮುಂದೆ, “ಧಾರಾವಾಹಿಯಲ್ಲಿ ಅಭಿನಯಿಸುವ ಬಗ್ಗೆ ಕೇಳುತ್ತಿದ್ದಾರೆ. ಏನು ಮಾಡಲಿ?” ಎಂದೆ. ಆ ಮಾತಿಗೆ ಅಮ್ಮ `ಮನೆಯಲ್ಲಿ ಇಷ್ಟು ಚೆನ್ನಾಗಿ ಆ್ಯಕ್ಟ್ ಮಾಡ್ತೀಯಾ, ಅಲ್ಲೂ ಹೋಗಿ ಆ್ಯಕ್ಟ್ ಮಾಡು,’ ಎಂದು ಸಹಜವಾಗಿಯೇ ನನ್ನನ್ನು ಬೆಂಬಲಿಸಿದರು. ಆಡಿಷನ್‌ ಕೊಟ್ಟೆ, ಯಶಸ್ವಿಯೂ ಆದೆ.

ರೇಖಾ ರಾವ್ ಅವರಂತಹ ಹಿರಿಯ ಕಲಾವಿದರ ಜೊತೆ ಅಭಿನಯಿಸುತ್ತಿದ್ದೀರಿ. ಅವರಿಂದ ನಿಮಗೆ ಹೇಗೆ ಪ್ರೇರಣೆ, ಪ್ರೋತ್ಸಾಹ ದೊರೆಯುತ್ತಿದೆ?

`ಆಯಿ’ ನಿಜಕ್ಕೂ ಮಾದರಿ ಕಲಾವಿದೆ. ಶೂಟಿಂಗ್‌ನಲ್ಲಿ ಹಾಗಿರಬೇಕು, ಹೀಗಿರಬೇಕು ಎಂದು ಅವರು ಯಾರಿಗೂ ಬಾಯಿಬಿಟ್ಟು ಹೇಳುವುದಿಲ್ಲ. ಅವರು ಅನುಸರಿಸುವುದನ್ನು ನೋಡಿಯೇ ನಾವು ತಿಳಿದುಕೊಳ್ಳಬೇಕು. ಶೂಟಿಂಗ್‌ ಸ್ಥಳಕ್ಕೆ ಬರುತ್ತಿದ್ದಂತೆಯೇ ಅವರು ಭೂಮಿ ತಾಯಿಯನ್ನು ಮುಟ್ಟಿ ಪೋಷಾಕು ಧರಿಸುತ್ತಾರೆ. ಮೇಕಪ್‌ ಹಾಕಿಕೊಳ್ಳುತ್ತಾರೆ. ಬಳಿಕ ಕ್ಯಾಮೆರಾ ಮುಟ್ಟಿ ಒಂದೆರಡು ನಿಮಿಷ ಮಂತ್ರ ಪಠಿಸಿ, `ನಾನಿಂದು ಶಾಂತಚಿತ್ತದಿಂದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ,’ ಎಂದು ಹೇಳುತ್ತಾರೆ. ಅವರ ವೃತ್ತಿ ಗೌರವದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ. ಜೆ.ಕೆ. ಕೂಡ ಅಭಿನಯದಲ್ಲಿ ಪಳಗಿದರು. ಅವರೂ ನನಗೆ ಸಾಕಷ್ಟು ವಿಷಯ ತಿಳಿಸುತ್ತಾರೆ. ಹೀಗೆ ನಾನು ಪ್ರತಿಯೊಬ್ಬರಿಂದಲೂ ಏನನ್ನಾದರೂ ಕಲಿಯುತ್ತಲೇ ಇರುತ್ತೇನೆ.

ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಹೇಗೆ ಬಂದಿತು?

ಅದು `ಅಶ್ವಿನಿ ನಕ್ಷತ್ರ’ದ ಮಹಿಮೆಯೇ ಎಂದು ಹೇಳಬಹುದು. ಶಶಾಂಕ್‌ ಸರ್‌ ನನಗೆ ಫೋನ್‌ ಮಾಡಿ `ಕೃಷ್ಣಲೀಲಾ’ದಲ್ಲಿ ಅಜಯ್ ರಾವ್ ‌ಜೊತೆ ಅಭಿನಯಿಸುವ ಬಗ್ಗೆ ಕೇಳಿದರು. ನನಗೆ ನಂಬಲು ಆಗಲೇ ಇಲ್ಲ. ಅವರ `ಮೊಗ್ಗಿನ ಮನಸ್ಸು’ ಸಿನಿಮಾವನ್ನು ನಾನು ಹಲವು ಬಾರಿ ನೋಡಿದ್ದೆ. ಆದರೆ ಅವರ ಒಂದು ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ದೊರೆಯುತ್ತದೆ ಎಂದುಕೊಂಡಿರಲಿಲ್ಲ. ಹೀಗೆ ಮೊದಲ ಧಾರಾವಾಹಿಯ ಜೊತೆಗೆ ಮೊದಲ ಸಿನಿಮಾ ಕೂಡ ಆರಂಭವಾಗಿದೆ.

`ಅಶ್ವಿನಿ ನಕ್ಷತ್ರ ಅಶ್ವಿನಿಗೂ ವಾಸ್ತವ ಜೀವನದ ಮಯೂರಿಗೂ ಏನು ಸಾಮ್ಯತೆ ಇದೆ?

ಅಶ್ವಿನಿ ನಕ್ಷತ್ರದಲ್ಲಿ ಸ್ವಾಭಿಮಾನಕ್ಕೊಂದು ಹೆಸರೇ ಅಶ್ವಿನಿ ಎಂದು ಉಲ್ಲೇಖಿಸುತ್ತಾರೆ. ವಾಸ್ತವ ಜೀವನದ ಮಯೂರಿ ಕೂಡ ಅಷ್ಟೇ ಸ್ವಾಭಿಮಾನಿ. ಕುಟುಂಬ ಅವಳಿಗೆ ತನ್ನದೇ ಆದ ಇತಿಮಿತಿಗಳಿವೆ. ಯಾವ ಅತಿರೇಕವನ್ನೂ ಅವಳು ಸಹಿಸಿಕೊಳ್ಳಳು.

ಅಶೋಕ ಚಿಕ್ಕಪರಪ್ಪಾ 

ನಿರೂಪಣೆಗೂ ಅಭಿನಯಕ್ಕೂ ಏನು ವ್ಯತ್ಯಾಸ ಕಂಡುಕೊಂಡಿರಿ?

ಯಾವುದೇ `ಟೇಕ್‌’ಗಳಿಲ್ಲದೆ ಕಾರ್ಯಕ್ರಮದಲ್ಲಿ ನಿರರ್ಗಳವಾಗಿ ಆ್ಯಂಕರಿಂಗ್‌ ಮಾಡಿಬಿಡುತ್ತೇವೆ. ಆದರೆ ಅಭಿನಯ ನಿರ್ದೇಶಕರಿಗೆ ತೃಪ್ತಿಯಾಗುವ ತನಕ ಮಾಡುತ್ತಲೇ ಇರಬೇಕಾಗುತ್ತದೆ. ಆರಂಭದಲ್ಲಿ ನನಗೆ ಅಭಿನಯ ಕಷ್ಟ ಎನಿಸಿತ್ತು. ಬರಬರುತ್ತಾ ಅದು ಸಲೀಸಾಗುತ್ತ ಹೋಯಿತು. ಈಗ ಒಂದು ದಿನ ಶೂಟಿಂಗ್‌ ಇರದಿದ್ದರೂ ಬೇಸರ ಎನಿಸುತ್ತದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ