“ವಯಸ್ಸಿಗೆ ಮೀರಿದ ಪಾತ್ರಗಳನ್ನು ನಾನು ಖಂಡಿತ ಒಪ್ಪಿಕೊಳ್ಳುವುದಿಲ್ಲ. ಒಂದು ಸಲ ನಾವು ವಯಸ್ಸಿಗೆ ಮೀರಿದ ಪಾತ್ರಗಳನ್ನು ಒಪ್ಪಿಕೊಂಡು ಬಿಟ್ರೆ ಮುಂದೆ ನಮಗೆ ಅಂತಹದೇ ಪಾತ್ರಗಳನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ.”

`ಲಕ್ಷ್ಮೀ ಬಾರಮ್ಮ,’ ಹಳ್ಳಿಯ ಮುಗ್ಧ ಹುಡುಗಿಯೊಬ್ಬಳ ಆಕಸ್ಮಿಕ ವಿವಾಹದ ಸುತ್ತ ಹೆಣೆಯಲಾದ ಧಾರಾವಾಹಿ. ಲಕ್ಷ್ಮೀ ಹಳ್ಳಿಗರ ಬಾಯಲ್ಲಿ `ಲಚ್ಚಿ’ ಹಾಗೂ ಚಂದನ್‌ ಮನೆಯವರಿಂದ ಪ್ರೀತಿಯಿಂದ `ಚಿನ್ನು’ ಎಂದೂ ಕರೆಸಿಕೊಳ್ಳುತ್ತಾಳೆ. ಈ ಹಳ್ಳಿ ಹುಡುಗಿಯ ಪಾತ್ರಕ್ಕೆ ಜೀವ ತುಂಬುತ್ತಿರುವ ಕಲಾವಿದೆ ಕವಿತಾ.

ಬಿ.ಕಾಂ. ಪದವೀಧರೆಯಾದ ಕವಿತಾ ಆಧುನಿಕ ಪೋಷಾಕು ಧರಿಸುವ ಯುವತಿ, ಭರತನಾಟ್ಯ ಕಲಾವಿದೆ ಕೂಡ. ಮಲ್ಲೇಶ್ವರದ ಅಮ್ಮಣ್ಣಿ ಕಾಲೇಜಿನಲ್ಲಿ ಓದಿದ ಅವರು, ಅಲ್ಲಿ ಸ್ಪಾನ್ಸರ್‌ ಶಿಪ್‌ ಡಿಪಾರ್ಟ್‌ಮೆಂಟಿನ ಜವಾಬ್ದಾರಿ ವಹಿಸಿಕೊಂಡು ಬೇರೆ ಬೇರೆ ಈವೆಂಟ್‌ ನಡೆಸುತ್ತಿದ್ದರು. ಕಾಲೇಜಿನ ಥ್ರೋ ಬಾಲ್ ತಂಡದ ಕ್ಯಾಪ್ಟನ್‌, ಕ್ರಿಕೆಟ್‌ ತಂಡದ ಸಹ ಆಟಗಾರ್ತಿಯಾಗಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ತಂದುಕೊಟ್ಟಿದ್ದರು.

`ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ ಆಯ್ಕೆಯಾದ ಬಗ್ಗೆ ಹಾಗೂ ಆ ಬಳಿಕದ ಆಗುಹೋಗುಗಳ ಬಗ್ಗೆ ಕವಿತಾ ಇಲ್ಲಿ ಉತ್ತರಿಸಿದ್ದಾರೆ.

ಭರತನಾಟ್ಯ ಕಲಾವಿದೆಯಾದ ನಿಮಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಹೇಗೆ ಲಭಿಸಿತು?

ಭರತನಾಟ್ಯ ಗುರುಗಳಾದ ಶಮಾ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಾನು ಹುಬ್ಬಳ್ಳಿಗೆ ಹೋಗಿದ್ದೆ. ನಾವು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಶೃತಿ ನಾಯ್ಡು ಕೂಡ ಉಳಿದುಕೊಂಡಿದ್ದರು. ಶಮಾ ಮೇಡಂ ನನ್ನನ್ನು ಅವರಿಗೆ ಪರಿಚಯ ಮಾಡಿಸಿದರು. ಈ ಪರಿಚಯವೇ ಅವರ `ಪುನರ್ವಿವಾಹ’ ಧಾರಾವಾಹಿಗೆ ನಾನು ಆಡಿಷನ್‌ಗೆ ಹೋಗಲು ಕಾರಣವಾಯಿತು. ಆ ಧಾರಾವಾಹಿಗೆ ನನ್ನನ್ನು ಆಯ್ಕೆ ಕೂಡ ಮಾಡಿಬಿಟ್ಟಿದ್ದರು. ಆದರೆ ಅದು ಇಬ್ಬರು ಮಕ್ಕಳ ತಾಯಿಯ ಪಾತ್ರವಾಗಿದ್ದರಿಂದ ನಾನೇ ಆ ಪಾತ್ರ ಬೇಡವೆಂದೆ. ಬಳಿಕ `ಅಶ್ವಿನಿ ನಕ್ಷತ್ರ’ದ ಆಡಿಷನ್‌ಗೂ ಹೋಗಿದ್ದೆ. ಅಲ್ಲಿ ನಾನು ಕೊಟ್ಟಿದ್ದ ಆಡಿಷನ್‌ ಮಿಲನ್‌ ಪ್ರಕಾಶ್‌ ಅವರಿಗೆ ಇಷ್ಟವಾಗಿ `ಲಕ್ಷ್ಮೀ ಬಾರಮ್ಮ’ ಧಾರಾವಾಹಿಗೆ ನನ್ನನ್ನು ಆಯ್ಕೆಯಾಗುವಂತೆ ಮಾಡಿತು.

ಆಧುನಿಕ ವಿಚಾರಧಾರೆ, ಮಾಡರ್ನ್ಡ್ರೆಸ್ಧರಿಸುವ ನಿಮಗೆ ಹಳ್ಳಿಹುಡುಗಿ ಅದರಲ್ಲೂ ಗ್ರಾಮ್ಯ ಭಾಷೆ ಮಾತಾಡುವ ಹುಡುಗಿಯ ಪಾತ್ರ ಮಾಡಲು ಕಷ್ಟ ಆಗಲಿಲ್ಲವೇ?

ಆ ಹಳ್ಳಿಹುಡುಗಿಯ ಪಾತ್ರ ನನಗೊಂದು ಚಾಲೆಂಜ್‌ ಎಂಬಂತೆ ಎನಿಸಿತ್ತು. ಹೀಗಾಗಿ ಆ ಪಾತ್ರ ಒಪ್ಪಿದ್ದೆ. ಆರಂಭದಲ್ಲಿ ಆ ಪಾತ್ರ ಮಾಡುವುದು ನನಗೆ ಕಷ್ಟ ಎನಿಸಿತ್ತು. ಹಳ್ಳಿಯವರ ರೀತಿಯಲ್ಲಿ ಹೇಗೆ ಮಾತನಾಡುವುದು ಎಂದು ಗೊಂದಲವನ್ನುಂಟು ಮಾಡಿತ್ತು. ಆದರೆ ನಿರ್ದೇಶಕ ಸತೀಶ್‌ ಸರ್‌, ಚಂದನ್‌ನ ಅಮ್ಮ ಪಾರ್ವತಿಯ ಪಾತ್ರ ಮಾಡುತ್ತಿರುವ ದೀಪಾ ಅವರು ನನಗೆ ಎಳೆ ಎಳೆಯಾಗಿ ಹೇಳಿಕೊಟ್ಟರು. ಗೊಂಬೆಯ ಅಮ್ಮನ ಪಾತ್ರ ಮಾಡುತ್ತಿರುವ ಲಕ್ಷ್ಮೀ ಹಾಗೂ ಇತರೆ ಕಲಾವಿದರು ಕೂಡ ನನಗೆ ಸಾಕಷ್ಟು ವಿಷಯ ತಿಳಿಸುತ್ತಿರುತ್ತಾರೆ.

ಹೊರಗಡೆ ಹೋದಾಗ ಜನ ನಿಮ್ಮ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ?

ನಾನು ಸಾಮಾನ್ಯವಾಗಿ ಹೊರಗಡೆ ಮಾಡರ್ನ್‌ ಡ್ರೆಸ್‌ನಲ್ಲಿಯೇ ಹೋಗ್ತೀನಿ. ಆದರೂ ಜನ ನನ್ನನ್ನು ಗುರುತಿಸುತ್ತಾರೆ. ಅಚ್ಚರಿಯಿಂದ ನನ್ನನ್ನು ನೋಡುತ್ತಿರುತ್ತಾರೆ. `ನಿಮಗೆ ಮದುವೆಯಾಗಿರಬಹುದು ಅಂದ್ಕೊಡಿದ್ವಿ. ನೀವಿಷ್ಟು ಚಿಕ್ಕ ವಯಸ್ಸಿನವರು ಅಂತಾ ಗೊತ್ತಿರಲಿಲ್ಲ,’ ಎನ್ನುತ್ತಾರೆ. ನಮ್ಮ ಮನೆ ಆಸುಪಾಸಿನವರು ಕೂಡ ಆರಂಭದಲ್ಲಿ ನನ್ನನ್ನು ಹಾಗೂ ನನ್ನ ಪಾತ್ರವನ್ನು ಹೋಲಿಸಿ ಬೆರಗುಗಣ್ಣಿನಿಂದ ನೋಡಿ `ನೀವು ನಿಜವಾಗಿಯೂ ಲಚ್ಚಿ ಪಾತ್ರಧಾರಿನಾ?’ ಎಂದು ಕೇಳಿದ್ದೂ ಉಂಟು.

ಮುಂದೆಯೂ ಲಚ್ಚಿ ತೆರನಾದ ಪಾತ್ರಗಳೇ ಹುಡುಕಿಕೊಂಡು ಬಂದರೆ….?

ಕಾಲಕ್ಕೆ ತಕ್ಕಂತೆ ನಾವು ಬದಲಾಗುತ್ತಲೇ ಹೋಗಬೇಕು. ಅದೇ ರೀತಿ ಇಂತಹುದೇ ಚಾಲೆಂಜ್‌ ಆದ ಪಾತ್ರ ಬಂದರೆ ಖಂಡಿತ  ಒಪ್ಪಿಕೊಳ್ಳಲೇ ಬೇಕು. ಹಾಗಂತ ವಯಸ್ಸಿಗೆ ಮೀರಿದ ಪಾತ್ರಗಳನ್ನು ನಾನು ಖಂಡಿತ ಒಪ್ಪಿಕೊಳ್ಳುವುದಿಲ್ಲ. ಒಂದು ಸಲ ನಾವು ವಯಸ್ಸಿಗೆ ಮೀರಿದ ಪಾತ್ರಗಳನ್ನು ಒಪ್ಪಿಕೊಂಡು ಬಿಟ್ರೆ ಮುಂದೆ ನಮಗೆ ಅಂತಹದೇ ಪಾತ್ರಗಳನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ.

`ಸೀರಿಯಲ್ ಸಂತೆಯಂತಹ ಕಾರ್ಯಕ್ರಮಗಳು ಕಲಾವಿದರಿಗೆ ಎಷ್ಟರಮಟ್ಟಿಗೆ ಪ್ರೇರಣೆ ನೀಡುತ್ತವೆ?

ಹೊಸಪೇಟೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸೇರಿದ ಜನಸ್ತೋಮವೇ ಧಾರಾವಾಹಿಯೊಂದು ಪ್ರೇಕ್ಷಕರ ಮನಸ್ಸಿನಲ್ಲಿ ಅದೆಷ್ಟು ಆಳವಾಗಿ ಬೇರೂರಿದೆ ಎಂಬುದು ಗೊತ್ತಾಗುತ್ತದೆ. ಪ್ರೇಕ್ಷಕರು ನನ್ನ ಹೆಸರನ್ನೇ ಹಿಡಿದು ಕೂಗುತ್ತಿದ್ದುದನ್ನು ಕಂಡು ನನಗೆ ಆಶ್ಚರ್ಯ ಹಾಗೂ ಅಷ್ಟು ಜನರೆದುರು ಹೇಗೆ ಡ್ಯಾನ್ಸ್ ಮಾಡುವುದು ಎಂಬ ಸಣ್ಣ ಆತಂಕ ಇತ್ತು. ಆದರೆ ನಾನು ಯಾವುದೇ ಹಿಂಜರಿಕೆಯಿಲ್ಲದೇ ನೃತ್ಯ ಮಾಡಿದೆ.

ಪಾತ್ರ ತೊರೆದು ಹೋಗುವ ಧೋರಣೆಯ ಬಗ್ಗೆ ಏನು ಹೇಳಲು ಇಚ್ಛಿಸುವಿರಿ?

ಬೇರೆ ಭಾಷೆಗಳಲ್ಲಿ ಒಳ್ಳೆಯ ಪಾತ್ರ ಸಿಕ್ಕರೆ ನಾನು ನಿರ್ದೇಶಕರ ಒಪ್ಪಿಗೆ ಪಡೆದೇ ಹೋಗ್ತೀನಿ. ಆದರೆ ಈಗ ಒಪ್ಪಿಕೊಂಡಿರುವ ಪಾತ್ರವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮಧ್ಯದಲ್ಲಿಯೇ ಪಾತ್ರ ತೊರೆದು ಹೋಗುವುದು ಖಂಡಿತ ಒಳ್ಳೆಯದಲ್ಲ.

ಮುಂದಿನ ಯೋಚನೆ ಯೋಜನೆಗಳೇನು?

ಧಾರಾವಾಹಿಯಲ್ಲಿ ಸೂಕ್ತ ಪಾತ್ರಗಳಲ್ಲಿ ನಟಿಸುವುದರ ಜೊತೆಜೊತೆಗೆ ಡ್ಯಾನ್ಸ್ ವಿಷಯದಲ್ಲಿ ಎಂ.ಎ. ಮಾಡಬೇಕೆಂಬ ಆಸೆಯೂ ಇದೆ. ಒಬ್ಬ ಪ್ರೊಫೆಶನಲ್ ಭರತನಾಟ್ಯ ಡ್ಯಾನ್ಯರ್‌ ಆಗಿ ಮಕ್ಕಳಿಗೆ ಅದರ ಜ್ಞಾನ ನೀಡಬೇಕೆನ್ನುವುದು ನನ್ನ ಕನಸು.

ಅಶೋಕ ಚಿಕ್ಕಪರಪ್ಪಾ

ಲಚ್ಚಿ ಪಾತ್ರಕ್ಕೂ ವಾಸ್ತವ ಜೀವನದ ಕವಿತಾಗೂ ಏನು ವ್ಯತ್ಯಾಸ?

ವಾಸ್ತವ ಜೀವನದ ಕವಿತಾಗೆ ಲಚ್ಚಿಯ ಪಾತ್ರದ ಬಗ್ಗೆ ತುಂಬಾ ಕೋಪ ಬರುತ್ತದೆ. ಲಚ್ಚಿ ಬಹುಬೇಗ ಕೋಪ ಮಾಡಿಕೊಳ್ಳುತ್ತಾಳೆ. ಅಷ್ಟೇ ಬೇಗನೇ ಅಳುತ್ತಾಳೆ. ಆದರೆ ವಾಸ್ತವ ಜೀವನದ ಕವಿತಾ ತುಂಬಾ ಬೋಲ್ಡ್. ಅಷ್ಟು ಸುಲಭವಾಗಿ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಏನಾದ್ರೂ ತಪ್ಪಾದ್ರೆ ಅದನ್ನು ತಕ್ಷಣವೇ ತಿದ್ದಿಕೊಳ್ಳಲು ಪ್ರಯತ್ನ ಮಾಡುತ್ತಾಳೆ. ಇನ್ನು ಡ್ರೆಸ್‌ ಬಗ್ಗೆ ಹೇಳಬೇಕೆಂದರೆ ಕವಿತಾಗೆ ಸೀರೆಯ ಬಗೆಗಿನ ಪ್ರೀತಿ ಅಷ್ಟಕಷ್ಟೇ. ಅಲಂಕಾರ ಕೂಡ ಸಿಂಪಲ್. ಯಾವಾಗಲೂ ಸಹಜವಾಗಿ ಮಾಡರ್ನ್‌ ಡ್ರೆಸ್‌ನಲ್ಲಿ ಇರಬೇಕೆನ್ನುತ್ತಾಳೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ