ಮೈಸೂರು ಕರ್ನಾಟಕದ ಸಾಂಸ್ಕೃತಿಕ ನಗರಿ. ಆಧುನಿಕತೆಯ ಅಬ್ಬರದಲ್ಲೂ ಸಹಜ ಸೌಂದರ್ಯ ಎಂಬ ಸ್ಮಿತವದನದೊಂದಿಗೆ ತನ್ನ ಘನ ವೈಭವದ ಸಾಂಸ್ಕೃತಿಕ ಪರಂಪರೆಯನ್ನು ಸಾರುತ್ತಾ ಪ್ರವಾಸಿಗರನ್ನು ತನ್ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗಿದೆ.

ಇಂತಹ ಸಾಂಸ್ಕೃತಿಕ ನಗರದಲ್ಲಿ ಪಾರಂಪರಿಕತೆಯ ಮೆರುಗು ಪಡೆದು ಗೃಹಾಲಂಕಾರಿಕ ಚಿತ್ರಕಲೆ, ಮಣ್ಣು, ಮರ, ಶಿಲೆ ಹಾಗೂ ಲೋಹಗಳಿಂದ ತಯಾರಿಸಿದ ಉತ್ಕೃಷ್ಟ ದರ್ಜೆಯ ಅಪರೂಪದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಕೇಂದ್ರವಾದ ರಾಮ್ ಸನ್ಸ್, ಕರ್ನಾಟಕದ ಅತ್ಯಂತ ದೊಡ್ಡ ಹ್ಯಾಂಡಿ ಕ್ರಾಫ್ಟ್ ಸಂಸ್ಥೆಯಾಗಿ ಸದ್ದು, ಗದ್ದಲವಿಲ್ಲದೆ ದೇಶದಲ್ಲೇ ಅಲ್ಲದೆ ವಿದೇಶಗಳಲ್ಲೂ ಸುದ್ದಿಯಲ್ಲಿದೆ.

5

ಮೈಸೂರಿನ ಮೃಗಾಲಯದ ಎದುರಿಗೆ ಆಕರ್ಷಕ ಮುರ್ಲಾ ಕೆತ್ತನೆಯ ಹೊರಮೈ ಹೊಂದಿರುವ 15,000 ಅಡಿ ಚದರ ವಿಸ್ತೀರ್ಣದ ಮೂರು ಅಂತಸ್ತಿನ ಕಟ್ಟಡದಲ್ಲಿ 1966ರಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಂಡಿರುವ ರಾಮ್ ಸನ್ಸ್ ಪ್ರತಿಷ್ಠಾನವನ್ನು ಸಹಜ ಕುತೂಹಲದಿಂದ ಒಮ್ಮೆ ಪ್ರವೇಶಿಸಿದರೆ ಯಾರೂ ನಿರೀಕ್ಷಿಸಿರದ ಹಾಗೂ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ಕರಕುಶಲ ವಸ್ತುಗಳ ಕುಬೇರನ ಖಜಾನೆಯಂತಿರುವ ಸಂದರ ಕಲಾಲೋಕ ಅನಾವರಣಗೊಂಡು ಸಂದರ್ಶಕರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ.

1

ಇದನ್ನು ಸಂದರ್ಶಿಸಿದ ಅಸಂಖ್ಯಾತ ವಿದೇಶೀ ಪ್ರವಾಸಿಗರು ರಾಮ್ ಸನ್ಸ್ ನ ಹಿರಿಮೆ ಹೆಚ್ಚಿಸುವ ಪ್ರಶಂಸಕ ನುಡಿಗಳನ್ನಾಡಿದ್ದಾರೆ. ಕಟ್ಟಡದ ಪ್ರತಿಯೊಂದು ಭಾಗ ನಿಷ್ಣಾತ ಕರಕುಶಲ ಕರ್ಮಿಗಳ ಕೌಶಲ್ಯದ ಕೈಚಳಕದಿಂದ ಜೀವಪಡೆದ, ಕಲಾ ಶ್ರೀಮಂತಿಕೆಯಿಂದ ಕಂಗೊಳಿಸುವ ವಿವಿಧ ನಮೂನೆಯ ಸುರಸುಂದರ ಕರಕುಶಲ ವಸ್ತುಗಳು ವೀಕ್ಷಕರ ಮನ ಮುಟ್ಟಿ ಮೈ ಮರೆಸುತ್ತವೆ. ಇದರ ಮತ್ತೊಂದು ಭಾಗವೇ 1995ರಲ್ಲಿ ಸಂಸ್ಥೆಯ ಮಾಲೀಕರಾದ ರಾಮ್ ಸಿಂಗ್‌ರವರಿಂದ ಸ್ಥಾಪನೆಗೊಂಡ ರಾಮ್ ಸನ್ಸ್ ಕಲಾ ಪ್ರತಿಷ್ಠಾನ.

2 (1)

ಯಾವುದೇ ಆದಾಯ ಅಥವಾ ಲಾಭದ ಅಪೇಕ್ಷೆಯಿಲ್ಲದೆ ಕೇವಲ ಪಾರಂಪರಿಕ ಕರಕುಶಲ ಕಲೆಗಳ ಮತ್ತು ಕಲಾವಿದರ ಪೋಷಣೆ ಹಾಗೂ ಪ್ರೋತ್ಸಾಹಕ್ಕಾಗಿ ಸೇವಾ ಮನೋಭಾವದಿಂದ ಮಾದರಿ ಸಂಸ್ಥೆಯಂತೆ ಶ್ರಮಿಸುವುದೇ ಇದರ ಧ್ಯೇಯೋದ್ದೇಶವಾಗಿದೆ. ಇದಕ್ಕೆ ಪೂರಕಾಗಿ 1995ರಿಂದ ಕರಕುಶಲ ಕರ್ಮಿಗಳಿಗೆ ಪ್ರಶಸ್ತಿ, ಪುರಸ್ಕಾರ ನೀಡುವುದು, ಸೆಮಿನಾರ್‌ ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು, ಪಾರಂಪರಿಕ ಮೆರುಗಿನ ಕರಕುಶಲ ವಸ್ತುಗಳ ಪ್ರದರ್ಶಶನ ಏರ್ಪಡಿಸಿ ಸಂಶೋಧನೆ ನಡೆಸುವುದು ಪ್ರತಿಷ್ಠಾನದ ಕೈಂಕರ್ಯವಾಗಿದೆ.

ವಿವಿಧ ಕೆತ್ತನೆಗಳು

 

ನೆಲ ಅಂತಸ್ತು ಸಾಮಾನ್ಯವಾಗಿ ಕರಕುಶಲ ವಸ್ತುಗಳನ್ನು ಪ್ರದರ್ಶಿಸುವ ಪ್ರದರ್ಶನಾಲಯವಾಗಿದ್ದರೆ, ಉಳಿದ ಮೇಲಿನ ಅಂತಸ್ತುಗಳಲ್ಲಿ ಸಂದರ್ಶಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಅನುಪಮ ಚೆಲುವಿನ ತಂಜವೂರ್‌, ಗಂಜೀಫ, ಕೇರಳದ ಮುರ್ಲಾ, ಮೈಸೂರು ಶೈಲಿಯ ಚಿತ್ರಕಲೆ, ಜೈಪುರ್‌ ಮತ್ತು ಮೊಘಲ್ ಮಾದರಿಯ ಬುರುಜುಗಳು ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುವ ವಿವಿಧ ಜಾತಿ ಮರದ ಕೆತ್ತನೆಗಳು, ವಿವಿಧ ಲೋಹಗಳಿಂದ ಎರಕಹೊಯ್ದ ಶಿಲ್ಪ ಮೊದಲಾದವುಗಳನ್ನು ಒಪ್ಪ ಓರಣವಾಗಿ ಜೋಡಿಸಿ ಮಾರಾಟಕ್ಕೆ ಇಡಲಾಗಿದೆ.

ಮಹಿಳೆಯರು ಮೋಹಗೊಳ್ಳುವಂತೆ ಮಾಡುವ ಸಾಂಪ್ರದಾಯಿಕ ಉಡುಗೆ ತೊಡುಗೆಗಳೇ ಅಲ್ಲದೆ ನವನವೀನ ಮಾದರಿಯ ಸೀರೆಗಳು, ಉಡುಪುಗಳು, ಚಿನ್ನ, ಬೆಳ್ಳಿ ಹಾಗೂ ಹರಳು ಮೊದಲಾದವುಗಳಿಂದ ತಯಾರಿಸಿದ ದೇಶಿ ಹಾಗೂ ವಿದೇಶೀ ನಮೂನೆ ಆಭರಣಗಳು, ಚರ್ಮದಿಂದ ತಯಾರಿಸಿದ ಕೈ ಚೀಲಗಳು, ಆಕರ್ಷಣೀಯ ಕೊಡುಗೆ ವಸ್ತುಗಳು, ಶ್ರೀಗಂಧ, ತೇಗ, ಬೀಟೆ ಮರಗಳಿಂದ ಕೆತ್ತಿದ ದೇವತಾ ಮೂರ್ತಿಗಳು, ಪ್ರಾಣಿಗಳು ಹಾಗೂ ವಿವಿಧ ಮಾದರಿಯ ಪೀಠೋಪಕರಣಗಳು, ಪೂಜಾ ಮಂಟಪಗಳು, ಅಮೃತ ಶಿಲೆಯಿಂದ ತಯಾರಿಸಿದ ಹೂಜಿ ಮೊದಲಾದ ಮಾರಾಟಕ್ಕೆ ಲಭ್ಯವಿವೆ.

ಭವ್ಯ ಸಾಂಸ್ಕೃತಿಕ ಇತಿಹಾಸ

4

ಕರ್ನಾಟಕದ ಇತಿಹಾಸ ಹಾಗೂ ಭವ್ಯ ಸಾಂಸ್ಕೃತಿಕ ಪರಂಪರೆಯ ಸ್ವರ್ಣ ಅಧ್ಯಾಯವನ್ನು ಪ್ರತಿಮಾ ರೂಪದಲ್ಲಿ ಮುಂದಿನ ತಲೆಮಾರಿಗೆ ಪರಿಚಯಿಸುವ ಉದ್ದೇಶ ಹಾಗೂ ಪಾರಂಪರಿಕ ಸಂಸ್ಕೃತಿಯ ರಕ್ಷಣೆ ರಾಮ್ ಸನ್ಸ್ ಕಲಾ ಪ್ರತಿಷ್ಠಾನದ ಧ್ಯೇಯವಾಗಿದೆ.

ಇದಕ್ಕಾಗಿ ಪ್ರತಿಷ್ಠಾನ ತನ್ನ ನೆಲ ಅಂತಸ್ತನ್ನು ಕಲಾ ಶ್ರೀಮಂತಿಕೆಯಿಂದ ಕೂಡಿದ ಪಾರಂಪರಿಕ ಮತ್ತು ಸಾಂಸ್ಕೃತಿಕ ಕರಕುಶಲ ವಸ್ತುಗಳ ಪ್ರದರ್ಶನಕ್ಕಾಗಿ ಬೊಂಬೆ ಮನೆಯನ್ನೊಳಗೊಂಡ ಪ್ರತಿಮಾ ಹೆಸರಿನ ಆರ್ಟ್‌ ಗ್ಯಾಲರಿಗಾಗಿ ಮೀಸಲಿಟ್ಟಿದೆ. ದಸರಾ ಸಂದರ್ಭದಲ್ಲಿ ಜರುಗುವ ಬೊಂಬೆಗಳ ಪ್ರದರ್ಶನ, ದೀಪಾವಳಿ ಸಂದರ್ಭದಲ್ಲಿ ಜರುಗುವ ಹದಿನೈದು ಸಾವಿರಕ್ಕೂ ಹೆಚ್ಚಿನ ದೀಪ ಸೌಂದರ್ಯ ಪ್ರದರ್ಶನ, ಕೃಷ್ಣ ಜನ್ಮಾಷ್ಮಮಿ ಸಂದರ್ಭದಲ್ಲಿ ಜರುಗುವ ಕೃಷ್ಣನ ಲೀಲೆಗಳ ಚಿತ್ರಕಲಾ ಪ್ರದರ್ಶನ, ನಮ್ಮ ಪೂರ್ವಿಕರ ಮನರಂಜನಾ ಕ್ರೀಡಾ ವಸ್ತುಗಳ (ಕ್ರೀಡಾ ಕೌಶಲ್ಯ) ಪ್ರದರ್ಶನ ಹಾಗೂ ತೈಲ ವರ್ಣ ಚಿತ್ರಗಳ ಮತ್ತು ರವಿವರ್ಮನ ಚಿತ್ರಕಲೆಗಳ ಪ್ರದರ್ಶನ ಪ್ರಮುಖ ಹಾಗೂ ಯಶಸ್ವಿ ಪ್ರದರ್ಶನಗಳಾಗಿವೆ.

ರಾಮ್ ಸನ್ಸ್ ಕಲಾ ಪ್ರತಿಷ್ಠಾನದ ಪ್ರತಿಮಾ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳುವ ವಿವಿಧ ನಮೂನೆಯ ಚಿತ್ರಕಲೆಯ ಎಲ್ಲಾ ಕೃತಿಗಳೂ ಸಂದರ್ಶಕರ ಮನಸ್ಸನ್ನು ಸೂರೆಗೊಳ್ಳುತ್ತವೆ. ಇವುಗಳ ಮೂಲ ಕರ್ತೃಗಳೇನಾದರೂ ಈ ಕೃತಿಗಳನ್ನು ವೀಕ್ಷಿಸಿದರೆ ಬೇಸ್ತು ಬೀಳುವುದರಲ್ಲಿ ಸಂಶಯವಿಲ್ಲ. ಯಾವುದು ಒರಿಜಿನಲ್, ಯಾವುದು ಡೂಪ್ಲಿಕೇಟ್‌ ಎಂದು ವರ್ಗೀಕರಿಸಲು ಎಂತಹವರಿಗೂ ಸಾಧ್ಯವಾಗದಷ್ಟು ಅತ್ಯದ್ಭುತವಾಗಿವೆ!

ಬೊಂಬೆ ಮನೆಯ ವೈಭವ

ಬೊಂಬೆ ಮನೆಯಲ್ಲಿ ಪ್ರದರ್ಶನಗೊಳ್ಳುವ ಮಕ್ಕಳ ಆಕರ್ಷಣೆಯ ಆಟಿಕೆ ಬೊಂಬೆಗಳು ನೋಡಲು ಚೆನ್ನ, ಆಡಲು ಬಲು ಚೆನ್ನ. ಆಲೀಗಢ ಕಲಾವಿದರ ಲೋಹ ಕೊಡುಗೆಗಳು, ಪುದುಚ್ಚೇರಿ, ಮಧುರೈ, ತಂಜವೂರು, ಕೃಷ್ಣಾನಗರ ಮೊದಲಾದ ಊರುಗಳ ವೈವಿಧ್ಯಮಯ ಮಣ್ಣಿನ ಮೂರ್ತಿಗಳು, ದೇವದೇವಿಯರು, ಭಕ್ತವೃಂದ, ವರ್ಣಮಯ ಬಿಂಬಗಳು ಬೊಂಬೆ ಮನೆಯಲ್ಲಿ ಸಮೃದ್ಧವಾಗಿ ಕಾಣಸಿಗುತ್ತವೆ. ಅರಮನೆಯ ಮುಂಭಾಗದಿಂದ ಉತ್ತರ ದ್ವಾರವನ್ನು ಹಾದು ಚಾಮರಾಜ ಒಡೆಯರ್‌ ವೃತ್ತವನ್ನು ಬಳಸಿ ನಿಂತ ವೈಭದ ಜಂಬೂ ಸವಾರಿ ಮೆರವಣಿಗೆಯ ಸಮೂಹ ದೃಶ್ಯ ಕಲಾಕೃತಿಯಂತೂ ಚಿತ್ತಾಕರ್ಷಣೀಯ!

ನಿತ್ಯ ದೀಪಾವಳಿ

6

ದೀಪಗಳ ಸಮುದ್ರ ಅಥವಾ ಜಾತ್ರೆಯಂತೆ ಭಾಸವಾಗುವ ದೀಪ ಸೌಂದರ್ಯ ಪ್ರದರ್ಶನದಲ್ಲಿ ವೈವಿಧ್ಯಮಯ ರೂಪಿನ ಹದಿನೈದು ಸಾವಿರಕ್ಕೂ ಹೆಚ್ಚಿನ ದೀಪಗಳು ಸಂದರ್ಶಕರನ್ನು ಸಮ್ಮೋಹನಗೊಳಿಸದಿರದು. ಮಣ್ಣು, ಮೇಣ, ಹಿತ್ತಾಳೆ, ತಾಮ್ರ, ಕಬ್ಬಿಣದಿಂದ ರೂಪ ಪಡೆದ ವಿಭಿನ್ನ ಶೈಲಿಯ ಕುಸುರಿ ಕೆಲಸದ ದೀಪಗಳು, ಬಣ್ಣ ಬಣ್ಣದ ಗಾಜಿನ ಗೂಡುಗಳು, ತೂಗುದೀಪಗಳು ಮನೆಯ ಮುಂದಿನ ಅಂದವನ್ನು ನಿಸ್ಸಂಶಯವಾಗಿ ಇಮ್ಮಡಿಗೊಳಿಸುತ್ತವೆ.

ಜೋಧ್‌ಪುರದ ಬಣ್ಣದ ಬೆಳಕಿನ ಬುಟ್ಟಿಗಳು, ಮೊಘಲರ ಶೈಲಿಯ ಕಲಾ ಕುಸುರಿಯನ್ನು ಅನುಸರಿಸಿ ಲೋಹದ ತಗಡಿನ ಆವರಣದಲ್ಲಿ ರಂಗುರಂಗಾದ ಕಿಟಕಿಗಳಂತೆ ಕಾಣುವ ಗಾರುಡಿ ಲಾಂಧ್ರಗಳು ಮುಘಲ್ ಇಸ್ಲಾಮ್ ವಾಸ್ತುಶೈಲಿಯ ವೈವಿಧ್ಯಮಯ ಬುರುಜುಗಳನ್ನು ನೆನಪಿಸುತ್ತವೆ.

ಐದು ನೂರಕ್ಕೂ ಹೆಚ್ಚಿನ ಹೊಸ ನಮೂನೆಯ ದೀಪಗಳು, ನವನವೀನ ಮಾದರಿಯ ಕಂಚಿನ ದೀಪದ ಕಂಬ ಮತ್ತು ವಯ್ಯಾರದ ದೀಪದ ಮಲ್ಲಿಗಳು, ಕಂಚಿನಲ್ಲಿ ಎರಕಹೊಯ್ದ ವೈವಿಧ್ಯಮಯ ಗಜದೀಪ, ಹಂಸದೀಪ, ನಾಗದೀಪ, ಗಣೇಶ ದೀಪ ಹಾಗೂ ನಾನಾ ವಿನ್ಯಾಸದ ದೀವಿಗೆಗಳು, ದೀಪ ಪುಂಜಗಳು, ಕಲ್ಪನೆಗೂ ನಿಲುಕದ ಕಂಚಿನ ವೃಕ್ಷ ದೀಪ, ವಿವಿಧ ಬಗೆಯ ಆರತಿಗಳು, ದೇವಾರಾಧನೆಯ ಪರಿಕರಗಳು, ಸುಮನೋಹರ ಮಣ್ಣಿನ ಲತಾ ಸುಮಗಳು, ರೆಡಿಮೇಡ್‌ ದೀಪಗಳು, ವೈವಿಧ್ಯಮಯ ಮೇಣದ ಬತ್ತಿ ಹಣತೆಗಳು ಹಾಗೂ ಮನೆಯ ಮುಂದಿನ ಸೊಬಗನ್ನು ನೂರ್ಮಡಿಗೊಳಿಸಿ ನೋಡುಗರನ್ನು ವಿಸ್ಮಯಗೊಳಿಸುತ್ತವೆ.

ಪ್ರಾಚೀನ ಒಳಾಂಗಣ ಕ್ರೀಡೆಗಳು

5

ಈಗ್ಗೆ ಸುಮಾರು 25-30 ವರ್ಷಗಳ ಹಿಂದೆ ಸಾಮಾನ್ಯವಾಗಿ ಹಿರಿಯರು ಆಡುತ್ತಾ ಕಾಲಕಳೆಯುತ್ತಿದ್ದ ಮನೆಯೊಳಗೆ ಆಡುವ ಕ್ರೀಡೆಗಳಾದ ಪಗಡೆ, ಚದುರಂಗ, ಪರಮಪದ, ಅಷ್ಟಪಾದ, ಚೌಕಾಬಾರ, ಅಳಗುಳಿಮನೆ, ಹುಲಿಕಟ್ಟು ಮುಂತಾದ ಕ್ರೀಡೆಗಳನ್ನು ಇಂದಿನ ಟಿ.ವಿ. ಮತ್ತು ಕಂಪ್ಯೂಟರ್‌ ಸಂಸ್ಕೃತಿಯ ಯುಗದಲ್ಲಿ ಕಾಣುವುದಿರಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಇಂತಹ ಕ್ರೀಡಾ ವಸ್ತುಗಳನ್ನು ಇಂದಿನ ತಲೆಮಾರಿಗೆ ಪರಿಚಯಿಸಿಕೊಡುವ ಪ್ರಶಂಸನೀಯ ಕೆಲಸವನ್ನು ರಾಮ್ ಸನ್ಸ್ ಕಲಾ ಪ್ರತಿಷ್ಠಾನ ಕ್ರೀಡಾ ಕೌಶಲ್ಯವೆಂಬ ಪ್ರದರ್ಶನದ ಮೂಲಕ ಮಾಡುತ್ತಿರುವುದು ಶ್ಲಾಘನೀಯ.

ಮನಸ್ಸಿಗೆ ಮುದ ನೀಡಿ, ಬುದ್ಧಿಮತ್ತೆಯನ್ನು ಹೆಚ್ಚಿಸುವ ಸಾಂಪ್ರದಾಯಿಕ ಕ್ರೀಡೆಗಳಾದ ಚೌಕಾಬಾರ, ಅಳಗುಳಿಮನೆ ಮುಂತಾದ ಕುಟುಂಬದ ಹಾಗೂ ಬಂಧುಮಿತ್ರರಲ್ಲಿ ಸ್ನೇಹ, ಪರಸ್ಪರ ಸೌಹಾರ್ದ ವಾತಾವರಣವನ್ನು ಸೃಷ್ಟಿಸುವಲ್ಲಿ ಹಾಗೂ ಆನಂದ ಮತ್ತು ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಕಾರಿ. ರಾಮ್ ಸನ್ಸ್ ಕಲಾ ಪ್ರತಿಷ್ಠಾನದಲ್ಲಿ ಸೊಲ್ಲಾಪುರ ಹಾಸು, ಜೋಧಪುರ ಚೌಕಿ, ಬೆಂಗಳೂರು ಚಾಪೆ ಹಾಸು, ಶ್ರೀಕಾಳಹಸ್ತಿ ಕಲಮ್ ಕಾರಿ ಹಾಸು, ಒಡಿಶಾ ತಾಳೆಗರಿ ಹಾಸು, ಶಾಂತಿನಿಕೇತನ ಬಾಟಿಕ್‌ ಹಾಸು, ಸಾರನಾಥ, ಎಟಿಕೊಪ್ಪಕ ಮತ್ತು ವಾರಾಣಸಿಯ ಸುಮಾರು 25ಕ್ಕೂ ಹೆಚ್ಚಿನ ವೈವಿಧ್ಯಮಯ ಕಾಯಿ ಕವಡೆ ದಾಳಗಳು ಕ್ರೀಡಾ ಕೌಶಲ್ಯ ಮೇಳದಲ್ಲಿ ವಿಜೃಂಭಿಸುತ್ತವೆ.

ಬೆಲೆಯಲ್ಲಿ ಕಲೆ ಮುಖ್ಯ!

ಸಂದರ್ಶಕರು ಇವುಗಳನ್ನೆಲ್ಲಾ ವೀಕ್ಷಿಸುವುದೇ ಅಲ್ಲದೆ ಆಸಕ್ತಿ ಇದ್ದಲ್ಲಿ ಆಟವಾಡಿ ಗತಕಾಲದ ನೆನಪುಗಳನ್ನು ಮೆಲುಕು ಹಾಕಲೂ ಅವಕಾಶವಿರುತ್ತದೆ. ರಾಮ್ ಸನ್ಸ್ ಪ್ರತಿಷ್ಠಾನ ಸಾಂಪ್ರದಾಯಿಕ ಅಥವಾ ಪಾರಂಪರಿಕ ವಸ್ತುಗಳ ಬಗ್ಗೆ ಸಂಶೋಧನೆ ನಡೆಸಿ, 60ಕ್ಕೂ ಹೆಚ್ಚಿನ ಸಾಂಪ್ರದಾಯಿಕ ಕ್ರೀಡೆಗಳನ್ನು ಬೆಳಕಿಗೆ ತಂದು ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿದೆ. ಬೀಟೆ ಮರದಿಂದ ಸಿದ್ಧಪಡಿಸಿರುವ ಬೃಹದಾಕಾರದ ಚದುರಂಗ ಸೆಟ್‌ನ ಬೆಲೆ ರೂ. 86,500. ಇದಕ್ಕೆ ಉಪಯೋಗಿಸುವ ಸೇನೆ, ಕುದುರೆ, ಒಂಟೆ, ಆನೆ, ಮಂತ್ರಿ, ರಾಜನ ಆಕೃತಿಗಳನ್ನು ಒಂಟೆಯ ಮೂಳೆಯಿಂದ ಕೆತ್ತಲಾಗಿದೆಯಂತೆ. ಬೆಳ್ಳಿಯಲ್ಲಿ ಎರಕಹೊಯ್ದಿರುವ ಕ್ರೀಡಾ ಮಣೆಯೊಂದರ ಬೆಲೆ ಒಂದು ಲಕ್ಷ ರೂಪಾಯಿಗಳು! ಇಲ್ಲಿ ಪ್ರದರ್ಶನಕ್ಕಿರುವ ಬಹುತೇಕ ಎಲ್ಲಾ ವಿಧದ ಕರಕುಶಲ ವಸ್ತುಗಳು ಮನೆಯ ಒಳಗಿನ ಅಥವಾ ಹೊರಗಿನ ಶೋಭೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಹೆಚ್ಚಿಸುವ ಕಲಾ ಶ್ರೀಮಂತಿಕೆಯನ್ನು ಹೊಂದಿರುವುದು ವಿಶೇಷ.

– ರಾಮಕೃಷ್ಣಾರ್ಪಣಾನಂದ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ