`ವೈದ್ಯೋ ನಾರಾಯಣೋ ಹರಿ' ಎಂಬಂತೆ ತಮ್ಮ ಅಮೂಲ್ಯ ವೈದ್ಯಕೀಯ ಸೇವೆಯಿಂದ ಜನಮಾನಸದಲ್ಲಿ ಅಪರೂಪದ ಅನನ್ಯ ಭರವಸೆ ಮೂಡಿಸಿರುವ ಡಾ. ಆಶಾ ರೆಡ್ಡಿಯವರ ಸಂಪೂರ್ಣ ಪರಿಚಯ ಪಡೆಯೋಣವೇ.....?
``ಅವರು ಎಂತಹ ಒಳ್ಳೆಯ ಡಾಕ್ಟರ್! ಅವರ ಹತ್ತಿರ ಮಾತಾನಾಡಿದ್ರೆ ಅರ್ಧ ಕಾಯಿಲೆ ವಾಸಿಯಾಗಿಬಿಡುತ್ತೆ. ಅವರ ನಗು ಮುಖ ನೋಡ್ತಾ, ಮೃದು ಮಾತು ಕೇಳ್ತಾ ಇದ್ರೆ ನಮಗೆ ಶಕ್ತಿ ಬಂದುಬಿಡುತ್ತೆ,'' ಎಂದು ಡಾಕ್ಟರ್ ಹತ್ತಿರ ಹೋಗಿ ಬಂದವರು ಹೇಳುತ್ತಿದ್ದುದನ್ನು ನಾವೆಲ್ಲಾ ಕೇಳಿದ್ದೇವೆ. ನೋವಲ್ಲಿ ಇರುವವರೇ ವೈದ್ಯರ ಹತ್ತಿರ ಹೋಗುವುದು, ಅದರಿಂದ ಅವರ ಒಂದು ಸಾಂತ್ವನದ ಮಾತು ರೋಗಿಗೆ ಸಾಕಷ್ಟು ಬಲವನ್ನು ನೀಡುತ್ತದೆ. ಇದು ನಿಜಕ್ಕೂ ವೈದ್ಯರಿಗೆ ಇರಬೇಕಾದ ಕೌಶಲ್ಯ. ಅಂತಹ ಎಲ್ಲ ಗುಣಗಳನ್ನು ಹೊಂದಿರುವವರು ಡಾ. ಆಶಾ ರೆಡ್ಡಿ. ಅವರೊಡನೆ ಮಾತನಾಡುತ್ತಿದ್ದರೆ ಅವರ ಮಾತುಗಳನ್ನೇ ಕೇಳುತ್ತಿರಬೇಕು ಎನಿಸುತ್ತದೆ. ಇವರೊಬ್ಬ ಅತಿ ಯಶಸ್ವಿ ವೈದ್ಯೆ.

ತಾಯ್ತನ ಎಷ್ಚು ಮುಖ್ಯ?
ತಾಯ್ತನ ಹೆಣ್ಣಿನ ಜೀವನದ ಬಹು ಮುಖ್ಯ ಹಂತ. ಆ ಸಮಯದಲ್ಲಿ ಅವಳು ಎಲ್ಲರಿಂದಲೂ ಪ್ರೀತಿ ವಿಶ್ವಾಸ ಬಯಸುತ್ತಾಳೆ. ಅದರಲ್ಲೂ ಅವಳನ್ನು ನೋಡು, ತಪಾಸಣೆ ಮಾಡುವ ವೈದ್ಯೆ ಅವಳಿಗೆ ದೇವರ ಸಮಾನ. ಆದ್ದರಿಂದ ಸರಿಯಾದ ಡಾಕ್ಟರ್ ನ್ನು ಆರಿಸುವುದು ಬಹಳ ಮುಖ್ಯ. ಹೇಳಬೇಕೆಂದರೆ ಅದು ನಮ್ಮ ಜೀವನ ಮರಣದ ಪ್ರಶ್ನೆ. ಆಶಾ ಚಿಕಿತ್ಸೆ ನೀಡಿದ ಪೇಶೆಂಟ್ ಒಬ್ಬರು ಹೇಳಿದ ಮಾತು ``ನಾನು ಬಸುರಿಯಾಗಿದ್ದಾಗ ನನಗೆ 36 ವರ್ಷ, ನನಗೆ ಮಧುಮೇಹ ಇತ್ತು. ಸಾಮಾನ್ಯವಾಗಿ ಬಸುರಿಯರಿಗೆ ಆ ಸಮಯದಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತದೆ. ಬೇರೆ ಯಾರಾದರೂ ಡಾಕ್ಟರ್ ಆಗಿದ್ದರೆ ಖಂಡಿತ ಸಿಸೇರಿಯನ್ ಮಾಡಿಬಿಡುತ್ತಿದ್ದರು. ಆದರೆ ಡಾ. ಆಶಾ ಬಹಳ ಸಹನೆಯಿಂದ ನನಗೆ ಧೈರ್ಯ ನೀಡಿ, ಸಾಮಾನ್ಯ ಅಂದರೆ ನಾರ್ಮಲ್ ಡೆಲಿವರಿಯನ್ನೇ ಮಾಡಿಸಿದರು.
``ಪ್ರೆಗ್ನೆನ್ಸಿಯಲ್ಲಿ ನನ್ನ ತಪಾಸಣೆಗೆ ಬರುವಾಗಲೂ ಅಷ್ಟೆ, ಬಹಳ ಸಂಯಮದಿಂದ ನಡೆದುಕೊಳ್ಳುತ್ತಿದ್ದರು. ನಾನು 30 ಕಿ.ಮೀ. ದೂರದಿಂದ ಬರುತ್ತಿದ್ದೆ. ನಿಜಕ್ಕೂ ಅದು ಸಾರ್ಥಕವೆನಿಸಿತು. ಈಗ ನನ್ನ ಮಗನಿಗೆ ನಾಲ್ಕು ವರ್ಷ ಆರೋಗ್ಯವಾಗಿದ್ದಾನೆ.''

ಹಣ ಇವರ ಆದ್ಯತೆ ಅಲ್ಲ
ಆಶಾರ ಹುಟ್ಟು ಸ್ಥಳ ದಾವಣಗೆರೆಯ ಹತ್ತಿರದ ಒಂದು ಹಳ್ಳಿ. ಅವರಿಗೆ ಡಾಕ್ಟರ್ ಆಗುವ ಅಭಿಪ್ರಾಯವೇ ಇರಲಿಲ್ಲವಂತೆ. ಲಾಯರ್ ಅಥವಾ ಪತ್ರಕರ್ತೆಯಾಗ ಬೇಕೆನ್ನುವುದು ಅವರ ಆಸೆಯಾಗಿತ್ತಂತೆ. ತಂದೆ ಎಂಜಿನಿಯರ್ ಮತ್ತು ತಾಯಿ ಹೆಸರಾಂತ ವೈದ್ಯರು. ಆ ಪ್ರೇರಣೆಯಿಂದಲೇ ಆಶಾ ಸಹ ವೈದ್ಯರಾಗಿರಬೇಕು. ಆಶಾ ಮೊದಲು ಎಂ.ಬಿ.ಬಿ.ಎಸ್ ಓದಿ ನಂತರ ಪ್ರಸೂತಿ ತಜ್ಞೆಯಾಗಿ ನಂತರ ಕೃತಕ ಗರ್ಭಧಾರಣೆಯ ವಿಷಯದಲ್ಲಿ ವಿಶೇಷ ತಜ್ಞೆಯಾಗಿ (ಸೂಪರ್ ಸ್ಪೆಷಾಲಿಟಿ) ಪ್ರಾವಿಣ್ಯತೆ ಪಡೆದಿದ್ದಾರೆ. ಮಕ್ಕಳಿಲ್ಲದ ಅನೇಕ ದಂಪತಿಗಳ ಜೀವನದಲ್ಲಿ ಅವರಿಗೆ ಸಂತಾನ ಭಾಗ್ಯದ ವರ ಪಡೆಯಲು ಚಿಕಿತ್ಸೆ ನೀಡಿದ್ದಾರೆ. ಬಹಳಷ್ಟು ಬಾರಿ ಇವರು ಚಿಕಿತ್ಸೆಗೆ ಪಡೆಯಬೇಕಾದ ಶುಲ್ಕವನ್ನು ಆಶಾ ಇನ್ಛಿನೈಟ್ ಸಂಸ್ಥೆಗೆ ದೇಣಿಗೆ ನೀಡಲು ಹೇಳುತ್ತಾರೆ. ಸಂಸ್ಥೆಗೆ ವಾಸೆಂಟಿಯರ್ ಆಗಿ ಸೇವೆ ಸಲ್ಲಿಸಲು ಹೇಳುತ್ತಾರೆ. ಹಣಕ್ಕೆ ಪ್ರಾಮುಖ್ಯತೆ ಕೊಡದ ಅಪರೂಪದ ವೈದ್ಯರಲ್ಲಿ ಇವರೂ ಒಬ್ಬರು ಎನ್ನಬಹುದು. ಅವರನ್ನು ನೋಡಲು ಬರುವ ರೋಗಿಗಳ ಜೊತೆ ಬಹಳ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ.





