ನವೆಂಬರ್‌ 1 ಬಂದಾಗ, ರಾಜ್ಯೋತ್ಸವದ ಹೆಸರಿನಲ್ಲಿ ಕನ್ನಡದ ಬಗ್ಗೆ ನಾನಾ ಭಾಷಣ ಕೊರೆಯುವ, ಕನ್ನಡದ ಸೇವೆಯ ಬಗ್ಗೆ ಬರಿದೇ ಮಾತನಾಡುವ ಜನರೇ ತುಂಬಿರುವ ನಮ್ಮ ನಾಡಲ್ಲಿ, ಕನ್ನಡ ಸಾಹಿತ್ಯ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ವೀಣಾ ನಾಯಕ್ಅವರ ಸಾಧನೆಗಳ ಬಗ್ಗೆ ವಿವರವಾಗಿ ತಿಳಿಯೋಣವೇ…..?

ಪ್ರತಿ ವರ್ಷ ಮಾರ್ಚ್‌ 8ರಂದು ಮಹಿಳಾ ದಿನಾಚರಣೆ ಆಚರಿಸುತ್ತೇವೆ. ಈ ಸಂದರ್ಭದಲ್ಲಿ ನಮ್ಮ ಅಕ್ಕಪಕ್ಕದಲ್ಲಿ ಇರುವ ಮಹಿಳೆಯರ ಬಗ್ಗೆ ಹೇಳಲು ನಮಗೆ ಖುಷಿಯಾಗುತ್ತದೆ. ಈಗ ನಾನು ನಿಮಗೆ ಡಿಫರೆಂಟ್‌ ಆಗಿ ಸಾಹಿತ್ಯ ಬೆಳೆಸಿ, ಉಳಿಸುವ ಕಾಯಕದಲ್ಲಿ ನಿರತರಾಗಿರುವವರ ಬಗ್ಗೆ, ಒಂದು ರೀತಿಯಲ್ಲಿ ಸಾಹಿತ್ಯಾರಾಧನೆ ಮಾಡುತ್ತಿರುವವರ ಬಗ್ಗೆ ಹೇಳುತ್ತೇನೆ, ಅವರೇ ವೀಣಾ ನಾಯಕ್‌.

ಸಾಹಿತ್ಯಾರಾಧನೆ, ಸಾಹಿತ್ಯದ ಬಗ್ಗೆ ಪ್ರೀತಿ, ಸಾಹಿತ್ಯ ಬೆಳೆಸುವುದು ಅಂದಾಗ ತಕ್ಷಣ ನೆನೆಪಾಗುವವರು ವೀಣಾ ನಾಯಕ್‌. ಇವರು ಮಂಗಳೂರಿನವರು. ಕಾರ್ಪೋರೇಷನ್‌ ಬ್ಯಾಂಕ್‌ ನಲ್ಲಿ ಚೀಫ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿ, ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರ ಪತಿ ಎಂ. ಜಯರಾಮ ನಾಯಕ್‌. ಸಿಂಡಿಕೇಟ್‌ ಬ್ಯಾಂಕ್‌ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರಿಬ್ಬರೂ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಮಗಳು ಎಂಜಿನಿಯರ್‌, ಅಳಿಯ ಸೈಂಟಿಸ್ಟ್ ಅವರಿಗೆ ಇಬ್ಬರು ಮಕ್ಕಳು ಬೆಂಗಳೂರಿನಲ್ಲಿದ್ದಾರೆ. ಮಗ ಮತ್ತು ಸೊಸೆ ಡಾಕ್ಟರ್ಸ್‌, ಮಣಿಪಾಲದಲ್ಲಿದ್ದಾರೆ. ಅವರಿಗೆ ಒಬ್ಬ ಮಗ. ಇದು ಇವರ ಪುಟ್ಟ ಸಂಸಾರದ ವಿವರ.

ಹಲವು ಭಾಷೆಗಳ ಒಲವು

ಇವರಿಗೆ ಭಾಷೆಗಳ ಬಗ್ಗೆ ತುಂಬಾ ಒಲವು. ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿ ಮೂರು ಭಾಷೆಗಳಲ್ಲಿಯೂ ಪ್ರಾವೀಣ್ಯತೆ ಸಾಧಿಸಿದ್ದಾರೆ. ನಾನಂತೂ ಪುಸ್ತಕ ಮಾತೆ, ಪುಸ್ತಕ ಸರಸ್ವತಿಯಾಗಿ ಇವರನ್ನು ನೋಡುತ್ತಿದ್ದೇನೆ. ಇವರಿಗಿರುವ ಪುಸ್ತಕ ಪ್ರೀತಿ, ಸಾಹಿತ್ಯದ ಬಗ್ಗೆ ಒಲವು ಇನ್ನೆಲ್ಲಿಯೂ ಕಂಡಿಲ್ಲ.

ಇವರು ಹೆಚ್ಚು ಕಡಿಮೆ ಕನ್ನಡ ಲೇಖಕರ ಎಲ್ಲಾ ಪುಸ್ತಕಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ. ಹಾಗೆ ಎಲ್ಲವನ್ನೂ ಓದಿಯೂ ಇದ್ದಾರೆ. ಹಾಗೆಯೇ ಇಂಗ್ಲಿಷ್‌ ಸಾಹಿತ್ಯದಲ್ಲೂ ಇವರಿಗೆ ಒಲವಿದೆ. ಅನುಕೂಲ ಇದೆ, ಹಣ ಇದೆ ಎಲ್ಲವನ್ನೂ ಕೊಂಡುಕೊಂಡಿದ್ದಾರೆ. ಇದರಲ್ಲಿ ಏನೂ ಹೆಚ್ಚುಗಾರಿಕೆ ಎನ್ನಬಹುದು…. ಆದರೆ ಹಣವಿದ್ದರೆ ಸಾಲದು, ಪುಸ್ತಕ ಓದು ಒಲವಿರಬೇಕು, ಕೊಳ್ಳುವ ಮನಸ್ಸಿರಬೇಕು ಅಲ್ಲವೇ……?

ಈ ವಿಷಯದ ಬಗ್ಗೆ ಅವರ ಮಾತಿನಲ್ಲೇ ಕೇಳೋಣ ಬನ್ನಿ…..

ಮೇಡಂ ನಿಮಗೆ ಪುಸ್ತಕ ಓದುವ ಆಸಕ್ತಿ ಯಾವಾಗ ಶುರು ಆಯಿತು….? ಮತ್ತೆ ಪುಸ್ತಕ ಸಂಗ್ರಹಣೆ ಮಾಡುವ ಯೋಚನೆ ಹೇಗೆ ಶುರುವಾಯಿತು….?

ನನಗೆ ಪುಸ್ತಕಗಳನ್ನು ಓದುವ ಹವ್ಯಾಸ ಚಿಕ್ಕ ವಯಸ್ಸಿನಲ್ಲಿಯೇ ಇತ್ತು. ಶಾಲೆ, ಕಾಲೇಜಿನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಅಧ್ಯಾಪಕರಿಂದ/ಉಪನ್ಯಾಸಕರಿಂದ ಬಹಳ ಪ್ರಭಾವಿತಳಾಗಿದ್ದೆ. ಇದರಿಂದ ಭಾಷೆಯ ಮೇಲೆ ಆಸಕ್ತಿ ಹೆಚ್ಚಾಯಿತು. ಪದವೀಧರೆಯಾದ ಕೂಡಲೇ ಉದ್ಯೋಗ ಸಿಕ್ಕಿತು. ಮುಂದೆ ವೃತ್ತಿ ಮತ್ತು ಸಾಂಸಾರಿಕ ಜವಾಬ್ದಾರಿಗಳ ನಡುವೆ ಹೆಚ್ಚಿನ ಓದು ಕಷ್ಟಸಾಧ್ಯವೆನಿಸಿದ ಕಾರಣ ಭಾಷಾ ಸಂಬಂಧಿ ಪರೀಕ್ಷೆಗಳಿಗೆ ಪ್ರವೇಶ ಪಡೆದುಕೊಂಡೆ. ಇದರಿಂದ ಕಡ್ಡಾಯವಾಗಿ ಓದಲೇಬೇಕಾದ ಸಂದರ್ಭ ಬಂತು. ಆಗ ಸಾಹಿತ್ಯದ ಹಲವು ಪ್ರಕಾರಗಳ ಅಧ್ಯಯನ ಸಾಧ್ಯವಾಯಿತು. ಎಂ.ಎ (ಇಂಗ್ಲಿಷ್‌), ರತ್ನ (ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಪರೀಕ್ಷೆ), ಪ್ರವೀಣ್‌ (ದಕ್ಷಿಣ ಭಾರತ ಹಿಂದಿ ಪ್ರಚಾರ ಸಮಿತಿ, ಚೆನ್ನೈ) ಈ ಪರೀಕ್ಷೆಗಳಲ್ಲಿ ಉತ್ತೀರ್ಣಳಾದೆ.

ಬ್ಯಾಂಕಿನ ವೃತ್ತಿಯಲ್ಲಿ ಉನ್ನತ ಪದವಿಗೇರಲು ಅಗತ್ಯವಾದ ಪರೀಕ್ಷೆಗಳಲ್ಲಿ ಉತ್ತೀರ್ಣಳಾದರೂ ಮಹಿಳೆಯಾದ ಕಾರಣಕ್ಕೆ ಪ್ರತಿಕೂಲ ಪರಿಸ್ಥಿತಿಯನ್ನು ಕೆಲವೊಮ್ಮೆ ಎದುರಿಸಬೇಕಾಯಿತು. ಆದರೆ ಕಷ್ಟಪಟ್ಟು ದುಡಿದು ಮುಖ್ಯ ಪ್ರಬಂಧಕ ಹುದ್ದೆಯನ್ನು ಗಳಿಸಿದ್ದು ನನ್ನ ಮಟ್ಟಿಗೆ ದೊಡ್ಡ ಸಾಧನೆಯೇ ಸರಿ.

ನಿಜ ಅರ್ಥದ ಸಾಹಿತ್ಯ ಸೇವೆ

ಮುಂದೆ ಓದಲು ಸಮಯ ಸಿಗಬಹುದೆಂಬ ನಿರೀಕ್ಷೆಯಲ್ಲಿ ಪುಸ್ತಕಗಳ ಖರೀದಿ ಮಾಡುತ್ತಾ ಬಂದೆ. ಈಗ ನನ್ನ ಪುಸ್ತಕ ಸಂಗ್ರಹದಲ್ಲಿ 5000ಕ್ಕೂ ಹೆಚ್ಚು ಕನ್ನಡ ಪುಸ್ತಕಗಳಿವೆ. ಸುಮಾರು 1000ಕ್ಕೂ ಹೆಚ್ಚು ಇಂಗ್ಲಿಷ್‌ ಪುಸ್ತಕಗಳೂ ಇವೆ.

ಪುಸ್ತಕದಲ್ಲಿ ಕಥೆ ಮಾತ್ರ ಓದದೇ ಒಂದೊಂದು ಪದ, ವಾಕ್ಯಗಳನ್ನು ಎಂಜಾಯ್‌ ಮಾಡಿ ಓದುತ್ತಿದ್ದೆ. ಓದಿದ್ದನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದೆ. ವಾಚನಾಲಯದಿಂದ ತಂದು ಓದಿದರೆ ಒಮ್ಮೆ ಓದಿ ಪುಸ್ತಕ ವಾಪಸ್‌ ಕೊಡುತ್ತೇವೆ. ಅದೇ ನನ್ನ ಬಳಿ ಪುಸ್ತಕ ಇದ್ದರೆ ನೆನಪಾದಾಗ, ತಕ್ಷಣ ಓದಬಹುದು ಎಂದು ನಾನೇ ಪುಸ್ತಕ ಕೊಂಡುಕೊಳ್ಳಲು ಶುರು ಮಾಡಿದೆ.

ಅಷ್ಟೇ ಅಲ್ಲದೆ, ಮುಖಪುಟದಲ್ಲಿ ಕೆಲವು ಸಾಹಿತ್ಯದ ಬಳಗಗಳಿವೆ, ಅಲ್ಲಿಯ ಸದಸ್ಯರುಗಳಿಗೆ ಕೆಲವು ಸ್ಪರ್ಧೆ ಏರ್ಪಡಿಸುತ್ತಾರೆ. ನೂರಾರು ಉದಯೋನ್ಮುಖ ಬರಹಗಾರರು ಇನ್ನೂ ಅ… ಆ…. ಇ…. ಹಂತದಲ್ಲಿ ಇರುವಂತಹವರೇ ಜಾಸ್ತಿ ಇದ್ದಾರೆ. ವೀಣಾ ಇಂತಹವರ ಬರಹಗಳನ್ನು ಓದಿ. ಅದರಲ್ಲಿ ಉತ್ತಮವಾದ ಬರಹಗಳಿಗೆ ಪುಸ್ತಕ ಬಹುಮಾನವನ್ನು ನೀಡುತ್ತಾ ಬಂದಿದ್ದಾರೆ.

ಪುಸ್ತಕ ಅವಲೋಕನ

ಈಗ ಮೂರು ವರ್ಷಗಳಿಂದ ಅವರದೇ, `ಪುಸ್ತಕ ಅವಲೋಕನದ ಸುತ್ತಮುತ್ತ’ ಎಂಬ ಬಳಗ ಕಟ್ಟಿ ಬೇರೆ ಬೇರೆ ಸಾಹಿತಿಗಳ ಪುಸ್ತಕಗಳ ವಿಮರ್ಶೆ, ಪುಸ್ತಕ ಪರಿಚಯ, ಸ್ಪರ್ಧೆ ಏರ್ಪಡಿಸಿ ಆ ಸ್ಪರ್ಧೆಯಲ್ಲಿ ಭಾಗವಹಿಸಿದ ಸದಸ್ಯರೆಲ್ಲರಿಗೂ ಪುಸ್ತಕ ಬಹುಮಾನವನ್ನು ಮನೆಗೆ ಕಳುಹಿಸಿಕೊಡುತ್ತಾರೆ. ಹಾಗೆಯೇ ಎಚ್‌.ಜಿ. ರಾಧಾ ದೇವಿ ಅವರ ಬಳಗದಲ್ಲೂ ಸಹ ಸ್ಪರ್ಧೆ ಏರ್ಪಡಿಸಿ ಅಲ್ಲಿಯೂ ಬರೆದವರಿಗೆ ಪುಸ್ತಕ ಬಹುಮಾನಗಳನ್ನು ನೀಡುತ್ತಾರೆ.

ಇದನ್ನೇ ಸಾಹಿತ್ಯದ ಆರಾಧನೆ ಎನ್ನುವುದು…. ಇದು ಸುಲಭವಲ್ಲ. ಅಂಗಡಿಗೆ ಹೋಗಿ ಪರ್ಚೇಸ್‌ ಮಾಡಿ ಅದನ್ನು ಸದಸ್ಯರುಗಳು ವಿಳಾಸಕ್ಕೆ ಪೋಸ್ಟ್ ಮಾಡಲು ಎಷ್ಟೊಂದು ಶ್ರಮ ಇರುತ್ತದೆ. ಬರಿ ಹಣವಿದ್ದು, ಕೊಡುವ ಮನಸ್ಸಿದ್ದರೆ ಸಾಲದು. ಅಚ್ಚುಕಟ್ಟಾಗಿ ಈ ಕೆಲಸ ಮಾಡಲು ತುಂಬಾ ಪರಿಶ್ರಮ, ತಾಳ್ಮೆ ಬೇಕು. ಸಾಹಿತ್ಯದ ಬಗ್ಗೆ ಅವರಿಗಿರುವ ಪ್ರೀತಿ ಈ ಕೆಲಸವನ್ನು ಮಾಡಿಸುತ್ತಿದೆ.

ಸಾಹಿತ್ಯದ ಆರಾಧನೆ

ನೂರಾರು ಜನ ಬರೆಯುತ್ತಿರುವ ಗುಂಪಿನಲ್ಲಿ ಪ್ರತಿಯೊಬ್ಬರ ಲೇಖನ ಓದಿ ಅವರ ಮನಸ್ಥಿತಿ ತಿಳಿದು ಅವರುಗಳಿಗೆ ಇಷ್ಟವಾಗುವ ಪುಸ್ತಕಗಳನ್ನು ಕಳುಹಿಸುತ್ತಾರೆ. ಹೊಸಬರ ಬರಹವನ್ನು ಓದಲು ಹಿಂದೇಟು ಹಾಕುವವರೇ ಇರುವ ಈ ಕಾಲದಲ್ಲಿ, ಇವರು ಎಲ್ಲರ ಬರಹಗಳನ್ನು ಓದಿ ಕಾಮೆಂಟ್‌ ಮಾಡುತ್ತಾರೆ.

ತಿಂಗಳಲ್ಲಿ ಎರಡರಿಂದ ಮೂರು ಸಲ ಒಂದಲ್ಲ ಒಂದು ಸ್ಪರ್ಧೆ ಆಯೋಜಿಸಿ ಬರೆಯಲು ಪ್ರೋತ್ಸಾಹ ನೀಡಿ, ಪುಸ್ತಕ ಬಹುಮಾನ ನೀಡುವ ಮೂಲಕ ಸಾಹಿತ್ಯವನ್ನು ಬೆಳೆಸುತ್ತಿದ್ದಾರೆ.

ಯಾವ ಪ್ರತಿಫಲಾಪೇಕ್ಷೆ ಇಲ್ಲದೆ, ತಮ್ಮ ಕೈಯಿಂದ ಹಣ ಹಾಕಿ, ಸಾಹಿತಿಗಳಲ್ಲಿ ಭೇದ ಭಾವ ತೋರದೆ ಹಿರಿಯ, ಕಿರಿಯ ಸಾಹಿತಿಗಳ ಪುಸ್ತಕಗಳನ್ನು ಎಲ್ಲರೂ ಓದುವಂತೆ ಮಾಡುತ್ತಾರೆ. ನಾನು ನೋಡಿದಂತೆ ಎರಡು ವರ್ಷದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಬಹುಮಾನವಾಗಿ ನೀಡಿದ್ದಾರೆ.

ಎಲ್ಲರಿಗೂ ಅವರ ವಿಳಾಸಕ್ಕೆ ಅಂಚೆ ಇಲಾಖೆಯಿಂದ ಕಳುಹಿಸುತ್ತಾರೆ. ಇಲ್ಲಿಯತನಕ ಇವರು ಕಟ್ಟಿದ ಪೋಸ್ಟ್‌ ಚಾರ್ಜ್‌ ಒಂದು ಲಕ್ಷಕ್ಕಿಂತ ಜಾಸ್ತಿಯಾಗಿದೆ. ಅಂದರೆ ಎಷ್ಟು ಪುಸ್ತಕ ಬಹುಮಾನ ಕೊಟ್ಟಿರಬಹುದು ಎಂದು ಯೋಚಿಸಿ, ಅದರಲ್ಲೂ ಒಂದೆರಡು ಪುಸ್ತಕ ಪ್ರಕಟಣೆ ಮಾಡಿದ ಹೊಸ ಬರಹಗಾರರಿಂದಲೂ ಪುಸ್ತಕಗಳನ್ನು ಕೊಂಡು ಅದನ್ನು ಬಹುಮಾನ ರೂಪದಲ್ಲಿ ಕೊಟ್ಟು, ಹೊಸ ಬರಹಗಾರರನ್ನು ಎಲ್ಲರಿಗೂ ಪರಿಚಯಿಸಿ ಪ್ರೋತ್ಸಾಹಿಸುತ್ತಾರೆ.

ನನಗೊಬ್ಬಳಿಗೇ ಇವರಿಂದ ಬಹುಮಾನ ರೂಪದಲ್ಲಿ ನಲವತ್ತರ ಮೇಲೆ ಪುಸ್ತಕಗಳು ಬಂದಿದೆ. ಆದರೆ ಯಾವ ಪುಸ್ತಕ ರಿಪೀಟ್ ಆಗಿಲ್ಲ. ಬಹುಶಃ ಬಳಗದ ನೂರಾರು ಜನರಿಗೆ ಕಳುಹಿಸಿರುತ್ತಾರೆ. ಎಲ್ಲರಿಗೂ ಹೀಗೇ ಅವರುಗಳಿಗೆ ಹಿಂದೆ ಕಳುಹಿಸಿರದ ಪುಸ್ತಕಗಳನ್ನೇ ಕಳುಹಿಸುತ್ತಾರೆ.

ಈ ವಿಷಯದ ಬಗ್ಗೆ ಅವರನ್ನು ಕೇಳಿದಾಗ…..

IMG-20240116-WA0028-a

ಪುಸ್ತಕ ಪ್ರೇಮಿಗಳು ಬಳಗ ನಡೆಸುವ ಹಾಗೂ ಎಲ್ಲರಿಂದ ಬರೆಯಿಸಿ ಅವರುಗಳಿಗೆ ಬಹುಮಾನ ಕೊಡುವ ಯೋಚನೆ ನಿಮ್ಮಲ್ಲಿ ಮೂಡಿದ್ದು ಹೇಗೆ?

`ಪುಸ್ತಕ ಪ್ರೇಮಿಗಳು’ ಎನ್ನುವ ಬಳಗದಲ್ಲಿ ನಾನು ಓದಿದ ಪುಸ್ತಕಗಳ ಬಗ್ಗೆ ವಿಮರ್ಶೆ ಬರೆಯುತ್ತಿದ್ದೆ. ತುಂಬಾ ಜನ ಓದಿ ಲೈಕ್‌, ಕಾಮೆಂಟ್‌ ಮಾಡುತ್ತಿದ್ದರು. ಆಗ ಅನಿಸಿತು, ನಾನು ಬರೆಯುವಂತೆ ಇನ್ನಷ್ಟು ಜನರಲ್ಲೂ ಓದು, ಓದಿದ್ದನ್ನು ಬರೆಯುವ ಆಸಕ್ತಿ ಮೂಡಿಸಲೆಂದು. ಇದರಿಂದ ಈಗ ನಾನು ನಮ್ಮ ಸದಸ್ಯರಲ್ಲಿ ಓದುವ ಮತ್ತು ಓದಿದ್ದನ್ನು ಅರ್ಥ ಮಾಡಿಕೊಂಡು ಬರೆಯುವ ಹವ್ಯಾಸವನ್ನು ಬೆಳೆಸುವುದರಲ್ಲಿ ವ್ಯಸ್ತಳಾಗಿದ್ದೇನೆ. ಹಲವಾರು ಸದಸ್ಯರು ತಮ್ಮ ಬರವಣಿಗೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಇದರಿಂದ ಕನ್ನಡಕ್ಕೆ ಇನ್ನಷ್ಟು ಉತ್ತಮ ಲೇಖಕರ ಉದಯವಾಗುತ್ತದೆ.

ಹೊಸದಾಗಿ ಬರೆಯಲು ಪ್ರಯತ್ನಿಸುವ ಸದಸ್ಯರಲ್ಲಿ ಹಿಂಜರಿಕೆ ಇರುವುದು ಸ್ವಾಭಾವಿಕ. ಅವರಿಗಾಗಿ ಲೇಖನ ಸ್ಪರ್ಧೆಗಳನ್ನು ಏರ್ಪಡಿಸಿ, ಪುಸ್ತಕ ಬಹುಮಾನಗಳನ್ನು ನೀಡುವ ಮೂಲಕ ಪ್ರೋತ್ಸಾಹ ಕೊಡಲಾಗುತ್ತದೆ. ವಿಶೇಷವಾಗಿ ಹಣ ಕೊಟ್ಟು ಪುಸ್ತಕ ಕೊಳ್ಳಲು ಆಗದವರಿಗೆ ಇಂತಹ ಬಹುಮಾನಗಳಿಂದ ತುಂಬಾ ಉತ್ತೇಜನ ಸಿಗುತ್ತದೆ. ಲೇಖಕರ ಪರಿಚಯ ಅಲ್ಲದೆ ಹಳೆಯ, ಹೊಸ ಲೇಖಕರ ಪುಸ್ತಕಗಳ ಪರಿಚಯವಾಗುತ್ತದೆ. ಈ ಬಳಗದಿಂದ ಕೆಲವಷ್ಟು ಜನರಿಗೆ ಪುಸ್ತಕದಲ್ಲಿ ಅಸಕ್ತಿ ಉಂಟಾಗಿ ಪುಸ್ತಕ ಕೊಂಡು ಓದುವ ಸಂಸ್ಕೃತಿ ಜಾಸ್ತಿ ಆಗುತ್ತಿದೆ. ಇದರಿಂದ ಪುಸ್ತಕೋದ್ಯಮ ಬೆಳೆಯುತ್ತದೆ ಹಾಗೂ ಸ್ವಲ್ಪ ಮಟ್ಟಿಗೆ ಲಾಭ ಪಡೆಯುತ್ತದೆ.

ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚಾಗಿ ಓದುವ ಅಭಿರುಚಿಯನ್ನು ಬೆಳೆಸಲು ಮಾಡುತ್ತಿರುವ ಈ ಪ್ರಯತ್ನದಲ್ಲಿ ತೃಪ್ತಿ ಮತ್ತು ಗೆಲುವು ಸಿಗುತ್ತಿದೆ. ಕನ್ನಡಕ್ಕಾಗಿ ಯಾರೂ ಏನೂ ಮಾಡುತ್ತಿಲ್ಲ ಎಂದು ಟೀಕೆ ಟಿಪ್ಪಣಿ ಮಾಡಿ ನಿಷ್ಕ್ರಿಯರಾಗಿ ಉಳಿಯುವುದಕ್ಕಿಂತ ನಮಗೆ ಸಾಧ್ಯವಿರುವ ಕೆಲಸವನ್ನು ಮಾಡುವುದೇ ಒಂದು ಸಾಧನೆ ಎಂಬುದು ನನ್ನ ಅನುಭವದ ಮಾತು.

ಇವರ ಮಾತು ನಿಜ. ಇವರಷ್ಟು ಸಾಹಿತ್ಯ ಪ್ರೀತಿಸುವ, ಆರಾಧಿಸುವವರನ್ನು ನೋಡಿದ್ದೀರಾ….? ಆರೇಳು ಪುಸ್ತಕಗಳನ್ನು ಬರೆದು ಸಾಹಿತ್ಯದಲ್ಲಿ ಸಾಧನೆ ಮಾಡಿದ್ದೇವೆ ಎನ್ನುವವರನ್ನು ನೋಡಿದ್ದೇವೆ. ಆದರೆ ಪುಸ್ತಕ ಬರೆಯುವುದು ಮಾತ್ರ ಹೆಚ್ಚುಗಾರಿಕೆಯಲ್ಲ….. ಬೇರೆಯರಲ್ಲಿ ಓದಲು, ಬರೆಯಲು ಆಸಕ್ತಿ ಮೂಡಿಸುವುದೇ ದೊಡ್ಡ ಸಾಧನೆ. ಈ ತರಹದ ಸಾಹಿತ್ಯ ಸೇವೆ ಮಾಡುವವರನ್ನು ಎಲ್ಲೂ ಕಂಡಿಲ್ಲ, ಕಾಣುವುದೂ ಇಲ್ಲ. ಸಾಹಿತ್ಯದ ಆರಾಧನೆ ಮಾಡುವವರು ಇವರನ್ನು ನೋಡಿ ಕಲಿಯಬೇಕು. ದೇವರು ಇವರಿಗೆ ಹೆಚ್ಚು ಹೆಚ್ಚು ಆಯುಸ್ಸು ಆರೋಗ್ಯವನ್ನು ನೀಡಲಿ. ಇವರ ಸಾಹಿತ್ಯ ಪ್ರೀತಿ, ಸಾಹಿತ್ಯ ಸೇವೆ ಅನವರತ ನಡೆಯಲಿ ಎಂದು ಗೃಹಶೋಭಾ ಹಾರೈಸುತ್ತಾಳೆ.

ಸವಿತಾ ರಮೇಶ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ