ಒಂದೆಡೆ `ಅಶ್ವಿನಿ ನಕ್ಷತ್ರ’ದ ಸೂಪರ್‌ ಸ್ಟಾರ್‌ ಜೆ.ಕೆ.ಯ ತಂಗಿ `ಸನ್ನಿಧಿ,’ ಇನ್ನೊಂದೆಡೆ `ಲಕ್ಷ್ಮೀ ಬಾರಮ್ಮಾ’ ಧಾರಾವಾಹಿಯ ಚಂದನ್‌ನ ಸ್ನೇಹಿತ ಸಿದ್ದು ಅರ್ಥಾತ್‌ ಸಿದ್ಧಾರ್ಥ. ಬೇರೆಬೇರೆ ಧಾರಾವಾಹಿಗಳ ಈ ಎರಡು ಪಾತ್ರಗಳನ್ನಿಟ್ಟುಕೊಂಡು ಸೃಷ್ಟಿಯಾದ ಧಾರಾವಾಹಿಯೇ `ಅಗ್ನಿಸಾಕ್ಷಿ.’ ಕನ್ನಡ ಧಾರಾವಾಹಿಗಳ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯತ್ನ.

`ಅಗ್ನಿಸಾಕ್ಷಿ’ಯ ಧಾರಾವಾಹಿಯಲ್ಲಿ ನಾಯಕಿ ಪಾತ್ರ ನಿರ್ವಹಿಸುತ್ತಿರುವ ವೈಷ್ಣವಿ, ಶುಭಾ ಧನಂಜಯ ಅವರಿಂದ ಭರತನಾಟ್ಯ ಹಾಗೂ ವೈಜಯಂತಿ ಕಾಶಿ ಅವರಿಂದ ಕೂಚ್ಚುಪುಡಿ ನೃತ್ಯ ಕಲಿತು ಕರ್ನಾಟಕದ ಹಲವು ಕಡೆ ಪ್ರದರ್ಶನ ಕೂಡ ನೀಡಿದ್ದಾರೆ.

ವೌಂಟ್‌ ಕಾರ್ಮೆಲ್ ‌ಕಾಲೇಜಿನಲ್ಲಿ ಓದುತ್ತಿರುವಾಗಲೇ ಕಿರುತೆರೆಯಲ್ಲಿ ಅಭಿನಯಿಸುವ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. `ಅಗ್ನಿಸಾಕ್ಷಿ’ ಅವರ 5ನೇ ಧಾರಾವಾಹಿ. ತಮ್ಮ ಧಾರಾವಾಹಿ ಲೋಕದ ಪಯಣದ ಬಗ್ಗೆ ವೈಷ್ಣವಿ ಉತ್ತರಿಸಿದ್ದು ಹೀಗೆ……

ಭರತನಾಟ್ಯ, ಕೂಚ್ಚುಪುಡಿಯನ್ನು ಕಲಿತು ಅದರಲ್ಲಿಯೇ ಭವಿಷ್ಯ ಕಂಡುಕೊಳ್ಳಬೇಕೆಂದಿದ್ದ ನೀವು ಟಿ.ವಿ. ಧಾರಾವಾಹಿ ಲೋಕಕ್ಕೆ ಹೇಗೆ ಪ್ರವೇಶ ಪಡೆದುಕೊಂಡಿರಿ?

ಅಮ್ಮನ ಜೊತೆ ನಾನು ಆಗಾಗ ಹರಿಶ್ಚಂದ್ರ ಘಾಟ್‌ ಹತ್ತಿರದಲ್ಲಿದ್ದ ರಿಷಿಕುಮಾರ ಸ್ವಾಮಿಗಳ (`ಬಿಗ್‌ ಬಾಸ್‌,’ `ಥಕದಿಮಿಥ ಡ್ಯಾನ್ಸಿಂಗ್‌ ಸ್ಟಾರ್‌’ನಲ್ಲಿ ಪಾಲ್ಗೊಂಡರು) ಮಠಕ್ಕೆ ಹೋಗ್ತಿದ್ದೆ. ಅದೊಂದು ಸಲ ಅಲ್ಲಿಗೆ ಧಾರಾವಾಹಿಯೊಂದರ ಅಸೋಸಿಯೇಟ್ ಡೈರೆಕ್ಟರ್‌ ದರ್ಶಿತ್‌ ಎಂಬರು ಬಂದಿದ್ದರು. ಅವರು ನನ್ನನ್ನು ನೋಡಿ ಅಮ್ಮನ ಬಳಿ, `ನಿಮ್ಮ ಮಗಳು ಧಾರಾವಾಹಿಯಲ್ಲಿ  ಅಭಿನಯಿಸುತ್ತಾಳಾ?’ ಎಂದು ಕೇಳಿದ್ದರಂತೆ. ಬಳಿಕ ಅಮ್ಮ ನನ್ನ ಫೋಟೋಗಳನ್ನು ಅವರಿಗೆ ಇಮೇಲ್ ‌ಮೂಲಕ ಕಳಿಸಿಕೊಟ್ಟಿದ್ದರು. ನಿರ್ಮಾಪಕ ನಿರ್ದೇಶಕರಿಂದ ಕರೆ ಬರುವ ತನಕ ಈ ಯಾವ ಬೆಳವಣಿಗೆಗಳ ಬಗೆಗೂ ಅಮ್ಮ ನನಗೆ ತಿಳಿಸಿರಲಿಲ್ಲ. ಆಡಿಷನ್‌ ಮತ್ತು ಮೇಕಪ್‌ ಟೆಸ್ಟ್ ಗೆ ಹೋದಾಗಲೇ ನಾನು ಆಯ್ಕೆಯಾಗಿರುವುದು ತಿಳಿಯಿತು. ಅದು `ದೇವಿ’ ಧಾರಾವಾಹಿಯ ಭಕ್ತೆಯ ಪಾತ್ರ.

ಮೌಂಟ್‌ ಕಾರ್ಮೆಲ್ ‌ಕಾಲೇಜಿನಲ್ಲಿ ಓದಿದ, ಆಧುನಿಕ ವಿಚಾರದ ಹುಡುಗಿಯಾದ ನಿಮಗೆ `ದೇವಿ’ಯಂತಹ ಧಾರಾವಾಹಿಯಲ್ಲಿ ಅಭಿನಯಿಸುವುದು ಕಷ್ಟಕರ ಎನಿಸಲಿಲ್ಲವೇ?

ನಾನು ಭರತನಾಟ್ಯ ಹಾಗೂ ಕೂಚ್ಚುಪುಡಿ ನೃತ್ಯ ಕಲಿತಿದ್ದರಿಂದ `ದೇವಿ’ ಧಾರಾವಾಹಿಯಲ್ಲಿ ಅಭಿನಯಿಸುವುದು ಸ್ವಲ್ಪ ಕಷ್ಟ ಎನಿಸಲಿಲ್ಲ. ನಾನು ಅದರಲ್ಲಿ ಲೀಲಾಜಾಲವಾಗಿ ಅಭಿನಯಿಸಿದೆ. ಅದು 500ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾಗಿ ನನಗೆ ಒಳ್ಳೆಯ ಹೆಸರು ತಂದುಕೊಟ್ಟಿತು.

`ದೇವಿ’ಯ ಬಳಿಕ ನಿಮ್ಮ ಧಾರಾವಾಹಿಯ ಪಯಣ ಹೇಗೆ ಮುಂದುವರಿಯಿತು?

ಉದಯ ಟಿ.ವಿ.ಯ ಮನೆ ದೇವ್ರು, ಮುಂಗಾರು ಮಳೆ ಹಾಗೂ ಝೀ ಟಿ.ವಿ.ಯಲ್ಲಿ `ಪುನರ್ವಿವಾಹ’ ಹೀಗೆ ಒಂದಾದ ನಂತರ ಒಂದು ಧಾರಾವಾಹಿಗಳು ನನ್ನನ್ನು ಹುಡುಕಿಕೊಂಡು ಬಂದವು.

`ಅಗ್ನಿಸಾಕ್ಷಿ’ಯ ಸನ್ನಿಧಿಯ ಪಾತ್ರಕ್ಕೆ ಆಯ್ಕೆಯಾದುದು, `ಅಶ್ವಿನಿ ನಕ್ಷತ್ರ’ದಲ್ಲಿ ಅದೇ ಹೆಸರಿನಲ್ಲಿ ಜೆ.ಕೆ.ಯ ತಂಗಿಯಾಗಿ ಕಾಣಿಸಿದುದು, ಬಳಿಕ 4 ದಿನದ ಅದ್ಧೂರಿ ಮದುವೆ ಹೀಗೆ ಆ ಕ್ಷಣಗಳು ನಿಮಗೆ ಬಹಳ ವಿಶೇಷ ಎನಿಸಿರಬಹುದಲ್ಲವೇ?

ಹೌದು. ಜೆ.ಕೆ.ಯ ಮುದ್ದು ತಂಗಿಯಾಗಿ ನಾನು `ಅಶ್ವಿನಿ ನಕ್ಷತ್ರ’ದಲ್ಲಿ ಖುಷಿ ಖುಷಿಯಿಂದ ಮದುವೆಯ ಬಗ್ಗೆ ಪ್ರಸ್ತಾಪ ಮಾಡ್ತೀನಿ. ಇನ್ನೊಂದೆಡೆ `ಲಕ್ಷ್ಮೀ ಬಾರಮ್ಮಾ’ದಲ್ಲಿ ಸಿದ್ಧಾರ್ಥ ತನ್ನ ಮದುವೆಯ ಬಗ್ಗೆ ಮನಸ್ಸಿಲ್ಲದ ಮನಸ್ಸಿನಿಂದ ಹೇಳಿಕೊಳ್ತಾನೆ. ಹೀಗೆ ಎರಡು ಧಾರಾವಾಹಿಗಳ ಮೂಲಕ ಹುಟ್ಟಿಕೊಂಡ ಮೂರನೇ ಧಾರಾವಾಹಿ ನಮ್ಮದು. ಇಂತಹ ಒಂದು ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾದುದು ನನ್ನ ಅದೃಷ್ಟವೇ ಸರಿ. ಇನ್ನು `ಅಗ್ನಿ ಸಾಕ್ಷಿ’ಯ ಮದುವೆಯ ಬಗ್ಗೆ ಹೇಳಬೇಕೆಂದರೆ, ಅದು 4 ದಿನದ ಅದ್ಧೂರಿ ಮದುವೆ. ನಿಜವಾದ ಮದುವೆಯನ್ನು ಮೀರಿಸುವಂತಹ ವೈಭವ ಅಲ್ಲಿ ಎದ್ದುಕಾಣುತ್ತಿತ್ತು. ಬಹುತೇಕ ಧಾರಾವಾಹಿಗಳ ಸೆಲೆಬ್ರಿಟಿಗಳು ಈ ಮದುವೆ ಸಡಗರದಲ್ಲಿ ಭಾಗಿಯಾಗಿದ್ದರು. 4 ದಿನಗಳ ಸತತ ಶೂಟಿಂಗ್‌. ಮನೆಗೆ ಹೋಗಲು ಅವಕಾಶವೇ ಇರಲಿಲ್ಲ. ಹೀಗಾಗಿ ಅವು ನನ್ನ ಜೀವನದ ಅಮೂಲ್ಯ ಕ್ಷಣಗಳು ಎಂದು ಹೇಳಬಹುದು.

`ಅಗ್ನಿಸಾಕ್ಷಿ’ಯಲ್ಲಿ ನೀವು ಮೃದು ಸ್ವಭಾವದ ಯುವತಿಯ ಪಾತ್ರ ನಿರ್ವಹಿಸಿದ್ದೀರಿ. ವಾಸ್ತವ ಜೀವನದಲ್ಲೂ ವೈಷ್ಣವಿ ಹಾಗೇನಾ?

ವಾಸ್ತವ ಜೀವನದಲ್ಲೂ ನಾನು ಶಾಂತ ಸ್ವಭಾವದ ಹುಡುಗಿ. ಮನೆಯಲ್ಲಿಯೇ ಇರಲಿ, ಹೊರಗಡೆಯೇ ಆಗಿರಲಿ ಅಗತ್ಯವಿದ್ದರಷ್ಟೇ ಮಾತನಾಡುತ್ತೇನೆ. ನನಗೆ ಸಾಕಷ್ಟು ಜನ ಗೆಳತಿಯರಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿರುತ್ತೇನೆ. ಆದರೆ ಎಲ್ಲ ಹಿತಮಿತ. ಧಾರಾವಾಹಿಯಲ್ಲಿ ಪಾರಂಪರಿಕ ಉಡುಗೆ, ವಾಸ್ತವದಲ್ಲಿ ಮಾಡರ್ನ್‌ ಹುಡುಗಿಯಂತಿರ್ತೀನಿ.

ನಿಮ್ಮ ಅಭಿನಯದ ಮೇಲೆ ಯಾರದ್ದಾದರೂ ಪ್ರೇರಣೆ?

ನಾನು ಯಾರನ್ನೂ ರೋಲ್ ಮಾಡೆಲ್ ‌ಆಗಿ ಇಟ್ಟುಕೊಂಡಿಲ್ಲ. ನನ್ನದೇ ಆದ ಅಭಿನಯ, ಮಾತಿನ ಶೈಲಿ ಹೊಂದಬೇಕೆನ್ನುವುದು ನನ್ನ ಯೋಚನೆ. ಪ್ರತಿಯೊಂದು ಹೊಸ ಸಂಗತಿಯ ಬಗ್ಗೆ ಗಮನಸ್ತೀನಿ, ನನ್ನಲ್ಲಿ ನಾನು ಬದಲಾವಣೆ ತಂದುಕೊಳ್ಳಲು ಪ್ರಯತ್ನ ಮಾಡ್ತೀನಿ.

– ಅಶೋಕ ಚಿಕ್ಕಪರಪ್ಪಾ.

ಈ ಮುಂಚಿನ ಎಲ್ಲ ಧಾರಾವಾಹಿಗಳಲ್ಲಿ ನಿಮಗೆ ಅವಿವಾಹಿತ ಯುವತಿಯ ಪಾತ್ರಗಳೇ ದೊರೆತಿದ್ದವು. `ಅಗ್ನಿ ಸಾಕ್ಷಿ’ಯಲ್ಲಿ ನವಿವಾಹಿತೆಯ ಪಾತ್ರ. ಅದು ನಿಮ್ಮ ಅಭಿನಯಕ್ಕೆ ಚಾಲೆಂಜ್‌ ಎಂದಿನಿಸಲಿಲ್ಲವೇ?

ಮದುವೆಯ ಪರಿಕಲ್ಪನೆಯೇ ನನಗೆ ಹೊಸದು. ಸದಾ ಮಾಡರ್ನ್‌ ಉಡುಗೆಯಲ್ಲಿ ಇರುವ ನನಗೆ ಯಾವಾಗಲೂ ಸೀರೆ ಧರಿಸುವುದು ಕೂಡ ಸವಾಲೇ ಆಗಿತ್ತು. ಇನ್ನು ಮದುವೆಯಾದ ನವಯುವತಿ ಹೇಗೆ ಇರುತ್ತಾಳೆ ಎನ್ನುವುದನ್ನು ನಾನು ಹೊಸದಾಗಿ ಮದುವೆಯಾದ ಹಲವರನ್ನು ನೋಡಿ ತಿಳಿದುಕೊಂಡೆ. ಕೆಲವರನ್ನು ಮಾತಾಡಿಸಿದ್ದೂ ಉಂಟು. ಆ ಬಳಿಕವೇ ನನಗೆ ಪಾತ್ರದಲ್ಲಿ ಸಲೀಸಾಗಿ ಅಭಿನಯಿಸಲು ಸಾಧ್ಯವಾಯಿತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ