ಸ್ಯಾಂಡಲ್ ವುಡ್‌ ಘಮಘಮಿಸುತ್ತಿದೆ. ಹೊಸ ಸೆನ್ಸೇಷನ್‌ನೊಂದಿಗೆ ಘಮ್ಮೆಂದು ಪರಿಮಳ ಬೀರುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಎಷ್ಟೇ ಕಥೆ ಚಿತ್ರಕಥೆಗಳು ಹುಟ್ಟಿಕೊಂಡಿದ್ದರೂ, ಎಷ್ಟೇ ಹೊಸಬರು ಎಂಟ್ರಿ ಕೊಟ್ಟಿದ್ದರೂ ಇಂತಹ ಸೆನ್ಸೇಷನ್‌ ಕ್ರಿಯೇಟ್ ಆಗಿರಲಿಲ್ಲ.

ಈಗ ಇಡೀ ಸ್ಯಾಂಡಲ್ ವುಡ್‌ಗೆ ಸ್ಯಾಂಡಲ್ ವುಡ್ಡೇ ಅಚ್ಚರಿಪಡುವಂತಹ ಸೆನ್ಸೇಷನ್‌ ಒಂದು ಹುಟ್ಟಿಕೊಂಡಿದೆ. ಅದಕ್ಕೆ ಕಾರಣ ಚಾಂದಿನಿ!

ಇಲ್ಲದೇ ಇದ್ದಿದ್ದರೆ ಅಂದು `ಛಲೀ ಗಯೇ ಚಾಂದಿನಿ’ ಎಂದು ತೆರೆಯ ಮೇಲೆ ಹಾಡಿ ಕುಣಿದು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ, ನಾಲ್ಕಾರು ಸಿನಿಮಾಗಳಲ್ಲಿ ನಾಯಕಿಯಾಗಿ ಮೆರೆದು ಕೆಲಕಾಲ ದೂರವಾಗಿಬಿಟ್ಟಿದ್ದ ಚಾಂದಿನಿ, ಇಂದು `ಫಿರ್‌ ಆಗಯೀ ಚಾಂದಿನಿ`ಯಾಗಿ ಮತ್ತೆ ನಮ್ಮ ಮುಂದೆ ಬರುತ್ತಿದ್ದಳೇ? ಹಲವು ವರ್ಷಗಳ ನಂತರ ಆಕೆ ಮತ್ತೆ ಸ್ಯಾಂಡಲ್ ವುಡ್‌ಗೆ ರೀ ಎಂಟ್ರಿ ಪಡೆಯಲೆಂದೇ `ಖೈದಿ’ ಹೊಸ ರೂಪ ತಾಳುತ್ತಿದ್ದನೇ? ಅಥವಾ `ಸೈಕೋ’ ಖ್ಯಾತಿಯ ನಾಯಕ ನಟ ಧನುಷ್‌ ಮತ್ತು ಇದೇ ಚಿತ್ರದ ನಿರ್ಮಾಪಕ ಗುರುದತ್‌ ಇಲ್ಲಿ ಒಂದಾಗುತ್ತಿದ್ದರೇ…?

ಇದೆಲ್ಲ ಕಾಕತಾಳೀಯವೇ ಇರಬಹುದೇನೋ…? ಆದರೆ, ಚಾಂದಿನಿ ಮತ್ತೆ ಸ್ಯಾಂಡಲ್ ವುಡ್‌ಗೆ ಮರಳುವುದಕ್ಕೆ ಒಂದರ್ಥದಲ್ಲಿ `ಖೈದಿ’ಯೇ ಕಾರಣ.

ಕಳೆದ ಮೂರು ದಶಕಗಳ ಹಿಂದೆ ಪ್ರೇಕ್ಷಕನನ್ನು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದ ವಿಷ್ಣು ಅಭಿನಯದ `ಖೈದಿ’ ಇಂದು ಹಲವು ವಿಶೇಷತೆಗಳೊಂದಿಗೆ ಅದೇ ಹೆಸರಿನಲ್ಲಿ ಮೈದಳೆದು, ಚಾಂದಿನಿ ಧನುಷ್‌ ಕಾಂಬಿನೇಷನ್‌ನಲ್ಲಿ ಪ್ರೇಕ್ಷಕನನ್ನು ರಂಜಿಸಲು ತಯಾರಿ ನಡೆಸಿದ್ದಾನೆ. ಅಷ್ಟೇ ಅಲ್ಲ, ಮತ್ತೊಮ್ಮೆ ಸಾಹಸಸಿಂಹನ `ಖದರ್‌’ ನೆನಪಿಸಲು ಬರುತ್ತಿದ್ದಾನೆ.

ಫಿರ್‌ ಆಗಯೀ ಚಾಂದಿನಿ, ಹಳೇ ಹೆಸರು ಹೊಸ ರೂಪದ `ಖೈದಿ.’ ಸೈಕೋ ಧನುಷ್‌ ಮತ್ತು ಗುರುದತ್‌ ಕಾಂಬಿನೇಷನ್‌ನ್ನು ಒಟ್ಟಾಗಿ ನೋಡಿದರೆ ಸ್ಯಾಂಡಲ್ ವುಡ್‌ನಲ್ಲಿ ಕಾಣಿಸಿರುವ ಈ ಹೊಸ ಸೆನ್ಸೇಷನ್‌ಗೆ ಅಚ್ಚರಿಪಡಬೇಕಾದದ್ದೇ. ಏಕೆಂದರೆ ಗುರುದತ್‌ಅವರು `ಖೈದಿ’ ಹೆಸರಿನಲ್ಲಿ ಸಿನಿಮಾ ತಯಾರಿಕೆಗೆ ಮನಸ್ಸು ಮಾಡಿ, ಕಥೆ ಚಿತ್ರಕಥೆ ಸಿದ್ಧಪಡಿಸಿಕೊಂಡು ಅದಕ್ಕಾಗಿ ಹಗಲು ರಾತ್ರಿ ವರ್ಕ್‌ ಔಟ್‌ ಆರಂಭಿಸಿದಾಗ ಚಾಂದಿನಿಯಂತಹ ನಾಯಕಿಗಾಗಿಯೇ ಹುಡುಕಾಟ ನಡೆಸಿದ್ದರು.

ಈ ಸಮಯದಲ್ಲಿ ಗುರುದತ್‌ರಿಗೆ ಉಪೇಂದ್ರರ `ಎ’ ಚಿತ್ರ ಸೇರಿದಂತೆ ಶಿವರಾಜ್‌ ಕುಮಾರ್‌, ಸಾಹಸಸಿಂಹ ವಿಷ್ಣುವರ್ಧನ್‌ ಮತ್ತು ಶಿವಮಣಿ ಅವರೊಂದಿಗೆ ಅಭಿನಯಿಸಿ ಸಿನಿಪ್ರಿಯರ ಮನ ಗೆದ್ದಿದ್ದ ನಾಯಕಿ ಚಾಂದಿನಿ ನೆನಪಾಗಿದ್ದರು. ಮಾತುಕತೆ ನಡೆಯಿತು. ಚಾಂದಿನಿ ಒಪ್ಪಿದರು. ಮತ್ತೊಮ್ಮೆ ಸ್ಯಾಂಡಲ್ ವುಡ್‌ಗೆ ಮರಳಲು `ಖೈದಿ’ ಅವಕಾಶ ಕೊಟ್ಟಿದ್ದರಿಂದ ಸಹಜವಾಗಿಯೇ ಚಾಂದಿನಿ ಖುಷಿಯಾದರು.

`ಆಗಯೀ ಚಾಂದಿನಿ’ಯಾಗಿ ಹೊಸ ಸೆನ್ಸೇಷನ್‌ ಹುಟ್ಟಿಸುವಲ್ಲಿ ಯಶಸ್ವಿಯೂ ಆದರು.

ಅಂದು ಸಾಹಸಸಿಂಹ ವಿಷ್ಣುವರ್ಧನ್‌`ಖೈದಿ’ಯಾಗಿ ಅಭಿನಯಿಸಿ ಚಿತ್ರರಸಿಕರ ಮನದಲ್ಲಿ ಮನೆ ಮಾಡಿದ್ದರು. ಆದರೆ, ಇಂದು ಅವರ ಅಭಿಮಾನಿ ಧನುಷ್‌ ಮತ್ತೆ ಖೈದಿಯಾಗಿ, ಹೊಸ ಅವತಾರದಲ್ಲಿ ಸಿನಿಪ್ರಿಯರ ಹೃದಯಕ್ಕೆ ಲಗ್ಗೆ ಹಾಕಲು ಬರುತ್ತಿದ್ದಾರೆ. ಈಗಾಗಲೇ `ಸೈಕೋ’ದಲ್ಲಿ ನಾಯಕನಾಗಿ ಅಭಿನಯಿಸಿ ಒಂದಿಷ್ಟು ಹೆಸರು ಮಾಡಿರುವ ಧನುಷ್‌, ವಿಷ್ಣು ಅವರ ಪಕ್ಕಾ ಅಭಿಮಾನಿ ಆಗಿದ್ದು, ಅಂದು ವಿಷ್ಣು `ಖೈದಿ’ಯಾಗಿ ಮೆರೆದಿದ್ದ ಹಿನ್ನೆಲೆಯಲ್ಲೇ ಈಗ ಅದೇ ಹೆಸರಿನ `ಖೈದಿ’ಯಲ್ಲಿ ಸ್ವತಃ ತಾವೇ ರೋಲ್ ಮಾಡುವಂತಾದುದಕ್ಕೆ ಹೆಚ್ಚು ಉತ್ಸುಕತೆ ಹೊಂದಿದ್ದಾರೆ.

khaidi4

ಆ ಖೈದಿಗೂ ಈ ಖೈದಿಗೂ ಅಜಗಜಾಂತರವಿದೆ. ಇಂದಿನ ಖೈದಿಯ ಕಥೆ ಮತ್ತು ನಿರೂಪಣೆ ವಿಭಿನ್ನ. ಈ `ಖೈದಿ’ಗೆ ನೈಜ ಘಟನೆಗಳನ್ನು ಆಧರಿಸಿದ ಕಥಾಹಂದರವಿದೆ. ಇಂತಹ ಖೈದಿ ಹೊಸತನದೊಂದಿಗೆ ಹತ್ತು ಹಲವು ವಿಶೇಷಗಳನ್ನು ತೆರೆಯ ಮೇಲೆ ಹೊತ್ತು ತರುತ್ತಿದ್ದಾನೆ. ಸ್ಯಾಂಡಲ್ ವುಡ್‌, ಟಾಲಿವುಡ್‌ ಮತ್ತು ಕಾಲಿವುಡ್‌ನ ತಾಂತ್ರಿಕ ಕಲಾಕೌಶಲ್ಯತೆಯನ್ನು ಒಟ್ಟಾಗಿ ನೋಡುವ ಅವಕಾಶ ಪ್ರೇಕ್ಷಕನದು.`ಸೈಕೋ’ ಚಿತ್ರದಲ್ಲಿ ಭರವಸೆಯ ನಾಯಕನಾಗಿ ಪ್ರೇಕ್ಷಕರ ಮನಗೆದ್ದಿದ್ದ ಧನುಷ್‌ ಈಗ ಖೈದಿಯಾಗಿ ಮತ್ತೆ ಪ್ರೇಕ್ಷಕರ ಎದುರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಆದರೆ ಸೈಕೋ ಧನುಷ್‌ಗೂ ಖೈದಿ ಧನುಷ್‌ಗೂ ಬಹಳ ವ್ಯತ್ಯಾಸ ಇದೆ.

ಅಂದು ಚಿತ್ರರಂಗದಲ್ಲಿ `ರಾ’ ಆಗಿದ್ದ ಧನುಷ್‌, ಇಂದು ಸಿಕ್ಸ್ ಪ್ಯಾಕ್‌ ಆಗಿದ್ದಾರೆ. ದೇಹ ದಂಡನೆಯೊಂದಿಗೆ ನಟನೆ, ನೃತ್ಯ, ಸಾಹಸಗಳನ್ನು ಮೆರೆಯಲು ಪರಿಣಿತರಾಗಿದ್ದಾರೆ. ಸಿಕ್ಸ್ ಪ್ಯಾಕ್‌ ಜೊತೆಗೆ ಪಾಶ್ಚಾತ್ಯ ಹಿಪ್‌ ಹಾಪ್‌ ಮತ್ತು ಸಮಕಾಲೀನ ನೃತ್ಯ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಈಗೇನಿದ್ದರೂ ಈ ಎಲ್ಲ ಝಲಕ್‌ಗಳ ಚಮಕ್‌ಗಳನ್ನು ತೆರೆಯ ಮೇಲೆ ತೋರಿಸಲು ಕಾಯುತ್ತಿದ್ದಾರೆ.

ಇಂತಹ ವಿಶೇಷಗಳ ಹೊಸ ಖೈದಿ ಕೆಲವು ಪ್ರಥಮಗಳನ್ನೂ ದಾಖಲಿಸಲಿದ್ದಾನೆ. ಬಾಲಿವುಡ್‌ನ ಸಂಗೀತ ನಿರ್ದೇಶಕದ್ವಯರಾದ ಜಸ್ಟಿನ್‌ ಯೇಸುದಾಸ್‌ ಮತ್ತು ಉದಯ್‌ ನಂಜೂರ್‌ ಈ ಚಿತ್ರದೊಂದಿಗೆ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಪ್ರವೇಶಿಸುತ್ತಿದ್ದಾರೆ. ಈ ಮೂಲಕ ಬಾಲಿವುಡ್‌ನ ಅಪ್ರತಿಮ ಸಂಗೀತ ಜೋಡಿಯೊಂದು ಕನ್ನಡ ಸಿನಿ ಕ್ಷೇತ್ರಕ್ಕೆ ಎಂಟ್ರಿ ನೀಡಲಿದ್ದು, ಹೊಸ ರಾಗಸುಧೆ ಹರಿಸಲಿದೆ.

`ಹೈಜಾಕ್‌,’ `ಸಿಖಂಧರ್‌’ಗಳಂಥ ಸಿನಿಮಾ ಮತ್ತು ಸಾವಿರಾರು ಜಾಹೀರಾತುಗಳಿಗೆ ಸಂಗೀತ ನಿರ್ದೇಶಿಸಿದ ಕೀರ್ತಿ ಈ ಜೋಡಿಯದು.

ತಮಿಳು ಚಿತ್ರರಂಗದ ಖ್ಯಾತ ಛಾಯಾಗ್ರಾಹಕ ರಾಜಶೇಖರನ್‌ `ಖೈದಿ’ಯ ಕ್ಯಾಮರಾ ಕಣ್ಣಾಗುತ್ತಿದ್ದಾರೆ. ಅಷ್ಟೇ ಅಲ್ಲ, ತಮಿಳಿನ ಸ್ಟಂಟ್‌ ಮಾಸ್ಟರ್‌ ವಿಕಿ ನಂದಗೋಪಾಲ್ ‌ಸಹ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಅದ್ಭುತ ಸ್ಟಂಟ್‌ಗಳಿಂದ ಕನ್ನಡ ಪ್ರೇಕ್ಷಕನಿಗೆ ವಿಭಿನ್ನ ಸಾಹಸಗಳನ್ನು ತೋರಿಸಲಿದ್ದಾರೆ. ತೆಲುಗಿನ ಚಿತ್ರರಂಗದ ಕೊರಿಯೊಗ್ರಾಫರ್‌ ಸುಚಿತ್ರ ಚಂದ್ರಘೋಷ್ `ಖೈದಿ’ಯ ಕೊರಿಯೊಗ್ರಾಫರ್‌ ಆಗಿದ್ದಾರೆ.

ಬಾಲಿವುಡ್‌ನ ಖ್ಯಾತ ಗಾಯಕರಾದ ಶಂಕರ್‌ ಮಹಾದೇನ್‌, ನೇಹಾ ಬಾಸಿನ್‌ ಮತ್ತು ಹಂಸಿಕಾ ಅಯ್ಯರ್‌ ತಮ್ಮ ಗಾಯನದಿಂದ ಕನ್ನಡದ ಸಂಗೀತಪ್ರಿಯರಿಗೆ ಹೊಸ ಸುಧೆ ಹರಿಸಲಿದ್ದಾರೆ. ಶಾರೂಖ್‌ ಮತ್ತು ಕರೀನಾ ಕಪೂರ್‌ ಅಭಿನಯದ `ರಾ ಒನ್‌’ ಚಿತ್ರದ `ಚಮ್ಮಕ್‌ ಚಿಲ್ಲೋ….’ ಹಿಟ್‌ ಗೀತೆ ಹಾಡಿದ ಕೀರ್ತಿ ಹಂಸಿಕಾ ಅಯ್ಯರ್‌ ಅವರದ್ದಾಗಿದ್ದರೆ, `ಮೇರೆ ಬ್ರದರ್‌ ಕಿ ದುಲ್ಹನ್‌’ ಚಿತ್ರದ ಹಾಡಿಗಾಗಿ ಫಿಲಂಫೇರ್‌ ಪ್ರಶಸ್ತಿ ಪಡೆದ ಹಿರಿಮೆ ನೇಹಾ ಬಾಸಿನ್‌ ಅವರದು.

ಇಡೀ ಚಿತ್ರ ನೈಜ ಘಟನೆಯನ್ನು ಆಧರಿಸಿದೆ. ಚಿತ್ರದ ಕಥೆ ಸ್ಲಂನಲ್ಲೇ ಆರಂಭವಾಗುತ್ತದೆ. ಅದಕ್ಕಾಗಿ ನಂದಿನಿ ಲೇಔಟ್‌ನ ಸ್ಲಂನಲ್ಲಿ ಚಿತ್ರೀಕರಣ ನಡೆದಿದೆ. ಇಡೀ ಸಿನಿಮಾ ಕುತೂಹಲ ತುಂಬಿಕೊಂಡಿದ್ದು, ಆ್ಯಕ್ಷನ್‌ ಓರಿಯೆಂಡೆಟ್‌ ಆಗಿರುತ್ತದೆ.

`ಸೈಕೋ’ ಚಿತ್ರಕ್ಕೆ ನಿರ್ಮಾಪಕರಾಗಿದ್ದ ಗುರುದತ್‌, `ಖೈದಿ’ಯ ನಿರ್ಮಾಣದ ಜೊತೆಗೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯೊಂದಿಗೆ ನಿರ್ದೇಶನಕನಾಗಿ ಕ್ಯಾಪ್‌ ತೊಟ್ಟಿದ್ದಾರೆ. ದಿ ಗ್ರ್ಯಾಂಡ್‌ ಕ್ರಿಯೇಷನ್ಸ್ ಸಂಸ್ಥೆಯಡಿಯಲ್ಲಿ `ಖೈದಿ’ಯ ತಾರಾಗಣದಲ್ಲಿ ವೀಣಾ ಸುಂದರ್‌, ತಬಲ ನಾಣಿ, ಮೋಹನ್‌ ರಾಜ್‌ ಮತ್ತಿತರರು ಇದ್ದಾರೆ.

ಸದ್ಯ ಚಿತ್ರೀಕರಣದಲ್ಲಿ ಬಿಜಿಯಾಗಿರುವ ಧನುಷ್‌ ಮತ್ತು ಚಾಂದಿನಿ, ಆಗಾಗ ಸೆಲೆಬ್ರಿಟಿ ಕಾರ್ಯಕ್ರಮಗಳಿಗೂ ಹಾಜರಾಗುತ್ತಿದ್ದಾರೆ. ಆ ಮೂಲಕ ಚಿತ್ರದ ಪ್ರೊಮೋಷನ್ಸ್ ಕೂಡಾ ನಡೆಸುತ್ತಿದ್ದಾರೆ ಎನ್ನಬಹುದು. ಖೈದಿ ತೆರೆಗೆ ಬರುವುದನ್ನು ಸಿನಿಪ್ರಿಯರು ಎದುರು ನೋಡುತ್ತಿರುವುದಕ್ಕೆ ಇವೆಲ್ಲ ಕೂಡಾ ಕಾರಣಗಳಾಗಬಹುದು. ಇದು ಗಾಂಧಿನಗರದ ಲೆಕ್ಕಾಚಾರ. ಅದೇನೇ ಆದರೂ ಚಾಂದಿನಿ ಕಮ್ ಬ್ಯಾಕ್‌ ಕಡಿಮೆ ಸುದ್ದಿಯೇನಲ್ಲ!

– ಸರಸ್ವತಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ