ಇತ್ತೀಚೆಗೆ ನನ್ನ ಗೆಳತಿಯ ಮಗನ ಮದುವೆ ನಡೆಯಿತು. ಮದುವೆಗೆ ಮುಂಚೆ ಹೆಣ್ಣಿನ ಮನೆಯವರು ಶಾಸ್ತ್ರದಂತೆ ಒಮ್ಮೆ ಗಡಿಯಾರ ಕೊಡುತ್ತೇವೆಂದು, ಒಮ್ಮೆ ಸರ, ಒಮ್ಮೆ ಉಂಗುರ ಮಾಡಿಸುತ್ತೇವೆಂದು ಹೇಳುತ್ತಿದ್ದರು. ಪ್ರತಿ ಬಾರಿಯೂ ಹುಡುಗ ಬೇಡವೆಂದು ಹೇಳುತ್ತಿದ್ದ.

ಮದುವೆಯಲ್ಲಿ ಶಾಸ್ತ್ರವೆಂದು ಒತ್ತಾಯ ಮಾಡಿ ಹೆಣ್ಣಿನ ಕಡೆಯವರು ವರನಿಗೆ ವಜ್ರದ ಉಂಗುರವನ್ನು ಕೊಡಲು ಹೋದಾಗ ಅವನು ಬಹಳ ಕಷ್ಟದಿಂದ ಒಂದು ಸಾಧಾರಣ ಚಿನ್ನದ ಉಂಗುರ ತೆಗೆದುಕೊಳ್ಳಲು ಒಪ್ಪಿಕೊಂಡ.

ಮದುವೆಯ ನಂತರ ರಿಸೆಪ್ಶನ್‌ ನಡೆಯಿತು. ಸಾಧಾರಣವಾಗಿ ರಿಸೆಪ್ಶನ್‌ ಖರ್ಚನ್ನು ಹೆಣ್ಣಿನ ಕಡೆಯವರೇ ಭರಿಸುತ್ತಾರೆ. ಆಗಲೂ ಹುಡುಗ ಹಠದಿಂದ, ಮದುವೆ ಗಂಡು ಹೆಣ್ಣು ಇಬ್ಬರದೂ ಆಗುತ್ತೆ. ಪ್ರತಿಯೊಂದು ಖರ್ಚನ್ನೂ ಹುಡುಗಿ ಮನೆಯವರೇ ಏಕೆ ಮಾಡಬೇಕು? ಎಂದ.

ಕಡೆಗೂ ಅವನು ಹಠ ಬಿಡದೆ ಒಟ್ಟು ಖರ್ಚಿನಲ್ಲಿ ಅರ್ಧದಷ್ಟು ಹಣವನ್ನು ತಾನೇ ಕೊಟ್ಟ.

ವರನ ಈ ನ್ಯಾಯಯುತ ವ್ಯವಹಾರ ಮತ್ತು ಮಾತುಗಳು ನನ್ನ ಮನ ಮುಟ್ಟಿದವು.

– ಸುಮಿತ್ರಾ ಜೈನ್‌, ಮೂಡಬಿದರೆ.

ನಾನು ನನ್ನ ಹಳೆಯ ಗೆಳತಿ ಮಂಜುಳಾಳನ್ನು ನೋಡಲು ಹೋದಾಗ ಅವಳ ಸೊಸೆ ಆಶಾ ಬಾಗಿಲು ತೆರೆದು ನನ್ನನ್ನು ಸ್ವಾಗತಿಸಿದಳು. ನಾನು ಒಳಗೆ ಹೋದಾಗ ಮಂಜುಳಾ ಯಾರೊಂದಿಗೋ ಫೋನ್‌ನಲ್ಲಿ ಮಾತಾಡುತ್ತಿದ್ದಳು.

ಆಶಾ ನನ್ನನ್ನು ಇನ್ನೊಂದು ರೂಮಿನಲ್ಲಿ ಕೂಡಿಸಿ, “ಆಂಟಿ, ನಿನ್ನೆ ತಾನೇ ನಮ್ಮತ್ತೆಗೆ ಒಬ್ಬ ಹಳೆಯ ಗೆಳತಿ ಫೋನ್‌ ನಂಬರ್ ಸಿಕ್ಕಿತು. ಅವರ ಜೊತೆ ಮಾತಾಡ್ತಿದ್ದಾರೆ. ಐದು ನಿಮಿಷ ಬಂದುಬಿಡ್ತಾರೆ,” ಎಂದಳು.

ನಂತರ, “ಆಂಟಿ, ಮಾವನರು ಹೋದ ಮೇಲೆ ಅತ್ತೆ ಒಂಟಿಯಾಗಿಬಿಟ್ಟಿದ್ದಾರೆ. ಅದಕ್ಕೇ ವಾರಕ್ಕೊಮ್ಮೆ ನಿಮ್ಮ ಹಳೆಯ ಫ್ರೆಂಡ್ಸ್ ಗೆ ಫೋನ್‌ ಮಾಡೀಂತ ನಾನು ಹೇಳಿದ್ದೀನಿ. ಅವರ ಜೊತೆ ಸ್ವಲ್ಪ ಹೊತ್ತು ಮಾತಾಡಿದರೆ ಮನಸ್ಸು ಹಗುರವಾಗುತ್ತದೆ,” ಎಂದಳು.

ಆಶಾಳ ಈ ಮಾತು ನನ್ನ ಹೃದಯನ್ನು ತಟ್ಟಿತು. ಎಲ್ಲ ಸೊಸೆಯರೂ ಆಶಾಳ ತರಹ ತಮ್ಮ ಅತ್ತೆಯರ ಬಗ್ಗೆ ಯೋಚಿಸುವಂತಾದರೆ ಎಷ್ಟು ಚೆನ್ನಾಗಿರುತ್ತದೆ ಅನ್ನಿಸಿತು.

– ರುಕ್ಮಿಣಿ, ಕೋಲಾರ.

ನಾನು ನಸುಗಪ್ಪು ಬಣ್ಣದವಳಾಗಿದ್ದು ಅಷ್ಟೇನೂ ಸುಂದರಳೂ ಅಲ್ಲ. ನನ್ನ ಮದುವೆಗೆ ಬಂದಿದ್ದ ಅನೇಕ ಮಹಿಳೆಯರು ನನ್ನನ್ನು ನೋಡಿ, “ವರದಕ್ಷಿಣೆ ಹಣ ಬಹಳ ತೆಗೆದುಕೊಂಡಿರಬೇಕು. ಅದಕ್ಕೇ ಕಪ್ಪಗಿರೋ ಸೊಸೇನ ಕರೆದುಕೊಂಡು ಬಂದಿದ್ದಾರೆ. ಹುಡುಗನಿಗೂ ಹುಡುಗಿಗೂ ಹೊಂದಿಕೆಯೇ ಆಗಲ್ಲ. ಹುಡುಗ ಎಷ್ಟು ಸುಂದರವಾಗಿದ್ದಾನೆ. ಇಂತಹ ಸೊಸೆಯನ್ನು ಏಕೆ ಕರೆದುಕೊಂಡು ಬಂದರೋ?” ಎಂದರು.

ನನ್ನ ಹಿರಿಯ ವಾರಗಿತ್ತಿ ಅಲ್ಲೇ ಇದ್ದರು. ಅವರು ಬಹಳ ಸುಂದರವಾಗಿದ್ದಾರೆ. ಅವರು ಕೂಡಲೇ, “ನೋಡೀಮ್ಮಾ, ನಾವು ಸೊಸೆಯನ್ನು ವರದಕ್ಷಿಣೆ ತೆಗೆದುಕೊಂಡಾಗಲೀ, ಅವಳ ಬಣ್ಣ, ರೂಪು ನೋಡಿಯಾಗಲೀ ಕರೆದುಕೊಂಡು ಬರಲಿಲ್ಲ. ನಾವು ಅವಳ ಒಳ್ಳೆಯ ಮನಸ್ಸು, ಒಳ್ಳೆಯ ನಡತೆ ನೋಡಿದ್ವಿ. ಬಣ್ಣ ರೂಪುಗಳಂತೂ ವಯಸ್ಸಾಗುತ್ತಿದ್ದಂತೆ ಕಡಿಮೆಯಾಗುತ್ತವೆ. ಆದರೆ ಮನದ ಸೌಂದರ್ಯ, ಒಳ್ಳೆಯ ನಡತೆ ಯಾವಾಗಲೂ ಒಂದೇ ರೀತಿ ಇರುತ್ತೆ. ನಮ್ಮ ಸೊಸೆಯಂತೂ ಗಿರೀಶನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಆ ನಂಬಿಕೆ ನಮಗಿದೆ,” ಎಂದರು.

ಅವರ ಮಾತು ಕೇಳಿ ಆ ಮಹಿಳೆಯರ ಮುಖ ಕಪ್ಪಿಟ್ಟಿತು. ನನ್ನ ವಾರಗಿತ್ತಿಯ ಮಾತುಗಳು ನನ್ನ ಮನಸ್ಸನ್ನು ಮುಟ್ಟಿದವು.

– ಆರತಿ, ಶಿವಮೊಗ್ಗ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ