ಅತ್ಯಂತ ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಬೇಕೆಂದು ಬಯಸುವುದು ಎಲ್ಲ ಮಹಿಳೆಯರ ಸಹಜಗುಣ. ಹಿಂದಿನ ಕಾಲದಲ್ಲಿಯೂ ಸಹ ಸೌಂದರ್ಯ ಪ್ರಸಾಧನಗಳನ್ನು ಕಂಡುಹಿಡಿಯಲಾಗಿತ್ತು. ಅವುಗಳಿಂದ ಮಾಡಿದ ಮೇಕಪ್‌ಗೆ ಟ್ರೆಡಿಶನ್ ಮೇಕಪ್ ಎಂದು ಕರೆಯಲಾಯಿತು. ಆ ಸೌಂದರ್ಯ ಪ್ರಸಾಧನಗಳು ಕಡಿಮೆಯಾದಾಗ ಸೌಂದರ್ಯ ಜಗತ್ತಿನಲ್ಲಿ ಹೊಸ ಹೊಸ ಸಂಶೋಧನೆಗಳಾಗತೊಡಗಿದವು. ಅವುಗಳಲ್ಲಿ ಇದುವರೆಗಿನ ಅತ್ಯುತ್ತಮ ಸಂಶೋಧನೆ ಏರ್ ಬ್ರಶ್ ಮೇಕಪ್ ಟೆಕ್ನಿಕ್ ಆಗಿದ್ದು, ಅದು ಮಹಿಳೆಯ ನೈಸರ್ಗಿಕ ಸೌಂದರ್ಯಕ್ಕೆ ಹೊಸ ಆಯಾಮವನ್ನು ಕೊಟ್ಟಿದೆ.
ಏರ್ ಬ್ರಶ್ ಮೇಕಪ್ ಟೆಕ್ನಿಕ್
ವಿದೇಶಗಳಲ್ಲಿ 60-70 ವರ್ಷಗಳ ಹಿಂದೆ ಸ್ಪ್ರೇ ಟೆಕ್ನಿಕ್ ಮತ್ತು ಟ್ರ್ಯಾನ್ಸ್ ಪರೆನ್ಸಿ ಟೆಕ್ನಿಕ್ ಹೆಸರಿನಲ್ಲಿ ಪ್ರಸಿದ್ಧವಾಗಿತ್ತು. ಆದರೆ ಅದರಲ್ಲಿ ಕೆಲವು ಕೊರತೆಗಳೂ ಇದ್ದವು. ಬಾಟ್ಲಿಂಗ್ ಸ್ಪ್ರೇ ನಿಂದ ಚರ್ಮದ ಮೇಲೆ ನಿರೀಕ್ಷಿಸಿದಷ್ಟು ಪರಿಣಾಮ ಕಾಣುತ್ತಿರಲಿಲ್ಲ. ಹೀಗಾಗಿ ಅದನ್ನು ಪರಿಷ್ಕೃತಗೊಳಿಸಲಾಯಿತು. ಅದರ ಪರಿಷ್ಕೃತ ರೂಪವೇ ಏರ್ ಬ್ರಶ್ ಮೇಕಪ್ ಟೆಕ್ನಿಕ್ ಹೆಸರಿನಿಂದ ಪ್ರಸಿದ್ಧವಾಗಿದ್ದು ಅದರಲ್ಲಿ ಹೈವೋಲ್ಟೇಜ್ ಕಂಪ್ರೆಸರ್ ಸಹಾಯದಿಂದ ಏರ್ ಗನ್ ಮೂಲಕ ಸ್ಪ್ರೇ ಮಾಡಲಾಗುತ್ತದೆ.
ಬದಲಾದ ಟ್ರೆಂಡ್
ಭಾರತೀಯ ಮಹಿಳೆಯರಿಗೆ ಅನೇಕ ವರ್ಷಗಳಿಂದ ಫೌಂಡೇಶನ್, ಪೌಡರ್, ಲಿಪ್‌ಸ್ಟಿಕ್, ಬ್ಲಶರ್ ಮತ್ತು ಬಿಂದಿ ಮೇಕಪ್‌ನ ಸೂತ್ರಗಳಾಗಿವೆ. ಅವನ್ನು ಉಪಯೋಗಿಸಿಯೂ ಅವರು ಬಯಸಿದ ಸೌಂದರ್ಯ ಸಿಗುತ್ತಿರಲಿಲ್ಲ. ಏಕೆಂದರೆ ಟ್ರೆಡಿಶನಲ್ ಮೇಕಪ್‌ನ ಅತ್ಯಂತ ದೊಡ್ಡ ಅವಗುಣವೆಂದರೆ ಅದು ಅಸಹಜವಾಗಿ ಕಾಣಿಸುವಿಕೆ. ಒಂದು ವೇಳೆ ನಿಮಗೆ ಮೇಕಪ್ ಇಷ್ಟವಿದ್ದು ನ್ಯಾಚುರಲ್ ಲುಕ್ ಇಷ್ಟಪಡುವಿರಾದರೆ ನಿಮಗೆ ಏರ್ ಬ್ರಶ್ ಮೇಕಪ್ ಟೆಕ್ನಿಕ್ ಲಭ್ಯವಿದ್ದು, ಅದರಿಂದ ನ್ಯಾಚುರಲ್ ಗ್ಲೋಯಿಂಗ್ ಸಿಗುತ್ತದೆ.
ಸಾಧಾರಣಕ್ಕಿಂತ ಭಿನ್ನ
ಏರ್ ಬ್ರಶ್ ಮೇಕಪ್ ಪ್ರಾಡಕ್ಟ್ ಗಳು ಲಿಕ್ವಿಡ್ ಬೇಸ್ಡ್ ಪ್ರಾಡಕ್ಟ್ ಗಳಾಗಿರುವುದರಿಂದ ಟ್ರೆಡಿಶನ್ ಮೇಕಪ್ ಪ್ರಾಡಕ್ಟ್ ಗಳಿಗಿಂತ ಭಿನ್ನವಾಗಿರುತ್ತವೆ. ಅದರಿಂದಾಗಿ ಇವು ತ್ವಚೆಯಲ್ಲಿ ಚೆನ್ನಾಗಿ ಮಿಳಿತಗೊಂಡು ಪ್ರಾಕೃತಿಕ ಕಾಂತಿ ಕೊಡುತ್ತವೆ ಹಾಗೂ ಮುಖದ ಕಲೆಗಳು, ಮಚ್ಚೆಗಳು, ಕಪ್ಪು ವರ್ತುಲಗಳು, ಮೊಡವೆಗಳ ಗುರುತು ಇತ್ಯಾದಿ ಕೊರತೆಗಳನ್ನು ಕವರ್ ಮಾಡಿ ಮುಖಕ್ಕೆ ಒಂದು ಪಾರದರ್ಶಕ ಲುಕ್ ಕೊಡುತ್ತವೆ. ಇದರಿಂದ ಮುಖದ ಕುಂದುಗಳ ಬಗ್ಗೆಯಲ್ಲದೆ ವಿಶೇಷತೆಗಳ ಬಗ್ಗೆ ಜನರ ಗಮನ ಹೋಗುತ್ತದೆ. ಏಕೆಂದರೆ ಮುಖ ಮೊದಲಿಗಿಂತ ಸುಂದರವಾಗಿ ಕಾಣುತ್ತದೆ.
ಏರ್ ಗನ್ ಮೆಷಿನ್
ಏರ್ ಬ್ರಶ್ ಮೇಕಪ್ ಬಗ್ಗೆ ತಿಳಿಯುವ ಮೊದಲು ಅದರ ಮೆಷಿನ್ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಈ ಮೇಕಪ್‌ನಲ್ಲಿ ಏರ್ ಗನ್ ಉಪಯೋಗಿಸಲಾಗುತ್ತದೆ. ಅದನ್ನು ಇದರ ಕಂಪ್ರೆಸರ್‌ನೊಂದಿಗೆ ಜೋಡಿಸಲಾಗಿರುತ್ತದೆ. ಏರ್ ಗನ್‌ನ ಟ್ಯಾಂಕ್‌ನಲ್ಲಿ ಕೆಲವು ಹನಿ ಪ್ರಾಡಕ್ಟ್ ಹಾಕಲಾಗುತ್ತದೆ. ನಂತರ ಕಂಪ್ರೆಸರ್‌ನ ಕೇಬಲ್‌ನ್ನು ಸ್ವಿಚ್ ಬೋರ್ಡ್‌ಗೆ ಕನೆಕ್ಟ್ ಮಾಡಿ ಹೈವೋಲ್ಟೇಜ್ ಕಂಪ್ರೆಸರ್ ಮೂಲಕ ಏರ್ ಗನ್‌ನಲ್ಲಿ ಹಾಕಿದ ಪ್ರಾಡಕ್ಟ್ ನ್ನು ಪ್ರೆಶರ್‌ನಿಂದ ಕ್ಲೈಂಟ್‌ರ ಮುಖ ಅಥವಾ ದೇಹದ ಭಾಗಗಳ ಮೇಲೆ ಸ್ಪ್ರೇ ಮಾಡಲಾಗುತ್ತದೆ.
ಗಮನಿಸಬೇಕಾದ ವಿಷಯವೆಂದರೆ ಇದರಲ್ಲಿ ಸಾಧಾರಣ ಪ್ರಾಡಕ್ಟ್ ನ್ನು ಉಪಯೋಗಿಸುವುದಿಲ್ಲ. ಇದರಲ್ಲಿ ಲಿಕ್ವಿಡ್ ಬೇಸ್ಡ್ ಪ್ರಾಡಕ್ಟ್ ನ್ನು ಉಪಯೋಗಿಸುತ್ತಾರೆ. ಏರ್ ಗನ್‌ನ್ನು ಪ್ರೆಶರ್ ಗನ್ ಎಂದೂ ಕರೆಯುತ್ತಾರೆ.
ಏರ್ ಗನ್‌ನ ಉಪಯೋಗ
ಏರ್ ಗನ್ ಬಗ್ಗೆ ತಿಳಿದುಕೊಂಡ ನಂತರ ಅದನ್ನು ಉಪಯೋಗಿಸುವ ವಿಧಾನ ತಿಳಿದುಕೊಳ್ಳಬೇಕು. ಏರ್ ಗನ್ ಉಪಯೋಗಿಸುವಾಗ ಅದು ಕ್ಲೈಂಟ್‌ರ ಮುಖದಿಂದ 7-8 ಇಂಚು ದೂರವಿರಬೇಕು. ಸ್ಪ್ರೇ ಮಾಡುವಾಗ ಅದು ಕ್ಲೈಂಟ್ ಕಣ್ಣಿನೊಳಗೆ ಹೋಗದಂತೆ ಕಣ್ಣುಗಳನ್ನು ಮುಚ್ಚಿರಬೇಕು. ಬ್ಯೂಟಿಶಿಯನ್ ಹೈಜಿನಿಕ್ ನಿಯಮದ ಪ್ರಕಾರ ಮುಖಕ್ಕೆ ಮಾಸ್ಕ್ ಧರಿಸಿಕೊಳ್ಳಬೇಕು.

ಏರ್ ಗನ್‌ನಿಂದ ಕ್ಲೈಂಟ್‌ನ ಮುಖದ ಮೇಲೆ ಒಂದು ಪ್ರಾಡಕ್ಟ್ ಸ್ಪ್ರೇ ಮಾಡಿದ ನಂತರ ಇನ್ನೊಂದು ಪ್ರಾಡಕ್ಟ್ ಉಪಯೋಗಿಸುವ ಮುಂಚೆ ಮೊದಲು ಉಪಯೋಗಿಸಿದ ಪ್ರಾಡಕ್ಟ್ ಏರ್ ಗನ್‌ನಲ್ಲಿ ಇಲ್ಲವೆಂದು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ 2 ಪ್ರಾಡಕ್ಟ್ ಗಳು ಪರಸ್ಪರ ಬೆರೆತು ಮೇಕಪ್ ಹಾಳಾಗುವಂತಾಗಬಾರದು. ಆದ್ದರಿಂದ ಪ್ರಾಡಕ್ಟ್ನ್ನು ಉಪಯೋಗಿಸಿದ ನಂತರ ನ್ಯಾಪ್ ಕಿನ್‌ಮೇಲೆ ಸ್ಪ್ರೇ ಮಾಡಿ ನೋಡಬೇಕು. ತೃಪ್ತಿಯಾದ ನಂತರವೇ ಮೇಕಪ್‌ನ ಮುಂದಿನ ಹೆಜ್ಜೆಗಳನ್ನು ಆರಂಭಿಸಬೇಕು.
ಮೇಕಪ್‌ನ ಆರಂಭ
ಬ್ಯೂಟಿಶಿಯನ್ ಎಲ್ಲಕ್ಕೂ ಮೊದಲು ಕ್ಲೈಂಟ್‌ರ ಮುಖವನ್ನು ಕ್ಲೆನ್ಸಿಂಗ್ ಮತ್ತು ಟೋನಿಂಗ್ ಮಾಡಬೇಕು. ನಂತರ ಮುಖದ ಕಲೆಗಳು, ನೆರಿಗೆಗಳು ಅಥವಾ ಫೈನ್ ಲೈನ್ಸ್, ಮೊಡವೆಗಳ ಗುರುತು ಇತ್ಯಾದಿಗಳನ್ನು ಅಡಗಿಸಲು ಏರ್ ಗನ್‌ನಿಂದ ಫೌಂಡೇಶನ್‌ನ್ನು ಗುಂಡಾಗಿ ತಿರುಗಿಸುತ್ತಾ ಚೆನ್ನಾಗಿ ಸ್ಪ್ರೇ ಮಾಡಬೇಕು. ಏರ್ ಗನ್‌ನಿಂದ ಕ್ಲೈಂಟ್‌ರ ಮುಖದ ಮೇಲೆ ಸ್ಪ್ರೇ ಮಾಡಿದ ನಂತರ ಸ್ವಲ್ಪ ಹೊತ್ತು ನಿಲ್ಲಿಸಬೇಕು. ಮೇಕಪ್ ತ್ವಚೆಯಲ್ಲಿ ಸೇರಿಕೊಂಡು ಒಣಗುತ್ತದೆ. ಅದರ ನಂತರವೇ ಎರಡನೇ ಪ್ರಾಡಕ್ಟ್ ಸ್ಪ್ರೇ ಮಾಡಿ. ನಂತರ ಫೇಸ್ ಕಟಿಂಗ್ (ಕಾಂಟೂರಿಂಗ್) ಮಾಡಬೇಕು.
ಈಗ ನಿಮ್ಮ ಕ್ಲೈಂಟ್‌ರ ಮುಖ ಕ್ಯಾನ್ವಾಸ್ ತರಹ ಸಿದ್ಧವಾಗಿದೆ. ನಿಮ್ಮ ಹಾಗೂ ಕ್ಲೈಂಟ್ ಇಷ್ಟದಂತೆ ಮೇಕಪ್ ಮಾಡಬಹುದು. ಮೊಟ್ಟ ಮೊದಲು ಮುಖ, ಸ್ಕಿನ್ ಟೋನ್ ಹಾಗೂ ಕಣ್ಣುಗಳ ಅನುಸಾರವಾಗಿ ಐ ಶ್ಯಾಡೋ ಸ್ಪ್ರೇ ಮಾಡಿ, ನಂತರ ಬ್ಲಶರ್ ಸ್ಪ್ರೇ ಮಾಡಿ.
ಒಂದು ವೇಳೆ ನೀವು ಬ್ರೈಡಲ್ ಮೇಕಪ್ ಮಾಡುತ್ತಿದ್ದರೆ ಫೋರ್ ಹೆಡ್ ಮೇಲೆ ಸ್ಟೆನ್ಸಿಲ್‌ನ ಸಹಾಯದಿಂದ ಬಿಂದಿಯನ್ನು ಕೂಡ ಮಾಡಬಹುದು. ಅದರಿಂದ ವಧು ಇನ್ನಷ್ಟು ಹೆಚ್ಚು ಸುಂದರವಾಗಿ ಕಾಣುತ್ತಾಳೆ. ನಂತರ ಸ್ಟೆನ್ಸಿಲ್‌ನ ಸಹಾಯದಿಂದಲೇ ಕ್ಲೈಂಟ್ ಇಚ್ಛೆಗೆ ಅನುಗುಣವಾಗಿ ಜೂಯೆಲ್ ಟ್ಯಾಟೂ ಇತ್ಯಾದಿ ಕೂಡ ತಯಾರಿಸಬಹುದು. ಸ್ಟೆನ್ಸಿಲ್ ಮೂಲಕ ತುಟಿಗಳ ಮೇಲೂ ಸಹ ಫಿನಿಶಿಂಗ್‌ಟಚ್ ಕೊಟ್ಟು ಮೇಕಪ್ ಕಂಪ್ಲೀಟ್ ಮಾಡಬಹುದು.
ಏರ್ ಗನ್ ಸಂಭಾಳಿಸುವಿಕೆ
ಏರ್ ಗನ್ ಉಪಯೋಗಿಸಿದ ನಂತರ ಎಚ್ಚರಿಕೆಯಿಂದ ಅದನ್ನು ಸ್ವಚ್ಛಗೊಳಿಸಬೇಕು ಹಾಗೂ ಅದರಲ್ಲಿ ಪ್ರಾಡಕ್ಟ್ ಉಳಿದಿದೆಯೇ ಎಂದು ಗಮನಿಸಬೇಕು.
ಏರ್ ಗನ್‌ನಲ್ಲಿ ಏರ್ ಬ್ರಶ್ ಮೇಕಪ್‌ಗಾಗಿಯೇ ತಯಾರಿಸಿದ ಪ್ರಾಡಕ್ಟ್ ಗಳನ್ನೇ ಉಪಯೋಗಿಸಬೇಕು. ಸಾಧಾರಣ ಪ್ರಾಡಕ್ಟ್ ನ್ನು ಉಪಯೋಗಿಸುವುದರಿಂದ ಏರ್ ಗನ್ ಜಾಮ್ ಕೂಡ ಆಗುತ್ತದೆ.
ಉಪಯೋಗಿಸಿದ ನಂತರ ಏರ್ ಗನ್‌ನ್ನು ಅದರ ಬಾಕ್ಸ್ ನಲ್ಲಿಯೇ ಇಡಿ.
ಮೇಕಪ್‌ನ ವಿಶೇಷತೆ
ಏರ್ ಬ್ರಶ್ ಮೇಕಪ್ ತೆಳುವಾಗಿರುವುದರಿಂದ ತ್ವಚೆಯಲ್ಲಿ ಬೆರೆತು ಅದಕ್ಕೆ ನ್ಯಾಚುರಲ್ ಲುಕ್ ಕೊಡುತ್ತದೆ.
ವಾಟರ್ ಬೇಸ್ಡ್ ಪ್ರಾಡಕ್ಟ್ ಗಳಿಂದಾಗಿ ಈ ಮೇಕಪ್ ಎಲ್ಲ ರೀತಿಯ ತ್ವಚೆಗೆ, ಆಯ್ಲಿ ಹಾಗೂ ಸೆನ್ಸಿಟಿವ್ ತ್ವಚೆಗೂ ಅನುರೂಪವಾಗಿರುತ್ತದೆ.
ಈ ಮೇಕಪ್ ಸಂಪೂರ್ಣವಾಗಿ ಹೈಜಿನಿಕ್ ಆಗಿರುತ್ತದೆ. ಏಕೆಂದರೆ ಇದರ ಪ್ರಾಡಕ್ಟ್ ತ್ವಚೆಯ ನೇರ ಸಂಪರ್ಕಕ್ಕೆ ಬರುವುದಿಲ್ಲ.
ಈ ಮೇಕಪ್‌ನಲ್ಲಿ ಬಿರುಕು ಬೀಳುವುದಿಲ್ಲ. ಪದೇ ಪದೇ ಟಚ್ ಅಪ್ ಮಾಡುವ ಅಗತ್ಯವಿಲ್ಲ.
ಏರ್ ಬ್ರಶ್ ಮೇಕಪ್‌ಗೆ ಬೇಕಾಗುವ ಸಮಯ 5-10 ನಿಮಿಷ ಮಾತ್ರ. ಆದರೆ ಅದರ ಪ್ರಭಾವ 15-20 ಗಂಟೆಗಳವರೆಗೆ ಇರುತ್ತದೆ.
ಈ ಮೇಕಪ್‌ನ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಇದರಲ್ಲಿ ಪರ್ಫ್ಯೂಮ್, ಟಾಲ್ಕ್, ಆಲ್ಕೋಹಾಲ್, ಡೈ ಮತ್ತು ಪ್ರಿಸರ್ವೇಟಿವ್ ಇತ್ಯಾದಿಗಳನ್ನು ಉಪಯೋಗಿಸುವುದಿಲ್ಲ.
ಆ್ಯಕ್ನೆ, ಪಿಂಪಲ್ಸ್, ಸ್ಕಿನ್ ಅಲರ್ಜಿ ಇತ್ಯಾದಿ ಸಾಧಾರಣ ಮೇಕಪ್‌ನಿಂದ ಉಂಟಾಗುವ ಸಮಸ್ಯೆಗಳು ಇದರಿಂದ ಬರುವುದಿಲ್ಲ. ಏಕೆಂದರೆ ಇದರಲ್ಲಿ ಪ್ರಾಡಕ್ಟ್ ಗಳನ್ನು ಕೈಗಳಿಂದ ಬ್ಲೆಂಡ್ ಮಾಡುವುದಿಲ್ಲ.
ಈ ಮೇಕಪ್ ಟ್ರೆಡಿಶನಲ್ ಮೇಕಪ್ ಲೇಪಿಸಿದಂತೆ ಅಥವಾ ಸಿಪ್ಪೆ ಎದ್ದಂತೆ ಕಾಣುವುದಿಲ್ಲ. ಏಕೆಂದರೆ ಸ್ಕಿನ್ ಟೋನ್‌ಗೆ ಅನುಗುಣವಾಗಿ ಈ ಮೇಕಪ್‌ಗೆ ತೆಳುವಾಗಿ ಸ್ಪ್ರೇ ಮಾಡಲಾಗುತ್ತದೆ.
ಈ ಮೇಕಪ್ ತ್ವಚೆಯ ದೋಷಗಳನ್ನು ಸಂಪೂರ್ಣವಾಗಿ ಕವರ್‌ಮಾಡುತ್ತದೆ.
ಏರ್ ಬ್ರಶ್ ಮೇಕಪ್ ಎಲ್ಲ ರೀತಿಯ ತ್ವಚೆ ಹಾಗೂ ಎಲ್ಲ ವಯಸ್ಸಿನ ಮಹಿಳೆಯರಿಗೂ ಐಡಿಯಲ್ ಆಗಿದೆ. ವಿಶೇಷವಾಗಿ ಬ್ರೈಡಲ್ ಮತ್ತು ಫೋಟೋಸೆಷನ್‌ಗೆ ಅತ್ಯಂತ ಉಪಯುಕ್ತ.
ಏರ್ ಬ್ರಶ್ ಮೇಕಪ್‌ನ್ನು ನೀವು ಶರೀರದ ಯಾವುದೇ ಭಾಗದ ಸೌಂದರ್ಯ ಹೆಚ್ಚಿಸಲು ಕಣ್ಣುಗಳು, ತುಟಿಗಳು ಮತ್ತು ಕೂದಲಿನ ಮೇಲೂ ಸಹ ಉಪಯೋಗಿಸಬಹುದು. ಆದರೆ ಕೊಂಚ ಎಚ್ಚರಿಕೆ ವಹಿಸಿ.
ಬ್ಯೂಟಿಶಿಯನ್ ತಮ್ಮ ಕಲ್ಪನಾ ಶಕ್ತಿಯ ಸಂಪೂರ್ಣ ಉಪಯೋಗ ಪಡೆದು ಕ್ಲೈಂಟ್‌ಗೆ ಬೇರೆ ಬೇರೆ ರೂಪ ಕೊಡಬಹುದು.
ಏರ್ ಬ್ರಶ್ ಮೇಕಪ್‌ನಿಂದ ವಿಭಿನ್ನ ಪ್ರಕಾರದ ಬಾಡಿ ಟ್ಯಾಟೂ ಇತ್ಯಾದಿ ಮಾಡಬಹುದು.
ಗಮನಿಸಿ
ಏರ್ ಬ್ರಶ್ ಮೇಕಪ್‌ನ್ನು ತೆಗೆಯಲು ಮೇಕಪ್ ರಿಮೂವರ್‌ನ್ನೇ ಉಪಯೋಗಿಸಿ.
ಮೇಕಪ್ ತೆಗೆದ ನಂತರ ತೆಳುವಾಗಿ ಮಾಯಿಶ್ಚರೈಸರ್ ಹಚ್ಚಬೇಕು.
ಉತ್ತಮ ಬ್ಯೂಟಿ ಸಲ್ಯೂಶನ್ ಆಗಿದ್ದರೂ ಕುಶಲ ಬ್ಯೂಟೀಶಿಯನ್ ಮೂಲಕ ಮಾಡಿಸಬೇಕು. ಅವರಿಗೆ ಈ ಟೆಕ್ನಿಕ್‌ನಲ್ಲಿ ಸಂಪೂರ್ಣ ಜ್ಞಾನ ಇರಬೇಕು.
ಈ ಮೇಕಪ್‌ನ ಎಲ್ಲ ಪ್ರಾಡಕ್ಟ್ ಗಳ ಕಿಟ್ ಬೆಲೆ 35,000 ರೂ. ನಿಂದ 45,000 ರೂ.ವರೆಗೆ ಇದೆ. ಅದಲ್ಲದೆ, ಬ್ಯೂಟೀಶಿಯನ್‌ರ ಅನುಭವ ಮತ್ತು ಪಾರ್ಲರ್‌ಗೆ ಅನುಗುಣವಾಗಿ ಇದರ ಬೆಲೆ ನಿರ್ಧಾರವಾಗುತ್ತದೆ. ಕಂಪ್ಲೀಟ್ ಬ್ರೈಡಲ್ ಪ್ಯಾಕೇಜ್ 18,000 ರೂ. ನಿಂದ 28,000 ರೂ.ವರೆಗೆ ಆಗುತ್ತದೆ.
ಒಂದು ವೇಳೆ ನಿಮ್ಮ ಸೌಂದರ್ಯದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲು ಬಯಸದಿದ್ದರೆ ಈ ಮೇಕಪ್ ನಿಮಗೆ ಐಡಿಯಲ್ ಟೆಕ್ನಿಕ್ ಆಗಿರುತ್ತದೆ.
– ವಸುಂಧರಾ





