ಸ್ವಿಸ್ ಸರ್ಕಲ್ಸ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, 100 ಗ್ರಾಂ ತುರಿದ ಪನೀರ್, 2 ಕ್ಯಾಪ್ಸಿಕಂ, ಅರ್ಧ ಸೌಟು ಬೆಣ್ಣೆ, 4-5 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಟೊಮೇಟೊ ಕೆಚಪ್, 2 ಚಮಚ ಕಾರ್ನ್‌ಫ್ಲೋರ್, 4-5 ಚಮಚ ಮೈದಾ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಯಲು ಎಣ್ಣೆ.
ವಿಧಾನ : ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ, ಹಸಿಮೆಣಸಿನಕಾಯಿಗೆ ತುರಿದ ಪನೀರ್, ನೀರಲ್ಲಿ ಅದ್ದಿ ಕಿವುಚಿದ ಬ್ರೆಡ್ ಸ್ಲೈಸ್, ಉಳಿದೆಲ್ಲ ಸಾಮಗ್ರಿ ಸೇರಿಸಿ ಮಿಶ್ರಣ ಕಲಸಿಡಿ. ಇದಕ್ಕೆ ಹೆಚ್ಚಿದ ಕೊ.ಸೊಪ್ಪು, ಪುದೀನಾ, ಮೈದಾ ಕಾರ್ನ್‌ಫ್ಲೋರ್ ಸೇರಿಸಿ ಅದಕ್ಕೆ ಉಪ್ಪು, ಖಾರ, ಅಗತ್ಯವಿದ್ದಷ್ಟು ನೀರು ಬೆರೆಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಬೇಕು. ಪನೀರ್ ಮಿಶ್ರಣವನ್ನು ಉದ್ದದ ಸುರುಳಿ ಆಕಾರ ನೀಡಿ, ಮೈದಾ ಮಿಶ್ರಣದಲ್ಲಿ ಅದ್ದಿಕೊಂಡು ಇದನ್ನು ಪುದೀನಾ ಚಟ್ನಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಕಾರ್ನ್ ಬಾಲ್ಸ್
ಸಾಮಗ್ರಿ : 1 ಕಪ್ ಮೈದಾ, ಅರ್ಧ ಸೌಟು ಬೆಣ್ಣೆ, 2 ಕಪ್ ಹಾಲು, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, 1 ಕಪ್ ಬ್ರೆಡ್ ಕ್ರಂಬ್ಸ್, 2 ಕಾರ್ನ್ ಕೋನ್, 4 ಹಸಿಮೆಣಸು, ಅರ್ಧ ಕಪ್ ತುರಿದ ಚೀಸ್, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, 1 ಚಮಚ ಚಿಲೀ ಸಾಸ್, ಕರಿಯಲು ಎಣ್ಣೆ.
ವಿಧಾನ : ಎಳೆ ಜೋಳದ ಕಾಳು ಬಿಡಿಸಿಕೊಂಡು ತುಸು ಉಪ್ಪು ಹಾಕಿ ಬೇಯಿಸಿ. ಆರಿದ ನಂತರ ಇದನ್ನು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಮೈದಾ ಹಾಕಿ ಹುರಿಯಿರಿ. ಆಮೇಲೆ ಹಾಲು ಬೆರೆಸಿ ಸತತ ಕೈಯಾಡಿಸುತ್ತಾ ಇರಬೇಕು, ಮಂದ ಉರಿ ಇರಲಿ. ನಂತರ ಇದಕ್ಕೆ ರುಬ್ಬಿದ ಕಾರ್ನ್ ಮಿಶ್ರಣ, ತುರಿದ ಚೀಸ್, ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಉಪ್ಪು, ಖಾರ ಹಾಕಿ ಬೆರೆಸಿಕೊಳ್ಳಿ. ಕೆಳಗಿಳಿಸಿ ಚೆನ್ನಾಗಿ ಆರಿದ ನಂತರ ಉಂಡೆ ಮಾಡಿಕೊಂಡು, ಬ್ರೆಡ್ ಕ್ರಂಬ್ಸ್ ನಲ್ಲಿ ಚೆನ್ನಾಗಿ ಹೊರಳಿಸಿ. ನಂತರ ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಆಮೇಲೆ ಚಿತ್ರದಲ್ಲಿರುವಂತೆ ಚಿಲಿ ಸಾಸ್, ಟೊಮೇಟೊ ಸಾಸ್‌ಗಳೊಂದಿಗೆ ಸವಿಯಲು ಕೊಡಿ.
ಕ್ರಿಸ್ಪಿ ವೆಜಿಟೆಬಲ್ಸ್
ಸಾಮಗ್ರಿ : 10-15 ಒಣಮೆಣಸಿನಕಾಯಿ, 20 ಬೆಳ್ಳುಳ್ಳಿ ಎಸಳು, 2 ಕಪ್ ಹೆಚ್ಚಿದ ಹೂಕೋಸು, 1-1 ಕಪ್ ಹೆಚ್ಚಿದ ಬೀನ್ಸ್, ಆಲೂ ಹೋಳು, 1 ದೊಡ್ಡ ಚಮಚ ಹೆಚ್ಚಿದ ಬೆಳ್ಳುಳ್ಳಿ, ಒಂದಿಷ್ಟು ಹೆಚ್ಚಿದ ಈರುಳ್ಳಿ ತೆನೆ, ಅಗತ್ಯವಿದ್ದಷ್ಟು ಎಣ್ಣೆ, ಉಪ್ಪು, 4-4 ಚಮಚ ಕಾರ್ನ್‌ಫ್ಲೋರ್ ಮೈದಾ, 4 ಚಮಚ ಬಿಳಿ ಎಳ್ಳು.
ವಿಧಾನ : ಹಿಂದಿನ ರಾತ್ರಿ ವಿನಿಗರ್‌ನಲ್ಲಿ ಒಣಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿ ನೆನೆಸಿ, ಮಾರನೇ ದಿನ ಅದನ್ನು ರುಬ್ಬಿಕೊಳ್ಳಿ. ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಬಿಸಿ ಮಾಡಿ ಅದಕ್ಕೆ ಹೆಚ್ಚಿದ ತರಕಾರಿ ಸೇರಿಸಿ ಚೆನ್ನಾಗಿ ಬಾಡಿಸಿ, ಇದನ್ನು ಬೇರೆಯಾಗಿಡಿ. ಇದೇ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ತೆನೆ ಹಾಕಿ ಬಾಡಿಸಿ. ಒಂದು ಬಟ್ಟಲಲ್ಲಿ ಕಾರ್ನ್‌ಫ್ಲೋರ್, ಮೈದಾ, ಉಪ್ಪು, ಖಾರ ತುಸು ನೀರು ಕದಡಿಕೊಂಡು ಪೇಸ್ಟ್ ತರಹ ಮಾಡಿ ಬಾಣಲೆಗೆ ಸೇರಿಸಿ ಕೆದಕಬೇಕು. ಆಮೇಲೆ ರುಬ್ಬಿದ ಮಿಶ್ರಣ, ಉಪ್ಪು, ಅರಿಶಿನ ಹಾಕಿ ಕೈಯಾಡಿಸಿ. ಕೊನೆಯಲ್ಲಿ ಬಾಡಿಸಿದ ತರಕಾರಿ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಕೆಳಗಿಳಿಸಿದ ಮೇಲೆ ಹುರಿದ ಬಿಳಿ ಎಳ್ಳು ಉದುರಿಸಿ, ಬಿಸಿಯಾಗಿ ಚಪಾತಿ ಜೊತೆ ಸವಿಯಲು ಕೊಡಿ.
ಬ್ರೋಕನ್ ವೀಟ್ ರೋಲ್ಸ್
ಸಾಮಗ್ರಿ : 1 ಕಪ್ ಬ್ರೋಕನ್ ವೀಟ್, 150 ಗ್ರಾಂ ಮಸೆದ ಪನೀರ್, 2-3 ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, 2 ಚಮಚ ಹೆಚ್ಚಿದ ಶುಂಠಿ, ಅರ್ಧರ್ಧ ಚಮಚ ಧನಿಯಾಪುಡಿ, ಗರಂಮಸಾಲ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, 1 ಕಪ್ ಕಾರ್ನ್‌ಫ್ಲೋರ್, ಕರಿಯಲು ಎಣ್ಣೆ.
ವಿಧಾನ : ಮಸೆದ ಪನೀರ್‌ಗೆ ಹೆಚ್ಚಿದ ಹಸಿಮೆಣಸು, ಬ್ರೋಕನ್ ವೀಟ್, ಉಳಿದೆಲ್ಲ ಸಾಮಗ್ರಿ ಬೆರೆಸಿ ಪಕೋಡ ಹದಕ್ಕೆ ಕಲಸಿಡಿ. ಕೊನೆಯಲ್ಲಿ ಪೇಸ್ಟ್ ತರಹ ಕಲಸಿಕೊಂಡು ಕಾರ್ನ್‌ಫ್ಲೋರ್ ಮಿಶ್ರಣವನ್ನೂ ಬೆರೆಸಿಡಿ. ಈ ಮಿಶ್ರಣದಿಂದ ಚಿತ್ರದಲ್ಲಿರುವಂತೆ ಉದ್ದನೆಯ ಸುರುಳಿ ಆಕಾರ ನೀಡಿ, ನಂತರ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಟೊಮೇಟೊ ಸಾಸ್ ಜೊತೆ ಬಿಸಿಯಾಗಿ ಸವಿಯಲು ಕೊಡಿ.
ಚೀಸ್ ಪೇಸ್ಟ್ರಿ
ಸಾಮಗ್ರಿ : 8-10 ಬ್ರೆಡ್ ಸ್ಲೈಸ್, ಅರ್ಧ ಕಪ್ ತುರಿದ ಚೀಸ್, ಒಂದಿಷ್ಟು ಹೆಚ್ಚಿದ ಈರುಳ್ಳಿ, ಹಸಿಮೆಣಸು, ಶುಂಠಿ, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಅಮ್ಚೂರ್ ಪುಡಿ, ಅರ್ಧರ್ಧ ಕಪ್ ಹುರಿದ ಕಡಲೆಬೀಜ, ಬೆಂದ ಬಟಾಣಿಕಾಳು, 2-3 ಚಮಚ ಮೈದಾ, 4 ಚಮಚ ಬೆಣ್ಣೆ, ಅರ್ಧ ಕಪ್ ಹಾಲು.
ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಮಂದ ಉರಿಯಲ್ಲಿ ಮೈದಾ ಹಾಕಿ ಹುರಿಯಿರಿ. ಆಮೇಲೆ ಇದಕ್ಕೆ ಹಾಲು ಬೆರೆಸಿ, ಗಂಟಾಗದಂತೆ ನಿಧಾನವಾಗಿ ಕೆದಕುತ್ತಿರಿ. ಈ ಮಿಶ್ರಣ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ ಆರಲು ಬಿಡಿ. ಆಮೇಲೆ ಇದಕ್ಕೆ ಶುಂಠಿ, ಕೊ.ಸೊಪ್ಪು, ಉಪ್ಪು, ಖಾರ, ಅಮ್ಚೂರ್‌ಪುಡಿ, ಕಡಲೆಬೀಜ, ತುರಿದ ಚೀಸ್ ಹಾಕಿ ಬೆರೆಸಿಡಿ. ಬ್ರೆಡ್ ಸ್ಲೈಸ್‌ನ್ನು ಗೋಲಾಕಾರವಾಗಿ ಕತ್ತರಿಸಿ, ಅದನ್ನು ಲಟ್ಟಿಣಿಗೆಯಿಂದ ಲಘುವಾಗಿ ಒತ್ತಿಕೊಳ್ಳಿ ಬಟ್ಟಲಿನ ಆಕಾರ ಕೊಡಿ. ಮೇಲಿನ ಮಿಶ್ರಣವನ್ನು ಇದಕ್ಕೆ ತುಂಬಿಸಿ, ಪೇಸ್ಟ್ರಿ ಟಿನ್‌ನಲ್ಲಿರಿಸಿ 10 ನಿಮಿಷ ಓವನ್‌ನಲ್ಲಿ ಬೇಕ್ ಮಾಡಿ. ನಂತರ ಚಿತ್ರದಲ್ಲಿರುವಂತೆ ಪೇಪರ್ ಪ್ಲೇಟ್‌ನಲ್ಲಿ ಇದನ್ನಿರಿಸಿ, ಟೊಮೇಟೊ ಕೆಚಪ್ ಜೊತೆ ಸವಿಯಲು ಕೊಡಿ.
ಚಿಲೀ ಬೇಬಿ ಕಾರ್ನ್
ಸಾಮಗ್ರಿ : 4-5 ಚಮಚ ಕಾರ್ನ್‌ಫ್ಲೋರ್ ಮೈದಾ, 150 ಗ್ರಾಂ ಹೆಚ್ಚಿದ ಬೇಬಿ ಕಾರ್ನ್, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಸಕ್ಕರೆ, ಸೋಯಾ ಸಾಸ್, ಟೊಮೇಟೊ ಸಾಸ್, ಚಿಲೀ ಸಾಸ್, ವಿನಿಗರ್, ಅಜಿನೋಮೋಟೋ, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಶಂಠಿ, ಕೊ.ಸೊಪ್ಪು, ತುಸು ಬೆಣ್ಣೆ, ಕರಿಯಲು ಎಣ್ಣೆ.
ವಿಧಾನ : ಮೈದಾ, ಕಾರ್ನ್‌ಫ್ಲೋರ್, ಉಪ್ಪು ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಕಲಸಿಡಿ. ಮೊದಲು ಹೆಚ್ಚಿದ ಕಾರ್ನ್‌ನ್ನು ಎಣ್ಣೆಯಲ್ಲಿ ಹದನಾಗಿ ಬಾಡಿಸಿ. ನಂತರ ಮೈದಾ ಮಿಶ್ರಣದಲ್ಲಿ ಕಾರ್ನ್ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಅದೇ ಬಾಣಲೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಹೆಚ್ಚಿದ ಶುಂಠಿ, ಹಸಿಮೆಣಸು, ಬೆಳ್ಳುಳ್ಳಿ, ಈರುಳ್ಳಿ, ಆಮೇಲೆ ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಇದಕ್ಕೆ ಉಪ್ಪು, ಮೆಣಸು ಉಳಿದೆಲ್ಲ ಮಸಾಲೆ ಹಾಕಿ ಚೆನ್ನಾಗಿ ಕೆದಕಬೇಕು. ಆಮೇಲೆ ಕರಿದ ಕಾರ್ನ್ ಹಾಕಿ, ತುಸು ನೀರು ಚಿಮುಕಿಸಿ ಬಾಡಿಸಬೇಕು. 2 ನಿಮಿಷ ಕೆದಕಿ ಕೆಳಗಿಳಿಸಿ. ಬಿಸಿ ಇರುವಾಗಲೇ ಇದರ ಮೇಲೆ ಕೊ.ಸೊಪ್ಪು ಉದುರಿಸಿ, ಕಾಫಿ, ಟೀ ಜೊತೆ ಸವಿಯಲು ಕೊಡಿ.
ಗಾರ್ಲಿಕ್ ಮಶ್ರೂಮ್
ಸಾಮಗ್ರಿ : 1 ಪ್ಯಾಕೆಟ್ ಬಟನ್ ಮಶ್ರೂಮ್, 2-2 ಚಮಚ ಹಸಿ ಮೆಣಸು, ಬೆಳ್ಳುಳ್ಳಿ, ಶುಂಠಿಯ ಪೇಸ್ಟ್, 4 ಚಮಚ ಬೆಣ್ಣೆ, ಒಂದಿಷ್ಟು ಹೆಚ್ಚಿದ ಪಾರ್ಸ್ಲೆ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ.
ವಿಧಾನ : ಬಾಣಲೆಯಲ್ಲಿ ಮೊದಲು ಬೆಣ್ಣೆ ಬಿಸಿ ಮಾಡಿಕೊಂಡು 3 ಬಗೆಯ ಪೇಸ್ಟ್ ಹಾಕಿ ಕೆದಕಬೇಕು. ಆಮೇಲೆ ಇದಕ್ಕೆ ಅಣಬೆಗಳನ್ನು ಸೇರಿಸಿ ಹದನಾಗಿ ಬಾಡಿಸಿ. ನಂತರ ಉಪ್ಪು, ಪಾರ್ಸ್ಲೆ ಉದುರಿಸಿ ಕೆದಕಿ ಕೆಳಗಿಳಿಸಿ. ಆಮೇಲೆ ನಿಂಬೆಹಣ್ಣು ಹಿಂಡಿಕೊಂಡು, ಚಪಾತಿ ಜೊತೆ ಸವಿಯಲು ಕೊಡಿ.
ಸ್ಪೆಷಲ್ ಮೊಸರು ವಡೆ
ಸಾಮಗ್ರಿ : 2 ಕಪ್ ಗಟ್ಟಿ ಹುಳಿಮೊಸರು, 1 ಕಪ್ ಕಡಲೆಹಿಟ್ಟು, 100 ಗ್ರಾಂ ತುರಿದ ಪನೀರ್, 1 ಈರುಳ್ಳಿ, ಒಂದಿಷ್ಟು ಹೆಚ್ಚಿದ ಶುಂಠಿ, ಕೊ.ಸೊಪ್ಪು, ರುಚಿಗಿ ತಕ್ಕಷ್ಟು ಉಪ್ಪು, ಬಿಳಿ ಪುಡಿಮೆಣಸು, ಅರ್ಧ ಸಣ್ಣ ಚಮಚ ಏಲಕ್ಕಿ ಪುಡಿ, ಕರಿಯಲು ಎಣ್ಣೆ, ಅಲಂಕರಿಸಲು ಹೆಚ್ಚಿದ ಈರುಳ್ಳಿ ತೆನೆ.
ವಿಧಾನ : ಮೊದಲು ಜರಡಿಯಾಡಿದ ಕಡಲೆಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಶುಂಠಿ, ಕೊ.ಸೊಪ್ಪು, ತುರಿದ ಪನೀರ್, ಉಪ್ಪು, ಮೆಣಸು, ಏಲಕ್ಕಿ ಇತ್ಯಾದಿ ಸೇರಿಸಿ, ಅಗತ್ಯವಿದ್ದಷ್ಟು ನೀರು ಬೆರೆಸಿ ವಡೆ ಮಿಶ್ರಣ ಕಲಸಿಡಿ. ಇದನ್ನು ಸ್ವಲ್ಪ ಹೊತ್ತು ನೆನೆಯಲು ಬಿಟ್ಟು, ನಂತರ ಕಾದ ಎಣ್ಣೆಯಲ್ಲಿ ವಡೆಗಳಾಗಿ ಕರಿಯಿರಿ. ಅದನ್ನು ಉಪ್ಪು ಹಾಕಿ ಕಡಿದ ಮೊಸರಿನಲ್ಲಿ 2-3 ತಾಸು ನೆನೆಸಿ, ಒಂದು ಸರ್ವಿಂಗ್ ಡಿಶ್‌ನಲ್ಲಿ ಜೋಡಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಕ್ರೀಮೀ ಮಶ್ರೂಮ್
ಸಾಮಗ್ರಿ : 250 ಗ್ರಾಂ ತಾಜಾ ಅಣಬೆ, 2 ಈರುಳ್ಳಿ, 7-8 ಎಸಳು ಬೆಳ್ಳುಳ್ಳಿ, 2-2 ಚಮಚ ಕ್ರೀಂ, ಹಾಲಿನಕೆನೆ, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಬಿಳಿ ಪುಡಿಮೆಣಸು, ಓರಿಗೆನೊ, ಒಂದಿಷ್ಟು ಹಚ್ಚಿದ ಕೊ.ಸೊಪ್ಪು, ಪಾರ್ಸ್ಲೆ.
ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಅಣಬೆ ಹಾಕಿ ಬಾಡಿಸಬೇಕು. ನಂತರ ಒಂದೊಂದಾಗಿ ಉಳಿದೆಲ್ಲ ಸಾಮಗ್ರಿ ಬೆರೆಸುತ್ತಾ ಕೆದಕಬೇಕು. ಅಣಬೆ ಬೆಂದು, ಗ್ರೇವಿ ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ, ಕೊ.ಸೊಪ್ಪು, ಪಾರ್ಸ್ಲೆ ಉದುರಿಸಿ ಪೂರಿ, ಚಪಾತಿ ಜೊತೆ ಸವಿಯಲು ಕೊಡಿ.
ಹರ್ಬ್ಡ್ ಬ್ರೆಡ್
ಸಾಮಗ್ರಿ : 1 ಪೌಂಡ್ ತಾಜಾ ಬ್ರೆಡ್, ಅರ್ಧರ್ಧ ಸೌಟು ಬೆಣ್ಣೆ, ಮೋಜರೆಲ ಚೀಸ್, 7-8 ಎಸಳು ಜಜ್ಜಿದ ಬೆಳ್ಳುಳ್ಳಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಓರಿಗೆನೊ, ಓಮ.
ವಿಧಾನ : ಚಿಕ್ಕ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಮಂದ ಉರಿಯಲ್ಲಿ ಬೆಳ್ಳುಳ್ಳಿ, ಉಪ್ಪು, ಓರಿಗೆನೊ, ಓಮ ಹಾಕಿ ಕೆದಕಬೇಕು, ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ದಪ್ಪ ಸ್ಲೈಸ್‌ಗಳಾಗಿ ಕತ್ತರಿಸಿದ ಬ್ರೆಡ್‌ಮೇಲೆ ಎರಡೂ ಬದಿ ಸವರಿ, ಚೀಸ್ ಚೆನ್ನಾಗಿ ಕರಗುವವರೆಗೂ ಓವನ್‌ನಲ್ಲಿರಿಸಿ ಬೇಕ್ ಮಾಡಿ. ಬಿಸಿಯಾದ ಇದನ್ನು ಕಾಫಿ, ಟೀ ಜೊತೆ ಸರ್ವ್ ಮಾಡಿ