ನೀನೂ ಜೋನ್ಸ್ ಕೊಚ್ಚಿನ್‌ನ ಏರ್‌ಪೋರ್ಟ್ ತಲುಪುತ್ತಿದ್ದಂತೆ ಅಲ್ಲಿ ಸೇರಿದ್ದ ನೂರಾರು ಜನ ಆಕೆಗೆ 23ನೇ ಜನ್ಮದಿನದ ಶುಭಾಶಯ ಕೋರಿದರು. ನೀನೂ ಧಾರಾಳವಾಗಿ ಮುಗುಳ್ನಗುತ್ತಾ, ಆನಂದಾಶ್ರು ತುಂಬಿಕೊಳ್ಳುತ್ತಾ ಎಲ್ಲರಿಗೂ ಧನ್ಯವಾದ ಅರ್ಪಿಸಿದಳು. ಕೊನೆಗೂ ಪಾರಾದೆನಲ್ಲ ಎಂಬ ನೆಮ್ಮದಿಯ ನಿಟ್ಟುಸಿರಿಟ್ಟು ತನ್ನ ಕುಟುಂಬದರೊಂದಿಗೆ ಮನೆಯ ದಾರಿ ಹಿಡಿದಳು. ಅಸಲಿಗೆ, ನೀನೂ ವೃತ್ತಿಯಿಂದ ನರ್ಸ್, ಈಕೆ ಇರಾಕ್‌ನ ಯುದ್ಧದ ವಾತಾವರಣದಿಂದ ಜರ್ಝರಿತಳಾಗಿದ್ದು, ಕಳೆದ 1 ತಿಂಗಳಿನಿಂದ ಬಂದೀಖಾನೆಯಂಥ ಪರಿಸರದಿಂದ ಪಾರಾಗಿ ಬಂದ 4-6 ದಾದಿಯರಲ್ಲಿ ಒಬ್ಬಳೆನಿಸಿದ್ದಾಳೆ.
ವಿಷಯ ಅತಿ ಗಂಭೀರವಾಗಿದ್ದು, ಇರಾಕ್‌ನ ಮುಸ್ಲಿಂ ಧರ್ಮದ 2 ಸಮುದಾಯಗಳಾದ ಸುನ್ನಿ ಶಿಯಾರ ನಡುವೆ ಸಿಡಿದೆದ್ದ ಆಕ್ರೋಶದಿಂದಾಗಿ, ಭಯೋತ್ಪಾದಕರು ಗುಡ್ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಅಲ್ಶಾಮ್ ನ ಸಾವಿರಾರು ಭಾರತೀಯರನ್ನು ಬಂದಿಗಳನ್ನಾಗಿಸಿದರು. ಈ ಬಂದಿಗಳಲ್ಲಿ ಭಾರತದ ಕೇರಳ ರಾಜ್ಯದ ಹಲವಾರು ಮಂದಿ ನರ್ಸುಗಳಿದ್ದರು. ಈ ಎಲ್ಲಾ ದಾದಿಯರೂ ಇರಾಕ್‌ನ ತಿಕರಿತ್ ನಗರದ ಒಂದು ಪ್ರಮುಖ ಆಸ್ಪತ್ರೆಯಲ್ಲಿ ನರ್ಸಿಂಗ್ ಕೆಲಸ ಮಾಡುತ್ತಿದ್ದರು.
ಭಯೋತ್ಪಾದಕರು ಆಸ್ಪತ್ರೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡಾಗ, ಈ ನರ್ಸುಗಳು ವಾಪಸ್ಸು ತಮ್ಮ ತಾಯ್ನಾಡಿಗೆ ಹೋಗಬಹುದೆಂಬ ಆಸೆಯನ್ನೇ ತೊರೆದಿದ್ದರು. ಹೀಗಿರುವಾಗ ಇರಾಕ್‌ನಿಂದ ಸುರಕ್ಷಿತರಾಗಿ ವಾಪಸ್ಸು ಮರಳಿದಾಗ ನಿಜಕ್ಕೂ ಅವರು ಸಂತೋಷಪಟ್ಟರು. ಆದರೆ ಈ ಸಂತಸದ ಜೊತೆ ಅವರ ಜೀವನದ ಕಟು ವಾಸ್ತವಿಕತೆ ಸಹ ಎದುರಿಸಬೇಕಾಯಿತು.
ಅಸಲಿಗೆ, ತಿಕರಿತ್ ನಗರದಿಂದ ವಾಪಸ್ಸಾದ ಅನೇಕ ನರ್ಸುಗಳ ತಾಯಿ ತಂದೆ, ಭಾರಿ ಸಾಲ ಪಡೆದು ಇವರಿಗೆ ನರ್ಸಿಂಗ್ ಶಿಕ್ಷಣ ಕೊಡಿಸಿದ್ದರು. ನಂತರ ವಿದೇಶಕ್ಕೆ ಕಳುಹಿಸಿಲು, ದಲ್ಲಾಳಿಗಳಿಗೂ ದೊಡ್ಡ ಮೊತ್ತದ ಸಾಲದಿಂದಲೇ ಹಣ ತೆತ್ತಿದ್ದರು. ಅದನ್ನು ಚುಕ್ತಾ ಮಾಡುವುದು ಹೇಗೆಂದು ತಿಳಿಯದೆ ಒದ್ದಾಡುತ್ತಿದ್ದಾರೆ.
ಭಾರತದಲ್ಲಿ ಸಾಮಾನ್ಯವಾಗಿ 6-10 ಸಾವಿರ ರೂ. ಸಂಬಳ ಪಡೆಯುವ ಈ ದಾದಿಯರು ಇರಾಕ್‌ನಂಥ ದೇಶದಲ್ಲಿ 40-50 ಸಾವಿರ ಸಂಬಳ ಪಡೆಯುತ್ತಾರೆ. ಇದಂತೂ ಅವರ ಕುಟುಂಬದ ಕನಸುಗಳನ್ನು ನನಸಾಗಿಸುತ್ತದೆ. ಆದರೆ ತಿಕರಿತ್ ನಗರದಲ್ಲಿ ಶಿಯಾ ಸುನ್ನಿಗಳ ಸಮರದಿಂದಾಗಿ, ಎಷ್ಟೋ ನರ್ಸುಗಳಿಗೆ ಸಂಬಳವೇ ಸಿಕ್ಕಿಲ್ಲ. ಕೆಲವರಿಗಂತೂ ಕಳೆದ 4-5 ತಿಂಗಳಿನಿಂದ ಸತತ ಕೆಲಸವೇ ಆಗಿದೆಯೇ ಹೊರತು ಸಂಬಳದ ಮುಖ ಕಂಡೇ ಇಲ್ಲ. ಇಷ್ಟೆಲ್ಲ ಆದ್ದರಿಂದ ಈಗ ಈ ನರ್ಸುಗಳ ಪೋಷಕರು ಅವರನ್ನು ವಾಪಸ್ಸು ಅಲ್ಲಿಗೆ ಕೆಲಸಕ್ಕೆ ಕಳುಹಿಸಲು ಹಿಂಜರಿಯುತ್ತಿದ್ದಾರೆ.
ನೀನೂರ ತಾಯಿ ಎಲಿಕ್ ಈ ಕುರಿತಾಗಿ ಹೇಳುತ್ತಾರೆ, ಕೆಲವು ಲಕ್ಷ ರೂ.ಗಳ ಸಂಪಾದನೆಗಾಗಿ ನಾವು ನಮ್ಮ ಮಗಳನ್ನು ಮುಂದೆ ಮೃತ್ಯುಕೂಪಕ್ಕೆ ತಳ್ಳಲು ಬಯಸುವುದಿಲ್ಲ. ನಮಗೆ ನಮ್ಮ ಮಗಳು ಕ್ಷೇಮವಾಗಿ ಸಿಕ್ಕಿದ್ದಾಳೆ, ಅಷ್ಟೇ ಸಾಕು. ನಮಗೆ ಇದಕ್ಕಿಂತ ಇನ್ನೇನು ಬೇಕು?
ನೀನೂ ತರಹವೇ ಅಲಪ್ಪುಳಾದ 24 ವರ್ಷದವಳಾದ ವಿ. ಜಯಲಕ್ಷ್ಮಿ ಸಹ ಭಾರತಕ್ಕೆ ಮರಳಿದ ನರ್ಸುಗಳ ಪೈಕಿ ಒಬ್ಬಳು. ಆಕೆಯ ಪ್ರಕಾರ, ತಿಕರಿತ್ ನಗರದ ನರ್ಸಿಂಗ್ ಕಾಲೇಜಿನಲ್ಲಿ ಟೀಚಿಂಗ್ ಕೆಲಸ ಮಾಡುತ್ತಾ 10 ವರ್ಷಗಳೇ ಆಗಿವೆ. ಅಲ್ಲೀಗ ಆಕೆಗೆ 1.50 ಲಕ್ಷ ರೂ. ಸಂಬಳ ದೊರಕುತ್ತಿತ್ತು.
ಇರಾಕಿನಲ್ಲಿ ನಡೆದ ಸಂಘರ್ಷದ ಕಾರಣ ಆಕೆ ತಾಯ್ನಾಡಿಗೆ ಮರಳಬೇಕಾಯ್ತು. ಆದರೆ ಆಕೆ, ಭಯೋತ್ಪಾದಕರು ತಮಗೆ ಪ್ರಾಣಭಿಕ್ಷೆ ನೀಡಿ ಕಳುಹಿಸಿಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸುತ್ತಾರೆ. ಅಲ್ಲಿನ ರೋಗಿಗಳು, ಆಸ್ಪತ್ರೆಯ ಸಿಬ್ಬಂದಿ ಸೇರಿ ಸುಮಾರು 500 ಜನರಿದ್ದರು. ಆ ಕ್ರೂರ ಆತಂಕವಾದಿಗಳ ಆಕ್ರಮಣದಿಂದ ನಾವೆಲ್ಲರೂ ಭಯಪಟ್ಟಿದ್ದೆವು. ನಾವು ಪಾರಾಗಬಹುದೆಂಬ ಯಾವ ಆಶಾಭಾವ ಇರಲಿಲ್ಲ. ಆಗ ನಾವು ದಂಗುಬಡಿದು ಹೋಗಿದ್ದೆವು. ಕೊನೆಗೆ ಅವರು ನಮ್ಮೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸತೊಡಗಿದಾಗ ಆಶ್ಚರ್ಯಪಟ್ಟೆವು. ನಮ್ಮನ್ನು ಜೋಪಾನವಾಗಿ ನಮ್ಮ ತಾಯ್ನಾಡಿಗೆ ಮರಳಲುಬಿಟ್ಟರು. ಇಷ್ಟಾದರೂ ಇರಾಕ್‌ನಲ್ಲಿ ಬೇರೆ ಮೂಲಗಳ ಇನ್ನೂ 100ಕ್ಕೂ ಹೆಚ್ಚಿನ ನರ್ಸುಗಳು ಬಂದಿಗಳಾಗಿಯೇ ಇದ್ದಾರೆ.
ಬನ್ನಿ, ಜಯಲಕ್ಷ್ಮಿನೀನೂ ತರಹ ತಾಯ್ನಾಡಿಗೆ ಮರಳಿದ ಇತರ ನರ್ಸುಗಳ ಅನುಭವ ಅರಿಯೋಣ :
ನಮಗೆ ಹೊಸ ಜೀವ ಬಂದಂತಾಯ್ತು : ವೀಣಾಸೋನಾ ವೀಣಾಸೋನಾ ಅವಳಿ ಸೋದರಿಯರು. ಆಕ್ರಮಣದ ಘರ್ಜನೆ, ಆತಂಕದ ಗದ್ದಲ ಇನ್ನೂ ಕಿವಿ ಮೊಳಗುತ್ತಿದೆ ಎನ್ನುತ್ತಾರೆ. ಇಬ್ಬರೂ ತಿಕರಿತ್‌ನಗರದ ಆಸ್ಪತ್ರೆಯಲ್ಲೇ ನರ್ಸ್ ಆಗಿದ್ದರು.
ತಮ್ಮ ಅನುಭವ ಹಂಚಿಕೊಳ್ಳುತ್ತಾ ವೀಣಾ ಹೇಳುತ್ತಾಳೆ, ಅಲ್ಲಿ ರಾತ್ರಿಯಲ್ಲೂ ಗುಂಡಿನ ಸುರಿಮಳೆಯ ಸದ್ದು ಕೇಳಿಸುತ್ತಿತ್ತು. ನಾವು ನೆಮ್ಮದಿಯಾಗಿ ನಿದ್ದೆ ಮಾಡಿ ಎಷ್ಟು ದಿನಗಳಾಯ್ತೋ? ಅಂತೂ ಇವರು ವಾಪಸ್ಸು ಮನೆಗೆ ಬಂದರೆಂದು ಕುಟಂಬದವರೇನೋ ನೆಮ್ಮದಿಯಾಗಿದ್ದಾರೆ, ಇವರ ಹಿರಿಯಕ್ಕ ಡೋನಾ ಇನ್ನೂ ಬಾಗ್ದಾದ್‌ನಲ್ಲೇ ಸಿಕ್ಕಿಕೊಂಡಿದ್ದಾಳೆ. ವೀಣಾಸೋನಾ ವಾಪಸ್ಸು ಬಂದರೆಂದು ಸಂತಸ ಒಂದು ಕಡೆ ಇದ್ದರೆ, ಡೋನಾ ಇರಾಕ್‌ನಿಂದ ಇನ್ನೂ ಬಂದಿಲ್ಲವಲ್ಲ ಎಂಬ ಕೊರಗು ಕಾಡುತ್ತಿದೆ.
ಅಪಾಯ ತುಂಬಿದ ಪ್ರಯಾಣ : ವಿನ್ಸಿ ಸೆಬಸ್ಟಿಯನ್ ಮರೀನಾ ಎಂ. ಜೋನ್ಸ್ ವಿನ್ಸಿ ಮರೀನಾ ಹೇಳುವುದೆಂದರೆ, ಕಳೆದ 10 ತಿಂಗಳಿನಿಂದ ಅವರು ಇರಾಕ್‌ನಲ್ಲಿದ್ದರಂತೆ. ಈ 10 ತಿಂಗಳಲ್ಲಿ ಕೆಲಸದ ಕಾರಣ ಅವರನ್ನು ಆಸ್ಪತ್ರೆಯಿಂದ ಹೊರಗೆ ಬಿಡುತ್ತಿರಲಿಲ್ಲ. ಆಸ್ಪತ್ರೆಯ ಆರಣದಲ್ಲೇ 2 ಮಹಡಿಗಳಲ್ಲಿ ನರ್ಸ್‌ಗಳು ಉಳಿಯುವ ವ್ಯವಸ್ಥೆ ಇತ್ತು. ಆದರೆ ಜೂನ್ 12 ರಂದು ನಡೆದ ಸಂಘರ್ಷದ ಕಾರಣ ಎಲ್ಲ ಬದಲಾಯಿತು.
ಅವರು ಮಾತು ಮುಂದುವರಿಸುತ್ತಾ, ಪ್ರತಿ ಘಳಿಗೆಯೂ ಗುಂಡು ತೋಪುಗಳ ಕಿವಿಗಡಚಿಕ್ಕುವ ದನಿಯಿಂದ ಕೈಯಲ್ಲಿ ಜೀವ ಹಿಡಿದು ಬದುಕಿದೆ. ಸ್ವಲ್ಪ ಕಾಲದ ನಂತರ ನಮ್ಮ ಆಸ್ಪತ್ರೆಯನ್ನೇ ಆ ಭಯೋತ್ಪಾದಕರು ತಮ್ಮ ವಶಕ್ಕೆ ತೆಗೆದುಕೊಂಡರು. ಹಾಗಾದರೂ ಸಹ ನಮ್ಮ ಪುಣ್ಯಕ್ಕೆ ಅವರು ನಮಗೇನೂ ಕೇಡು ಮಾಡಲಿಲ್ಲ. ನಂತರ ದಿಢೀರ್ ಎಂದು ಒಂದು ದಿನ ನಮ್ಮನ್ನು ಆಸ್ಪತ್ರೆ ಖಾಲಿ ಮಾಡುವಂತೆ ಹೇಳಿದರು, ಏಕೆಂದರೆ ಅವರು ಈ ಆಸ್ಪತ್ರೆಯನ್ನೇ ಬ್ಲಾಸ್ಟ್ ಮಾಡಲಿದ್ದರು. ನಮ್ಮೆಲ್ಲರನ್ನೂ ಅವರು ಒಂದು ಬಸ್ಸಿನಲ್ಲಿ ಕೂರಿಸಿ, ಮುಸುಲ್ ನಗರಕ್ಕೆ ಕರೆತಂದರು. ರಸ್ತೆ ಮಧ್ಯೆ ನಮಗೆ ಆಹಾರ ಸಹ ನೀಡಿದರು, ಯಾವ ದುರ್ವ್ಯವಹಾರ ಇರಲಿಲ್ಲ.
ಭಯಪಡುತ್ತಲೇ 240 ಕಿ.ಮೀ. ಪ್ರಯಾಣ ಮಾಡಿದೆ : ಶೃತಿ ಶಶಿಕುಮಾರ್ ತಿಕರಿತ್‌ನ ಒಂದು ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಶೃತಿ ತನ್ನ ಅನುಭವದ ಕುರಿತು ಹೇಳುತ್ತಾ, 12ನೇ ಜೂನ್‌ರಂದು ಆಸ್ಪತ್ರೆಯಲ್ಲಿದ್ದ ಇರಾಕಿನ ಸಿಬ್ಬಂದಿ ತಮ್ಮ ಮನೆಗೆ ಹೊರಟುಬಿಟ್ಟಿದ್ದರು. ಆದರೆ ಜೂನ್ 13 ರಂದು ನಾನಿನ್ನೂ ಆಸ್ಪತ್ರೆಯಲ್ಲೇ ಇದ್ದೆ. ಅಲ್ಲಿ ವೈದ್ಯರು, ರೋಗಿಗಳೂ ಯಾರೂ ಇರಲಿಲ್ಲ. ಇಡೀ ಆಸ್ಪತ್ರೆಯನ್ನು ಅವರೇ ಆಕ್ರಮಿಸಿಕೊಂಡುಬಿಟ್ಟಿದ್ದರು. ಆ ಭಯೋತ್ಪಾದಕರು ನನ್ನನ್ನು ವಾಪಸ್ಸು ಹಾಸ್ಟೆಲ್‌ಗೆ ಹೋಗುವಂತೆ ಹೇಳಿದರು. ಆಸ್ಪತ್ರೆಯ ನಿರ್ವಹಣಾ ಸಿಬ್ಬಂದಿಯನ್ನೂ ನನ್ನೊಂದಿಗೆ ಹಾಸ್ಟೆಲ್‌ಗೆ ಕಳುಹಿಸಿದರು. ನಾವು ಬೇಕಿದ್ದರೆ ಆಸ್ಪತ್ರೆಯಲ್ಲೇ ನೌಕರಿ ಮುಂದುವರಿಸಬಹುದು, ಆದರೆ ಅವರ ಷರತ್ತುಗಳ ಪ್ರಕಾರ ಎಂದು ಆಗ್ರಹಪಡಿಸಿದರು. ಆದರೆ ಜುಲೈ 1ರ ಹೊತ್ತಿಗೆ ನಮ್ಮನ್ನು ಬಲವಂತವಾಗಿ ಆಸ್ಪತ್ರೆಯಿಂದ ಖಾಲಿ ಮಾಡಿಸಿದರು. ನಮ್ಮಲ್ಲಿ ಎಷ್ಟೋ ಜನ ವಾಪಸ್ಸು ಕೇರಳಕ್ಕೆ ಹೋಗಲು ಸಿದ್ಧರಿರಲಿಲ್ಲ. ಆದರೆ ಅವರು ನಮ್ಮ ಪ್ರಾಣ ತೆಗೆದುಬಿಡುತ್ತೇವೆ ಎಂದು ಭಯಪಡಿಸಿದಾಗ ನಾವು ವಿಧಿಯಿಲ್ಲದೆ ಏರ್ ಪೋರ್ಟ್ ತಲುಪಿದೆ. ಅಲ್ಲಿ ಮೊದಲೇ ಹಲವಾರು ಮಂದಿ ಭಾರತೀಯ ದಾದಿಯರು ನಮ್ಮ ದಾರಿ ಕಾಯುತ್ತಿದ್ದರು. ದಾರಿಯುದ್ದಕ್ಕೂ ಆ ಉಗ್ರವಾದಿಗಳು ನಮ್ಮ ಆಹಾರದ ವ್ಯವಸ್ಥೆ ನೋಡಿಕೊಂಡರು. ನಮ್ಮನ್ನು ಕಂಡು ಹೆದರಬೇಡಿ ಎಂದು ಆಗಾಗ ಹೇಳುತ್ತಿದ್ದರು.
ಎಲ್ಲರಿಗೂ ಥ್ಯಾಂಕ್ಸ್ : ಎಂ.ಸಿ. ಜೋಸೆಫ್ ಎಂ.ಸಿ. ತಮ್ಮ ಅನುಭವ ಹೇಳಿಕೊಳ್ಳುತ್ತಾ, ನನಗಂತೂ ಹೊಸ ಜನ್ಮ ಬಂದಂತಾಗಿದೆ ಎನ್ನುತ್ತಾರೆ. ಅವರು 10 ತಿಂಗಳ ಹಿಂದೆ 2 ಲಕ್ಷ ಸಾಲ ಮಾಡಿ ಹೇಗೋ ಇರಾಕ್ ಸೇರಿದ್ದರು. ಆಗ ತಾನು ಅಲ್ಲಿ ಈ ರೀತಿ ಮೃತ್ಯುಕೂಪದಲ್ಲಿ ಸಿಲುಕಬಹುದು ಎಂಬ ಊಹೆಯೂ ಇರಲಿಲ್ಲ. ಆಕೆ ಹೇಳುತ್ತಾರೆ, ಕಳೆದ 3 ತಿಂಗಳಿನಿಂದ ಆಕೆಗೆ ಸಂಬಳವೇ ಸಿಕ್ಕಿರಲಿಲ್ಲಂತೆ. ಜೀವವೇನೋ ಉಳಿಯಿತು. ಆದರೆ ಸಾಲ ತೀರಿಸಲು ಯಾವುದೇ ಮಾರ್ಗ ಹೊಳೆಯುತ್ತಿಲ್ಲ.
ನನಗಂತೂ ಎಲ್ಲ ಮುಗಿಯಿತೆನಿಸಿತು : ಸಲೀಜಾ ಜೋಸೆಫ್ ಕೇರಳದ ತೊಡಪ್ಪುಳಾ ನಿವಾಸಿ 32 ವರ್ಷದ ಸಲೀಜಾ, ಹೆಚ್ಚಿನ ಹಣ ಸಂಪಾದಿಸಿ ಕುಟುಂಬಕ್ಕೆ ನೆರವಾಗೋಣ ಎಂದು ನಾನು ಇರಾಕಿಗೆ ಹೋಗಿದ್ದೆ. ಆದರೆ ಇಲ್ಲಿ ನಡೆದ ಮರಣ ಮೃದಂಗದ ಸದ್ದು ಹೃದಯ ಭೇದಿಸಿದೆ. ಆದರೆ ಈ ಭಯೋತ್ಪಾದಕರು ನಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಳ್ಳಲಿಲ್ಲ ಎಂಬುದೇ ಸಮಾಧಾನ. ಆದರೆ ಭಾರತೀಯ ಎಂಬೆಸಿಯಿಂದ ನಮಗೆ ಹೆಚ್ಚಿನ ನೆರವು ಸಿಗಲೇ ಇಲ್ಲ.
– ಎಂ.ಕೆ. ಗೀತಾ