ಹೊಸ ತಂತ್ರಜ್ಞಾನ, ವಿನ್ಯಾಸ ಹಾಗೂ ಉತ್ತಮ ಗುಣಮಟ್ಟದ ಕಾರ್ಪೆಟ್‌ಗಳು ಮತ್ತೊಮ್ಮೆ  ಮನೆಯ ಅಲಂಕಾರದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬಗೆಯ ಕಾರ್ಪೆಟ್‌ಗಳು ಲಭ್ಯವಿದ್ದು, ಅವು ಮನೆಗೆ ಹೊಸ ಲುಕ್ಸ್ ನೀಡುತ್ತಿವೆ.

ಕಾರ್ಪೆಟ್‌ನ ಪ್ರಕಾರಗಳು

ಸಿಂಥೆಟಿಕ್‌ : ಸಿಂಥೆಟಿಕ್‌ ಕಾರ್ಪೆಟ್‌ಗಳಲ್ಲಿ ನೈಲಾನ್‌ನ ಕಾರ್ಪೆಟ್‌ಗಳು ಎಲ್ಲಕ್ಕೂ ಉತ್ತಮವಾಗಿ ಇರುತ್ತವೆ. ಇದರ ಹೊರತಾಗಿ ಪಾಲಿಸ್ಟರ್‌ ಮತ್ತು ಅಕ್ರೆಲಿಕ್‌ ಫೈಬರ್ಸ್‌ನ ಸಿಂಥೆಟಿಕ್‌ ಕಾರ್ಪೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ವಿಶೇಷ ಸಂಗತಿಯೆಂದರೆ, ಸಿಂಥೆಟಿಕ್‌ ಪೈಬರ್‌ನಿಂದ ತಯಾರಿಸಿರುವ ಕಾರಣದಿಂದ ಇವನ್ನು ಸ್ವಚ್ಛಗೊಳಿಸುವುದು ಅತ್ಯಂತ ಸುಲಭ.

ಉಣ್ಣೆ : ಚಳಿಗಾಲದಲ್ಲಿ ಉಣ್ಣೆಯ ಕಾರ್ಪೆಟ್‌ ಮನೆಗೆ ಶೋಭೆ ನೀಡುತ್ತದಲ್ಲದೆ, ದೇಹಕ್ಕೆ ಬೆಚ್ಚಗಿನ ಮೃದುತ್ವದ ಅನುಭೂತಿಯನ್ನೂ ನೀಡುತ್ತದೆ. ನೈಸರ್ಗಿಕ ನೂಲಿನಿಂದ ತಯಾರಿಸಿರುವ ಕಾರಣದಿಂದ ಇದು ದೇಹಕ್ಕೂ ಹಾನಿಯನ್ನುಂಟು ಮಾಡುವುದಿಲ್ಲ.

ರೇಷ್ಮೆ : ರೇಷ್ಮೆಯ ಕಾರ್ಪೆಟ್‌ಗಳು ದುಬಾರಿಯೇನೋ ನಿಜ, ಆದರೆ ಅಂತಹದೊಂದು ಕಾರ್ಪೆಟ್‌ನಿಂದ ಮನೆಯ ಸೊಬಗು ಹಲವು ಪಟ್ಟು ಹೆಚ್ಚುತ್ತದೆ. ಆದರೆ ಅವುಗಳ ನಿರ್ವಹಣೆಯ ಬಗ್ಗೆ ತುಂಬಾ ಗಮನಹರಿಸಬೇಕಾಗುತ್ತದೆ.

ಸೆಣಬು : ಅತ್ಯಂತ ಸುಂದರ ಕಲಾತ್ಮಕ ಹೆಣಿಗೆ ಇರುವ ಸೆಣಬಿನ ಪರಿಸರಸ್ನೇಹಿ ಕಾರ್ಪೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಬೇರೆ ಕಾರ್ಪೆಟ್‌ಗಳಿಗೆ ಹೋಲಿಸಿದರೆ ಇವುಗಳ ಬೆಲೆ ಕೂಡ ಕಡಿಮೆ. ಆದರೆ ಇವು ಬೇರೆಯದಕ್ಕಿಂತ ಬಹುಬೇಗ ಹಾಳಾಗುತ್ತವೆ. ಏಕೆಂದರೆ ಬಹಳ ಸುಲಭವಾಗಿ ಇವು ಬೆಂಕಿಗೆ ಆಹುತಿಯಾಗಬಹುದು, ಬೇರೆ ವಸ್ತುಗಳಿಗೆ ಸಿಲುಕಿ ಹರಿಯಬಹುದು, ಮಡಚಿದಂತೆ ಕಾಣಬಹುದು.

ಮಾಡರ್ನ್‌ : ಈ ತೆರನಾದ ಕಾರ್ಪೆಟ್‌ಗಳನ್ನು ಆಧುನಿಕ ತಂತ್ರಜ್ಞಾನದಿಂದ  ತಯಾರಿಸಲಾಗುತ್ತದೆ. ಈಗ ಅದರಲ್ಲಿ ವಾಟರ್‌ರಿಪೆಲೆಂಟ್‌ ತಂತ್ರಜ್ಞಾನವನ್ನು ಅನುಸರಿಸಲಾಗುತ್ತದೆ. ಇವನ್ನು ಮುಂಚೆ ಯೂರೋಪ್‌ ಖಂಡದ ದೇಶಗಳಲ್ಲಷ್ಟೇ ತಯಾರಿಸಲಾಗುತ್ತಿತ್ತು. ಇವುಗಳ ವಿಶೇಷತೆ ಏನೆಂದರೆ ಇಂತಹ ಕಾರ್ಪೆಟ್‌ ಮೇಲೆ ನೀರು ಬಿದ್ದರೂ ಕೂಡ ಅದು ಒದ್ದೆಯಾಗುವುದಿಲ್ಲ.

ಪಾರಂಪರಿಕ : ಇಂತಹ ಕಾರ್ಪೆಟ್‌ಗಳು ಮೊಘಲ್ ಕಾಲದ ಅಲಂಕಾರಿಕ ಕಲೆಯ ಒಂದು ಉದಾಹರಣೆಯಾಗಿದೆ. ಇಂತಹ ಕಲಾತ್ಮಕ ಕಾರ್ಪೆಟ್‌ಗಳು ತುಸು ಕಠೋರವಾಗಿರುತ್ತವೆ. ಆದರೆ ಇದರಿಂದ ಮನೆಗೆ ದೊರಕುವ ಮೆರುಗು ಮಾತ್ರ ಹಲವು ಪಟ್ಟು ಹೆಚ್ಚುತ್ತದೆ.

ಟ್ರೈಬಲ್  : ಟ್ರೈಬಲ್ ಕಾರ್ಪೆಟ್‌ಗಳು ಸಾಮಾನ್ಯವಾಗಿ ಸೆಣಬಿನಿಂದ ತಯಾರಾಗಿರುತ್ತವೆ. ಇವಗಳ ವಿನ್ಯಾಸ ಟ್ರೈಬಲ್ ಆಗಿರುವುದರಿಂದ ಹೆಚ್ಚು ಟ್ರೆಂಡಿ ಆಗಿ ಕಾಣಿಸುವುದಿಲ್ಲ. ಆದರೆ ಇವುಗಳ ಉಪಸ್ಥಿತಿ ಗೃಹಾಲಂಕಾರದಲ್ಲಿ ವಿನೂತನ ಲುಕ್ಸ್ ನೀಡುತ್ತದೆ.

ಕಾರ್ಪೆಟ್‌ನ ಸ್ವಚ್ಛತೆ

ಯಾವ ಕೋಣೆಯಲ್ಲಿ ನೀವು ಕಾರ್ಪೆಟ್‌ ಹಾಸಿದ್ದೀರೊ, ಆ ಕೋಣೆಯ ಹೊರಭಾಗದಲ್ಲಿ ಫುಟ್‌ ರಗ್‌ವೊಂದನ್ನು ಅವಶ್ಯ ಹಾಕಿ. ಅದರಿಂದಾಗಿ ಕಾಲಿನ ಧೂಳು ಒಳಭಾಗದ ತನಕ ಬರುವುದಿಲ್ಲ.

ವಾರದಲ್ಲಿ 1 ದಿನ ಕಾರ್ಪೆಟ್‌ನ್ನು ವ್ಯಾಕ್ಯೂಮ್ ಕ್ಲೀನರ್‌ನಿಂದ ಸ್ವಚ್ಛಗೊಳಿಸಿ. ಇದರಿಂದ ಅದರ ಹೊಳಪು ಹೊಸದರಂತೆ ಇರುತ್ತದೆ.

ತಿಂಗಳಿಗೊಂದು ಸಲ ಕಾರ್ಪೆಟ್‌ನ್ನು ಹೊರಗೆ ಬಿಸಿಲಿಗೆ ಹರಡಿ. ಅದರಿಂದ ಹೊರಸೂಸುವ ದುರ್ಗಂಧ ಹೊರಟುಹೋಗುತ್ತದೆ.

ಕಾರ್ಪೆಟ್‌ನ್ನು ಸ್ವಲ್ಪ ಹೊತ್ತು ಮಾತ್ರ ಹಾಸುವುದಿದ್ದರೆ, ಅದನ್ನು ಉಲ್ಟಾ ಹಾಸಿ. ಏಕೆಂದರೆ ಅದರ ಮೇಲೆ ಧೂಳಿನ ಕಣಗಳು ಅಂಟಿಕೊಳ್ಳದಿರಲಿ.

ಒಂದು ವೇಳೆ ಕಾರ್ಪೆಟ್‌ ಮೇಲೆ ಯಾವುದೇ ರೀತಿಯ ಕಲೆಗಳು ಕಂಡುಬಂದಲ್ಲಿ, ಅದನ್ನು ತಕ್ಷಣವೇ ಸ್ವಚ್ಛಗೊಳಿಸಲು ಪ್ರಯತ್ನಿಸಿ. ಇಲ್ಲದಿದ್ದರೆ ಆ ಕಲೆ ಹಾಗೆಯೇ ಜಮೆಗೊಳ್ಳುತ್ತದೆ. ಕಲೆಯನ್ನು ಬಿಸಿ ನೀರು ಮತ್ತು ಡಿಟರ್ಜೆಂಟ್‌ನಿಂದ ಸ್ವಚ್ಛಗೊಳಿಸಿ. ಆದರೆ ಸ್ವಚ್ಛಗೊಳಿಸುವಾಗ ಹೆಚ್ಚು ಉಜ್ಜಬೇಡಿ. ಹಾಗೆ ಮಾಡಿದರೆ ಕಾರ್ಪೆಟ್‌ನ ಎಳೆಗಳು ಕಿತ್ತುಬರಬಹುದು.

ವಿನಿಗರ್‌ನ್ನು ನೀರಿನಲ್ಲಿ ಮಿಶ್ರಣ ಮಾಡಿ ಇದರ ಮೇಲೆ ಹಚ್ಚುವುದರಿಂದಲೂ ಕಲೆಗಳನ್ನು ಹೋಗಲಾಡಿಸಬಹುದು.

ನೇಲ್ ‌ಪಾಲಿಶ್‌ ರಿಮೂವರ್‌ನಿಂದಲೂ ಕಲೆ ತಗುಲಿದ ಜಾಗವನ್ನು ಸ್ವಚ್ಛಗೊಳಿಸಬಹುದು.

– ಜಿ. ಅನುರಾಧಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ