ಕಾವ್ಯಾ ಪತ್ರಿಕಿ ಓದುತ್ತಾ ಕುಳಿತಿದ್ದಾಗ ಕಾಲಿಂಗ್‌ ಬೆಲ್ ‌ಶಬ್ದವಾಯಿತು. ಬಾಗಿಲು ತೆರೆದಾಗ ಎದುರಿಗೆ ಅವಳ ಚಿಕ್ಕಂದಿನ ಗೆಳತಿ ಮೇಘಾ ನಿಂತಿದ್ದಳು. ಮೇಘಾ ಶಾಲೆಯಿಂದ ಹಿಡಿದು ಕಾಲೇಜಿನವರೆಗೆ ಕಾವ್ಯಾಳ ಜೊತೆಯಲ್ಲೇ ಓದುತ್ತಿದ್ದಳು. ಈಗ ಅವಳು ಕಾವ್ಯಾಳ ಗಂಡ ಸಂಜೀವನ ಆತ್ಮೀಯ ಮಿತ್ರ ಈಶ್ವರ್‌ನ ಹೆಂಡತಿಯಾಗಿದ್ದಳು. ಅವಳು ಒಂದು ಟಿ.ವಿ. ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳು.

ಕಾವ್ಯಾಳ ಮನದಲ್ಲಿ ಸ್ವಲ್ಪ ಹೊತ್ತಿನ ಮುಂಚಿನವರೆಗೂ ಶಾಂತಿ ನೆಲೆಸಿತ್ತು. ಈಗ ಅದರ ಜಾಗವನ್ನು ಅಸಹನೆ ಆಕ್ರಮಿಸಿಕೊಂಡಿತು. ಆದರೂ ಅವಳು ಬಾಗಿಲು ತೆರೆದು ನಗುತ್ತಾ ಸ್ವಾಗತಿಸಬೇಕಾಯಿತು, “ಅರೆ ಮೇಘಾ…. ಬಾ, ಬಾ, ಬಹಳ ದಿನಗಳಾಯ್ತು ನೋಡಿ.”

ಮೇಘಾ ಒಳಗೆ ಬಂದು ಇಡೀ ಡ್ರಾಯಿಂಗ್‌ ರೂಮನ್ನು ತೀಕ್ಷ್ಣವಾಗಿ ನೋಡಿದಳು. ಕಾವ್ಯಾ ಡ್ರಾಯಿಂಗ್‌ ರೂಮ್ ಅಷ್ಟೇ ಅಲ್ಲ, ಇಡೀ ಮನೆಯನ್ನು ಸುಂದರವಾಗಿ  ಅಲಂಕರಿಸಿದ್ದು ತಾನೂ ಚೆನ್ನಾಗಿ ಸಿಂಗರಿಸಿಕೊಂಡಿದ್ದಳು. ಮೇಘಾ ಸೋಫಾದ ಮೇಲೆ ಕೂತು, “ಈ ಕಡೆ ಒಂದು ಕೆಲಸ ಇತ್ತು. ಹಾಗೇ ನಿನ್ನನ್ನು ಭೇಟಿ ಆಗೋಣ ಅಂದ್ಕೊಂಡೆ. ಹ್ಯಾಗಿದ್ದೀಯಾ?” ಎಂದು ಕೇಳಿದಳು.

“ನಾನು ಚೆನ್ನಾಗಿದ್ದೀನಿ. ನೀನು ಹೇಗಿದ್ದೀಯಾ?”

ಎದುರಿಗೆ ಸ್ಟ್ಯಾಂಡ್‌ ಮೇಲೆ ಕಾವ್ಯಾಳ ಮಗನ ಫೋಟೋ ಫ್ರೇಮ್ ಇತ್ತು. ಅದನ್ನು ನೋಡಿದ ಮೇಘಾ ಹೇಳಿದಳು, “ನಿನ್ನ ಮಗ ದೊಡ್ಡವನಾದ.”

“ಹೌದು. ಆದರೆ ಬಹಳ ತುಂಟ. ಇಡೀ ದಿನ ಏನಾದರೂ ಚೇಷ್ಟೆ ಮಾಡ್ತಾನೇ ಇರ್ತಾನೆ.” ಹೀಗೆ ಹೇಳುವಾಗ ಕಾವ್ಯಾಳ ಮುಖ ಹೆಮ್ಮೆಯಿಂದ ಬೀಗುತ್ತಿರುವುದನ್ನು ಮೇಘಾ ಕಂಡಳು.

“ಮನೆ ಚೆನ್ನಾಗಿ ಅಲಂಕರಿಸಿದ್ದೀಯ. ಒಳ್ಳೆಯ ಟೇಸ್ಟ್ ಇದೆ ನಿನಗೆ.”

“ಏನು ಮಾಡೋದು? ಕೆಲಸ ಏನೂ ಇಲ್ಲಾಂದ್ರೆ ಮನೆ ಅಲಂಕಾರ ಆದ್ರೂ ಮಾಡಬೇಕು.”

“ಈಗ ಮಗ ದೊಡ್ಡೋನಾಗಿದ್ದಾನೆ. ಕೆಲಸಕ್ಕೆ ಸೇರ್ಕೋಬಹುದು.”

“ನಂದು ಮಾಮೂಲಿ ಡಿಗ್ರಿ. ನನಗೆ ಯಾರು ಕೆಲಸ ಕೊಡ್ತಾರೆ? ಇನ್ನೊಂದು ವಿಷಯ ಅಂದ್ರೆ ನಾನು ಕೆಲಸಕ್ಕೆ ಹೋಗೋದು ಇವರಿಗೆ ಇಷ್ಟ ಇಲ್ಲ.”

“ನೀನು ಸಂಜೀವ್ ಗೆ ಹೆದರ್ತೀಯಾ?”

“ಇದರಲ್ಲಿ ಹೆದರೋದೇನಿಲ್ಲ. ಪತಿ ಪತ್ನಿಯರು ಪರಸ್ಪರರ ಇಷ್ಟಾನಿಷ್ಟಗಳನ್ನು ತಿಳಿದುಕೊಳ್ಳಬೇಕು.”

ಮೇಘಾ ನಕ್ಕಳು, “ಒಂದು ವೇಳೆ ಇಬ್ಬರ ಆಲೋಚನೆಗಳಲ್ಲಿ ಭೂಮ್ಯಾಕಾಶಗಳ ಅಂತರವಿದ್ದರೆ?”

ಅದನ್ನು ಕೇಳಿ ಕಾವ್ಯಾಗೆ ರೇಗಿತು, “ಸರಿ, ಪುಟ್ಟ ಈಶ್ವರ್‌ನ ಯಾವಾಗ ನಮಗೆ ತೋರಿಸ್ತೀಯಾ?” ಎಂದಳು.

ಮೇಘಾ ಭುಜ ಅಲುಗಿಸುತ್ತಾ ಹೇಳಿದಳು, “ನನಗೆ ನಿನ್ನ ತರಹ ಮನೇಲಿ ಆರಾಮಾಗಿ ಇರೋಕೆ ಆಗಲ್ಲ. ಟಿವಿ ಚಾನೆಲ್ ‌ಕೆಲಸ ಸುಲಭ ಅಲ್ಲ. ಕೈ ತುಂಬಾ ಸಂಬಳ ಕೊಡ್ತಾರೆ. ಕೆಲಸಾನೂ ಹಾಗೇ ತಗೋತಾರೆ.”

ಮೇಘಾಳ ಮಾತು ಕಾವ್ಯಾಗೆ ಹಿಡಿಸಲಿಲ್ಲ. ಆದರೂ ಸುಮ್ಮನಿದ್ದಳು. ಏಕೆಂದರೆ ಮೇಘಾಳ ಮಾತುಗಳಲ್ಲಿ ಸದಾ ನೀರಸತೆ ಇರುತ್ತಿತ್ತು. ಕಾವ್ಯಾಳ ಮದುವೆ 20ನೇ ವಯಸ್ಸಿಗೇ ಆಗಿತ್ತು. ಹುಡುಗ ಅವಳ ಅಪ್ಪನ ಅತ್ಯಂತ ಪ್ರೀತಿಯ ಸ್ಟೂಡೆಂಟ್‌ ಆಗಿದ್ದ. ಅವರ ಅಧೀನದಲ್ಲೇ ಪಿಎಚ್‌ಡಿ ಮಾಡಿ ಒಂದು ಮಲ್ಟಿನ್ಯಾಷನಲ್ ಕಂಪನಿಯಲ್ಲಿ ಎಗ್ಸಿಕ್ಯೂಟಿವ್ ‌ಆಗಿದ್ದ. ಒಳ್ಳೆಯ ಸಂಬಳದ ಜೊತೆಗೆ ಇತರ ಎಲ್ಲಾ ಸೌಕರ್ಯಗಳೂ ಇದ್ದವು. ದೇಶ ವಿದೇಶಗಳ ಸುತ್ತಾಟ ಇತ್ತು.

ಕಾವ್ಯಾ ತನ್ನ ವೈವಾಹಿಕ ಜೀವನದಲ್ಲಿ ಅತ್ಯಂತ ಸಂತೋಷವಾಗಿದ್ದಳು. ಅಷ್ಟೊಂದು ಸುಂದರನೂ, ಸಂಪನ್ನನೂ ಆದ ಗಂಡ ಸಿಕ್ಕಾಗ ಸಂತೋಷ ಏಕಿರುವುದಿಲ್ಲ? ಮದುವೆಯಾದ ಸ್ವಲ್ಪ ಸಮಯದಲ್ಲೇ ಅವಳಿಗೊಬ್ಬ ಮುದ್ದಾದ ಮಗ ಹುಟ್ಟಿದ್ದ. ಮದುವೆಯಾಗಿ 8 ವರ್ಷಗಳಾಗಿತ್ತು. ಎಂದೂ ಯಾವುದೇ ದೂರುಗಳಿರಲಿಲ್ಲ. ಅವಳೂ ಬಹಳ ಸುಂದರಳಾಗಿದ್ದಳು. ಅನೇಕ ಸಹಪಾಠಿಗಳು ಅವಳಿಗಾಗಿ ಪ್ರಾಣಬಿಡುತ್ತಿದ್ದರು. ಆದರೆ ಅವಳ ಮೊದಲ ಪ್ರೀತಿ ಗಂಡ ಸಂಜೀವನೇ ಆಗಿದ್ದ.

ಮಗಳು ಸುಖವಾಗಿರುವುದನ್ನು ಕಂಡು ಅವಳ ಅಪ್ಪ ಅಮ್ಮ ಬಹಳ ಸಂತೋಷವಾಗಿದ್ದರು.

ಕಾವ್ಯಾ ಮಾತು ಬದಲಿಸುತ್ತಾ, “ಬಿಡು ಆ ವಿಷಯ, ಇಷ್ಟು ದಿನಗಳಾದ ಮೇಲೆ ಸಿಕ್ಕಿದ್ದೀಯ. ಫ್ರೆಂಡ್ಸ್ ವಿಷಯ ಮಾತಾಡೋಣ,” ಎಂದಳು.

ಮೇಘಾ ಕೊಂಚ ಸಹಜವಾದಳು, “ನೀನಂತೂ ಎಂದೂ ನನ್ನನ್ನು ವಿಚಾರಿಸಲೇ ಇಲ್ಲ,” ಎಂದಳು.

“ಮೇಘಾ, ನಾನು ನಿಜ ಹೇಳ್ತಿದ್ದೀನಿ. ನಾವು ನಿನ್ನನ್ನು, ಈಶ್ವರ್‌ ಅಣ್ಣನನ್ನು ಎಷ್ಟು ಬಾರಿ ಕರಿದ್ವಿ. ಈಶ್ವರಣ್ಣ ಒಂದೆರಡು ಬಾರಿ ಮನೆಗೆ ಬಂದ್ರು. ನೀನಂತೂ ಬರ್ಲೇ ಇಲ್ಲ. ನಮ್ಮನ್ನೂ ಬನ್ನೀಂತ ಕರೀಲಿಲ್ಲ. ಇರಲಿ ಬಿಡು. ಕಾಫಿ ಕುಡೀತೀಯೋ, ಸೂಪ್ ಕೊಡ್ಲೋ?”

“ಸೂಪ್‌ ಕೊಡು. ಮನೇಲಿ ಮಾಡಿದ ಸೂಪ್‌ ಕುಡಿದು ಬಹಳ ದಿನಗಳಾಯ್ತು.”

ಸ್ವಲ್ಪ ಹೊತ್ತಿಗೆ ಕಾವ್ಯಾ 2 ಕಪ್‌ ಬಿಸಿ ಬಿಸಿಯಾದ ಸೂಪ್‌ ತಂದಳು. 1 ಕಪ್‌ ಮೇಘಾಗೆ ಕೊಟ್ಟು, ಇನ್ನೊಂದನ್ನು ತಾನು ಹಿಡಿದು ಅವಳೆದುರು ಕುಳಿತಳು. ನಂತರ, “ಹೇಗೆ ನಡೀತಿದೆ ನಿನ್ನ ಸಂಸಾರ?” ಎಂದು ಕೇಳಿದಳು.

ಕಾವ್ಯಾ ಸೂಪ್‌ ತರಲು ಹೋದಾಗ ಮೇಘಾ ಮನೆಯ ನಾಲ್ಕೂ ಕಡೆ ಕಣ್ಣು ಹಾಯಿಸಿದ್ದಳು. ಕಾವ್ಯಾ ಬಹಳ ಸುಖವಾದ ಹಾಗೂ ಸಂತುಷ್ಟ ಜೀವನ ನಡೆಸುತ್ತಿದ್ದಾಳೆಂದು ಅವಳಿಗೆ ಅರ್ಥವಾಗಿತ್ತು. ಮೇಘಾಳದು ಅಸೂಯೆಯ ಸ್ವಭಾವ. ಗೆಳತಿಯ ಸುಖ ಅವಳಿಗೆ ಇಷ್ಟವಾಗಲಿಲ್ಲ. ಅವಳು ಕಾವ್ಯಾಳ ಹೊಳೆಯುವ ಮುಖವನ್ನಲ್ಲ, ಮಲಿನ ಹಾಗೂ ದುಃಖಿತ ಮುಖವನ್ನು ನೋಡಲು ಬಯಸುತ್ತಿದ್ದಳು.

ಮೇಘಾ ಸೂಪ್ ಕುಡಿದು ಸ್ವಲ್ಪ ಹೊತ್ತು ಕುಳಿತಿದ್ದು, ಕೆಲಸವಿದೆ ಎಂದು ಹೇಳಿ ಹೊರಟು ಹೋದಳು. ಕಾವ್ಯಾಳ ಸುಖದ ಅಡಿಪಾಯ ಬಹಳ ಸದೃಢವಾಗಿದೆಯೆಂದು ಮೇಘಾಗೆ ತಿಳಿದಿತ್ತು. ಅದನ್ನು ಸುಲಭವಾಗಿ ಕೀಳಲು ಸಾಧ್ಯವಿರಲಿಲ್ಲ.

ಅಮ್ಮನೊಂದಿಗೆ ಫೋನ್‌ನಲ್ಲಿ ಮಾತಾಡುತ್ತಾ ಕಾವ್ಯಾ ಇದ್ದಕ್ಕಿದ್ದಂತೆ ಮೇಘಾ ಬಂದ ಸುದ್ದಿ ಹೇಳಿದಾಗ ಅವರಿಗೆ ಸಂದೇಹ ಉಂಟಾಯಿತು, “ಬಹಳ ದಿನಗಳಿಂದ ಅವಳನ್ನು ನೋಡಿರಲಿಲ್ಲ. ಇದ್ದಕ್ಕಿದ್ದ ಹಾಗೆ ನಿನ್ನ ಮನೆಗೆ ಯಾಕೆ ಬಂದ್ಲು?” ಎಂದರು.

ಕಾವ್ಯಾ ಮಗನಿಗೆ ಹಾಲು ಕೊಟ್ಟು ಸಹಜವಾಗಿ, “ಈಶ್ವರಣ್ಣ ಬರ್ತಾ ಇರ್ತಾರೆ. ಅವಳು ಈ ನಡುವೆ ಬಂದಿರಲಿಲ್ಲ. ಈಶ್ವರಣ್ಣ ಸಂಜೀವ್ ಗೆ ದೂರದ ಸಂಬಂಧದಲ್ಲಿ ತಮ್ಮನಾಗಬೇಕು. ಇಬ್ರೂ ಒಳ್ಳೆಯ ಸ್ನೇಹಿತರು ಕೂಡ. ಇಲ್ಲೇ ಹತ್ತಿರದಲ್ಲಿ ಒಂದು ಟಿವಿ ಚಾನೆಲ್‌‌ನಲ್ಲಿ ಏನೋ ಕೆಲಸ ಇದೇಂತ ಬಂದಿದ್ದಾಳೆ” ಎಂದಳು.

“ನನಗೆ ಅವಳ ಮೇಲೆ ಚೂರೂ ನಂಬಿಕೆ ಇಲ್ಲ. ನಿನ್ನ ಮನೆ ನೋಡೋಕೇ ಅವಳು ಬಂದಿದ್ದು,” ಅಮ್ಮ ಕಾವ್ಯಾಳ ಮಾತನ್ನು ಮಧ್ಯದಲ್ಲೇ ಕತ್ತರಿಸಿ ಹೇಳಿದರು.

ಇದನ್ನು ಕೇಳಿ ಕಾವ್ಯಾ ಸ್ತಬ್ಧಳಾದಳು, “ನಮ್ಮ ಮನೇಲಿ ಏನಿದೆ, ಅವಳು ಬಂದು ನೋಡೋ ಅಂಥದ್ದು?” ಎಂದಳು.

“ಅವಳ ಮನೇಲಿ ಇಲ್ಲದಿರೋದು. ನೋಡು ಕಾವ್ಯಾ, ಅವಳು ಬಹಳಾ ಧೂರ್ತಳು, ಅಸೂಯಾಪರಳು. ಸ್ವಾರ್ಥ ಇಲ್ಲದೆ ಒಂದು ಹೆಜ್ಜೇನೂ ಇಡಲ್ಲ ಅವಳು. ನೀನು ಅವಳನ್ನು ಜಾಸ್ತಿ ಹಚ್ಕೋಬೇಡ.”

“ಅಮ್ಮಾ, ಅವಳೆಲ್ಲಿ ಬರ್ತಾಳೆ, ಎಷ್ಟೋ ವರ್ಷಗಳ ನಂತರ ಸಿಕ್ಕಿದ್ದಾಳೆ.”

“ಅದಕ್ಕೇ ಚಿಂತೆ ಆಗಿರೋದು, ವರ್ಷಗಳ ನಂತರ ಇದ್ದಕ್ಕಿದ್ದಂತೆ ನಿನ್ನ ಮನೆಗೆ ಏಕೆ ಬಂದಳು?”

ಕಾವ್ಯಾ ನಕ್ಕಳು, “ಅರೆ ಅಮ್ಮಾ, ನಿನಗೆ ಬಹಳ ಅನುಮಾನ. ಬಾಲ್ಯದ ಗೆಳತೀನ ನೋಡಬೇಕು ಅನ್ನಿಸಿದೆ ಬಂದಿದ್ದಾಳೆ. ನನಗೇನು ಮಾಡೋ ಹಾಗಿದ್ದಾಳೆ?”

“ಅವಳೇನು ಮಾಡ್ತಾಳೇಂತ ನನಗೆ ಗೊತ್ತಿಲ್ಲ. ಆದರೆ ಅವಳು ಏನು ಬೇಕಾದರೂ ಮಾಡಬಹುದು. ಅವಳು ತಿರುಗಿ ಬರಬಹುದು ಅಂತ ನನಗೆ ಅನ್ನಿಸ್ತಿದೆ. ಹೆಚ್ಚು ಮಾತಾಡಿಸಬೇಡ. ಬೇಗ ಕಳಿಸಿಬಿಡು. ಮಾತಾಡೋವಾಗಲೂ ಹುಷಾರಾಗಿರು.”

ಈಗ ಕಾವ್ಯಾಗೆ ಗಾಬರಿಯಾಯಿತು, “ಆಯ್ತಮ್ಮಾ,” ಎಂದಳು. ಅಮ್ಮನ ಅನುಮಾನ ನಿಜವಾಯಿತು. ಇನ್ನೊಂದು ದಿನ ಮೇಘಾ ಮತ್ತೆ ಬಂದಳು. ಕಾವ್ಯಾಗೆ ಕೊಂಚ ಸಂದೇಹ ಬಂದರೂ ಅವಳು ಬಂದಿದ್ದು ಕೆಟ್ಟದೆನಿಸಲಿಲ್ಲ. ಸಂಜೀವ್ ಆಫೀಸ್‌ ಕೆಲಸದ ಮೇಲೆ ಮುಂಬೈಗೆ ಹೋಗಿದ್ದರು, ಮಗ ಶಾಲೆಗೆ ಹೋಗಿದ್ದ. ಬಹಳ ಏಕಾಂಗಿತನ ಕಾಡುತ್ತಿತ್ತು. ಅವಳು ಮೇಘಾಳನ್ನು ಸ್ವಾಗತಿಸಿದಳು. ಅವಳು ಅಂದು ಕೊಂಚ ಶಾಂತಳಾಗಿದ್ದಳು.

ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿದ ಬಳಿಕ ಮೇಘಾ ಇದ್ದಕ್ಕಿದ್ದಂತೆ ಹೇಳಿದಳು, “ನಿನಗೆ ಬಹಳ ಹೊತ್ತು ಬಿಡುವಿರುತ್ತದೆ. ಆಗ ಏನು ಮಾಡ್ತೀಯಾ?”

ಕಾವ್ಯಾ ನಕ್ಕಳು, “ನನಗೆ ಬಿಡುವು ಜಾಸ್ತಿ ಸಿಗುತ್ತೇಂತ ನಿನಗೆ ಅನ್ನಿಸುತ್ತೆ. ಆದರೆ ಹಾಗೇನಿಲ್ಲ. ಅಪ್ಪ, ಮಗನ ಬಯಕೆಗಳನ್ನು ಪೂರೈಸುವಷ್ಟರಲ್ಲಿ ನನ್ನ ಪ್ರಾಣ ಹೋಗುತ್ತೆ.”

“ಸಂಜೀವ್ ‌ಬೇರೆ ಊರಲ್ಲಿರುವಾಗ?”

“ಹ್ಞೂಂ. ಆಗ ಸ್ವಲ್ಪ ಸಮಯ ಸಿಗುತ್ತದೆ. ಈಗ ಅವರು ಮುಂಬೈಗೆ ಹೋಗಿದ್ದಾರೆ. ನನಗೆ ಕೆಲಸ ಇಲ್ಲ. ನನಗೆ ಪುಸ್ತಕಗಳು ಓದೋ ಹುಚ್ಚು ಇರೋದು ನಿನಗೂ ಗೊತ್ತು.”

“ರಾತ್ರಿ ಹೊತ್ತೂ ಓದಬಹುದಲ್ವಾ?”

ಕಾವ್ಯಾ ಜಾಗೃತಳಾದಳು, “ಯಾಕೆ ಕೇಳ್ತಾ ಇದ್ದೀಯಾ?”

“ನೋಡು ಕಾವ್ಯಾ, ನೀನು ಇಷ್ಟು ಸುಂದರವಾಗಿದ್ದೀಯ, ನಿನಗೆ 20-22ಕ್ಕಿಂತ ಹೆಚ್ಚು ವಯಸ್ಸು ಹೇಳೋಕಾಗಲ್ಲ. ಅಭಿನಯ, ಡ್ಯಾನ್ಸ್ ಕೂಡ ಬರುತ್ತೆ. ನಮ್ಮ ಚಾನೆಲ್‌‌ನಲ್ಲಿ ನಮ್ಮದೇ ಆದ ಸೀರಿಯಲ್‌ಗಳನ್ನು ತಯಾರಿಸ್ತೀವಿ. ಒಂದು ಹೊಸಾ ಸೀರಿಯಲ್ ಆರಂಭಿಸಬೇಕು. ಅದಕ್ಕೆ ನಾಯಕಿ ಪಾತ್ರಕ್ಕೆ ಹುಡುಕ್ತಿದ್ದೀವಿ. ಸುಂದರವಾಗಿರೋ, ಮುಗ್ಧ ಕಾಲೇಜು ಹುಡುಗಿ ರೋಲ್. ನಿನ್ನನ್ನಂತೂ ಆರಾಮಾಗಿ ಸೆಲೆಕ್ಟ್ ಮಾಡ್ತಾರೆ. ಬೇಕೂಂದ್ರೆ ಮಾತಾಡ್ತೀನಿ.”

ಕಾವ್ಯಾ ನಗತೊಡಗಿದಳು, “ನಿನಗೇನು ಹುಚ್ಚೇನೇ?”

“ಹುಚ್ಚು ಯಾಕೆ?”

“ಮತ್ತೆ ಆ್ಯಕ್ಟಿಂಗ್‌, ಸೀರಿಯಲ್ ವಿಷಯ ಮಾತಾಡ್ತಿದ್ದೀಯ. ನನಗೆ ಆಗಲ್ಲಪ್ಪ. ನನಗೆ ಪುರಸತ್ತು ಸಿಗಲ್ಲ. ನಾನು ಸೀರಿಯಲ್‌ನಲ್ಲಿ ಕೆಲಸ ಮಾಡೋದು ಯಾರಿಗೂ ಇಷ್ಟ ಆಗಲ್ಲ.”

“ಹಣದ ಸುರಿಮಳೆ ಆಗುತ್ತೆ. ನೀನು ಸಂಜೀವ್ ಗೆ ಹೆದರ್ತೀಯಾ?”

“ಅವರು ಇರಲಿ, ಮೊದಲು ನನ್ನ ಅಪ್ಪ ಅಮ್ಮನೇ ಬೈತಾರೆ. ನನಗೆ ಹಣದಾಸೆ ಇಲ್ಲ. ಹಣದ ಕೊರತೆಯೂ ಇಲ್ಲ. ಸಂಜೀವ್ ಇದ್ದಾರೆ, ಅಪ್ಪ ಇದ್ದಾರೆ.”

ಈಗ ತಾನು ಮಾತು ಬದಲಿಸಬೇಕೆಂದು ಮೇಘಾ ಅರ್ಥ ಮಾಡಿಕೊಂಡಳು. ಅವಳು ಮತ್ತೆ ಅದೂ ಇದೂ ಮಾಮೂಲಿ ವಿಷಯಗಳ ಬಗ್ಗೆ ಮಾತಾಡಿ ಇದ್ದಕ್ಕಿದ್ದಂತೆ ಹೇಳಿದಳು, “ನಿನಗೆ ಸಂಜೀವ್ ‌ಮೇಲೆ ತುಂಬಾ ನಂಬಿಕೆ ಇದೆ ಅಲ್ವಾ?”

ಇದನ್ನು ಕೇಳಿ ಕಾವ್ಯಾ ನಿಶ್ಚೇಷ್ಟಿತಳಾದಳು, “ಏನು ಹೇಳ್ತಿದ್ದೀಯಾ ನೀನು? ಅವರು ನನ್ನ ಗಂಡ. ಅವರನ್ನು ನಂಬದೆ ಇನ್ಯಾರನ್ನು ನಂಬಲಿ?” ಎಂದಳು.

“ಅವರು ಮುಂಬೈಗೇ ಹೋಗಿದ್ದಾರೇಂತ ನೀನು ನಂಬ್ತೀಯಾ?”

“ಅರೆ, ನಾನೇ ಸ್ವತಃ ಅವರ ಟೂರ್‌ ಪ್ರೋಗ್ರಾಂ ನೋಡಿದ್ದೀನಿ. ಅವರು ಇಳಿದುಕೊಳ್ಳೋ ಹೋಟೆಲ್ ‌ಕೂಡ ನನಗೆ ಗೊತ್ತು. ನಾನೂ ಎಷ್ಟೊಂದು ಬಾರಿ ಅವರ ಜೊತೆಗೆ ಹೋಗಿದ್ದೀನಿ. ಈ ಸಾರಿ ಕೂಡ ಹೋಗ್ತಿದ್ದೆ. ಆದರೆ ಮಗನ ಪರೀಕ್ಷೆ 1 ವಾರ ಪೂರ್ತಿ ಇದೆ. ಅದಕ್ಕೇ ಹೋಗೋಕಾಗ್ಲಿಲ್ಲ. ಮತ್ತೆ ಅವರೇನೂ ಒಬ್ಬರೇ ಹೋಗಿಲ್ಲ. ಜೊತೆಯಲ್ಲಿ ಪಿ.ಎ ಮತ್ತು ಕ್ಲರ್ಕ್‌ ರಾಮ್ ಪ್ರಸಾದ್‌ ಕೂಡ ಇದ್ದಾರೆ. ದಿನಕ್ಕೆ 2-3 ಸಾರಿ ಫೋನ್‌ ಕೂಡ ಮಾಡುತ್ತಾರೆ.”

“ನೀನಂತೂ ಬಹಳ ಪೆದ್ದು ಕಣೇ. ನಿನಗೆ ಗಂಡಸರ ಜಾತಿ ಗೊತ್ತಿಲ್ಲ. ಮನೆಯಿಂದ ಹೊರಗೆ ಹೋಗಿ ಅವರೇನು ಮಾಡ್ತಾರೇಂತ ಯಾರಿಗೂ ಗೊತ್ತಾಗಲ್ಲ.”

ಕಾವ್ಯಾ ಒಳಗೊಳಗೇ ನಡುಗಿದಳು. ಮೇಘಾಳ ಉಪಸ್ಥಿತಿ ಅವಳಿಗೆ ಕಷ್ಟವಾಗತೊಡಗಿತು. ಅಮ್ಮನ ಮಾತುಗಳು ನೆನಪಾಗತೊಡಗಿದವು. ಆದರೆ ಅವಳನ್ನು ಮನೆಯಿಂದಾಚೆ ತಳ್ಳಲೂ ಸಾಧ್ಯವಿರಲಿಲ್ಲ. ಈಗ ತನ್ನನ್ನು ನಿಯಂತ್ರಿಸಿಕೊಳ್ಳುವುದು ಬಹಳ ಅಗತ್ಯವೆಂದು ಅವಳಿಗೆ ಅನ್ನಿಸಿತು. ಮೇಘಾಳ ಉದ್ದೇಶಗಳ ಬಗ್ಗೆ ಅವಳಿಗೆ ನಂಬಿಕೆ ಇರಲಿಲ್ಲ.

“ನಾನು ಮನೆ ಹಾಗೂ ಮಕ್ಕಳನ್ನು ಬಿಟ್ಟು ಸಂಜೀವ್ ‌ಹಿಂದೇನೇ ನಿಂತಿದ್ರೆ ಆಯ್ತು ಅಷ್ಟೆ. ನನಗೆ ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ. ದಿನಕ್ಕೆ ಹಲವಾರು ಬಾರಿ ನನಗೆ ಫೋನ್‌ ಮಾಡ್ತಾರೆ. ಅವರ ಜೊತೆ ಹೋಗಿರೋರೂ ನನಗೆ ಚೆನ್ನಾಗಿ ಗೊತ್ತು.”

“ಅಬ್ಬಾ ನೀನಂತೂ ಎಷ್ಟು ನಂಬಿದ್ದೀಯ,” ಮೇಘಾ ಬಿದ್ದೂ ಬಿದ್ದೂ ನಕ್ಕಳು.

“ಫೋನ್‌ ಸಂಜೀವ್ ‌ಮಾಡ್ತಾರಾ? ಅವರು ಮುಂಬೈನಿಂದ ಮಾಡ್ತಿದ್ದಾರೋ ಅಥವಾ ಮನಾಲಿಯ ಸುಂದರ ಕಣಿವೆಗಳಲ್ಲಿ ಯಾರಾದರೂ ಹುಡುಗಿಯೊಂದಿಗೆ ಸುತ್ತಾಡುತ್ತಾ…..”

ಕಾವ್ಯಾ ನಡುಗಿಹೋದಳು, “ಏನು ಹೇಳ್ತಿದ್ದೀಯಾ? ನನ್ನ ಗಂಡ ಖಂಡಿತಾ ಹಾಗಲ್ಲ.”

“ಎಲ್ಲ ಗಂಡಸರೂ ಒಂದೇ ರೀತಿ ಇರ್ತಾರೆ.”

“ಈಶ್ವರಣ್ಣ ಏನೂ ಹಾಗಿಲ್ಲ.”

“ಸರಿ. ಹೇಗೆ ಪರೀಕ್ಷಿಸೋದೂಂತ ನಾನು ಹೇಳ್ತೀನಿ. ಅವರು ಟೂರಿನಿಂದ ಬಂದಾಗ ಅವರ ಬಟ್ಟೆಗಳನ್ನು ಚೆಕ್‌ ಮಾಡು. ಯಾರಾದರೂ ಹೆಂಗಸರ ಕೂದಲು, ಮೇಕಪ್‌ನ ಕಲೆ, ಹೆಂಗಸರ ಸೆಂಟ್‌ ವಾಸನೆ ಇದ್ರೆ ನೋಡು. 3-4 ಬಾರಿ ದಿಢೀರನೆ ಆಫೀಸಿಗೆ ಹೋಗು.”

“ಛೀ….ಛೀ…. ನಿನ್ನ ಯೋಚನೆ ಎಷ್ಟು ಕೆಟ್ಟದಾಗಿದೆ. ನನಗೆ ಈಶ್ವರಣ್ಣನ ಮೇಲೆ ಕನಿಕರ ಉಂಟಾಗುತ್ತಿದೆ. ನಿನ್ನ ಮನೆ, ನಿನ್ನ ಗಂಡನ ನೆಮ್ಮದಿ ಹಾಳು ಮಾಡಿದ್ದು ಸಾಲಲಿಲ್ಲ. ಈಗ ನನ್ನ ಮನೆ ಹಾಳು ಮಾಡೋಕೆ ಬಂದಿದ್ದೀಯಾ? ನೀನು ಹೋಗು, ನನ್ನ ತಲೆ ಸಿಡೀತಿದೆ. ನಾನು ಮಲಕ್ಕೋತೀನಿ.”

ಮೇಘಾಳ ಕೆಲಸ ಮುಗಿದಿತ್ತು. ಅವಳು ನಗುತ್ತಾ ಎದ್ದು ನಿಂತಳು, “ಚೆನ್ನಾಗಿ ನಿದ್ದೆ ಮಾಡು. ನಾನು ಹೋಗ್ತೀನಿ,” ಎಂದಳು.

ಮೇಘಾ ನಗುತ್ತಾ ಹೊರಟುಹೋದಳು. ಆದರೆ ಕಾವ್ಯಾ ಬಹಳ ಹೊತ್ತು ಅತ್ತಳು. ಮಗ ಶಾಲೆಯಿಂದ ಬಂದಾಗ ಅವನನ್ನು ಕರೆದುಕೊಂಡು ಸೀದಾ ಅಮ್ಮನ ಮನೆಗೆ ಹೋದಳು.

ಅಮ್ಮನಿಗೆ ಅವಳನ್ನು ನೋಡಿದ ಕೂಡಲೇ ಏನೋ ನಡೆದಿದೆ ಎಂದು ಅರ್ಥವಾಯಿತು. ಆದರೆ ಆಗಲೇ ಏನೂ ಕೇಳಲಿಲ್ಲ. ಮಗುವಿಗೆ ಹಾಗೂ ಅವಳಿಗೆ ಊಟ ಬಡಿಸಿದರು. ಮಗು ಊಟ ಮಾಡಿ ನಿದ್ದೆ ಮಾಡಿದ ನಂತರ ಮಗಳ ಬಳಿ ಕೂತು, “ಈಗ ಹೇಳು, ಏನು ವಿಷಯ?” ಎಂದರು.

ಕಾವ್ಯಾ ಸುಮ್ಮನಿದ್ದಳು.

“ಏನು, ಇವತ್ತೂ ಮೇಘಾ ಬಂದಿದ್ಲಾ?”

ಕಾವ್ಯಾ ಹೌದೆಂದು ತಲೆ ಆಡಿಸಿದಳು.

“ನಾನು ನಿನಗೆ ಮೊದಲೇ ಎಚ್ಚರಿಸಿದ್ದೆ. ಅವಳು ಒಳ್ಳೆಯ ಹುಡುಗಿ ಅಲ್ಲ. ಅವಳು ಯಾವ ತಟ್ಟೆಯಲ್ಲಿ ತಿನ್ನುತ್ತಾಳೋ ಅದನ್ನೇ ತೂತು ಮಾಡ್ತಾಳೆ.”

“ಮನೆಗೆ ಬಂದವಳನ್ನು ಹೇಗಮ್ಮಾ ಓಡಿಸೋದು?”

“ಒಂದು ಕಪ್‌ಕಾಫಿ ಕೊಟ್ಟು ಬೈ ಹೇಳಿಬಿಡು. ಕೂಡಿಸಿಕೊಂಡು ಮಾತಾಡಬೇಡ. ಅದು ಸರಿ, ಇಷ್ಟು ಬೇಜಾರು ಮಾಡಿಕೊಂಡಿದ್ದೀಯಲ್ಲ. ಅವಳು ಏನು ಹೇಳಿದಳು?”

ಕಾವ್ಯಾ ಎಲ್ಲವನ್ನೂ ಹೇಳಿದಾಗ ಅವರಿಗೆ ಸಂದೇಹ ಉಂಟಾಯಿತು. ಕೋಪ ಬಂದಿತು. ತಮ್ಮ ಮಗಳಿಗೆ ಚಾಲಾಕಿತನ ಗೊತ್ತಿಲ್ಲವೆಂದು ಅವರಿಗೆ ತಿಳಿದಿತ್ತು. ಅವಳ ಮನೆ ಮುರಿಯುವುದು ಬಹಳ ಸುಲಭ. ಅವರು ಹೇಳಿದರು, “ಸಂಜೀವ್ ‌ಮುಂಬೈಗೆ ಹೋಗಿಲ್ಲ ಅಂತೀಯಾ ನೀನು?”

“ಅಮ್ಮಾ, ಅವರ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದಿ. ರಾಮಪ್ರಸಾದ್‌ ಕೂಡ ಜೊತೆಗಿದ್ದಾರೆ. ಮೇಘಾ ಹೇಳಿದ್ದು ಅವರು ಮುಂಬೈಗೆ ಹೋಗಿಲ್ಲ ಅಂತ.”

“ಆದರೂ ನೀನು ತಲೆ ಕೆಡಿಸಿಕೊಂಡಿದ್ದೀಯ…. ಏಕೆಂದರೆ ಅವಳು ಸಂದೇಹದ ಮುಳ್ಳನ್ನು ನಿನ್ನ ಮನಸ್ಸಿನಲ್ಲಿ ಆಳವಾಗಿ ಚುಚ್ಚಿದ್ದಾಳೆ. ಸಂದೇಹ ಒಂದು ಕಾಯಿಲೆ. ಅದಕ್ಕೆ ಔಷಧವಿಲ್ಲ. ಬೇರೆ ಕಾಯಿಲೆಗಳಿಗೆ ಔಷಧ ಇದೆ. ಅವಕ್ಕೆ ಚಿಕಿತ್ಸೆ ಮಾಡಿಸಬಹುದು. ಮೇಘಾ ಈ ಕಾಯಿಲೇನ ನಿನಗೆ ಅಂಟಿಸಿದ್ದಾಳೆ. ಈಗ ನಿನ್ನನ್ನು ಸಂದೇಹಿಸಬೇಕೂಂತ ಸಂಜೀವ್ ‌ಗೆ ಅನ್ನಿಸಿದರೆ ಏನು ಮಾಡ್ತೀಯ?”

ಕಾವ್ಯಾ ಭಯದಿಂದ “ನನ್ನ ಮೇಲೆ ಸಂದೇಹವೇ?” ಎಂದಳು.

“ಹೌದು. ಅವರಿಲ್ಲದಾಗ ನೀನು ಏನೇನು ಮಾಡ್ತೀಯಾಂತ ಅವರಿಗೇನು ಗೊತ್ತಿರುತ್ತೆ? ಅವರು ವಾರವಾರ ಹೊರಗಿರ್ತಾರೆ. ಆಗ ನೀನು ಪೂರ್ತಿ ಸ್ವತಂತ್ರಳು. ನೀನು ಅವರನ್ನು ಅನುಮಾನಿಸಿದ್ರೆ, ಅವರು ನಿನ್ನನ್ನು ಅನುಮಾನಿಸಬಾರದಾ?”

ಕಾವ್ಯಾ ಪೆಚ್ಚಾಗಿಬಿಟ್ಟಳು.“ನೋಡು, ಹುಚ್ಚಿ ತರಹ ಆಡಬೇಡ. ನಿನ್ನ ಮನಸ್ಸಿನ ಮಾತು ಕೇಳು. ನೀನು ಅವಳ ತರಹ ಅಲ್ಲ. ನಿನಗೆ ಮಗ ಇದ್ದಾನೆ. ನೀನು ಅಷ್ಟಾಗಿ ಓದಿಲ್ಲ. ಹೊರಗಿನ ವ್ಯವಹಾರಗಳು ಗೊತ್ತಾಗಲ್ಲ. ಮೇಘಾ ಒಂದು ವೇಳೆ ಈಶ್ವರ್‌ನಿಂದ ಡೈವೋರ್ಸ್‌ ಪಡೆದರೂ ಅವಳಿಗೇನೂ ತೊಂದರೆಯಾಗಲ್ಲ. ಆದರೆ ನೀನೇನು ಮಾಡ್ತೀಯಾ? ನೀನೇನಾದ್ರೂ ತಪ್ಪು ಮಾಡಿದ್ರೆ ನಮ್ಮ ಕಡೆಯಿಂದ ಯಾವ ಸಪೋರ್ಟೂ ಸಿಗಲ್ಲ. ನಾನೂ ಏನೂ ಮಾಡಕ್ಕಾಗಲ್ಲ.”

ಅಮ್ಮನ ಮಾತು ಕೇಳಿ ಕಾವ್ಯಾ ಸ್ತಬ್ಧಳಾಗಿಬಿಟ್ಟಳು. ಅಮ್ಮ ಹೇಳಿದ್ದು ವಾಸ್ತವವಾಗಿತ್ತು. ತನ್ನ ಮನಸ್ಸಿನಲ್ಲಿ ಮುಳ್ಳು ಬಿತ್ತಲು ಮೇಘಾಗೆ ಅವಕಾಶ ಕೊಟ್ಟರೆ ತನ್ನ ಸರ್ವನಾಶವಾಗುತ್ತದೆ.

ಅಮ್ಮ ಈಶ್ವರ್‌ ಜೊತೆಗೂ ಈ ವಿಷಯದ ಬಗ್ಗೆ ಮಾತಾಡಿ ಕಾವ್ಯಾಗೆ ಬುದ್ಧಿವಾದ ಹೇಳಲು ಹೇಳಿದರು. ಕಾವ್ಯಾಳ ಮನದಲ್ಲಿದ್ದ ಮುಳ್ಳು ಇನ್ನೂ ಹಾಗೇ ಇತ್ತು.

ಒಂದು ದಿನ ಇದ್ದಕ್ಕಿದ್ದಂತೆ ಈಶ್ವರ್‌ ಕಾವ್ಯಾಗೆ ಫೋನ್‌ ಮಾಡಿ, “ಕಾವ್ಯಾ, ಬಹಳ ದಿನಗಳಾಯ್ತು ನಿಮ್ಮ ಮನೇಲಿ ಊಟ ಮಾಡಿ. ಇವತ್ತು ರಾತ್ರಿ ಊಟಕ್ಕೆ ಬರ್ತೀನಿ,” ಎಂದ.

ಕಾವ್ಯಾಗೆ ಖುಷಿಯಾಯಿತು, “ಆಯ್ತಣ್ಣ. ನಿಮಗೆ ಇಷ್ಟವಾದ ಅಡುಗೆ ಮಾಡ್ತೀನಿ,” ಎಂದಳು.

ಸಂಜೆ ಈಶ್ವರ್‌ ಸಂಜೀವ್ ‌ಜೊತೆಯಲ್ಲೇ ಬಂದರು.

ಕಾವ್ಯಾ ಕಾಫಿ ಜೊತೆ ಪಕೋಡ ಕೊಟ್ಟಳು. ಈಶ್ವರ್‌ ಕಾಫಿ ಕುಡಿಯುತ್ತಾ, “ರಾತ್ರಿ ಏನು ಅಡುಗೆ?” ಎಂದ.

“ನಿಮಗಿಷ್ಟವಾದ ಪಾಲಕ್‌ ಪನೀರ್‌, ಆಲೂಗಡ್ಡೆ ರಾಯತ, ಪೂರಿ ಸಾಗು, ಬಿಸಿಬೇಳೆ ಬಾತ್‌.”

“ವಾಹ್ ಬಹಳ ಚೆನ್ನಾಗಿರುತ್ತೆ. ಕೂತ್ಕೋ ಬಾ. ಸಂಜೀವ್ ‌ನೀನು ಹೋಗಿ ಏನಾದ್ರೂ ಸ್ವೀಟ್ಸ್ ತಗೊಂಡು ಬಾ.”

ಸಂಜೀವ್ ಸ್ವೀಟ್ಸ್ ತರಲು ಹೋದಾಗ ಈಶ್ವರ್‌ ಹೇಳಿದ, “ಕಾವ್ಯಾ, ಏನಾಯ್ತು ಪೂರ್ತಿ ವಿಷಯ ಹೇಳು.”

“ಯಾವ ವಿಷಯಾ?” ಕಾವ್ಯಾ ಆಶ್ಚರ್ಯದಿಂದ ಕೇಳಿದಳು.

“ನೀನು ಮೊದಲಿನ ಹಾಗೆ ಇಲ್ಲವೆಂದು ಸಂಜೀವ್‌ ಗೆ ಅನ್ನಿಸುತ್ತಿದೆ. ನಿನ್ನ ಬಗ್ಗೆ ಅವನಿಗೆ ಯಾವುದೇ ದೂರುಗಳಿಲ್ಲ. ಆದರೆ ನೀನು ಮೊದಲಿನಂತೆ ಖುಷಿಯಾಗಿಲ್ಲ. ನಿನ್ನ ಮನಸ್ಸಿನಲ್ಲಿ ಏನೋ ಕೊರೀತಿದೆ ಅಂತಿದ್ದಾನೆ.’

‘ಕಾವ್ಯಾ ಸುಮ್ಮನಿದ್ದಳು.“ಕಾವ್ಯಾ, ನೀನು ಸುಮ್ಮನಿದ್ದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗುತ್ತೆ. ಏನಾಯ್ತು? ಸಂಜೀವನ ವರ್ತನೆಯಿಂದ ನಿನಗೇನಾದ್ರೂ ಬೇಜಾರಾಗಿದೆಯೇ?”

“ಇಲ್ಲ. ಅವರೆಂದೂ ಒರಟಾಗಿ ಮಾತಾಡೋದೇ ಇಲ್ಲ.”

“ಪತಿಪತ್ನಿಯರ ಸಂಬಂಧ ಬಹಳ ಸಹಜವಾಗಿದ್ದರೂ ಬಹಳ ನಾಜೂಕಾಗಿರುತ್ತದೆ. ಅದರಲ್ಲಿ ಒಮ್ಮೊಮ್ಮೆ ಬುದ್ಧಿಯನ್ನು ಅಲಕ್ಷಿಸಲಾಗುತ್ತದೆ. ಈಗ ನಿನ್ನ ಮನಸ್ಸಿನಲ್ಲಿ ಯಾವ ಮುಳ್ಳು ಚುಚ್ಚಿದೆ ಹೇಳು?”

“ಹಾಗೇನೂ ಇಲ್ಲ,” ಎಂದಳು ಕಾವ್ಯಾ.

“ಕಾವ್ಯಾ, ಗಂಡ ಹೆಂಡತಿ ಸಂಬಂಧ ಪರಸ್ಪರರ ಬಗ್ಗೆ ವಿಶ್ವಾಸದ ಮೇಲೆ ಅವಲಂಬಿಸಿರುತ್ತದೆ. ನನಗನಿಸುತ್ತೆ ಸಂಜೀವನ ಬಗ್ಗೆ ನಿನ್ನ ನಂಬಿಕೆಗೆ ಪೆಟ್ಟುಬಿದ್ದಿದೆ. ಸಂಜೀವ್ ‌ಏನಾದರೂ ಹೇಳಿದ್ನಾ?”

ಮೇಘಾ ತನ್ನ ಮನಸ್ಸಿನಲ್ಲಿ ನೆಟ್ಟ ಅನುಮಾನದ ಮುಳ್ಳು ಕಾವ್ಯಾಳನ್ನು ಒಳಗೊಳಗೇ ಚುಚ್ಚುತ್ತಿತ್ತು. ಅವಳ ಮಾನಸಿಕ ನೆಮ್ಮದಿ ಹಾಳಾಗಿತ್ತು. ಅವಳು ಮೊದಲಿನಂತೆ ನಗುತ್ತಿರಲಿಲ್ಲ. ಸಂಜೀವನ ಜೊತೆಯಲ್ಲೂ ಪ್ರೀತಿಯಿಂದ ಬೆರೆಯುತ್ತಿರಲಿಲ್ಲ. ಅಶಾಂತಿ ಅವಳ ಮುಖದ ಮೇಲೆ ಎದ್ದು ಕಾಣುತ್ತಿದ್ದು ವರ್ತನೆಯಲ್ಲೂ ವ್ಯತ್ಯಾಸ ಇತ್ತು.

ಕಾವ್ಯಾ ತಲೆ ತಗ್ಗಿಸಿ ಉತ್ತರಿಸಿದಳು, “ಹಾಗೇನಿಲ್ಲ ಅಣ್ಣ.”

“ಇಲ್ಲ ಕಾವ್ಯಾ, ನಿನ್ನ ಮನಸ್ಸಿನ ಹೊಯ್ದಾಟ ನಿನ್ನ ಮುಖದಲ್ಲಿ ಸ್ಪಷ್ಟವಾಗಿ ಕಾಣ್ತಿದೆ. ಬಹಳ ಬೇಸರವಾಗಿದ್ದರೆ ಡೈವೋರ್ಸ್ ತಗೊಂಬಿಡು. ನಿನ್ನ ಸಂತೋಷಕ್ಕಾಗಿ ಸಂಜೀವ್ ಏನು ಬೇಕಾದರೂ ಮಾಡಲು ಸಿದ್ಧ!”

“ಡೈವೋರ್ಸ್‌?” ಕಾವ್ಯಾ ಬೆಚ್ಚಿ ಕಣ್ಣರಳಿಸಿದಳು.

“ಯಾಕೆ ತಗೋಬಾರ್ದು? ನೀನು ಸಂಜೀವ್ ಜೊತೆ ಸಂತೋಷವಾಗಿಲ್ಲ.“

“ಅಣ್ಣಾ, ನಾನು ತುಂಬಾ ಸಂತೋಷವಾಗಿದ್ದೀನಿ. ಸಂಜೀವ್ ಇಲ್ಲದ ಬದುಕನ್ನು ಯೋಚನೆ ಮಾಡೋಕೂ ಆಗಲ್ಲ. ಇನ್ನೊಂದು ಸಾರಿ ಡೈವೋರ್ಸ್‌ ಬಗ್ಗೆ ಹೇಳಬೇಡಿ,” ಅವಳು ಅಳತೊಡಗಿದಳು.

“ಹಾಗಾದರೆ ಹಿಂದಿನಂತೆ ಅವನ ಮೇಲೆ ನಂಬಿಕೆ, ವಿಶ್ವಾಸ ಯಾಕೆ ಇಡುತ್ತಿಲ್ಲ? ಅವನಿಗೆ ನಿನ್ನ ಕಣ್ಣುಗಳಲ್ಲಿ ಸಂದೇಹ ಏಕೆ ಕಾಣ್ತಿದೆ?”

“ನನಗೂ ಗೊತ್ತು. ಆದರೆ…..”

“ನಿನ್ನ ಮನಸ್ಸಿನಲ್ಲಿರೋ ಮುಳ್ಳನ್ನು ತೆಗೆಯೋಕೆ ಆಗ್ತಿಲ್ಲ. ನಿನಗೆ ಈ ಮುಳ್ಳನ್ನು ಬಿತ್ತಿದ್ದು ಮೇಘಾ ತಾನೇ?”

ಅವಳಿಗೆ ಮತ್ತೂ ಆಶ್ಚರ್ಯವಾಯಿತು. ಅವಳು ಈಶ್ವರ್‌ನನ್ನು ಅಸಹಾಯಕತೆಯಿಂದ ನೋಡಿದಳು.

“ಕಾವ್ಯಾ, ಯಾವ ಕೋಳಿಗೆ ಮೊಟ್ಟೆ ಇಡೋಕೆ ಸಾಮರ್ಥ್ಯ ಇಲ್ಲವೋ ಅವು ಬೇರೆ ಕೋಳಿಗಳು ಮೊಟ್ಟೆ ಇಡೋದನ್ನು ಸಹಿಸೋದಿಲ್ಲ. ಕೆಲವು ಹೆಂಗಸರು ಹಾಗೇ ಇರ್ತಾರೆ. ಅವರು ತಮ್ಮ ಮನೆಯನ್ನು ಸಂಭಾಳಿಸೋದಿಲ್ಲ. ಬೇರೆಯವರು ಸಂಭಾಳಿಸಿರೋ ಮನೆಗಳನ್ನು ಮುರಿಯೋದ್ರಲ್ಲೇ ಸುಖ ಕಾಣ್ತಾರೆ. ಅಂಥವರಲ್ಲಿ ಮೇಘಾ ಒಬ್ಬಳು. ನೀನು ಅವಳ ಶಿಕಾರಿಯಾಗಿದ್ದೀಯ. ಅವಳು ಚಂದ್ರಾಳ ಮನೆಯನ್ನು ಒಡೆದುಹಾಕುವ ಹಂತಕ್ಕೆ ತಂದಿದ್ದಳು. ಚಂದ್ರಾ ಬಹಳ ಕಷ್ಟಪಟ್ಟು ಉಳಿಸಿಕೊಂಡಳು. ಈಗ ಮೇಘಾಗೆ ಅವಳ ಮನೆ ಬಾಗಿಲು ಮುಚ್ಚಿದೆ. ಅದಕ್ಕೇ ನಿನ್ನ ಮನೆಗೆ ನುಗ್ಗಿದಳು. ನೀನೇ ಹೇಳು, ಮೊದಲು ನಿನ್ನ ಮನೆಗೆ ಬರ್ತಿದ್ಲಾ? ಈಗ್ಯಾಕೆ ಪದೇ ಪದೇ ಬರ್ತಾಳೆ.”

ಕಾವ್ಯಾಗೆ ಭಯವಾಯಿತು. ತನ್ನಿಂದ ದೊಡ್ಡ ತಪ್ಪಾಯಿತು. ತಾನೇ ತನ್ನ ಕೈಯಾರೆ ಜೀವನಕ್ಕೆ ಕೊಳ್ಳಿ ಇಟ್ಟುಕೊಳ್ಳುತ್ತಿದ್ದಳು. ಸಂಜೀನಂತಹ ಗಂಡನ ಮೇಲೆ ಅನುಮಾನ. ಅವರೂ ಎಲ್ಲಿಯವರೆಗೆ ಸಹಿಸಿಕೊಳ್ಳುತ್ತಾರೆ? ತನ್ನ ಅಪ್ಪ ಅಮ್ಮ ಕೂಡ ಬೆಂಬಲಿಸಲಿಲ್ಲ.

ನಂತರ ಹೇಳಿದಳು, “ಅಣ್ಣಾ, ಮೇಘಾಗೆ ವಿಚಿತ್ರ ಕಾಯಿಲೆ ಇದೆ.”

“ಹೌದು. ಅವಳು ಮಾನಸಿಕ ರೋಗಿ. ನಿನ್ನನ್ನು ಹಾಗೂ ನಿನ್ನ ಮನೆಯನ್ನು ಉಳಿಸಿಕೋಬೇಕೂಂದ್ರೆ ಇನ್ನೂ ಸಮಯ ಇದೆ. ಇದುವರೆಗೆ ಆಗಿರೋ ನಷ್ಟಾನಾ ಭರ್ತಿ ಮಾಡ್ಕೋ.”

“ಅದನ್ನು ನಾನು ಮಾಡ್ಕೋತೀನಿ. ಆದರೆ ನೀವು…..”

“ನನ್ನದು ದಾಂಪತ್ಯ ಜೀವನ ಅಂತ ಏನಿಲ್ಲ. ಮನೆ ಕೂಡ ನೌಕರರ ಸಹಾಯದಿಂದ ನಡೀತಿದೆ.”

“ಅಣ್ಣಾ, ನಾನೇನಾದ್ರೂ ಮಾಡ್ಲಾ?”

ಈಶ್ವರ್‌ನಗುತ್ತಾ, “ನೀನು ಏನ್ಮಾಡ್ತೀಯ? ಮೊದಲು ನಿನ್ನ ಮನೆ ಸರಿ ಮಾಡ್ಕೊ.”

“ಸರಿ ಮಾಡ್ಕೋತೀನಿ. ಆದರೆ ನಿಮ್ಮ ಬಗ್ಗೆನೂ ಯೋಚಿಸ್ತೀನಿ.”

“ನೋಡು, ಸಂಜೀವ್ ‌ಸ್ವೀಟ್ಸ್ ತಂದ,” ಈಶ್ವರ್‌ ಹೇಳಿದ.

ಶಾಂತಿ, ಪ್ರೀತಿ, ಅನುಬಂಧ ಕಾವ್ಯಾಳ ಕೈಯಿಂದ ಜಾರುತ್ತಿತ್ತು. ಈಗ ಅವನ್ನು ಅವಳು ಗಟ್ಟಿಯಾಗಿ ಹಿಡಿದುಕೊಂಡಳು. ಇನ್ನು ಮುಂದೆ ಸಂಜೀವನ ಮೇಲೆ ಎಂದೂ ಸಂದೇಹಿಸುವುದಿಲ್ಲ ಎಂದು ನಿಶ್ಚಯಿಸಿದಳು. ಇನ್ನು ಮುಚ್ಚಿಡುವುದರಿಂದ ಲಾಭವಿಲ್ಲ. ಮುಚ್ಚಿಟ್ಟರೆ ಮನದಲ್ಲಿ ಮುಳ್ಳಾಗಿ ಚುಚ್ಚುತ್ತಿರುತ್ತದೆ. ಸಂಜೀವನಿಗೆ ಎಲ್ಲವನ್ನೂ ಹೇಳಿಬಿಡಬೇಕು. ಯಾವುದೇ ವಿಷಯ ಒಂದಲ್ಲಾ ಒಂದು ದಿನ ಹೊರಬರುತ್ತದೆ. ಆಗ ಸಂಬಂಧಗಳಲ್ಲಿ ಮತ್ತೆ ಬಿರುಕು ಮೂಡುತ್ತದೆ ಎಂದುಕೊಂಡು ಮನಸ್ಸಿನಲ್ಲಿ ಇದ್ದುದನ್ನೆಲ್ಲಾ ಗಂಡನಿಗೆ ಹೇಳಿಬಿಟ್ಟಳು.

ಎಲ್ಲನ್ನೂ ಗಮನವಿಟ್ಟು ಕೇಳಿ ಸಂಜೀವ್ ನಕ್ಕ, “ನನಗೆ ಗೊತ್ತಿತ್ತು. ಅಕಾಲದಲ್ಲಿ ಮೂಡಿದ ಮೋಡ ಆಕಾಶದಲ್ಲಿ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಗಾಳಿ ಜೋರಾಗಿ ಬೀಸಿದಾಗ ದೂರ ಹೋಗುತ್ತದೆ. ನಿನ್ನ ವರ್ತನೆ ಬದಲಾದಾಗ ನನಗೆ ಗಾಬರಿ ಆಯ್ತು. ಆದರೂ ವಿಚಲಿತನಾಗಲಿಲ್ಲ. ಏಕೆಂದರೆ ನಿನ್ನ ತಪ್ಪು ನಿನಗೆ ಖಂಡಿತಾ ಗೊತ್ತಾಗುತ್ತೆ ಅಂತ ನನಗೆ ಗೊತ್ತಿತ್ತು.”

“ನಮ್ಮದು ಸರಿಹೋಯ್ತು. ಆದರೆ ಈಶ್ವರಣ್ಣಂದು ಏನಾಗುತ್ತೆ?”

“ಮೇಘಾಳ ಸ್ವಭಾವದಲ್ಲಿ ಪರಿವರ್ತನೆ ತರೋಕಾಗಲ್ಲ.”

“ಪ್ರಯತ್ನ ಪಡೋಣ. ಈಶ್ವರ್‌ ಬಹಳ ಒಳ್ಳೆಯವರು.”

“ಹಾಳಾಗಿರೋ ಸಂಬಂಧ ಸರಿ ಮಾಡೋಕೆ ಇಬ್ಬರ ಸ್ವಭಾವದಲ್ಲಿ ನಿಯತ್ತು ಇರಬೇಕು. ಮೇಘಾಳಲ್ಲಿ ಅದು ಇಲ್ಲ.”

“ಆದರೂ ನಾವು ಪ್ರಯತ್ನಿಸಿ ನೋಡೋಣ,” ಕಾವ್ಯಾ ಹೇಳಿದಾಗ ಸಂಜೀವ್ ‌ಸುಮ್ಮನಾದ.

3-4 ದಿನಗಳ ನಂತರ ಕಾವ್ಯಾ ಅವರಿಬ್ಬರನ್ನೂ ಊಟಕ್ಕೆ ಕರೆದಳು. ಇಬ್ಬರೂ ಒಟ್ಟಿಗೆ ಬರಲಿಲ್ಲ. ಬೇರೆ ಬೇರೆ ಬಂದರು. ಕಾವ್ಯಾ ನಸುನಗುತ್ತಾ ಮಾತನಾಡಿಸಿದಳು. ಅವಳ ಮಗನೂ ಮುದ್ದು ಮುದ್ದಾಗಿ ಮಾತನಾಡುತ್ತಿದ್ದುದು ಎಲ್ಲರಿಗೂ ಸಂತಸ ತಂದಿತ್ತು. ಕಾವ್ಯಾಳ ಕಣ್ಣುಗಳಲ್ಲಿ ಸುಖ, ಪ್ರೀತಿ ತುಂಬಿ ತುಳುಕಾಡುತ್ತಿತ್ತು.

ಮೇಘಾಳ ಮನದಲ್ಲಿ ಏನು ನಡೆಯುತ್ತಿದೆಯೆಂದು ತಿಳಿಯುತ್ತಿರಲಿಲ್ಲ. ಆದರೂ ಅವಳು ಸಹಜವಾಗಿದ್ದಳು. ಊಟದ ನಂತರ ಎಲ್ಲರೂ ಡ್ರಾಯಿಂಗ್‌ ರೂಮಿಗೆ ಬಂದು ಕುಳಿತರು. ಮಗು ಮಲಗಿಬಿಟ್ಟಿದ್ದ. ಸಂಜೀವ್ ಮಾತು ಆರಂಭಿಸಿದ, “ಆಫೀಸು, ಸಂಸಾರ ಇತ್ಯಾದಿಗಳಲ್ಲಿ ಮುಳುಗಿ ಜೀವನ ನೀರಸವಾಗಿದೆ. ಏನಾದರೂ ಮಾಡಬೇಕು.”

“ಏನು ಮಾಡೋದು?” ಈಶ್ವರ್‌ ಕೇಳಿದ.

“ನಡಿ ಎಲ್ಲಾದ್ರೂ ಸುತ್ತಾಡಿಕೊಂಡು ಬರೋಣ. ಹನಿಮೂನ್‌ಗೆ ಊಟಿಗೆ ಹೋಗಿದ್ದೆ. ಆಮೇಲೆ ಎಲ್ಲೂ ಹೋಗಿಲ್ಲ.”

“ನಾವೂ ಊಟಿಗೆ ಹೋಗಿದ್ವಿ. ಈಗ ಎಲ್ಲಿಗೆ ಹೋಗೋದು?”

ಆಗ ಕಾವ್ಯಾ ಹೇಳಿದಳು, “ಎಲ್ಲಿಗೆ ಹೋಗೋದೂಂತ ಮೇಘಾಗೇ ಬಿಟ್ಟುಬಿಡೋಣ.”

ಮೇಘಾ ನಿಧಾನವಾಗಿ “ಗೋವಾಗೆ ಹೋದರೆ ಹೇಗೆ?”

ಕಾವ್ಯಾ ಎಗರಿದಳು, “ವಾಹ್, ನೋಡಿದ್ರಾ ನನ್ನ ಫ್ರೆಂಡ್‌ ಸೆಲೆಕ್ಷನ್‌, ನಾವು ಅದನ್ನು ಯೋಚಿಸೇ ಇರಲಿಲ್ಲ.”

“ಅಲ್ಲಿಗೆ ಹೋಗೋಕೆ ಟೈಂ ಬೇಕಾಗುತ್ತೆ. ಟಿಕೆಟ್‌, ಹೋಟೆಲ್ ನಲ್ಲಿ ರೂಂ ಬುಕ್‌ ಮಾಡಿಸ್ಬೇಕು. ಈಗ ಸೀಸನ್‌ ಬೇರೆ. ತುಂಬಾ ರಶ್‌ ಇರುತ್ತೆ. ಇಷ್ಟು ಜನಕ್ಕೆ ಒಟ್ಟಿಗೇ ಸಿಗೋದು ಕಷ್ಟ,” ಈಶ್ವರ್‌ ಹೇಳಿದ.

“ಹೌದು ಹೌದು. ಹಾಗಾದ್ರೆ ಬೇರೆಲ್ಲಿ ಹೋಗೋದು?” ಸಂಜೀವ್ ‌ಕೇಳಿದ.

“ಒಂದು ಕೆಲಸ ಮಾಡೋಣ. ನನ್ನ ಫ್ರೆಂಡ್‌ದು ಒಂದು ಫಾರ್ಮ್ ಹೌಸ್‌ ಇದೆ. ಬಹಳ ದೂರ ಏನಿಲ್ಲ. ಇಲ್ಲಿಂದ 20 ಕಿಲೋಮೀಟರ್‌. ಅಲ್ಲಿ ಮಾವಿನ ತೋಪು, ತರಕಾರಿ ತೋಟ, ಅಕ್ವೇರಿಯಂ ಎಲ್ಲಾ ಇದೆ. ಬಹಳ ಸುಂದರವಾದ ಮನೆ. ಪಕ್ಕದಲ್ಲಿ ಹೊಳೆ ಹರಿಯುತ್ತೆ. ಅಲ್ಲಿ ಒಂದು ದಿನ ಪೂರ್ತಿ ಪಿಕ್ನಿಕ್‌ ಮಾಡೋಣ. ಬೆಳಗ್ಗೆ ಬೇಗ ಹೋಗಿ ರಾತ್ರಿ ವಾಪಸ್‌ ಬರೋಣ,” ಈಶ್ವರ್‌ಹೇಳಿದ.

ಕಾವ್ಯಾ ಉತ್ಸಾಹದಿಂದ, “ಆಯ್ತು, ನಾನು ಊಟ, ತಿಂಡಿ ಎಲ್ಲಾ ರೆಡಿ ಮಾಡ್ಕೋತೀನಿ,” ಎಂದಳು.

“ಏನೂ ಬೇಕಾಗಿಲ್ಲ. ಅಲ್ಲೇ ಅಡುಗೆಯವನು ಇದ್ದಾನೆ,”

ಶನಿವಾರ ಬೆಳಗ್ಗೆಯೇ ಅವರು ಹೊರಟರು. ಫಾರ್ಮ್ ಹೌಸ್‌ ಮುಂದೆ 2 ಕಾರುಗಳು ನಿಂತವು. ನಾಲ್ಕೂ ಕಡೆ ಹಸಿರಿನ ಮಧ್ಯೆ ಒಂದು ಸುಂದರವಾದ ಕಾಟೇಜ್‌ ಇತ್ತು. ಹಿಂದೆ ಹೊಳೆ ಹರಿಯುತ್ತಿತ್ತು. ಮಗು ಇಳಿದ ಕೂಡಲೇ ಕೆಂಪನೆಯ ಟೊಮೇಟೊ ಕೀಳಲು ಓಡಿದ.

ಸ್ವಲ್ಪ ಹೊತ್ತಿಗೆ ಬಿಸಿಬಿಸಿ ಕಾಫಿ ಬಂದಿತು. ಬೆಳಗಿನ ಸುಖೋಷ್ಣ ವಾತಾವರಣದಲ್ಲಿ ಎಲ್ಲರೂ ಕಾಫಿ ಕುಡಿಯತೊಡಗಿದರು. ಮಗುವಿಗೆ ಹಾರ್ಲಿಕ್ಸ್ ಬಂತು.

“ಅಣ್ಣಾ, ಇದು ಬಹಳ ಅನ್ಯಾಯ. ಇಷ್ಟು ದಿನಗಳವರೆಗೆ ಇಂತಹ ಸುಂದರ ದೃಶ್ಯದಿಂದ ವಂಚಿತರಾಗಿದ್ವಿ.”

ಈಶ್ವರ್‌ ನಕ್ಕು, “ಈ ಗಿಡಮರಗಳು, ಹಸಿರು, ತಂಪನೆಯ ವಾತಾವರಣ ಬುದ್ಧಿವಂತರಿಗೆ. ನಮ್ಮಂಥ ಪೆದ್ದರಿಗಲ್ಲ,” ಎಂದ.

ಅಂತಹ ಮುಕ್ತ ವಾತಾವರಣದಲ್ಲಿ ಎಲ್ಲರ ಜೊತೆ ಬೆರೆತಿದ್ದ ಮೇಘಾ ಕೂಡ ಖುಷಿಯಾಗಿದ್ದಳು. ಅವಳ ಮನಸ್ಸಿನ ಕಹಿ ಅಳಿದಿತ್ತು. ಅವಳು ನಗುತ್ತಾ, “ಅವರು ವ್ಯಂಗ್ಯವಾಡಿದ್ದು ನನಗೆ,” ಎಂದಳು.

ಸಂಜೀವ್ ‌ಹೇಳಿದ, “ನೀನು ದೊಡ್ಡ ಪೆದ್ದು ಈಶ್ವರ್‌. ನೀನು ಎಷ್ಟು ಸಾರಿ ಬಂದಿದ್ದೀಯ ಇಲ್ಲಿ?”

“ಅವಕಾಶ ಸಿಕ್ದಾಗೆಲ್ಲಾ ಬರ್ತಾ ಇರ್ತೀನಿ. ಇದು ನನ್ನ ಫೇವರಿಟ್‌ ಜಾಗ. ಇಲ್ಲಿ ಕೆಲಸ ಮಾಡೋರಿಗೆಲ್ಲಾ ನಾನು ಗೊತ್ತು.”

ಆಗ ಮೇಘಾ, “ರೀ, ಒಂದೊಂದು ದಿನ ಮಧ್ಯರಾತ್ರೀಲಿ ಮನೆಗೆ ಬರ್ತಿದ್ರಲ್ಲಾ, ಆಗೆಲ್ಲಾ ಇಲ್ಲಿಗೆ ಬರ್ತಿದ್ರಾ?” ಎಂದಳು.

“ಹೌದು. ಇಲ್ಲಿಗೆ ಬಂದು ಮತ್ತೆ ಸಿಟಿಗೆ ಹಿಂತಿರುಗೋಕೆ ಮನಸ್ಸಾಗ್ತಿರಲಿಲ್ಲ. ಇಲ್ಲಿ ಬಹಳ ಶಾಂತಾಗಿದೆ.”

“ನಿನ್ನ ಕವಿತೆಗಳೆಲ್ಲಾ ಇಲ್ಲೇ ಹುಟ್ಟಿದ್ದಾ?” ಸಂಜೀವ್ ‌ಕೇಳಿದ.

“ಎಲ್ಲಾ ಅಲ್ಲ. ಹೆಚ್ಚಿನ ಕವಿತೆಗಳು ಇಲ್ಲೇ ಹುಟ್ಟಿದ್ದು.”

ಮೇಘಾ ಕಣ್ಣರಳಿಸುತ್ತಾ, “ಏನು, ನೀವು ಕವಿತೆಗಳನ್ನು ಬರೀತೀರಾ? ನನಗೆ ಗೊತ್ತೇ ಇಲ್ಲ.”

“3 ಬುಕ್‌ ರಿಲೀಸ್‌ ಆಗಿದೆ. ಇವರ ಕವನ ಸಂಗ್ರಹದ್ದು. ಒಂದಕ್ಕೆ ಸಾಹಿತ್ಯ ಅಕಾಡೆಮಿ ಅವಾರ್ಡ್‌ ಬಂದಿದೆ. ನೀನು ಯಾವತ್ತೂ ತಿಳಿದುಕೊಳ್ಳೋಕೆ ಪ್ರಯತ್ನಿಸಲಿಲ್ಲ. ಅದಕ್ಕೇ ನಿನಗೆ ಗೊತ್ತಿಲ್ಲ. ನಿನ್ನ ಸೆರಗಿನೊಂದಿಗೆ ವಜ್ರ ಪೋಣಿಸಿದೆ. ನಿನ್ನ ಸವತಿ ಬೇರೆ ಯಾವುದೇ ಮೂಳೆ ಮಾಂಸ ತುಂಬಿಕೊಂಡಿರೋ ಮಹಿಳೆ ಅಲ್ಲ. ಇವರ ಕವಿತೆಗಳು ಹಾಗೂ ಚಿತ್ರಕಲೆ. ಅಣ್ಣನೇ ಕವಿ ಪಾರಿಜಾತ. ನೀನು ಅವರ ಅಭಿಮಾನಿ ಅಲ್ವಾ?” ಕಾವ್ಯಾ ಹೇಳಿದಳು.

“ಕವಿ ಪಾರಿಜಾತ!” ಮೇಘಾಳ ಕೈಯ್ಯಲ್ಲಿದ್ದ ಬಟ್ಟಲು ಕೆಳಗೆ ಬಿತ್ತು. ನಂತರ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಅಳತೊಡಗಿದಳು.

ಕಾವ್ಯಾ ಅವಳಿಗೆ ಸಮಾಧಾನ ಹೇಳತೊಡಗಿದಾಗ ಸಂಜೀವ್ ತಡೆದು ಕಿವಿಯಲ್ಲಿ ಹೇಳಿದ, “ಅಳಲಿ ಬಿಡು. ಮನಸ್ಸಿನಲ್ಲಿ ಬಹಳ ದಿನಗಳ ಒತ್ತಡ ಇದೆ. ಸ್ವಲ್ಪ ಅತ್ತು ಹಗುರವಾಗಲಿ. ಆಗಲೇ ನಾರ್ಮಲ್ ಆಗ್ತಾಳೆ.”

ಸ್ವಲ್ಪ ಹೊತ್ತು ಅತ್ತ ನಂತರ ಶಾಂತಳಾದ ಮೇಘಾ ಕಾವ್ಯಾಳತ್ತ ನೋಡಿ, “ನೋಡಿದ್ಯಾ ಕಾವ್ಯಾ, ಎಷ್ಟು ಮೋಸಗಾರರು ಇವರು,” ಎಂದಳು.

ಅದನ್ನು ಕೇಳಿ ಕಾವ್ಯಾ ನಸುನಕ್ಕಳು.

“ಮೇಘಾ, ನೀನೆಷ್ಟೇ ಅಹಂಕಾರ ಪಟ್ರೂ ನೀನು ಈಶ್ವರ್‌ನ ಪ್ರೀತಿ ಮಾಡೇ ಮಾಡ್ತೀಯ. ಅವರನ್ನು ಎಲ್ಲಿ ಕಳ್ಕೊಂಡು ಬಿಡ್ತೀನೋ ಅಂತ ನೀನು ಇಷ್ಟೆಲ್ಲಾ ಎಗರಾಡ್ತಿದ್ದೆ. ಆದರೆ ನಿನ್ನ ಗಂಡನನ್ನು ಯಾವಾಗಲೂ ನಿನ್ನ ಸೆರಗಿಗೆ ಗಂಟು ಹಾಕ್ಕೋಳ್ಳೋಕೆ ನೀನು ಆರಿಸಿಕೊಂಡ ದಾರಿ ತಪ್ಪಾಗಿತ್ತು,” ಎಂದು ಸಂಜೀವ್ ‌ಹೇಳಿದ.

ಆಗ ಈಶ್ವರ್‌, “ಆಯ್ತು ಬಿಡಪ್ಪಾ, ಈಗ ನಮ್ಮ ಎರಡನೇ ಹನಿಮೂನ್‌ನ ಗೋವಾದಲ್ಲಿ ಆಚರಿಸೋಣ. ಟಿಕೆಟ್‌ ಹಾಗೂ ಹೋಟೆಲ್ ನಲ್ಲಿ ರೂಂ ಸಿಕ್ಕಾಗ ಅಲ್ಲಿಗೇ ಹೋಗೋಣ,” ಎಂದ.

ಕಾವ್ಯಾ ಹಾಗೂ ಸಂಜೀವ್ ‌ಇಬ್ಬರೂ ಒಟ್ಟಿಗೆ, “ವಾವ್, ಗುಡ್‌ ಐಡಿಯಾ!” ಎಂದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ