ದೀಪಾವಳಿಯಂತಹ ವಿಶೇಷ ಹಬ್ಬದಲ್ಲಿ ಮಾರುಕಟ್ಟೆ ಹೊಸ ಹೊಸ ವಸ್ತುಗಳಿಂದ ತುಂಬಿರುತ್ತದೆ. ಈ ಹಬ್ಬ ಜನರ ಮುಖದ ಮೇಲೆ ಮಂದಹಾಸ ತರುವುದಲ್ಲದೆ, ಏನನ್ನಾದರೂ ಖರೀದಿಸಲು ನೆಪವನ್ನು ಕೊಡುತ್ತದೆ. ಈಗಿನ ದಿನಗಳಲ್ಲಿ ಕಂಪನಿಗಳೂ ಸಹ ಒಂದಕ್ಕಿಂತ ಒಂದು ಮೋಹಕ ಆಫರ್‌ನ್ನು ಗ್ರಾಹಕರಿಗೆ ಕೊಡುತ್ತಿರುತ್ತವೆ.
ದೀಪಾವಳಿಯ ಸಂದರ್ಭದಲ್ಲಿ ನೀವು ಯಾವುದಾದರೂ ವಿಶೇಷ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಖರೀದಿಸಲು ಬಯಸಿದ್ದರೆ ಅವನ್ನು ಅಗತ್ಯವಾಗಿ ಖರೀದಿಸಿ. ಆದರೆ ಮನೆಗೆ ತಂದ ನಂತರ ಅ ಬರಿಯ ಶೋಪೀಸ್ ಆಗದಂತೆ ನೋಡಿಕೊಳ್ಳಿ. ಅವನ್ನು ಸರಿಯಾಗಿ ಇಟ್ಟುಕೊಳ್ಳುವುದು ಮತ್ತು ರಕ್ಷಿಸುವುದು ಬಹಳ ಅಗತ್ಯ. ಬನ್ನಿ, ಇದನ್ನು ಹೇಗೆ ಮಾಡುವುದೆಂದು ನೋಡೋಣ.
ಹೀಟರ್
ಹೀಟರ್‌ನ್ನು ಆಗಾಗ್ಗೆ ಸ್ವಚ್ಛವಾದ ಬಿಳಿಯ ಬಟ್ಟೆಯಿಂದ ಸ್ವಚ್ಛ ಮಾಡುತ್ತಿರಿ.
ಚಳಿಗಾಲ ಮುಗಿಯುತ್ತಿದ್ದಂತೆ ಹೀಟರ್‌ನ್ನು ಯಾವಾಗಲೂ ಕವರ್‌ನಲ್ಲಿಡಿ. ಇಲ್ಲದಿದ್ದರೆ ಅದರ ಮೇಲೆ ಧೂಳು ಕೂಡುವುದು.
ಹೀಟರ್‌ನ ಕನೆಕ್ಷನ್ ಸಡಿಲವಾಗಿದೆಯೇ ಎಂದು ಆಗಾಗ್ಗೆ ಚೆಕ್ ಮಾಡುತ್ತಿರಿ. ಒಂದುವೇಳೆ ಸಡಿಲವಾಗಿದ್ದರೆ ಸ್ಪಾರ್ಕಿಂಗ್ ಆಗಿ ನಿಮಗೆ ನಷ್ಟವಾಗಬಹುದು.
ರಾಡ್ ಇರುವ ಹೀಟರ್ ಸ್ಪ್ರಿಂಗ್ ಹೀಟರ್‌ಗಿಂತ ಬಹಳ ಉತ್ತಮ. ಹೀಟರ್‌ನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಶಿಫ್ಟ್ ಮಾಡುತ್ತಿದ್ದರೆ, ಅದರ ಸ್ವಿಚ್ ಆಫ್ ಮಾಡಿ ಶಿಫ್ಟ್ ಮಾಡಿ. ಇಲ್ಲದಿದ್ದರೆ ಕರೆಂಟ್ ಹೊಡೆಯುವ ಸಂಭವವಿರುತ್ತದೆ.
ಹೀಟರ್‌ನ್ನು ನಿಮ್ಮಿಂದ ಕನಿಷ್ಠ 2 ಅಡಿ ದೂರದಲ್ಲಿ ಇಡಿ. ಏಕೆಂದರೆ ಹೆಚ್ಚು ಹತ್ತಿರ ಇಟ್ಟರೆ ಅದು ತ್ವಚೆಗೆ ಹಾನಿಕಾರಕ.
ಸಾಮಾನ್ಯವಾಗಿ ಹೀಟರ್‌ಗೆ ಎಕ್ಸ್ ಟೆನ್ಶನ್ ಪ್ಲಗ್ ಉಪಯೋಗಿಸುತ್ತಾರೆ. ಅದನ್ನು ನೆಲದ ಮೇಲೆ ಇರಿಸಬೇಡಿ.
ಕ್ಯಾಮೆರಾ
ಇಂದು ಕ್ಯಾಮೆರಾದಲ್ಲಿ ಅನೇಕ ರೀತಿಯ ಫೀಚರ್‌ಗಳು ಬರತೊಡಗಿವೆ. ಆದ್ದರಿಂದ ಅದರ ಜೊತೆ ಇರುವ ಪುಸ್ತಕದಲ್ಲಿ ಕೊಟ್ಟಿರುವುದನ್ನು ಓದಿ ತಿಳಿದುಕೊಂಡೇ ಉಪಯೋಗಿಸಿ. ಇಲ್ಲದಿದ್ದರೆ ಯಾವುದಾದರೂ ಬಟನ್ ಒತ್ತಿದರೆ ಅದರಲ್ಲಿ ಏನಾಯಿತೆಂದು ನಿಮಗೆ ತಿಳಿಯುವುದೇ ಇಲ್ಲ.
ನಾವು ಸುತ್ತಾಡಲು ಹೊರಟಾಗ ಕ್ಯಾಮೆರಾವನ್ನು ಕೈಲಿ ಹಿಡಿದಿರುತ್ತೇವೆ. ಆದರೆ ಎಷ್ಟೋ ಬಾರಿ ಕ್ಯಾಮೆರಾ ಕೈಯಿಂದ ಕೆಳಗೆ ಬಿದ್ದುಬಿಡುತ್ತದೆ. ಆದ್ದರಿಂದ ಸುರಕ್ಷತೆಗಾಗಿ ಕ್ಯಾಮೆರಾ ಬ್ಯಾಗ್ ತೆಗೆದುಕೊಂಡು ಹೋಗಿ.
ಕ್ಯಾಮೆರಾವನ್ನು ಯಾವಾಗಲೂ ಕವರ್‌ನಲ್ಲಿಡಿ.
ಕ್ಯಾಮೆರಾ ಉಪಯೋಗಿಸಿ ಬ್ಯಾಗ್‌ನಲ್ಲಿಡುವಾಗ ಅದರ ಬ್ಯಾಟರಿ ಒಳಗೇ ಇರದಂತೆ ನೋಡಿಕೊಳ್ಳಿ. ಅದನ್ನು ತೆಗೆದೇ ಕ್ಯಾಮೆರಾವನ್ನು ಬ್ಯಾಗಿನಲ್ಲಿಡಿ. ಲೆನ್ಸ್ ನ್ನು ಯಾವಾಗಲೂ ಮುಚ್ಚಿಡಿ. ಲೆನ್ಸ್ ನ್ನು ಸ್ವಚ್ಛಗೊಳಿಸಲು ಸ್ವಚ್ಛವಾದ ಹಾಗೂ ಕೋಮಲವಾದ ಬಟ್ಟೆಯಿಂದ ಮೃದುವಾಗಿ ಒರೆಸಿ.
ಲೆನ್ಸ್ ಮೇಲೆ ಕೈ ಇಡಬೇಡಿ. ಕೈಗಳ ನುಣುಪಿನಿಂದಾಗಿ ಲೆನ್ಸ್ ಹಾಳಾಗುತ್ತದೆ.
ಡಿಜಿಟಲ್ ಕ್ಯಾಮೆರಾದಲ್ಲಿ ಫೋಕಸ್ ಮಾಡಲು ಆಪ್ಶನ್ ಇರುತ್ತದೆ. ಆದರೆ ಅದನ್ನು ಯಾವಾಗಲೂ ಆನ್ ಮಾಡಿಡಬೇಡಿ. ಇಲ್ಲದಿದ್ದರೆ ಬ್ಯಾಟರಿ ಬೇಗನೆ ಖಾಲಿಯಾಗುತ್ತದೆ. ಅದನ್ನು ಆಫ್ ಮಾಡಿಟ್ಟರೆ ಬಹಳ ಕಾಲ ನಡೆಯುತ್ತದೆ.
ಮಿಕ್ಸರ್ ಮತ್ತು ಫುಡ್ ಪ್ರೊಸೆಸರ್
ಯಾವುದೇ ಪದಾರ್ಥವನ್ನು ಉಪಯೋಗಿಸುವ ಮೊದಲು ಅದರ ಜೊತೆಗಿರುವ ಬುಕ್ ಲೆಟ್‌ನ್ನು ಗಮನದಲ್ಲಿಟ್ಟು ಓದಿ. ನಂತರವೇ ಅದನ್ನು ಉಪಯೋಗಿಸಿ.
ಮಿಕ್ಸರ್ ಮತ್ತು ಫುಡ್ ಪ್ರೊಸೆಸರ್‌ನ ಲೈಫ್ ಹೆಚ್ಚಾಗಿರಬೇಕೆಂದರೆ ಉಪಯೋಗಿಸಿದ ತಕ್ಷಣವೇ ಅವನ್ನು ತೊಳೆದಿಡಿ.
ಇವನ್ನು ಸ್ವಚ್ಛಗೊಳಿಸಲು ಒಳ್ಳೆಯ ಲಿಕ್ವಿಡ್ ಸೋಪ್ ಉಪಯೋಗಿಸಿ. ಏಕೆಂದರೆ ಸೋಪ್ ಹಾಗೂ ಡಿಟರ್ಜೆಂಟ್ ಇದರೊಳಗೆ ಸೇರಿಕೊಳ್ಳುತ್ತದೆ. ಲಿಕ್ವಿಡ್ ಸೋಪ್ ಸುಲಭವಾಗಿ ಹೊರಹೋಗುತ್ತದೆ.
ಮಿಕ್ಸಿಯನ್ನು ಆನ್ ಮಾಡುವ ಮುಂಚೆ ಅದರ ಮುಚ್ಚಳ ಸರಿಯಾಗಿ ಮುಚ್ಚಿ. ಇಲ್ಲದಿದ್ದರೆ ಮಿಕ್ಸಿಯಲ್ಲಿರುವ ಪದಾರ್ಥ ಹೊರಚೆಲ್ಲುತ್ತದೆ. ಮಿಕ್ಸಿಯಲ್ಲಿ ಏನಾದರೂ ರುಬ್ಬುವಾಗ ಆ ಪದಾರ್ಥವನ್ನು ತುಂಡು ಮಾಡಿ ಹಾಕಿ. ಇಲ್ಲದಿದ್ದರೆ ಮಿಕ್ಸಿಯ ಬ್ಲೇಡುಗಳು ಸವೆಯುತ್ತವೆ. ಮಿಕ್ಸಿಯ ವೋಟರ್‌ನ್ನು ಸ್ವಚ್ಛವಾದ ಒಣಗಿದ ಬಟ್ಟೆಯಿಂದ ಸ್ವಚ್ಛಗೊಳಿಸಿ.
ಒಣಗಿದ ಮಸಾಲೆ ರುಬ್ಬುವ ಜಾರ್ ಹಾಗೂ ಕಲಸಿದ ಒದ್ದೆ ಮಸಾಲೆ ರುಬ್ಬುವ ಜಾರ್ ಬೇರೆ ಬೇರೆ ಇರಲಿ. ಜಾರ್‌ನ ತುಂಬಾ ಪದಾರ್ಥಗಳನ್ನು ತುಂಬಿದರೆ ಅದರ ಬ್ಲೇಡ್ ಸರಿಯಾಗಿ ಸುತ್ತುವುದಿಲ್ಲ. ಅದು ಮಿಕ್ಸಿಯ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಜಾರ್ ಕೊಂಚ ಖಾಲಿಯಾಗಿರಲಿ.
ಮಿಕ್ಸಿಯ ಮೋಟರ್‌ನಲ್ಲಿ ನೀರು ಹೋಗದಂತೆ ನೋಡಿಕೊಳ್ಳಿ. ಮಿಕ್ಸಿಯಲ್ಲಿ ಅಂಟಿಕೊಂಡಿರುವ ಖಾದ್ಯ ಪದಾರ್ಥಗಳ ಕಣಗಳು ಮಿಕ್ಸಿಯ ಸ್ಮೂಥ್ ನೆಸ್ ಮೇಲೆ ಪ್ರಭಾವ ಬೀರುತ್ತದೆ. ಅವನ್ನು ಸ್ವಚ್ಛಗೊಳಿಸಲು ಟೂಥ್ ಬ್ರಶ್ ಉಪಯೋಗಿಸಿ.
ಒಂದು ವೇಳೆ ವೋಲ್ಟೇಜ್ ಕಡಿಮೆ ಇದ್ದರೆ ಮಿಕ್ಸಿ ಉಪಯೋಗಿಸಬೇಡಿ. ಇಲ್ಲದಿದ್ದರೆ ಅದರ ಮೋಟರ್ ಹಾಳಾಗುತ್ತದೆ.
ಹ್ಯಾಂಡ್ ಬ್ಲೆಂಡರ್
ಹ್ಯಾಂಡ್ ಬ್ಲೆಂಡರ್ ಉಪಯೋಗಿಸುವಾಗ ನೆಲದ ಮೇಲಿಡಬೇಕಾದರೆ ನೆಲ ಒದ್ದೆಯಾಗಿರಬಾರದು.
ಹ್ಯಾಂಡ್ ಬ್ಲೆಂಡರ್‌ನಿಂದ ಈರುಳ್ಳಿ ಅಥವಾ ಟೊಮೇಟೊ ರುಬ್ಬುವುದಾದರೆ ಅವನ್ನು ಇಡಿಯಾಗಿ ರುಬ್ಬುವ ಬದಲು ಸಣ್ಣ ತುಂಡುಗಳಾಗಿ ಕತ್ತರಿಸಿ. ಆಗ ಸುಲಭವಾಗಿ ರುಬ್ಬಬಹುದು.
ಬ್ಲೆಂಡರ್ ಸ್ವಚ್ಛಗೊಳಿಸುವಾಗ ಅದರ ಮೋಟರ್‌ನಲ್ಲಿ ನೀರು ಹೋಗಬಾರದು.
ಬ್ಲೆಂಡರ್ ಉಪಯೋಗಿಸಿದ ಕೂಡಲೇ ಸ್ವಚ್ಛಗೊಳಿಸಿ. ಇಲ್ಲದಿದ್ದರೆ ಒಡೆದು ಬೀಳುವ ಅಪಾಯವಿರುತ್ತದೆ. ಜೊತೆಗೆ ಒಳಗೆಲ್ಲಾ ಅಂಟಂಟಾಗಿದ್ದು ನಂತರ ಸ್ವಚ್ಛಗೊಳಿಸುವುದು ಕಷ್ಟ. ಕೆಲವು ಬ್ಲೆಂಡರ್‌ಗಳಲ್ಲಿ ಬ್ಲೇಡುಗಳನ್ನು ಬದಲಿಸುವ ಸೌಲಭ್ಯವಿರುತ್ತದೆ. ಅದನ್ನು ಎಚ್ಚರಿಕೆಯಿಂದ ಮಾಡಬೇಕು. ಬ್ಲೆಂಡ್ ಮಾಡುವ ವಸ್ತುವಿಗೆ ತಕ್ಕಂತೆಯೇ ಬ್ಲೇಡ್ ಉಪಯೋಗಿಸಿ. ತಪ್ಪು ಬ್ಲೇಡ್ ಉಪಯೋಗಿಸಿದರೆ ಬ್ಲೆಂಡರ್ ಹಾಳಾಗುತ್ತದೆ.
ಬ್ಯಾಟರಿಯಿಂದ ಚಲಿಸುವ ಬ್ಲೆಂಡರ್‌ಗಳನ್ನು ಉಪಯೋಗಿಸದಿರುವಾಗ ಬ್ಯಾಟರಿ ತೆಗೆದಿಡಿ.
ಕರೆಂಟ್‌ನಿಂದ ಚಲಿಸುವ ಬ್ಲೆಂಡರ್‌ನ ಪ್ಲಗ್‌ನ್ನು ತೆಗೆದಿಡಿ.
ಎಲೆಕ್ಟ್ರಾನಿಕ್ ಚಿಮಣಿ
ಒಮ್ಮೊಮ್ಮೆ ಅಡುಗೆಗೆ ಒಗ್ಗರಣೆ ಹಾಕುವಾಗ ಮನೆಯವರೆಲ್ಲಾ ಕೆಮ್ಮತೊಡಗುತ್ತಾರೆ. ಮಸಾಲೆ ಒಗ್ಗರಣೆಯ ವಾಸನೆ ಮೂಗಿನಲ್ಲಿ ಸೇರುತ್ತದೆ. ತರಕಾರಿ ಸೀದು ಹೋದರೆ ಅಥವಾ ಚಪಾತಿ, ಪರೋಟಾ ಬೇಯಿಸುವಾಗ ಬರುವ ಹೊಗೆ ಇಡೀ ಮನೆಯಲ್ಲಿ ಸಫೋಕೇಶನ್ ಉಂಟು ಮಾಡುತ್ತದೆ. ಆದ್ದರಿಂದ ಕಿಚನ್‌ನಲ್ಲಿ ವೆಂಟಿಲೇಶನ್‌ಗಾಗಿ ಚಿಮಣಿ ಅಳವಡಿಸಬಹುದು. ಎಲೆಕ್ಟ್ರಾನಿಕ್ ಚಿಮಣಿ ನಿಮ್ಮ ಅಡುಗೆಮನೆಯ ಹೊಗೆ ಮತ್ತು ದುರ್ಗಂಧವನ್ನು ಹೊರಹಾಕುತ್ತದೆ ಹಾಗೂ ಹೊಗೆ ಗೋಡೆಗಳ ಮೇಲೆ ಅಂಟಿಕೊಳ್ಳುವುದನ್ನು ತಡೆಯುತ್ತದೆ. ಅದರಿಂದ ಗೋಡೆಗಳು ಹಾಗೂ ಟೈಲ್ಸ್ ಕೊಳೆಯಲಾಗುವುದಿಲ್ಲ.
ಚಿಮಣಿ ಅಳವಡಿಸುವಾಗ ನಿಮ್ಮ ಅಡುಗೆಮನೆಗೆ ಯಾವ ರೀತಿಯ ಚಿಮಣಿ ಅಗತ್ಯವೆಂದು ತಿಳಿದುಕೊಳ್ಳಬೇಕು. ಅಡುಗೆಮನೆ ಎಷ್ಟು ದೊಡ್ಡದು, ಸ್ಟವ್ ಎಷ್ಟು ದೊಡ್ಡದು ಎಂದು ನೋಡಬೇಕು.
ನಿಮ್ಮ ಗ್ಯಾಸ್ ಸ್ಟವ್ ಮೇಲೆ ಪೂರ್ತಿಯಾಗಿ ಫಿಟ್ ಆಗುವ ಚಿಮಣಿಯೇ ಸರಿಯಾಗಿರುತ್ತದೆ. ಅದು ಗ್ಯಾಸ್ ಸ್ಟವ್ ನಿಂದ 2 ಅಡಿ ಎತ್ತರದಲ್ಲಿರಬೇಕು. ಆಗಲೇ ಅದು ಹೊಗೆ ಇತ್ಯಾದಿಗಳನ್ನು ತನ್ನತ್ತ ಎಳೆದುಕೊಳ್ಳುತ್ತದೆ.
ಯಾವುದೇ ಚಿಮಣಿಯಲ್ಲಿ ಅದರ ಏರ್‌ಸಕ್ಷನ್ ಪವರ್ ಅತಿ ಮುಖ್ಯ. ಅದು ಹೆಚ್ಚು ಇದ್ದಷ್ಟೂ ಹೆಚ್ಚು ಹೊಗೆಯನ್ನು ಆಚೆ ಕಳಿಸುತ್ತದೆ.
ಮಾರುಕಟ್ಟೆಯಲ್ಲಿರುವ ಅನೇಕ ರೀತಿಯ ಚಿಮಣಿಗಳು ಮ್ಯಾನ್ಯುಯಲ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ 2 ರಿಂದ 4 ಎಕ್ಸಾಸ್ಟ್ ಫ್ಯಾನ್‌ಗಳನ್ನು ಅಳಡಿಸಿರುತ್ತಾರೆ. ಅವು ನಿಮ್ಮ ಅಡುಗೆಮನೆಯಲ್ಲಿ ಹರಡಿರುವ ಹೊಗೆಯನ್ನು ಹೊರಹಾಕುತ್ತವೆ. ಈ ಚಿಮಣಿಗಳನ್ನು ಸ್ವಚ್ಛಗೊಳಿಸುವುದು ಅಗತ್ಯ. ನೀವು ಚಿಮಣಿಯನ್ನು ರೆಗ್ಯುಲರ್ ಆಗಿ ಉಪಯೋಗಿಸುತ್ತಿದ್ದು, ಅದನ್ನು ಸ್ವಚ್ಛಗೊಳಿಸದಿದ್ದರೆ ಅಡುಗೆಯ ಮೇಲೆ ಪ್ರಭಾವ ಬೀರುತ್ತದೆ. ಚಿಮಣಿ ಗ್ಯಾಸ್ ಸ್ಟವ್ ಮೇಲೆ ಇದ್ದು ಅದನ್ನು ಸ್ವಚ್ಛಗೊಳಿಸದಿದ್ದರೆ, ಅದಕ್ಕೆ ಅಂಟಿಕೊಂಡಿರುವ ಡಸ್ಟ್ ಸ್ಟವ್ ಬಿಸಿಗೆ ಕರಗಿ ನೀವು ಒಲೆ ಮೇಲಿಟ್ಟಿರುವ ಪಲ್ಯ, ಸಾಂಬಾರ್ ಇತ್ಯಾದಿಗಳ ಮೇಲೆ ಬೀಳುತ್ತದೆ.
ಎಲೆಕ್ಟ್ರಾನಿಕ್ ಚಿಮಣಿಯ ಜೊತೆಗೆ ಕೊಟ್ಟಿರುವ ಬುಕ್ ಲೆಟ್‌ನ ಅನುಸಾರ ಚಿಮಣಿಯನ್ನು ಸ್ವಚ್ಛಗೊಳಿಸಿ. ಸ್ಪಂಜಿಗೆ ಸೋಪ್ ಹಾಕಿಕೊಂಡು ಬಿಸಿನೀರು ಬೆರೆಸಿ ಚಿಮಣಿಯ ಜಾಲರದಲ್ಲಿ ಜಮೆಯಾಗಿರುವ ಅಂಟನ್ನು ಸ್ವಚ್ಛಗೊಳಿಸಿ.
ಚಿಮಣಿಯ ಮುಂದೆ ಸ್ಟೀಲ್‌ನ ಜಾಲರ ಇರುತ್ತದೆ. ಅದನ್ನು ತೆಗೆಯುವುದು ಸುಲಭ. ತಿಂಗಳಿಗೊಂದು ಬಾರಿ ಅದನ್ನು ತೆಗೆದು ಸ್ವಚ್ಛಗೊಳಿಸಿ. ಉಗುರು ಬೆಚ್ಚಗಿನ ನೀರಿನಲ್ಲಿ ಡಿಟರ್ಜೆಂಟ್ ಹಾಕಿ ನೈಲಾನ್ ಬ್ರಶ್‌ನಿಂದ ಸ್ವಚ್ಛಗೊಳಿಸಿ.
ಚಿಮಣಿಯಲ್ಲಿ ಫಿಲ್ಟರ್‌ಗಳಿರುತ್ತವೆ. ಅಲ್ಲಿಯೇ ಧೂಳು ಅಂಟಿಕೊಂಡಿರುತ್ತದೆ. ಆದ್ದರಿಂದ ಅವನ್ನು ಬದಲಿಸುತ್ತಿರಿ.
ಸ್ವಚ್ಛತೆಯನ್ನು ಪ್ರತಿ ತಿಂಗಳೂ ಮಾಡಬೇಕು. ಅದು ನೀವು ಕಿಚನ್‌ನಲ್ಲಿ ಎಷ್ಟು ಕಾಲ ಹುರಿಯುವ ಕರಿಯುವ ಕೆಲಸ ಮಾಡುತ್ತೀರೆಂಬುದನ್ನು ಅವಲಂಬಿಸಿದೆ.
ಕೆಲವು ಚಿಮಣಿಗಳಲ್ಲಿ ಒಂದು ನಾಝೆಲ್ ಮೂಲಕ ಕೊಂಚ ಚಿಮಣಿ ಎಣ್ಣೆ ಹಾಕಿ ಸ್ವಚ್ಛಗೊಳಿಸಬಹುದು. ಅದನ್ನು ಬಿಚ್ಚಿ ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಇವು ತಮ್ಮ ಸ್ವಚ್ಛತೆಯನ್ನು ತಾವೇ ಮಾಡಿಕೊಳ್ಳುತ್ತವೆ.
– ಪ್ರೇಮಲತಾ ರಾವ್