ಆ್ಯಂಡಿ ಇನ್ ಸಂಕಟ
ಫ್ಯಾಷನ್ ಲೋಕದಲ್ಲಿ ತನ್ನದೇ ಆದ ಛಾಪನ್ನು ಒತ್ತಿರುವ ಐಂದ್ರಿತಾ ರೈ ಗ್ಲಾಮರ್ ಪತ್ರಿಕೆಗಳಲ್ಲಿ ಆಗಾಗ ಮಿಂಚುತ್ತಲೇ ಇರುತ್ತಾಳೆ. ಐಂದ್ರಿತಾ ತನ್ನ ಅಭಿಮಾನಿಗಳನ್ನು ತುಂಬಾ ಇಷ್ಟಪಡೋದ್ರಿಂದ ಟ್ವಿಟರ್ ಮೂಲಕ ಎಲ್ಲವನ್ನೂ ಹಂಚಿಕೊಳ್ಳುತ್ತಾಳೆ. ಇತ್ತೀಚೆಗೆ ಐಂದ್ರಿತಾ ಮನೆಯ ಕೆಲಸದ ಹುಡುಗ ನಾಯಿಗಳನ್ನು ಹೊರಗಡೆ ಸುತ್ತಾಡಿಸಿ ಬರುವಾಗ ಮನೆಯ ಬಳಿಯಿದ್ದ ನೇರಳೆ ಮರ ಹತ್ತಿ ಹಣ್ಣು ಕೀಳಲು ಹೋಗಿ ಮೇಲಿಂದ ಧೊಪ್ಪೆಂದು ಕೆಳಗೆ ಬಿದ್ದು ತಲೆ ಒಡೆದುಕೊಂಡು, ಪಾಪ ಸತ್ತೇ ಹೋದ. ನೇರಳೆ ಹಣ್ಣು ಬಯಸಿದ್ದು ಯಾರು? ಆ ಹುಡುಗ (ನಂದ)ನನ್ನು ಹಣ್ಣು ಕೀಳುವುದಕ್ಕೆ ಪ್ರೇರೇಪಿಸಿದ್ದು ಯಾರು ಎಂಬುದಕ್ಕೆ, ಐಂದ್ರಿತಾಳಿಗೆ ಹಣ್ಣು ತಿನ್ನುವ ಆಸೆಯಾಯ್ತು. ನಂದಂಗೆ ಹೇಳಿ ಹಣ್ಣು ಕಿತ್ತುಕೊಡು ಅಂದಳಂತೆ…. ಎಂದೆಲ್ಲ ಅಂತೆ ಕಂತೆ ಸುದ್ದಿ ಹರಿದಾಡಿಸಿತು. ಆದರೆ ಆಕೆಯ ಆಪ್ತ ಸ್ನೇಹಿತೆಯರು ಇದನ್ನೆಲ್ಲ ಕೇಳುವಾಗ ಐಂದ್ರಿತಾ ಇಲ್ಲೆಲ್ಲಿದ್ದಳು? ಯೂರೋಪ್ ಟೂರ್‌ಗೆ ಹೋಗಿದ್ದಾಳಲ್ಲ ಅಂತ ಹೇಳಿದಾಗಲೇ ಸತ್ಯ ಗೊತ್ತಾಗಿದ್ದು. ಒಟ್ಟಿನಲ್ಲಿ ನೇರಳೆ ಹಣ್ಣು ಕೀಳಲು ಹೋದ ನಂದ ತೀರಿಹೋದ. ಐಂದ್ರಿತಾಳಿಗೂ ಈ ಸುದ್ದಿ ಆಘಾತ ತಂದಿತು.
ಕನ್ನಡದ ಹೆಣ್ಣು ನಮ್ಮ ರಮ್ಯಾ
ಕನ್ನಡ ಸಿಕ್ಕಾಪಟ್ಟೆ ಫೇಮಸ್. ಕನ್ನಡದ ಬಗ್ಗೆ ಪ್ರೀತಿ ಇದ್ದು ಮಾತನಾಡುವಾಗ ಇಂಗ್ಲೀಷ್ ಓವರ್ ಟೇಕ್ ತಗೊಂಡು ಬರುತ್ತೆ. ರಮ್ಯಾ ಆಗಾಗ್ಗೆ ಉತ್ತರ ಭಾರತದವರು ಕನ್ನಡವನ್ನು ಸರಿಯಾಗಿ ಸ್ಪಷ್ಟವಾಗಿ ಉಚ್ಚರಿಸುವುದಿಲ್ಲ ಎಂದು ಟ್ವೀಟ್ ಮಾಡುತ್ತಾಳೆ. ಕನ್ನಡ್ ಅಲ್ಲ ಕನ್ನಡ ಎಂದು ಹೇಳಿ ಎನ್ನುತ್ತಾ ಅವರನ್ನು ಎಚ್ಚರಿಸುವ ರಮ್ಯಾ, ಮಂಡ್ಯವನ್ನು ಒಂದೊಂದ್ಸಲ ಮಾಂಡ್ಯ ಎಂದು ಕರೆಯುತ್ತಾಳೆ ಎಂಬ ಕಂಪ್ಲೇಂಟ್ ಇದೆ. ಆದರೆ ರಮ್ಯಾ ಮಾತ್ರ ಮಂಡ್ಯವನ್ನು ತಾನೆಂದೂ ಮಾಂಡ್ಯ ಎಂದು ಹೆಸರಿಸಿಲ್ಲ, ಬೇಕಾದರೆ ಮಂಡ್ಯದ ಜನರನ್ನೇ ಕೇಳಿ ನೋಡಿ ಎನ್ನುತ್ತಾಳೆ. ಇತ್ತೀಚೆಗೆ ರಮ್ಯಾ ಕನ್ನಡವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಂತಿದೆ. ತನ್ನ ಪಾತ್ರಗಳಿಗೆ ಸ್ವತಃ ತಾನೇ ಡಬ್ ಮಾಡುತ್ತಾಳೆ. `ಪ್ರಾರಂಭದಲ್ಲಿ ನನ್ನ ವಾಯ್ಸ್ ಸೂಟ್ ಆಗೋದಿಲ್ಲ ಅಂತ ಬೇರೆಯವರಿಂದ ಡಬ್ ಮಾಡಿಸ್ತಿದ್ರು. ಆದರೆ ಅದ್ಯಾಕೋ ನನಗೆ ಸರಿಹೋಗಲಿಲ್ಲ. ನನ್ನ ಅಭಿನಯಕ್ಕೆ ನನ್ನ ಧ್ವನಿಯೇ ಹೆಚ್ಚು ಸೂಟ್ ಆಗುತ್ತೆ. ರಿಯಲ್ಲಾಗಿ ಕಾಣುತ್ತೆ,’ ಎಂದು ಡಬ್ಬಿಂಗ್ ಮಾಡುವುದರಲ್ಲಿ ಈಗ ಪ್ರವೀಣೆಯಾಗುತ್ತಿದ್ದಾಳೆ ರಮ್ಯಾ.
ಹಾರರ್ ಥ್ರಿಲ್ಲರ್‌ನಲ್ಲಿ ಪ್ರಿಯಾಂಕಾ
ಪ್ರಿಯಾಂಕಾ ಉಪೇಂದ್ರ ಯಾವತ್ತೂ ಸುಮ್ಮನೆ ಕುಳಿತರಲ್ಲ. ಏನಾದರೊಂದು ಮಾಡುತ್ತಲೇ ಇರುತ್ತಾರೆ. ಬಂಗಾಳಿ ಚಿತ್ರದಲ್ಲಿ ನಟಿಸುತ್ತಾರೆ. ಕನ್ನಡದಲ್ಲೂ ತಮಗಿಷ್ಟವಾದ ಪಾತ್ರವಿದ್ದರೆ ನಿರ್ವಹಿಸುತ್ತಾರೆ. ಇದೆಲ್ಲದರ ಜೊತೆಗೆ ಪತಿ ಉಪೇಂದ್ರರ ಸಿನಿಮಾ ನಿರ್ಮಾಣ ಮಾಡುವುದರತ್ತ ಉತ್ಸಾಹ ತೋರುತ್ತಾರೆ. `ಉಪ್ಪಿ-2′ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಪ್ರಿಯಾಂಕಾ ಉಪೇಂದ್ರರಿಗಷ್ಟೇ ಅಲ್ಲ, ನಾಯಕಿಯರಿಗೂ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಉಪ್ಪಿ ಚಿತ್ರವೊಂದ ಮೇಲೆ ಅದೊಂದು ದುಬಾರಿ ಅಫೇರ್ ಎನ್ನುತ್ತಾರೆ ಪ್ರಿಯಾಂಕಾ. ನೂರು ದಿನಗಳ ಚಿತ್ರೀಕರಣ `ಉಪ್ಪಿ-2′ ಚಿತ್ರಕ್ಕಿದೆ. ಪಾರೂಲ್ ಯಾದವ್ ಜೊತೆ ಮತ್ತೊಬ್ಬ ರಷ್ಯನ್ ನಾಯಕಿ ಈ ಚಿತ್ರದಲ್ಲಿದ್ದಾಳೆ. ಪ್ರಿಯಾಂಕಾ ನಿರ್ಮಾಪಕಿಯಾಗುವುದರ ಜೊತೆಗೆ ಇತ್ತೀಚೆಗಷ್ಟೇ ನಾಯಕಿ ಪ್ರಧಾನ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಹಾರರ್ ಥ್ರಿಲ್ಲರ್ ಸಬ್ಜೆಕ್ಟ್ ಇವರು ಹೆಸರಿಡದ ಈ ಹೊಸ ಚಿತ್ರದಲ್ಲಿ ಪ್ರಿಯಾಂಕಾ ಪ್ರಮುಖ ಭೂಮಿಕೆ ವಹಿಸಲಿದ್ದಾರೆ. ಸಾಮಾನ್ಯವಾಗಿ ಯಂಗ್ ಹೀರೋಯಿನ್‌ಗಳಿಗೆ ಇಂಥ ಅವಕಾಶ ಸಿಗುತ್ತಿರುವಾಗ ಪ್ರಿಯಾಂಕಾ ತಮಗೆ ಇಂಥ ಚಾನ್ಸ್ ಸಿಕ್ಕಿರೋದು ನಿಜಕ್ಕೂ ಚಾಲೆಂಜಿಂಗ್ ಎನ್ನುತ್ತಾರೆ. ನಾಯಕಿ ಪ್ರಧಾನ ಚಿತ್ರವೊಂದರಲ್ಲಿ ನಟಿಸುತ್ತಿರುವುದು ಇದೇ ಮೊದಲ ಬಾರಿ ಅನಿಸುತ್ತೆ.
ಧ್ಯಾನ್ ಈಸ್ ಬ್ಯಾಕ್
ಕಾರ್ ಕಾರ್….. ಎಲ್ನೋಡಿ ಕಾರ್‌ಎಂದು ಹಾಡುತ್ತ ಸ್ಯಾಂಡಲ್ ವುಡ್‌ನಲ್ಲಿ ಮಿಂಚಿದ ಧ್ಯಾನ್ ಚಾಕ್ಲೇಟ್ ಹೀರೋ ಆಗಿ ಸಾಕಷ್ಟು ಮೆರೆದಿದ್ದ. `ಮೊನಾಲಿಸಾ,’ `ಅಮೃತಧಾರೆ’ ಚಿತ್ರಗಳಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದ ಧ್ಯಾನ್ ಬಾಲಿವುಡ್ ಮೇಲಿನ ಆಸೆಯಿಂದ ಕನ್ನಡ ಚಿತ್ರಗಳತ್ತ ತಿರುಗಿ ನೋಡಿರಲಿಲ್ಲ. ಕರಣ್ ಜೋಹರ್ ಬ್ಯಾನರಿನ `ಐ ಹೇಟ್ ಲವ್ ಸ್ಟೋರೀಸ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಧ್ಯಾನ್ ಅಲ್ಲಿ ಸಮೀರ್ ದತ್ತಾನಿ ಅಂತಾನೆ ಗುರುತಿಸಿಕೊಂಡಿದ್ದ. ಬಾಲಿವುಡ್‌ನಲ್ಲಿ ಬೇಕಾದಷ್ಟು ನ್ಯೂ ಕ್ರೇಜ್ ಹೀರೋಗಳಿರೋದ್ರಿಂದ ಧ್ಯಾನ್ ಹಳೇ ಗಂಡನ ಪಾದವೇ ಗತಿ ಅಂತ ಕನ್ನಡಕ್ಕೆ ಮರಳಿ ಬಂದಿದ್ದಾನೆ. `ಮಿಸ್ಟರ್ ಅಂಡ್‌ಮಿಸೆಸ್ ರಾಮಾಚಾರಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಸರಿಯಾದ ಸಮಯಕ್ಕೆ ನಾನು ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದೇನೆ. ನನ್ನದು ಗೆಸ್ಟ್ ರೋಲ್ ಆದರೂ ಕಥೆಗೆ ತಿರುವು ಕೊಡುವಂಥದ್ದು. ಸಾಕಷ್ಟು ಚಿತ್ರಗಳ ಆಫರ್ಸ್ ಬರುತ್ತಿವೆ. ಕನ್ನಡಿಗರು ನನ್ನನ್ನು ಮರೆತಿಲ್ಲ. ಹಾಗೆಯೇ ಬೆಂಗಳೂರು ಕೂಡಾ ಎಂದು ಧ್ಯಾನ್ ಮುದ್ದು ಮುದ್ದಾಗಿ ಮಾತನಾಡುತ್ತಾನೆ.
ಮುಂಗಾರು ಮಳೆ ಪಾರ್ಟ್-2
ಸ್ಯಾಂಡಲ್ ವುಡ್‌ನ ಗ್ರಾಮರ್‌ನ್ನೇ ಬದಲಾಯಿಸಿದ ಚಿತ್ರ `ಮುಂಗಾರು ಮಳೆ!’ ವರ್ಷಾನುಗಟ್ಟಲೆ ಚಿತ್ರ ಯಶಸ್ವಿಯಾಗಿ ಓಡಿದ್ದಲ್ಲದೆ, ಗಣೇಶನನ್ನು ಗೋಲ್ಡನ್ ಸ್ಟಾರ್ ಆಗಿ ಮಾಡಿತು. `ಮುಂಗಾರು ಮಳೆ’ ಇಂದಿಗೂ ಜನ ಇಷ್ಟಪಟ್ಟು ನೋಡುತ್ತಾರೆ. ಕನ್ನಡ ಬಾರದವರು ಸಹ ಈ ಚಿತ್ರದ ಹಾಡುಗಳನ್ನು ಕೇಳುವ ಕ್ರೇಜ್ ಹುಟ್ಟಿಸಿಕೊಂಡಿದ್ದರು. `ಮುಂಗಾರು ಮಳೆ ಪಾರ್ಟ್-2′ ಚಿತ್ರವನ್ನು ಮಾಡಬೇಕೆಂಬ ಆಸೆ ಎಲ್ಲರಲ್ಲೂ ಇತ್ತು. ಭಟ್ಟರೇ ಈ ಚಿತ್ರವನ್ನೂ ಕೈಗೆತ್ತಿಕೊಳ್ಳುತ್ತಾರೆಂಬ ಸುದ್ದಿ ಇತ್ತು. ಗಣೇಶ್ ಮತ್ತು ಭಟ್ಟರ ಕಾಂಬಿನೇಶನ್ ಮತ್ತೆ ಕಾಣಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲೂ ಇತ್ತು. ಆದರೆ. `ಮುಂಗಾರು ಮಳೆ ಪಾರ್ಟ್-2′ ಚಿತ್ರವನ್ನು ಇದೀಗ ಶಶಾಂಕ್ ನಿರ್ದೇಶಿಸುತ್ತಿದ್ದಾರೆ. ಗಣೇಶ್ ನಾಯಕತ್ವದ ಈ ಚಿತ್ರ ತಮಗೆ ಸಿಕ್ಕಿರೋದು ಶಶಾಂಕ್‌ಗೆ ಹೆಮ್ಮೆಯ ವಿಷಯ ಎನ್ನುವಂತಾಗಿದೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರು ಶಶಾಂಕ್ ಅವರಿಗೂ ಇಂಥ ಸೀಕ್ವೆಲ್‌ಗಳನ್ನು ಮಾಡುವ ಆಸಕ್ತಿ ಇದೆಯಂತೆ. ಬಾಲಿವುಡ್‌ನಲ್ಲಿ ಈಗಾಗಲೇ ಅನೇಕ ನಿರ್ದೇಶಕರು ಇಂಥ ಪ್ರಯೋಗ ಮಾಡಿ ಗೆದ್ದಿದ್ದಾರೆ. `ಮುಂಗಾರು ಮಳೆ ಪಾರ್ಟ್-2′ ಶಶಾಂಕ್ ನಿರ್ದೇಶನದಡಿ ಹೇಗೆ ಮೂಡಿ ಬರಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ.
ಪ್ರೇಮ್ ಜ್ಯೋತಿ ಲವ್ಲಿ ಸ್ಟಾರ್
ಪ್ರೇಮ್ ಈ ವರ್ಷ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. `ಚಾರ್ ಮಿನಾರ್’ ಚಿತ್ರಕ್ಕಾಗಿ ಫಿಲಂಫೇರ್ ಪ್ರಶಸ್ತಿ ಕೂಡಾ ಸಿಕ್ಕಿತು. ಈ ಚಿತ್ರದಿಂದ ಪುನರ್ಜನ್ಮ ಪಡೆದ ಪ್ರೇಮ್ ಈಗ `ಫೇರ್ ಅಂಡ್ ಲವ್ಲಿ’ ಚಿತ್ರದಲ್ಲೂ ಮಿಂಚಲಿದ್ದಾರೆ. ಅಮೂಲ್ಯಾ ಜೊತೆ `ಮಳೆ’ ಚಿತ್ರ ಸಾಲಿನಲ್ಲಿದೆ. ಇದೆಲ್ಲದರ ಜೊತೆಗೆ ಪ್ರೇಮ್ ತಮ್ಮ ಬದುಕಿನ ಅಸಲಿ ಪ್ರೇಮಕಥೆಯನ್ನು ತೆರೆ ಮೇಲೆ ತರುವ ಎಲ್ಲ ಸಿದ್ಧತೆ ನಡೆಸಿದ್ದಾರೆ. ಪ್ರೇಮ್ ಮತ್ತು ಅವರ ಪತ್ನಿ ಜ್ಯೋತಿ ಸಿನಿಮಾರಂಗದ ಕ್ಯೂಟ್ ಜೋಡಿ ಎನಿಸಿಕೊಂಡಿದೆ. ಪ್ರೇಮ್ ಜ್ಯೋತಿ ಲವ್ ಸ್ಟೋರಿ ಕೂಡಾ ಅಷ್ಟೇ ಕುತೂಹಲ ಕೆರಳಿಸುವಂತಿದೆ. ಸಿನಿಮಾಗೆ ಬೇಕಾದ ಎಲ್ಲ ಅಂಶಗಳೂ ಇವರ ಲವ್ ಸ್ಟೋರಿಯಲ್ಲಿ ಕಂಡು ಬರುವುದರ ಜೊತೆಗೆ ನೈಜತೆಗೆ ಹೆಚ್ಚು ಹತ್ತಿರ ಅನಿಸುತ್ತೆ. ಪ್ರೇಮ್ ಸದ್ಯದಲ್ಲೇ ಈ ಚಿತ್ರದ ಬಗ್ಗೆ ಪ್ರೀತಿಯ ಸುದ್ದಿ ಕೊಡಲಿದ್ದಾರೆ. ಜ್ಯೋತಿ ಪಾತ್ರವನ್ನು ತೆರೆಯ ಮೇಲೆ ಯಾರು ನಿರ್ಹಿಸುತ್ತಾರೋ ಕಾದು ನೋಡಬೇಕು. `ಶ್ರಾವಣಿ ಸುಬ್ರಹ್ಮಣ್ಯ’ ಚಿತ್ರದ ಅಭಿನಯಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಪಡೆದುಕೊಂಡ ಅಮೂಲ್ಯಾಳ ತಾರಾ ಬದುಕು ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ. `ಗಜ ಕೇಸರಿ’ ಚಿತ್ರದಲ್ಲಿ ಗ್ಲಾಮರಸ್ಸಾಗಿ ಕಂಡ ಅಮೂಲ್ಯಾ ಇದೀಗ `ಖುಷಿ ಖುಷಿಯಾಗಿ’ ಚಿತ್ರದಲ್ಲಿ ರೂಪ ತಾಳುತ್ತಾಳಂತೆ. ಹೀರೋಗೆ ಬುದ್ಧಿ ಕಲಿಸುವ ಹಾಗೂ ರಿವೇಂಜ್ ತೆಗೆದುಕೊಳ್ಳುವಂಥ ಪಾತ್ರವಾಗಿರೋದ್ರಿಂದ ಅದಕ್ಕೆ ಖಳನಾಯಕಿಯ ಶೇಡ್ ಕೂಡಾ ಇದೆಯಂತೆ. ನಾಯಕಿಯ ಲಕ್ಷಣಗಳಿದ್ದರೂ ಖಳ ನಾಯಕಿಯ ರೂಪ ಇರುತ್ತದಂತೆ. ನಿಜ ಬದುಕಿನಲ್ಲಿ ಅಮೂಲ್ಯಾ ಕೋಪಿಷ್ಟೆಯಂತೆ. ಬಹಳ ಬೇಗ ಕೋಪ ಬರುತ್ತದಂತೆ. `ಖುಷಿ ಖುಷಿಯಾಗಿ’ ತೆಲುಗು ಚಿತ್ರದ ರೀಮೇಕಾಗಿದೆ. ಈ ಪಾತ್ರದ ಸಲುನೈಗಿ ಅಮೂಲ್ಯಾ ಪ್ರತಿನಿತ್ಯ ಕನ್ನಡಿ ಮುಂದೆ ನಿಂತು ತಯಾರಿ ನಡೆಸಿಕೊಳ್ಳುತ್ತಾಳಂತೆ. ಒಂದೇ ರೀತಿಯ ಪಾತ್ರಕ್ಕೆ ಅಂಟಿಕೊಳ್ಳುವ ಬದಲು ವೆರೈಟಿ ರೋಲ್ಸ್ ಮಾಡುವುದರಿಂದ ಅಮೂಲ್ಯಾ ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದು. ಹಿಂದಿ ನಟಿ ಕಾಜೋಲ್ ಕೂಡಾ ಜನಪ್ರಿಯ ನಾಯಕಿಯಾಗಿದ್ದಾಗ ಒಂದು ಚಿತ್ರದಲ್ಲಿ ಖಳ ನಾಯಕಿಯಾಗಿ ನಟಿಸಿ ಎಲ್ಲ ಅವಾರ್ಡ್‌ಗಳನ್ನು ಬಾಚಿಕೊಂಡಿದ್ದಳು.
ಲವ್ಲಿ ಅನು
`ಹೃದಯ ಹೃದಯ’ ದಿಂದ ಶುರುವಾಗಿ `ಪ್ರೀತಿ ಪ್ರೇಮ ಪ್ರಣಯ’ದವರೆಗೂ ಪಯಣ ಬೆಳೆಸಿ `ದಾನಮ್ಮದೇವಿ’ಯಾಗಿ ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನಪ್ರಿಯಳಾದ ಅನು ಪ್ರಭಾಕರ್ ಎರಡು ಬಾರಿ ರಾಜ್ಯ ಪ್ರಶಸ್ತಿ ಪಡೆದಂಥ ಶ್ರೇಷ್ಠ ನಟಿ. ತಾರೆಯಾದ ಮೇಲೆ ಕಾಲೇಜಿಗೆ ಗುಡ್ ಬೈ ಹೇಳುವವರೇ ಹೆಚ್ಚು. ಆದರೆ ಅನು ಬಿ.ಎ. ಪದವೀಧರಳಾಗಿ ಎಂ.ಎ. ಪರೀಕ್ಷೆ ಕಟ್ಟಿ ಒಳ್ಳೆ ಅಂಕ ಪಡೆದು ಮುಂದೆಯೂ ತನ್ನ ವಿದ್ಯಾಭ್ಯಾಸದತ್ತ ಆಸಕ್ತಿ ವಹಿಸುತ್ತಿದ್ದಾಳೆ. ಅವನು ಪ್ರಭಾಕರ್ ಸಿನಿಮಾರಂಗದಿಂದ ದೂರ ಸರಿದರೇ ಎನ್ನುತ್ತಿರುವಾಗಲೇ `ಫೇರ್ ಅಂಡ್ ಲವ್ಲಿ’ ಚಿತ್ರದಲ್ಲಿ ಲವ್ಲಿ ಪಾತ್ರವೊಂದನ್ನು ಮಾಡಿದ್ದಾರೆ. ಈ ಚಿತ್ರವನ್ನು ತನ್ನ ರಾಖಿ ಬ್ರದರ್ ರಘುರಾಮ್ ಸಲುವಾಗಿ ಒಪ್ಪಿಕೊಂಡದ್ದು ಎಂದು ಹೇಳುವ ಅನು, ಈ ಮೊದಲೇ ರಘು ತನ್ನ ಮೊದಲ ನಿರ್ದೇಶನದ `ಚೆಲುವೆಯೇ ನಿನ್ನ ನೋಡಲು’ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡುವಂತೆ ಹೇಳಿದ್ದರಂತೆ. ಆ ಸಮಯದಲ್ಲಿ ಆಗಲಿಲ್ಲವಾದ್ದರಿಂದ ಎರಡನೇ ಬಾರಿ ಕರೆದಾಗ ಸಂತೋಷದಿಂದ ಒಪ್ಪಿಕೊಂಡು ಪಾತ್ರ ಮಾಡಿದೆ ಎನ್ನುತ್ತಾಳೆ ಅನು. ಮುಂದೊಂದು ದಿನ ತಾನೂ ಸಹ ನಿರ್ದೇಶಕಿಯಾಗುವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಲವ್ಲಿ ಅನುಗೆ ಆಲ್ ದಿ ಬೆಸ್ಟ್!