“ಸುಮಾ, ನಿನಗೆ ಗೊತ್ತೇ… ಶುಭಾ ಮನೆ ಬಿಟ್ಟು ಹೊರಟುಹೋಗಿದ್ದಾಳೆ…”
“ಮನೆ ಬಿಟ್ಟು ಹೊರಟುಹೋದಳೇ….? ಇದೇನು ಹೇಳ್ತಿದ್ದೀರಿ…. ಏನು ಹೇಳ್ತಿದ್ದೀರೋ ನಿಮಗೆ ಸ್ಪಷ್ಟವಾಗಿ ಗೊತ್ತು ತಾನೇ?” ಮೋಹನನ ಮಾತು ಕೇಳಿ ಸುಮಾ ಶಾಕ್ ತಗುಲಿದಂತೆ ಮೆಟ್ಟಿಬಿದ್ದಳು.
ಅಸಲಿಗೆ ಈ ವಿಷಯ ಹೊಸದಾಗಿ ತಿಳಿದದ್ದಕ್ಕಿಂತ, ಅದನ್ನು ಮೋಹನ್ ವ್ಯಂಗ್ಯವಾಗಿ ಹೇಳಿದ ರೀತಿ ಅವಳಿಗೆ ಕೆಡುಕೆನಿಸಿತು. ಅವಳು ಏನೂ ಅರಿಯದವಳಂತೆ ಪ್ರಶ್ನಿಸಿದಳು, “ಮತ್ತೆ ಮಕ್ಕಳು ಎಲ್ಲಿದ್ದಾರಂತೆ?”
“ಜೊತೆಗೇ ಕರೆದುಕೊಂಡು ಹೋಗಿದ್ದಾಳಂತೆ. ವಿಶ್ವನಾಥ ಬಹಳ ದುಃಖಗೊಂಡಿದ್ದಾನೆ…… ನಾನು ಈಗ ತಾನೇ ಅವನನ್ನು ಭೇಟಿಯಾಗಿದ್ದೆ.”
“ಛೇ…. ಹೀಗೆ ಆಗಬಾರದಿತ್ತು.”
ವಿಷಯ ಏನೆಂಬುದು ಸುಮಾಳಿಗೆ ಸ್ಪಷ್ಟವಾಗಿ ಅರಿವಾಗಿತ್ತು. ಮೋಹನ್ ಅವಳ ಮಾತಿನಿಂದ ಇನ್ನೇನೋ ವಿಷಯದ ಸುಳಿವು ಪಡೆದವನಂತೆ, “ಅಂದ್ರೆ….. ವಿಷಯ ಬೇರೇನೋ ಇರಬೇಕು ಅಂತೀಯಾ?”
“ಇಲ್ಲ…..ಅಂಥ ವಿಶೇಷ ಏನೂ ಇಲ್ಲ. ಇರಿ, ನಾನು ಕಾಫಿ ಮಾಡಿ ತರ್ತೀನಿ,” ಎನ್ನುತ್ತಾ ಒಳಹೊರಟಳು.
ಮೋಹನ್ಗೆ ಯಾವ ವಿಷಯವನ್ನೂ ತಿಳಿಸದೆ ಸುಮಾ ಅಡುಗೆಮನೆಯಲ್ಲಿ ಬಿಝಿ ಆದಳು. ಶುಭಾಳ ಪ್ರಾಮಾಣಿಕತೆ, ಒಳ್ಳೆಯ ಮನಸ್ಸು, ಸನ್ನಡತೆಗಳೇ ಅವಳಿಗೆ ಮುಳುವಾಯಿತಲ್ಲ ಎಂದು ನಿಡುಸುಯ್ದಳು. ಮದುವೆಯಾಗಿ ಇಷ್ಟು ವರ್ಷಗಳಾದರೂ ಶುಭಾ ಗಂಡ ವಿಶ್ವನಾಥನ ದುರ್ಗುಣಗಳನ್ನು ಸರಿಯಾಗಿ ಗುರುತಿಸದೆ ಹೋದಳಲ್ಲ…. ಅವನ ದುಷ್ಕೃತ್ಯಗಳನ್ನೆಲ್ಲ ಸಹಿಸುತ್ತಾ ಹೋದಳು, ಯಾರಿಗೂ ಏನೂ ಹೇಳದೆ ನೋವನ್ನೆಲ್ಲ ತಾನೇ ನುಂಗಿಕೊಂಡಳು, ಎಷ್ಟು ವೇದನೆ ಪಟ್ಟಳೋ ಏನೋ…. ಇದೇ ಅವಳು ಮಾಡಿದ ದೊಡ್ಡ ತಪ್ಪು. ಅವಳ ಮತ್ತೊಂದು ತಪ್ಪು ಎಂದರೆ, ವಿಶ್ವನಾಥನಿಂದ ಶುಭಾ ಏನನ್ನೂ ಮುಚ್ಚಿಡುತ್ತಿರಲಿಲ್ಲ. ಆದರೆ ವಿಶ್ವನಾಥ್ಅವಳನ್ನು ಸದಾ ಕತ್ತಲೆಯಲ್ಲೇ ಇರಿಸಿಬಿಟ್ಟಿದ್ದ.
ಸುಮಾಳ ಪತಿ ಮೋಹನ್ ಸುಸ್ವಭಾವದ, ಮಿತಭಾಷಿ ವ್ಯಕ್ತಿ. ಆದರೆ ಸುಮಾ ಸದಾ ವಟವಟ ಎನ್ನುತ್ತಾ ಕಲ್ಲನ್ನೂ ಮಾತನಾಡಿಸುವವಳು. ಮನೆಯಿಂದ ಅವಳ ಆಫೀಸ್ ದೂರವಿದ್ದ ಕಾರಣ, 2 ಬಸ್ ಬದಲಾಯಿಸಿ ಹೋಗುತ್ತಿದ್ದಳು. ಹಾಯ್, ಹಲೋ ಮಟ್ಟದ ಪರಿಚಿತರನ್ನೂ ಬಾಯಿ ತುಂಬಾ ಮಾತನಾಡಿಸುತ್ತಿದ್ದಳು.
ಅಂಥ ಎಷ್ಟೋ ಪರಿಚಿತರನ್ನೇ ಗೆಳತಿಯರನ್ನಾಗಿಸಿಕೊಂಡು ಫೋನ್ನಲ್ಲಿ ಕಷ್ಟಸುಖ ವಿಚಾರಿಸುತ್ತಿದ್ದಳು. ಆದರೆ ಮೋಹನನಿಗೆ ಇದು ಸಹ್ಯ ಆಗುತ್ತಿರಲಿಲ್ಲ, ಅರ್ಥ ಆಗುತ್ತಿರಲಿಲ್ಲ. ಹೀಗಾಗಿ ಎಲ್ಲಾ ವಿಷಯಗಳನ್ನೂ ಅವನಿಗೆ ಹೇಳಲು ಹೋಗುತ್ತಿರಲಿಲ್ಲ.
ಅಂಥ ಒಬ್ಬರಲ್ಲಿ ಆಪ್ತ ಗೆಳತಿಯಾದ ಶುಭಾಳನ್ನು ಸುಮಾ ಬಹಳ ಹಚ್ಚಿಕೊಂಡಿದ್ದಳು. ಶುಭಾ ಇವಳ ಬಳಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದಳು. ಮೂಲತಃ ಮೃದು ಸ್ವಭಾವದ, ಕಷ್ಟಸಹಿಷ್ಣುವಾದ ಶುಭಾ, ಗಂಡನನ್ನು ಪರಮಾಪ್ತ ಸಖನೆಂದೇ ಭಾವಿಸಿದ್ದಳು. ವಿಶ್ವ ಅದಕ್ಕೆ ಯೋಗ್ಯನಲ್ಲದಿದ್ದರೂ ಅವನ ಬಳಿ ಪ್ರಾಮಾಣಿಕವಾಗಿ ತನ್ನೆಲ್ಲ ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದಳು.
“ಸುಮಾ, ನೀನು ಇನ್ನೂ ಯಾವುದೋ ಗಾಢ ಯೋಚನೆಯಲ್ಲಿ ಮುಳುಗಿದ್ದೀಯಾ?” ಅವಳಿಂದ ಕಾಫಿ ಕಪ್ ಸ್ವೀಕರಿಸುತ್ತಾ ಮೋಹನ್ ಕೇಳಿದ.
“ಮೋಹನ್, ಶುಭಾಳ ಈ ದಿಟ್ಟ ಹೆಜ್ಜೆಯನ್ನು ನಾನು ಸಪೋರ್ಟ್ ಮಾಡ್ತೀನಿ. ಹೆಣ್ಣಿನ ಕ್ಷಮಾಗುಣ, ಸಹನಶೀಲತೆಗೂ ಒಂದು ಮಿತಿ ಇರುತ್ತದೆ. ತನ್ನ ತುಟಿಗಳ ಮೇಲೆ ನಗುವಿನ ಲೇಬಲ್ ಅಂಟಿಸಿಕೊಂಡು ಅವಳು ಲೋಕದೆದುರು ತಾನು ಸುಖಿ ಎಂದು ತೋರಿಸಿಕೊಳ್ಳಬಹುದಷ್ಟೆ, ಅವಳ ಅಂತರಂಗದ ನೋವು ಅವಳೊಬ್ಬಳಿಗೆ ಮಾತ್ರ ಗೊತ್ತು. ವಿಶ್ವನ ಜೊತೆ ಒಂದು ಕ್ಷಣ ಅವಳು ಸುಖಿಯಾಗಿರಲಿಲ್ಲ ಎಂದೇ ನನಗನಿಸುತ್ತದೆ, ಎಲ್ಲವನ್ನೂ ಮೌನವಾಗಿ ಮನದಲ್ಲೇ ನುಂಗಿಕೊಳ್ಳುತ್ತಾ ಶಿಲಾಮೂರ್ತಿಯೇ ಆಗಿಹೋಗಿದ್ದಳು.”
“ಅದೇನೋ ಸರಿ, ಆದರೆ ಇಷ್ಟು ದಿನ ಧೈರ್ಯವಾಗಿ ಸಂಸಾರದ ನೊಗ ಹೊತ್ತು ಮುಂದುವರಿದಳು, ಈಗ ಇದ್ದಕ್ಕಿದ್ದಂತೆ ಗೃಹಸ್ಥ ಜೀವನವೇ ಬೇಡ ಎಂದು ಹೊರಟುಹೋದರೆ ಹೇಗೆ? ಅವಳ ತವರಿನ ಕಡೆಯ ಹಾಗೂ ಅತ್ತೆಮನೆಯ ಎರಡೂ ಕುಟುಂಬಗಳು ಕೆಟ್ಟ ಹೆಸರು ಹೊರಬೇಕಿದೆ.”
“ಅಂದ್ರೆ….. ನೀವು ಹೇಳೋದು ಶುಭಾಳ ದಿಟ್ಟ ಹೆಜ್ಜೆ ತಪ್ಪೂಂತಾನಾ? ಅವಳು ಖಂಡಿತಾ ಈ ನಿರ್ಧಾರವನ್ನು ಇಹಪರ ಯೋಚಿಸದೆ ತೆಗೆದುಕೊಂಡಿರಲಾರಳು, ಇದು ಒಂದು ದಿನದ ನಿರ್ಧಾರ ಖಂಡಿತಾ ಅಲ್ಲ, ಮನೆ ಬಿಡುವಾಗ ಅವಳ ಮಾನಸಿಕ ಸ್ಥಿತಿ ತುಂಬಾ ಹದಗೆಟ್ಟಿತ್ತು. ಅವಳನ್ನು ಫೋನಿನಲ್ಲಿ ಹಾಗೂ ಎದುರಿಗೆ ಸಂಪರ್ಕಿಸಿದಾಗಲೂ ವಿಶ್ವನಿಂದ ಎಷ್ಟು ಟಾರ್ಚರ್ಗೆ ಒಳಗಾಗಿದ್ದಳು, ಎಂತೆಂಥ ಅವಹೇಳನಕಾರಿ ಮಾತುಗಳನ್ನು ಕೇಳಬೇಕಾಯಿತೆಂದರೆ, ಅದನ್ನು ನನ್ನ ಬಳಿ ಹೇಳಿಕೊಳ್ಳಲಿಕ್ಕೂ ಅವಳಿಗಾಗಲಿಲ್ಲ. ತನಗಿಂತಲೂ ಹೆಚ್ಚಾಗಿ ಅವಳಿಗೆ ಮಕ್ಕಳ ಭವಿಷ್ಯದ್ದೇ ದೊಡ್ಡ ಚಿಂತೆಯಾಗಿತ್ತು. ಆ ಮಕ್ಕಳಿಗಾಗಿಯೇ ಅವಳು ಇಷ್ಟು ದಿನ ಇಷ್ಟೆಲ್ಲ ಅಪಮಾನ ಸಹಿಸುತ್ತಿದ್ದಳು.”
“ಅಂದರೆ…. ನಿನಗೆ ಎಲ್ಲಾ ವಿಷಯ ಗೊತ್ತಿತ್ತಾ?” ಮೋಹನ್ ಆಶ್ಚರ್ಯದಿಂದ ಕೇಳಿದ. ಅವನು ಅನ್ಯಥಾ ಭಾವಿಸಬಾರದೆಂದು, ಸುಮಾ ತಾವಿಬ್ಬರೂ ಮೊದಲಿನಿಂದಲೂ ಬಾಲ್ಯ ಸ್ನೇಹಿತೆಯರು ಎಂದು ಹೇಳಿದಳು. ಏಕೆಂದರೆ ವಿಶ್ವನಾಥ್ ಮೋಹನನಿಗೆ ಪರಿಚಿತ ಗೆಳೆಯನಾಗಿದ್ದ.
“ನೀನು ಈಗ ಕಾಫಿ ತಂದದ್ದು ಒಳ್ಳೆಯದಾಯ್ತು…… ವಿಶ್ವನ ಸ್ಥಿತಿ ನೆನೆಸಿಕೊಂಡು ತಲೆನೋವು ತರಿಸಿಕೊಂಡಿದ್ದೆ. ಅವನಿಗೆ ಬೇಕು ಎಂದರೆ ಈಗ ಒಂದು ಕಪ್ ಕಾಫಿ ಕೊಡುವವರೂ ಇಲ್ಲ.”
“ಮೋಹನ್, ಈಗಲೂ ನಿಮ್ಮ ಮನಸ್ಸು ಶುಭಾಳಿಗಾಗಿ ಮರುಗುವುದಿಲ್ಲವೇ? ಎಷ್ಟಾದರೂ ಗಂಡಸರು, ಹೀಗಾಗಿ ಈ ವಿಷಯದಲ್ಲಿ ಮೇಲೆ ಗೋಚರಿಸುವುದಷ್ಟನ್ನೇ ಸತ್ಯ ಅಂದುಕೊಳ್ಳುತ್ತೀರಿ.”
“ಹಾಗೇನೂ ಅಲ್ಲ ಬಿಡು,” ಸುಮಾಳತ್ತ ಒಂದು ಅಸಹಜ ನೋಟ ಬೀರಿ ಅವನು ಗಂಭೀರನಾಗಿಹೋದ. ಸುಮಾ ಸಹ ಗಂಭೀರ ಮೌನದ ಮೊರೆಹೊಕ್ಕಳು. ಶುಭಾ ಮನೆ ಬಿಟ್ಟು ಹೋದ ವಿಷಯ ಖಂಡಿತಾ ಸಣ್ಣದೇನಲ್ಲ. ಹೆಂಗಸರ ಮೇಲೆ ಸಂಯಮ, ಸಂಸ್ಕಾರಗಳೆಂಬ ಹೆಸರಿನಲ್ಲಿ ಹೇರಿರುವ ನಿರ್ಬಂಧನೆಗಳ ಕುರಿತು ಒಬ್ಬ ಗಂಡಸಿನ ದೃಷ್ಟಿಯಿಂದ ವಿಶ್ಲೇಷಿಸತೊಡಗಿದಳು. ಕೊನೆಗೆ ತನ್ನ ಮಾತನ್ನು ದೃಢವಾಗಿ ಒತ್ತಿಹೇಳತೊಡಗಿದಳು, “ಮೋಹನ್, ನೀವು ವಿಶ್ವನ ಕಷ್ಟಗಳನ್ನು ಈಗಷ್ಟೇ ಗಮನಿಸುತ್ತಿದ್ದೀರಿ. ಶುಭಾಳ ಗೋಳಿನ ಕಥೆಯನ್ನು ಅವಳ ಮದುವೆಯಾದ 6 ತಿಂಗಳಲ್ಲೇ ಗುರುತಿಸಿದ್ದೆ. ಅವಳ ತಂದೆ ಈ ಮದುವೆ ನಿಷ್ಕರ್ಷೆಯಲ್ಲಿ ತುಸು ಅವಸರಪಟ್ಟರೆಂದೇ ಹೇಳಬೇಕು. ತವರಿನ ಕೊನೆಯ ಮುದ್ದಿನ ಮಗಳವಳು. ಅನುಕೂಲಸ್ಥರ ಮನೆಯ ಹುಡುಗ ಸಿಕ್ಕಿದನೆಂದು ಒಂದಿಷ್ಟೂ ಯೋಚಿಸದೆ ಅವಸರದಲ್ಲಿ ಮದುವೆ ಮುಗಿಸಿದರು. ಅವಳು ಅಲ್ಲಿ ಖುಷಿಯಾಗಿದ್ದಾಳೋ ಇಲ್ಲವೋ ಒಂದೂ ವಿಚಾರಿಸಲಿಲ್ಲ.
“ಶುಭಾಳ ಮದುವೆ ಫಿಕ್ಸ್ ಆದಾಗ ಅವಳಿಗೆ ಇನ್ನೂ 20 ಸಹ ಮುಗಿದಿರಲಿಲ್ಲ. ವಿವಾಹದ ಗಂಭೀರ ಅರ್ಥ ತಿಳಿಯದ ಹುಡುಗುಬುದ್ಧಿ. ಅವಳು ತನ್ನದೇ ಕಲ್ಪನಾಲೋಕದಲ್ಲಿ ಹೇಗೋ ಹಾರಾಡಿಕೊಂಡಿದ್ದಳು…. ಅವಳಿಗೆ ತವರಿನಲ್ಲಿ ಅತಿಯಾದ ಪ್ರೀತಿ ತೋರುತ್ತಿದ್ದರು. ಅಂಥ ಉತ್ಕಟ ಪ್ರೀತಿ ನೀಡುವಂಥ ಗಂಡನೇ ಬೇಕಿದ್ದ. ನನಗಂತೂ ಈಗಲೂ ನೆನಪಿದೆ, ಅವಳು ಮದುವೆಯಾಗಿ ಮೊದಲ ಸಲ ತವರಿಗೆ ಬಂದಾಗ, ಬಂಧನದಿಂದ ಬಿಡುಗಡೆಗೊಂಡ ಖೈದಿಯಂತೆ ನಮ್ಮನ್ನು ತಬ್ಬಿ ಬಿಕ್ಕಳಿಸಿದ್ದಳು.”
“ಅದು ಸರಿ…. ತವರಿನಂತೆಯೇ ಅತ್ತೆಮನೆಯಲ್ಲಿರಲು ಸಾಧ್ಯವೇ? ಅಲ್ಲಿನ ರೀತಿನೀತಿಗಳೇ ಬೇರೆ ಇರುತ್ತದಲ್ಲವೇ? ಈಗ ನೀನು ಮಾತ್ರ ಅತ್ತೆಮನೆಗೆ ಹೊಂದಿಕೊಳ್ಳಲಿಲ್ಲವೇ?”
ಮೋಹನ್ ಈ ರೀತಿ ಹೇಳಿದ್ದರಿಂದ ಸುಮಾ ಆಗ ವಿಶ್ವನ ಕುರಿತಾದ ಕೆಟ್ಟ ಸಮಾಚಾರದ ಎಲ್ಲಾ ವಿವರಗಳನ್ನೂ ನೀಡಲೇಬೇಕಾಯಿತು. ಉದಾತ್ತ ವ್ಯಕ್ತಿತ್ವದ ಮುಖವಾಡ ತೊಟ್ಟಿರುವ ವಿಶ್ವನ ನಿಜರೂಪವನ್ನು ಮೋಹನ್ ಮತ್ತು ಅವನ ಮೂಲಕ ಇತರರೂ ತಿಳಿದುಕೊಳ್ಳುವುದೇ ಒಳ್ಳೆಯದೆಂದು ಭಾವಿಸಿದಳು. ಆಗ ಮಾತ್ರ ವಿಶ್ವನ ನಿಜ ಬಂಡವಾಳ ಬಯಲಾಗುತ್ತದೆ ಎನಿಸಿತು. ಮಾತನ್ನು ಮುಂದುವರಿಸುತ್ತಾ ಮೋಹನ್ ಇದನ್ನು ಯಾವ ರೀತಿ ತೆಗೆದುಕೊಳ್ಳಬಹುದೋ ಎಂದು ಯೋಚಿಸುತ್ತಲೇ ಸುಮಾ ಹೇಳಿದಳು, “ಮೋಹನ್ ಒಂದು ಮಾತು ಹೇಳಿ. ನೀವು ದೂರದ ಊರಿನಿಂದ ತವರಿನಲ್ಲಿರುವ ನನ್ನನ್ನು ನೋಡಲು ಬಂದಾಗ, ನಾನು ಬೇಕೆಂದೇ ನನ್ನ ಭಾವ ಅಥವಾ ಸೋದರ ಮಾವನ ಮಗನೊಂದಿಗೆ ಹೆಚ್ಚು ಕಾಲ ಕಳೆದರೆ ನಿಮಗೆ ಹೇಗನಿಸಬಹುದು? ನಿಮ್ಮನ್ನು ಹಾಗೆ ನಿರ್ಲಕ್ಷಿಸಿದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ?”
“ನಾನು ನಿನ್ನ ಮುಖ ನೋಡದೆ ಹಾಗೇ ಹಿಂದಿರುಗಿಬಿಡುತ್ತಿದ್ದೆ.”
“ಇದರರ್ಥ ಶುಭಾ ಈ ದಿಟ್ಟ ಹೆಜ್ಜೆಯನ್ನು ಬಹಳ ಹಿಂದೆಯೇ ಇಡಬೇಕಾಗಿತ್ತು ಅಂತ.”
“ಏನು ಹಾಗೆಂದರೆ….?”
“ಅಂದರೆ…. ಮದುವೆಯಾದ ಹೊಸದರಲ್ಲಿ ಮೊದಲ ಬಾರಿಗೆ ಶುಭಾ ಅತ್ತೆಮನೆಗೆ ಬಂದಾಗ, ಅವಳ ಮನದಲ್ಲಿ ನೂರಾರು ಬಣ್ಣದ ಕನಸುಗಳಿದ್ದವು. ಆದರೆ ವಿಶ್ವ ಇಲ್ಲಿ ತನ್ನ ಸೋದರತ್ತೆ ಮಗಳ ಜೊತೆ ಇನ್ನಿಲ್ಲದ ಆತ್ಮೀಯತೆ ತೋರುತ್ತಿದ್ದ. ಶುಭಾಳ ದುರಾದೃಷ್ಟಕ್ಕೆ ವಿಶ್ವನ ಕಸಿನ್ ರತ್ನಾ ಮದುವೆಯಾಗಿ ಇವರ ಮನೆಯ ಹತ್ತಿರವೇ ಬರಬೇಕೇ? ಅಂಥ ವಿವಾಹಿತ ಕಸಿನ್ ಜೊತೆ ಹದ್ದುಮೀರಿದ ಸಲುಗೆ ಏಕೆ ಬೇಕಿತ್ತು ಇವನಿಗೆ?
“ಸದಾ ಅವಳೊಂದಿಗೆ ನಸುನಗುತ್ತಾ ಮಾತನಾಡುವುದು, ಅವಳ ಸೆರಗು ಬಿಡದೆ ಹಿಂದೆ ಹಿಂದೆಯೇ ಓಡಾಡುವುದು, ನೆನೆಸಿಕೊಂಡಾಗ ಪಕ್ಕದ ಮನೆಯಲ್ಲಿದ್ದಾಳೆ ಅಂತ ಅಲ್ಲೇ ಊಟ ತಿಂಡಿ ಮಾಡುತ್ತಾ ಅವಳ ಜೊತೆ ಕಾಲ ಕಳೆಯುತ್ತಾ ಇದ್ದುಬಿಡುವುದೇ? ಅದೂ ಅವಳ ಗಂಡ ಸದಾ ಆಫೀಸ್ ಕೆಲಸದ ಮೇಲೆ ವಾರಕ್ಕೆ 4 ದಿನ ಊರಿನಲ್ಲಿ ಇಲ್ಲದಿದ್ದಾಗ…..
“ತನರಿನಿಂದ ಇವಳು ತಂದಿದ್ದ ಬಗೆಬಗೆಯ ರೇಷ್ಮೆ ಸೀರೆಗಳು, ಒಡವೆಗಳು, ಉಡುಗೊರೆಗಳು…. ಮುಂತಾದುವಲ್ಲಿ ಬಹಳಷ್ಟನ್ನು ವಿಶ್ವ ರತ್ನಾಳಿಗೆ ಕೊಟ್ಟುಬಿಟ್ಟ. ಇವಳ ಮುಂದೆಯೇ ರತ್ನಾ ಅದನ್ನು ರಾಜಾರೋಷವಾಗಿ ಉಟ್ಟುತೊಟ್ಟು ಮೆರೆಯುತ್ತಿದ್ದಳು. ಇದನ್ನೆಲ್ಲ ನೋಡಿ ಯಾವ ನವ ವಧು ತಾನೇ ಹತಾಶೆಯಿಂದ ಕುಗ್ಗುವುದಿಲ್ಲ? ಶುಭಾ ಮುಗ್ಧಳೇ ಇರಬಹುದು, ಆದರೆ ಅವರಿಬ್ಬರ ಮಧ್ಯೆ ಏನೋ ನಡೆಯುತ್ತಿದೆ ಎಂದು ಅರಿಯಲಾರದಷ್ಟು ಮೂರ್ಖಳೇನಾಗಿರಲಿಲ್ಲ.
“ಅಷ್ಟೆಲ್ಲಾ ಆದರೂ ಗಂಡ ತನ್ನೊಡನೆ ಸುಮುಖನಾಗಿರಲಿ, ಇಂದಲ್ಲ ನಾಳೆ ತನ್ನ ಪ್ರೀತಿಯ ಮಹತ್ವ ತಿಳಿಯಲಿ ಎಂದು ಅವಳು ತನ್ನನ್ನು ಅವನಿಗೆ ಸಮರ್ಪಿಸಿಕೊಂಡಳು. ಹೆಂಡತಿ ಎಂದರೆ ರಾತ್ರಿಯ ಭೋಗವಸ್ತು ಎಂಬುದು ಬಿಟ್ಟರೆ ವಿಶ್ವನಿಗೆ ದಾಂಪತ್ಯದ ಅರ್ಥವೇ ತಿಳಿಯಲಿಲ್ಲ. ಅಂಥ ಮೃಗ ಮನಸ್ಸಿನವನನ್ನು ಮನುಷ್ಯನೆಂದು ಹೇಳುವುದೂ ಕಷ್ಟ.”
ವಿಶ್ವನಾಥನ ಅಂಥ ಮೃಗೀಯ ಗುಣಸ್ವಭಾವದ ಬಗ್ಗೆ ತಿಳಿದಾಗ ಸುಮಾಳ ಮನಸ್ಸಂತೂ ರೋಸಿಹೋಗಿತ್ತು. ಆದರೆ ಇದರ ಅರಿವಿಲ್ಲದ ಮೋಹನ್, ಗೆಳೆಯನನ್ನು ಸಭ್ಯನೆಂದೇ ತಿಳಿದಿದ್ದ. ಅವನಿಗೆ ಇನ್ನಷ್ಟು ವಿಷಯ ತಿಳಿಸುತ್ತಾ ಸುಮಾ, “ಶುಭಾ, ಖಂಡಿತಾ ಸಂಕೀರ್ಣ ಮಾನಸಿಕತೆಯ ಹೆಣ್ಣಲ್ಲ. ಮೊದಲ ಸಲ ಇವಳನ್ನು ಕಂಡ ರತ್ನಾ, `ಅಹಹಾ…. ನಿನ್ನಲ್ಲಿ ಅದೇನನ್ನು ಕಂಡು ನಮ್ಮ ವಿಶ್ವ ಮೆಚ್ಚಿಕೊಂಡನೋ…’ ಎಂದು ವ್ಯಂಗ್ಯವಾಡಿದ್ದಳಂತೆ. ಶುಭಾ ನನ್ನ ಬಳಿ ಹೇಳಿಕೊಳ್ಳುವಾಗೆಲ್ಲ ಅತ್ತೂ ಅತ್ತೂ ಕೊರಗುತ್ತಿದ್ದಳು.
“ಒಮ್ಮೊಮ್ಮೆ ಬೇಕೆಂದೇ ಶುಭಾಳ ಹೃದಯ ಬಿರಿಯುವ ಹಾಗೆ, `ನೀನು ನನ್ನ ವಿಶ್ವನನ್ನು ನನ್ನಿಂದ ಕಸಿದುಕೊಂಡೆ!’ ಎಂದು ಹಂಗಿಸುತ್ತಿದ್ದಳಂತೆ. ರತ್ನಾಳ ಇಂಥ ದುರ್ವ್ಯವಹಾರಗಳು ಶುಭಾಳನ್ನು ಒಳಗೊಳಗೇ ಕೂರಲುಗಿನಂತೆ ಇರಿಯುತ್ತಿದ್ದವು. ಒಂದು ತಿಂಗಳು ಕಳೆಯುವಷ್ಟರಲ್ಲಿ ಅವಳು ಸಜೀವ ಹೆಣವಾಗಿದ್ದಳು.
“ತನ್ನ ಮನದ ದುಃಖ, ಸಂಕಟಗಳನ್ನು ಗಂಡನ ಬಳಿ ಹೇಳಿಕೊಳ್ಳುವಂತಿಲ್ಲ. ಹೇಳಲು ಪ್ರಯತ್ನಿಸಿದರೆ ಅವನು ಅದಕ್ಕೆ ಕಿವಿಗೊಟ್ಟರೆ ತಾನೇ? ತವರಿನಲ್ಲೂ ಅವಳಿಗೆ ಯಾವ ವಿಧವಾದ ಅಧಿಕ ನೆರವು ಸಿಗಲಿಲ್ಲ. ಅಲ್ಲಿಗೆ ಹೋದವಳು 1 ತಿಂಗಳಲ್ಲೇ ವಾಪಸ್ಸು ಬಂದಳು. ಏನೇ ಆದರೂ ಅವನ ಸ್ವಭಾವದಲ್ಲಿ ಬದಲಾವಣೆ ಬರಲಿಲ್ಲ.
“ಮದುವೆಯ ಮೊದಲ ವಾರ್ಷಿಕೋತ್ಸವ ಬಂದಾಗ ಗಂಡ ತನ್ನ ಹೆಂಡತಿಗೆ ಏನಾದರೂ ಅಮೂಲ್ಯ ಉಡುಗೊರೆ ಕೊಡಿಸುತ್ತಾನೆ. ಆದರೆ ಇಲ್ಲಿ ವಿಶ್ವ, ಇವಳ ಎಲ್ಲಾ ಒಡವೆ ಮಾರಿ ಹಾಕಿ, ಸೈಟ್ ಖರೀದಿಸಿದ. ಅಲ್ಲಿಂದ ಅವರು ತುಸು ದೂರದ ಅಪಾರ್ಟ್ಮೆಂಟ್ಗೆ ಶಿಫ್ಟ್ ಆದರೂ ವಿಶ್ವ ರತ್ನಾಳ ಸಹವಾಸ ಬಿಡಲಿಲ್ಲ. ಅವಳನ್ನು ಭೇಟಿಯಾಗಿ ಬಂದಾಗೆಲ್ಲ ವಿನಾಕಾರಣ ಶುಭಾಳನ್ನು ಹಿಡಿದು ಹೊಡೆಯುತ್ತಿದ್ದ, ರೇಗಾಡುತ್ತಿದ್ದ.
“ಅವನಿಗೆ ಎಲ್ಲಾ ವಿಧದಲ್ಲೂ ತಿಳಿಹೇಳಿ ಸೋತುಹೋದ ಶುಭಾ ಹೈರಾಣಾದಳು. ಮನೆಗೆ ಏನಾದರೂ ಸಾಮಗ್ರಿ ಬೇಕಿದ್ದರೂ ಅವನು ತಂದುಕೊಂಡುತ್ತಿರಲಿಲ್ಲ. ಅವನ ಗೆಳೆಯನಾದ ಮಹೇಶ್ ಆಗಾಗ ಇವರ ಮನೆಗೆ ಬರುತ್ತಿದ್ದನಂತೆ, ಶುಭಾ ಅವನ ಬಳಿ ಏನಾದರೂ ಸಹಾಯ ಕೇಳಿ ಮನೆಗೆ ಸಣ್ಣಪುಟ್ಟ ಸಾಮಾನು ತರಿಸಿದರೆ ಅದಕ್ಕೂ ಅವನಿಗೆ ಅನುಮಾನ ಕಾಡಿತು….” ಸುಮಾ ಮಾತು ನಿಲ್ಲಿಸಿದಳು.
“ಪೂರ್ತಿ ಹೇಳಿಬಿಡು,” ಮೋಹನ್ ಕುತೂಹಲದಿಂದ ಕೇಳಿದ.
“ಹೆಂಡತಿ, ಮನೆ, ಮಕ್ಕಳು ತನ್ನ ಮುಖ್ಯ ಜವಾಬ್ದಾರಿ ಎಂದು ವಿಶ್ವ ಎಂದೂ ಭಾವಿಸಲೇ ಇಲ್ಲ. ಹೆಂಡತಿ ಇರಲಿ, ಮಕ್ಕಳ ಬಳಿಯೂ ಆತ್ಮೀಯವಾಗಿ ವರ್ತಿಸುತ್ತಿರಲಿಲ್ಲ. ಮಹೇಶ್ ಜೊತೆ ಸಲಿಗೆಯಿಂದ ಮಾತನಾಡಿದಳು ಎಂಬ ಕಾರಣಕ್ಕೆ ಅವಳ ತಾಯಿ ತಂದೆಯರ ಮುಂದೆಯೇ ವಿಶ್ವ ಅವಳ ಮೇಲೆ ಕೈ ಮಾಡಿದ. ಅವಳ ಮೇಲೆ ಸಲ್ಲದ ಆಪಾದನೆ ಹೊರಿಸಿದಾಗ, ಅವಳು ಜೀವಂತ ಶವವಾದಳು. ಅವಳ ತವರಿನವರು ಪಾಪಭೀರುಗಳು, ಮರ್ಯಾದೆಗೆ ಅಂಜುವ ಮಧ್ಯಮ ವರ್ಗದವರು ಎಂದು ಮನಗಂಡು ಅವನು ಇನ್ನಷ್ಟು ಅಟ್ಟಹಾಸದಿಂದ ಮೆರಯತೊಡಗಿದ.
“ಅಳಿಯನನ್ನು ಎದುರುಹಾಕಿಕೊಂಡು, ಮಗಳನ್ನು ಪ್ರತ್ಯೇಕವಾಗಿ ತಮ್ಮಲ್ಲೇ ತಂದಿರಿಸಿಕೊಳ್ಳಲಾರರು ಎಂಬುದು ಅವನಿಗೆ ಗೊತ್ತಾಯ್ತು. ಮುಂದೆ ಪರಿಸ್ಥಿತಿ ಹೇಗಾಯಿತು ಅಂದ್ರೆ…. ಅವಳು ಆತ್ಮಹತ್ಯೆಗೆ ಕೂಡ ಪ್ರಯತ್ನಪಟ್ಟಿದ್ದಳು…..”
“ನಿಜಕ್ಕೂ ಪರಿಸ್ಥಿತಿ ಅಷ್ಟು ಗಂಭೀರವಾಯಿತೇ?” ಗೆಳೆಯನ ಕರಾಳ ಮುಖದ ಪರಿಚಯ ಆಗತೊಡಗಿದಂತೆ ಮೋಹನ್ ಮನಸ್ಸು ಶುಭಾಳಿಗಾಗಿ ಮರುಗಿತು.
“ನಾನು ಮೊದಲೇ ಹೇಳಿದಂತೆ ವಿಶ್ವ ರತ್ನಾಳ ಕೈಗೊಂಬೆ ಆಗಿದ್ದ. ಅಪಾರ್ಟ್ಮೆಂಟ್ ಶಿಫ್ಟ್ ಆಗಿ ಮನೆ ತುಸು ದೂರವಿದ್ದರೂ ಅವಳ ನಿರ್ದೇಶನದಂತೆಯೇ ಕುಣಿಯುತ್ತಿದ್ದ. ಒಮ್ಮೆ ಶುಭಾಳ ಅಕ್ಕ ಪ್ರಭಾವ ಇವಳ ಮನೆಗೆಂದು 4 ದಿನಗಳ ಮಟ್ಟಿಗೆ ಬಂದಿದ್ದಳು. ತನ್ನ ಸಂಸಾರದ ಗುಟ್ಟು ಅಕ್ಕನಿಗೆ ತಿಳಿಯಬಾರದೆಂಬಂತೆ ಶುಭಾ ಹೇಗೋ ಸಾವರಿಸಿಕೊಂಡು ಎಲ್ಲ ಚೆನ್ನಾಗಿರುವಂತೆ ತೋರ್ಪಡಿಸಿಕೊಂಡಳು. ಆದರೂ ಅಲ್ಲೇನೂ ಸರಿಯಿಲ್ಲ ಎಂಬುದು ಪ್ರಭಾಳ ಅರಿವಿಗೆ ಬಂತು.
“ಅಷ್ಟರಲ್ಲಿ ಒಂದು ದಿನ, ರಾತ್ರಿ ತಡವಾಗಿ ಮನೆಗೆ ಬಂದ ವಿಶ್ವ, ಕುಡಿದ ಅಮಲಿನಲ್ಲಿ ಪ್ರಭಾ ಬಳಿ ಹೆಂಡತಿ ಬಗ್ಗೆ ಸಿಕ್ಕಾಪಟ್ಟೆ ದೂರು ಹೇಳಿದ. ತನ್ನ ಗೆಳೆಯ ಮಹೇಶನ ಜೊತೆ ಅವಳ ಚಕ್ಕಂದ ಜೋರಾಗಿದೆ ಎಂದು ಆಪಾದಿಸಿದ. ಇದನ್ನು ಕೇಳಿ ತಡೆಯಲಾರದೆ ಶುಭಾ ಅವನಿಗೆ ಸರಿಯಾಗಿ ಎದುರು ಜವಾಬು ಕೊಟ್ಟಳು. ತನ್ನೆದುರೇ ರತ್ನಾಳೊಂದಿಗೆ ಎಷ್ಟು ಸದರ ತೋರುತ್ತಾನೆ ಎಂದು ಪ್ರತಿಭಟಿಸಿದಳು.
“ರತ್ನಾಳ ವಿರುದ್ಧ ಮಾತು ಕೇಳದಾದ ವಿಶ್ವ ತಕ್ಷಣ ಪ್ರಭಾಳ ಎದುರೇ ಶುಭಾ ಮೇಲೆ ಕೈ ಮಾಡಿದ. ಅವಳ ಕುತ್ತಿಗೆ ಹಿಸುಕುವುದೊಂದು ಬಾಕಿ ಇತ್ತಷ್ಟೆ. ಶುಭಾ ಅಕ್ಕನೆದುರು ನಡೆದ ಅವಮಾನದಿಂದ ತತ್ತರಿಸಿಹೋದಳು. ಎಲ್ಲರೂ ಮಲಗಿದ್ದಾಗ, ಬಚ್ಚಲಮನೆಗೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಸುಟ್ಟುಕೊಳ್ಳಲು ಯತ್ನಿಸಿದಳು. ಪ್ರಭಾ ಅಲ್ಲೇ ಹತ್ತಿರ ಮಲಗಿದ್ದರಿಂದ ತಕ್ಷಣ ಕಾಪಾಡುವಂತಾಯಿತು. ವಿಶ್ವ ಹೆಂಡತಿ ಬಳಿ ಕ್ಷಮೆ ಕೋರುವ ನಾಟಕವಾಡಿದ. 2 ದಿನ ಕಳೆಯುವಷ್ಟರಲ್ಲಿ ಮತ್ತೆ ನಾಯಿ ಬಾಲ ಡೊಂಕು. ಅವನ ಸ್ವಾರ್ಥಬುದ್ಧಿ ಮತ್ತೆ ಹಳೇ ಹಾದಿ ಹಿಡಿದಿತ್ತು.
“ಪ್ರಭಾ ಹೊರಟ ನಂತರ ಮನೆ ಮತ್ತೆ ನಿತ್ಯ ನರಕವಾಯಿತು. 2 ಪುಟ್ಟ ಮಕ್ಕಳ ಮುಖ ನೋಡಿಕೊಂಡು ಶುಭಾ ಜೀವ ಹಿಡಿದಿದ್ದಳು. ಮಕ್ಕಳು ಮುಂದೆ ದೊಡ್ಡವರಾದರೆ ತನ್ನ ನೋವು ಅರ್ಥ ಮಾಡಿಕೊಂಡು ಸಹಕರಿಸುತ್ತಾರೆ ಎಂದು ಕಾದಳು. ಅವಳಿಗಿದ್ದ ಪ್ರತಿಭೆಗೆ ಕೆಲಸಕ್ಕೆ ಸೇರಿದ್ದರೆ ಮನೆಯ ಪರಿಸ್ಥಿತಿ ಇನ್ನೂ ಎಷ್ಟೋ ಸುಧಾರಿಸುತ್ತಿತ್ತು. ಆದರೆ ಎಲ್ಲಕ್ಕೂ ಕಲ್ಲು ಬಿದ್ದಂತೆ ಆಗಿತ್ತು.
“ಮಕ್ಕಳು ದೊಡ್ಡವರಾಗುವುದಕ್ಕೆ ಮೊದಲೇ ಅನಾರೋಗ್ಯದ ಕಾರಣ ಅವಳ ಅತ್ತೆ ಹಳ್ಳಿಯಿಂದ ಮಗನ ಮನೆಗೆ ಬಂದಿಳಿದರು. ಅತ್ತೆ ಬಳಿಯಿದ್ದರೆ ಒಳ್ಳೆಯದು, ಮಗನಿಗೆ ಬುದ್ಧಿ ಹೇಳುತ್ತಾರೆ ಎಂದು ಶುಭಾ ಭಾವಿಸಿದಳು. ಆದರೆ ಆ ಅತ್ತೆಗೆ ಶುಭಾಳ ಚಾಕರಿ ಬೇಕಿತ್ತೇ ಹೊರತು ಅವಳ ಕಷ್ಟಸುಖ ವಿಚಾರಿಸಲಿಲ್ಲ.
“ಪುಟ್ಟ ಮಕ್ಕಳಂತೂ ಸದಾ ಭಯದ ವಾತಾವರಣದಲ್ಲೇ ಬೆಳೆಯುವಂತಾಯಿತು. ಯಾವ ವಿಷಯಕ್ಕೆ ಯಾವಾಗ ತಂದೆಗೆ ಕೋಪ ಬಂದು ಹೊಡೆಯುತ್ತಾರೋ ಎಂದು ಅಂಜುತ್ತಲೇ ಬೆಳೆದರು. ವಿಶ್ವನಿಗೆ ರತ್ನಾಳ ಮಕ್ಕಳ ಮೇಲಿನ ಅಕ್ಕರೆಯಲ್ಲಿ ಒಂದಂಶವನ್ನು ತನ್ನ ಮಕ್ಕಳಿಗೆ ತೋರಿಸಬೇಕೆನಿಸಲಿಲ್ಲ. ರತ್ನಾಳ 2 ಮಕ್ಕಳಲ್ಲಿ ಚಿಕ್ಕದು ಇವನದೇ ಇರಬೇಕೆಂದು ಎಲ್ಲರೂ ಆಡಿಕೊಳ್ಳುವ ಹಾಗಾಗಿತ್ತು.”
“ವಿಶ್ವನಾಥ್ ಆಫೀಸಿನಲ್ಲಿ ಎಲ್ಲರೆದುರು ತಾನು ಸುಖೀ ಗೃಹಸ್ಥನೆಂದೇ ತೋರಿಸಿಕೊಳ್ಳುತ್ತಿದ್ದ.”
“ತೋರಿಸದೆ ಏನು ಮಾಡುತ್ತಾನೆ? ಅವನು ತಂದು ಹಾಕಿದ್ದರಲ್ಲಿ ಅಚ್ಚುಕಟ್ಟಾಗಿ ಸಂಸಾರ ಮಾಡಿಕೊಂಡು, ತನ್ನ ಹಾಗೂ ಮಕ್ಕಳ ಖರ್ಚಿಗಾಗಿ ಟೈಲರಿಂಗ್ನಲ್ಲಿ ಪುಡಿಗಾಸು ಸಂಪಾದಿಸಿ, ಅವನನ್ನು ಏನೂ ಕೇಳದೆ ತನ್ನ ಪಾಡಿಗೆ ತಾನಿದ್ದಳಲ್ಲ…. ಅವನಿಗೆ ನೆಮ್ಮದಿ ಇಲ್ಲದೆ ಏನು ಕೇಡು? ಮನೆಯಲ್ಲಿ ಏನೇ ತುಸು ಹೆಚ್ಚಿನ ಖರ್ಚು ಬರಲಿ, ಮಕ್ಕಳ ಅನಾರೋಗ್ಯ, ಹಬ್ಬದ ಖರ್ಚು, ಶಾಲೆಯ ಖರ್ಚು….. ಒಂದೊಂದು ಪೈಸೆಗೂ ಅವನ ಬಳಿ ಲೆಕ್ಕ ನೀಡಿ ಹಣ ಕೇಳುವಷ್ಟರಲ್ಲಿ ಅವಳ ಜೀವ ಹಿಡಿಯಲಾಗುತ್ತಿತ್ತು.
“ಅವಳಿರುವುದೇ ಮನೆಯ ಚಾಕರಿಗೆ…. ಅವಳಿಂದ ಸಿಗುವ ಸೌಲಭ್ಯಗಳೆಲ್ಲ ತನ್ನ ಹಕ್ಕು ಎಂದು ಅಧಿಕಾರ ಚಲಾಯಿಸುತ್ತಿದ್ದ. ಅವಳೂ ಆ ಮನೆಯ ಸದಸ್ಯೆ, ಸಂಸಾರದಲ್ಲಿ ಅವಳಿಗೂ ಒಂದು ಸ್ಥಾನಮಾನ ಇದೆ ಎಂದು ಭಾವಿಸಲು ಅವಕಾಶವನ್ನೇ ಕೊಡುತ್ತಿರಲಿಲ್ಲ. ಇಂಥ ನರಕದಿಂದ ಹೊರಗೆ ಹೋಗಿ ಅವಳು ಒಳ್ಳೆಯದನ್ನೇ ಮಾಡಿದಳು,” ಸುಮಾಳ ಸ್ವರ ದೃಢವಾಗಿತ್ತು.
“ಇದು ಅವಳಿಗೆ ಮುಕ್ತಿ ದ್ವಾರ ಎನ್ನುವೆಯಾ?”
“ಹೌದು….. ಖಂಡಿತಾ! ಗಂಡ ಆದವನು ಸಂಸಾರದ ಜವಾಬ್ದಾರಿ ತೆಗೆದುಕೊಳ್ಳದೆ, ಮೃಗೀಯ ವರ್ತನೆಯೇ ಬದುಕು ಎಂದು ಸಾಧಿಸಿದರೆ, ಅವಳ ಸಹನೆಗೂ ಒಂದು ಮಿತಿ ಇರಲೇಬೇಕಲ್ಲವೇ? ತನ್ನ ಕರ್ತವ್ಯ ಅಂದರೆ ತಿಂಗಳಿಗೊಮ್ಮೆ ಸಂಬಳದ ಹಣ ಎಣಿಸುವುದು, ಪ್ರೇಮವೆಂದರೆ ಬೇಕಾದಾಗ ಅವಳನ್ನು ಹಾಸಿಗೆಗೆ ಎಳೆದುಕೊಳ್ಳುವುದು…. ಇಷ್ಟೇ ಆದರೆ ಅವಳೂ ಒಬ್ಬ ಮಾನವ ಜೀವಿಯೇ ತಾನೇ? ಸ್ನೇಹ, ಪ್ರೀತಿ, ವಿಶ್ವಾಸ, ಗೌರವಾದರಗಳಿಲ್ಲದ ದಾಸ್ಯತನಕ್ಕೆ ಎಷ್ಟು ದಿನ ಗಂಟುಬಿದ್ದಿರುತ್ತಾಳೆ? ಅಥವಾ ಅದಕ್ಕೆ ಕೊನೆಯಾದರೂ ಏನು…..?
“ಮೋಹನ್, ನಿಮಗೆ ಇನ್ನೊಂದು ವಿಷಯ ಗೊತ್ತೇ? ವಿಶ್ವ ಮೊದಲಿನಿಂದಲೂ ಮನೆಯಲ್ಲಿ ಹುಲಿ, ಬೀದಿಯಲ್ಲಿ ಇಲಿ ಎಂದು ಇರುವನು. ಸುಧಾಕರ್ ಇವನ ದೂರದ ಸಂಬಂಧಿ ಹಾಗೂ ಆಪ್ತಮಿತ್ರ ಸಹ.
“ಇವನ ಮನೆಯ ಪರಿಸ್ಥಿತಿ ಕಂಡು ಎಷ್ಟೋ ಸಲ ಸುಧಾಕರ್ ವಿಶ್ವನಿಗೆ ತಿಳಿಹೇಳಲು ಪ್ರಯತ್ನಪಟ್ಟಿದ್ದ. ಆದರೆ ಅಷ್ಟಕ್ಕೆಲ್ಲ ವಿಶ್ವ ಬದಲಾಗುವನೇ? ಕೊನೆಗೆ ಸುಧಾಕರ್ ನೇರವಾಗಿ ಅವಳಿಗೆ ಬೇರೆ ಕಡೆ ಒಳ್ಳೆ ಕೆಲಸ ಕೊಡಿಸು, ಈ ನರಕದಿಂದ ಪಾರಾಗಿ ಉತ್ತಮ ಬದುಕು ರೂಪಿಸಿಕೊಳ್ಳುವ ಸಲಹೆ ನೀಡಿದ. ಮಕ್ಕಳ ಭವಿಷ್ಯಕ್ಕಾಗಿ ಸುಧಾಕರನ ಮಾತುಗಳನ್ನು ಅವಳು ಗಂಭೀರವಾಗಿ ಸ್ವೀಕರಿಸಿದಳು.” ಅದಾಗಿ ಸ್ವಲ್ಪ ಹೊತ್ತು ಇಬ್ಬರಲ್ಲೂ ಮೌನ ನೆಲೆಸಿತ್ತು. ಸುಮಾ ಊಟಕ್ಕೆ ಸಿದ್ಧಪಡಿಸೋಣವೆಂದು ಅಡುಗೆಮನೆಗೆ ಹೋಗಲು ಎದ್ದಳು. ಅಷ್ಟರಲ್ಲಿ ಮೋಹನ್ ಕೇಳಿದ, “ಅದೇನು ಡಾ. ದಿನೇಶ್ ಹೆಸರು ಕೇಳಿಬರುತ್ತಿತ್ತಲ್ಲ….?”
ಮತ್ತೆ ಬಂದು ಅವನೆದುರು ಕೂರುತ್ತಾ ಸುಮಾ ಹೇಳಿದಳು, “ವಿಶ್ವನ ಲುಚ್ಛಾ ಬುದ್ಧಿಗೆ ಇದು ಮತ್ತೊಂದು ಸಾಕ್ಷಿ. ಡಾ. ದಿನೇಶ್ರ ಪತ್ನಿ ಊರ್ಮಿಳಾ, ಶುಭಾಳ ಸಹಪಾಠಿ. ಒಂದೇ ಊರಿನವರಾದ್ದರಿಂದ ಒಳ್ಳೆಯ ಗೆಳೆತನವಿತ್ತು. ಹೀಗಾಗಿ ಶುಭಾ ಮಕ್ಕಳನ್ನು ಕರೆದುಕೊಂಡು ಚಿಕಿತ್ಸೆಗೆ ಅವರ ಕ್ಲಿನಿಕ್ಗೆ ಬಂದಾಗೆಲ್ಲ, ಹೆಂಡತಿಯ ಗೆಳತಿ ಎಂದು ಡಾ. ದಿನೇಶ್ ವಿಶೇಷ ಕಾಳಜಿ ವಹಿಸುತ್ತಿದ್ದರು. ಈ ವಿವರ ತಿಳಿದ ವಿಶ್ವ, ಹಣ ತೆಗೆದುಕೊಳ್ಳದೆ ಮಕ್ಕಳಿಗೆ ಚಿಕಿತ್ಸೆ ಕೊಡಿಸುವಂತೆ ಶುಭಾ ಮೇಲೆ ಒತ್ತಾಯ ಹೇರಿದ. ಹಾಗೆ ನೇರವಾಗಿ ಬಿಟ್ಟಿ ಸಹಾಯ ಕೇಳಬಾರದೆಂದು ಅವಳು ಒಪ್ಪದಿದ್ದಾಗ, ಮಕ್ಕಳ ಔಷಧಿ, ಚಿಕಿತ್ಸೆಗೆ ಹಣ ಕೊಡುವುದನ್ನೇ ಬಿಟ್ಟುಬಿಟ್ಟ. 2-3 ಸಲ ಡಾ. ದಿನೇಶ್ ಬಳಿ ಹಾಗೆ ಉಚಿತವಾಗಿ ಚಿಕಿತ್ಸೆ ಪಡೆದ ಮೇಲೆ ಶುಭಾ ಅವರ ಬಳಿ ಹೋಗುವುದನ್ನೇ ಬಿಟ್ಟಳು. ಇದನ್ನೇ ದೊಡ್ಡ ರಾದ್ಧಾಂತ ಮಾಡಿದ ವಿಶ್ವ, ಅವಳ ಹೆಸರನ್ನು ಡಾ. ದಿನೇಶ್ ಜೊತೆ ಕೂಡಿಸಿ ತಾನೇ ಅಪಾರ್ಟ್ಮೆಂಟ್ ಪೂರ್ತಿ ಟಾಂ ಟಾಂ ಮಾಡಿದ. ಇದರಿಂದ ಅಪಮಾನಿತಳಾದ ಊರ್ಮಿಳಾ ಇವಳ ಸ್ನೇಹವನ್ನೇ ತೊರೆದಳು. ತನ್ನ ಗಂಡನ ಇಂಥ ನೀಚತನದಿಂದ ಸಂಪೂರ್ಣ ರೋಸಿಹೋದ ಶುಭಾ, ಸುಧಾಕರ ಹೇಳಿದ ಖಾಸಗಿ ಶಾಲೆಯ ಟೀಚರ್ ಕೆಲಸವನ್ನು ಖಚಿತಪಡಿಸಿಕೊಂಡು, ಮುಂದೆ ಏನು ಮಾಡುವುದೆಂದು ಅವನನ್ನೇ ಸಲಹೆ ಕೇಳಿದಳು.
“ಆಗ ಬೇರೆ ಕಡೆ ಹೋಗಿ ಮನೆ ಮಾಡುವ ಸಲಹೆ ನೀಡಿದ. ಕಡಿಮೆ ಬಾಡಿಗೆಗೆ ಮನೆ ಗೊತ್ತು ಮಾಡಿಕೊಟ್ಟ. ಆ ಬಗ್ಗೆ ಗಂಭೀರವಾಗಿ ವಿಚಾರ ಮಾಡಿದ ಶುಭಾ, ನನಗೂ ಆ ವಿವರಗಳನ್ನು ಹೇಳಿದಳು. ದೃಢವಾದ ನಿರ್ಧಾರ ತೆಗೆದುಕೋ, ಯಾವುದಕ್ಕೂ ದುಡುಕಬೇಡ ಎಂದು ಹೇಳಿದೆ. ಎಲ್ಲವನ್ನೂ ಯೋಚಿಸಿಯೇ ಅವಳು ಕೊನೆಯಲ್ಲಿ ಈ ನಿರ್ಧಾರ ತೆಗೆದುಕೊಂಡದ್ದು.”
“ಆದಕೆ ಅಷ್ಟಕ್ಕೆ ಎಲ್ಲಾ ಸಂಬಂಧ ಕಡಿದು ಹೋಗುವುದೇ?”
“ಆತ್ಮಾಭಿಮಾನವುಳ್ಳ ಯಾವ ಹೆಂಗಸು ತಾನೇ ಇಂಥ ದಿಟ್ಟ ಹೆಜ್ಜೆ ಇಡುವುದಿಲ್ಲ ಹೇಳಿ…. ಈಗಲೂ ಕಾಲ ಮಿಂಚಿಲ್ಲ, ಒಂಟಿತನದಿಂದ ವಿಶ್ವನಾಥ್ ತಾನಾಗಿ ಪಾಠ ಕಲಿತು ಪ್ರಾಮಾಣಿಕನಾಗಿ ಎಲ್ಲಾ ಕುಕೃತ್ಯಗಳನ್ನೂ ಬಿಟ್ಟು ಹೆಂಡತಿ ಮಕ್ಕಳೊಡನೆ ಹೊಸ ಜೀವನ ನಡೆಸುತ್ತೇನೆ ಎಂದು ಮುಂದೆ ಬಂದರೆ ಎಲ್ಲ ಸರಿಹೋಗಬಹುದು, ಆದರೆ ಅದಕ್ಕೆ ವಿಶ್ವ ಪ್ರಾಮಾಣಿಕ ಪ್ರಯತ್ನಪಡಬೇಕಷ್ಟೆ.”
“ನಿಜ, ಪತಿ ಪತ್ನಿ ಎಂಬ ಸಂಸಾರದ ಎರಡು ಗಾಲಿಗಳು ಸಮರ್ಪಕವಾಗಿದ್ದಾಗ ಮಾತ್ರ ಆ ಜೀವನರಥ ಸುಗಮವಾಗಿ ಮುಂದುವರಿಯಲು ಸಾಧ್ಯ,” ಎಂದು ಮೋಹನ್ ನುಡಿದಾಗ ಸುಮಾ “ಹ್ಞೂಂ,” ಎಂದಳು.