ಮನೆ ಪ್ರವೇಶಿಸಿದೊಡನೆ ವಸಂತಾಗಮನದಂತಾಯಿತು. ಅಮ್ಮ, ಅಪ್ಪ, ಗೀತಾ, ರಾಹುಲ್ ‌ಎಲ್ಲರೂ ಸಂತೋಷದಿಂದ ಕುಣಿದಾಡಿಬಿಟ್ಟರು. ರವಿಗಂತೂ ಅವರೆಲ್ಲರ ಆನಂದ ಕಂಡು ಹೃದಯ ತುಂಬಿ ಬಂದಂತಾಯಿತು.

ಆದರೆ ಸಮಯ ಸಾಧಿಸಿ ಗೀತಾ ನನ್ನ ಕಿವಿಯಲ್ಲಿ ಏನೋ ಪಿಸುಗುಟ್ಟಿದಳು. ಅದನ್ನು ಕೇಳಿ ನನ್ನ ಹೃದಯದ ಬಡಿತವೇ ನಿಂತಂತಾಯಿತು. ಮನಸ್ಸಿನ ಆನಂದ ಎಲ್ಲೋ ಮಾಯವಾಗಿಬಿಟ್ಟಿತು. ಹಣೆಯ ಮೇಲೆ ಬೆವರಿನ ಸಾಲು ಮೂಡಿತು. ನನ್ನ ಮುಖ ಬಿಳಿಚಿಕೊಂಡಿತು.

``ಏನಾಯ್ತು ರಶ್ಮಿ?'' ನನ್ನ ಮುಖ ಬಣ್ಣಗೆಡುವುದನ್ನು ನೋಡಿದ ರವಿ ಕೂಡಲೇ ಪ್ರಶ್ನಿಸಿದರು.

``ಏನಿಲ್ಲಾ ರೀ.'' ನಾನು ಸಂಭಾಳಿಸಿಕೊಳ್ಳುತ್ತ ಹೇಳಿದೆ. ಒಳಗೊಳಗೇ ನಾನು ಅತ್ಯಂತ ಅಧೀರಳಾಗಿದ್ದೆ. ಒಂದೇ ತಿಂಗಳ ಅವಧಿಯಲ್ಲಿ ನನ್ನ ಜೀವನ ಪ್ರವಾಹ ದಿಕ್ಕು ಬದಲಿಸಿ ಹರಿದಿತ್ತು. ಪಾತ್ರಗಳು ತಮ್ಮ ವೇಷ ಕಳಚಿ, ವಾಸ್ತವಿಕ ರೂಪು ಧರಿಸಿ ಎದುರು ನಿಂತಿದ್ದವು. ನಾನು ಖಳನಾಯಕ ಎಂದು ನಿರ್ಧರಿಸಿದ್ದ ರಾಜೇಶ್‌ ನಿಜವಾದ ಖಳನಾಯಕನಾಗಿರಲಿಲ್ಲ. ನಾಯಕನೇ ಆಗಿದ್ದ....

``ಗೀತಾ, ನಿಮ್ಮಕ್ಕನ ಕಿವಿಯಲ್ಲಿ ಅದೇನು ಹೇಳಿದೆ? ನಗುನಗುತ್ತಾ ಅರಳಿದ ಗುಲಾಬಿಯಂತಿದ್ದ ಅವಳ ಮುಖ ಬಾಡಿ ಬತ್ತಿಹೋಯಿತು,'' ರವಿ ಸ್ನೇಹದಿಂದ ಗೀತಾಳ ಜಡೆ ಹಿಡಿದೆಳೆದು ಕೇಳಿದರು.

``ಅಮ್ಮಾ.... ನೋವಾಗುತ್ತೆ ಭಾವ...,'' ಗೀತಾ ಜೋರಾಗಿ ಕಿರುಚುತ್ತಾ, ನನ್ನ ಕಡೆ ಕಾತುರದಿಂದ ನೋಡಿದಳು.

ರವಿಯ ಪ್ರಶ್ನೆಗೆ ಉತ್ತರಿಸಬಾರದೆಂದು ನಾನು ಅವಳಿಗೆ ಕಣ್ಸನ್ನೆ ಮಾಡಿದೆ.

`ಗೀತಾ ಹೇಳಿದ ವಿಷಯ ನನ್ನ ಪಾಲಿಗೆ ಸಮಸ್ಯೆ ಆಗಬಹುದೇ?' ಎಂದು ನಾನು ಗಲಿಬಿಲಿಗೊಂಡೆ. ಅಷ್ಟರಲ್ಲಿ ಅಮ್ಮ ನನ್ನನ್ನು ಒಳಗೆ ಕರೆದು ಆ ಸಂಕಟದಿಂದ ಪಾರು ಮಾಡಿದರು.

``ರಶ್ಮಿ, ಸಂತೋಷವಾಗಿ ಇದ್ದೀಯಾಮ್ಮಾ?'' ಅಮ್ಮ ಆತಂಕದಿಂದ ಪ್ರಶ್ನಿಸಿದರು. ಅವರು ಹಾಗೆ ಕೇಳುವುದು ಸ್ವಾಭಾವಿಕವೇ ಆಗಿತ್ತು. ನನ್ನ ಮದುವೆ ಆಗಿ ಒಂದು ವಾರದ ನಂತರ ನಾನು ಮೊದಲ ಬಾರಿಗೆ ತವರಿಗೆ ಬಂದಿದ್ದೆ. ನನ್ನ ಸುಖ ದುಃಖದ ಬಗ್ಗೆ ಅಮ್ಮ ಕಾತರಗೊಂಡಿದ್ದರೆ, ಅದರಲ್ಲೇನು ತಪ್ಪು?

``ರಶ್ಮಿ, ಯಾಕೆ ಮಾತಾಡ್ತಾ ಇಲ್ಲ?'' ಅಮ್ಮ ನನ್ನ ಮೌನದಿಂದ ಗಾಬರಿಗೊಂಡಿದ್ದರು.

``ಸಂತೋಷಾಗಿದ್ದೀನಮ್ಮಾ.''

``ಅತ್ತೆ ಮನೆಯವರು ಹೇಗೆ ನೋಡ್ಕೋತಾರೆ?'' ಅವರೆಲ್ಲ ನಮಗೆ ಗೊತ್ತಿದ್ದವರೇ, ಆದರೂ ಅಮ್ಮ ಮತ್ತೆ ಕೇಳಿದರು.

``ಚೆನ್ನಾಗಿ ನೋಡ್ಕೋತಾರಮ್ಮ.''

``ಅತ್ತೆ ಎಂಥವರು?''

``ಇದುವರೆಗೂ ಒಳ್ಳೆಯವರಂತೆಯೇ ನಡೆದುಕೊಂಡಿದ್ದಾರೆ. ಮುಂದೆ ನೋಡ್ಬೇಕು.''

``ನಿನ್ನ ಯಜಮಾನರು?''

ನಾನು ಲಜ್ಜೆಯಿಂದ ತಲೆ ತಗ್ಗಿಸಿದೆ. ನನ್ನ ಕೆನ್ನೆಗಳು ಕೆಂಪಾದವು.

``ಅಳಿಯಂದ್ರು ಎಂಥವರಮ್ಮ?'' ಅಮ್ಮ ಮತ್ತೆ ಕೇಳಿದರು.

``ನನ್ನ ಮೇಲೆ ಪ್ರಾಣಾನೇ ಇಟ್ಟಿದ್ದಾರಮ್ಮ.''

ಅಮ್ಮ ಮತ್ತೆ ಏನನ್ನೂ ಕೇಳಲಿಲ್ಲ. ಅವರ ಮುಖದ ಮೇಲೆ ಸಂತೃಪ್ತಿಯ ಭಾವ ಮೂಡಿಬಂದಿತು. ನನ್ನನ್ನು ತಬ್ಬಿ, ಪ್ರೀತಿಯಿಂದ ನನ್ನ ಮುಂದಲೆ ಸವರಿ, ``ಹೋಗಿ ಕೂತ್ಕೋ, ನಾನು ಕಾಫಿ ಮಾಡಿ ತರ್ತೀನಿ,'' ಎಂದರು.

``ಅಮ್ಮಾ, ನೀನು ಹೋಗಿ ಅವರನ್ನು ಮಾತಾಡಿಸು. ನಾನು ಕಾಫಿ ಮಾಡಿಕೊಂಡು ಬರ್ತೀನಿ.''

``ಇಲ್ಲ ರಶ್ಮಿ. ನೀನು ಏನಿದ್ರೂ ಈಗ ಈ ಮನೆಯ ಅತಿಥಿ. ನಿನ್ನ ಗಂಡನ ಮನೇನೇ ನಿನ್ನ ಮನೆ. ಇಲ್ಲಿ ನಾನು ನಿನ್ನನ್ನು ಅಡುಗೆಮನೆಗೆ ಬಿಡೋದಿಲ್ಲ,'' ಎಂದು ಹೇಳುತ್ತಾ ಅಮ್ಮ ಹೊರಟುಹೋದರು. ನಾನು ಹೊರಗೆ ಬಂದೆ. ಅಪ್ಪ ರವಿಯ ಜೊತೆ ಮಾತಿನಲ್ಲಿ ತೊಡಗಿದ್ದರು. ಗೀತಾ, ರಾಹುಲ್ ಇಬ್ಬರೂ ತಮ್ಮ ರೂಮಿನಲ್ಲಿ ಪರೀಕ್ಷೆಗೆ ಓದುತ್ತಿದ್ದರು. ನಾನು ತಿರುಗಿ ನನ್ನ ರೂಮಿಗೆ ಬಂದೆ. ಒಂದೇ ವಾರದಲ್ಲಿ ನನ್ನ ಚಿರಪರಿಚಿತ ಕೋಣೆಯ ಸ್ಥಿತಿ ನೋಡಿ ನನಗೆ ಆಶ್ಚರ್ಯವಾಯಿತು. ರಾಹುಲ್ ತನ್ನ ಕ್ರಿಕೆಟ್‌ ಬ್ಯಾಟು, ವಿಕೆಟ್‌, ಪ್ಯಾಡ್‌ಗಳನ್ನು ನನ್ನ ಮಂಚದಡಿ ಬಿಸಾಡಿದ್ದ. ಮಂಚದ ಪಕ್ಕದಲ್ಲಿದ್ದ ಟೇಬಲ್ಲಿನ ಮೇಲೆ ಗೀತಾಳ ಪುಸ್ತಕಗಳು ಹರಡಿದ್ದವು. ಆದರೆ ನನ್ನ ಸಾಮಾನುಗಳು ತುಂಬಿದ್ದ ಅಲಮಾರಿ ಮಾತ್ರ ಹಾಗೇ ಇತ್ತು. ಅಮ್ಮ ಅದಕ್ಕೆ ಬೀಗ ಹಾಕಿಬಿಟ್ಟಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ