``ಹಲೋ ಆಂಟಿ.... ಹೊಸ ವರ್ಷದ ಶುಭಾಶಯಗಳು! ಹೇಗಿದ್ದೀರಿ... ಚೆನ್ನಾಗಿದ್ದೀರಾ?'' ರೇವತಿ ಫೋನ್ ರಿಸೀವ್ ಮಾಡಿದ ತಕ್ಷಣ ಆ ಬದಿಯಿಂದ ಮಧುರವಾದ ಹೆಣ್ಣು ಧ್ವನಿಯೊಂದು ಅಲೆಅಲೆಯಾಗಿ ತೇಲಿ ಬಂದಿತು.
``ಓ ಶೃತಿ... ನೀನಾ? ನಾನು ಚೆನ್ನಾಗಿದ್ದೀನಿ.... ನೀನು ಚೆನ್ನಾಗಿದ್ದೀಯಾ? ನಿನಗೂ ಹೊಸ ವರ್ಷದ ಶುಭಾಶಯಗಳು,'' ರೇವತಿ ಆದಷ್ಟೂ ತಮ್ಮ ದನಿಯಲ್ಲಿ ಉತ್ಸಾಹ ತುಂಬಲು ಯತ್ನಿಸುತ್ತಾ ನುಡಿದರು.
``ನಾನು ಚೆನ್ನಾಗಿದ್ದೀನಿ ಆಂಟಿ.... ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ತಾನೇ? ನಿಮ್ಮನ್ನು ಬಂದು ಭೇಟಿಯಾಗಬೇಕು ಅಂತ ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ.....'' ಬಹುಶಃ ಅವಳು ಇವರ ಮನೆಗೆ ಬರಲು ಅನುಮತಿ ಕೇಳುತ್ತಿದ್ದಿರಬೇಕು, ಆದರೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ರೇವತಿ ಅದಕ್ಕೆ ತೇಲಿಸಿ ಉತ್ತರಿಸುತ್ತಾ, ``ಆಗಲಮ್ಮ ಶೃತಿ.... ಇಷ್ಟರಲ್ಲಿ ಭೇಟಿ ಆಗೋಣ.... ನಾನು ಸ್ವಲ್ಪ ದಿನಗಳ ಮಟ್ಟಿಗೆ ಬೆಂಗಳೂರಿನ ತಂಗಿಯ ಮನೆಗೆ ಹೋಗೋಣ ಅಂತಿದ್ದೀನಿ.... ಆಗಲಿ, ಇನ್ನೊಂದು ಸಲ ನಾನೇ ಮಾಡ್ತೀನಿ. ಯಾರೋ ಕಾಲಿಂಗ್ ಬೆಲ್ ಒತ್ತಿದಂತಾಯ್ತು.... ಬೈ!'' ಎಂದು ಫೋನ್ ಇರಿಸಿದರು.
ಮುಗ್ಧ ಶೃತಿಗೆ ಇವರ ಮನೆಯಲ್ಲಿ ನಡೆಯುತ್ತಿದ್ದ ರಾಮಾಯಣ ಹೇಗೆ ಅರ್ಥವಾಗಬೇಕು? ರೇವತಿಯ ಮನೆಯ ನಾಲ್ವರು ಸದಸ್ಯರೂ ಸದಾ ಪರಸ್ಪರರ ಮೇಲೆ ಸಿಡುಕುತ್ತಾ ಕೋಪ ತೋರಿಸುತ್ತಿದ್ದರು. ಅಣ್ಣತಂಗಿಯರಾದ ಶಶಾಂಕ್ ಸುಧಾ ಒಂದು ಪಕ್ಷವಾದರೆ, ರೇವತಿಯ ಪತಿ ಕೃಷ್ಣಮೂರ್ತಿ ಮತ್ತೊಂದು ಪಕ್ಷ. ಇವರಿಬ್ಬರ ಮಧ್ಯೆ ರೇವತಿ ಯಾರನ್ನೂ ಬಿಟ್ಟುಕೊಡಲಾಗದೆ, ವೇದನೆ ಪಡುತ್ತಿದ್ದರು. ಮಕ್ಕಳ ಪರ ವಹಿಸಿದರೆ ಗಂಡನಿಗೆ ಸಿಟ್ಟು, ಪತಿಯನ್ನು ವಹಿಸಿಕೊಂಡರೆ ಮಕ್ಕಳಿಗೆ ಅಧಿಕ ಕೋಪ. ಮಾಡುವುದಾದರೂ ಏನು?
ಹೀಗೆ ಒಮ್ಮೆ ಮಗನ ಲಹರಿ ನೋಡಿಕೊಂಡು ರೇವತಿ ಹೇಳಿದರು, ``ನೋಡಪ್ಪ ಶಶಾಂಕ್, ನಿನಗಾಗಿ ಹಲಲಾರು ಕಡೆಯಿಂದ ಹುಡುಗಿಯರ ಪ್ರಸ್ತಾವನೆ ಬರುತ್ತಿದೆ. ನಿನಗೀಗ ಮದುವೆಗೆ ಸರಿಯಾದ ವಯಸ್ಸು. ನೀನು ಹ್ಞೂಂ ಅಂದ್ರೆ, ಹುಡುಗಿ ನೋಡಲು ಹೋಗೋಣ. ಬೇಕಾದರೆ ಮೊದಲು ಫೋಟೋ, ಬಯೋಡೇಟಾ ತರಿಸಿದರಾಯಿತು....'' ಮಗ ಏನೂ ಆಕ್ಷೇಪಣೆ ಹೇಳದಿದ್ದಾಗ ಮಾತು ಮುಂದುವರಿಸಿದರು, ``ಮದುವೆ ಅನ್ನೋದು ವಯಸ್ಸಿಗೆ ತಕ್ಕಂತೆ ಯಾವಾಗ ಆಗಬೇಕೋ ಆಗ ಆದರೇನೇ ಚಂದ, ನೀನೂ ಕೆಲಸಕ್ಕೆ ಸೇರಿ 4 ವರ್ಷ ಆಯ್ತಲ್ಲಪ್ಪ.....''
``ಅಯ್ಯೋ ಇವರಮ್ಮ.... ಈಗಲೇ ಏನು ಅವಸರ? ಮತ್ತೆ ನಮ್ಮ ಮನೆಗೆ ಹೊಂದುವಂಥ ಒಳ್ಳೆಯ ಹುಡುಗಿ ಸಿಗಬೇಕಲ್ಲ?'' ಮಗರಾಯ ಗೊಣಗಿದ.
``ನೋಡೋ ಶಶಾಂಕೂ....ನೀನು ಮೊದಲು ಹೂಂ ಅವನ್ನು..... ಹುಡುಗಿ ನೋಡಲು ಶುರು ಮಾಡೋಣ. ನೋಡಿದ ಮಾತ್ರಕ್ಕೆ ಎಲ್ಲಾ ಫೈನಲ್ ಆಗಿಬಿಡುತ್ತದೆಯೇ? ನೀನು ಎಲ್ಲಾ ವಿಧದಲ್ಲೂ ಓ.ಕೆ. ಅನ್ನುವವರೆಗೂ ನಾವು ಹೆಣ್ಣಿನ ಕಡೆಯವರಿಗೆ ಗ್ರೀನ್ ಸಿಗ್ನಲ್ ಕೊಡಲ್ಲ.''
``ಅಂದ್ರೆ.... ನಾನು ಮೆಚ್ಚಿದ ಹುಡುಗಿಯನ್ನೇ ಸೊಸೆಯಾಗಿ ಆರಿಸುತ್ತೀರಿ ಅಂತಾಯ್ತು.''
``ಹೂಂ ಕಣಪ್ಪ.... ಎಲ್ಲಿಯವರೆಗೂ ನೀನು ಮೆಚ್ಚುವುದಿಲ್ಲವೋ ಮಾತು ಮುಂದುರಿಸೋ ಪ್ರಶ್ನೆಯೇ ಇಲ್ಲ.''
``ಹಾಗಿದ್ದರೆ.... ನಾನು ಹೇಳುವ ಹುಡುಗಿಯನ್ನೇ ಸೊಸೆಯಾಗಿ ಆರಿಸಮ್ಮ.''
``ನಿನ್ನ ಮೆಚ್ಚುಗೆಯ ಹುಡುಗಿ.... ಓ, ಆಗ್ಲೆ ನೀನೇ ಹುಡುಗಿ ನೋಡ್ಕೊಂಡು ಆಯ್ತೇನಪ್ಪ?''