ಸೌಂದರ್ಯದ ಪ್ರತೀಕವೆಂದು ಹೇಳಲಾಗುವ ಮೆಹೆಂದಿ, ಹಬ್ಬಗಳು ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ತನ್ನದೇ ಆದ ಮಹತ್ವ ಹೊಂದಿದೆ. ಮೆಹೆಂದಿ ಇಲ್ಲದೆ ಹೆಣ್ಣಿನ ಅಲಂಕಾರ ಪೂರ್ಣಗೊಳ್ಳುವುದೇ ಇಲ್ಲ.

ಮೆಹಂದಿಯನ್ನು ಕೈಗೆ ಲೇಪಿಸಲು ಆರಂಭಿಸುತ್ತಿದ್ದಂತೆಯೇ, ಅದರ ಮಧುರ ಸುವಾಸನೆ ಎಲ್ಲೆಡೆ ಪಸರಿಸಲಾರಂಭಿಸುತ್ತದೆ. ಕೈಗಳ ಮೇಲೆ ಹಾಕಲಾಗುವ ಮೆಹೆಂದಿ ಡಿಸೈನ್‌ನಿಂದ ಸ್ತ್ರೀಯ ಸೌಂದರ್ಯ ಮತ್ತಷ್ಟು ಮೆರುಗು ಪಡೆದುಕೊಳ್ಳುತ್ತದೆ. ವಧುವಿನ ಶೃಂಗಾರವಂತೂ ಮೆಹೆಂದಿ ಇಲ್ಲದೆ ಪೂರ್ಣಗೊಳ್ಳಲು ಸಾಧ್ಯವೇ ಇಲ್ಲ.

ಡೆಮಿಮೂರ್‌, ಮಡೊನಾ, ನಾಲೆಮಿ, ಕ್ಯಾಂಪ್‌ ಬೆಲ್‌ರಂತಹ ಹೆಸರಾಂತ ಹಾಲಿವುಡ್‌ ನಟಿಯರು ಕೂಡ ಈಗ ತಮ್ಮ ಕೈಗಳ ಮೇಲೆ ಮೆಹೆಂದಿಯ ಹೊಸ ಡಿಸೈನುಗಳನ್ನು ಹಾಕಿಸಿಕೊಂಡು ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಬಗೆ ಬಗೆಯ ಮೆಹೆಂದಿ

mehandi-bina-shringar

ಈಗ ಮೆಹಂದಿಯಲ್ಲಿ ಹತ್ತು ಹಲವು ಡಿಸೈನುಗಳು ಕಂಡುಬರುತ್ತವೆ. ಇವುಗಳಲ್ಲಿ ಪಾರಂಪರಿಕ ಮೆಹೆಂದಿ, ಅರೇಬಿಕ್‌ ಮೆಹೆಂದಿ, ಗ್ಲಿಟರ್‌ ಮೆಹೆಂದಿ, ಜರ್ದೋಜಿ ಮೆಹಂದಿ ಮುಂತಾದ ವಿಶಿಷ್ಟವಾಗಿವೆ. ಇವುಗಳ ಹೊರತಾಗಿ ಪಾಕಿಸ್ತಾನಿ ಮೆಹೆಂದಿಯ ಡಿಸೈನುಗಳನ್ನು ಇಷ್ಟಪಡಲಾಗುತ್ತಿದೆ.

ಪಾರಂಪರಿಕ ಮೆಹೆಂದಿಯನ್ನು ಮುಖ್ಯವಾಗಿ ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ್‌, ಬಾಂಗ್ಲಾದೇಶದಲ್ಲಿ ಹಾಕಲಾಗುತ್ತದೆ. ಭಾರತೀಯ ಪಾರಂಪರಿಕ ಮೆಹೆಂದಿ ಡಿಸೈನುಗಳಲ್ಲಿ ರಾಜಾಸ್ಥಾನಿ ಮೆಹೆಂದಿ, ಮಾರರ್ವಾಡಿ ಮೆಹೆಂದಿ, ಮೊಘಲ್ ಮೆಹೆಂದಿ ಮುಂತಾದವುಗಳಿವೆ. ಈ ಡಿಸೈನುಗಳಲ್ಲಿ ಹೂ ಎಲೆಗಳು, ನವಿಲು, ವಧುವರ ಮುಂತಾದ ವಿಶಿಷ್ಟವೆನಿಸುತ್ತವೆ. ಭಾರತೀಯ ಮದುವೆ ಸಮಾರಂಭಗಳು ಹಾಗೂ ಹಬ್ಬಗಳ ಸಂದರ್ಭದಲ್ಲಿ ಇಂತಹ ಡಿಸೈನುಗಳನ್ನು ಕೈಗಳ ಮೇಲೆ ಹಾಕಿಸಿಕೊಳ್ಳಲಾಗುತ್ತದೆ.

ಅರೇಬಿಕ್‌ ಮೆಹೆಂದಿ ಡಿಸೈನ್ಸ್ ವಿಶೇಷವಾಗಿ ಹೂಗಳ ಆಕಾರವನ್ನು ಆಧರಿಸುವುದು. ಇದು ಭಾರತ ಹಾಗೂ ಪಾಕಿಸ್ತಾನಿ ಡಿಸೈನಿಗಿಂತ ವಿಭಿನ್ನ. ಈ ಡಿಸೈನ್‌ಗಳಿಗೆ ವಿಶೇಷವಾಗಿ ಕಪ್ಪು ಮೆಹೆಂದಿಯನ್ನು ಬಳಸಲಾಗುತ್ತದೆ. ಅದಕ್ಕಾಗಿ ಹೇರ್‌ ಡೈಮಿಕ್ಸ್ ಮೆಹೆಂದಿ ಬಳಸಲಾಗುತ್ತದೆ.

ಪಾರಂಪರಿಕ ಮೆಹೆಂದಿಗೆ ಪರ್ಯಾಯ

AA03-142158-pih

ಇಂದಿನ ಯುವತಿಯರು ಮೆಹೆಂದಿಯಲ್ಲಿ ಬಗೆಬಗೆಯ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಈಗಂತೂ ವಧುಗಳು ಪಾರಂಪರಿಕ ಮೆಹೆಂದಿಗಿಂತ ಜರ್ದೋಜಿ, ಗ್ಲಿಟರ್‌ ಮೆಹೆಂದಿ ಹಾಗೂ ನೇಲ್ ಪಾಲಿಶ್‌ ಮೆಹೆಂದಿಗಳನ್ನು ಉಪಯೋಗಿಸುತ್ತಿದ್ದಾರೆ. ಜರ್ದೋಜಿಯಲ್ಲಿ ಪಾರಂಪರಿಕ ಮೆಹೆಂದಿಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿ ಚಿನ್ನ ಬೆಳ್ಳಿಯ ಜರತಾರಿ, ಕ್ರಿಸ್ಟಲ್, ಡೈಮಂಡ್‌, ಪರ್ಲ್ ಹಾಗೂ ಸ್ವರೋಸ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಆದರೆ ಜರ್ದೋಜಿ ಮೆಹೆಂದಿಯನ್ನು ತಾತ್ಕಾಲಿಕವಾಗಿ ವಿಶಿಷ್ಟ ಸಂದರ್ಭಗಳಿಗಾಗಿ ಉಪಯೋಗಿಸಲಾಗುತ್ತದೆ. ಉದಾಹರಣೆ ಮದುವೆ ರಿಸೆಪ್ಶನ್‌, ಸಂಜೆ ಪಾರ್ಟಿಗಳಿಗಾಗಿ. ಒಂದುವೇಳೆ ನಿಮ್ಮ ಬಳಿ ಮೆಹೆಂದಿ ಒಣಗಿಸಲು ಹೆಚ್ಚು ಸಮಯ ಇಲ್ಲಿಂದರೆ ನೀವು ಜರ್ದೋಜಿ ಮೆಹೆಂದಿಯನ್ನು ಕೈಗಳಿಗೆ ಉಪಯೋಗಿಸಬಹುದು. ಜರ್ದೋದಿ ಮೆಹೆಂದಿಯಲ್ಲಿ ಕೈಗಳ ಮೇಲೆ ವಿಶೇಷವಾಗಿ ಹೂಗಳು, ಎಲೆ, ನವಿಲು, ಪಾತರಗಿತ್ತಿ ಮುಂತಾದವುಗಳ ಚಿತ್ರ ಬಿಡಿಸಿ ಅದರಲ್ಲಿ ಕ್ರಿಸ್ಟಲ್, ಪರ್ಲ್, ಕುಂದಣ ಮುಂತಾದವನ್ನು ಅಳವಡಿಸಲಾಗುತ್ತದೆ.

ಗ್ಲಿಟರ್‌ ಮೆಹೆಂದಿ ಕೂಡ ಈಗ ಫ್ಯಾಷನ್‌ ಟ್ರೆಂಡ್‌ನಲ್ಲಿದೆ. ಈ ಕೋನ್‌ ಮಾರುಕಟ್ಟೆಯಲ್ಲಿ ಬಗೆಬಗೆಯ ಬಣ್ಣಗಳಲ್ಲಿ ದೊರೆಯುತ್ತದೆ. ಪಾರಂಪರಿಕ ಮೆಹೆಂದಿ ಡಿಸೈನ್‌ ಎದ್ದು ಕಾಣಲು ಗ್ಲಿಟರ್‌ ಮೆಹೆಂದಿಯನ್ನು ಬಳಸಲಾಗುತ್ತದೆ. ಗ್ಲಿಟರ್‌ ಮೆಹೆಂದಿಯ ಕೋನ್‌ನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕಾಗಿ ಪಾರದರ್ಶಿ ಹೇರ್‌ ಜೆಲ್ ‌ಮತ್ತು ಮೀಕಾ ಗ್ಲಿಟರ್‌ನ ಮಿಶ್ರಣವನ್ನು ನೀವು ಅಗತ್ಯಕ್ಕನುಗುಣವಾಗಿ ಬಳಸಬಹುದು. ಎರಡೂ ವಸ್ತುಗಳನ್ನು ನೀವು ಒಂದು ಡಿಶ್‌ನಲ್ಲಿ ಹಾಕಿಕೊಂಡು ಒಂದು ಚಮಚದಿಂದ ಮಿಕ್ಸ್ ಮಾಡಿ, ನಂತರ ಅದನ್ನು ಅಪ್ಲಿಕೇಟರ್‌ ಕೋನ್‌ನಲ್ಲಿ ಭರ್ತಿ ಮಾಡಿಕೊಳ್ಳಿ ಹಾಗೂ ಪಾರಂಪರಿಕ ಮೆಹೆಂದಿಯನ್ನು ತಯಾರಿಸಿಕೊಂಡ ಬಳಿಕ ನಿಮ್ಮ ಪೋಷಾಕಿನ ಬಣ್ಣಗಳಿಗೆ ಹೊಂದುವಂತಹ ಬಣ್ಣಗಳಿಂದ ಕೈಗಳಿಗೆ ಬೇರೆ ಬೇರೆ ಡಿಸೈನ್ಸ್ ಮಾಡಿಕೊಳ್ಳಿ.

ಒಂದು ವೇಳೆ ನೀವು ಗ್ಲಿಟರ್‌ ಮೆಹೆಂದಿಯಿಂದ ಡಿಸೈನ್ಸ್ ಮಾಡುವವರಿದ್ದರೆ, ಅದಕ್ಕಾಗಿ ನೀವು ಹೂವು, ಎಲೆ, ಪಾತರಗಿತ್ತಿ, ನವಿಲು ಮುಂತಾದವುಗಳ ಡಿಸೈನ್ಸ್ ರೂಪಿಸಬಹುದು. ಆದರೆ ಹೀಗೆ ಮಾಡಿದ ಬಳಿಕ ಉಗುರಿನ ಮೇಲೆ ಮ್ಯಾಚಿಂಗ್‌ನೇಲ್ ‌ಪಾಲಿಶ್‌ಹಚ್ಚುವುದನ್ನು ಮರೆಯಬೇಡಿ. ಗ್ಲಿಟರ್‌ ಮೆಹೆಂದಿಯನ್ನು ಕೈಗಳ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಗ್ಲಿಟರ್ ಮೆಹೆಂದಿಯಲ್ಲಿ ಕ್ರಾಫ್ಟ್ ಗ್ಲಿಟರ್‌ನ್ನು ಉಪಯೋಗಿಸಲೇಬೇಡಿ. ಏಕೆಂದರೆ ಕ್ರಾಫ್ಟ್ ಗ್ಲಿಟರ್‌ ನಿಮ್ಮ ತ್ವಚೆಗೆ ಸುರಕ್ಷಿತವಲ್ಲ. ಈ ತೆರನಾದ ಮೆಹೆಂದಿಯನ್ನು ಸಾಮಾನ್ಯವಾಗಿ ಮದುವೆ ರಿಸೆಪ್ಶನ್‌ ಹಾಗೂ ಪಾರ್ಟಿಗಳಲ್ಲಿ ಪಾಲ್ಗೊಳ್ಳಲು ಬಳಸಲಾಗುತ್ತದೆ.

ಫ್ಯಾಷನ್‌ ಬಗ್ಗೆ ಜಾಗರೂಕರಾಗಿರುವ ಮಹಿಳೆಯರು, ಉದ್ಯೋಗಸ್ಥ ಮಹಿಳೆಯರು ಹಾಗೂ ಯುವತಿಯರಲ್ಲಿ ಹೊಸ ರೀತಿಯ ಮೆಹೆಂದಿ ಬಹಳ ಜನಪ್ರಿಯವಾಗುತ್ತಿದೆ. ಗ್ಲಿಟರ್‌ ಮೆಹೆಂದಿಯ ಹಾಗೆ ನೇಲ್ ‌ಪಾಲಿಶ್‌ ಮೆಹೆಂದಿ ಕೂಡ ತಾತ್ಕಾಲಿಕವಾಗಿ ಬಳಸಲಾಗುತ್ತದೆ. ನೇಲ್ ಪಾಲಿಶ್‌ ಮೆಹೆಂದಿಗಾಗಿಯೂ ಕೂಡ ಕೋನ್‌ನ್ನು ಉಪಯೋಗಿಸಬಹುದು. ಇದಕ್ಕಾಗಿ ಕೆಂಪು ಬಣ್ಣದ ನೇಲ್ ಪಾಲಿಶ್‌ನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬಳಿಕ ನೇಲ್ ಪಾಲಿಶ್‌ ರಿಮೂವರ್‌ನಿಂದ ಈ ಮೆಹೆಂದಿಯನ್ನು ಸುಲಭವಾಗಿ ನಿವಾರಿಸಬಹುದು.

ಟ್ಯಾಟೂ ಮೆಹೆಂದಿ

DSC_0071

ಟ್ಯಾಟೂ ಮೆಹೆಂದಿಯಲ್ಲಿ ಸಾಮಾನ್ಯವಾಗಿ ಚಿಕ್ಕಪುಟ್ಟ ಡಿಸೈನ್‌ಗಳು ಅಂದರೆ ಪಾತರಗಿತ್ತಿ, ನವಿಲು, ಹೂಗಳು, ಡ್ರ್ಯಾಗನ್‌, ಸೂರ್ಯ ಇಕೆಬಾನಾ, ಸ್ಟೆನ್ಸಿಲ್, ಹದ್ದು, ಪ್ಯಾಂಥರ್ಸ್‌ ಚಿತ್ರ ಬಿಡಿಸಲಾಗುತ್ತದೆ.

ಮದುವೆ ಸಮಾರಂಭಗಳಲ್ಲಿ ನೀವು ಲಹಂಗಾ ಹಾಗೂ ಬ್ಯಾಕ್‌ ಲೆಸ್‌ ರವಿಕೆ ಧರಿಸುವವರಾಗಿದ್ದಲ್ಲಿ ನಿಮ್ಮ ಬೆನ್ನಿನ ಮೇಲೆ ಅಥವಾ ಬಲಭಾಗದ ತೋಳಿನ ಮೇಲೆ ಲಹಂಗಾದ ಮೇಲ್ಭಾಗದಲ್ಲಿ ಅಥವಾ ನಾಭಿಯ ಅಕ್ಕಪಕ್ಕ ಆಕರ್ಷಕ ಡಿಸೈನ್ಸ್ ರೂಪಿಸಿಕೊಳ್ಳಬಹುದು. ನೀವು ಟ್ಯಾಟೂ ಮೆಹೆಂದಿಯಲ್ಲಿ ಸ್ಟೆನ್ಸಿಲ್ ಡಿಸೈನ್‌ಗಳ ಪ್ರಯೋಗ ಕೂಡ ಮಾಡಬಹುದು.

ನಿಮ್ಮ ಸಂಗಾತಿಯ ಜನ್ಮದಿನಕ್ಕೆ ಅಥವಾ ವ್ಯಾಲೆಂಟೈನ್‌ ದಿನದಂದು ನಿಮ್ಮ ಫ್ರೆಂಡ್‌ ಅಥವಾ ಸಂಗಾತಿಯ ಹೆಸರಿನಲ್ಲಿ ನಿಮ್ಮ ಕೈಗಳ ಮೇಲೆ ಕ್ಯಾಲಿಗ್ರಾಫಿಕ್‌ ಟ್ಯಾಟೂ ಮೆಹೆಂದಿಯಿಂದ ಹಾಕಿಸಿಕೊಳ್ಳಬಹುದು. ಇದರಿಂದ ನಿಮ್ಮ ಖುಷಿಯ ಆ ದಿನ ಎಂದೆಂದೂ ನೆನಪಲ್ಲಿ ಉಳಿಯುತ್ತದೆ. ಪಾರಂಪರಿಕ ಮೆಹೆಂದಿ ಡಿಸೈನ್‌ನಲ್ಲಿ ಈಚೆಗೆ ಪಾಕಿಸ್ತಾನಿ ಮೆಹೆಂದಿ ಡಿಸೈನ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಅವುಗಳಲ್ಲಿ ಕಪ್ಪು ಮೆಹೆಂದಿಯಿಂದ ಔಟ್‌ ಲಾನ್‌ ಹಾಕಲಾಗುತ್ತದೆ. ಅಂದಹಾಗೆ, ಪಾಕಿಸ್ತಾನಿ ಮೆಹೆಂದಿಯು ಭಾರತ ಹಾಗೂ ಅರೇಬಿಕ್‌ ಮೆಹೆಂದಿಯ ಮಿಶ್ರಣವಾಗಿದೆ.

– ನಮ್ರತಾ

ಟ್ಯಾಟೂ ಮೆಹಂದಿಯನ್ನು ಎಲ್ಲಿ ಹಾಕಿಸಿಕೊಳ್ಳಬೇಕು?

ಟ್ಯಾಟೂ ಮೆಹೆಂದಿಯನ್ನು ನೀವು ನಿಮ್ಮ ಬೆನ್ನಿನ ಭಾಗದಲ್ಲಿ, ನಾಭಿಯ ಮೇಲೆ, ಎದೆಯ ಸ್ವಲ್ಪ ಮೇಲ್ಭಾಗದಲ್ಲಿ, ಸೊಂಟದ ಮೇಲೆ, ಕುತ್ತಿಗೆ ಭಾಗದಲ್ಲಿ, ಬಾಹುಗಳ ಮೇಲೆ, ಸೊಂಟದ ಕೆಳಭಾಗ ಮಣಿಕಟ್ಟಿನ ಭಾಗದಲ್ಲಿ ಹಾಕಿಸಿಕೊಳ್ಳಬಹುದು.

ಹನಿಮೂನ್‌ ಅಥವಾ ಪಿಕ್ನಿಕ್‌ ಸಂದರ್ಭದಲ್ಲಿ ನೀವು ಶಾರ್ಟ್‌ ಅಥವಾ ಬಿಕಿನಿ ಧರಿಸುವವರಿದ್ದಲ್ಲಿ ದೇಹದ ವಿಶೇಷ ಭಾಗಗಳಲ್ಲಿ ಡ್ರ್ಯಾಗನ್‌ ಅಥವಾ ಚೇಳಿನ ಡಿಸೈನ್‌ ಹಾಕಿಸಬಹುದು.

ಹನಿಮೂನ್‌ ಸಂದರ್ಭದಲ್ಲಿ ನೀವು ನಿಮ್ಮ ಪತಿಯ ಜೊತೆಗೆ ಟ್ಯಾಟೂ ಮೆಹೆಂದಿಯ ಆಟ ಕೂಡ ಆಡಬಹುದು. ನೀವು ನಿಮ್ಮ ದೇಹದ ಮೇಲೆ ಪತಿಯ ಹೆಸರನ್ನು ಎಲ್ಲೋ ಹಾಕಿಸಿಕೊಂಡಿರುತ್ತೀರಿ. ಅವನಿಗೆ ಅದನ್ನು ಹುಡುಕಲು ಹೇಳಬೇಕು. ನಿಮ್ಮ ದೇಹದ ಮೇಲೆ ಎಷ್ಟು ಟ್ಯಾಟೂಗಳಿವೆ ಎಂಬುದನ್ನು ಕೂಡ ಆತನಿಗೆ ಹೇಳಲು ತಿಳಿಸಬೇಕು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ