ಕಳೆದ ಬಾರಿ `ಕಾನ್ಸ್ ಫಿಲ್ಮ್ ಫೆಸ್ಟಿವಲ್’ನಲ್ಲಿ ವಿದ್ಯಾ ಬಾಲನ್, ಸೋನಂ ಕಪೂರ್‌ರಂತಹ ನಟಿಯರು ಮೂಗುತಿ ಧರಿಸಿ ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ರೆಡ್ ಕಾರ್ಪೆಟ್ ಮೇಲೆ ಲಾಸ್ಯವಾಡಿದರು. ವಿದ್ಯಾ ಬಾಲನ್ ಭಾರತೀಯ ಸೀರೆಯುಟ್ಟು ಮೂಗುತಿ ಧರಿಸಿದ್ದರು. ಸೋನಂ ಕಪೂರ್ ಯುವತಿಯರನ್ನು ಪ್ರತಿನಿಧಿಸುವ ನಟಿಯಾಗಿದ್ದು ಪಾರ್ಟಿ ಗೌನ್ ಮತ್ತು ಡೈಮಂಡ್ ಮೂಗುತಿ ಧರಿಸಿ ಕ್ಯಾಮೆರಾ ಎದುರಿಗೆ ಬಿಂದಾಸ್ ಆಗಿ ನಲಿಯುತ್ತಿದ್ದರು. ಹಳೆಯ ಫ್ಯಾಷನ್ ಯಾವಾಗಲೂ ಮರಳುತ್ತಿರುತ್ತದೆ. ಅವು ಬಟ್ಟೆಯಾಗಲೀ, ಹೇರ್ ಸ್ಟೈಲ್ ಆಗಲೀ ಅಥವಾ ಒಡವೆಗಳಾಗಲೀ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಹೊಸ ರೂಪದಲ್ಲಿ ಮತ್ತೆ ಬರುತ್ತವೆ.
ಪಾರಂಪರಿಕ ಒಡವೆಗಳು
ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ ಹೀಗೆ ಹೇಳುತ್ತಾರೆ, ನಮ್ಮ ಅತ್ತೆ ಕೊಟ್ಟ ಪಾಟಲಿ ಬಳೆಗಳೊಂದಿಗೆ ಯಾವುದೇ ಒಡವೆಗಳನ್ನು ಹೋಲಿಸಲಾಗುವುದಿಲ್ಲ. ಚಂದ್ರಹಾರ, ಬೋರ್ ಮಾಳ ಮತ್ತು ಶಾಹೀಸರಗಳಂತಹ ಪಾರಂಪರಿಕ ಮಹಾರಾಷ್ಟ್ರದ ಒಡವೆಗಳೂ ನನಗೆ ಬಹಳ ಇಷ್ಟ. ಹಿಂದೆ ಜನ ತಮ್ಮ ಶ್ರೀಮಂತಿಕೆ ಹಾಗೂ ವೈಭವ ತೋರಿಸಿಕೊಳ್ಳಲು ತೂಕವಿರುವ ಚಿನ್ನದ ಒಡವೆಗಳನ್ನು ಧರಿಸಿ ಓಡಾಡುತ್ತಿದ್ದರು. ಶ್ರೀಮಂತ ಮಹಿಳೆಯರಂತೂ ಮೈಪೂರ್ತಿ ಒಡವೆಗಳನ್ನು ಹೇರಿಕೊಂಡಿರುತ್ತಿದ್ದರು.
ಮಹಾರಾಷ್ಟ್ರದ ಹಳೆಯ ಪಾರಂಪರಿಕ ಒಡವೆಗಳಲ್ಲಿ ವಿವಿಧ ಬಗೆಯ ಅನೇಕ ಡಿಸೈನ್‌ಗಳ ಸರಗಳು ಸಿಗುತ್ತಿದ್ದವು. ಅವುಗಳಲ್ಲಿ ಲಕ್ಷ್ಮೀ ಸರ, ಚಂಪಾ ಸರ, ಪೋಹಾ ಸರ, ಶಾಹೀಸರ, ಹೆಸರುಕಾಳಿನ ಸರ, ಗಲಸರೀ, ರುದ್ರಾಕ್ಷಿ ಸರ, ಪುತಲಿ ಸರ, ಚಿಂಚಪೇಟಿ, ತನಮಣಿ, ಕೊಲ್ಹಾಪುರ ಸಾಜ್ ಠುಶೀ, ಮೋಹನ್ ಮಾಲಾ, ಜ್ರಟೀಕ್, ಸೂರ್ಯಹಾರ ಇತ್ಯಾದಿ ಬಹಳ ಪ್ರಚಲಿತವಾಗಿದ್ದವು. ಆದರೆ ಕಿವಿಗಳಲ್ಲಿ ಕೇವಲ ಕರ್ಣಪ್ ಮತ್ತು ಜುಮಕಿಗಳನ್ನೇ ಧರಿಸುತ್ತಿದ್ದರು. ಅವು ಚಿನ್ನ ಅಥವಾ ವಜ್ರದ್ದಾಗಿರುತ್ತಿದ್ದವು.
ಹಗುರ ಆಭರಣಗಳು
ಮೂಗುತಿಗಳೂ ಸಹ ಮಹಾರಾಷ್ಟ್ರದ ವಿವಿಧ ಜಾತಿ ಮತ್ತು ಸಮಾಜದ ನಿಯಮಗಳಿಗನುಸಾರವಾಗಿ ವಿವಿಧ ಪ್ರಕಾರಗಳನ್ನು ತಯಾರಿಸಲಾಗಿರುತ್ತವೆ. ಅವುಗಳಲ್ಲಿ ಬ್ರಾಹ್ಮಣಿ ಮೂಗುತಿ, ಕೋಲಿ ಮೂಗುತಿ, ಕರ್ನಾಟಕಿ ಮೂಗುತಿ, ಬೆಳಗಾವಿ ಮೂಗುತಿ ಇತ್ಯಾದಿ ಬಹಳ ಪ್ರಚಲಿತಾಗಿದ್ದವು. ಮಂಗಳಸೂತ್ರ ಸಹ ಕರಿ ಮುತ್ತುಗಳಿಂದಲೇ ಪೋಣಿಸಲ್ಪಟ್ಟಿರುತ್ತಿದ್ದವು. ಅವುಗಳಲ್ಲಿ ಚಿನ್ನದ ಪೆಂಡೆಂಟ್‌ಅಥವಾ ಮೂಗಾರತ್ನ ಅಳವಡಿಸಲಾಗುತ್ತಿರುತ್ತಿತ್ತು. ಹಿಂದಿನ ಕಾಲದ ಮಹಾರಾಷ್ಟ್ರದ ಮೂಗುತಿ ದೊಡ್ಡದಾಗಿ ತೂಕದ್ದಾಗಿರುತ್ತಿದ್ದವು.
ಊಟ ಮಾಡುವಾಗ ಅದನ್ನು ಮೇಲಕ್ಕೆ ಮಾಡಿಕೊಳ್ಳಬೇಕಾಗುತ್ತಿತ್ತು. ಈ ಮೂಗುತಿಗಳನ್ನು ಆಯಾ ಜಾತಿಗಳಿಗೆ ಅನುಗುಣವಾಗಿ ತಯಾರಿಸಲಾಗುತ್ತಿತ್ತು. ಆದರೆ ಈಗ ಮೂಗುತಿಗಳು ಸಣ್ಣದಾಗಿ, ಆಕರ್ಷಕವಾಗಿ ಸಿಗತೊಡಗಿವೆ.
ಬಳೆಗಳಲ್ಲಿ ಗೋಠ್, ಪಾಟ್ಯಾ, ಜಿಲೇಬಿ ತೋಡು, ಪಿಛೋಡಿ, ಶಿಂಧೆ ಶಾಹಿ ತೋಡು ಇತ್ಯಾದಿ ಜನಪ್ರಿಯಾಗಿವೆ. ಕಾಲುಗಳಲ್ಲಿ ಬೆಳ್ಳಿಯ ಗೆಜ್ಜೆಗಳು ಅಥವಾ ಕಡಗಗಳನ್ನು ಧರಿಸಲಾಗುತ್ತಿತ್ತು. ಹಿಂದೆ ಚಿನ್ನ ಸಾಕಷ್ಟು ಅಗ್ಗವಾಗಿ ಸಿಗುತ್ತಿತ್ತು. 9 ಗಜದ ಸೀರೆಯುಟ್ಟು ಆಭರಣಗಳನ್ನು ತೊಟ್ಟ ಮಹಿಳೆಯರನ್ನು ನೋಡುವುದೇ ಚೆಂದವಾಗಿತ್ತು. ಈಗ ಮಹಾರಾಷ್ಟ್ರದ ಪಾರಂಪರಿಕ ಒಡವೆಗಳನ್ನು ನೋಡುವುದೇ ಕಡಿಮೆಯಾಗಿದೆ.
ಯಾವುದು ಉತ್ತಮ?
ಅನೇಕ ಉದ್ಯೋಗಸ್ಥ ಮಹಿಳೆಯರು ಮದುವೆ, ಮುಂಜಿ, ನಾಮಕರಣ, ಅರಿಶಿನ, ಕುಂಕುಮ ಇತ್ಯಾದಿ ಪಾರಂಪರಿಕ ಕಾರ್ಯಕ್ರಮಗಳಲ್ಲಿ ಮಾತ್ರ ಇಂತಹ ಒಡವೆಗಳನ್ನು ಧರಿಸುತ್ತಾರೆ. ಈಗಿನ ಯುವಪೀಳಿಗೆ ಹೆಚ್ಚಾಗಿ ಸೀರೆ ಉಡುವುದಿಲ್ಲ. ಮನೆಯಲ್ಲಿ ಯಾವುದೇ ಸಮಾರಂಭವಿರಲಿ ಲಹಂಗಾ, ಬ್ಲೌಸ್ ಅಥವಾ ಪಂಜಾಬಿ ಡ್ರೆಸ್‌ನ್ನೇ ಹೆಚ್ಚಾಗಿ ಧರಿಸುತ್ತಾರೆ. ಸಂಜೆಯ ರಿಸೆಪ್ಶನ್, ಆಫೀಸ್ ಪಾರ್ಟಿ, ಬರ್ಥ್‌ಡೇ ಪಾರ್ಟಿ ಅಥವಾ ಬೇರೆ ಯಾವುದಾದರೂ ಫಂಕ್ಷನ್ ಇದ್ದರೆ ಗೌನ್ ಅಥವಾ ಫ್ರಾಕ್ ಧರಿಸುತ್ತಾರೆ. ಈ ಉಡುಪುಗಳೊಂದಿಗೆ ಪಾರಂಪರಿಕ ಒಡವೆಗಳು ಚೆನ್ನಾಗಿ ಕಾಣಿಸುವುದಿಲ್ಲ. ಇಂತಹ ಉಡುಪುಗಳ ಮೇಲೆ ಯಾವ ರೀತಿಯ ಒಡವೆಗಳನ್ನು ಧರಿಸಬೇಕು ಮತ್ತು ಪಾರಂಪರಿಕ ಒಡವೆಗಳಿಗೆ ಯಾವ ಪರ್ಯಾಯ ಲಭ್ಯವಿವೆ ಎಂಬ ಪ್ರಶ್ನೆಗಳನ್ನು ಮುಂಬೈನ ಜ್ಯೂವೆಲರ್ಸ್‌ಧವನ್ ಮತ್ತು ರೇವತಿಯರನ್ನು ಕೇಳಿದಾಗ ಅವರು ಹಳೆಯ ಮತ್ತು ಹೊಸ ಒಡವೆಗಳ ರಾಶಿ ತೋರಿಸಿ ಪ್ರತಿ ಒಡವೆಯ ಸಂಪೂರ್ಣ ಮಾಹಿತಿ ನೀಡಿದರು.
ಮಾಡರ್ನ್ ರೂಪ
ಚಿನ್ನದ ಠುಶಿಯನ್ನು ತೋರಿಸಿದ ಅವರು ಅದನ್ನು ಸೀರೆಯ ಮೇಲೆ ಮಾತ್ರ ಧರಿಸಬಹುದು ಎಂದರು. ಜೊತೆಗೆ ಚಿನ್ನದಲ್ಲಿ ತಯಾರಿಸುವಂತಹ ಠುಶಿ ಮತ್ತು ಮುತ್ತುಗಳಿಂದ ತಯಾರಿಸಿದ ಠುಶಿಯನ್ನೂ ತೋರಿಸಿದರು. ಅದು ಪಾರ್ಟಿ ಗೌನ್‌ನೊಂದಿಗೆ ಬಹಳ ಸುಂದರವಾಗಿ ಕಾಣುತ್ತದೆ. ವಜ್ರ ಟೀಕ್ ನಂತರ ಒಡವೆಯನ್ನು 100 ಗ್ರಾಂನೊಳಗೆ ತಯಾರಿಸಬಹುದು. ಅದೇ ಒಡವೆ ಅವರ ಬಳಿ 40 ಗ್ರಾಂನಲ್ಲಿಯೂ ಲಭ್ಯವಿದೆ. ಚಿಂಚಪೇಟಿ ಬರೀ ಚಿನ್ನದಲ್ಲಿ ತಯಾರಾಗಿದ್ದು ಮಧ್ಯದಲ್ಲಿ ಡೈಮಂಡ್ ಪೆಂಡೆಂಟ್‌ನಿಂದ ಅಲಂಕೃತವಾಗಿದೆ. ಚಿಂಚಪೇಟಿಯನ್ನು ಕುತ್ತಿಗೆಯಲ್ಲಿ, ಕೈಗಳಲ್ಲಿ ಬ್ರೇಸ್‌ಲೆಟ್ ರೂಪದಲ್ಲಿ ಮತ್ತು ತೋಳಬಂದಿಯಂತೆಯೂ ಧರಿಸಬಹುದು ಎಂದರು. ಬಕುಳವೇ ಸರವನ್ನು ಈಗ ವಜ್ರಗಳು ಮತ್ತು ಮುತ್ತುಗಳಿಂದಲೂ ತಯಾರಿಸಬಹುದು. ಅದು ಪಾರ್ಟಿ ಗೌನ್ ಮತ್ತು ಪಂಜಾಬಿ ಡ್ರೆಸ್ ಮೇಲೂ ಚೆನ್ನಾಗಿರುತ್ತದೆ. ಶಿಂದೆ ಶಾಹಿ ತೋಡು 200 ಗ್ರಾಂಗಿಂತಲೂ ಹೆಚ್ಚಿನ ಚಿನ್ನದಿಂದ ತಯಾರಾಗುತ್ತದೆ. ಅದೇ ತೋಡು ಮುತ್ತು ಮತ್ತು ಚಿನ್ನ ಉಪಯೋಗಿಸಿ ಕಡಿಮೆ ತೂಕದಲ್ಲಿ ಹಾಗೂ ಮಾಡರ್ನ್ ರೂಪದಲ್ಲಿ ತಯಾರಿಸಲಾಗುತ್ತಿದೆ.
ಅದ್ಭುತ ಬಿಸ್‌ನೆಸ್
`ಜಸ್ಟ್ ಜ್ಯೂವೆಲರಿ’ಯ ಸಂಧ್ಯಾ ಶಾ ಮತ್ತು ಜಾಸ್ಮಿನ್ ಶಾ ಅತ್ತೆ ಸೊಸೆ ಜೋಡಿ ಹಳೆಯ ಪಾರಂಪರಿಕ ಹಾಗೂ ಮಾಡರ್ನ್‌ಒಡವೆಗಳ ಮೇಳ ನಡೆಸುತ್ತಾರೆ. ತಮ್ಮ ಒಡವೆಗಳನ್ನು ಪಾರಂಪರಿಕ ಹಾಗೂ ಆಧುನಿಕ ಎರಡೂ ಬಗೆಯ ಉಡುಪುಗಳೊಂದಿಗೆ ಧರಿಸಬಹುದು ಎಂದು ಸೊಸೆ ಜಾಸ್ಮಿನ್ ಶಾ ಹೇಳುತ್ತಾರೆ. ಯಾರಾದರೂ ಮಹಿಳೆ ತಮ್ಮ ಸೀರೆ, ಲಂಗ, ರವಿಕೆ, ಪಂಜಾಬಿ ಡ್ರೆಸ್, ಗೌನ್ ಅಥವಾ ಫ್ರಾಕ್‌ನಂತಹ ಉಡುಪನ್ನು ತೆಗೆದುಕೊಂಡು ಬಂದರೆ ಅವರ ಇಷ್ಟಕ್ಕೆ ತಕ್ಕಂತೆ ಮುಖ್ಯವಾಗಿ ಅವರ ಬಜೆಟ್‌ಗೆ ತಕ್ಕಂತೆ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ. ಅತ್ತೆ ಆರಂಭಿಸಿದ ವ್ಯಾಪಾರವನ್ನು ಅವರ ಸೊಸೆಯೂ ಅವರೊಂದಿಗೆ ಸೇರಿಕೊಂಡು ಸಂಭಾಳಿಸುತ್ತಿದ್ದಾರೆ.
– ಕೆ. ಸುವರ್ಣ
ಗಮನಿಸಿ
ಚಿನ್ನ, ವಜ್ರ ಅಥವಾ ಮುತ್ತಿನ ಆಭರಣಗಳನ್ನು ಎಂದೂ ಒಟ್ಟಿಗೆ ಇಡಬೇಡಿ. ಅವನ್ನು ಬೇರೆ ಬೇರೆ ಇಡಿ.
ಒಡವೆಗಳನ್ನು ಪದೇ ಪದೇ ಪಾಲಿಶ್ ಮಾಡಿಸಬೇಡಿ.
ಒಂದು ವೇಳೆ ಸೀರೆ ಅಥವಾ ಪಾರ್ಟಿ ಗೌನ್ ಮೇಲೆ ದೊಡ್ಡ ದೊಡ್ಡ ಕಿವಿಗಳ ಒಡವೆಗಳನ್ನು ಧರಿಸಿದ್ದರೆ ಕುತ್ತಿಗೆಯಲ್ಲಿ ನೆಕ್ಲೇಸ್‌ಧರಿಸಬೇಡಿ.
ಜುಮಕಿ ಹಾಗೂ ಮುತ್ತಿನ ದೊಡ್ಡ ದೊಡ್ಡ ಕುಂಡಲಗಳು ಸೀರೆಯೊಂದಿಗೆ ಹೆಚ್ಚು ಸುಂದರವಾಗಿರುತ್ತವೆ.
ಪಾರ್ಟಿ ಗೌನ್ ಅಥವಾ ಫ್ರಾಕ್ ಮೇಲೆ ವಜ್ರಗಳು ಹಾಗೂ ಮುತ್ತುಗಳ ಒಡವೆಗಳು ಬಹಳ ಚೆನ್ನಾಗಿರುತ್ತವೆ.