ನನ್ನ ತಂದೆಯ ನಿಧನದ ಬಳಿಕ ನನ್ನ ತಾಯಿ ಇನ್ನೊಂದು ಮದುವೆಯಾದರು. ನನ್ನ ಮಲತಂದೆಯ ಕುಟುಂಬದವರಿಗೆ ನನ್ನ ಬಗ್ಗೆ ಸ್ವಲ್ಪ ಪ್ರೀತಿ ಇಲ್ಲ. ಅಕ್ಕರೆಯಿಂದ ಮಾತನಾಡಿಸುವುದಿಲ್ಲ. ಎಲ್ಲಿಯಾದರೂ ಹೊರಗಡೆ ಹೊರಟರೆ ನನ್ನನ್ನು ಕರೆದುಕೊಂಡು ಹೋಗುವುದಿಲ್ಲ. ನಾನು ಇಡೀ ದಿನ ಮನೆಯಲ್ಲಿಯೇ ಕುಳಿತಿರಬೇಕು. ನನಗಿಲ್ಲಿ ಮನಸ್ಸು ಸ್ವಲ್ಪ ನಿಲ್ಲುವುದಿಲ್ಲ. ಏನು ಮಾಡಲಿ?

ನಿಮ್ಮ ತಾಯಿ ಮರು ಮದುವೆಯಾದಾಗಲೇ ತಮ್ಮ ಪತಿಗೆ ನಿಮ್ಮೊಂದಿಗೆ ಸರಿಯಾದ ರೀತಿಯಲ್ಲಿ ವರ್ತಿಸಲು ಹೇಳಬೇಕಾಗಿತ್ತು. ಮನೆಯ ಇತರೆ ಸದಸ್ಯರು ಕೂಡ ಪ್ರೀತಿಯಿಂದ ನಡೆದುಕೊಳ್ಳಿ ಎಂದು ಸೂಚಿಸಬೇಕಿತ್ತು. ಹೊರಗೆ ಹೋಗುವಾಗ ನಿಮ್ಮನ್ನೂ ಜೊತೆಗೆ ಕರೆದುಕೊಂಡುಹೋಗಬೇಕು. ಸಾಮಾನ್ಯವಾಗಿ ಸ್ತ್ರೀಯರಷ್ಟೇ ಮಲಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಆದರೆ ಪುರುಷರು ಹೀಗೆ ಮಾಡುವುದು ಕಡಿಮೆ. ನೀವು ನಿಮ್ಮ ತಾಯಿಯೊಂದಿಗೆ ಈ ಕುರಿತಂತೆ ಮಾತನಾಡಿ. ಅವರೇ ನಿಮಗೆ ಈ ನಿಟ್ಟಿನಲ್ಲಿ ನೆರವಾಗಬಹುದು.

ನನ್ನ ಗಂಡ ಅಮೆರಿಕದಲ್ಲಿದ್ದಾರೆ. ನಾನು ಭಾರತದಲ್ಲಿದ್ದೇನೆ. ಅವರ ಅನುಪಸ್ಥಿತಿಯಲ್ಲಿ ನನಗೆ ಅದೆಷ್ಟೊ ಬಾರಿ ಲೈಂಗಿಕ ಇಚ್ಛೆ ಪ್ರಬಲವಾಗುತ್ತದೆ. ನನಗೆ ಬಹಳ ಕಸಿವಿಸಿಯಾಗುತ್ತದೆ. ನನ್ನ ಲೈಂಗಿಕೇಚ್ಛೆಯನ್ನು ಹೇಗೆ ಶಮನಗೊಳಿಸುವುದು?

ನಿಮ್ಮ ಗಂಡ ನೌಕರಿ ಅಥವಾ ಬಿಸ್‌ನೆಸ್‌ನಿಂದಾಗಿ ಅಮೆರಿಕಕ್ಕೆ ಹೋಗಿರಬಹುದು. ನೀವು ಅವರಿಗಾಗಿ ಅದೆಷ್ಟು ಚಡಪಡಿಸುತ್ತಿರುವಿರೋ, ಅವರೂ ಸಹ ನಿಮಗಾಗಿ ಅಷ್ಟೇ ಪರಿತಪಿಸುತ್ತಿರಬಹುದು. ಇನ್ನು ಲೈಂಗಿಕ ಆಸಕ್ತಿಯ ಬಗ್ಗೆ ಹೇಳಬೇಕೆಂದರೆ ಅವರು ವಾಪಸ್‌ ಬಂದ ಬಳಿಕ ಅವರ ಜೊತೆಗಿನ ಸಹವಾಸದಿಂದ ನಿಮ್ಮ ಆನಂದ ದ್ವಿಗುಣಗೊಳ್ಳಬಹುದು.

ಅಲ್ಲಿಯವರೆಗೆ ನಿಮ್ಮನ್ನು ನೀವು ಯಾವುದಾದರೂ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿ ಇಟ್ಟುಕೊಳ್ಳಿ. ಅಂದರೆ ಗಂಡನ ಅನುಪಸ್ಥಿತಿಯಲ್ಲಿ ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿರಬಹುದು. ಗಂಡನೊಂದಿಗೆ ಫೋನ್‌, ಇಮೇಲ್‌, ಕಾನ್ಛರೆನ್ಸ್ ಕಾಲ್‌, ಚಾಟಿಂಗ್‌ ಮೂಲಕ ನಿಕಟತೆ ಕಾಯ್ದುಕೊಂಡಲ್ಲಿ ಅವರ ಅನುಪಸ್ಥಿತಿ ನಿಮ್ಮನ್ನು ಕಾಡದು. ಅವರು ನಿಮ್ಮ ಹತ್ತಿರವೇ ಇದ್ದಾರೆಂಬ ಅನುಭೂತಿ ನಿಮಗೆ ಬರುತ್ತದೆ.

ನಾನು ನನ್ನ ದೊಡ್ಡಮ್ಮನ ಸೋದರನ ಮಗನನ್ನು ಪ್ರೀತಿಸುತ್ತಿದ್ದೇನೆ. ನಾವಿಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದು. ಅವನು ಚೆನ್ನಾಗಿ ಗಳಿಸುತ್ತಾನೆ, ನನ್ನನ್ನು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆ ನನಗಿದೆ. ಅವನ ಮನೆಯವರು ಮದುವೆಗೆ ಒಪ್ಪಿದ್ದಾರೆ. ಆದರೆ ನನ್ನ ಮನೆಯವರೇ ಒಪ್ಪುತ್ತಿಲ್ಲ. ನಾವಿಬ್ಬರು ದೇವಸ್ಥಾನದಲ್ಲಿ ಪರಸ್ಪರ ಹಾರ ಬದಲಿಸಿಕೊಂಡಿದ್ದೇವೆ. ಪ್ರೇಮ ವಿವಾಹ ಯಶಸ್ವಿ ಆಗುವುದಿಲ್ಲ ಎಂದು ಅನೇಕರು ಹೇಳುತ್ತಾರೆ. ಇದು ಸತ್ಯವೇ?

ನಿಮ್ಮನ್ನು ಪ್ರೀತಿಸುವ ಹುಡುಗ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೆ, ಅವನ ಮನೆಯವರು ನಿಮ್ಮ ಮದುವೆಗೆ ಒಪ್ಪಿಗೆ ಸೂಚಿಸಿದ್ದರೆ, ನೀವು ನಿಮ್ಮ ಮನೆಯವರನ್ನು ಒಪ್ಪಿಸಲು ಪ್ರಯತ್ನ ಮಾಡಬೇಕು. ನಿಮ್ಮ ಸಂಬಂಧಿಕರು ಅಥವಾ ಸ್ನೇಹಿತರು ಅವರ ಮನವೊಲಿಸಲು ಪ್ರಯತ್ನ ಮಾಡಬಹುದು.

ಒಂದು ವೇಳೆ ನಿಮ್ಮ ಪ್ರಯತ್ನ ಅಯಶಸ್ವಿಯಾದರೆ, ನೀವಿಬ್ಬರೂ ರಿಜಿಸ್ಟರ್ಡ್ ಮದುವೆಯಾಗಬಹುದು. ಮದುವೆಯಾದ ಬಳಿಕ ನಿಮ್ಮನ್ನು ಖಂಡಿತ ಒಪ್ಪಿಯೇ ಒಪ್ಪುತ್ತಾರೆ. ಕದ್ದುಮುಚ್ಚಿ ಹಾರ ಬದಲಾಯಿಸಿಕೊಂಡ ಮಾತ್ರಕ್ಕೆ ಅದು ಮದುವೆ ಎನಿಸುವುದಿಲ್ಲ. ಅದನ್ನು ಸಮಾಜ ಒಪ್ಪದು, ಕಾನೂನು ಕೂಡ ಮಾನ್ಯ ಮಾಡದು.

ನಾನು 23 ವರ್ಷದ ಯುವತಿ. 2009ರಲ್ಲಿಯೇ ನನ್ನ ವಿವಾಹವಾಗಿದೆ. ನನ್ನ ಪತಿಗೆ ಕುಡಿಯುವ ಚಟ ಅಧಿಕವಾಗಿತ್ತು. ಕುಡಿದು ಬಂದಾಗ ಜಗಳ ಮತ್ತು ಹೊಡೆಯುವುದು ಶುರುವಾಗಿತ್ತು. ಈ ಕಾರಣದಿಂದಾಗಿಯೇ ನನಗೆ 3 ಸಲ ಗರ್ಭಪಾತವಾಗಿತ್ತು. ನಾನು ತಾಯಿಯಾಗುತ್ತೇನೆಂಬ ನಂಬಿಕೆಯನ್ನು ಆಗ ಕಳೆದುಕೊಂಡುಬಿಟ್ಟಿದ್ದೆ. ಆದರೆ 2012ರಲ್ಲಿ ನನಗೊಂದು ಹೆಣ್ಣು ಮಗು ಹುಟ್ಟಿತು. ಮಗಳು ಹುಟ್ಟಿದ ಬಳಿಕ ನನ್ನ ಪತಿ ಕುಡಿಯುವುದನ್ನು ಬಿಟ್ಟುಬಿಟ್ಟರು. ಈಗ ನಾನು ಪತಿ ಮತ್ತು ಮಗಳ ಜೊತೆಗೆ ಸಾಕಷ್ಟು ಖುಷಿಯಿಂದಿದ್ದೇನೆ. ನನಗೆ ಸೂಕ್ತ ಮಾರ್ಗದರ್ಶನ ನೀಡಿದ `ಗೃಹಶೋಭಾ’ಗೆ ನನ್ನ ವಂದನೆಗಳು.

ಒಬ್ಬ ವ್ಯಕ್ತಿಯಲ್ಲಿ ಇಚ್ಛಾಶಕ್ತಿ ಪ್ರಬಲವಾಗಿದ್ದರೆ ಯಾವುದೇ ದುಶ್ಚಟ ಬಿಡುವುದು ಅಸಾಧ್ಯವೇನಲ್ಲ. ಗಂಡನಿಗೆ ಕುಡಿಯುವ ಚಟ ಅಂಟಿಕೊಂಡರೆ ಅವನ ಜೀವನವಷ್ಟೇ ಅಲ್ಲ, ಇಡೀ ಕುಟುಂಬದ ನೆಮ್ಮದಿಯೇ ಹಾಳಾಗಿ ಹೋಗುತ್ತದೆ. ಗಂಡನ ಚಟ ಬಿಡಿಸಲು ನೀವು ಅವರಿಗೆ ಕೊಟ್ಟ ಸಹಕಾರ, ತೋರಿಸಿದ ತಾಳ್ಮೆ ಅಭಿನಂದನಾರ್ಹ. ಈ ಕಾರಣದಿಂದಾಗಿಯೇ ನಿಮ್ಮ ಜೀವನದ ಖುಷಿ ಮರಳಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ