ನನ್ನ ಮಗಳದ್ದು ಅಂತರ್ಜಾತೀಯ ವಿವಾಹ. ನಾವು ಕರ್ನಾಟಕದವರು, ಅಳಿಯನದ್ದು ಮಹಾರಾಷ್ಟ್ರ. ಮದುವೆ ನಮ್ಮ ಹಾಗೂ ಅವರ ಎರಡೂ ಸಂಪ್ರದಾಯದ ಪ್ರಕಾರ ಮಾಡುವುದೆಂದು ನಿರ್ಧರಿಸಿದೆ. ನಮ್ಮ ಸಂಪ್ರದಾಯದ ಪ್ರಕಾರ ಗಂಡನ ಮನೆಯವರ ಕಡೆಯಿಂದ ಬರುವ ಅತಿಥಿಗಳಿಗೆ ನಾವೇ ಉಡುಗೊರೆ ಕೊಡಬೇಕಿತ್ತು. ನಾನು ಮುಂಚೆಯೇ ಬೀಗಿತ್ತಿಗೆ, “ನಿಮ್ಮ ಕಡೆಯಿಂದ ಎಷ್ಟು ಜನ ಅತಿಥಿಗಳು ಬರಲಿದ್ದಾರೆ ಎಂದು ಹೇಳಿದರೆ ನಾವು ಮುಂಚೆಯೇ ಗಿಫ್ಟ್ ಖರೀದಿಸಲು ಅನುಕೂಲವಾಗುತ್ತದೆ,” ಎಂದು ಕೇಳಿದೆ.

ಆ ಮಾತಿಗೆ ಅವರು, “ನಮ್ಮ ಕಡೆಯ ಅತಿಥಿಗಳಿಗೆ ನೀವೇನೂ ಉಡುಗೊರೆ ಕೊಡುವ ಅಗತ್ಯವಿಲ್ಲ. ನಿಮ್ಮ ಅತಿಥಿಗಳಿಗೆ ಅಷ್ಟೇ ಕೊಡಿ,” ಎಂದರು. ಅವರ ಈ ಮಾತು ನನಗೆ ಬಹಳ ಖುಷಿ ಕೊಟ್ಟಿತು.

– ಆಶಾ ರಮೇಶ್‌, ಕಾರವಾರ.

ಕೆಲವು ದಿನಗಳ ಹಿಂದೆ ಮಗಳ ಜೊತೆ ನಾನೊಂದು ಸ್ವೀಟ್‌ ಸ್ಟಾಲ್ ಗೆ ಹೋಗಿದ್ದೆ. ಅಲ್ಲಿ ಆಗಲೇ ಬಂದಿದ್ದ ದಂಪತಿಗಳಿಬ್ಬರು ನನ್ನನ್ನು ನೋಡಿ ಮುಗುಳ್ನಕ್ಕರು. ನನಗೆ ಅವರ ವರ್ತನೆ ಅಚ್ಚರಿ ತಂದಿತು. ಅವರನ್ನು ನಾನು ಗುರುತಿಸಲಿಲ್ಲ. ನನ್ನ ಬಳಿ ಬಂದು, “ನೀವು ನಮಗೆ ಅಪರಿಚಿತರಿರಬಹುದು. ಆದರೆ ನಿಮ್ಮನ್ನು ನೋಡಿ ನಮಗೆ ಬಹಳ ಖುಷಿಯಾಯಿತು,” ಎಂದರು. ತಮಗೆ ಇಬ್ಬರು ಹೆಣ್ಣುಮಕ್ಕಳಿದ್ದು ಅವರು ಮದುವೆಯಾಗಿ ಗಂಡನ ಮನೆಯಲ್ಲಿದ್ದಾರೆ. ಒಬ್ಬ ಮಗ ಇನ್ನೂ ಓದುತ್ತಿದ್ದಾನೆ ಎಂದು ಹೇಳಿದರು.

ಆಗ ನಾನು, “ನನಗೂ ಇಬ್ಬರು ಹುಡುಗಿಯರು. ಇವಳು ನನ್ನ ಎರಡನೇ ಮಗಳು,” ಎಂದು ಹೇಳಿದೆ.

ಅದಕ್ಕೆ ಅವರು, “ಒಬ್ಬಳೇ ಮಗಳಾದರೆ ತುಂಬಾ ಟೆನ್ಷನ್‌ ಇರುತ್ತದೆ,” ಎಂದರು.

ಅದಕ್ಕೆ ನನ್ನ ಮಗಳು, “ಇಲ್ಲ ಅಂಕಲ್. ಹಾಗೇನೂ ಇಲ್ಲ. ಹೆಣ್ಣು ಮಕ್ಕಳು ತುಂಬಾ ಒಳ್ಳೆಯವರು,” ಎಂದಳು.

ಅದಕ್ಕವರ ಪ್ರತ್ಯುತ್ತರ ಇನ್ನೂ ಸುಂದರವಾಗಿತ್ತು, “ನಾನೂ ಇದನ್ನೇ ಹೇಳಲು ಹೊರಟಿದ್ದೆ. ಒಬ್ಬ ಮಗಳು 10 ಪುತ್ರರಿಗೆ ಸಮ. ಒಬ್ಬ ಮಗಳು = 10 ಸನ್ಸ್” ಎಂದರು. ಅವರ ಮಾತು ನನಗೆ ಬಹಳ ಹಿಡಿಸಿತು. ಇಬ್ಬರು ಪುತ್ರಿಯರಾದ ಬಳಿಕ ನನ್ನವರು ಗಂಡು ಬೇಕೇಬೇಕು ಎಂದು ನನ್ನ ಮೇಲೆ ಒತ್ತಡ ಹೇರಲಿಲ್ಲ. ಹೀಗಾಗಿ ನನ್ನವರ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ.

– ದಿಶಾ, ಮೈಸೂರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ