ಧಾವಂತದ ಬದುಕಿನ ಮಧ್ಯೆ ಎಲ್ಲರೂ ತಮ್ಮ ಮನೆಯವರ ಭವಿಷ್ಯದ ಸುರಕ್ಷತೆ ಬಗ್ಗೆ ಯೋಚಿಸುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಸಾಧಾರಣ ಇನ್ಶೂರೆನ್ಸ್ ಪಾಲಿಸಿಗೆ ಹೋಲಿಸಿದರೆ ಟರ್ಮ್ ಪ್ಲ್ಯಾನ್ ಉತ್ತಮ ಮಾರ್ಗವಾಗಿದೆ. ಇದಕ್ಕೆ ಕಾರಣ ಇದರ ಕಂತು ಬಹಳ ಕಡಿಮೆ. ಇದರ ಸಂಪೂರ್ಣ ಲಾಭ ಪಡೆದು ಹಲವಾರು ಕಂಪನಿಗಳು ಟರ್ಮ್ ಪ್ಲ್ಯಾನ್‌ನ ಅದ್ಭುತ ಮಾರ್ಕೆಟಿಂಗ್ ಆರಂಭಿಸಿದ್ದಾರೆ.
ತಜ್ಞರ ಪ್ರಕಾರ ಯಾವುದೇ ಇನ್ಶೂರೆನ್ಸ್ ಪಾಲಿಸಿಗೆ ಹೋಲಿಸಿದರೆ ಟರ್ಮ್ ಪ್ಲ್ಯಾನ್ ಅತ್ಯಂತ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚು ಕವರ್ ಕೊಡುತ್ತದೆ. ಇದಕ್ಕೆ ಕಾರಣ ಟರ್ಮ್ ಪ್ಲ್ಯಾನ್‌ನ್ನು ಹೂಡಿಕೆಯ ರೂಪದಲ್ಲಿ ತೆಗೆದುಕೊಳ್ಳುವುದಿಲ್ಲ. ಪಾಲಿಸಿಯ ಪೂರ್ಣ ಪ್ರೀಮಿಯಂ ರಿಸ್ಕ್ ಕವರ್‌ಗೆಂದೇ ಸರಿಹೋಗುತ್ತದೆ. ಒಂದು ವೇಳೆ ನೀವು ಟರ್ಮ್ ಪ್ಲ್ಯಾನ್ ಖರೀದಿಸಲು ಬಯಸಿದ್ದರೆ ಕೆಲವು ಸಂಗತಿಗಳ ಬಗ್ಗೆ ಗಮನ ಕೊಡಬೇಕು.
ನಿಮಗೆ ಎಷ್ಟು ಕವರ್‌ನ ಅಗತ್ಯವಿದೆ?
ಟರ್ಮ್ ಪ್ಲ್ಯಾನ್ ತೆಗೆದುಕೊಳ್ಳುವ ಏಕೈಕ ಉದ್ದೇಶವೇನೆಂದರೆ, ಒಂದು ವೇಳೆ ಸಂಸಾರದಲ್ಲಿ ಪ್ರಮುಖ ಹಾಗೂ ಸಂಪಾದಿಸುವ ವ್ಯಕ್ತಿ ತೀರಿಕೊಂಡರೆ ಅವನ ಮೇಲೆ ಆಶ್ರಿತರಾಗಿದ್ದ ಸದಸ್ಯರು ಜೀವನ ಸಾಗಿಸಲು ಸಾಕಷ್ಟು ಹಣ ಸಿಗುವಂತಿರಬೇಕು. ಹೀಗಿರುವಾಗ ನೀವು ಪ್ಲ್ಯಾನ್ ತೆಗೆದುಕೊಳ್ಳುವಾಗ ಅನೇಕ ವಿಷಯಗಳನ್ನು ಗಮನಿಸಬೇಕು. ಉದಾಹರಣೆಗೆ ನಿಮ್ಮ ಕುಟುಂಬದ ಖರ್ಚೆಷ್ಟು, ಕುಟುಂಬದಲ್ಲಿ ಯಾರದಾದರೂ ಮದುವೆ ಆಗಬೇಕೆ? ನಿಮಗೆ ಯಾವುದಾದರೂ ಸಾಲ ಇದೆಯೇ? ಒಂದು ವೇಳೆ ನಿಮ್ಮ ಕವರ್ ಮೊತ್ತ ಸಾಕಷ್ಟಿಲ್ಲದಿದ್ದರೆ ಟರ್ಮ್ ಪ್ಲ್ಯಾನ್ ಪಡೆಯುವ ಉದ್ದೇಶವೇ ಇರುತ್ತಿರಲಿಲ್ಲ.
ಉದಾಹರಣೆಗೆ ರವಿಯವರು ಸುಮಾರು 12.5 ಲಕ್ಷ ರೂ.ಗಳ ಇನ್ಶೂರೆನ್ಸ್ ನ ಕವರೇಜ್ ತೆಗೆದುಕೊಂಡರು. ಏಕೆಂದರೆ ಅವರ ಕಾರಿನ ಲೋನ್ 3 ಲಕ್ಷ ರೂ ಇತ್ತು. ಅವರ ಕುಟುಂಬದಲ್ಲಿ 3 ಸದಸ್ಯರು ಇದ್ದಾರೆ. ಅವರ ಭವಿಷ್ಯ ಸುರಕ್ಷಿತವಾಗಿರಬೇಕಿತ್ತು. ಅದರ ಬಗ್ಗೆ ಸರ್ಟಿಫೈಡ್ ಫೈನಾನ್ಶಿಯಲ್ ಪ್ಲ್ಯಾನರ್ ಸುಮಿತ್ ಹೀಗೆ ಹೇಳುತ್ತಾರೆ, “ಒಂದು ನಿಯಮವಿದೆ. ನಿಮ್ಮ ವಾರ್ಷಿಕ ಆದಾಯದಲ್ಲಿ ಶೇ.1020ರಷ್ಟು ಕವರ್ ತೆಗೆದುಕೊಳ್ಳಬೇಕು. ಆದರೆ ಇದನ್ನು ಸರಿಯಾದ ಪ್ರಮಾಣ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಪರಿಸ್ಥಿತಿಗಳೂ ಹಾಗೂ ಅಗತ್ಯಗಳು ಬೇರೆಬೇರೆಯಾಗಿರುತ್ತವೆ.”
ಕವರ್‌ನ ಅಗತ್ಯ ಎಲ್ಲಿಯವರೆಗೆ?
ಕವರ್‌ನ ಮೊತ್ತ ಅಗತ್ಯವಿರುವಷ್ಟೇ ಟರ್ಮ್ ಪ್ಲ್ಯಾನ್‌ನ ಅವಧಿಯೂ ಅಷ್ಟೇ ಅಗತ್ಯವಾಗಿದೆ. ನಿಮ್ಮ ಕವರ್‌ನ ಅವಧಿ ಕನಿಷ್ಠ ರಿಟೈರ್‌ಮೆಂಟ್‌ವರೆಗೆ ಇರಬೇಕು. ಕೆಲವು ವರ್ಷಗಳ ಹಿಂದೆ 60 ವಯಸ್ಸಿನವರೆಗೂ ಇತ್ತು. ಆದರೆ ಈಗ ಮದುವೆಗಳು ತಡವಾಗಿ ಆಗುವುದರಿಂದ 60ರ ನಂತರ ಜನರಿಗೆ ಸಾಕಷ್ಟು ಜವಾಬ್ದಾರಿಗಳು ಇರುತ್ತವೆ. ಅದರಿಂದಾಗಿ ಈಗ ಜನ ಬಹಳ ವರ್ಷದವರೆಗೆ ನೌಕರಿ ಮಾಡುತ್ತಾರೆ.
ತಜ್ಞರ ಪ್ರಕಾರ, ಹೆಚ್ಚಿನ ಜನರಿಗೆ ಕನಿಷ್ಠ 65 ವರ್ಷದವರೆಗೆ ಕವರ್‌ನ ಅಗತ್ಯವಿದೆ. ಆದರೂ ಇದು ಕೆಲವು ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಪಾಲಿಸಿ ಖರೀದಿಸುವಾಗ ಎಂದೂ 15-20 ವರ್ಷದ ಶಾರ್ಟ್ ಟರ್ಮ್ ಕವರ್ ತೆಗೆದುಕೊಳ್ಳಬೇಡಿ. ಏಕೆಂದರೆ ನೀವು 40 ವಯಸ್ಸಿನವರಾಗಿದ್ದಲ್ಲಿ ಇದು ಆಗಲೇ ಮುಗಿದುಹೋಗುತ್ತದೆ. ಇದರ ಪ್ರೀಮಿಯಂ ಕಡಿಮೆ ಇರುತ್ತದೆ. ಏಕೆಂದರೆ ಅಪಾಯ ಕಡಿಮೆ ಇರುವುದರಿಂದ ನಿಮ್ಮನ್ನು ನೀವು ಈ ಅವಧಿಗೆ ಕವರ್ ಮಾಡಿಕೊಳ್ಳುತ್ತಿದ್ದೀರಿ. ಹೀಗಿರುವಾಗ ಒಂದು ವೇಳೆ ನೀವು ಮತ್ತೆ ಹೊಸ ಇನ್ಶೂರೆನ್ಸ್ ತೆಗೆದುಕೊಂಡರೆ ನಿಮ್ಮ ಖರ್ಚು ಮಿತಿಮೀರುತ್ತದೆ. ಇಂತಹ ಸ್ಥಿತಿಯಲ್ಲಿ ನೀವು ಅವಧಿಯನ್ನು ಆರಿಸಿಕೊಳ್ಳುವ ಅವಕಾಶವಿಲ್ಲದಂತಹ ಟರ್ಮ್ ಪ್ಲ್ಯಾನ್ ಆರಿಸಿಕೊಳ್ಳಬೇಕು. ಕೆಲವು ಆನ್ ಲೈನ್ ಟರ್ಮ್ ಪ್ಲ್ಯಾನ್‌ಗಳಲ್ಲಿ 15, 20, 25 ಮತ್ತು 30 ವರ್ಷಗಳ ನಿಶ್ಚಿತ ಅವಧಿ ಇರುತ್ತವೆ. ಉಳಿದ ಪ್ಲ್ಯಾನ್‌ಗಳಲ್ಲಿ ನಿಮಗೆ 60 ವರ್ಷಕ್ಕಿಂತ ಹೆಚ್ಚು ಕವರ್ ಮಾಡಲಾಗುವುದಿಲ್ಲ. ಒಂದು ವೇಳೆ ನಿಮಗೆ 32 ವರ್ಷಗಳಾಗಿದ್ದರೆ 30 ವರ್ಷದ ಟರ್ಮ್ ಪ್ಲ್ಯಾನ್ ತೆಗೆದುಕೊಳ್ಳಲಾಗುವುದಿಲ್ಲ. ಆಗ 25 ವರ್ಷಗಳ ಪ್ಲ್ಯಾನ್ ಆಯ್ಕೆ ಇರುತ್ತದೆ. ನಿಮಗೆ 57 ವರ್ಷಗಳಾದಾಗ ಈ ಪ್ಲ್ಯಾನ್ ಮುಗಿಯುತ್ತದೆ. ಆದ್ದರಿಂದ ಇಂತಹ ಪಾಲಿಸಿಗಳಿಂದ ದೂರವಿದ್ದು ನಿಮ್ಮ ಅಗತ್ಯಗಳನ್ನು ಪೂರೈಸುವ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳಿ.
ದುಬಾರಿ ಬೆಲೆಯ ಬಗ್ಗೆಯೂ ಗಮನವಿರಲಿ
ಒಂದು ವೇಳೆ ನೀವು 50 ಲಕ್ಷದ ಪಾಲಿಸಿ ತೆಗೆದುಕೊಂಡಿದ್ದು ಅದೇ ಬಹಳಷ್ಟಾಯ್ತು ಎಂದುಕೊಂಡಿದ್ದರೆ ಅದು ತಪ್ಪು. ಮುಂದಿನ 10 ವರ್ಷಗಳಲ್ಲಿ ಶೇ.6ರಷ್ಟು ಹಣದುಬ್ಬರ ಲೆಕ್ಕಕ್ಕೆ ತೆಗೆದುಕೊಂಡರೆ 50 ಲಕ್ಷ ರೂ.ಗಳ ಮೌಲ್ಯ ಕೇವಲ 28 ಲಕ್ಷ ರೂ. ಆಗಿರುತ್ತದೆ. ಅನೇಕ ಕಂಪನಿಗಳು ಟರ್ಮ್ ಪ್ಲ್ಯಾನ್ ಆಫರ್ ಕೊಡುತ್ತಿದ್ದು, ಅದರಲ್ಲಿ ಬೆಲೆಯೇರಿಕೆಯೊಂದಿಗೆ ಕವರ್ ಕೂಡ ಪ್ರತಿವರ್ಷ ಶೇ.5 ರಿಂದ 10 ರಷ್ಟು ಹೆಚ್ಚಾಗುತ್ತದೆ. ಅಂತಹ ಪ್ಲ್ಯಾನ್ ಬೆಲೆಯೇರಿಕೆ ಹಾಗೂ ನಿಮ್ಮ ಆದಾಯದ ವೃದ್ಧಿಯಲ್ಲಿ ಗಮನ ಹರಿಸುತ್ತದೆ. ವಾರ್ಷಿಕ ಕನಿಷ್ಠ ಶೇ.10 ರಷ್ಟು ವೃದ್ಧಿಸುವ ಅಥವಾ ಬೆಲೆಯೇರಿಕೆಯೊಂದಿಗೆ ಸಂಬಂಧಿಸಿದ ಪ್ಲ್ಯಾನ್ ತೆಗೆದುಕೊಳ್ಳಿ. ಇಂತಹ ಪ್ಲ್ಯಾನ್‌ನ ಪ್ರೀಮಿಯಂ ಸಾಧಾರಣ ಪ್ಲ್ಯಾನ್‌ಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ. ಹೀಗಿರುವಾಗ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟರ್ಮ್ ಪ್ಲ್ಯಾನ್ ತೆಗೆದುಕೊಳ್ಳಿ.
ಇದಕ್ಕೆ ವಿರುದ್ಧವಾಗಿ ಕೆಲವು ಪ್ಲ್ಯಾನ್‌ಗಳಲ್ಲಿ ಕಾಲ ಕಳೆದಂತೆ ಕವರ್ ಕಡಿಮೆಯಾಗುತ್ತದೆ. ಇಂತಹ ಪ್ಲ್ಯಾನ್‌ಗಳನ್ನು ದೊಡ್ಡ ಸಾಲದ ರಿಸ್ಕ್ ಕಡಿಮೆ ಮಾಡಲು ತೆಗೆದುಕೊಳ್ಳಲಾಗುತ್ತದೆ. ಉದಾಹರಣೆಗೆ ಇದರಲ್ಲಿ ಹೋಮ್ ಲೋನ್ ರಿಸ್ಕ್ ಕಡಿಮೆ ಮಾಡಲು ತೆಗೆದುಕೊಂಡ ಟರ್ಮ್ ಪ್ಲ್ಯಾನ್ ಸೇರಿದೆ.
ಆನ್‌ಲೈನ್ ಖರೀದಿ ಅಗ್ಗ
ಒಂದು ವೇಳೇ ನೀವೂ ಟರ್ಮ್ ಪ್ಲ್ಯಾನ್ ಖರೀದಿಸಲು ಬಯಸಿದ್ದರೆ ಅದನ್ನು ಆನ್‌ಲೈನ್‌ನಲ್ಲಿ ಖರೀದಿಸಬೇಕು. ಒಂದು ವೇಳೆ ನೀವು ಏಜೆಂಟರ ಮೂಲಕ ಟರ್ಮ್ ಪ್ಲ್ಯಾನ್ ಖರೀದಿಸಿದರೆ ನಿಮಗೆ ಪಾಲಿಸಿ ಶೇ.15 ರಿಂದ 30ರಷ್ಟು ತುಟ್ಟಿಯಾಗುತ್ತದೆ. ಆದ್ದರಿಂದ ಆನ್‌ಲೈನ್ ಖರೀದಿಯೇ ಉತ್ತಮ. ಒಂದು ವೇಳೆ ಇದರಲ್ಲಿ ನಿಮಗೆ ತೊಂದರೆಯಿದ್ದರೆ ಹಲವಾರು ಬ್ಯಾಂಕುಗಳು ಹಾಗೂ ರಿಲೇಶನ್‌ಶಿಪ್ ಏಜೆಂಟರು ನಿಮಗೆ ಟರ್ಮ್ ಪ್ಲ್ಯಾನ್ ಖರೀದಿಯಲ್ಲಿ ನೆರವಾಗುತ್ತಾರೆ. ಇದಕ್ಕೆ ಯಾವುದೇ ಶುಲ್ಕ ಕೊಡಬೇಕಿಲ್ಲ. ಪಾಲಿಸಿ ತೆಗೆದುಕೊಳ್ಳುವಾಗ ನೀವು ಎಲ್ಲ ಹಳೆಯ ಪಾಲಿಸಿಗಳ ಬಗ್ಗೆ ಮಾಹಿತಿ ನೀಡಬೇಕು. ಅದರಿಂದ ಭವಿಷ್ಯದಲ್ಲಿ ನಿಮ್ಮ ಕ್ಲೇಮ್ ಪಡೆಯುವಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.
– ಪಿ. ಪೂರ್ಣಿಮಾ