ನಮ್ಮ ಓದುಗರೆಲ್ಲರಿಗೂ ಗೃಹಶೋಭಾ ಬಳಗದಿಂದ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!

ತಾರೀಕು ಬದಲಾದಂತೆ ಹೊಸ ವರ್ಷದ ಹೊಸ ತಿಂಗಳು ಉದಯವಾಗಿದೆ. ಹೀಗಾಗಿ ಎಲ್ಲವನ್ನೂ ಹೊಸ ಬಗೆಯಲ್ಲಿ, ಹೊಸ ವಿಧಾನದಲ್ಲಿ ನೋಡಬೇಕಾದ ಅಗತ್ಯವಿದೆ. ಹೀಗಾಗಿ ನಮಗೆ ನಾವೇ ಈ ಹೊಸ ವರ್ಷಕ್ಕಾಗಿ ಹಲವು ವಾಗ್ದಾನಗಳನ್ನು ಮಾಡಿಕೊಳ್ಳಬೇಕಿದೆ! ಅದನ್ನೇ `ಹೊಸ ವರ್ಷದ ಸಂಕಲ್ಪಗಳು’ ಎಂದು ಹೇಳುತ್ತಾರಲ್ಲವೇ?

ಸೋಮಾರಿತನ ಬಿಡಿ : ಇನ್ನಾದರೂ ಸೋಮಾರಿತನ ಬಿಟ್ಟು ಜಿಮ್ ಗೆ ಹೋಗಿ ವ್ಯಾಯಾಮ ಮಾಡಬೇಕು, ಬ್ರಿಸ್ಕ್ ವಾಕಿಂಗ್‌, ಜಾಗಿಂಗ್‌, ಈಜು, ಯೋಗ, ಸೈಕ್ಲಿಂಗ್‌ ರೂಢಿಸಿಕೊಳ್ಳಬೇಕು. ಆಯ್ತು ಇಷ್ಟು ದಿನ ಮಾಡಲಿಲ್ಲ, ಸಮಯಾಭಾವ, ಅದೂ ಇದೂ ನೆಪ ಇದ್ದೇ ಇರುತ್ತದೆ ಬಿಡಿ. ಈಗಲಾದರೂ ಮಾಡಬಹುದಲ್ಲವೇ?

ನಮ್ಮಲ್ಲೇ ಒಂದು ಬದಲಾವಣೆ : ಹೊಸ ವರ್ಷದ ಪರಿಣಾಮ ಹಾಗೂ ಬದಲಾವಣೆಗಳನ್ನು ನಾವು ಎಂಜಾಯ್‌ ಮಾಡಬೇಕೆಂದರೆ ಅಗತ್ಯವಾಗಿ ನಮ್ಮಲ್ಲಿ ನಾವು ಹೊಸ ಬದಲಾವಣೆ ಮಾಡಿಕೊಳ್ಳಲೇ ಬೇಕು. ಕೆಲವು ಅಭ್ಯಾಸಗಳನ್ನು ಬದಲಿಸಲು ಈ ಪರಿವರ್ತನೆ ಅನಿವಾರ್ಯ. ಉದಾ : ಪರರನ್ನು ಕಂಡು ಅಸೂಯೆ, ಏನೇನೋ ನೆಪಗಳನ್ನೊಡ್ಡುತ್ತಾ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳದೇ ಇರುವುದು, ಇಂದು ಮಾಡೋದನ್ನು ನಾಳೆ, ನಾಡಿದ್ದು ಎಂದು ಮುಂದೂಡುವ ಸೋಮಾರಿತನ…. ಇತ್ಯಾದಿ ಬಿಟ್ಟುಬಿಡೋಣ.

ಸೋಶಿಯಲ್ ಮೀಡಿಯಾ ಡೀಟಾಕ್ಸ್ : ಎಷ್ಟೋ ಜನ ಈ ಹೊಸ ವರ್ಷದಲ್ಲಿ ಹೀಗೆ ಮಾಡ್ತಾರಂತೆ, ಹಾಗೆ ಮಾಡ್ತಾರಂತೆ ಎಂದೆಲ್ಲ ಸುದ್ದಿ ಕೇಳುತ್ತಿರುತ್ತೇವೆ. ಅದೇ ರೀತಿ ಹಠಕ್ಕೆ ಬಿದ್ದು ನಾವು ಏನಾದರೊಂದಿಷ್ಟು ಉತ್ತಮ ಕೆಲಸ ಮಾಡೋಣ…. ಇದನ್ನು ಬಿಟ್ಟು ಸೋಮಾರಿತನ ತೋರುತ್ತಲೇ ಇದ್ದರೆ ಫೋನ್‌, ಮೆಸೇಜ್‌, ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ ಇತ್ಯಾದಿ ನೋಡುವುದರಲ್ಲಿ ನಮ್ಮ ಹೊಸ ವರ್ಷದ 6 ತಿಂಗಳು ಓಡಿಹೋಗುತ್ತದೆ. ನಿಮಗೆ ನೀವೇ ಬೇಲಿ ಹಾಕಿಕೊಂಡು, ವಾರಕ್ಕೆ ಕನಿಷ್ಠ 1 ದಿನ ಈ ಫೋನ್‌, ಸೋಶಿಯಲ್ ಮೀಡಿಯಾದಿಂದ ದೂರ ಉಳಿಯುವ ನಿರ್ಧಾರ ಕೈಗೊಳ್ಳಿ.

ಬೇಕಾದವರೊಂದಿಗೆ ಭೇಟಿ : ಇಂದಿನ ಇಂಟರ್‌ನೆಟ್‌ ಗುಲಾಮರಾಗಿರುವ ನಾವು ಅದರಾಚೆಗೆ ಏನೂ ಯೋಚಿಸಲು ಹೋಗುವುದೇ ಇಲ್ಲ. ಹೀಗಾಗಿ ಮೊಬೈಲ್ ಬದಿಗಿರಿಸಿ ನಿಮ್ಮ ನೆಂಟರು, ಬಂಧುಬಳಗ, ಫ್ರೆಂಡ್ಸ್, ಪರಿಚಿತರನ್ನು ಆಗಾಗ ಭೇಟಿ ಆಗುತ್ತಿರಿ….. ಎಲ್ಲರ ಕಷ್ಟಸುಖ ಹಂಚಿಕೊಂಡು ನಿಮ್ಮಿಂದ ಸಾಧ್ಯವಾದಷ್ಟೂ ಅವರಿಗೆ ಉಪಕಾರ ಮಾಡಿ.

ಮಾನಸಿಕ ಆರೋಗ್ಯ : ನಿಮ್ಮ ಮಾನಸಿಕ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಲು ಮರೆಯಬೇಡಿ. ನಿಮ್ಮನ್ನು ಯಾವುದೋ ಚಿಂತೆ ಕೊರೆಯುತ್ತಿದ್ದರೆ ನಿಮಗೆ ಪರಮ ಆಪ್ತರು ಯಾರೋ ಅವರೊಂದಿಗೆ ಮನಬಿಚ್ಚಿ ಮಾತನಾಡಿ, ನಿಮ್ಮ ಯಾವುದೋ ಹವ್ಯಾಸ ಬಿಟ್ಟು ಹೋಗಿದ್ದರೆ ಕೂಡಲೇ ಅದನ್ನು ಆರಂಭಿಸಿ. ಇದರಿಂದ ನಿಮ್ಮ ಟೆನ್ಶನ್‌ ದೂರವಾಗುತ್ತದೆ, ಮಾನಸಿಕ ಒತ್ತಡಗಳಿಂದ ಎಷ್ಟೋ ರಿಲೀಫ್‌ ಸಿಗುತ್ತದೆ. ಟಿವಿಯಲ್ಲಿ ಉತ್ತಮ ಕಾರ್ಯಕ್ರಮ ನೋಡಿ, ಮನರಂಜನೆಗೆ ಸಂಗೀತ ಕೇಳಿ, ಉತ್ತಮ ಪುಸ್ತಕಗಳನ್ನು ಓದಿ, ಸದಾ ಚಟುವಟಿಕೆಯಿಂದಿರಿ. ಆಗ ಈ ಟೆನ್ಶನ್ಸ್ ನಿಮ್ಮನ್ನು ಏನೂ ಮಾಡದು. ಸದಾ ಚಿಂತೆ ಮಾಡುತ್ತಾ ಕೊರಗು ಬದಲು ಅದನ್ನು ಹಂಚಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳಿ.

ಹೊಸ ವರ್ಷ ಶುಭ ತರಲಿ! : ಈ ವರ್ಷ ಕಳೆದ ವರ್ಷಕ್ಕಿಂತ ಒಳ್ಳೆಯದಾಗಿರಲಿ ಎಂದು ಎಲ್ಲರೂ ಬಯಸುತ್ತಾರೆ. ಆದರೆ ಅದಕ್ಕಾಗಿ ನಮ್ಮ ಪ್ರಯತ್ನ ಮುಖ್ಯ. ಮುಖ್ಯವಾಗಿ ಆರೋಗ್ಯ, ಆರ್ಥಿಕ ವ್ಯವಸ್ಥೆ, ಲೈಫ್‌ ಸ್ಟೈಲ್ ಇತ್ಯಾದಿಗಳನ್ನು ಸುಧಾರಿಸುವುದು ನಮ್ಮ ಕೈಯಲ್ಲೇ ಇದೆ. ಹಿಂದೆ ನಾವು ಮಾಡಿರದಂಥ ಏನಾದರೂ ಉತ್ತಮ ಕೆಲಸಕಾರ್ಯಗಳು, ಸಾಧನೆಗಳನ್ನು ಕೈಗೊಳ್ಳಿ. ಸೋಲೋ ಟ್ರಾವೆಲಿಂಗ್‌, ಅಂದ್ರೆ ಏಕಾಂಗಿ ಪ್ರವಾಸ ನಿಮಗೆ ಹೆಚ್ಚಿನ ಹೊಸತನ ನೀಡಬಹುದು, ಟ್ರೈ ಮಾಡಿ ನೋಡಿ!

ಹೊಸ ವಿಷಯದ ಕಲಿಕೆ : ನಿಮಗೆ ಪೇಂಟಿಂಗ್‌, ಚಿತ್ರಕಲೆ, ರಂಗೋಲಿ, ಎಂಬ್ರಾಯಿಡರಿ, ನಿಟ್ಟಿಂಗ್‌, ಹೊಲಿಗೆ…… ಇತ್ಯಾದಿ ಯಾವುದೇ ವಿಷಯಗಳಲ್ಲಿ ಹೆಚ್ಚಿನ ಪ್ರತಿಭೆ ಇದ್ದರೆ, ಅದನ್ನು ಸಂಪೂರ್ಣ ಹೊರತರಲು ಅದಕ್ಕೆ ಸಂಬಂಧಪಟ್ಟ ಪ್ರೊಫೆಶನಲ್ ಕ್ಲಾಸೆಸ್‌ ಸೇರಿರಿ. ಇಷ್ಟು ವರ್ಷ ಮಾಡಲಾಗದ್ದನ್ನು ಈಗಲಾದರೂ ಮಾಡಿ. ಎಂದಿನಂತೆ…. ಅಯ್ಯೋ! ಯಾವುದಕ್ಕೂ ಸಮಯವೇ ಇರೋಲ್ಲ ಎಂದು ಸಬೂಬು ಹೇಳಬೇಡಿ. ಗೃಹಶೋಭಾ ಈ ಮೂಲಕ ತನ್ನ ಓದುಗರು ಜೀವನದಲ್ಲಿ ಸದಾ ನಸುನಗುತ್ತಾ, ಹೊಸ ವರ್ಷದ ಆನಂದವನ್ನು ಹೆಚ್ಚಾಗಿ ಆಸ್ವಾದಿಸಲಿ ಎಂದು ಹಾರೈಸುತ್ತಾಳೆ….. ಓದುಗರೆಲ್ಲರಿಗೂ ಮತ್ತೊಮ್ಮೆ `ಹ್ಯಾಪಿ ನ್ಯೂ ಇಯರ್‌!’

– ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ