ಸಾಕಷ್ಟು ಪರಿಶ್ರಮ ಪಟ್ಟು ಕೂಡ ರಮೇಶನಿಗೆ ನೌಕರಿ ದೊರಕಲಿಲ್ಲ. ಆಗ ಅವನ ತಂದೆ ಅವನಿಗೆ ಒಂದು ಸಣ್ಣ ಅಂಗಡಿ ಹಾಕಿಕೊಟ್ಟರು. ಆದರೆ 6 ತಿಂಗಳಾದರೂ ಆ ಅಂಗಡಿ ಸರಿಯಾಗಿ ನಡೆಯಲಿಲ್ಲ. ಕೆಲವು ತಿಂಗಳುಗಳ ಬಳಿಕ ರಮೇಶನಿಗೆ ವಿವಾಹವಾಯಿತು.
ಅವನ ಹೆಂಡತಿ ಓದಿದವಳು. ಹೆಚ್ಚಾಗಿ ವ್ಯವಹಾರ ಜ್ಞಾನವುಳ್ಳವಳು. ಕೆಲವು ತಿಂಗಳುಗಳ ಬಳಿಕ ರಮೇಶನ ಹೆಂಡತಿ ಅಂಗಡಿಗೆ ಹೋಗತೊಡಗಿದಳು. ಅಲ್ಲಿ ಅವಳು ಗಮನಿಸಿದ್ದೇನೆಂದರೆ, ರಮೇಶನ ಸಿಡಿಮಿಡಿತನ ಹಾಗೂ ಶುಷ್ಕ ವರ್ತನೆಯಿಂದ ಗ್ರಾಹಕರು ಅವನ ಅಂಗಡಿಗೆ ಬರಲು ಇಷ್ಟಪಡುತ್ತಿರಲಿಲ್ಲ. ಆದರೆ ಅವನ ಹೆಂಡತಿಯ ಹಸನ್ಮುಖಿ ವರ್ತನೆ, ಗ್ರಾಹಕರ ಪ್ರತಿಯೊಂದು ಮಾತಿನ ಬಗೆಗೂ ಗಮನ ಹಾಗೂ ಎಲ್ಲರಿಗೂ ಗೌರವ ಕೊಡುವ ರೀತಿ ಗ್ರಾಹಕರು ಪುನಃ ಆ ಅಂಗಡಿಗೆ ಬರುವಂತಾಯಿತು. ಅವನ ಸ್ಮಾರ್ಟ್ ಪತ್ನಿ ನಗರದ ದೊಡ್ಡ ದೊಡ್ಡ ಸ್ಟೋರ್‌ಗಳಲ್ಲಿ ಲಭ್ಯವಾಗುವ ಆಫರ್ಸ್‌ಗಳ ಬಗ್ಗೆ ಗಮನ ಇಟ್ಟಿರುತ್ತಿದ್ದಳು. ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸಾಮಾನುಗಳನ್ನು ತಂದು ಅಂಗಡಿಯಲ್ಲಿ ಇರಿಸುತ್ತಿದ್ದಳು. ಹಿಂದೆ ತಿಂಗಳಿಗೆ 50,000 ವ್ಯಾಪಾರ ಆಗುತ್ತಿತ್ತು. ಈಗ ಅದು 1 ಲಕ್ಷ ರೂ. ದಾಟಿತ್ತು.
ಹೆಂಡತಿಯ ಕೌಶಲ ಮತ್ತು ಬುದ್ಧಿಮತ್ತೆಯಿಂದಾಗಿ ತನ್ನ ಅಂಗಡಿಯಲ್ಲಿ ಇಷ್ಟೊಂದು ಸಮೃದ್ಧಿಯಾಗುತ್ತಿರುವುದನ್ನು ಕಂಡು ರಮೇಶ್ ಚಕಿತನಾದ. ಅವನೀಗ ಹೆಂಡತಿಯ ಸಲಹೆಯ ಮೇರೆಗೆ ಕೆಲಸ ಮಾಡಲು ಶುರು ಮಾಡಿದ. ತನ್ನ ಸ್ವಭಾವದಲ್ಲೂ ಸಾಕಷ್ಟು ಬದಲಾವಣೆ ತಂದುಕೊಂಡ. ಅದರಿಂದಾಗಿ ಗ್ರಾಹಕ ವಲಯದಲ್ಲಿ ಖುಷಿ ಎದ್ದು ಕಾಣುತ್ತಿತ್ತು.
ರಮೇಶನಿಗೆ ವಿವಾಹವಾಗಿ ಈಗ 10 ವರ್ಷಗಳೇ ಆಗಿವೆ. ಇಬ್ಬರು ಮಕ್ಕಳಿದ್ದಾರೆ. ಅಂದು ಸಣ್ಣ ಪ್ರಮಾಣದಲ್ಲಿ ಶುರುವಾಗಿದ್ದ ರಮೇಶ್ ಸ್ಟೋರ್ಸ್ ಈಗ ಮೂರು ಮಹಡಿಯ `ರಮೇಶ್ ಜನರಲ್ ಸ್ಟೋರ್ಸ್’ ಆಗಿ ಪರಿವರ್ತನೆಯಾಗಿದೆ. ರಮೇಶ್ ಈ ಶ್ರೇಯಸ್ಸನ್ನು ತನ್ನ ಹೆಂಡತಿಗೆ ಕೊಡಲು ಇಷ್ಟಪಡುತ್ತಾನೆ. ಕೋಚಿಂಗ್ ಸಂಚಾಲಕ ಅಜಯ್ ಹೀಗೆ ಹೇಳುತ್ತಾರೆ, “ನನ್ನ ಹೆಂಡತಿ ನನ್ನ ಕೋಚಿಂಗ್‌ಗೆ ಜೊತೆ ಕೊಡಲು ಶುರು ಮಾಡಿದಾಗ, ನನ್ನ ವಿದ್ಯಾರ್ಥಿಗಳ ಸಂಖ್ಯೆ ನಿರಂತರಾಗಿ ಹೆಚ್ಚುತ್ತಾ ಹೋಯಿತು. ಇದಕ್ಕೆ ಕಾರಣವೇನೆಂದರೆ, ಅವಳಿಗೆ ಪ್ರತಿಯೊಂದು ವಿಷಯದ ಮೇಲಿನ ಹಿಡಿತ ಹಾಗೂ ಮಕ್ಕಳ ಮಾನಸಿಕ ಮಟ್ಟಕ್ಕೆ ತಕ್ಕಂತೆ ಬೋಧನೆಯ ವಿಧಾನ ಅನುಸರಿಸುವುದು ಹಾಗೂ ವ್ಯವಹಾರ ಕುಶಲತೆ, ಎಲ್ಲರ ಜೊತೆ ಸಕಾರಾತ್ಮಕ ವರ್ತನೆಯಿಂದಾಗಿ ಅವಳು ಎಟಿಎಂಗಿಂತ ಹೆಚ್ಚು ಮೌಲ್ಯವುಳ್ಳವಳು ಎಂದಾಗಿತ್ತು. ಒಂದು ಎಟಿಎಂ ಹಣ ತೆಗೆದ ಬಳಿಕ ಬ್ಯಾಲೆನ್ಸ್ ತೋರಿಸುತ್ತದೆ. ಆದರೆ ನನ್ನ ಹೆಂಡತಿ ಯಾವುದೇ ಕೆಲಸದಲ್ಲಿ ಬ್ಯಾಲೆನ್ಸ್ ತೋರಿಸುವುದಿಲ್ಲ. ಅವಳಿಂದಾಗಿ ನಾವಿಂದು ಒಳ್ಳೆಯ ಜೀವನ ಸಾಗಿಸಲು ಸಾಧ್ಯವಾಗಿದೆ.”
ಸ್ಮಾರ್ಟ್ ಪತ್ನಿ ಎಟಿಎಂ ಏಕೆ?
ಎಟಿಎಂ ಒಂದು ಸ್ವಯಂ ಚಾಲಿತ ಯಂತ್ರ. ಅದರಲ್ಲಿ ಕೇವಲ ಒಂದು ಕಾರ್ಡ್ ಹಾಕುವ ಅವಶ್ಯಕತೆ ಇರುತ್ತದೆ. ಬಳಿಕ ಪಿನ್ ಹಾಕಿದರೆ ಹಣ ಬರುವ ಪ್ರಕ್ರಿಯೆ ನಡೆಯುತ್ತದೆ. ಅದೇ ಪ್ರಕಾರ ಒಬ್ಬ ಪತಿಗೆ ಸ್ಮಾರ್ಟ್ ಹೆಂಡತಿ ಎಂತಹ ಒಂದು ಎಟಿಎಂ ಎಂದರೆ, ಅವಳು ತನ್ನ ಗುಣ ಹಾಗೂ ಸಾಮರ್ಥ್ಯದ ಬಲದ ಮೇಲೆ ಕೇವಲ ಒಂದೇ ಸಮಯಕ್ಕೆ ಅಲ್ಲ, ಪ್ರತಿ ಸಲ ಕೌಶಲಪೂರ್ವಕವಾಗಿ ಮನೆ ನಡೆಸಿ, ಹಣ ಉಳಿಸಲು ನೆರವಾಗುತ್ತಾಳೆ.
ಸ್ಮಾರ್ಟ್ ಪತ್ನಿ ತನ್ನ ಪ್ರತಿಭೆಯ ಬಲದ ಮೇಲೆ ಮನೆ ಹಾಗೂ ಹೊರಗೆ ಎರಡು ಕಡೆ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಾಳೆ. ತನ್ನ ಮನೆ ಹಾಗೂ ಕುಟುಂಬದವರ ಜೊತೆ ಜೊತೆಗೆ ಸ್ಮಾರ್ಟ್ ಆಗಿ ಕೆಲಸ ನಿರ್ವಹಿಸಿ ಕುಟುಂಬವನ್ನು ಖುಷಿಯಿಂದಿಡುತ್ತಾಳೆ.
ರಶ್ಮಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಆಕೆ ಮದುವೆಯಾಗಿ ಅತ್ತೆಯ ಮನೆಗೆ ಬಂದಾಗ, 2 ವರ್ಷದಿಂದ ಅನಾರೋಗ್ಯ ಪೀಡಿತರಾಗಿದ್ದ ಮಾವನ ಆರೈಕೆಯಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ಬಿಗಡಾಯಿಸಿ ಹೋಗಿತ್ತು. ಅವಳ ಗಂಡನಿಗಷ್ಟೇ ನೌಕರಿಯಿತ್ತು. ಅವನ ಸಂಬಳದಿಂದ ಅವರ ಕುಟುಂಬ ಹೇಗೊ ನಡೆಯುತ್ತಿತ್ತು. ಮನೆಯಲ್ಲಿ ಇನ್ನೂ ಮದುವೆ ವಯಸ್ಸಿನ ಇಬ್ಬರು ನಾದಿನಿಯರು ಕೂಡ ಇದ್ದರು. ಒಬ್ಬರ ನೌಕರಿಯಿಂದ ಇಷ್ಟೊಂದು ದೊಡ್ಡ ಕುಟುಂಬವನ್ನು ಸಲಹಬಹುದು ನಿಜಕ್ಕೂ ಕಷ್ಟದ ಕೆಲಸವೇ ಸರಿ.
ಗಂಡ ಹಾಗೂ ಅತ್ತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಶ್ಮಿ ತನ್ನಿಬ್ಬರು ನಾದಿನಿಯರಿಗೆ ಸಮೀಪದ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ಹುದ್ದೆ ಕೊಡಿಸಿಕೊಟ್ಟಳು. ಸ್ವತಃ ರಶ್ಮಿಗೆ ಹೊಲಿಗೆ ಕಸೂತಿ ಗೊತ್ತಿತ್ತು. ಹೀಗಾಗಿ ಆಕೆ ಅತ್ತೆಯ ನೆರವಿನಿಂದ ಒಂದು ಬುಟಿಕ್ ತೆರೆದಳು.
ಕೆಲವೇ ದಿನಗಳಲ್ಲಿ ಅವರ ಕುಟುಂಬದ ಆರ್ಥಿಕ ದುಸ್ಥಿತಿ ಕಡಿಮೆಯಾಯಿತು. ಇಬ್ಬರು ನಾದಿನಿಯರ ಮದುವೆಯೂ ಆಯಿತು. ತಾನಿನ್ನು ಮಗು ಪಡೆಯಲು ಯೋಚಿಸಬೇಕೆಂದು ಆಕೆ ನಿರ್ಧರಿಸಿದಳು. ನಾವು ನಮ್ಮ ಆಸುಪಾಸು ದೃಷ್ಟಿಹರಿಸಿ ನೋಡಿದರೆ, ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಸ್ಮಿತಾ ಅದಕ್ಕೊಂದು ಜೀವಂತ ಉದಾಹರಣೆ. ಅವಳು ಮದುವೆಯಾಗಿ ಬಂದಾಗ, ಎರಡು ವರ್ಷ ಹಿಂದಷ್ಟೇ ತೀರಿಕೊಂಡ ಮಾವನ ಸಾವಿನಿಂದ ಅತ್ತೆ ಬಹಳ ನೊಂದುಕೊಂಡಿದ್ದರು. ಅವಳ ಗಂಡನನ್ನು ಅವರ ಕುಟುಂಬದಲ್ಲಿ ಅತ್ಯಂತ ಮುದ್ದು ಮಾಡಿ ಬೆಳೆಸಿದ್ದರಿಂದ, ಅವನಿಗೆ ಅಂತಹ ಜವಾಬ್ದಾರಿಗಳೇನೂ ಗೊತ್ತಿರಲಿಲ್ಲ. ಸರ್ವ ಸುಖ ಸೌಲಭ್ಯವುಳ್ಳ ಮನೆಯನ್ನು ನಿರ್ವಹಿಸಿಕೊಂಡು ಹೋಗಲು ನಾದಿನಿಯರು ಇನ್ನೂ ಚಿಕ್ಕವರಾಗಿದ್ದರು. ಅದನ್ನು ಗಮನದಲ್ಲಿಟ್ಟುಕೊಂಡು ದೂರದ ಸಂಬಂಧಿಕರು ಮನೆಯಲ್ಲಿ ವಕ್ಕರಿಸಿ, ಹಣವನ್ನು ನೀರಿನಂತೆ ಪೋಲು ಮಾಡುತ್ತಿದ್ದರು.
ಸ್ಮಿತಾ ಜಾಣತನ ಉಪಯೋಗಿಸಿ ಮನೆಯ ಪರಿಸ್ಥಿತಿಯನ್ನು ಅನುಕೂಲಕರವಾಗಿಸಿದಳು. ನಾದಿನಿಯರನ್ನು ಚೆನ್ನಾಗಿ ಓದಿಸಿ, ಅವರ ಮದುವೆ ಸಹ ಮಾಡಿಸಿದಳು. ತನ್ನ ಬುದ್ಧಿವಂತಿಕೆಯ ಬಲದಿಂದ ಪತಿ ರಾಹುಲ್‌ನ ಬಿಸ್‌ನೆಸ್‌ನ್ನು ಕೇವಲ ವ್ಯವಸ್ಥಿತ ದಾರಿಗಷ್ಟೇ ತರಲಿಲ್ಲ. ಆರ್ಥಿಕ ಸಲಹೆಗಾರರ ಮುಖಾಂತರ ಹಣವನ್ನು ವಿವಿಧ ಯೋಜನೆಗಳಲ್ಲಿ ತೊಡಗಿಸಿ ತನ್ನ ಭವಿಷ್ಯವನ್ನು ಸುರಕ್ಷಿತವಾಗಿಸಿಕೊಂಡಳು.
ಸ್ಮಾರ್ಟ್ ಪತ್ನಿ ಆಗುವುದು ಹೇಗೆ?
ಹವ್ಯಾಸ ಹುಡುಕಿ : ಬಹಳಷ್ಟು ಮಹಿಳೆಯರು ಮದುವೆಯ ಬಳಿಕ ತಮ್ಮೆಲ್ಲ ಹವ್ಯಾಸಗಳಿಗೆ ವಿದಾಯ ಹೇಳಿಬಿಡುತ್ತಾರೆ. ಈ ಕಾರಣದಿಂದ ಅವರು ದೈಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿ ದುರ್ಬಲರಾಗುತ್ತಾರೆ. ನಿಮ್ಮ ಹವ್ಯಾಸಗಳನ್ನು ಎಷ್ಟು ಸಾಧ್ಯವೋ ಅಷ್ಟು ವಿಕಸಿತಗೊಳಿಸಿಕೊಳ್ಳಿ. ಅದರಲ್ಲಿ ನಿಪುಣರಾಗಲು ಪ್ರಯತ್ನ ನಡೆಸಿ. ಸಾಧ್ಯವಾದರೆ ಅದನ್ನು ನಿಮ್ಮ ಆದಾಯದ ಮೂಲವನ್ನಾಗಿಯೂ ಮಾಡಿಕೊಳ್ಳಬಹುದು. ನಿಮ್ಮ ಮುಖಾಂತರ ಮಾಡಲ್ಪಟ್ಟ ಒಂದು ಸಣ್ಣ ಗಳಿಕೆ ನಿಮ್ಮಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ಹೀಗಾಗಿ ನಿಮ್ಮ ಹವ್ಯಾಸಗಳ ಆಧಾರದಿಂದ ಕೆಲಸ ಮಾಡುವುದು ಪ್ರತಿಯೊಬ್ಬ ಮಹಿಳೆಗೂ ಅತ್ಯವಶ್ಯಕ.
ಶಿಕ್ಷಣದ ಸರಿಯಾದ ಉಪಯೋಗ ಮಾಡಿಕೊಂಡು ನಿಮ್ಮ ಮನೆಯಲ್ಲಿ ಓದು ಬರಹದ ವಾತಾವರಣ ಸೃಷ್ಟಿಸಿ. ಆರಂಭದಿಂದಲೇ ಮಕ್ಕಳಿಗೆ ಪತ್ರಿಕೆ, ನಿಯತಕಾಲಿಕೆ ಓದುವ ಅಭ್ಯಾಸ ರೂಢಿಸಬೇಕು. ಅವು ಕೇವಲ ಜ್ಞಾನವನ್ನಷ್ಟೇ ವೃದ್ಧಿಸುವುದಿಲ್ಲ. ಅವು ನಿಮ್ಮ ವ್ಯಕ್ತಿತ್ವಕ್ಕೆ ಸಾಣೆ ಹಿಡಿಯುವ ಕೆಲಸ ಮಾಡುತ್ತವೆ. ಸಾಧ್ಯವಾದರೆ ನಿಮ್ಮ ಮಕ್ಕಳಿಗೆ ನೀವೇ ಟ್ಯೂಷನ್ ಹೇಳಿಕೊಡಿ. ಆ ಮೂಲಕ ಓದುತ್ತಾ ಓದುತ್ತಾ ಅವರಲ್ಲಿ ಜೀವನದ ಮೌಲ್ಯಗಳ ಬೀಜಾಂಕುರ ಮಾಡಲು ಸಾಧ್ಯವಾಗುತ್ತದೆ.
ಗಂಡನ ಸಹಕಾರಿ ಆಗಿ : ಕಾರ್ತಿಕ್ ತನ್ನ ಹೆಂಡತಿ ಸೀಮಾಳಿಗೆ ಆಫೀಸಿನ ವಿಷಯಗಳನ್ನೆಲ್ಲ ಹೇಳಲು ಇಚ್ಛಿಸುತ್ತಿದ್ದ. ಆಗ ಆಕೆಯ ಉತ್ತರ ಒಂದೇ ಆಗಿತ್ತು. ಅದು ನಿಮ್ಮ ಆಫೀಸಿನ ವಿಷಯ. ಅದನ್ನು ನಿಮ್ಮ ಆಫೀಸಿಗೆ ಸೀಮಿತವಾಗಿಟ್ಟುಕೊಳ್ಳಿ. ನಿಮ್ಮ ಆಫೀಸಿನ ವಿಷಯದ ಬಗ್ಗೆ ನಾನೇನು ಅಭಿಪ್ರಾಯ ತಿಳಿಸಬೇಕು ಎನ್ನುತ್ತಿದ್ದಳು. ಆ ಬಳಿಕ ಕಾರ್ತಿಕ್ ಆಫೀಸಿನ ಯಾವುದೇ ವಿಷಯವನ್ನು ಸೀಮಾಳ ಮುಂದೆ ಪ್ರಸ್ತಾಪಿಸುವುದನ್ನು ನಿಲ್ಲಿಸಿಬಿಟ್ಟ.
ಮೇಲಿನ ಘಟನೆಗೆ ತದ್ವಿರುದ್ಧ ಎಂಬಂತೆ ಧನುಷ್ ತನ್ನ ಆಫೀಸು ವಿಷಯ ಅಥವಾ ಸಹೋದ್ಯೋಗಿ ಕುರಿತಾದ ಯಾವುದೇ ವಿಷಯ ತಿಳಿಸುತ್ತಿದ್ದರೆ, ಜೀವಿತಾ ಆ ವಿಷಯವನ್ನು ಕಿವಿಗೊಟ್ಟು ಆಲಿಸುತ್ತಿದ್ದಳು. ತನ್ನದೇ ಆದ ಅಭಿಪ್ರಾಯ ಕೂಡ ತಿಳಿಸುತ್ತಿದ್ದಳು. ಅದು ನನಗೆ ಬಹಳ ನೆರವಾಗುತ್ತದೆ, ಎನ್ನುತ್ತಾರೆ ಧನುಷ್.
ಸ್ವಾವಲಂಬಿ ಆಗಿ : ಚಿಕ್ಕಪುಟ್ಟ ಕೆಲಸಗಳಿಗಾಗಿ ಗಂಡನನ್ನು ಅವಲಂಬಿಸುವುದಕ್ಕಿಂತ ನೀವೇ ಆ ಕೆಲಸಗಳನ್ನು ಪೂರೈಸಲು ಪ್ರಯತ್ನಿಸಿ. ಬ್ಯಾಂಕ್, ಪೋಸ್ಟ್ ಆಫೀಸ್, ಮಕ್ಕಳ ಸ್ಕೂಲ್ ಮೀಟಿಂಗ್‌ಗಳನ್ನು ನೀವೇ ಅಟೆಂಡ್ ಮಾಡಿ. ಮನೆಯಲ್ಲಿಯೇ ಯಾವುದಾದರೂ ಚಟುವಟಿಕೆ ಶುರು ಮಾಡುವುದರ ಮೂಲಕ ಮನೆಗೆ ಆರ್ಥಿಕ ಕಾಣಿಕೆ ಕೊಡಬಹುದು.
ಧರ್ಮದ ಸುಳಿಗೆ ಸಿಲುಕಬೇಡಿ : ಧರ್ಮ ಅತ್ಯಂತ ದುಂದುವೆಚ್ಚದ್ದು. ದೇವರಿಗೆ ಅರ್ಪಿಸಿದ ಹಣ ವಾಪಸ್ ಬರುತ್ತದೆ ಎನ್ನುವುದು ಪೂಜಾರಿ ಪುರೋಹಿತರು ಹಬ್ಬಿಸುವ ಭ್ರಮೆ. ನಿಮ್ಮ ಹಣವನ್ನು ನಿಮಗಾಗಿ, ಮಕ್ಕಳಿಗಾಗಿ, ಓದಿಗಾಗಿ ಖರ್ಚು ಮಾಡಿ. ಆದರೆ ಪೂಜೆ ಪುನಸ್ಕಾರಗಳಿಗಾಗಿ ಮಾಡಬೇಡಿ. ಬಹಳಷ್ಟು ಶ್ರೀಮಂತರು ಧರ್ಮಕ್ಕಾಗಿ ಯಥೇಚ್ಛ ಖರ್ಚು ಮಾಡುತ್ತಾರೆ. ಆದರೆ ಹೆಚ್ಚಿನ ಶ್ರೀಮಂತರು, ಬಡವರನ್ನು ಶೋಷಿಸಿ ಹಣ ಮಾಡಿರುತ್ತಾರೆ. ನಿಮ್ಮ ಹಣ ಪರಿಶ್ರಮದಿಂದ ಕೂಡಿದ್ದು. ಅದಕ್ಕಾಗಿ ಸ್ವಾಭಿಮಾನ ಹಾಗೂ ಆತ್ಮವಿಶ್ವಾಸದಿಂದ ಜೀವಿಸಿ, ಆದರೆ ಮೂಢನಂಬಿಕೆಯಿಂದಲ್ಲ.
ಕೆಲವು ಸ್ಮಾರ್ಟ್ ಪತ್ನಿಯರು ಹೆಸರಾಂತ ಕಂಪನಿ ಇನ್ಛೋಸಿಸ್‌ನ ನಾರಾಯಣ ಮೂರ್ತಿಯವರ ಹೆಂಡತಿ ಸುಧಾ ಮೂರ್ತಿಯವರ ಕಾರ್ಯ ಚಟುವಟಿಕೆ ಬಗ್ಗೆ ನಿಮಗೆಲ್ಲ ಗೊತ್ತು. ಅದೇ ರೀತಿ ಮುಕೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ, ರಾಜ್ ಕುಂದ್ರಾ ಪತ್ನಿ ಶಿಲ್ಫಾ ಶೆಟ್ಟಿ, ಶಾರೂಖ್ ಖಾನ್ ಪತ್ನಿ ಗೌರಿ ಖಾನ್, ಅಮೆರಿಕದ ಮಾಜಿ ರಾಷ್ಟ್ರಪತಿ ಬರಾಕ್ ಒಬಾಮಾ ಪತ್ನಿ ಮಿಶೆಲ್ ಒಬಾಮಾ, ಬಿಲ್‌ಗೇಟ್ಸ್ ಪತ್ನಿ ಮಿಲಿಂಡಾ ಹೀಗೆ ಅದೆಷ್ಟು ಹೆಸರುಗಳನ್ನು ನಾವು ಉಲ್ಲೇಖಿಸಬಹುದು. ಅವರು ತಮ್ಮ ಕಾರ್ಯ ಚಾತುರ್ಯದಿಂದ ತಮ್ಮ ಗಂಡಂದಿರನ್ನು ಉನ್ನತಿಯ ಶಿಖರದಲ್ಲಷ್ಟೇ ತಲುಪಿಸಲಿಲ್ಲ. ತಮ್ಮನ್ನು ತಾವು ಬೇರೆ ಕ್ಷೇತ್ರಗಳಲ್ಲಿ ಯಶಸ್ವಿ ಮಹಿಳೆಯರೆನಿಸಿಕೊಳ್ಳುವಂತೆ ಮಾಡಿದರು.
– ಪ್ರತಿಭಾ