ರಮಾ ಪ್ರಶಾಂತ್ ಜೊತೆಗಿನ ತನ್ನ ಸಂಬಂಧವನ್ನು ಕೊನೆಗೊಳಿಸಿಬಿಟ್ಟಳು. ಆಕೆ ಮಾಡಲು ಉಳಿದಿದ್ದಾದರೂ ಏನು? ಇಬ್ಬರ ನಡುವೆ ಮನಸ್ತಾಪ ಬಂದಾಗೆಲ್ಲ ಪ್ರಶಾಂತ್ ಒಂದು ಗೋಡೆಯ ರೀತಿಯಲ್ಲಿ ಕಠೋರ, ಭಾವನಾಹೀನ ವ್ಯಕ್ತಿ ಆಗಿಬಿಡುತ್ತಿದ್ದ. ಏನೇನು ಘಟಿಸುತ್ತದೊ ಅದಕ್ಕೆಲ್ಲ ರಮಾಳೇ ಹೊಣೆ ಎನ್ನುವುದು ಅವನ ಧೋರಣೆಯಾಗಿತ್ತು. ಈಗ ಅವಳೇ ಈ ಸಂಬಂಧವನ್ನು ಮುಂದುವರಿಸುವ ಹೊಣೆಯನ್ನು ಹೊರಬೇಕಿತ್ತು.
ತನ್ನ ಮಾತು ತನ್ನ ಭಾವನೆಗಳನ್ನು ಪ್ರಶಾಂತ್‌ಗೆ ತಿಳಿಹೇಳಲು ಅವಳು ಅದೆಷ್ಟೋ ಪ್ರಯತ್ನಿಸಿದರೂ, ಅವನು ತನ್ನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿಲ್ಲ ಎಂಬುದು ರಮಾಳಿಗೆ ಅರ್ಥ ಆಗುತ್ತಿತ್ತು. ಅವಳು ಎಲ್ಲಿಯವರೆಗೆ ಸಂಬಂಧದ ದೋಣಿಯನ್ನು ಏಕಾಂಗಿಯಾಗಿ ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಿತ್ತು? ಸಂಬಂಧದಲ್ಲಿ ಭಾವನೆಗಳೇ ಇಲ್ಲದಿದ್ದರೆ ಅದು ಚೂರು ಚೂರಾಗುವುದು ಖಚಿತ ಎನ್ನುವಂತಾಗಿತ್ತು. ರಮಾಗೆ ಅಲ್ಲಿಯ ತನಕ ಪ್ರಶಾಂತ್ ಒಬ್ಬ ಕಡಿಮೆ ಈಕ್ಯೂ ಇರುವ ವ್ಯಕ್ತಿ ಎನ್ನುವುದೇ ಗೊತ್ತಿರಲಿಲ್ಲ.
ಏನಿದು ಈಕ್ಯೂ….?
ಈಕ್ಯೂ ಅಂದರೆ `ಎಮೋಶನ್ ಕೋಶಂಟ್’ ಅಂದರೆ ಮಾನಸಿಕ ಜಾಣ್ಮೆ ಅಳೆಯುವ ಮಾನದಂಡ. ತನ್ನ ಹಾಗೂ ಬೇರೆಯವರ ಭಾವನೆಗಳನ್ನು ಅರಿಯುವುದು ತನ್ನ ಭಾವನೆಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು, ಅಷ್ಟನ್ನೂ ಸೂಕ್ತ ರೀತಿಯಲ್ಲಿ ಪ್ರಸ್ತುತಪಡಿಸುವುದು ಹಾಗೂ ಪರಸ್ಪರ ಸಂಬಂಧಗಳನ್ನು ತಿಳಿವಳಿಕೆ ಹಾಗೂ ಸಮಭಾವನೆಯಿಂದ ನಡೆಸಿಕೊಂಡು ಹೋಗುವುದು ಎಮೋಶನ್ ಇಂಟೆಲಿಜೆನ್ಸ್ ಶ್ರೇಣಿಯಲ್ಲಿ ಬರುತ್ತವೆ. ಖಾಸಗಿ ಹಾಗೂ ವೃತ್ತಿಪರತೆ ಈ ಎರಡರಲ್ಲಿ ಉನ್ನತಿಯ ದಾರಿ ಎಮೋಶನ್‌ಇಂಟೆಲಿಜೆನ್ಸ್ ಮುಖಾಂತರವೇ ಸಾಗುತ್ತದೆ. ಜೀವನದಲ್ಲಿ ಪ್ರಗತಿಗಾಗಿ ಎಮೋಶನ್ ಇಂಟೆಲಿಜೆನ್ಸ್, ಇಂಟೆಲಿಜೆನ್ಸ್ ಕೋಶಂಟ್‌ಗಿಂತಲೂ ಹೆಚ್ಚು ಮಹತ್ವದ್ದಾಗಿದೆ.
ಕೇಂಬ್ರಿಜ್ ಯೂನಿವರ್ಸಿಟಿ, ಟೊರೊಂಟೊ ಯೂನಿರ್ಸಿಟಿ ಹಾಗೂ ಲಂಡನ್ ಯೂನಿವರ್ಸಿಟಿ, ಕಾಲೇಜುಗಳು ಪ್ರಕಟಪಡಿಸಿದ ಸಂಶೋಧನಾ ಪ್ರಬಂಧಗಳಿಂದ ಸ್ಪಷ್ಟವಾದ ಸಂಗತಿ ಏನೆಂದರೆ, ಯಾರು ತಮ್ಮ ಎಮೋಶನ್ ಇಂಟಲಿಜೆನ್ಸ್ ನ್ನು ಹೆಚ್ಚಿಸಿಕೊಳ್ಳುತ್ತಾರೋ ಅವರು ಬೇರೆಯವರೊಂದಿಗೆ ಕುಶಲತೆಯಿಂದ ವ್ಯವಹರಿಸಲು ಸಮರ್ಥರಾಗುತ್ತಾರೆ. ಯಾರು ಇದರಲ್ಲಿ ದುರ್ಬಲರಾಗುತ್ತಾರೊ, ಅಂತಹರ ಸಂಗಾತಿಗಳು ಬಹಳ ಸಂಕಷ್ಟಗಳನ್ನು ಎದುರಿಸಬೇಕಾಗಿ ಬರುತ್ತದೆ.
ಅಂತಹವರನ್ನು ಹೇಗೆ ಗುರುತಿಸುವುದು?
ಆಸ್ಪತ್ರೆಯೊಂದರ ಮನೋತಜ್ಞ ಡಾ. ಕೇದಾರ್ ಈ ಕುರಿತಂತೆ ಬಹಳಷ್ಟು ಸಂಗತಿಗಳನ್ನು ತಿಳಿಸಿದರು. ಕಡಿಮೆ ಈಕ್ಯೂ ಇವರು ವ್ಯಕ್ತಿಯೊಬ್ಬನನ್ನು ಗುರುತಿಸಲು ಭಾವನಾತ್ಮಕ ಸ್ಛೋಟ, ತನ್ನ ಹಾಗೂ ಸಂಗಾತಿಯ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಇರುವುದು, ಭಾವನೆಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು, ತೊಂದರೆಯ ಸಂದರ್ಭದಲ್ಲಿ ಎದುರಿಗಿನ ವ್ಯಕ್ತಿಯನ್ನೇ ಅದಕ್ಕೆ ಹೊಣೆಯಾಗಿಸುವುದು, ತರ್ಕರಹಿತ, ವಿವೇಕಹೀನ ರೀತಿಯಲ್ಲಿ ವಾದವಿವಾದ ಮಾಡುವುದು ಇವೆಲ್ಲವನ್ನು ಅದರಲ್ಲಿ ಪರಿಗಣಿಸಬೇಕಾಗುತ್ತದೆ.
ಡಾ. ಅನಿತಾ ಈ ಕುರಿತಂತೆ ಇನ್ನೂ ಸಂಗತಿಗಳನ್ನು ಸೇರಿಸುತ್ತಾರೆ. ಅಂತಹ ವ್ಯಕ್ತಿಗಳು ಬಹುಬೇಗ ಪ್ರತಿಕ್ರಿಯೆ ಕೊಡುತ್ತಾರೆ ಹಾಗೂ ಮಾನಸಿಕ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ದುರ್ಬಲರಾಗಿರುತ್ತಾರೆ. ಅವರಿಗೆ ತಮ್ಮ ಕೋಪಕ್ಕೆ ಕಾರಣ ಏನೆಂಬುದೇ ತಿಳಿದಿರುವುದಿಲ್ಲ. ಒಂದು ರೀತಿಯಲ್ಲಿ ಅವರು ಹಠಮಾರಿ ಸ್ವಭಾವದವರಾಗಿರುತ್ತಾರೆ.
ಕಡಿಮೆ ಈಕ್ಯೂಗೆ ಕಾರಣವೇನು?
ಮನೋತಜ್ಞೆ ಡಾ. ಅಂಜಲಿ ಹೀಗೆ ಹೇಳುತ್ತಾರೆ, “ಕಡಿಮೆ ಈಕ್ಯೂ ಇವರು ಜನರು ಎಂದೂ ತಮ್ಮ ಭಾವನೆಗಳನ್ನು ಗುರುತಿಸಲಾರರು. ಅದೇ ಕಾರಣದಿಂದ ಅವರು ತಮ್ಮ ಮಾತುಗಳು ಅಥವಾ ಕ್ರಿಯಾ ಕಲಾಪಗಳ ಪರಿಣಾಮವನ್ನು ಕಂಡುಕೊಳ್ಳುವಲ್ಲಿ ಹಿಂದೆ ಬೀಳುತ್ತಾರೆ. ತಜ್ಞರ ಪ್ರಕಾರ, ತೊಂದರೆ ತಾಪತ್ರಯಗಳಲ್ಲಿ ಕಳೆದ ಬಾಲ್ಯ ಅಥವಾ ಮುಗ್ಧ ಪೋಷಕರ ಕಾರಣದಿಂದ ಈಕ್ಯೂನಲ್ಲಿ ಕೊರತೆ ಉಂಟಾಗಬಹುದು. ಅನುವಂಶೀಯವಾಗಿಯೂ ಈಕ್ಯೂ ಕೊರತೆ ಉಂಟಾಗಬಹುದು. ಇಂತಹ ಜನರು ಬೇರೆಯವರ ತೊಂದರೆಯನ್ನು ಕಡಿಮೆ ಅರ್ಥ ಮಾಡಿಕೊಳ್ಳುತ್ತಾರೆ. ತಮ್ಮ ಕೆಲಸ ಕಾರ್ಯಗಳ ಬಗ್ಗೆ ಪಶ್ಚಾತ್ತಾಪಪಡುತ್ತಾರೆ.”
ಡಾ. ಚಂದ್ರಾ ಈ ಕಾರಣಗಳನ್ನು ಸಂಬಂಧಗಳಲ್ಲಿ ಕಂಡುಬರುವ ಬಿರುಕುಗಳೊಂದಿಗೆ ಹೋಲಿಸಿ ನೋಡುತ್ತಾರೆ. ಕ್ಲಿನಿಕ್ ಸೈಕಾಲಜಿಸ್ಟ್ ಡಾ. ಸೀಮಾ ಪ್ರಕಾರ, ಇಂತಹ ಜನರು ತಮ್ಮ ಪಾರ್ಟನರ್‌ಗೆ `ಪಾಯಿಂಟ್ ಆಫ್ ಯು’ ಎಂದು ತಿಳಿಯುವುದರಲ್ಲಿ ಹಾಗೂ ಮನಸ್ತಾಪದ ಸಂಬಂಧದ ಎಲ್ಲ ತಪ್ಪನ್ನು ಸಂಗಾತಿಯ ಮೇಲೆಯೇ ಹೊರಿಸುತ್ತಾರೆ.
ಇಂತಹುದೇ ಒಂದು ಜಗಳದಿಂದ ಸಾರಿಕಾ ಮನನೊಂದು ಜೋರಾಗಿ ಅಳತೊಡಗಿದಳು. ಆ ಸಮಯದಲ್ಲಿ ಅವಳ ಪತಿ ಸಂದೀಪ್‌ಅವಳನ್ನು ಸಮಾಧಾನಪಡಿಸಲು ಬರಲಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಬೆನ್ನು ತಿರುಗಿಸಿ ಕುಳಿತುಕೊಂಡ. ಪ್ರತಿಸಲ ಅವಳು ಅತ್ತುಕೊಂಡು ಕುಳಿತಾಗ, ಅದು ಸಂದೀಪ್ ಮೇಲೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಅದೇ ಕಾರಣದಿಂದ ಆಕೆ ಸಂದೀಪ್‌ವಿರುದ್ಧ ಮೆಂಟಲ್ ಅಬ್ಯೂಸ್ ಪ್ರಕರಣ ದಾಖಲಿಸಿದಳು.
ಸಂಬಂಧಗಳ ಮೇಲೆ ಪರಿಣಾಮ
ಡಾ. ಚಂದ್ರಾ ತಮ್ಮಲ್ಲಿ ಬಂದ ಒಂದು ಪ್ರಕರಣದ ಬಗ್ಗೆ ಹೇಳುತ್ತಾರೆ. ಮಹಿಳೆಯೊಬ್ಬರಿಗೆ ವಿವಾಹೇತರ ಸಂಬಂಧ ಏರ್ಪಟ್ಟಿತ್ತು. ಏಕೆಂದರೆ ಆಕೆಗೆ ತನ್ನ ಪತಿಯಿಂದ ಭಾವನಾತ್ಮಕ ಸಾಮೀಪ್ಯ ದೊರಕುತ್ತಿರಲಿಲ್ಲ. ಆದರೆ ಆಕೆ ತನ್ನ ಪತಿಯ ಸಂಬಂಧವನ್ನು ಬಿಟ್ಟು ಕೊಡಲು ಕೂಡ ತಯಾರಿರಲಿಲ್ಲ. ಗಂಡನಿಗೆ ಮಕ್ಕಳ ಬಗ್ಗೆ ಅಷ್ಟೊಂದು ಒಳ್ಳೆಯ ಸಂಬಂಧ ಕೂಡ ಇರಲಿಲ್ಲ. ಅದಕ್ಕೂ ಅವಳು ಗಂಡನನ್ನು ಒಬ್ಬ ಒಳ್ಳೆಯ ವ್ಯಕ್ತಿ ಎಂದು ಭಾವಿಸುತ್ತಿದ್ದಳು. ಕಡಿಮೆ ಈಕ್ಯೂ ಇರುವ ವ್ಯಕ್ತಿ ತನ್ನ ಸಂಬಂಧವನ್ನು ಬಹಳ ದುರ್ಬಲ ಎಂದು ಭಾವಿಸುತ್ತಾ ಇಬ್ಬರೂ ಸಂಗಾತಿಗಳಲ್ಲಿ ವಿಭಿನ್ನ ಭಾವನಾತ್ಮಕ ಮಟ್ಟ ಇರುವ ಕಾರಣ ಸಂಬಂಧದ ಮೇಲೆ ಆಪತ್ತು ಉಂಟಾಗುತ್ತದೆ. ಇಂತಹ ಜನರಿಗೆ ಅವರ ಸಂಗಾತಿಗಳು ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಿಲ್ಲ ಹಾಗೂ ತಿಳಿ ಹೇಳುವ ಸ್ವಭಾವ ಹೊಂದಿರುವುದಿಲ್ಲ. ಈ ಕಾರಣದಿಂದ ಅವರಲ್ಲಿ ಕೋಪ ಹಾಗೂ ಸಿಡಿಮಿಡಿತನ ಹೆಚ್ಚುತ್ತದೆ. ಅಷ್ಟೇ ಅಲ್ಲ ಒತ್ತಡ ಹಾಗೂ ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ.
ಡಾ. ಹರಿ; ಇತ್ತೀಚೆಗೆ 3 ಪ್ರಕರಣಗಳ ಉಲ್ಲೇಖ ಮಾಡುತ್ತಾ ಹೀಗೆ ಹೇಳುತ್ತಾರೆ, ಆ ಮೂವರು ಪ್ರಕರಣಗಳಲ್ಲಿ ಪತ್ನಿಯರು ತಮ್ಮ ಪತಿಯರ ಕುರಿತಂತೆ ಯಾವುದೇ ತೆರನಾದ ಭಾವನಾತ್ಮಕ ಮಾತುಕತೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಪ್ರತಿಯೊಂದು ಮಾತಿನ ಸಂದರ್ಭದಲ್ಲಿ ಪತಿ ಅಲ್ಲಿಂದ ಹೊರಟು ಹೋಗುತ್ತಿದ್ದ. ಇಲ್ಲಿ ಟಿವಿಯ ಧ್ವನಿ ಹೆಚ್ಚಿಸಿ ಮಾತುಕತೆ ಮುಂದುವರಿಯದಂತೆ ನೋಡಿಕೊಳ್ಳುತ್ತಿದ್ದ.
ಸಂಬಂಧ ಹೀಗೆ ಬಳಸಿಕೊಳ್ಳಿ
ಡಾ. ಹರಿ; ಪ್ರಕಾರ, ಇಂತಹ ಸಂದರ್ಭದಲ್ಲಿ ಸಂಬಂಧಗಳನ್ನು ಜೀವಂತವಾಗಿಟ್ಟುಕೊಳ್ಳುವ ಒಂದೇ ವಿಧಾನವೆಂದರೆ, ಅದು ಕಮ್ಯುನಿಕೇಶನ್. `ಕಮ್ಯುನಿಕೇಶನ್ ಈಸ್ ದಿ ಕೀ.’
ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಒಂದು ಸಂಗತಿಯೆಂದರೆ, ನಿಮ್ಮ ಸಂಗಾತಿ ಯಾವುದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿರುವುದಿಲ್ಲವೇ, ಅತ್ತು ರಂಪ ಮಾಡುವುದರಿಂದ ಆರೋಪ ಹೊರಿಸುವುದರಿಂದ ಯಾವುದೇ ಪರಿಹಾರ ದೊರಕದು.
ಡಾ. ತಿಮ್ಮಪ್ಪ ಹೇಳುವುದೇನೆಂದರೆ, ಮಾತುಕತೆಯ ಸಂದರ್ಭದಲ್ಲಿ ನೀವು ಅವರ ಮಾತುಗಳನ್ನು ಪುನರಾವರ್ತಿಸಿ.
ಏಕೆಂದರೆ ನೀವು ಅವರಿಗೆ ತಿಳಿವಳಿಕೆ ಹೇಳಲು ಪ್ರಯತ್ನ ಪಡುತ್ತಿದ್ದೀರಿ ಎನ್ನುವುದು ಗೊತ್ತಾಗಬೇಕು. ಹೀಗಾಗಿ ಕಮ್ಯುನಿಕೇಶನ್‌ಅತ್ಯಂತ ಮಹತ್ವದ್ದಾಗಿದೆ.
ಡಾ. ಚಂದ್ರಾ ಕಡಿಮೆ ಈಕ್ಯೂ ಇರುವ ಜನರಿಗೆ, ಸಂಗಾತಿಗಳಿಗೆ ನೀಡುವ ಸಲಹೆಯೆಂದರೆ, ನೀವು ನಿಮ್ಮ ಭಾವನೆಗಳು, ಇಚ್ಛೆಗಳು ಹಾಗೂ ವಿಚಾರಗಳನ್ನು ಅತ್ಯಂತ ಸ್ಪಷ್ಟ ರೀತಿಯಲ್ಲಿ ವ್ಯಕ್ತಪಡಿಸಿ.
ಏನು ಮತ್ತು ಹೇಗೆ ಮಾಡಬೇಕು?
ಕಡಿಮೆ ಈಕ್ಯೂ ಇರುವ ಸಂಗಾತಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸಂಬಂಧ ಕಾಯ್ದುಕೊಂಡು ಹೋಗಲು ನೀವು ಏನು ಮಾಡಬೇಕು. ಅದರಿಂದ ನಿಮ್ಮ ಮೇಲೆ ಯಾವುದೇ ಒತ್ತಡ ಕೂಡ ಉಂಟಾಗಬಾರದು.
ಲಕ್ಷ್ಮಣ ರೇಖೆ ಎಳೆಯಿರಿ : ಊಟದ ಸಮಯದಲ್ಲಿ ಯಾವುದೇ ಒತ್ತಡಮಯ ಸ್ಥಿತಿ ಉಂಟಾಗದಿರಲು ನಿಮಗೆ ನೀವೇ ಕೆಲವು ನಿಯಮ ಹಾಕಿಕೊಳ್ಳಿ ಆಫೀಸ್‌ನಲ್ಲಿದ್ದಾಗ ಪರಸ್ಪರರಿಗೆ ಫೋನ್ ಮಾಡಿ ತೊಂದರೆ ಕೊಡದಂತೆ ನೋಡಿಕೊಳ್ಳಿ.
ಟೈಮ್ ಔಟ್ : ನಿಮ್ಮ ಮಾತುಕಥೆ ಜಗಳದ ಸ್ವರೂಪ ಪಡೆಯದಿರಲು ಅಥವಾ ಯಾರಾದರೊಬ್ಬರು ತಾಳ್ಮೆ ಕಳೆದುಕೊಂಡು ಬಿಟ್ಟರೆ, ಅಂತಹ ಸಂದರ್ಭದಲ್ಲಿ ಮಾತುಕತೆ ನಿಲ್ಲಿಸಿಬಿಡುವುದು ಸೂಕ್ತ.
ಮೂರನೇ ವ್ಯಕ್ತಿಗೆ ಸಲಹೆ : ಎಷ್ಟೋ ಸಲ ಯಾರಾದರೂ 3ನೇ ವ್ಯಕ್ತಿ ಅಥವಾ ಕೌನ್ಸೆಲರ್ ಸಲಹೆ ಉಪಯುಕ್ತ ಎನಿಸಬಹುದು.
ಸ್ಪಷ್ಟವಾಗಿ ಹೇಳಿ : ಸಂಬಂಧದಲ್ಲಿ ಸಂಭಾಷಣೆ ಸಾಮಾನ್ಯವಾಗಿ ಸಾಂಕೇತಿಕ ರೂಪದ ಸಂಪರ್ಕ ಎನಿಸಿಕೊಳ್ಳುತ್ತದೆ. ಒಂದು ವೇಳೆ ನಿಮ್ಮ ಸಂಗಾತಿ ನಿಮಗೆ ಕಡಿಮೆ ಈಕ್ಯೂದವರು ಎಂದೆನಿಸಿದರೆ, ನೀವು ಸ್ಪಷ್ಟ ಶಬ್ದಗಳಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಸೂಕ್ತವಾಗಿರುತ್ತದೆ. ಏಕೆಂದರೆ ಅವರಿಗೆ ನಿಮ್ಮ ಭಾವನೆಗಳನ್ನು ಅರಿತುಕೊಳ್ಳುವುದು ಕಷ್ಟದ ಕೆಲಸವಾಗಿದೆ.
ವಾದವಿವಾದ ಬೇಡ : ನೀವು ಎಷ್ಟೇ ಸರಿಯಾಗಿದ್ದರೂ ಕಡಿಮೆ ಈಕ್ಯೂ ಇರುವ ಸಂಗಾತಿಯ ಜೊತೆಗೆ ವಾದವಿವಾದ ಮಾಡುವುದು ಅತ್ತು ರೋಧಿಸುವುದು, ನಿಮ್ಮ ವಿಷಯವನ್ನು ತರ್ಕಬದ್ಧವಾಗಿ ಹೇಳುವುದು, ಅವರ ಯೋಚನೆ ಬದಲಿಸುವ ಪ್ರಯತ್ನ ಮಾಡುವುದು ಎಲ್ಲ ವ್ಯರ್ಥ. ಅದರಿಂದ ಮತ್ತೊಂದು ತದ್ವಿರುದ್ಧ ಪರಿಣಾಮ ಏನಾಗುತ್ತದೆಂದರೆ ಅವರು ನಿಮ್ಮ ಮೇಲೆಯೇ ಸಿಡಿದೇಳಬಹುದು. ಇಲ್ಲಿ ನಿಮ್ಮನ್ನು ಅಮಾನಿಸಬಹುದು. ಹೀಗಾಗಿ ನಿಮಗೆ ಹೇಳಬೇಕಾದ್ದನ್ನು ಶಾಂತ ಮನಸ್ಸಿಂದ ಹೇಳಿ ಹಾಗೂ ಸುಮ್ಮನಾಗಿ.
ಸಂಬಂಧದ ಮೇಲೆ ಹಿಡಿತ ಪರಸ್ಪರ ಮನೋಭಾವದ ತಿಳಿವಳಿಕೆಯಾಗಿದೆ. ನೀವು ಆ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತೀರಿ ಹಾಗೂ ಹೇಗೆ ಅರಿತುಕೊಳ್ಳುತ್ತೀರಿ ಎಂಬುದರ ಮೇಲೆಯೇ ಸಂಬಂಧದ ನಿರ್ವಹಣೆ ಅವಲಂಬಿಸಿದೆ. ಒಂದು ವೇಳೆ ಒಬ್ಬ ಸಂಗಾತಿ ಸಂಬಂಧದ ನಿರ್ವಹಣೆಯಲ್ಲಿ ದುರ್ಬಲನಾಗಿದ್ದರೆ, ಇನ್ನೊಬ್ಬ ಸಂಗಾತಿ ಒಂದಿಷ್ಟು ಹೆಚ್ಚು ಜವಾಬ್ದಾರಿ ಹೊರಬೇಕಾಗುತ್ತದೆ. ಏಕೆಂದರೆ ನಿಮ್ಮ ಈಕ್ಯೂ ನಿಮ್ಮ ಸಂಗಾತಿಗಿಂತ ಹೆಚ್ಚು ಇದೆ.
– ಸ್ಪಂದನಾ