ಆ ದೃಷ್ಟಿ ವಿಕಲಚೇತನ ಯುವತಿಯ ಹೆಸರು ಅಶ್ವಿನಿ ಅಂಗಡಿ. ಅವರ ಜೀವನ ಸಂಘರ್ಷ ಎಂಥವರನ್ನೂ ಬೆರಗುಗೊಳಿಸುತ್ತದೆ.
ಬಳ್ಳಾರಿ ಜಿಲ್ಲೆಯ ಚಳ್ಳಗುರ್ಕಿ ಅವರ ಹುಟ್ಟೂರು. ಅಂಧ ಹುಡುಗಿ ಜನಿಸಿದೆ ಎಂದು ಗೊತ್ತಾದಾಗ ಹಲವರು ಹತ್ತೆಂಟು ರೀತಿಯಲ್ಲಿ ಮಾತನಾಡಿದ್ದರು. `ಇಂತಹ ಹುಡುಗಿಯನ್ನು ಹೇಗೆ ಸಂಭಾಳಿಸುತ್ತೀರಿ?’ ಎಂದು ಕೇಳಿದ್ದರು. ಆದರೆ ಅವರ ತಾಯಿ ತಂದೆ ಯಾರ ಮಾತಿಗೂ ಸೊಪ್ಪು ಹಾಕದೆ, ನಮ್ಮ ಹುಡುಗಿಯನ್ನು ನಾವು ಚೆನ್ನಾಗಿ ಬೆಳೆಸುತ್ತೇವೆ, ಓದಿಸುತ್ತೇವೆ,’ ಎಂದು ಕೇಳಿದವರಿಗೆ ಉತ್ತರ ಕೊಟ್ಟು ಅವರ ಬಾಯಿ ಮುಚ್ಚಿಸಿದ್ದರು.
ಊರವರ ಆಸುಪಾಸು ದೃಷ್ಟಿ ವಿಕಲಚೇತನರ ವಿದ್ಯಾಭ್ಯಾಸಕ್ಕೆ ಯಾವುದೇ ಸೌಲಭ್ಯಗಳಿಲ್ಲ ಎಂದು ಗೊತ್ತಾದಾಗ ಆಕೆಯ ತಾಯಿ ತಂದೆ ಮಕ್ಕಳ ಸಮೇತ ಬೆಂಗಳೂರಿಗೆ ಬರುತ್ತಾರೆ. ತಂದೆ ರಿಕ್ಷಾ ಚಾಲನೆ ಮಾಡುತ್ತಾ ಮಗಳನ್ನು ರಮಣ ಮಹರ್ಷಿ ಅಂಧರ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಶಿಕ್ಷಣದ ಜೊತೆಗೆ ಜೀವನ ನಿರ್ವಹಣೆಯ ಶಿಕ್ಷಣ ಸ್ವಾವಲಂಬನೆಯತ್ತ ಹೆಜ್ಜೆ ಹಾಕುವಂತೆ ಮಾಡುತ್ತದೆ. ಅಶ್ವಿನಿ ಎಸ್.ಎಸ್.ಎಲ್.ಸಿಯಲ್ಲಿ ಶೇ.85ರಷ್ಟು ಅಂಕ ಪಡೆದು ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಾರೆ. ಆ ಬಳಿಕದ ಶಿಕ್ಷಣವನ್ನು ಎನ್.ಎಂ.ಕೆ.ಆರ್.ವಿ ಹಾಗೂ ಮಹಾರಾಣಿ ಕಾಲೇಜಿನಲ್ಲಿ ಉತ್ತಮ ಅಂಕಗಳನ್ನು ಪಡೆದು ಪಾಸಾಗಿ ಸಾಮಾನ್ಯ ಹುಡುಗಿಯರು ಕಣ್ತೆರೆಯುವಂತೆ ಮಾಡಿದರು.
ಪದವಿ ಪರೀಕ್ಷೆಯ ಬಳಿಕ ಅಶ್ವಿನಿ ಲಂಡನ್ ಮೂಲದ ಒಂದು ಸಂಸ್ಥೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅದು ನಿಜಕ್ಕೂ ಬಹದೊಡ್ಡ ಜವಾಬ್ದಾರಿ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿದ್ದ, ಬೇರೆಬೇರೆ ರೀತಿಯ ವಿಕಲಚೇತನರನ್ನು ಕಂಡುಹಿಡಿದು, ಅವರ ಸಮಸ್ಯೆಗೆ ಪರಿಹಾರ ಸೂಚಿಸುವ ಮಹತ್ವದ ಕೆಲಸವದು. ಆ ಕಾರಣದಿಂದ ಅಶ್ವಿನಿ ಆರು ತಿಂಗಳಲ್ಲಿ ದೇಶದ ಬೇರೆಬೇರೆ ರಾಜ್ಯಗಳಲ್ಲಿ ಸುತ್ತಾಡಿದರು. ಅವರ ಸಂಚಾರದ ಫಲಶೃತಿ ಏನಾಯ್ತೆಂದರೆ, ಬಹಳಷ್ಟು ಶಿಕ್ಷಣ ಉಚಿತ ವಿಕಲಚೇತನರು ಶಿಕ್ಷಣದ ಹಕ್ಕನ್ನು ಪಡೆದುಕೊಳ್ಳುವಂತಾಯಿತು. ಶಿಕ್ಷಣ ಪಡೆದು ಸೂಕ್ತ ತರಬೇತಿ ಇಲ್ಲದೆ ಅಲೆದಾಡುತ್ತಿದ್ದ ವಿಕಲಚೇತನರಿಗೆ ಸೂಕ್ತ ತರಬೇತಿ ದೊರಕಿಸಿಕೊಟ್ಟು ಅವರು ಸ್ವಾವಲಂಬಿ ಜೀವನ ನಡೆಸುವಂತೆ ಮಾಡಿತು.
ಅವರ ಈ ಕೆಲಸಕ್ಕೆ ವಿಶ್ವಸಂಸ್ಥೆಯ ಪ್ರಶಸ್ತಿ ಬರುತ್ತದೆ. ಆ ಬಳಿಕದ ಘಟನೆ ಅವರ ಜೀವನದ ದಿಕ್ಕುದೆಸೆಯನ್ನೇ ಬದಲಿಸಿಬಿಡುತ್ತದೆ. ಪ್ರಶಸ್ತಿ ಬಂದ ಬಳಿಕ ಲಂಡನ್ ಮೂಲದ ಸಂಸ್ಥೆ ಅವರಿಗೆ ಲಂಡನ್‌ನಲ್ಲಿಯೇ ಕೆಲಸ ಮಾಡಲು ಸೂಚಿಸುತ್ತದೆ. ಆ ಮಾತಿಗೆ ಅಶ್ವಿನಿ, “ನಾನು ಭಾರತೀಯರ ನಡುವೆ ಕೆಲಸ ಮಾಡಿದ್ದೇನೆ, ಇನ್ನು ಮುಂದೆಯೂ ಅವರ ನಡುವೆಯೇ ಕೆಲಸ ಮಾಡುತ್ತೇನೆ,” ಎಂದು ಹೇಳಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ.
ಆ ಬಳಿಕ ಕಾರ್ಪೋರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ. ಆದರೆ ಅಲ್ಲಿನ ಏಕತಾನತೆ ಅವರಿಗೆ ಬೇಸರ ಹುಟ್ಟಿಸಿ ಅಲ್ಲಿಂದಲೂ ಹೊರಬಂದು ತಮ್ಮದೇ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡಿಕೊಳ್ಳುತ್ತಾರೆ. `ಬೆಳಕು ಅಕಾಡೆಮಿ’ ಹೆಸರಿನಲ್ಲಿ ದೃಷ್ಟಿ ವಿಕಲಚೇತನರಿಗಾಗಿ ಒಂದು ಶಾಲೆ ಆರಂಭಿಸುತ್ತಾರೆ. 5ನೇ ತರಗತಿಯವರೆಗೆ ತಮ್ಮದೇ ಶಾಲೆಯಲ್ಲಿ ಶಿಕ್ಷಣ ಕೊಡಿಸಿ, ಬಳಿಕ ಅವರಿಗೆ ಇತರೆ ಸಾಮಾನ್ಯ ಶಾಲೆಯಲ್ಲಿ ಓದಿಸುವುದರ ಮೂಲಕ ಸಾಮಾನ್ಯ ಮಕ್ಕಳೊಂದಿಗೆ ಬೆರೆಯುವಂತೆ ಮಾಡುತ್ತಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಕಡಬಗೆರೆಯಲ್ಲಿ ಈಗಿರುವ ಕಟ್ಟಡದಲ್ಲಿ ಸ್ಥಳಾಭಾವ ಉಂಟಾಗುತ್ತಿದ್ದು, ಅವರಿಗಾಗಿ ಒಂದು ಸುಸಜ್ಜಿತ ಕಟ್ಟಡವನ್ನು ದಾನಿಗಳ ಸಹಾಯದಿಂದ ನಿರ್ಮಿಸುತ್ತಿದ್ದಾರೆ.
ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಶ್ವಿನಿ ಪ್ರಸ್ತುತ ಮಾನವ ಸಂಪನ್ಮೂಲದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಎಂಬಿಎ ಕೋರ್ಸ್ ಮಾಡುತ್ತಿದ್ದಾರೆ. ಅವರ ಕಲಿಕೆಯ ದಾಹ ಎಂಥವರನ್ನೂ ಚಕಿತಗೊಳಿಸುತ್ತದೆ.
ಇಂದಿನ ಆಧುನಿಕ ಯುವತಿಯರಿಗೆ ನಿಮ್ಮ ಸಂದೇಶ ಏನು ಎಂದು ಕೇಳಿದರೆ, “ನಾವು ಯಾವುದೇ ದೇಶಕ್ಕೆ ಹೋದರೂ ನಮ್ಮ ಸಂಸ್ಕೃತಿ ಸಂಸ್ಕಾರ ಬಿಟ್ಟುಕೊಡಬಾರದು. ನಮ್ಮ ದೇಶದ ಲೋಪವನ್ನು ಎತ್ತಿ ತೋರಿಸಬಾರದು. ನಿಮ್ಮ ಪರ್ಸನಲ್ ಲೈಫ್‌ನಲ್ಲಿ ನಿಮಗೆ ಏನನ್ನಿಸುತ್ತೋ ಅದನ್ನೇ ಮಾಡಿ, ಆದರೆ ಭಾವಾವೇಶಕ್ಕೊಳಗಾಗಿ ಆತುರದಲ್ಲಿ ಯಾವುದೇ ತೀರ್ಮಾನಕ್ಕೆ ಬರಬೇಡಿ,” ಎಂದು ಅಶ್ವಿನಿ ಹೇಳುತ್ತಾರೆ.
– ಅಶೋಕ ಚಿಕ್ಕಪರಪ್ಪಾ